Sydney Diary : ಗಾಂಧೀಜಿ ಉಪವಾಸವನ್ನೇ ಆಯುಧವನ್ನಾಗಿ ಪರಿವರ್ತಿಸಿ ಚಳವಳಿ ರೂಪಿಸಿದ್ದು ಯಾಕೆ?

Sydney Diary : ಗಾಂಧೀಜಿ ಉಪವಾಸವನ್ನೇ ಆಯುಧವನ್ನಾಗಿ ಪರಿವರ್ತಿಸಿ ಚಳವಳಿ ರೂಪಿಸಿದ್ದು ಯಾಕೆ?

Scam : ‘ಇದೇ ರೀತಿಯ ಇನ್ನೊಂದು ಸ್ಕ್ಯಾಮ್ ಈ ಪರ್ಸನಾಲಿಟಿ ಡೆವಲಪ್​ಮೆಂಟ್ ಮತ್ತು ಸೆಲ್ಫ್ ಹೆಲ್ಪ್​ಗಳದು.  ಶ್ರೀಮಂತರಾಗುವುದು ಹೇಗೆ, ಯಶಸ್ವಿಯಾಗುವುದು ಹೇಗೆ ಅಂತ ಪುಸ್ತಕ ಬರೆದವರ ಜೀವನದ ಏಕೈಕ ಯಶಸ್ಸು ಆ ಪುಸ್ತಕ ಮಾತ್ರ ಆಗಿರುತ್ತದೆ. ಅಷ್ಟಕ್ಕೂ ಈ ಪ್ರೋಗ್ರಾಂಗಳ ಟಾರ್ಗೆಟ್ ಯಾರು? ಬಡವರಾ? ಇಲ್ಲ.’ ಶ್ರೀಹರ್ಷ ಸಾಲಿಮಠ

ಶ್ರೀದೇವಿ ಕಳಸದ | Shridevi Kalasad

|

Dec 26, 2021 | 8:16 AM

Sydney Diary – ಸಿಡ್ನಿ ಡೈರಿ : ನನ್ನದು ಸುಮ್ಮನೆ ಕತ್ತಲಲ್ಲಿ ತಲುಪಿದ ಗುರಿಯೋ ಅಥವಾ ನನ್ನ ಪದ್ಧತಿ ವೈಜ್ಞಾನಿಕವಾಗಿದೆಯೋ ತಿಳಿಯಲು ನಲವತ್ತು ದಾಟಿದ ಕೆಲ ಆಸಕ್ತರ ದೈಹಿಕ ಮತ್ತು ದಿನಚರಿಗಳ ವಿವರಗಳನ್ನು ಪಡೆದುಕೊಂಡು ಅವರಿಗೆ ಕೆಲ ಸಲಹೆ ಸೂಚನೆಗಳನ್ನು ಕೊಟ್ಟೆ. ಅವರ ತೂಕವೂ ಸಹ ನನಗೆ ಇಳಿದಷ್ಟೇ ಸಹಜವಾಗಿ ಇಳಿಯತೊಡಗಿತು. ಈ ಪದ್ಧತಿಯಿಂದ ಇನ್ನೂ ಕೆಲವು ಗುಪ್ತ ಅನುಕೂಲತೆಗಳು ದೊರಕಿದವು. ಅನೇಕರು ತಮ್ಮ ಮಿದುಳು ಈಗ ಮೊದಲಿಗಿಂತ ಚುರುಕಾಗಿ ಕೆಲಸ ಮಾಡುತ್ತಿದೆಯೆಂದರು, ಮೊದಲಿಗಿಂತ ಮನಸ್ಸು ಶಾಂತವಾಗಿದೆ, ಅತ್ಯಂತ ಸಮಾಧಾನದಿಂದ ದೈನಂದಿನ ಕೈಂಕರ್ಯಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು. ಮೊದಲಿಗಿಂತ ತಮ್ಮ ದೈಹಿಕ ಶಕ್ತಿ ಮತ್ತು ಕ್ಷಮತೆ ಹೆಚ್ಚಿದೆ ಅಂತ ಹೇಳಿಕೊಂಡರು. ಇವೆಲ್ಲವೂ ಸಹ ಸತ್ಯ ಎಂದು ವೈಜ್ಞಾನಿಕ ಅಧ್ಯಯನಗಳಲ್ಲಿ ಸಾಬೀತಾಗಿವೆ. ವೈಯಕ್ತಿಕವಾಗಿ ನನ್ನ ಶೂ ನಂಬರ್ ಕಡಿಮೆಯಾಯಿತು. ಚಿಕ್ಕಂದಿನಿಂದ ಕಾಡುತ್ತಿದ್ದ ಅಸಿಡಿಟಿ ಇಲ್ಲವೇ ಇಲ್ಲವೆನ್ನುವಂತಾಯಿತು. ದೇಹ ಕೊಬ್ಬು ಕರಗಿಸುತ್ತಿದೆ ಮತ್ತು ತೂಕ ಇಳಿಯುತ್ತಿದೆ ಅಂತ ಗೊತ್ತಾಗುವುದು ಹೇಗೆ? ಎಷ್ಟೇ ತಿಕ್ಕಿ ತೊಳೆದರೂ ಬಾಯಿ ವಾಸನೆ ಬರತೊಡಗುತ್ತದೆ! ಬಾಯಿ ವಾಸನೆ ಇದ್ದಷ್ಟು ದಿನ ನಮ್ಮ ಕೊಬ್ಬು ಕರಗಿಸುವ ವಿಧಾನ ಸರಿಯಾಗಿ ಕೆಲಸ ಮಾಡುತ್ತದೆ ಅಂತರ್ಥ! ಶ್ರೀಹರ್ಷ ಸಾಲಿಮಠ

