Poetry : ಅವಿತಕವಿತೆ ; ಕಾವಲಿ ಉರಿಗೆ ಕಾಯಬೇಕು ಎಣ್ಣೆಯ ತೇವ ಬಸಿರಿಗೆ ಕಲಸಿದ ಹಿಟ್ಟು ಆಕಾರಗೊಳ್ಳಬೇಕು

Poetry : ಅವಿತಕವಿತೆ ; ಕಾವಲಿ ಉರಿಗೆ ಕಾಯಬೇಕು ಎಣ್ಣೆಯ ತೇವ ಬಸಿರಿಗೆ ಕಲಸಿದ ಹಿಟ್ಟು ಆಕಾರಗೊಳ್ಳಬೇಕು

Writing : ‘ಲೌಕಿಕದ ಸಂಗತಿಗಳು, ಬದುಕಿನ ತಿರುವುಗಳಲ್ಲಿ ಮುಖಾಮುಖಿಯಾದ ಭಾವಗಳು, ಕಾಣದ ಹಲವು ನಿಗೂಢತೆ, ನನ್ನ ಬೆನ್ನಟ್ಟಿ ನನ್ನದೆನಿಸಿಯೂ ಅಲ್ಲವೆನಿಸಿ, ಅಂತರ ಕಾಪಿಡಲು ಯತ್ನಿಸಿ ಮತ್ತೆ ನನ್ನೊಳಗೆ ಸೇರಿ ಹಠ ಹಿಡಿದು ಕೂತಾಗ ನಾನು ಸಂಧಾನಕಾರಳಾಗಿ ಅಕ್ಷರಗಳ ಮೊರೆ ಹೋಗಿದ್ದೇನೆ.’ ಪೂರ್ಣಿಮಾ ಸುರೇಶ್

ಶ್ರೀದೇವಿ ಕಳಸದ | Shridevi Kalasad

|

Dec 26, 2021 | 12:11 AM

Kannada Poetry : ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಕವಿ, ರಂಗ-ಸಿನೆಮಾ ಕಲಾವಿದೆ ಪೂರ್ಣಿಮಾ ಸುರೇಶ್ ಹೊಸ ಸಂಕಲನ ‘ಮಧ್ಯಮಾವತಿ’ ಸದ್ಯದಲ್ಲೇ ನಿಮ್ಮ ಕೈಸೇರಲಿದೆ. ಅದನ್ನು ಅಚ್ಚಿಗೆ ಕಳಿಸಿ ನಂತರದಲ್ಲಿ ಬರೆದ ಅವರ ಕೆಲ ಕವಿತೆಗಳನ್ನು ಇಲ್ಲಿ ಓದಬಹುದು. *

ನೋವನ್ನು ವಿವರಿಸುವುದು ಸುಲಭವಲ್ಲ. ಇವರ ಕವಿತೆಗಳಲ್ಲಿ ದೇವರಿದ್ದಾನೆ, ಪ್ರೇಮವಿದೆ, ಅವನಿದ್ದಾನೆ, ಅವಳಿದ್ದಾಳೆ, ಆದರೂ ಎಲ್ಲವೂ ವಿಶಿಷ್ಟವಾಗಿ ಕಾಣಿಸುತ್ತಾರೆ. ಪೂರ್ಣಿಮಾ ರೂಪಕಪ್ರಿಯರೂ ಹೌದು. ಅವು ಕೂಡ ಅನನ್ಯ ರೀತಿಯಲ್ಲಿ ಬರುತ್ತವೆ. ಒಬ್ಬ ಅವನು, ಒಬ್ಬ ಅವಳು ಇದ್ದಾರೆ. ಹೀಗೆ ಕವಿತೆ ತನ್ನನ್ನು ಓದುಗರಿಗೆ ಬಿಟ್ಟುಕೊಡುವುದೂ ಇದರ ಗುಣ . ಆದರೆ ಅವು ಸುಲಭದಲ್ಲಿ ಬಿಟ್ಟುಕೊಡುವಂಥವೂ ಅಲ್ಲ. ಕೆ. ವಿ. ತಿರುಮಲೇಶ್, ಕವಿ

