Literature : ಅಭಿಜ್ಞಾನ ; ಕವಿ ರಾಮಗಣೇಶ ಗಡಕರಿಯವರಿಗೆ ಚಹಾ, ಅಡುಗೆ ಮಾಡಲು ಎರಡನೇ ಹೆಂಡತಿ ಬೇಕಿರಲಿಲ್ಲ
Marathi Theatre : ಒಬ್ಬನಂತೂ ಕತ್ತೆಮರಿಯ ಟಿಕೇಟ ತೆಗೆದು ಅದನ್ನು ಒಳಗೆ ಕರೆದೊಯ್ಯುವ ಪ್ರಯತ್ನ ಮಾಡಿದ. ಆಗ ಗಡಕರಿಯವರು 'ಮೊದಲು ನಿನ್ನ ಕಿವಿಯ ಉದ್ದಳತೆ ತೆಗೆದುಕೊಳ್ಳುತ್ತೇನೆ. ಅನಂತರ ನಿನಗೆ ಬಾಲವಿದೆಯೋ ಇಲ್ಲವೋ ನೋಡುತ್ತೇನೆ. ಈಗ ನಿನಗಂತೂ ಎರಡೇ ಕಾಲಿದೆ, ಮತ್ತೆರಡು ಕಾಲು ತಂದು ಕೊಟ್ಟು ಹೊರಗೆ ದಬ್ಬುತ್ತೇನೆ' ಎಂದರು.
Abhijnana : ತೇಲಬೇಕೆಂದರೆ ಹಲಗೆಯಷ್ಟು ಹಗೂರವಾಗಬೇಕು. ಹಗೂರವಾಗಬೇಕೆಂದರೆ ಆಳಕ್ಕಿಳಿದಷ್ಟೇ ಆಕಾಶಕ್ಕೂ ಅಭಿಮುಖವಾಗಿ ನಿಲ್ಲುವ ತ್ರಾಣ ದಕ್ಕಿಸಿಕೊಳ್ಳಬೇಕು. ತ್ರಾಣ ಪಡೆದುಕೊಳ್ಳುವುದೆಂದರೆ ಮೊಳಕೆಯಿಂದ ಮರವಾಗುವ ಅವಸ್ಥಾಂತರಗಳಿಗೆ ತೋಳಗಲಿಸುತ್ತಲೇ ಇರಬೇಕು. ಆ ಇರುವಿಕೆಗಾಗಿ ಹೃದಯವನ್ನು ಮೆದುಳನ್ನು ಹಿಗ್ಗಿಸಿಕೊಳ್ಳುತ್ತಲೇ ಇರಬೇಕು. ಆಗಲೇ ಆ ವೈಶಾಲ್ಯ ಸ್ಥಿತಪ್ರಜ್ಞವಾಗಿ ರೂಪುಗೊಳ್ಳುವುದು; ಸಕಾರಣವೋ ಅಕಾರಣವೋ ವೇಗದ ಸುಳಿಗೆ ಸಿಲುಕಿದ ನಮ್ಮ ಬುದ್ಧಿಭಾವ ಆಗಾಗ ತೊಡಕಿಗೆ ಬೀಳುತ್ತಲೇ ಇರುತ್ತದೆ. ಒಂದಲೆ ಉಸಿರು ಒಳಹೊಕ್ಕು ಬರುವ ಹೊತ್ತಿಗೆ ನಡುಗಡ್ಡೆಯಲ್ಲಿ ನಿಂತಂತೆಯೋ ಅಥವಾ ಹರಿವು ಸೆಳೆದುಕೊಂಡಂತೆಯೋ ಭಾಸವಾಗಿಬಿಡುತ್ತದೆ. ಕರುಣಾಳು ದಡ, ಆಗಾಗ ಬರಸೆಳೆದುಕೊಳ್ಳುತ್ತ ಶಕ್ತಿ ನೀಡುತ್ತಿರುತ್ತದೆ. ಆದರೂ ಅನುದಿನವನ್ನೂ ದಾಟಲೇಬೇಕಲ್ಲ? ಹೀಗೆ ಯೋಚಿಸುತ್ತಲೇ ಶುರುವಾಗಿರುವ ಈ ನಿತ್ಯಮಾಲಿಕೆ ‘ಅಭಿಜ್ಞಾನ’. ಇಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ನಾಡು-ನುಡಿ ಮತ್ತು ಜೀವಪರ ಆಲೋಚನೆಗಳಿಗೆ ತೆರೆದುಕೊಂಡ ಮಹನೀಯರುಗಳ ಬದುಕಿನ ಸಂದರ್ಭಗಳು, ಪ್ರಸಂಗಗಳು, ಕಥೆ-ಕಾದಂಬರಿ-ನಾಟಕ- ಪ್ರಬಂಧಗಳ ಆಯ್ದ ಭಾಗಗಳು ಅಪರೂಪದ ವಿಚಾರಧಾರೆಗಳ ಮೂಲಕ ಅನಾವರಣಗೊಳ್ಳುತ್ತವೆ. ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com
*
ಮರಾಠಿ ಲೇಖಕ ಗಂಗಾಧರ ಗಾಡ್ಗೀಳ ಅವರ ‘ಗಂಧರ್ವಯುಗ’ ಚಾರಿತ್ರಿಕ ಕಾದಂಬರಿಯನ್ನು ಚಂದ್ರಕಾಂತ ಪೋಕಳೆ ಅನುವಾದಿಸಿದ್ದಾರೆ. ಆಯ್ದ ಭಾಗ ಓದಿಗೆ.
