Kannada Play : ಬನ್ನಿರೈ ರಂಗಶಂಕರಕೆ ನಾಳೆ, ನೋಡಿರೈ ಸಂಗೀತಮಯ ನಾಟಕ ‘ಕಾಮರೂಪಿಗಳ್’

Ramayan : ಒಬ್ಬೊಬ್ಬ ಗಂಡನಲಿ ಶ್ರೀ ರಾಮನಡಗಿಹನು; ರಾವಣನು ಕೂಡ, ಒಬ್ಬೊಬ್ಬ ಹೆಂಡತಿಯ ಎದೆಯೊಳಿರುವಳು ಸೀತೆ; ಶೂರ್ಪನಖಿ ಕೂಡ.

Kannada Play : ಬನ್ನಿರೈ ರಂಗಶಂಕರಕೆ ನಾಳೆ, ನೋಡಿರೈ ಸಂಗೀತಮಯ ನಾಟಕ ‘ಕಾಮರೂಪಿಗಳ್’
‘ಕಾಮರೂಪಿಗಳ್’ ದೃಶ್ಯ
Follow us
ಶ್ರೀದೇವಿ ಕಳಸದ
|

Updated on: Dec 25, 2021 | 3:11 PM

Ramayana : ರಾಮಾಯಣ ಈ ದೇಶದ ಜನಮಾನಸದಲ್ಲಿ ಬೆರೆತು ಹೋದ ಕತೆ. ಹಲವು ಭಾಷೆಗಳಲ್ಲಿ, ಹಲವು ರೂಪಗಳಲ್ಲಿ ವಿಭಿನ್ನ ನೆಲೆಗಳಲ್ಲಿ ಇಂದಿಗೂ ನಮ್ಮನ್ನು ವಿಸ್ಮಯ ಗೊಳಿಸುತ್ತಾ ಆದರ್ಶ ಪ್ರಾಯವಾಗಿಯೂ ಕಾಡುತ್ತಲೇ ಇದೆ. ಹಲವು ರಾಮಾಯಣಗಳನ್ನೊಳಗೊಂಡ, ಮುಖ್ಯ ವಾಗಿ ರಸಋಷಿ ಕುವೆಂಪುರವರ ರಾಮಾಯಣದರ್ಶನಂ ಆಧರಿಸಿ ಅದಕ್ಕೆ ದೊಡ್ಡಾಟ, ಯಕ್ಷಗಾನ ಹಾಗೂ ಆಧುನಿಕ ನೃತ್ಯಶೈಲಿಯಲ್ಲಿ ವಿಭಿನ್ನವಾಗಿ ಕಟ್ಟಿದಂತಹ ಸಂಗೀತಮಯ ನಾಟಕದಲ್ಲಿ ಮೂವತ್ತಕ್ಕೂ ಹೆಚ್ಚು ಹಾಡುಗಳಿವೆ‌. ರಾಮ ಸೀತೆ ಶೂರ್ಪನಖಿಯರ ಸಂಭಾಷಣೆ, ಲಕ್ಷ್ಮಣನ ಸೋದರ ಪ್ರೇಮ, ಜಟಾಯುವಿನ ಸ್ವಾಮಿನಿಷ್ಠೆ, ಕಪಟ ಸನ್ಯಾಸಿ ರಾವಣ, ಮತ್ತು ದೇವಮಾನವ ಶ್ರೀ ರಾಮಚಂದ್ರ ಸಾಮಾನ್ಯ ಮನುಷ್ಯನಂತೆ ಅನುಭವಿಸುವ ಕಷ್ಟಗಳು ದೃಶ್ಯ ರೂಪದಲ್ಲಿ ರಂಜಿಸುತ್ತಲೇ ಸಮಕಾಲೀನವಾಗಿ ಯೋಚಿಸುವಂತೆ ಮಾಡಿದೆ. ಈ ನಾಟಕದ ಕಥಾನಕ ಪ್ರೇಕ್ಷಕ ವರ್ಗಕ್ಕೆ ರಾಮಾಯಣದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿಸಿ ಮತ್ತೆ ರಾಮಾಯಣದ ಪುಟಗಳನ್ನು ಓದುವಂತೆ ಪ್ರೇರೇಪಿಸಿ ಹೊಸ ಆಶಯವನ್ನು ಕಂಡುಕೊಳ್ಳಲಿ ಎಂಬುದೇ ‘ಕಾಮರೂಪಿಗಳ್​ – Kaamar00pigal’ ಪ್ರಯೋಗದ ಉದ್ದೇಶ.

