Literature : ಅಭಿಜ್ಞಾನ ; ಸತ್ತ ಭಾಷಾ ಸಂಪತ್ತು ಹುಡುಕುವವರೇ ಇಂದು ಜೀವಂತವಾಗಿರುವ ಭಾಷೆಗಳ ಕತ್ತು ಹಿಚುಕುತ್ತಿದ್ದಾರೆ

Krishna Chander‘s Story : ಅಗೆಯುವಲ್ಲಿ ಯಶಸ್ಸು, ಅಪಯಶಸ್ಸು ಎರಡೂ ಇರುತ್ತದೆ. ಭೂಮಿ ಅಗೆಯುವುದರಿಂದ ಅದು ತನ್ನೆಲ್ಲ ಭಂಡಾರವನ್ನು ಹೊರಹಾಕುತ್ತದೆ. ಆದರೆ ಮನುಷ್ಯ ಯಾವಾಗಲೂ ತನ್ನ ಬಯಕೆಗಳನ್ನು ಅದರಲ್ಲಿ ಕಾಣಬಯಸುತ್ತಾನೆ, ಹುಡುಕಬಯಸುತ್ತಾನೆ. ಹೀಗೆ ಮಾಡಿ ಆತ ಯಶಸ್ವಿಯಾಗುತ್ತಾನೆ. ಆದರೆ...

Literature : ಅಭಿಜ್ಞಾನ ; ಸತ್ತ ಭಾಷಾ ಸಂಪತ್ತು ಹುಡುಕುವವರೇ ಇಂದು ಜೀವಂತವಾಗಿರುವ ಭಾಷೆಗಳ ಕತ್ತು ಹಿಚುಕುತ್ತಿದ್ದಾರೆ
ಉರ್ದು, ಹಿಂದೀ ಲೇಖಕ ಕೃಷ್ಣ ಚಂದರ
Follow us
ಶ್ರೀದೇವಿ ಕಳಸದ
|

Updated on: Jan 23, 2022 | 3:27 PM

Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ :  tv9kannadadigital@gmail.com

*

ಉರ್ದು ಮತ್ತು ಹಿಂದೀ ಲೇಖಕ ಕೃಷ್ಣ ಚಂದರ ಅವರ ಕಥೆ ‘ಮೊಹೆಂಜೋದಾರೋದ ಭಂಡಾರ’ ವನ್ನು ಲೇಖಕ ಅನುವಾದಕ, ಡಾ. ಪಂಚಾಕ್ಷರಿ ಹಿರೇಮಠ ಅನುವಾದಿಸಿದ್ದಾರೆ. ಆಯ್ದ ಭಾಗ ಓದಿಗೆ.

*

ಮೊಹೆಂಜೋದಾರೋದ ಎಲ್ಲ ದಿನ್ನೆಗಳನ್ನು ಉತ್ಖನನ ಮಾಡಲಾಗಿತ್ತು; ಒಂದನ್ನು ಮಾತ್ರ ಉಳಿದು, ಮೊಹೆಂಜೋದಾರೋದ ಎಲ್ಲ ಕಡೆ, ಭೂಮಿಯನ್ನು ಅಗೆ ಅಗೆದು ಮನುಷ್ಯನ ಕೈಗಳು ಐದು ಸಾವಿರ ವರುಷಗಳಷ್ಟು ಪ್ರಾಚೀನವಾದ ಸಂಸ್ಕೃತಿಯ ಎಲ್ಲ ಸಂಪತ್ತನ್ನು ಕೂಡಿಹಾಕಿಕೊಂಡಿದ್ದವು.

ಎನಿತೆನಿತು ಧರ್ಮಶಾಲೆಗಳು, ಪಾಠಶಾಲೆಗಳು, ಆಟಿಗೆ ಸಾಮಾನುಗಳು, ಮನೆ – ಮಠಗಳ ಅವಶೇಷಗಳು, ಬೀಸುವ ಕಲ್ಲುಗಳು, ಆನೆ, ಒಂಟೆಗಳನ್ನು ಕಟ್ಟುವ ಸ್ಥಳಗಳು, ಸಂಗ್ರಹಾಲಯಗಳು, ಮಣ್ಣಿನ ಗಡಿಗೆಗಳು, ಹೆಣ ಸುಡುವ, ಹುಗಿವ ಸಾಧನಗಳು, ಅಳತೆಯ ಕಲ್ಲು . ಅಳೆಯುವ ಸೇರು, ಪಾವುಗಳು, ಅಗೆಯುವವರು ಎಲ್ಲ ಅಗೆದು ತೆಗೆದಿದ್ದರು. ಆದರೆ ಯಾವುದನ್ನು ಅವರು ಬಯಸುತ್ತಿದ್ದರೋ ಅದು ಅವರಿಗೆ ಸಿಗಲಿಲ್ಲ.