ಗದ್ಯ ಪದ್ಯಗಳೆರಡರಲ್ಲಿಯೂ ಬರೆವ ಆಸಕ್ತಿಯ ಲೇಖಕಿ ಪೂರ್ಣಿಮಾ. ಇಲ್ಲಿ ಕವನಗಳಲ್ಲಿರುವುದು ಅಂತರಂಗದಲ್ಲಿನ ತರಂಗಗಳು. ಈ ತರಂಗಗಳಲ್ಲಿ ಈಜಾಡುವ ರಾಶಿ ಮೀನುಗಳಲ್ಲಿ ಕವಿ ಪೂರ್ಣಿಮಾ ತನ್ನ ಗಾಳಕ್ಕೆ ಸಿಲುಕಿದಷ್ಟನ್ನು ಹಿಡಿದು ಇಲ್ಲಿ ಕಲೆ ಹಾಕಿರುವಳು. ಏನೆಂದರೆ ಇವು ದಡಕ್ಕೆ ಬಂದೂ ಮರಣಿಸದ ಜೀವನದಿಯ ಮತ್ಸ್ಯ ವಿಶೇಷಗಳು. ಎಂತಲೇ ಇಲ್ಲಿ ಹೊಸರೂಪ ರೂಪಕಗಳಲ್ಲಿ ಕಣ್ಮಿಂಚುತ್ತಿರುವವು. ‘ಕವನ ಹೇಳಬೇಕು ಆದರೆ ಹೇಳಲಾರೆ ಎನ್ನುತ ಕೊನೆಗೂ ಹೇಳದೆ ಇರಲಾರೆ ಎಂಬಲ್ಲಿಗೆ ಬಂದು ತಲುಪಿದಾಗ ಕವಿಯಿಂದ ತಪ್ಪಿಸಿಕೊಳ್ಳಲಾರದೆ ಶಬ್ದ ಚಿಮಟಿಗೆ ಸಿಲುಕಿ ತಂತಾನೇ ಹೊರಬೀಳುವ ಜಾದೂ ಮಾರ್ಗ ಇಲ್ಲಿದೆ. ಇವಳ ಕವಿತೆಗಳು ಸಫಲತೆಯ ಕಡೆಗೆ ಹೊರಟಿರುವ ಪದ ಪರಿಕ್ರಮಗಳು. ವೈದೇಹಿ, ಕವಿ

* ಇಬ್ಬನಿಯ ಬಿಕ್ಕಳಿಕೆಗಳು

ಗರಿಕೆ ಎಸಳಿನ ಶೃಂಗದಲಿ ಕೂತ ಇಬ್ಬನಿಯ ಹನಿ ನಾಚಿಕೆ ಮುಳ್ಳಿನ ನರಗಳಲಿ ಹರಿಯುವ ಸೂಕ್ಷ್ಮ ಲಜ್ಜೆ ಮುಸ್ಸಂಜೆಯ ಮರುಳಿಗೆ ಸಂಜೆ ಮಲ್ಲಿಗೆಯ ಮೃದು ನಗುವಿನ ಗಂಧ ನೀನು ಸುಖಿ ಹೀಗೇ ಇರು ಎನ್ನುವೆ

ನಿನ್ನೆದೆಗೆ ನನ್ನ ಅಧೀರತೆ ದಾಖಲಿಸುವ ಹೊಸಹೊಸದಾಗಿ ಹುಟ್ಟುಪಡೆವ ಕಣ್ಣಹನಿಗಳನ್ನು ಇಳಿಬಿಡುವ ತಳ ಹಿಡಿವ ತಳಮಳ ತಲುಪಿಸುವ ದರ್ದು ನನಗೇನಿದೆ