(ಕಂತು 9)

ಜಗತ್ತಿನಲ್ಲಿ ಎರಡು ಅತ್ಯಂತ ಕೆಲಸಕ್ಕೆ ಬಾರದ್ದವು ಅಂದರೆ ಒಂದು ಸೋಲಾರ್ ವಾಟರ್ ಹೀಟರು ಮತ್ತು ಪರ್ಸನಾಲಿಟ ಡೆವೆಲಪ್​ಮೆಂಟ್ ಕೋರ್ಸ್​ಗಳು. ಈ ವಿಷಯಕ್ಕೆ ಆಮೇಲೆ ಬರುತ್ತೇನೆ. ವರ್ಷದ ಹಿಂದೆ ನಾನು ಮೂರ್ನಾಲ್ಕು ತಿಂಗಳಲ್ಲಿ ಹದಿನೈದು ಕೆಜಿ ತೂಕ ಇಳಿಸಿಕೊಂಡೆ. ತೂಕ ಅತ್ಯಂತ ಸಹಜವೆಂಬಂತೆ ಇಳಿದುಹೊಯಿತು. ಇದಕ್ಕಾಗಿ ಇತ್ತೀಚಿನ ಸುಮಾರು ಐದುನೂರಕ್ಕು ಹೆಚ್ಚೂ ಸಂಶೋಧನಾ ಪೇಪರ್​ಗಳನ್ನು ಪತ್ರಿಕೆಗಳನ್ನು ನೊಬೆಲ್ ವಿಜೇತರ ಬರಹಗಳನ್ನು ಅಧ್ಯಯನ ಮಾಡಬೇಕಾಯಿತು. ನಾನಾಗಿಯೇ ಈ ಶೋಧನೆಯನ್ನು ಕೈಗೆತ್ತಿಕೊಂಡದ್ದೇಕೆಂದರೆ ಈ ಹಿಂದೆ ತೂಕ ಇಳಿಸಿಕೊಳ್ಳಲು ನಡೆಸಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿದ್ದವು. ಎಷ್ಟೇ ಕಷ್ಟಪಟ್ಟರೂ ತಿಣುಕಿತಿಣುಕಿ ಐನೂರು ಆರುನೂರು ಗ್ರಾಂ ಕಡಿಮೆಯಾಗಿ ಅಲ್ಲಿಗೆ ನಿಂತು ಬಿಡೋದು. ಹಾಗಾಗಿ ಈ ತೂಕ ಇಳಿಕೆಯ ವ್ಯವಸ್ಥೆಯಲ್ಲಿ ಎಲ್ಲೋ ತಪ್ಪಿದೆ ಎಂದೆನಿಸತೊಡಗಿ ನಾನೇ ತಿಂಗಳುಗಟ್ಟಲೆ ಕೂತು ದೇಹದ ಆಳಗಲಗಳನ್ನು ಅಭ್ಯಸಿಸಿ ಆಹಾರ ವ್ಯವಸ್ಥೆ ಜೀರ್ಣ ವ್ಯವಸ್ಥೆ ಶೇಖರಣೆ ಮತ್ತು ದೇಹದೊಳಗಿನ ಶಕ್ತಿ ಸಂಪಾದಿಸುವಿಕೆ ಹೇಗೆ ಕೆಲಸ ಮಾಡುತ್ತದೆ ಅಂತ ತಿಳಿದುಕೊಂಡೆ.