ಅಗೆಯುವಲ್ಲಿ ಯಶಸ್ಸು ಹಾಗೂ ಅಪಯಶಸ್ಸು ಎರಡೂ ಇರುತ್ತದೆ. ಭೂಮಿ ಅಗೆಯುವುದರಿಂದ ಅದು ತನ್ನೆಲ್ಲ ಭಂಡಾರವನ್ನು ಹೊರಹಾಕುತ್ತದೆ. ಆದರೆ ಮನುಷ್ಯ ಯಾವಾಗಲೂ ತನ್ನ ಬಯಕೆಗಳನ್ನು ಅದರಲ್ಲಿ ಕಾಣಬಯಸುತ್ತಾನೆ, ಹುಡುಕಬಯಸುತ್ತಾನೆ. ಹೀಗೆ ಮಾಡಿ ಆತ ಯಶಸ್ವಿಯಾಗುತ್ತಾನೆ. ತಾನು ಬಯಸಿದ್ದು ಸಿಗಲಿಲ್ಲವೆಂದು ಭೂಮಿಯನ್ನು ಹಳಿಯುತ್ತಾನೆ. ಇದರಲ್ಲಿ ಭೂಮಿಯದೇನು ತಪ್ಪು? ಹಾಗೆ ನೋಡಿದರೆ ಭೂಮಿ ಮನುಷ್ಯನ ಪ್ರತಿಯೊಂದು ಬಯಕೆಯನ್ನು ಪೂರ್ಣಗೊಳಿಸಿದೆ; ಆದರೆ ಅದು ತನ್ನದೇ ರೀತಿಯಲ್ಲಿ. ಕಾರಣ ಭೂಮಿ ಅಪಾರವಾಗಿ ಪ್ರೀತಿಸುವ ಪ್ರೇಯಸಿ. ಆಕೆಯನ್ನು ಬಹಳಷ್ಟು ಜನ ಕೇವಲ ಮಣ್ಣೆಂದು ಭಾವಿಸಿದ್ದಾರೆ. ಹೀಗೆ ಭಾವಿಸಿ ಅವರು ತಮ್ಮ ಆಶೋತ್ತರಗಳನ್ನು ಮಣ್ಣುಪಾಲು ಮಾಡಿಕೊಳ್ಳುತ್ತಾರೆ.

ಇಂಜಿನಿಯರರ ಹಾಗೂ ಪ್ರಾಚ್ಯ ವಸ್ತು ಶಾಸ್ತ್ರಜ್ಞರ ಸಮ್ಮೇಳನ ನಡೆದಿತ್ತು. ಅದರಲ್ಲಿ ಬೋಳುತಲೆಯ ಯುರೋಪಿಯನ್ ವಿದ್ವಾಂಸನಿದ್ದ. ಆತನ ಹೆಸರು ಡೇವಿಡ್. ಇನ್ನೋರ್ವ ಗೋಧಿಬಣ್ಣದ ತೆಳ್ಳಗಿನ ಮುಸಲ್ಮಾನನಿದ್ದ. ಆತನ ಹೆಸರು ಅತಹರ್‌. ಆತನಿಗೆ ಮಣ್ಣಿನ ಹೆಂಟೆಗಳನ್ನು ಕಲೆಹಾಕುವ ಹುಚ್ಚು, ಯಾವುದೋ ಅವಶೇಷಗಳ ಉತ್ಕನನ ನಡೆದ ಕಾಲದಲ್ಲಿ ಯಾವುದಾದರೂ ಲಿಪಿ ಇರುವ ಇಟ್ಟಿಗೆ ಒಡೆದರೆ ಸಾಕು ಆತ ತನ್ನ ಎದೆಯೇ ಸೀಳಿತೆನ್ನುವ ಹಾಗೆ ಯಾತನೆ ಅನುಭವಿಸುತ್ತಿದ್ದ. ಮೂರನೆಯವ ಬಂಗಾಲದ ಹಿಂದೂ ಮುಜುಮ್ದಾರ. ಅಷ್ಟು ಎತ್ತರವಲ್ಲದ ನಿಲುವುಳ್ಳ ಸಾದುಗಪ್ಪಿನ ವ್ಯಕ್ತಿ, ಜ್ಞಾನದ ಸಾಗರವನ್ನೇ ತನ್ನ ತಲೆಯಲ್ಲಿ ತುಂಬಿಕೊಂಡ ಮನುಷ್ಯನೀತ. ಈಜಿಪ್ತದ ಕೊನೆಯ ಉತ್ಕನನ ಈತನ ಎದುರಿನಲ್ಲಿಯೇ ನಡೆದಿತ್ತು. ಫರಾತದ ಕೊಳ್ಳದಲ್ಲಿ ಈಜಿಪ್ತದ ಮಹಾರಾಣಿಯ ಮೂರ್ತಿಯನ್ನು ಈತನೇ ಕಂಡುಹಿಡಿದಿದ್ದ. ನಾಲ್ಕನೆಯವ ನಾನಿದ್ದೆ. ಪ್ರಾಚೀನ ಹಾಗೂ ಅರ್ವಾಚೀನದ ಕಾವಲುಗಾರ.