ಅಂದುಕೊಳ್ಳುತ್ತೇನೆ:

ಆದರೆ‌ ಮರಳುಗಾಡಿನ ಉರಿ ಉಸಿರನು ಬೇಯಿಸುವಾಗ ನೋವಿನ ಅಲೆಗಳು ಅಪ್ಪಳಿಸುವಾಗ ನೀನು ನೆನಪಾಗುವೆ ನನ್ನ ಅಣತಿ ಮೀರಿ ಪುಟ್ಟ ಪುಟ್ಟ ಬಿಕ್ಕುಗಳು ಕಾಯುತ್ತವೆ ನಿನ್ನ ನೇವರಿಕೆಗೆ

ಬಲ್ಲೆ ಬಿಡು

ಸಂತೆ,ಜಾತ್ರೆ,ಉತ್ಸವಗಳ ಗಲಗಲ ಸದ್ದಿನ ಕೇಂದ್ರವಾಗುತ ದೇವರಾಗುವವರ ಕಿವಿಗೆ ಒಂಟಿ ಬಿಕ್ಕಿನ ದನಿ ತಾಕದು

ಹಸಿರಿಗೆ ಹಾದ ಬೆಳಕು ಪ್ರತಿಫಲಿಸುತ್ತದೆ ಇರು ನಿನ್ನಲ್ಲಿಗೂ ಕಳುಹಿಸುವೆ

ಉಳಿದೆಲ್ಲವೂ ನಂಟಿನ ಹಳೆಯ ಗಂಟಿನಲಿ ಮರ್ಮರಿಸಲಿ

* ಪಾತಿ

ಅವನು ಕಟ್ಟಿ ತಂದ ಮಲ್ಲಿಗೆ ಮಾಲೆ ಬಿಡಿ ಮಲ್ಲಿಗೆಯೊಂದು ಸೆಳೆದು ಬೊಗಸೆಗಿಟ್ಟು ನಕ್ಕ

ಘಮಿಸಿದ ಪರಿಮಳಕೆ ಮತ್ತು ಏರಿ ಮತ್ತೇರಿ ಮಲ್ಲಿಗೆ ಮಾಲೆ ಕನವರಿಸಿದಳು

ದೇವರಿಗೆ ಹಬ್ಬಕೆ, ಸಭೆಗೆ ಘಮಘಮ ಶೋಭೆ ಬಗೆ ಬಗೆದಳು

ಮಣ್ಣು ಹದಮಾಡು ಪಾತಿ ಮಾಡುವ ತುಂಡು ತುಂಡು ಗೆಲ್ಲು ಕಾಂಡ ನೆಟ್ಟು ಜೀವ ಕೊನರಿಸುವ ಉಲಿದಳು

ಮಾಲೆಗೆಂದೇ ದಾರ ಅಳೆದಳು ತೇಲುಗಣ್ಣಲಿ ನಸುನಕ್ಕಳು

‘ನಿನಗಾಗಿ ಕಟ್ಟಿದ ಮಾಲೆ ಮುಡಿಗೇರಿಸು’ ಎಂದರೆ ಘಲಘಲ ನಗುತ್ತಾಳೆ ಯಾವುದೋ ಕನಸನು ಹಿಡಿಯುವಂತೆ ಕಣ್ಣು ಪಳಪಳಿಸುತ್ತಾಳೆ

