Transgender World : ರೂಮಿ ಕಾಲಂ : ಎಮೋಷನಲ್ ಟ್ರಿಪ್ ಅಂತ ತಿಳೀಬೇಡಿ, ಇದು ಸರ್ಕಾರದ ಜವಾಬ್ದಾರಿ

Rumi Column : ‘ನಮ್‌ ಪಕ್ಕದ್‌ ಬಾಡಿಯ ಜನ ಕೂಗಾಡ್ತಾ ಇದ್ರು. ಏನಕ್ಕೆ ಗೊತ್ತಾ? ಕಾರ್ಯ ಮಾಡಕ್ಕೆ ಬೇಕಾದ ಪರಿಕರಗಳಿಲ್ಲಾ ಅಂತ. ಅವ್ರು ತಗೊಂಡ್‌ ಬಂದಿಲ್ಲ, ಆವಾಗ ಅಲ್ಲಿ ಇದ್ದ ಒಬ್ಬ ಹುಡ್ಗ ಅಂದ್ರೆ ಕ್ರಿಮೇಶನ್‌ ವರ್ಕರ್ನ ಓಡ್ಸಿ ತರಿಸಿದ್ರು. ಅವನು ತಂದಿಟ್ಟ.  ಆಮೇಲೆ ಆ ಹುಡ್ಗನ್ನ ರೇಗ್ಕೊಂಡು ಅದಕ್ಕೆ ನೀರು ಚುಮುಕಿಸಿ ಶುದ್ದ ಮಾಡಿದ್ರು.‘ ರೂಮಿ ಹರೀಶ್

Transgender World : ರೂಮಿ ಕಾಲಂ : ಎಮೋಷನಲ್ ಟ್ರಿಪ್ ಅಂತ ತಿಳೀಬೇಡಿ, ಇದು ಸರ್ಕಾರದ ಜವಾಬ್ದಾರಿ
ಸಾಂದರ್ಭಿಕ ಚಿತ್ರ, ಸೌಜನ್ಯ : BBC
Follow us
ಶ್ರೀದೇವಿ ಕಳಸದ
|

Updated on:Jan 18, 2022 | 10:13 AM

ರೂಮಿ ಹರೀಶ್ | Rumi Harish : ಆವಾಗ ಅದಕ್ಕೆ 46 ವಯಸ್ಸು. ಸರಿ, ಸೈಕಲ್‌ ಕಲಿ ಅಂದೆ, ನಂಗೆ ಸೈಕಲ್‌ ಬರುತ್ತೆ ಬ್ಯಾಲೆನ್ಸ್‌ ಇದೆ ಗಾಡಿ ಕಲ್ಸು ಅಂತು. ಸರಿ ಹೇಳ್ಕೊಟ್ಟೆ. “ಓ ಗಾಡಿ ಹಾಕ್ಕೊಂಡ್‌ ಊರ್‌ ಸುತ್ತೋದೇನು” ಅಂತ ಮಾಮ (ಶಿಲ್ಪಿ ವಾದಿರಾಜ್‌ ಕಂಕು ಗುರು), ಅವರು ರೇಗ್ಸೋವ್ರು. ಕಂಕು ಹಿಂದೆ ಡಾ. ಗಂಗೂಬಾಯಿ ಹಾನಗಲ್‌ ಕೂಡ ಗಾಡಿಯಲ್ಲಿ ಕೂತಿದ್ದಾರೆ. ಇತ್ತೀಚೆಗೆ ಯಾರ್‌ ಹತ್ರನೋ ಅದನ್ನು ಶೇರ್‌ ಮಾಡ್ತಾ ಇದ್ದೆ.  ಕನಸಿನಲ್ಲಿ ಕಂಕು ಗಾಡಿ ಓಡ್ಸಕೊಂಡು ಹಾಗೇ ಹಾರಿ ಆಕಾಶದಲ್ಲಿ ಗಾಡಿ ಓಡ್ಸತಾ ಹೋಗತಿರೋದು ನೋಡ್ದೆ. ಆವತ್ತು ಕಂಕು ತೀರ್‌ಕೊಂಡ್‌ ಅದರ್‌ದು ಬಾಡಿ ಸುಡಕ್ಕೆ ಕಾಯತಿರುವಾಗ, ನಮ್‌ ಪಕ್ಕದ್‌ ಬಾಡಿಯ ಜನ ಕೂಗಾಡ್ತಾ ಇದ್ರು. ಏನಕ್ಕೆ ಗೊತ್ತಾ? ಕಾರ್ಯ ಮಾಡಕ್ಕೆ ಬೇಕಾದ ಪರಿಕರಗಳಿಲ್ಲಾ ಅಂತ. ಅವ್ರು ತಗೊಂಡ್‌ ಬಂದಿಲ್ಲ, ಆವಾಗ ಅಲ್ಲಿ ಇದ್ದ ಒಬ್ಬ ಹುಡ್ಗ ಅಂದ್ರೆ ಕ್ರಿಮೇಶನ್‌ ವರ್ಕರ್ನ ಓಡ್ಸಿ ತರಿಸಿದ್ರು. ಅವನು ತಂದಿಟ್ಟ.  ಆಮೇಲೆ ಆ ಹುಡ್ಗನ್ನ ರೇಗ್ಕೊಂಡು ಅದಕ್ಕೆ ನೀರು ಚುಮುಕಿಸಿ ಶುದ್ದ ಮಾಡಿದ್ರು. ಕಂಕು ಏನಾದ್ರೂ ಜೀವಂತವಾಗಿದ್ದು ಇದನ್ನ ನೋಡಿದ್ರೆ ತಟ್ಬಿಟ್ಟಿರೋಳು, ನಂಗೆ ಆ ಪಿಪಿಟಿ ಕಿಟ್​ನಲ್ಲಿ ಉಸಿರಾಡಕ್ಕೆ ಆಗ್ದೆ ಆಯ್ತು. ಈಗಲೂ ರಾತ್ರಿ ಉಸಿರು ಕಟ್ಟಿ ಅಮ್ಮಾ ಅಂತ ಕೂಕ್ಕೊಂಡು ಏಳ್ತೀನಿ.