*
ಗಣಪತರಾವ ಬೋಡಸರಂತಹ ಕಲಾವಿದರಂತೆ, ಶ್ರೇಷ್ಠ ನಾಟಕಕಾರರೂ ಲಭಿಸಿದ್ದು ಗಂಧರ್ವ ಕಂಪನಿಯ ಭಾಗ್ಯವೆನ್ನಬೇಕು. ಅವರಲ್ಲಿ ಒಬ್ಬರೆಂದರೆ ಕೃಷ್ಣಾಜಿ ಪ್ರಭಾಕರ ಖಾಡಿಲ್ಕರ್ ಮತ್ತೊಬ್ಬರು ರಾಮಗಣೇಶ ಗಡಕರಿ, ರಾಮಗಣೇಶ ಗಡಕರಿಯವರು ಮರಾಠಿಯ ಅತ್ಯಂತ ಶ್ರೇಷ್ಠ ಲೇಖಕ, ಜತೆಗೆ ಕವಿಯೂ ಆಗಿದ್ದರು. ಅವರು ಹಲವು ಮಾದರಿಯ ನಾಟಕಗಳನ್ನು ರಚಿಸಿದರು. ‘ಏಕಚ ಪ್ಯಾಲಾ’ದಂತಹ ದುರಂತ ನಾಟಕದ ಜತೆಗೆ, ಹಾಸ್ಯಪ್ರಧಾನ ನಾಟಕಗಳನ್ನು ಸಹ ಬರೆದರು. ಅವರು ಜನಿಸಿದ್ದು ಗುಜರಾತದಲ್ಲಿ. ಹೀಗಾಗಿ ತಾಯಿ ಅವರನ್ನು ಲಾಲಜಿ ಎಂದು ಕರೆಯುತ್ತಿದ್ದರು. ಉಳಿದವರು ಈ ಗುಜರಾತಿ ಹೆಸರಿನಿಂದ ಕರೆದರೆ ಅವರಿಗೆ ಸಿಟ್ಟು ಬರುತ್ತಿತ್ತು. ಹಾಗೆ ಅವರು ಹುಟ್ಟಿದ್ದು ನವಸಾರಿಯಲ್ಲಿ. ಅಲ್ಲಿ ರಾಮಲೀಲಾ ಹಾಗು ಉಳಿದ ನಾಟಕಗಳ ಪ್ರಯೋಗ ನಡೆಯುತ್ತಿತ್ತು. ಈ ರಾಮಲೀಲಾದಿಂದ ಅವರಿಗೆ ರಾಮ ಎಂಬ ಹೆಸರಿಡಲಾಯಿತು. ಮುದೆ ರಾಮಲಾಲ ಎಂಬ ಪಾತ್ರವು ‘ಏಕಚ್ ಪ್ಯಾಲಾ’ ಎಂಬ ನಾಟಕದಲ್ಲಿ ನಿರ್ಮಾಣವಾಯಿತು. ನವಸಾರಿಯಲ್ಲಿ ರಂಗಭೂಮಿಯ ಕಾರ್ಯಕ್ರಮ ನಡೆಯುತ್ತಿರುವುದರಿಂದ ಗಡಕರಿಯವರಿಗೆ ನಾಟಕ ರಚನೆಯ ಪ್ರೇರಣೆ ಸಿಕ್ಕಿರಬೇಕು. ಬಾಲಕರಾಮ ಎಂಬ ಹೆಸರಿನಲ್ಲೂ ಹಾಸ್ಯ ಲೇಖನವನ್ನು ಬರೆಯಲಾರಂಭಿಸಿದರು. ಈ ಹೆಸರೂ ಗುಜರಾತಿಯಾಗಿತ್ತು.