*

AvithaKavithe Kannada Poetry Column by Kannada Poet artist Poornima Suresh

ಕೈಬರಹದೊಂದಿಗೆ ಪೂರ್ಣಿಮಾ

ಸದಾ ಚಡಪಡಿಸುವ, ಹಠ ಮಾಡುವ, ಏನೋ ಬೇಕು ಎಂಬಂತೆ ರಚ್ಚೆ ಹಿಡಿದು ಅಳುವ, ಬದುಕಿನ ವಿಸ್ಮಯ, ಸಂಭ್ರಮ, ನೋವುಗಳನ್ನು ಅಮಾಯಕ ಬೆರಗಿನಿಂದ ನೋಡುವ ಮಗುವೊಂದು ನನ್ನನ್ನು ಪೊರೆಯುತ್ತಿದೆ. ಆ ಮಗುವನ್ನು ಸಂತೈಸುವ ದನಿಗಾಗಿ ಒಂದು ಹುಡುಕಾಟ ನನ್ನ ಬಗಲಲ್ಲಿ ಹೊತ್ತು ಅಲೆದಾಡುತ್ತೇನೆ. ಅಲೆದಾಡುತ್ತಲೇ ಇದ್ದೇನೆ. ಈ ದನಿ ಎಲ್ಲೆಲ್ಲೋ ಮುಖಾಮುಖಿಯಾದಂತೆ… ಕಣ್ಣಿಗೆ ಕಣ್ಣು ಸೇರಿಸಿ ಘನವಾಗುತ್ತ, ಮತ್ತೆ ಕರಗಿ ಜೀವರಸವಾಗಿ ಆವರಿಸಿ ಚಿಗುರಿಕೊಳ್ಳುತ್ತದೆ.

ಕನಸು, ಕಲ್ಪನೆ, ಭಾವನೆಗಳು ಅಕ್ಷರಗಳ ನೇವರಿಕೆಯಾಗುತ್ತದೆ. ಬದುಕಿನ ಒತ್ತಡದ ನಡುವಿನ ಓಟದಲ್ಲಿ ಸಖೀ ಭಾವದಲ್ಲಿ ನನ್ನೊಂದಿಗೆ ಸಂಭಾಷಿಸುತ್ತದೆ. ಆಗೆಲ್ಲ ಬರೆಯಲೇಬೇಕಾದ, ಬರೆಯದೆ ಇರಲಾರೆನೆಂಬ ಅನಿವಾರ್ಯತೆಗೆ ಒಳಗಾಗುತ್ತೇನೆ. ಮಗುವಿಗೆ ಬಣ್ಣದ ಗಿಲಕಿಯ ಘಲಘಲ.

ಲೌಕಿಕದ ಸಂಗತಿಗಳು, ಬದುಕಿನ ತಿರುವುಗಳಲ್ಲಿ ಮುಖಾಮುಖಿಯಾದ ಭಾವಗಳು, ಕಾಣದ ಹಲವು ನಿಗೂಢತೆ, ನನ್ನ ಬೆನ್ನಟ್ಟಿ ನನ್ನದೆನಿಸಿಯೂ ಅಲ್ಲವೆನಿಸಿ, ಅಂತರ ಕಾಪಿಡಲು ಯತ್ನಿಸಿ ಮತ್ತೆ ನನ್ನೊಳಗೆ ಸೇರಿ ಹಠ ಹಿಡಿದು ಕೂತಾಗ ನಾನು ಸಂಧಾನಕಾರಳಾಗಿ ಅಕ್ಷರಗಳ ಮೊರೆ ಹೋಗಿದ್ದೇನೆ ಘಾಸಿಗೊಂಡ, ಪುಳಕಗೊಂಡ ವಿವಿಧ ಭಾವಗಳಿಗೆ ಅಕ್ಷರಗಳು ಬೆಚ್ಚನೆಯ ಮಡಿಲಾಗಿ, ಜೀವದಾಯಿನಿಯಾಗಿ ನನ್ನ ಬದುಕಿಸುತ್ತದೆ. ಹಾಗಾಗಿ ಬರೆಯುತ್ತಿದ್ದೇನೆ.