ರೂಮಿ ಹರೀಶ್, ಟ್ರಾನ್ಸ್​ ಮ್ಯಾನ್

(ಅಲೆ – 8)

ನನಗೆ 8 ವರ್ಷ ಇದ್ದಾಗ ನನ್ನ ಸಂಬಂಧಿಕರು 3 ಜನ ಬೇರೆ ಬೇರೆ ಸಮಯಗಳಲ್ಲಿ ನನಗೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ. ಇದನ್ನ ಬರೆಯುವಾಗಲೂ ನನ್ನ ಮೈ ನಡಗುತ್ತಿದೆ. ಬೆಳಿತಾ ಬೆಳೀತಾ… ಅವರು ಇವರು ಅಂತ ಸುಮಾರ ಸರ್ತಿ ಇಂತಹ ಅನುಭವಗಳು ಆಗಿವೆ. ಆದ್ರೆ ಯಾವಾಗ ಅನುಭವಿಸಿದ್ರೂ ಅದು ಮಾಮೂಲು ಅನ್ನಿಸಲಿಲ್ಲ. ಪ್ರತಿಯೊಂದು ಇನ್ಸಿಡೆಂಟ್​ ಜೀವನವನ್ನೇ ಒಮ್ಮೊಮ್ಮೆ ಫ್ರೀಜ಼್ ಮಾಡಿದೆ. ಮನಸ್ಸಿನ ಸಮಸ್ಯೆ ಏನೆಂದರೆ, ಅದನ್ನೆಲ್ಲ… ಆಯ್ತು ಹೋಗ್ಲಿ ಅಂತ ಹೇಗೋ ಎದುರಿಸಿ, ಮಾತಾಡಿ, ನನ್‌ ಸಿಸ್ಟಂನಿಂದ ಹೊರ ಹಾಕಿದ್ದೀನಿ ಅಂದ್ಕೊಂಡ್ರೂ ಹಬ್ಬಗಳ ಥರ ಮತ್ತೆ ಮತ್ತೆ ಆಗಾಗ ಕಾಡ್ತಾವೆ. ಇಂತಹ ಸಮಯದಲ್ಲಿ ಮೆಮೊರಿ ಲಾಸ್‌ ಬಹಳ ಇಂಪಾರ್ಟೆಂಟ್.