2016 ರಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಜಪಾನಿನ ವಿಜ್ಞಾನಿ ಯೋಶಿನೋರಿ ಒಶುಮಿ, ನಮ್ಮ ದೇಹವು ತನ್ನನ್ನು ತಾನೇ ತಿಂದುಕೊಂಡು ಅಂದರೆ ಮರಣ ಹೊಂದಿದ ಜೀವಕೋಶಗಳನ್ನು ಬಳಸಿಕೊಂಡು ಪ್ರೋಟೀನ್ ಅನ್ನು ಹೇಗೆ ಉತ್ಪಾದಿಸುತ್ತದೆ ಎಂದು ತೋರಿಸಿಕೊಟ್ಟದ್ದು. ಇಷ್ಟೆಲ್ಲ ಅಧ್ಯಯನದಿಂದ ಆದ ಉಪಯೋಗವೆಂದರೆ ಯಾವುದೇ ರೀತಿಯ ಹುಚ್ಚುಚ್ಚಾದ ಡಯಟ್ ಮಾಡದೆ, ಅತಿಯಾದ ವ್ಯಾಯಾಮ ಮಾಡದೆ. ನನಗೆ ಬೇಕಾದದ್ದನ್ನು ತಿಂದುಕೊಂಡು ಹತಾಶೆ ಆಶಾಭಂಗಗಳಿಲ್ಲದೇ ದಿವೀನಾಗಿ ತೂಕ ಇಳಿಸಿಕೊಂಡದ್ದು. ಸ್ವತಃ ನಮ್ಮ ಜಿಮ್ ಟ್ರೇನರ್ ಸಹ ಆತನ ಸಹಾಯವಿಲ್ಲದೆ ಇಷ್ಟು ಸುಲಭವಾಗಿ ತೂಕ ಇಳಿಸಿಕೊಂಡದ್ದನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡ.

ನನ್ನದು ಸುಮ್ಮನೆ ಕತ್ತಲಲ್ಲಿ ತಲುಪಿದ ಗುರಿಯೋ ಅಥವಾ ನನ್ನ ಪದ್ಧತಿ ವೈಜ್ಞಾನಿಕವಾಗಿದೆಯೋ ತಿಳಿಯಲು ನಲವತ್ತು ದಾಟಿದ ಕೆಲ ಆಸಕ್ತರ ದೈಹಿಕ ಮತ್ತು ದಿನಚರಿಗಳ ವಿವರಗಳನ್ನು ಪಡೆದುಕೊಂಡು ಅವರಿಗೆ ಕೆಲ ಸಲಹೆ ಸೂಚನೆಗಳನ್ನು ಕೊಟ್ಟೆ. ಅವರ ತೂಕವೂ ಸಹ ನನಗೆ ಇಳಿದಷ್ಟೇ ಸಹಜವಾಗಿ ಇಳಿಯತೊಡಗಿತು. ಈ ಪದ್ಧತಿಯಿಂದ ಇನ್ನೂ ಕೆಲವು ಗುಪ್ತ ಅನುಕೂಲತೆಗಳು ದೊರಕಿದವು. ಅನೇಕರು ತಮ್ಮ ಮಿದುಳು ಈಗ ಮೊದಲಿಗಿಂತ ಚುರುಕಾಗಿ ಕೆಲಸ ಮಾಡುತ್ತಿದೆಯೆಂದರು, ಮೊದಲಿಗಿಂತ ಮನಸ್ಸು ಶಾಂತವಾಗಿದೆ, ಅತ್ಯಂತ ಸಮಾಧಾನದಿಂದ ದೈನಂದಿನ ಕೈಂಕರ್ಯಗಳನ್ನು ಕೈಗೊಳ್ಳುತ್ತಿದ್ದೇವೆ ಎಂದರು. ಮೊದಲಿಗಿಂತ ತಮ್ಮ ದೈಹಿಕ ಶಕ್ತಿ ಮತ್ತು ಕ್ಷಮತೆ ಹೆಚ್ಚಿದೆ ಅಂತ ಹೇಳಿಕೊಂಡರು. ಇವೆಲ್ಲವೂ ಸಹ ಸತ್ಯ ಎಂದು ವೈಜ್ಞಾನಿಕ ಅಧ್ಯಯನಗಳಲ್ಲಿ ಸಾಬೀತಾಗಿವೆ. ವೈಯಕ್ತಿಕವಾಗಿ ನನ್ನ ಶೂ ನಂಬರ್ ಕಡಿಮೆಯಾಯಿತು. ಚಿಕ್ಕಂದಿನಿಂದ ಕಾಡುತ್ತಿದ್ದ ಅಸಿಡಿಟಿ ಇಲ್ಲವೇ ಇಲ್ಲವೆನ್ನುವಂತಾಯಿತು. ದೇಹ ಕೊಬ್ಬು ಕರಗಿಸುತ್ತಿದೆ ಮತ್ತು ತೂಕ ಇಳಿಯುತ್ತಿದೆ ಅಂತ ಗೊತ್ತಾಗುವುದು ಹೇಗೆ? ಎಷ್ಟೇ ತಿಕ್ಕಿ ತೊಳೆದರೂ ಬಾಯಿ ವಾಸನೆ ಬರತೊಡಗುತ್ತದೆ! ಬಾಯಿ ವಾಸನೆ ಇದ್ದಷ್ಟು ದಿನ ನಮ್ಮ ಕೊಬ್ಬು ಕರಗಿಸುವ ವಿಧಾನ ಸರಿಯಾಗಿ ಕೆಲಸ ಮಾಡುತ್ತದೆ ಅಂತರ್ಥ!