* ದೋಸೆಯ ಆತ್ಮ-ಕಥೆ

ಮಸಾಲೆ ದೋಸೆ ಧ್ಯಾನಿಸುವ ಜೊಲ್ಲುಸಿರ ಗೆಳತಿಗೆ ವಾಟ್ಸಪ್ ಮನೆಯ ಕೋಣೆ ಹೊಕ್ಕು ಸಂದೇಶಿಸುತ್ತಾನೆ

ಹಸಿವಿಗೆ ರುಚಿಯೆಂದೆ ಗಂಡ, ಮಕ್ಕಳಿಗೆ ಇಷ್ಟವೆಂದೆ:

ದೋಸೆಯೊಂದಿಗೆ ಅನುಸಂಧಾನ ಎಷ್ಟು ಕ್ಷಣ ಉಂಡೆಯಾ ಬೆಪ್ಪಾದಳು

ಬೇಳೆ ಒಂದು ಪಾವು ಅಕ್ಕಿ ಸೇರು ಬೆರೆಸಿ ಬಣ್ಣಕ್ಕೆಂದು ಅಜ್ಜಿಯ ಕಾಳಜಿಯ ಮೆಲುಕು ‘ಬಾಳ ಒಂದು ಚಮಚ ಮೆಂತೆ’ ನೆನಪು

ತೊಳೆದು ನೆನೆಸಿಡಬೇಕು ನೆನೆಯಬೇಕು ಬೆಳಕು ಏರಿ ಮಾಗಿ ತಣಿಯುವವರೆಗೆ

ಮೊದಲು ಅವಳು ಅರೆವ ಕಲ್ಲಿನಲಿ ಕಾಳು ಬೇಳೆ ನೀರು ರುಬ್ಬಿ ಕೊಂಡು ಮೆಲುದನಿಯ ಹಿಟ್ಟು ಈಗ ವೇಗದ ಕಾಲ ಯಂತ್ರ ಗುರ್ರ್.. ಗುಟ್ಟಿ.. ಹಿಟ್ಟು ನಾಟಕದ ಸ್ಕ್ರಿಪ್ಟು

ರುಬ್ಬಿದನ್ನು ಬೆರೆಸಿ ಮುಚ್ಚಿಡುತ್ತೇನೆ ಇರುಳು ಬುರುಗು ತರಿಸಿ ಹದವಾಗಿ ನಾಳೆಗೆ ಕಾದ ಹಸೆ ಹಂಚಿನ ಮಣೆಗಾಗಿ

ಒಳ ಉರಿಗೆ ಅರ್ಘ್ಯ

ಕಾವಲಿ ಉರಿಗೆ ಕಾಯಬೇಕು ಎಣ್ಣೆಯ ತೇವ ಬಸಿರಿಗೆ ಕಲಸಿದ ಹಿಟ್ಟು ಆಕಾರಗೊಳ್ಳಬೇಕು

ಮತ್ತೆ ಹದ ಉರಿಯಲಿ ಬೇಯಬೇಕು ದೋಸೆಯ ಬಿಳಿ ಕಾಯದಲ್ಲಿ ತಾಪದ ಉರಿಗೆ ಗುಳ್ಳೆ ಅಲ್ಲಲ್ಲೇ ಒಡೆದು ತೂತು ತೂತು ಬೇಕು ಸಟಕಕ್ಕೂ ಶ್ರದ್ಧೆಯ ಅಂಟು ಅಂಟಿಯೂ ಅಂಟದ ತೈಲದ ನಂಟು ಹರಿಯದಂತೆ, ತುಂಡಾಗದಂತೆ ಸಿದ್ದಿಸಬೇಕು ಕರಗಳಿಗೂ ಮನಸಿಗೂ ಪಕ್ವತೆಯ ತಪ

ಉರಿ ಹೆಚ್ಚಿದರೆ ಕರಟುವ ಕಡಿಮೆಯಾದರೆ ಒಣಗುವ ಗರಿಗರಿ ದೋಸೆಗೂ ಧ್ಯಾನಸ್ಥರಾಗಬೇಕು ಚಿತ್ತದ ಕುತ್ತಗಳು ಚಿತ್ರಗಳು ಕಾವಲಿಗಿಳಿದು ಕಾದಾಡಬಾರದು