ಇತ್ತೀಚೆಗೆ ನಾನು ಈ ಥರದ ಒಂದು ಸಮಸ್ಯೆ ಅನುಭವಿಸ್ತಾ ಇದ್ದೀನಿ. ಸುಮಾರು 8 ತಿಂಗಳಾಯ್ತು ನಾನು ಸರಿಯಾಗಿ ನಿದ್ದೆ ಮಾಡಿ. ಕಣ್‌ ಮುಚ್ಚಿದ್ರೆ 50-60 ಹೆಣಗಳು ಒಟ್ಟಿಗೇ ಸುಡ್ತಾ ಇರೋದು ಕಾಣುತ್ತೆ, ಒಂದು ವಿಚಿತ್ರ ಸ್ಮೆಲ್ ನನ್ನ ಹಿಂದೆ ನಿಂತೇ ಇರುತ್ತೆ. ಕೊವಿಡ್ ಸುಡುಗಾಡಿನಲ್ಲೂ ಜಾತಿ ನಡತೆ, ಸೂತಕದಲ್ಲೂ ಜಾತಿ ಕೊಬ್ಬು ಮಕಕ್ಕೆ ರಾಚತ್ತೆ. ಥೋ… ನಾನಿಂತಾ ಶೋಶಣೆ ಮಾಡುವ ಜಾತಿಯಲ್ಲಿ ಹುಟ್ಟಿದೆ ಎನ್ನುವ ಮಾನ್ಸ್‌ಟರ್‌ ಹೆಗಲಲ್ಲಿ ತೀವ್ರ ನೋವು ಕೊಡುತ್ತೆ. ಇಂತಾ ಕಡೆ ಮೆಮೊರಿ ಲಾಸ್‌ ಅಲ್ಲ ಆ ಮೆಮೊರಿ ಏನಾದರೂ ಮುಂದೆ ನಡೆಯುವ ಪ್ರಯತ್ನ ಆಗಬೇಕು ಅನ್ಸುತ್ತೆ.

ಏನಿದು ಈಸರ್ತಿ ಹೀಗೆ ಬರೀತಿದ್ದೀನಿ ಅನ್ನಿಸ್ತಿದ್ಯ? ಇತ್ತೀಚೆಗೆ ಈ ಬರೀತಿರೋದ್ರಿಂದನೋ ಏನೋ ನೆನಪುಗಳು ಒಮ್ಮೊಮ್ಮೆ ತುಂಬಾ ಸತಾಯ್ಸುತ್ತೆ. ನೆನಪುಗಳು ಒಮ್ಮೊಮ್ಮೆ ದುಗುಡವನ್ನ ಹೆಚ್ಚು ಮಾಡುತ್ವೆ. ಕಹಿನೆನಪು ಅಂತಾರೆ ಸವಿ ನೆನಪು ಅಂತಾರೆ ಯಾವ ನೆನಪಾದರೂ ಕೆಲವೊಮ್ಮೆ ಮರೆಯಲೇಬೇಕು ಎಂಬ ಹಂಬಲ ಬರುತ್ತೆ. ಆ ಟೈಮಲ್ಲಿ ಮರೆಯಕ್ಕೆ ಆಗಲ್ಲ ಅಂದ್ರೆ ಆ ಹಿಂಸೆ ಇದೆಯಲ್ಲ ಅದಕ್ಕಿಂತ ಬೇರೆ ಇಲ್ಲ. ಈ ಸವಿ ಕಹಿಯೆಲ್ಲಾ ಒಂದೇ ಕಲರಿನ ಬೇರೆ ಬೇರೆ ಶೇಡ್ಸ್ ಅನ್ಸುತ್ತೆ.