ಮುಜುಮ್ದಾರ ಹೇಳಿದ “ಈಗ ಕೇವಲ ಕೊನೆಯ ದಿನ್ನೆ ಮಾತ್ರ ಉಳಿದಿದೆ. ಆದರೆ ಇಷ್ಟು ದೊಡ್ಡ ನಗರದ ಭಂಡಾರ ಎಲ್ಲಿದೆ ? ಅದಕ್ಕೆ ಏನಾಯ್ತು? ಎನ್ನುವುದೇ ತಿಳಿಯುತ್ತಿಲ್ಲವಲ್ಲ. ಹೆಂಗಸರ ಒಡವೆಗಳು ಅಲ್ಲಲ್ಲಿ ಸಿಕ್ಕಿವೆ. ಆದರೆ ಅವೆಲ್ಲ ಸಾಮಾನ್ಯವಾದವುಗಳು. ಹಾಂ! ಕೆಲವಕ್ಕೆ ವಜ್ರ, ವೈಡೂರ್ಯಗಳನ್ನು ಕೆತ್ತಲಾಗಿದೆ. ಅವು ಕೂಡ ಅಂಥ ಶ್ರೇಷ್ಠವಾದವುಗಳಲ್ಲ. ಆದರೆ ಇವುಗಳಿಂದ ಇಷ್ಟು ಮಾತ್ರ ಗೊತ್ತಾಗುತ್ತದೆ – ಆ ಕಾಲದಲ್ಲಿ ಚಿನ್ನ, ವಜ್ರ ವೈಡೂರ್ಯಗಳ ಬಳಕೆಯಾಗುತ್ತಿತ್ತು ಎಂಬುದು. ಆದರೆ ಇಷ್ಟು ದೊಡ್ಡ ಪಟ್ಟಣದ ಭಂಡಾರ ಎಲ್ಲಿ ಹೋಯಿತು?”

ಆಗ ನಾನು ಹೇಳಿದೆ – ‘‘ಆ ಕಾಲದಲ್ಲೂ ಯಾವನೋ ನಾದಿರ್‌ಶಾಹ ಇರಬಹುದು. ಅವನು ಈ ಪಟ್ಟಣದ ಭಂಡಾರವನ್ನು ಲೂಟಿ ಮಾಡಿರಬಹುದು.” ಆದರೆ ಅವರಾರೂ ನನ್ನ ಮಾತಿನ ಬಗ್ಗೆ ಕಾಳಜಿವಹಿಸಲಿಲ್ಲ. ಅತಹರ್‌ ಹೇಳಿದ “ಎಣಿಕೆಗೆ ಸಿಗಲಾರದಷ್ಟು ಸಂಪತ್ತು – ಭಂಡಾರ ಹೊಂದಿದ್ದು ಮೊಹೆಂಜೋದಾರೋ ಉತ್ಖನನದಲ್ಲಿ ಅದು ಸಿಗಲಿಲ್ಲ. ಅದು ಸಿಗದಿದ್ದರಿಂದ ನಮ್ಮ ನಾಗರಿಕತೆ ಜಗತ್ತಿನಲ್ಲಿಯೇ ಪ್ರಾಚೀನ ನಾಗರಿಕತೆ ಎಂದು ಹೇಳಿಕೊಳ್ಳುವ ಅವಕಾಶ ಕಳೆದುಕೊಳ್ಳುವಂತಾಗಿದೆ. ” – .