ಬಡಿಸಬೇಕು ಪ್ರೀತಿ ನವನೀತ ಇಟ್ಟು ಚಟ್ನಿ, ಬಾಜಿ ತಯಾರಿಸಿಟ್ಟ ಚಟ್ನಿಪುಡಿ ಒಡಲಾಗ್ನಿಯ ಆಯ್ಕೆ

ದೋಸೆ ಹೊಯ್ದ ಪರಿಮಳ ರುಚಿ ಗೊತ್ತು ನಿಮಗೆ ಆದರೆ ದೋಸೆ ಲೋಕದ ಕುಸುರಿ ಬೇಯುವ, ಕಾಯುವ ಮಾಗುವ ಹಸಿವೆಗೆ ಇಳಿಯುವ ರೂಪಾಂತರ

ನಿಮಗೆ ತಿಳಿದಿದೆಯೇ ಜೀವಾತ್ಮ ಬನ್ನಿ ಅಡುಗೆ ಮನೆಗೆ

*

AvithaKavithe Kannada Poetry Column by Kannada Poet artist Poornima Suresh

ವಿಕಾಸ ಪ್ರಕಾಶನದ ‘ಮಧ್ಯಮಾವತಿ’

*

ವಯಃಸಂಧಿ

ಅವಸರದಲೇ ಬಂದಿರುವೆಯಾ ಹೀಗೆ ಇಲ್ಲೇ ಒಂದಷ್ಟು ಹೊತ್ತು ಹತ್ತಿರ ಕೂತೂ.. ಹೀಗೆ ಕೂಡಿರೋಣ

ಏನಿದೆ ಮಾತು ಸವೆದು ಬಿಸುಟ ಶಬ್ದಗಳು ಮತ್ತೆ ಎತ್ತಿ ಸವರಿ ತಿರುಗಿಸಿ ಹಾಗೆ ಹೀಗೆ ನೋಡುವುದೇನು?

ಹೇಳು, ಹೇಗಿರುವರು ನಿನ್ನವರು ಇದೀಗ ಮಕ್ಕಳ ಕಲಿಕೆ ಮುಗಿಯಿತೇ ಮಗಳ ಮದುವೆ ತಯಾರಿ ನಡೆದಿದೆಯೇ ಜಾಗ್ರತೆ! ಹೆಣ್ಣು ಹುಡುಗಿ ಹಸಿ ಮನಸು ಹಸಿ ಆಸೆಗಳು ಗೀರು ಬಿದ್ದೀತು

ಅರೇ..ತಲ್ಲಣಿಸದಿರು. ಇರಲಿ ಬಿಡು ನನ್ನ ಬಗ್ಗೆ ಮಾತನಾಡುವ ಗಂಡನಿಗೆ ಈಗ ರಾತ್ರಿ ಬೆಳಗು ಚಾ ತಿಂಡಿಯ ಜೊತೆ ಮಾತ್ರೆಯ ಗರ್ಜು ಮಕ್ಕಳಿಗೋ ತಮ್ಮ ಕನಸಿನ ಮರ್ಜಿ ನೋಡು , ನೆತ್ತಿಯಲಿ ಹೇಗೆ ಹಬ್ಬಿದೆ ಬೆಳ್ಳನೆ ಕೂದಲು ಆಗೆಲ್ಲ ಕಪ್ಪನೆ ಉದ್ದನೆ ಜಡೆ ನಿನ್ನೆದುರು ಆಡಿಸುತ್ತಿದ್ದೆ ಈಗ ನೋಡು! ಕಪ್ಪಿನ ನಡುವೆ ಬೆಳ್ಳಿ ಆಟ ಆಡುತ್ತೆ ಮೊದಲು ಕೈಗೆ ಹಚ್ಚುತ್ತಿದ್ದ ಮೆಹಂದಿ ತಲೆಗೆ ಪೂಸುತ್ತೇನೆ