ಕಾಜಲ್‌ ನನ್ನ ಗೆಳತಿ, ಅವಳು ಟ್ರಾನ್ಸ್‌ ಹೆಂಗಸು, ಅವ್ಳು ಒಮ್ಮೆ ನಮಗೆಲ್ಲಾ ಸಂಬಳ ಇಲ್ಲದೇ ಮೂರ್‌ ತಿಂಗಳಾಗಿತ್ತು ನಂ ಸಂಸ್ತೆಲಿ. ಒಂದು ಚಾಯ್‌ ಕುಡಿಯಕ್ಕೂ ದುಡ್ಡಿಲ್ಲದೆ ಸಿಗರೇಟಿಗೆ ಬದಲು ಬೀಡಿ ಅದೂ ನಾವು ಮೂರ್‌ ಜನ ಹಂಚ್‌ಕೊಂಡು ಹೀಗಿರೋ ಪರಿಸ್ತಿತಿಲಿ ಇವ್ಳು ಸ್ಟೈಲಾಗಿ ಆಫೀಸ್‌ಗೆ ಬಂದ್ಲು, ಇವತ್ತು ಬೀಯರ್‌ ಕೊಡಸ್ತೀನಿ ಅಂತ ಹೇಳಿ ಹೋದವ್ಳು ಒಂದ್‌ ಗಂಟೆಲಿ ಕೈನಲ್ಲಿ 2000 ರೂಪಾಯಿಗಳನ್ನ ಫ್ಯಾನ್‌ ತರ ಬೀಸ್ಕೊಂಡ್‌ ಬಂದ್ಲು. ಕೇಳಿದ್ದಕ್ಕೆ ಹೇಳಿದ್ಲು “ಒಬ್ಬ ಗಿರಾಕಿ ಸಿಕ್ದ. ನಾನು ಹಿಜ್ರ ಅಂತ ಗೊತ್ತಾಗೋ ತನಕ ಏನೆಲ್ಲಾ ಮಾಡಿ ಗೊತ್ತಾದ್ ಮೇಲೆ ಪೊಲೀಸ್‌ಗೆ ಹಿಡಕೊಡ್ತೀನಿ ಅಂತ ಹೆದ್ರಸಕ್ಕೆ ಶುರು ಮಾಡ್ದ. ಅದಕ್ಕೆ ನಾನೇ ಪೊಲೀಸ್​ನ ಕರೆದು ನೋಡಿ ಸಾರ್‌ ಇವ್ನು ನನ್‌ ಬಾಯ್‌ ಫ್ರೆಂಡು, ಇಲ್ಲೆ ಸೆಕ್ಸ್‌ ಬೇಕಂತೆ ನನ್ನ ಪ್ರಾಸ್ಟಿಟ್ಯೂಟ್ ಪ್ರಾಸ್ಟಿಟ್ಯೂಟ್ ಅಂತ ಕರೀತಾ ಇದಾನೆ. ಅದಕ್ಕೆ ಆ ಪೊಲೀಸ್‌ ಚೆನ್ನಾಗಿ ಅವನ್ನ ಬೈದು ಆ ಕಡೆ ಹೋದ್‌ ತಕ್ಶಣ ನಾನು ಇವನ ಹತ್ರ ಹೇಳ್ದೆ ಜೋರಾಗಿ ಚಪ್ಪಾಳೆ ತಟ್ತೀನಿ ಮಾಡಿದಕ್ಕೆಲ್ಲಾ ದುಡ್‌ ಕೊಡು ಅಂತ ಕೂಗ್ದೆ. ಅದಕ್ಕವನು ಹೆದ್ರುಕೊಂಡು ಇಶ್ಟು ಕೊಟ್ಟ. ಅದನ್‌ ತಗೊಂಡ್‌ ನಿಮ್ಗೆ ಬಿಯರ್‌ ಕೊಡ್ಸೋಣ ಅಂತ ಬಂದೆ”. ಆವಾಗ ನಾವು ಬಿದ್‌ ಬಿದ್ದೂ ನಕ್ಕಿದ್ವಿ. ಈಗ ನೆನೆಸ್ಕೊಂಡ್ರೆ, ಅವಳು ತೀರ್‌ಕೊಂಡ್‌ ನಂತ್ರ ಆ ರೀತಿಯಾದ ಗೆಳತಿ ಮತ್ತೆ ಸಿಕ್ಕಿಲ್ಲ. ಕನಸಿನಲ್ಲಿ ಬರ್‌ತಾಳೆ. ಸೆಕ್ಸಿ ಡಾನ್ಸ್‌ ಮಾಡ್ತಾಳೆ ಆದ್ರೆ ಏನ್‌ ಮಾತಾಡಿದ್ರೂ ರೆಸ್ಪಾಂಡ್‌ ಮಾಡಲ್ಲ. ಅಂತಾ ಸಮಯದಲ್ಲಿ ಬೆಚ್ಚಿಬಿದ್ದು ಏಳ್ತೀನಿ.

