‘ಬಾರದಿರೋ’ ಸಾಧನಕೇರಿಗೆ.. ಅನ್ನುತ್ತಿದೆ ಬೇಂದ್ರೆ ಅಜ್ಜನ ಪ್ರೀತಿಯ ಕೆರೆ!

  • TV9 Web Team
  • Published On - 14:44 PM, 20 Jun 2020
‘ಬಾರದಿರೋ’ ಸಾಧನಕೇರಿಗೆ.. ಅನ್ನುತ್ತಿದೆ ಬೇಂದ್ರೆ ಅಜ್ಜನ ಪ್ರೀತಿಯ ಕೆರೆ!

ಧಾರವಾಡ: ಬಾ ಬಾರೊ, ಬಾರೋ ಬಾರೋ ಸಾಧನೆಕೇರಿಗೆ, ಮರಳಿ ನಿನ್ನೀ ಊರಿಗೆ ಎಂಬ ಕವಿತೆಯ ಸಾಲುಗಳನ್ನು ಕೇಳಿದಾಗ ನೆನಪಾಗೋದು ನಮ್ಮ ಪ್ರೀತಿಯ ಬೇಂದ್ರೆ ಅಜ್ಜ ಅರ್ಥಾತ್​ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಖ್ಯಾತ ಕವಿ ದಿ. ದ.ರಾ.ಬೇಂದ್ರೆ. ಅದರ ಜೊತೆ ನೆನಪಿಗೆ ಬರೋದು ಬೇಂದ್ರೆ ಅಜ್ಜನ ನೆಚ್ಚಿನ ಸಾಧನಕೇರಿ ಕೆರೆ. ತಮ್ಮ ಕಲ್ಪನಾಲೋಕದಲ್ಲಿ ರಚನೆಯಾಗುತ್ತಿದ್ದ ಅನೇಕ ಕವಿತೆಗಳಿಗೆ ಇದೇ ಕೆರೆ ಸ್ಫೂರ್ತಿ.

ಹಾಗಾಗಿ, ಈ ಮಹಾನ್​ ಕವಿಯ ಸ್ಮರಣಾರ್ಥ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತವು ಸೇರಿ ಈ ಕೆರೆಯನ್ನು ಹತ್ತು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲು ಮುಂದಾಗಿತ್ತು. ಕೆರೆಯ ಸುತ್ತ ಉದ್ಯಾನವೊಂದನ್ನು ರಚಿಸಿ, ಅದರಲ್ಲಿ ಸಂಗೀತ ಕಾರಂಜಿಯನ್ನೂ ಸಹ ಅಳವಡಿಸಿತ್ತು. ಇಷ್ಟೆಲ್ಲಾ ಅಭಿವೃದ್ಧಿಪಡಿಸಿದ ಆಡಳಿತವು ಒಂದು ಸಣ್ಣ ಅಲಕ್ಷ್ಯ ಕೂಡ ಮಾಡಿಬಿಡ್ತು. ಅದೇ ಇವತ್ತು ಕೆರೆಯ ದುಃಸ್ಥಿತಿ ಕಾರಣವಾಗಿ ಬಿಟ್ಟಿದೆ ಎಂಬುದು ಸ್ಥಳೀಯರ ಅಳಲು.

ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಕಲುಷಿತವಾಯ್ತು ಕೆರೆ:
ಈ ಕೆರೆಗೆ ಮೊದಲಿನಿಂದಲೂ ಚರಂಡಿಯ ಕೊಳಚೆ ನೀರು ಹರಿದು ಬರುತ್ತಿತ್ತು. ಅಭಿವೃದ್ಧಿ ಕಾಮಗಾರಿಯ ವೇಳೆ ಈ ಚರಂಡಿ ನೀರು ಕೆರೆಗೆ ಸೇರದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಇದೀಗ ಕೆರೆಯ ನೀರು ಕಲುಷಿತಗೊಂಡಿದೆ. ಈ ಹಿಂದೆ ನೀರು ಅದೆಷ್ಟು ಸ್ವಚ್ಛವಾಗಿತ್ತು ಅಂದ್ರೆ, ಸ್ಥಳೀಯರು ಇದೇ ನೀರನ್ನು ಕುಡಿಯೋಕೆ ಹಾಗೂ ಅಡುಗೆಗೆ ಬಳಸುತ್ತಿದ್ದರು. ಆದರೆ ಈಗ ಕೆರೆಯಿಂದ ಹೊರಸೂಸುವ ದುರ್ವಾಸನೆಯಿಂದ ಅದರ ಹತ್ತಿರ ಸುಳಿದಾಡಲು ಕೂಡ ಹಿಂಜರಿಯುತ್ತಾರೆ.

ಕೆರೆಯನ್ನು ರಕ್ಷಿಸಲು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ:
ಕೆರೆಯ ದುಃಸ್ಥಿತಿಯನ್ನು ಕಂಡ ಸ್ಥಳೀಯರು ಈ ಬಗ್ಗೆ ಹಲವಾರು ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಸಾಹಿತಿಗಳು, ಕವಿಗಳು ಕೂಡ ಸರ್ಕಾರಕ್ಕೆ ಬಹಳಷ್ಟು ಸಲ ಮನವಿ ಮಾಡಿಕೊಂಡಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ. ಜೊತೆಗೆ ಲಾಕ್​ಡೌನ್ ಸಮಯದಲ್ಲಿ ಉದ್ಯಾನವನದ ನಿರ್ವಹಣೆ ಬಗ್ಗೆ ಕೂಡ ಯಾರೂ ಕಾಳಜಿ ತೋರಿಸಲಿಲ್ಲವಂತೆ. ಹಾಗಾಗಿ ಆದಷ್ಟು ಶೀಘ್ರವಾಗಿ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬುದು ಇಲ್ಲಿನ ಸಾರ್ವಜನಿಕರ ಮನವಿ. ಆದರೆ ಜಿಲ್ಲಾಡಳಿತ ಮಾತ್ರ ಅದೇಕೋ ಈ ವಿಷಯದಲ್ಲಿ ಆಸಕ್ತಿ ತೋರುತ್ತಿಲ್ಲ ಎಂಬುದು ಸ್ಥಳೀಯರ ಆಳಲು.

ಒಟ್ನಲ್ಲಿ, ಬೇಂದ್ರೆಯವರ ಜನಪ್ರಿಯ ‘ಬಾ ಬಾರೋ, ಬಾರೋ ಬಾರೋ ಸಾಧನಕೇರಿಗೆ..’ ಕವನದ ಸಾಲುಗಳನ್ನು ಕೇಳಿ ಯಾರಾದ್ರೂ ಸಾಧನಕೇರಿಯತ್ತ ಒಮ್ಮೆ ಬಂದು ಅವರ ನೆಚ್ಚಿನ ಕೆರೆಯನ್ನ ಒಮ್ಮೆ ನೋಡಿಬಿಟ್ರೆ, ಕೂಡಲೇ ಬೇಂದ್ರೆ ಅಜ್ಜನ ಕ್ಷಮೆಯಾಚಿಸಿ, ಅವರ ಕವಿತೆಯ ಶೀರ್ಷಿಕೆಯನ್ನ ‘ಬಾರದಿರೋ ಸಾಧನಕೇರಿಗೆ’ ಎಂದು ಇಡಬೇಕಿತ್ತೇನೋ ಎಂದು ಅಂದುಕೊಳ್ಳೋದಂತೂ ಖಂಡಿತ. -ನರಸಿಂಹಮೂರ್ತಿ ಪ್ಯಾಟಿ