ಹಾಂ, ನೆನಪಾಯಿತೇ ನನ್ನ ಕೈಯ ಹಿಡಿದು ನೀನು ಮದರಂಗಿ ಹಚ್ಚಿದ್ದು ಮನಸ್ಸಿಗೆ ಬಣ್ಣ ತುಂಬಿದ್ದು.. ಬೇಡ,ಚಡಪಡಿಕೆ

ಅರೆ, ನಿನ್ನ ತಲೆ ಅದು ಹೇಗೆ ಬೋಳು ಮೈದಾನದ ಹಾಗೆ.. ವಯಸ್ಸಾಯಿತು ಬಿಡು “ವಯಃಸಂಧಿ”.

ಆದರೂ, ನಿನ್ನ ದಟ್ಟ ಕೂದಲೊಳಗೆ ನನ್ನ ಬೆರಳು ನಲಿದಾಡಿದ್ದು.. ನೀನು ಮಡಿಲಲ್ಲಿ ಮಗುವಾಗಿದ್ದು.. ಬಿಡದ ಬಂಧ ಈಗಲೂ ಬೆವರುತ್ತಿರುವೆ

ಬೇಡ, ಎದ್ದು ಹೋಗದಿರು ಬಿಡು ಮಾತಿಗೆ ಅವಸರವಿಲ್ಲ ಇನ್ನು ಸುಮ್ಮನೆ ಹೀಗೆ ಕೂರುವ

ಒಂದಿಷ್ಟು ಅಂತರವಿರಲಿ ಭುಜಕ್ಕೆ ಭುಜ ತಾಕದಿರಲಿ ಮನ ಒದ್ದೆಯಾಗದಿರಲಿ ಎದೆ ಬಿಕ್ಕುಗಳ ಪೇರಿಸದಿರಲಿ

ನನ್ನೊಳಗಿನ ಅವಳ ನಿನ್ನೊಳಗಿನ ಅವನ ಭೇಟಿಯಾಗಿಸದಿರು

– ನಡೆ, ಬಹಳ ಹೊತ್ತಾಗಿದೆ

ಹಾಗೆ ಕನ್ನಡಕ ತೆಗೆದು ಈ ಸೆರಗಿನ ತುದಿಯಿಂದ ಕಣ್ಣ ಒರೆಸಿಕೋ

ಮತ್ತೆ ಹೀಗೆಯೇ ಯಾವಾಗಲಾದರೂ ಅವರು ಕೂಡುತ್ತಿರಲಿ ಏನಂತೀ? *

ಪರಿಚಯ : ಉಡುಪಿ ಜಿಲ್ಲೆಯ ಹಿರಿಯಡಕದ ಹಳ್ಳಿ ಪರಿಸರದಲ್ಲಿ ಜನಿಸಿದ ಪೂರ್ಣಿಮಾ ಸುರೇಶ್ ಕನ್ನಡ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ನನ್ನೊಳಗಿನ ಭಾವ, ಶಬ್ದ ಸೀಮೆಯ ಆಚೆ ಮತ್ತು ಅಕ್ಕನಂತೊಬ್ಬಳು ಅನುರಕ್ತೆ ಕವನ ಸಂಕಲನಗಳು ಪ್ರಕಟ.  ‘ಅಕ್ಕನಂತೊಬ್ಬಳು ಅನುರಕ್ತೆ’ ಕವನ ಸಂಕಲನಕ್ಕೆ, ಶಿವಮೊಗ್ಗದ ಜಿ.ಎಸ್.ಎಸ್. ಕಾವ್ಯ ಪ್ರಶಸ್ತಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ದಿ. ಗೌರಮ್ಮ ಹಾರ್ನಹಳ್ಳಿ ಮಂಜಪ್ಪ ದತ್ತಿ ಪ್ರಶಸ್ತಿ ಲಭಿಸಿವೆ. ಇತರ ಕೃತಿಗಳು ಸುಭಾಷಿತ ಮಧುಸಂಚಯ, ಶಬ್ದಕೋಶ (ಕನ್ನಡ- ಕೊಂಕಣಿ), ಶಿವರಾತ್ರ್ (ಚಂದ್ರಶೇಖರ ಕಂಬಾರರ ಶಿವರಾತ್ರಿ ನಾಟಕದ ಕೊಂಕಣಿ ಅನುವಾದ). ಒಟ್ಟು ಸಾಹಿತ್ಯ ಸಾಧನೆಗಾಗಿ ಡಿ.ಎಸ್.ಮ್ಯಾಕ್ಸ್ ಪ್ರಶಸ್ತಿ ಲಭಿಸಿದೆ.