ನಾನು 16ನೇ ವಯಸ್ಸಿನಲ್ಲಿ ಒಂದು ಟಿವಿಎಸ್‌ ಚ್ಯಾಂಪ್‌ ತೆಗೊಂಡು ಓಡ್ಸಕ್ಕೆ ಶುರು ಮಾಡ್ದೆ, ಮೇಶ್ಟ್ರ ಮನೆಗೆ ಹೋಗಕ್ಕೆ ಮತ್ತೆ ಮೇಶ್ಟ್ರನ್ನ ಊರ್‌ ಸುತ್ತಾಡ್ಸಕ್ಕೆ, ಸೊಪ್ಪು ತರೋಕ್ಕೇ ಎಲ್ಲಾ. ಅದನ್ನ ನೋಡಿ ನಂ ಕಂಕು (ಕನಕ ಮೂರತಿ, ಶಿಲ್ಪಿ) ತಕ್ಶಣ ನಂಗೂ ಬೇಕು, ನಾನೂ ಓಡಸ್ತೀನಿ ಅಂತು. ಆವಾಗ ಅದಕ್ಕೆ 46 ವಯಸ್ಸು. ಸರಿ, ಸೈಕಲ್‌ ಕಲಿ ಅಂದೆ, ನಂಗೆ ಸೈಕಲ್‌ ಬರುತ್ತೆ ಬ್ಯಾಲೆನ್ಸ್‌ ಇದೆ ಗಾಡಿ ಕಲ್ಸು ಅಂತು. ಸರಿ ಹೇಳ್ಕೊಟ್ಟೆ. “ಓ ಗಾಡಿ ಹಾಕ್ಕೊಂಡ್‌ ಊರ್‌ ಸುತ್ತೋದೇನು” ಅಂತ ಮಾಮ (ಶಿಲ್ಪಿ ವಾದಿರಾಜ್‌ ಕಂಕು ಗುರು), ಅವರು ರೇಗ್ಸೋವ್ರು. ಕಂಕು ಹಿಂದೆ ಡಾ. ಗಂಗೂಬಾಯಿ ಹಾನಗಲ್‌ ಕೂಡ ಗಾಡಿಯಲ್ಲಿ ಕೂತಿದ್ದಾರೆ. ಇತ್ತೀಚೆಗೆ ಯಾರ್‌ ಹತ್ರನೋ ಅದನ್ನು ಶೇರ್‌ ಮಾಡ್ತಾ ಇದ್ದೆ. ಕನಸಿನಲ್ಲಿ ಕಂಕು ಗಾಡಿ ಓಡ್ಸಕೊಂಡು ಹಾಗೇ ಹಾರಿ ಆಕಾಶದಲ್ಲಿ ಗಾಡಿ ಓಡ್ಸತಾ ಹೋಗತಿರೋದು ನೋಡ್ದೆ. ಆವತ್ತು ಕಂಕು ತೀರ್‌ಕೊಂಡ್‌ ಅದರ್‌ದು ಬಾಡಿ ಸುಡಕ್ಕೆ ಕಾಯತಿರುವಾಗ, ನಮ್‌ ಪಕ್ಕದ್‌ ಬಾಡಿಯ ಜನ ಕೂಗಾಡ್ತಾ ಇದ್ರು. ಏನಕ್ಕೆ ಗೊತ್ತಾ? ಕಾರ್ಯ ಮಾಡಕ್ಕೆ ಬೇಕಾದ ಪರಿಕರಗಳಿಲ್ಲಾ ಅಂತ. ಅವ್ರು ತಗೊಂಡ್‌ ಬಂದಿಲ್ಲ, ಆವಾಗ ಅಲ್ಲಿ ಇದ್ದ ಒಬ್ಬ ಹುಡ್ಗ ಅಂದ್ರೆ ಕ್ರಿಮೇಶನ್‌ ವರ್ಕರ್ನ ಓಡ್ಸಿ ತರಿಸಿದ್ರು. ಅವನು ತಂದಿಟ್ಟ.  ಆಮೇಲೆ ಆ ಹುಡ್ಗನ್ನ ರೇಗ್ಕೊಂಡು ಅದಕ್ಕೆ ನೀರು ಚುಮುಕಿಸಿ ಶುದ್ದ ಮಾಡಿದ್ರು. ಕಂಕು ಏನಾದ್ರೂ ಜೀವಂತವಾಗಿದ್ದು ಇದನ್ನ ನೋಡಿದ್ರೆ ತಟ್ಬಿಟ್ಟಿರೋಳು, ನಂಗೆ ಆ ಪಿಪಿಟಿ ಕಿಟ್​ನಲ್ಲಿ ಉಸಿರಾಡಕ್ಕೆ ಆಗ್ದೆ ಆಯ್ತು. ಈಗಲೂ ರಾತ್ರಿ ಉಸಿರು ಕಟ್ಟಿ ಅಮ್ಮಾ ಅಂತ ಕೂಕ್ಕೊಂಡು ಏಳ್ತೀನಿ.