ಈ ವಿಧಾನವನ್ನು ನಾನು ಹೆಚ್ಚು ಜನರಿಗೆ ಹೇಳಿಕೊಡಲು ಹೋಗಲಿಲ್ಲ. ಜೀವನದ ಅಗತ್ಯಕ್ಕಿಂತ ಹೆಚ್ಚು ಹಣ ಸಂಪಾದಿಸಿಕೊಂಡು ದೇಹದ ಅಗತ್ಯಗಳಿಗಿಂತ ಹೆಚ್ಚಾಗಿ ತಿಂದುಕೊಂಡು ಯೋಗ ಕ್ಲಾಸ್​ಗಳಿಗೆ ತೂಕ ಇಳಿಸುವ ಬೋಗಸ್ ವಿಧಾನಗಳಿಗೆ ಹಣ ಸುರಿಯುವವರ ಬಗ್ಗೆ ನಾನು ಹೆಚ್ಚು ಅನುಕಂಪ ಇಟ್ಟುಕೊಂಡಿಲ್ಲ. ಕಂಡುಕಂಡವರ ಮಾತು ಕೇಳಿ ಓಟ್ಸ್, ರಾಗಿ, ನವಣೆ, ಮೊಳಕೆಕಾಳುಗಳನ್ನು ತಿಂದು ಅವನ್ನು ಅರಗಿಸಿಕೊಳ್ಳಲಾರದೆ ತೂಕ ಹೆಚ್ಚು ಮಾಡಿಕೊಳ್ಳುವವರನ್ನು ಕಂಡು ನಗು ಬರುತ್ತದಷ್ಟೇ! ನಿಜವೆಂದರೆ ಇವು ಅಕ್ಕಿಗಿಂತ ಮೂರು ಪಟ್ಟು ಕ್ಯಾಲೊರಿಗಳನ್ನು ಹೊಂದಿರುತ್ತವೆ. ಓಟ್ಸ್ ನ ಜೊತೆಗೆ ಹಾಲು ಅಥವಾ ಮಜ್ಜಿಗೆಯನ್ನು ಸೇರಿಸಿಕೊಳ್ಳಬೇಕಾದ್ದರಿಂದ ಇದರ ಕ್ಯಾಲೋರಿಯೂ ಸೇರಿ ಸುಲಭವಾಗಿ ತೂಕ ಹೆಚ್ಚುತ್ತದೆ. ಈ ಸಿರಿವಂತ ಧಡಿಯಗಳೆಲ್ಲ ತೂಕ ಇಳಿಸಿಕೊಳ್ಳಲು ಇವನ್ನೆಲ್ಲ ತಿನ್ನುವುದರಿಂದ ಬೆಲೆಗಳು ಹೆಚ್ಚಾಗಿ ನಿಜವಾಗಿ ಸಲ್ಲಬೇಕಾದ ರೈತ ಮತ್ತು ಕಾರ್ಮಿಕರಿಗೆ ದೊರೆಯುತ್ತಿಲ್ಲವಲ್ಲಾ ಎಂಬುದೊಂದೇ ದೊಡ್ಡ ಬೇಸರ.