ನಾನು ಹೇಳಿದೆ ”ಸತ್ತ ಭಾಷಾ ಸಂಪತ್ತು ಹುಡುಕುವವರೇ ಇಂದು ನಿಮ್ಮೆದುರಿಗೇ ಜೀವಂತವಾಗಿರುವ ಭಾಷೆಗಳ ಕತ್ತು ಹಿಚುಕುತ್ತಿದ್ದಾರೆ. ಕೊಲೆ ಮಾಡುತ್ತಿದ್ದಾರೆ. ಅವುಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ?”

Abhijnana excerpt of Krishna Chander‘s Story Mohenjodaro Bhandara Translated by Dr Panchakshari Hiremat Published by Navakarnataka

ಲೇಖಕ, ಅನುವಾದಕ ಡಾ. ಪಂಚಾಕ್ಷರಿ ಹಿರೇಮಠ

ಈ ನನ್ನ ಮಾತಿಗೆ ಅತಹರ್‌, ನನ್ನ ಮಾತೇ ಕೇಳಲಿಲ್ಲವೇನೋ ಎನ್ನುವ ಹಾಗೆ ತನ್ನ ಭುಜ ಅಲುಗಾಡಿಸಿದ. ಡೇವಿಡ್ ಹೇಳಿದ ‘ಭಂಡಾರ ಸಿಗಲಿಲ್ಲವೆನ್ನುವ ಬಗ್ಗೆ ನನಗೆ ಚಿಂತೆಯಿಲ್ಲ , ಸಿಕ್ಕರೂ ನಾವೇನು ಅದನ್ನು ನಮ್ಮ ಮನೆಗೆ ಒಯ್ಯಲಿದ್ದೇವೇನು? ಭಾಷೆಯ ಕೀಲಿಕೈ ಕೂಡ ಸಿಗುತ್ತಿಲ್ಲ. ಹೋಗಲಿ ಅದೂ ಸಿಗದಿದ್ದರೆ ಸಿಗದಿರಲಿ, ಈ ಭಾಷೆಯಾದರೂ ಈ ಕಾಲದಲ್ಲಿ ಯಾವ ಕೆಲಸಕ್ಕೆ ಬರುತ್ತದೆ ? ಆದರೆ ನನಗೆ ಒಂದು ಮಾತು ಅರ್ಥವಾಗುತ್ತಿಲ್ಲ – ನಾವು ಮೊಹೆಂಜೋದಾರೋದ ಎಲ್ಲ ದಿನ್ನೆಗಳನ್ನು ಅಗೆದು ನೋಡಿದೆವು. ಅಷ್ಟೇ ಅಲ್ಲ ಇಡೀ ನಗರದ ತಳಪಾಯ ಸಹ ಅಗೆದು ನೋಡಿದೆವು. ಆದರೂ ಈವರೆಗೂ ನಮಗೆ ಆ ಮಣ್ಣಿನ ಭಂಡಾರ ಸಿಗಲಿಲ್ಲ. ಯಾವುದನ್ನು ಮೊಹೆಂಜೋದಾರೋ ಜನಾಂಗ ಪೂಜಿಸುತ್ತಿತ್ತೋ – ಆ ಭಂಡಾರ ದೊರೆಯಲಿಲ್ಲ. ಪ್ರತಿಯೊಂದು ಸಂಸ್ಕೃತಿಗೆ ಯಾವುದಾದರೊಂದು ದೇವದೇವತೆಗಳ ಕಲ್ಪನೆ ಅವಶ್ಯ ಇದ್ದೇ ಇರುತ್ತದೆ. ಮೊಹೆಂಜೋದಾರೋದ ಜನಾಂಗ ಯಾವ ದೇವರ ಪೂಜೆ ಮಾಡುತ್ತಿತ್ತು – ಈ ರಹಸ್ಯ ನಮ್ಮ ಯಾವುದೇ ಉತ್ಪನನದ ಕಾಲದಲ್ಲಿ ಬಹಿರಂಗಗೊಳ್ಳಲಿಲ್ಲ.’