*

ಒಬ್ಬೊಬ್ಬ ಗಂಡನಲಿ ಶ್ರೀ ರಾಮನಡಗಿಹನು; ರಾವಣನು ಕೂಡ, ಒಬ್ಬೊಬ್ಬ ಹೆಂಡತಿಯ ಎದೆಯೊಳಿರುವಳು ಸೀತೆ; ಶೂರ್ಪನಖಿ ಕೂಡ.

*

ಇಗೋ ಇಗೋ ಇಗೋ, ಇದು ರಾಮಾಯಣವಲ್ಲವೈ – ಚಂದ್ರನಖಾಯಣ, ಶೂರ್ಪನಖಾಯಣ. ಒಂದೇ ಕಲ್ಗೆ ಎರಡು ಹಣ್ಣ್ಗಳ ಉರುಳಿಸುವೆ. ನೀ ಸತ್ತು ಅವ ಗೆದ್ದರೆ ಮಗನ ಕೊಂದವ ಸತ್ತ, ಅವ ಸತ್ತು ನೀನುಳಿದರೆ ಗಂಡನ ಕೊಂದವ ಸತ್ತ.

*

ಪರ್ಯಾಪ್ತ ಕಾಮಸ್ಯ ಕೃತಾತ್ಮನಸ್ತು, ಕಾಮನೆಗಳಳಿವುದೇ ನಿಜದ ಬಯಕೆ!

*

ಕಳೆದ ಒಂದೂವರೆ ವರ್ಷ ಕೊರೊನಾ ಸಾಂಕ್ರಾಮಿಕ ರೋಗ ಸೃಷ್ಟಿಸಿದ ಸಂಕಷ್ಟಕ್ಕೆ ಇಡೀ ಜಗತ್ತೇ ತಲ್ಲಣಿಸಿತು. ಲಾಕ್ ಡೌನ್ ಗಳಿಂದ ಆರ್ಥಿಕ ವಲಯ ಕಂಗೆಟ್ಟು ಇಡೀ ಮನುಕುಲವು ಒಂದಲ್ಲಾ ಒಂದು ರೀತಿಯಲ್ಲಿ ಕಷ್ಟ ನಷ್ಟಗಳನ್ನು ಅನುಭವಿಸಿತು. ಕಲಾಪ್ರಕಾರವೂ ಕೂಡಾ ಪ್ರೇಕ್ಷಕರಿಲ್ಲದೆ, ಕಲಾಪ್ರದರ್ಶನಕ್ಕೆ ಅವಕಾಶವಿಲ್ಲದೆ ಆರ್ಥಿಕವಾಗಿಯೂ ಅದಕ್ಕಿಂತ ಹೆಚ್ಚಾಗಿ ಮಾನಸಿಕವಾಗಿಯೂ ತೊಂದರೆಗೊಳಪಟ್ಟಿತು. ಈ ದುರಿತ ಕಾಲವು ಸ್ವಲ್ಪ ಚೇತರಿಕೆ ಕಂಡಾಗ ಕೋವಿಡ್ ನಿಯಮಗಳ ಮಧ್ಯೆ ಕೊರೊನಾ ಭೀತಿಯಿಂದ ಧೈರ್ಯವಾಗಿ ಹೊರಬಂದು ನಮ್ಮ ಸಂಚಯ ತಂಡದ ರಂಗಾಭ್ಯಾಸಿಗಳು ಸೇರಿ ಕಟ್ಟಿದ ನಾಟಕವೇ “ಕಾಮರೂಪಿಗಳ್ “.