Sydney Diary Kannada Writer Shriharsha Salimat discussed myths of Weight loss and Personality development

ಸೌಜನ್ಯ : ಅಂತರ್ಜಾಲ

ಈ ತೂಕ ಇಳಿಕೆಯ ಮೋಟಿವೇಶನ್ ಪ್ರೋಗ್ರಾಂಗಳು ಮಾಡುವ ಜಾಹೀರಾತುಗಳು ಹಾಸ್ಯಾಸ್ಪದವಾಗಿರುತ್ತವೆ. ಇವರು ತೂಕ ಇಳಿಸಿಕೊಂಡವನ ಉದಾಹರಣೆ ತೆಗೆದುಕೊಳ್ಳುವವರು ಇಪ್ಪತ್ತರಿಂದ ಮೂವತೈದು ವರ್ಷದೊಳಗಿನವರಾಗಿರುತ್ತಾರೆ. ಹತ್ತಿರತ್ತಿರ ಆರಡಿ ಇರುತ್ತಾರೆ. ಈ ವಯಸ್ಸು ಮತ್ತು ಎತ್ತರದ ಪರಿಧಿಯಲ್ಲಿರುವವರು ತೂಕ ಇಳಿಸಿಕೊಳ್ಳುವುದು ಸುಲಭ. ಈ ತೂಕ ಇಳಿಕೆಯ ಪ್ರೋಗ್ರಾಂ ಗಳು ನಿಜಕ್ಕೂ ಪರಿಣಾಮಕಾರಿಯಾಗಿದ್ದರೆ ನಲವತ್ತು ದಾಟಿದ ಸಾಧಾರಣ ಎತ್ತರದ ವ್ಯಕ್ತಿಯನ್ನು ಉದಾಹರಣೆ ತೆಗೆದುಕೊಂಡು ತೋರಿಸಲಿ ನೋಡೋಣ. ನಾನು ಹೊಸದಾಗಿ ಕೆಲಸಕ್ಕೆ ಸೇರಿದಾಗ ಸ್ವಂತ ಸಂಬಳ ಬರುವ ಹುರುಪಿನಲ್ಲಿ ದಿನವೂ ಐಸ್ ಕ್ರೀಂ, ಸಿಹಿತಿಂಡಿಗಳು ಜಂಕ್ ಆಹಾರಗಳನ್ನು ಹೆಚ್ಚು ತಿನ್ನತೊಡಗಿದೆ. ಮೊದಲೂ ತಿನ್ನುತ್ತಿದ್ದೆ ಆದರೆ ನನ್ನ ದೈನಂದಿನ ಓಡಾಟ ಆಟಗಳಿಂದ ತೂಕ ಹಿಡಿತದಲ್ಲಿರುತ್ತಿತ್ತು. ಆಫೀಸಿನಲ್ಲಿ ಹೆಚ್ಚು ಓಡಾಟ ಇರದೇ ಕೂತೇ ಇರಬೇಕಾದ ಕಾರಣದಿಂದ ನನ್ನ ತೂಕ ಹೆಚ್ಚಾಗತೊಡಗಿತು. ನನ್ನ ಜಾಲೈನ್​ಗಳು ಹುದುಲುಮರಳಿನಲ್ಲಿ ನಿಧಾನವಾಗಿ ಮುಳುಗುವ ಕಲ್ಲಿನಂತೆ ಕೊಬ್ಬಿನಲ್ಲಿ ಮುಳುಗತೊಡಗಿದಾಗ ಎಚ್ಚೆತ್ತು ಬರೀ ಜಂಕ್ ಮತ್ತು ಐಸ್ ಕ್ರೀಮ್ ತಿನ್ನುವುದನ್ನು ನಿಲ್ಲಿಸಿದ್ದಷ್ಟೇ, ತೂಕ ಎರಡೇ ವಾರಗಳಲ್ಲಿ ತಹಬದಿಗೆ ಬಂತು.