ಅದಕ್ಕೆ ನಾನು ಹೇಳಿದೆ ”ಬಹುಶಃ ಈ ರಹಸ್ಯ ಅರಿಯಲು ನೀನು ಆ ದಿನ್ನೆಗಳ ಅಗೆಯಬೇಕಾಗಿರಲಿಲ್ಲ. ನಿನ್ನ ಹೃದಯ ಅಗೆದು ನೋಡಬೇಕಾಗಿತ್ತು.”

ಡೇವಿಡ್ ಸಿಟ್ಟಿನಿಂದ ಎದುರಿಗಿರುವ ಗೋಡೆಯತ್ತ ನೋಡಿದ ಹಾಗೂ ಕಿಟಕಿಯ ಮುಖಾಂತರ ಹೊರಗೆ ದೃಷ್ಟಿ ಹಾಯಿಸಿದ. ಹೊರಗೆ ಅರ್ಧಂಬರ್ಧ ಮರಳು ಪ್ರದೇಶದ ಬಯಲಿನಲ್ಲಿ ಓರ್ವ ವೃದ್ಧ ಕುರುಬ ಕುರಿ ಕಾಯುತ್ತಲಿದ್ದ.

ಅದನ್ನು ನೋಡಿದ ಡೇವಿಡ್ ಹೇಳಿದ ‘‘ಒಂದು ದಿನ ಈ ವೃದ್ಧ ಕುರುಬ ಮೊಹೆಂಜೋದಾರೋದ ಬಹು ಅಮೂಲ್ಯ ಸಂಪತ್ತು ಭಂಡಾರ ದೊಡ್ಡ ದಿನ್ನೆಯಲ್ಲಿದೆ ಎಂದು ಹೇಳುತ್ತಿದ್ದ.”

ನಾನು ಕೇಳಿದೆ ‘‘ಈ ದಿನ್ನೆಯಲ್ಲಿ… ಈವರೆಗೂ ಇದನ್ನು ಅಗೆದಿಲ್ಲವೇ?” ನನ್ನೀ ಮಾತಿಗೆ ಯಾರೂ ಉತ್ತರ ನೀಡಲಿಲ್ಲ. ಅವರೆಲ್ಲ ತಮ್ಮ ತಮ್ಮ ಕನಸಿನಲ್ಲಿ ಕಳೆದುಹೋಗಿದ್ದರು.

ಹೇಳಿದ ‘‘ನಾಳೆ ರಾತ್ರಿ ನಾವು ಮೂವರೂ ಕೂಡಿ ಮೊಹೆಂಜೋದಾರೋದ ಕೊನೆಯ ದಿನ್ನೆಯನ್ನು ಆಗಿಯೋಣ. ಅದರಲ್ಲಿ…’’ ಅತಹರ್‌ ಹೇಳಿದ ‘‘ಬಹುಶಃ ಮೊಹೆಂಜೋದಾರೋದ ಭಾಷೆಯ ಕೀಲಿಕೈ ಸಿಗಬಹುದು…” ಡೇವಿಡ್.

ಡೇವಿಡ್ ‘ಬಹುಶಃ ಮೊಹೆಂಜೋದಾರೋದ ದೇವರು ಸಿಗಬಹುದು…. ಹೇಳಿದ.

ರಾತ್ರಿಯ ಮೂರನೆಯ ಪ್ರಹರದಲ್ಲಿ ಅವರು ಮೂವರೂ ಸೇರಿ ಭೂಮಿ ಅಗೆಯತೊಡಗಿದ್ದರು. ಭೂಮಿ ಮರಳು ಮಿಶ್ರಿತವಿತ್ತು : ಬಹಳ ಹೊತ್ತು ಅಗೆದರೂ ಅದರಿಂದ ಯಾವುದೇ ಅವಶೇಷ ಸಿಕ್ಕಿರಲಿಲ್ಲ. ಮಕ್ಕಳ ಒಂದು ಆಟಿಕೆ, ಪುಸ್ತಕದ ಆಕಾರದ ಮಣ್ಣಿನ ಆಕೃತಿ, ಹೆಣ್ಣಿನ ಒಂದು ಆಭರಣ, ಹೆಣ ಹುಗಿವ ಗಡಿಗೆಗಳು… ಇವು ಯಾವವೂ ಇದರಲ್ಲಿ ಸಿಗಲಿಲ್ಲ. ಕೇವಲ ಉಸುಗು… ಉಸುಗು ಮಾತ್ರ ಇತ್ತು. ಡೇವಿಡ್ ರೇಗಿ ಹೇಳಿದ- “ಆ ವೃದ್ಧ ಕುರುಬ ಸುಳ್ಳು ಹೇಳಿರಬೇಕು. ಬರೀ ಬಕ್ವಾಸ್ – ಇರಬೇಕು.’’