ಈ ನಾಟಕವನ್ನು ರಚಿಸಿ ನಿರ್ದೇಶನ ಮಾಡಿದವರು ನೀನಾಸಂ ಪದವೀಧರ ಗಣೇಶ್ ಮಂದಾರ್ತಿ. ಸಂಚಯದ ಮೂವತೈದು ಕಲಾವಿದರು (ಅನೇಕರು ಮೊದಲಬಾರಿಗೆ) ಸುಮಾರು ನಲವತ್ತೈದು ದಿನಗಳ ಕಾಲ ತಾಲೀಮು ನಡೆಸಿ ರಂಗಶಂಕರದಲ್ಲಿ ಮೊದಲ ಪ್ರದರ್ಶನ ನೀಡಿದರು. ಇದೀಗ ಎರಡನೇ ಪ್ರದರ್ಶನ. ಯಕ್ಷಗಾನ, ತಾಳಮದ್ದಳೆ, ಭಾಗವತಿಕೆಯಲ್ಲಿ ಪರಿಶ್ರಮವಿರುವ, ಈ ಹಿಂದೆ ಕರ್ಣ ಸಾಂಗತ್ಯ, ವಾಲಿವಧೆ ನಾಟಕಗಳ ಯಶಸ್ವಿ ನಿರ್ದೇಶನ ಮಾಡಿರುವ ಗಣೇಶ್ ಆಯ್ದುಕೊಂಡಿದ್ದು ರಾಮಾಯಣದ ಪಂಚವಟಿ ಭಾಗದ ಕಥಾನಕ.

ರಾಮಾಯಣ ಈ ದೇಶದ ಜನಮಾನಸದಲ್ಲಿ ಬೆರೆತು ಹೋದ ಕತೆ. ಹಲವು ಭಾಷೆಗಳಲ್ಲಿ, ಹಲವು ರೂಪಗಳಲ್ಲಿ ವಿಭಿನ್ನ ನೆಲೆಗಳಲ್ಲಿ ಇಂದಿಗೂ ನಮ್ಮನ್ನು ವಿಸ್ಮಯ ಗೊಳಿಸುತ್ತಾ ಆದರ್ಶ ಪ್ರಾಯವಾಗಿಯೂ ಕಾಡುತ್ತಲೇ ಇದೆ. ಹಲವು ರಾಮಾಯಣಗಳನ್ನೊಳಗೊಂಡ, ಮುಖ್ಯ ವಾಗಿ ರಸಋಷಿ ಕುವೆಂಪುರವರ ರಾಮಾಯಣದರ್ಶನಂ ಆಧರಿಸಿ ಅದಕ್ಕೆ ದೊಡ್ಡಾಟ, ಯಕ್ಷಗಾನ ಹಾಗೂ ಆಧುನಿಕ ನೃತ್ಯಶೈಲಿಯಲ್ಲಿ ವಿಭಿನ್ನವಾಗಿ ಕಟ್ಟಿದಂತಹ ಸಂಗೀತಮಯ ನಾಟಕದಲ್ಲಿ ಮೂವತ್ತಕ್ಕೂ ಹೆಚ್ಚು ಹಾಡುಗಳಿವೆ‌. ರಾಮ ಸೀತೆ ಶೂರ್ಪನಖಿಯರ ಸಂಭಾಷಣೆ, ಲಕ್ಷ್ಮಣನ ಸೋದರ ಪ್ರೇಮ, ಜಟಾಯುವಿನ ಸ್ವಾಮಿನಿಷ್ಠೆ, ಕಪಟ ಸನ್ಯಾಸಿ ರಾವಣ, ಮತ್ತು ದೇವಮಾನವ ಶ್ರೀ ರಾಮಚಂದ್ರ ಸಾಮಾನ್ಯ ಮನುಷ್ಯನಂತೆ ಅನುಭವಿಸುವ ಕಷ್ಟಗಳು ದೃಶ್ಯ ರೂಪದಲ್ಲಿ ರಂಜಿಸುತ್ತಲೇ ಸಮಕಾಲೀನವಾಗಿ ಯೋಚಿಸುವಂತೆ ಮಾಡಿದೆ. ಈ ನಾಟಕದ ಕಥಾನಕ ಪ್ರೇಕ್ಷಕ ವರ್ಗಕ್ಕೆ ರಾಮಾಯಣದ ಬಗ್ಗೆ ಇನ್ನಷ್ಟು ಕುತೂಹಲ ಹೆಚ್ಚಿಸಿ ಮತ್ತೆ ರಾಮಾಯಣದ ಪುಟಗಳನ್ನು ಓದುವಂತೆ ಪ್ರೇರೇಪಿಸಿ ಹೊಸ ಆಶಯವನ್ನು ಕಂಡುಕೊಳ್ಳಲಿ ಎಂಬುದೇ ಈ ಪ್ರಯೋಗದ ಉದ್ದೇಶ.