ಒಮ್ಮೆ ಯಾವುದೇ ಡಯಟ್ ಮಾಡದೇ ದಿನವಹಿ ವಾಕಿಂಗ್ ಮಾಡಿ ನಾಲ್ಕು ಕೆಜಿ ತೂಕ ಇಳಿಸಿದ್ದೆ. ಹಾಗಾಗಿ ಇಪ್ಪತ್ತರ ವಯಸ್ಸಿನಲ್ಲಿ ಯಾವ ತಿಣುಕಾಟವೂ ಇಲ್ಲದೇ ತೂಕ ಇಳಿಯುತ್ತದೆ. ಇದರಲ್ಲಿ ಯಾವ ಅಚ್ಚರಿ ಹೆಗ್ಗಳಿಕೆ ಇಲ್ಲ. ಹಾಗಾಗಿ ನಾನು ನನ್ನ ಪದ್ಧತಿಯನ್ನು ಮುದ್ದಾಂ ನನಗಿಂತ ಸಾಕಷ್ಟು ಹಿರಿಯರಾಗಿದ್ದ ನಲವತ್ತು-ನಲವತೈದು ದಾಟಿದವರ ಮೇಲೆ ಪ್ರಯೋಗಿಸಿ ನೋಡಿದ್ದು. ನನ್ನಷ್ಟು ವೇಗವಾಗಿ ಅಲ್ಲದಿದ್ದರೂ ಅವರ ಆಹಾರ ಪದ್ಧತಿ ಮತ್ತು ದೇಹ ಪ್ರಕೃತಿಯ ಆಧಾರದ ಮೇಲೆ ತೂಕ ಹೆಚ್ಚಿನ ಕಷ್ಟವಿಲ್ಲದೆ ಇಳಿಯಿತು. ತೂಕ ಇಳಿಕೆಯ ಜಾಗತಿಕ ಮಟ್ಟದ ಸ್ಕ್ಯಾಮ್ ನಿಂದ ನಾನು ಹೊರಬಂದದ್ದು ಹೀಗೆ.

ಇದೇ ರೀತಿಯ ಇನ್ನೊಂದು ಸ್ಕ್ಯಾಮ್ ಈ ಪರ್ಸನಾಲಿಟಿ ಡೆವಲಪ್​ಮೆಂಟ್ ಮತ್ತು ಸೆಲ್ಫ್ ಹೆಲ್ಪ್​ಗಳದು.  ಶ್ರೀಮಂತರಾಗುವುದು ಹೇಗೆ, ಯಶಸ್ವಿಯಾಗುವುದು ಹೇಗೆ ಅಂತ ಪುಸ್ತಕ ಬರೆದವರ ಜೀವನದ ಏಕೈಕ ಯಶಸ್ಸು ಆ ಪುಸ್ತಕ ಮಾತ್ರ ಆಗಿರುತ್ತದೆ. ಅಷ್ಟಕ್ಕೂ ಈ ಪ್ರೋಗ್ರಾಂಗಳ ಟಾರ್ಗೆಟ್ ಯಾರು? ಬಡವರಾ? ಇಲ್ಲ. ಬಡವರನ್ನು ಶ್ರೀಮಂತಗೊಳಿಸುವ ಯಾವ ಟ್ರಿಕ್​ಗಳೂ ಟಿಪ್ಸ್​ಗಳೂ ಇವರಲ್ಲಿಲ್ಲ. ತಮ್ಮ ದುಬಾರಿ ಫೀಸ್ ಕೊಡಬಲ್ಲ ಮೇಲ್ವರ್ಗದ ಬಕರಾಗಳಷ್ಟೇ ಇವರ ಗಿರಾಕಿಗಳು. ಇದೊಂದು ಮೇಲ್ಜಾತಿ ಮತ್ತು ಮೆಲ್ವರ್ಗವನ್ನು ಟಾರ್ಗೆಟ್ ಮಾಡಿದ ಮಾರುಕಟ್ಟೆ ಮಾತ್ರ. ಇವರಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಇರುವುದಿಲ್ಲ. ಒಬ್ಬ ವ್ಯಕ್ತಿ ತೀರಾ ಸ್ವಕೇಂದ್ರಿತವಾಗಿ ಯೋಚಿಸುವಂತೆ ಪ್ರಚೋದಿಸುವುದೇ ಇವರ ಕೆಲಸ.