ಮುಜುಮ್ದಾರ ಹೇಳಿದ ‘‘ಬೆಲೆಯುಳ್ಳ ವಸ್ತು ಯಾವಾಗಲೂ ಕೊನೆಗೆ ದೊರೆಯುತ್ತದೆ. ಏಕೆಂದರೆ ಬಹುಬೆಲೆಯುಳ್ಳ ವಸ್ತುವನ್ನು ಯಾವಾಗಲೂ ತುಂಬ ಕಾಳಜಿಯಿಂದ, ಸುಲಭವಾಗಿ ದೊರೆಯದಂತೆ ಇರಿಸುವುದು ಮನುಷ್ಯ ಸ್ವಭಾವವೇ ಆಗಿದೆ.’’

“ನಾವೀಗ ದಿನ್ನೆಯ ಕೆಳಭಾಗದವರೆಗೂ ಬಂದಿದ್ದೇವೆ. ಆದರೆ ಈವರೆಗೂ ಉಸುಗಿನ ಹೊರತು ಇದರಲ್ಲಿ ಏನೊಂದೂ ಸಿಗಲಿಲ್ಲ” ಎಂದ ಅತಹರ್ – ತನ್ನ ಹಣೆಯ ಮೇಲಿನ ಬೆವರು ಒರೆಸಿಕೊಳ್ಳುತ್ತ.

ಆಗ ನಾನು ಹೇಳಿದೆ ”ಐದುಸಾವಿರ ವರ್ಷದ ಪುರಾತನವಾದ ಈ ಉಸುಗನ್ನಾದರೂ ನೋಡು. ಇದರ ಪ್ರತಿಯೊಂದು ಕಣಕಣದಲ್ಲಿ ಪುರಾತನ ಸಂಸ್ಕೃತಿಯ ಸುಗಂಧ ಸೂಸುತ್ತಲಿದೆ. ಇದರಿಂದ ಗಾಜಿನ ಬಳೆ ಮಾಡಲ್ಪಟ್ಟಿದ್ದವು. ಅವುಗಳನ್ನು ಮೊಹೆಂಜೋದಾರೋದ ರೂಪವತಿಯರು ತಮ್ಮ ಮೃದುವಾದ ಮುಂಗೈಗಳಲ್ಲಿ ಶೃಂಗರಿಸಿಕೊಂಡಿದ್ದರು ಈ ಉಸುಗಿನಲ್ಲಿ ಮೊಹೆಂಜೋದಾರೋದ ಮಕ್ಕಳು ಉಸುಗಿನ ಮನೆ ಕಟ್ಟಿ ಆಡಿದ್ದರು. ಈ ಉಸುಗಿನಲ್ಲಿ ಇಂದಿನಿಂದ ಐದುಸಾವಿರ ವರ್ಷಗಳ ಪುರಾತನ ಉಸುಗು, ಏನಾದರೂ ಹೇಳುತ್ತದೆನ್ನುವುದುನ್ನು ಕಿವಿಗೊಟ್ಟು ಕೇಳು. ಯಾವ ಯಾವ ಎಂಥೆಂಥ ದೂರು ಇವೆ ಎಂಬುದನ್ನು ಅರಿತುಕೋ…’

ಸೌಜನ್ಯ : ನವಕರ್ನಾಟಕ ಪ್ರಕಾಶನ

ಇದನ್ನೂ ಓದಿ : Literature : ಅಭಿಜ್ಞಾನ ; ಕವಿ ರಾಮಗಣೇಶ ಗಡಕರಿಯವರಿಗೆ ಚಹಾ, ಅಡುಗೆ ಮಾಡಲು ಎರಡನೇ ಹೆಂಡತಿ ಬೇಕಿರಲಿಲ್ಲ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