ಗಡಕರಿಯವರ ಚರಿತ್ರೆ ಹಲವು ದೃಷ್ಟಿಯಿಂದ ಮಹತ್ವದ್ದಾಗಿತ್ತು. ಅವರು ತುಂಬ ಪ್ರತಿಭಾವಂತರಾಗಿದ್ದರು. ಮ್ಯಾಟ್ರಿಕ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದರು. ಅನಂತರ ಪುಣೆಯ ನ್ಯೂ ಇಂಗ್ಲಿಷ್ ಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿಕೊಂಡರು. ಅನಂತರ ಫಗ್ಯೂಸನ್ ಕಾಲೇಜು ಸೇರಿದರು. ಅಲ್ಲೂ ಯಶಸ್ಸು ಗಳಿಸಿದರು. ಮರಾಠಿಯಲ್ಲಿ ಗಮನಾರ್ಹ ಕವಿತೆಗಳನ್ನು ರಚಿಸಿದರು. ಅವರನ್ನು ಅಸಾಮಾನ್ಯ ಕವಿಯೆಂದು ಗುರುತಿಸಲಾಯಿತು. ಅವರಿಗೆ ದೀರ್ಘಾಯುಷ್ಯ ಲಭಿಸಲಿಲ್ಲ. ಅವರು ಹುಟ್ಟಿದ್ದು 1885ರಲ್ಲಿ, ಸಾವನ್ನಪ್ಪಿದ್ದು 1919ರಲ್ಲಿ. ಅಂದರೆ 34 ವರ್ಷ ಬದುಕಿದರೂ ನಾಟಕ ಕ್ಷೇತ್ರದಲ್ಲಿ ಅವರ ಹೆಸರು ಅಜರಾಮರವಾಗಿದೆ.
ಮರಾಠಿ ಕಾವ್ಯ ತುಂಬ ಸ್ವಾಭಿಮಾನಿ ಸ್ವಭಾವದವರಾಗಿದ್ದರಿಂದ ಶಿಕ್ಷಕ ನೌಕರಿಯನ್ನು ಮಧ್ಯದಲ್ಲೇ ತೊರೆದರು. ಮುಂದೆ ಕಿರ್ಲೋಸ್ಕರ ಕಂಪನಿಯಲ್ಲಿ ಮಕ್ಕಳ ಶಿಕ್ಷಕರಾದರು. ಅನಂತರ ಮನೆಯಲ್ಲೇ ನಿರುದ್ಯೋಗಿಯಾಗಿ ಉಳಿದರು. ಒಟ್ಟಿನಲ್ಲಿ ಅವರ ಒಟ್ಟೂ ಬದುಕು ದಾರಿದ್ರದಿಂದ ಕೂಡಿತ್ತು.
ಅವರಿಗೆ ಇಬ್ಬರು ಹೆಂಡಂದಿರು. ಮೊದಲ ಹೆಂಡತಿಯು ಅಶಿಕ್ಷಿತಳಾಗಿದ್ದರಿಂದ ಅವಳನ್ನು ಬಿಟ್ಟರು. ಆಕೆಯ ಹೆಸರು ಸೀತಾಬಾಯಿ. ಈ ಲಗ್ನ 1905ರ ಜನೇವರಿ ಎರಡನೇ ವಾರದಲ್ಲಿ ಜರುಗಿತ್ತು. ಲಗ್ನವಾದ ಒಂದೇ ತಿಂಗಳಲ್ಲಿ ನಿರಕ್ಷರಿ ಎಂಬ ಕಾರಣಕ್ಕಾಗಿ ಅವಳನ್ನು ತೊರೆದರು. ಹೀಗಾಗಿ ಅವಳು ತುಂಬ ಕಷ್ಟದಲ್ಲಿ ಬದುಕುವಂತಾಯಿತು. ಗಡಕರಿಯ ಈ ವರ್ತನೆಯು ಅತ್ಯಂತ ನಿಷ್ಠುರವಾಗಿತ್ತು. ಒಬ್ಬ ಭಾವನಾಶೀಲ ಕವಿಯ ವರ್ತನೆಯು ಹೀಗಿರುವುದು ಅಚ್ಚರಿ ಮೂಡಿಸುತ್ತದೆ.