ಇದು ಅದೆಂತಹ ಸೇಫ್ ಮತ್ತು ದೊಡ್ಡ ಮಾರುಕಟ್ಟೆಯೆಂದರೆ ರಾಮಕೃಷ್ಣಮಠವೂ ಸಹ ಸ್ವಾಮಿ ವಿವೇಕಾನಂದರು ಹೇಳಿದ್ದನ್ನೆಲ್ಲ ಗಾಳಿಗೆ ತೂರಿ ಈ ಪರ್ಸನಾಲಿಟಿ ಡೆವೆಲಪ್​ಮೆಂಟ್ ಮಾರುಕಟ್ಟೆಯನ್ನೇ ನಗದೀಕರಿಸತೊಡಗಿತು. ಈ ಪರ್ಸನಾಲಿಟಿ ಡೆವಲಪ್​ಮೆಂಟ್ ಸ್ಕ್ಯಾಮ್ ಭಗವದ್ಗೀತೆ ಪುರಾಣಗಳು ಕಡೆಗೆ ಸಮಾಜಮುಖಿ ತತ್ವಗಳನ್ನು ಒಳಗೊಂಡ ವಚನಗಳನ್ನೂ ಸಹ ಬಿಡಲಿಲ್ಲ. ಮುಖ್ಯವಾಗಿ ಗಮನಿಸಬೇಕಾದದ್ದೆಂದರೆ ಮೇಲ್ವರ್ಗಗಳು ತಮ್ಮ ಸ್ವಉದ್ಧಾರಕ್ಕಾಗಿ ಮಾಡಿಕೊಳ್ಳುವ ಹವ್ಯಾಸಗಳು ಬಡವರ ಜೀವನಶೈಲಿಯಾಗಿರುತ್ತವೆ. ಫಿಟ್​ನೆಸ್​ಗಾಗಿ ವಾಕಿಂಗ್ ಮಾಡುವುದು ಸಿರಿವಂತರ ಹವ್ಯಾಸವಾದರೆ, ಬಡವರಿಗೆ ಅದು ದೈನಂದಿನ ಅನಿವಾರ್ಯ. ಸೈಕಲ್ ಹೊಡೆಯುವುದು ಸಿರಿವಂತರ ಹವ್ಯಾಸ ಆದರೆ ಲಕ್ಷಾಂತರ ಬಡವರು ದೈನಂದಿನ ಸಾರಿಗೆಗಾಗಿ ಅದನ್ನೇ ಬಳಸುವುದು. ತೂಕ ಇಳಿಸಿಕೊಳ್ಳಲು ಮೇಲ್ವರ್ಗದವರು ಬಳಸುವ ರಾಗಿ ನವಣೆಯಂತ ಹೆಚ್ಚು ಶಕ್ತಿಕೊಡುವ ಆದರೆ ಕಡಿಮೆ ಬೆಲೆಯ ಧಾನ್ಯಗಳು ಬಡವರಿಗೆ ಅನಿವಾರ್ಯ ಊಟ. ಹವ್ಯಾಸಗಳಿಗಾಗಿ ಇಷ್ಟೊಂದು ತಿಣುಕಿ ಹಣ ಖರ್ಚು ಮಾಡುವ ಬದಲು ಬಡವರ ಜೀವನಶೈಲಿಯನ್ನೇ ತನ್ನದಾಗಿಸಿಕೊಳ್ಳಬಾರದೆ? ಒಂದು ಅತ್ಯುತ್ತಮ ಉದಾಹರಣೆ ಕೊಡುವುದಾದರೆ ಹಿಂದಿನ ಶತಮಾನದ ಆದಿಯಲ್ಲಿ ಇಂಡಿಯಾದ ಶೇ.ತೊಂಭತ್ತರಷ್ಟು ಜನರ ಜೀವನ ಶೈಲಿ ಉಪವಾಸವಾಗಿದ್ದಿತು. ಇದನ್ನೇ ಗ್ಲಾಮರೈಸ್ ಮಾಡಿದ ಗಾಂಧೀಜಿ ಉಪವಾಸವನ್ನು ಆಯುಧವನ್ನಾಗಿ ಪರಿವರ್ತಿಸಿ ಚಳುವಳಿಯನ್ನು ಕಟ್ಟಿದರು.