ಕಾಮರೂಪಿಗಳ್ ನಾಟಕದ ಕಟ್ಟುವಿಕೆಯಲ್ಲಿ ಸಂಗೀತದ ಪ್ರಾಧಾನ್ಯದ ಕುರಿತು ನಿರ್ದೇಶಕ ಗಣೇಶ ಮಂದಾರ್ತಿ, ‘ಈತನಕವೂ ರಾಮಾಯಣವಾಗಲೀ ಮಹಾಭಾರತವನ್ನಾಗಲೀ ಪ್ರಸ್ತುತಪಡಿಸಿದ್ದು ಕಾವ್ಯದ ಮೂಲಕವೇ. ಏಕೆಂದರೆ ಅವು ಮಹಾಕಾವ್ಯಗಳು. ರಾಮಾಯಣವು ಮಹಾಭಾರತಕ್ಕಿಂತಲೂ ಹೆಚ್ಚು ಕಾವ್ಯಗಾಯನ ಪ್ರಕಾರಕ್ಕೆ ಒಗ್ಗಿಕೊಳ್ಳುತ್ತದೆ. ಆದ್ದರಿಂದ ಇದನ್ನು ಸಂಗೀತಮಯ ನಾಟಕ ಮಾಡುವುದೇ ಹೆಚ್ಚು ಸೂಕ್ತ. ಕೊರೋನಾದಿಂದ ಮುದುಡಿದ ಮನಸ್ಸುಗಳನ್ನು ಈ ಸಂಗೀತಮಯ ನಾಟಕದಿಂದ ಅರಳಲಿ, ಸಂಭ್ರಮಿಸಲಿ ಎಂಬ ಉದ್ದೇಶದಿಂದ ರಂಜನಾತ್ಮಕವಾಗಿ ಇದನ್ನು ಕಟ್ಟಲಾಗಿದೆ’ ಎನ್ನುತ್ತಾರೆ.

*

ನಾಟಕ : ಕಾಮರೂಪಿಗಳ್ ತಂಡ : ಸಂಚಯ, ಬೆಂಗಳೂರ ನಿರ್ದೇಶನ : ಗಣೇಶ ಮಂದಾರ್ತಿ ಸಂಗೀತ : ಅನನ್ಯ ಸುರೇಶ್, ಹರೀಶ್ ಶ್ರೀನಾಥ, ಗಣೇಶ ಶೆಣೈ, ಶ್ರೀಲಕ್ಷ್ಮೀ, ಭರತಕುಮಾರ, ರಕ್ಷಿತ್ ಅಶ್ವತ್ಥ ದಿನಾಂಕ : 26/12/2021 ಸಮಯ : ಮಧ್ಯಾಹ್ನ 3.30, ಸಂಜೆ 7.30 ಅವಧಿ : 1 ಗಂಟೆ 30 ನಿಮಿಷ ಸ್ಥಳ : ರಂಗಶಂಕರ, ಜೆಪಿ ನಗರ, ಬೆಂಗಳೂರು ಟಿಕೆಟ್ : BookMyShow

*

ಇದನ್ನೂ ಓದಿ : New Play : ‘ಕಾಂತ ಮತ್ತು ಕಾಂತ’ ರಂಗದ ಮೇಲೆ ಮೊಟ್ಟಮೊದಲ ಬಾರಿಗೆ ಒಟ್ಟಿಗೇ ಮುಖ್ಯಮಂತ್ರಿ ಚಂದ್ರು, ಸಿಹಿಕಹಿ ಚಂದ್ರು