ಆ ಕೊವಿಡ್ ಕ್ರಿಮೇಶನ್‌ ಗ್ರೌಂಡ್‌ ಅಮಾನುಶ ಜಾತಿ ದೌರ್ಜನ್ಯದ ಒಂದು ಜೀವಂತ ರೂಪ. ಒಂದ್‌ ಕಡೆ ಕೊವಿಡ್  ಸಾವು ಜನರನ್ನ ಸಾಯಿಸುತ್ತಿದ್ದರೂ ಜನರ ಜಾತಿ ದೌರ್ಜನ್ಯವನ್ನ ಮಾತ್ರ ಸಾಯಿಸಲಿಕ್ಕೆ ಆಗಿಲ್ಲ. ಒಂದ್‌ ಕಡೆ ಬಿಬಿಎಮ್‌ಪಿ ಪ್ರೊಟೊಕಾಲ್‌ ಮತ್ತೆ ನಿಯಮಾವಳಿಗಳಿಗೆ ಸರಕಾರದ ಎಲ್ಲಾ ಎಚ್ಚರಿಕೆ ವಹಿಸಿ ಮಾಡಿದರೆ (ಎಶ್ಟರ ಮಟ್ಟಿಗೆ ಅನ್ನೋದು ಬೇರೆ ಪ್ರಶ್ನೆ) ಆ ಫ್ರಂಟ್‌ ಲೈನ್‌ ವರ್ಕರ್ಸ್ ಎಲ್ಲಾ‌ ತಳ ಸಮುದಾಯಗಳ ಜನ, ಸಂಬಳ  ಆಮೇಲೆ ಕೊಡ್ತೀವಿ ಈಗ ಕೆಲಸ ಮಾಡಿ ಅಂತ ಬರವಸೆ, ಅವರಿಗೆ ಊಟ ಕೂಡ ಚಾರಿಟಿಯ ವ್ಯವಸ್ತೆ. ಪಕ್ಕದ ಕೇರಳದಲ್ಲಿ ಶೈಲಜ ಟೀಚರ್‌ ಮಾಡಿದ ವ್ಯವಸ್ತೆ ಕೆಲಸಗಾರರ ಗನತೆಯನ್ನು ಕಾಪಾಡಿಕೊಂಡೇ ಮಾಡಿದ್ದಾರೆ ಎಂದು ನಂ ಸ್ನೇಹಿತರು ಹೇಳ್ತಿದ್ರು.

ಇದೊಂದು ಎಮೊಶನಲ್‌ ಟ್ರಿಪ್‌ ಅಂತ ತಿಳಿಬೇಡಿ. ಇದು ಮುಂದುವರೆಯುವ ಕೆಲಸ. ಎಲ್ಲರ ಜವಾಬ್ದಾರಿ. ಫ್ರಂಟ್‌ಲೈನ್‌ ಕೆಲಸಗಾರರು ಅದೂ ತಳ ಸಮುದಾಯಗಾಳ ಜನರು ಇಂತಹ ಮಹತ್ತರ ಕೆಲಸ ಇಶ್ಟು ರಿಸ್ಕ್‌ ತಗೊಂಡು ಮಾಡುವಾಗ ಅವರ ರೆಸ್ಪಾನ್ಸಿಬಿಲಿಟಿ ಚಾರಿಟಿಯದು ಅಲ್ಲ. ಅದು ನಮ್ಮೆಲ್ಲರ, ಸರಕಾರದ ರೆಸ್ಪಾನ್ಸಿಬಿಲಿಟಿ.

(ಮುಂದಿನ ಅಲೆ : 1.2.2022)

(ವಿ.ಸೂ : ಲೇಖಕರ ಆಶಯದಂತೆ ಅವರ ಭಾಷಾಭಿವ್ಯಕ್ತಿಯ ವಿಧಾನವನ್ನು ಅವರಿಚ್ಛೆಯಂತೆಯೇ ಪ್ರಕಟಿಸಲಾಗುವುದು. ಈ ಅಂಕಣದ ಬಗ್ಗೆ ನಿಮ್ಮ ಅಭಿಪ್ರಾಯ, ಆಶಯ, ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com

ಹಿಂದಿನ ಅಲೆ : Transgender World : ‘ನೀವು ಹೋಮೊ ಸೆಕ್ಷುವಲ್‌ ಆಗಿದ್ದು ನಾರ್ಮಲ್‌ ಆಗಿ ಇರುವವರ ಜೊತೆ ಟೀ ಕುಡಿದಾಗ ಏನು ಅನ್ನಿಸುತ್ತದೆ?’

Published On - 10:08 am, Tue, 18 January 22