ಜೀವನಶೈಲಿಯ ಮಾರುಕಟ್ಟೆ ಇಲ್ಲಿಗೆ ನಿಲ್ಲುವುದಿಲ್ಲ. ನನ್ನ ಕೂದಲುಗಳು ಕರ್ನಾಟಕದಲ್ಲಿದ್ದಾಗ ಹಸನಾಗಿರುತ್ತವೆ. ಆದರೆ ಸಿಡ್ನಿಗೆ ಬಂದರೆ ಅದ್ಯಾವ ಹವಾಮಾನದ ಪರಿಣಾಮವೊ ಅತಿಯಾಗಿ ಹೊಟ್ಟು ಸೇರಿಕೊಂಡು ಬಿಡುತ್ತದೆ. ಮನೆಮದ್ದು, ಶಾಂಪೂಗಳು ಕೆಮಿಕಲ್​ಗಳು ಯಾವ ಉಪಾಯಕ್ಕೂ ಬರಲಿಲ್ಲ. ಒಬ್ಬ ಕೂದಲು ತಜ್ಞರು ಅದೇನನ್ನೊ ಹಚ್ಚಿಕೊಂಡು ಸ್ನಾನ ಮಾಡಲು ಔಷಧಿಯನ್ನು ಕೊಡಲು ಬಂದರು. ಅದನ್ನು ಹಚ್ಚಿಕೊಂಡು ವಾರಕ್ಕೆರಡು ಸಾರಿ ತಲೆಸ್ನಾನ ಮಾಡಿದರೆ ಹೊಟ್ಟು ಬರುವುದಿಲ್ಲ ಅಂತ ಹೇಳಿದರು. ವಾರಕ್ಕೆರಡು ಬಾರಿ ಎಷ್ಟು ತಿಂಗಳುಗಳವರೆಗೆ ಮಾಡಿದರೆ ಹೊಟ್ಟು ಶಾಶ್ವತವಾಗಿ ನಿವಾರಣೆಯಾಗುತ್ತದೆ ಅತ ಕೇಳಿದೆ. ಇದನ್ನು ಬಳಸುವುದನ್ನು ನಿಲ್ಲಿಸಿದ ಕೂಡಲೆ ಹೊಟ್ಟು ವಾಪಸುಬರುತ್ತದೆ. ಕಡೆಯವರೆಗೆ ಬರಬಾರದೆಂದರೆ ಯಾವಾಗಲೂ ಬಳಸುತ್ತಲೇ ಇರಬೇಕು ಅಂತ ಹೇಳಿದರು. ವಾರಕ್ಕೆರಡು ಬಾರಿ ಯಾವುದೇ ಸಾಧಾರಣ ಶಾಂಪೂ ಹಚ್ಚಿಕೊಂಡು ಸ್ನಾನ ಮಾಡಿದರೂ ತಲೆಹೊಟ್ಟು ಬರುವುದಿಲ್ಲ. ಇದಕ್ಕಾಗಿ ದುಬಾರಿ ಕೆಮಿಕಲ್ ಅನ್ನು ಯಾಕೆ ಕೊಂಡುಕೊಳ್ಳಬೇಕು? ವಾರಕ್ಕೊಮ್ಮೆ ತಲೆಸ್ನಾನ ಮಾಡಿದರೆ ನಿವಾರಣೆಯಾದರೂ ಸರಿ ಅಂತದ್ದನ್ನಾದರೂ ಕೊಡಿ ಎಂದೆ. ಇಲ್ಲ ಯಾವ ರಾಸಾಯನಿಕವಾದರೂ ವಾರಕ್ಕೆರಡು ಬಾರಿ ಮಾಡಲೇಬೇಕು ಅಂತ ಹೇಳಿದರು. ನಾನು ಕೊಂಡುಕೊಳ್ಳದೇ ಎದ್ದು ಬಂದೆ. ಎಷ್ಟೋ ಸಾರಿ ಒಂದು ಸಣ್ಣ ಕಾಮನ್ ಸೆನ್ಸ್ ನಮ್ಮನ್ನು ಈ ರೀತಿಯ ನಮ್ಮ ಸಹಜ ಜೀವನಶೈಲಿಯನ್ನು ನಮಗೇ ಮಾರಿ ಯಾಮಾರಿಸುವ ಜಾಲಕ್ಕೆ ನಾವು ಸಿಕ್ಕಿಕೊಳ್ಳುವುದನ್ನು ತಪ್ಪಿಸುತ್ತದೆ. ಅಷ್ಟಕ್ಕೂ ನಮ್ಮೊಳಗಿನ ನಮ್ಮ ನಡುವಿನ ದೇವರನ್ನೇ ನಮಗೆ ಮಾರುವ ಅಧ್ಯಾತ್ಮಿಕ ಮಾರುಕಟ್ಟೆಯ ಜಾಲಕ್ಕೆ ಅದೆಷ್ಟು ಸುಶಿಕ್ಷಿತರು ಬಿದ್ದಿಲ್ಲ?

ಹಿಂದಿನ ಕಂತು : Sydney Diary : ‘ನಾನೇನಿದ್ದರೂ ಷ. ಶೆಟ್ಟರ್, ಕಲಬುರ್ಗಿಯಂತಹ ಸಂಶೋಧಕರ ಮಟ್ಟದ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕು ಅಂತಂದುಕೊಂಡಿದ್ದೆ’

Follow us on

Most Read Stories

Click on your DTH Provider to Add TV9 Kannada