ಕನ್ನಡ ಮತ್ತು ಕೊಂಕಣಿ ರಂಗಭೂಮಿ, ಕಿರುತೆರೆ, ಸಿನೆಮಾ ಕಲಾವಿದೆ. ಮಂಗಳೂರು ಆಕಾಶವಾಣಿ ನಾಟಕ ವಿಭಾಗದಲ್ಲಿ ಬಿ ಗ್ರೇಡ್ ಕಲಾವಿದೆ. ಕನ್ನಡ ಮತ್ತು ಕೊಂಕಣಿ ಭಾಷೆಗಳಲ್ಲಿ ಇವರು ಅಭಿನಯಿಸಿದ ಸುಮಾರು ಇಪ್ಪತ್ತಕ್ಕೂ ಹೆಚ್ಚು ನಾಟಕಗಳು ದೇಶ ವಿದೇಶಗಳಲ್ಲಿ ಪ್ರದರ್ಶನ ಕಂಡಿವೆ. ಏಕವ್ಯಕ್ತಿ ನಾಟಕ ”ಸತ್ಯನಾಪುರದ ಸಿರಿ’ ನಾಡಿನುದ್ದಕ್ಕೂ ಸುಮಾರು 35 ಪ್ರದರ್ಶನ ಕಂಡಿದೆ. ಕೊಂಕಣಿ ಸಿನೆಮಾ ‘ಅಂತು’ ವಿನಲ್ಲಿ ಅವರ ಅಭಿನಯಕ್ಕಾಗಿ ಗ್ಲೋಬಲ್ ಸಿನಿ ಬೆಸ್ಟ್ ಸಪೋರ್ಟಿಂಗ್ ನಟಿ ಪ್ರಶಸ್ತಿ ಲಭಿಸಿದೆ. ಹುಟ್ಟೂರು ಹಿರಿಯಡಕದಲ್ಲಿ ಸ್ಥಾಪಿಸಿದ ‘ಅಮೋಘ’ ಎಂಬ ಸಾಂಸ್ಕೃತಿಕ ಸಂಸ್ಥಾಪಕಿಯಾದ ಇವರು, ಕರ್ನಾಟಕ ಕೊಂಕಣಿ ಅಕಾಡೆಮಿ ಮತ್ತು ಮಂಗಳೂರು ವಿ.ವಿ.ಯ ಕೊಂಕಣಿ ಪೀಠದ ಸದಸ್ಯೆ.

ಇದನ್ನೂ ಓದಿ : Poetry : ಅವಿತಕವಿತೆ : ನಾವೂ ದೇವರ ಹೂರೂಪ ಎಂಬುದ ಮರೆತು, ಮುಳ್ಳನ್ನೂ ಮುಚ್ಚಿಟ್ಟುಕೊಳ್ಳುತ್ತೇವೆ

Follow us on

Related Stories

Most Read Stories

Click on your DTH Provider to Add TV9 Kannada