ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ; ಇರಾನ್‌ಗೆ ಟ್ರಂಪ್ ಬೆದರಿಕೆ
ಅಮೆರಿಕದ ಜೊತೆ 'ಪರಮಾಣು ಒಪ್ಪಂದ'ಕ್ಕೆ ಸಹಿ ಹಾಕದಿದ್ದರೆ ಇರಾನ್ ಮೇಲೆ 'ಹಿಂದೆಂದೂ ಕಾಣದ ಬಾಂಬ್ ದಾಳಿ' ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕದ ಜೊತೆ ನೇರ ಮಾತುಕತೆಗಳನ್ನು ತಿರಸ್ಕರಿಸಿರುವುದರಿಂದ ಈ ಬೆಳವಣಿಗೆ ಸಂಭವಿಸಿದೆ.

ವಾಷಿಂಗ್ಟನ್, ಮಾರ್ಚ್ 30: ಪರಮಾಣು ಒಪ್ಪಂದಕ್ಕೆ (nuclear deal) ಸಹಿ ಹಾಕದಿದ್ದರೆ ಮತ್ತು ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕದ ಜೊತೆ ಮಾತುಕತೆಗೆ ಒಪ್ಪದಿದ್ದರೆ ಇರಾನ್ ಮೇಲೆ ಬಾಂಬ್ ದಾಳಿ ನಡೆಸುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (donald trump) ಇಂದು ಬೆದರಿಕೆ ಹಾಕಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಯುಎಸ್ ಮತ್ತು ಇರಾನಿನ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ ಎಂದು ದೃಢಪಡಿಸಿದರು.ಈ ಬಗ್ಗೆ ಅಂತಿಮ ಎಚ್ಚರಿಕೆಯ ಸಂದೇಶ ರವಾನಿಸಿದ ಟ್ರಂಪ್, “ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ, ಬಾಂಬ್ ದಾಳಿ ನಡೆಸಬೇಕಾಗುತ್ತದೆ. ಅವರು ಹಿಂದೆಂದೂ ನೋಡಿರದ ರೀತಿಯಲ್ಲಿ ಅವರ ಮೇಲೆ ಬಾಂಬ್ ದಾಳಿ ನಡೆಸುತ್ತೇವೆ.” ಎಂದು ಬೆದರಿಕೆ ಹಾಕಿದ್ದಾರೆ.
ಇರಾನ್ ಮೇಲೆ “ದ್ವಿತೀಯ ಸುಂಕ” ವಿಧಿಸುವುದಾಗಿಯೂ ಅವರು ಎಚ್ಚರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಅವರಿಂದ ಪತ್ರ ಬಂದ ನಂತರ ಇರಾನ್ ಅಮೆರಿಕದೊಂದಿಗೆ ನೇರ ಮಾತುಕತೆ ನಡೆಸಲು ನಿರಾಕರಿಸಿತು. ದೇಶವು ತನ್ನ ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕದೊಂದಿಗೆ ನೇರವಾಗಿ ಮಾತುಕತೆ ನಡೆಸುವುದಿಲ್ಲ ಎಂದು ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಹೇಳಿದರು. ನೇರ ಮಾತುಕತೆಗಳನ್ನು ಇರಾನ್ ತಿರಸ್ಕರಿಸಿದರೂ, ಅಮೆರಿಕದೊಂದಿಗೆ ಪರೋಕ್ಷ ಮಾತುಕತೆಗಳ ಸಾಧ್ಯತೆಯನ್ನು ಅವರು ತಳ್ಳಿಹಾಕಿಲ್ಲ.
ಇದನ್ನೂ ಓದಿ: ರಹಸ್ಯವಾಗಿ ಇರಾನ್ ಸರ್ವೋಚ್ಚ ನಾಯಕನ ಉತ್ತರಾಧಿಕಾರಿ ಆಯ್ಕೆ
ಈ ತಿಂಗಳ ಆರಂಭದಲ್ಲಿ, ಪರಮಾಣು ಒಪ್ಪಂದದ ಕುರಿತು ಮಾತುಕತೆಗಳನ್ನು ಪ್ರಾರಂಭಿಸುವ ಪ್ರಯತ್ನದಲ್ಲಿ ಇರಾನ್‌ಗೆ ಪತ್ರ ಬರೆದಿದ್ದೇನೆ ಎಂದು ಟ್ರಂಪ್ ಘೋಷಿಸಿದರು, ಇರಾನ್ ಮಾತನಾಡಲು ಸಿದ್ಧರಿರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ, ಇರಾನ್ ಈ ಬಗ್ಗೆ ಆಸಕ್ತಿ ತೋರಲಿಲ್ಲ.
ತಮ್ಮ ಮೊದಲ ಅವಧಿಯಲ್ಲಿ, ಡೊನಾಲ್ಡ್ ಟ್ರಂಪ್ ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವಿನ 2018 ರ ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದುಕೊಂಡರು. ಆರ್ಥಿಕ ನಿರ್ಬಂಧಗಳನ್ನು ಸಡಿಲಿಸುವುದಕ್ಕೆ ಪ್ರತಿಯಾಗಿ ಒಪ್ಪಂದವು ಇರಾನ್‌ನ ಪರಮಾಣು ಕಾರ್ಯಕ್ರಮದ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿತ್ತು. ಒಪ್ಪಂದದಿಂದ ಹಿಂದೆ ಸರಿದ ನಂತರ ಟ್ರಂಪ್ ಇರಾನ್ ಮೇಲೆ ತೀವ್ರ ನಿರ್ಬಂಧಗಳನ್ನು ಮತ್ತೆ ಹೇರಿದರು.
ಇದನ್ನೂ ಓದಿ: ಭಾರತ ಉತ್ತಮ ಪ್ರಧಾನಿಯನ್ನು ಪಡೆದಿದೆ, ಮೋದಿ ತುಂಬಾ ಬುದ್ಧಿವಂತ ವ್ಯಕ್ತಿ, ಮತ್ತೊಮ್ಮೆ ಹಾಡಿ ಹೊಗಳಿದ ಡೊನಾಲ್ಡ್ ಟ್ರಂಪ್
ಜನವರಿ 2020ರಲ್ಲಿ ಬಾಗ್ದಾದ್ ಡ್ರೋನ್ ದಾಳಿಯಲ್ಲಿ ಜನರಲ್ ಖಾಸೆಮ್ ಸೊಲೈಮಾನಿ ಹತ್ಯೆಯ ನಂತರ ಅಮೆರಿಕ-ಇರಾನ್ ಸಂಬಂಧಗಳು ಮತ್ತಷ್ಟು ಹದಗೆಟ್ಟವು. ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ, ಟೆಹ್ರಾನ್ ಮೇಲೆ ಗರಿಷ್ಠ ಒತ್ತಡ ಹೇರುವ ಅವರ ನೀತಿ ಜಾರಿಗೆ ಬಂದಿದೆ. ಇದು ಇರಾನ್‌ನ ಕರೆನ್ಸಿ ರಿಯಾಲ್‌ನ ಕುಸಿತಕ್ಕೆ ಕಾರಣವಾಯಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