ಅನಂತರ ಗಡಕರಿಯವರು ಎರಡನೇ ಮದುವೆ ಮಾಡಿಕೊಂಡರು. ‘ನಿಮಗೆಂಥ ಹೆಂಡತಿ ಬೇಕು?’ ಎಂದು ಶಿಕ್ಷಣ ತಜ್ಞರಾದ ಚಿಪಣಕರ ಕೇಳಿದರಂತೆ. ‘ನನಗೆ ಅಡುಗೆ ಮತ್ತು ಚಹಾ ಮಾಡಲು ಹೆಂಡತಿ ಬೇಕಾಗಿಲ್ಲ. ಅದನ್ನು ಖಾನಾವಳಿಯಿಂದ ತರಿಸಬಹುದು. ಆದರೆ ನಾನು ಅಪೂರ್ಣ ಮಾಡಿದ ಕವಿತೆಯನ್ನು ಪೂರ್ಣಗೊಳಿಸುವಂಥವಳು ಬೇಕು’
‘ಒಳ್ಳೆ ವಿಚಾರ. ಆದರೆ ಅಂಥವಳನ್ನು ಹೇಗೆ ಹುಡುಕುತ್ತೀರಿ?’ ‘ಸುಶಿಕ್ಷಿತ ಹೆಂಡತಿಯಿದ್ದರೆ ಅವಳಿಗೆ ಕಲಿಸಬಹುದು’
ಆದರೂ ಎರಡನೇ ಹೆಂಡತಿಯ ಸಂಗಡ ಸಹ ಸುಖ ಸಂಸಾರ ನಡೆಯಲಿಲ್ಲ. ಕೋಮಲ ಸ್ವಭಾವದ, ಸಕಲ ಅನುಭವವಿರುವ ಈ ಕವಿಯು ನಿಜಜೀವನದಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದ. ಇದಕ್ಕೆ ನೀಡುವ ಕಾರಣವೇನೆಂದರೆ, ಗಡಕರಿಯ ದೂರದ ಸಂಬಂಧಿಕಳಾದ ಚಂಪಾ ದೇಶಪಾಂಡೆಯು ಅವರ ಮೊದಲ ಪ್ರೇಯಸಿಯಂತೆ. ಅವಳೊಂದಿಗೆ ಲಗ್ನವಾಗಲಿಲ್ಲ. ಆ ಸಿಟ್ಟನ್ನು ಈ ಇಬ್ಬರು ಹೆಂಡಂದಿರಿಗೆ ನೀಡುವುದು ವಿಚಿತ್ರವೆನಿಸುತ್ತದೆ.
13 ಜೂನ 1917ರಲ್ಲಿ ಎರಡನೇ ಲಗ್ನವಾಯಿತು. ಅನಂತರ ಎರಡೇ ವರ್ಷದಲ್ಲಿ ಅವರು ತೀರಿಕೊಂಡರು. ಎರಡನೇ ಪತ್ನಿಗೆ ಬರೇ ಎರಡೇ ವರ್ಷ ವಿವಾಹ ಸುಖ ಸಿಕ್ಕಿತು. ಕುಟುಂಬದ ಸೌಖ್ಯ ಹದಗೆಡಲು ಗಡಕರಿಯೇ ಕಾರಣರಾದರು. ಇಬ್ಬರೂ ಹೆಂಡಂದಿರನ್ನು ದುಃಖಿಯನ್ನಾಗಿ ಮಾಡಿದ್ದೂ ಅಲ್ಲದೆ, ತಾವೂ ಒಂಟಿಯಾಗಿ ಉಳಿಯುವಂತಾಯಿತು.
ಗಡಕರಿಯವರು ಹಲವು ವರುಷ ಬಡತನದಲ್ಲೇ ಜೀವನ ಕಳೆದರು. ಕಿರ್ಲೋಸ್ಕರ ನಾಟಕ ಕಂಪನಿಯಲ್ಲಿ ಡೋರ್ ಕಿಪರ್‌ರಾಗಿ 7 ರೂಪಾಯಿ, ಅಲ್ಲಿಯ ಮಕ್ಕಳ ಶಿಕ್ಷಕರಾಗಿ 5 ರೂಪಾಯಿ ಸಂಬಳ ಸಿಗುತ್ತಿತ್ತು. ಅದರಲ್ಲಿಯ ಹತ್ತು ರೂಪಾಯಿ ಗಡಕರಿಯವರ ತಾಯಿಗೆ ಮನಿಯಾರ್ಡರ ಮಾಡಿ, ಉಳಿದ ಎರಡು ರೂಪಾಯಿ ಅವರ ಕೈಗೆ ಬೀಳುತ್ತಿತ್ತು. ಶಬ್ದಬ್ರಹ್ಮನ ಕೈಗೆ ಕೇವಲ ಎರಡೇ ರೂಪಾಯಿ. ಆ ಎರಡು ರೂಪಾಯಿ ಬೀಡಿಗಾಗಿ ಖರ್ಚಾಗುತ್ತಿತ್ತು. ಊಟವಂತೂ ನಾಟಕ ಕಂಪನಿಯಲ್ಲೇ ಸಿಗುತ್ತಿತ್ತು. ಇಲ್ಲದಿದ್ದರೆ ಅವರು ಉಪವಾಸದಿಂದ ಬಳಲಬೇಕಾಗುತ್ತಿತ್ತು. ಡೋರ್ ಕಿಪರ್ ಕೆಲಸ ಮಾತ್ರ ದಕ್ಷತೆಯಿಂದ ಮಾಡುತ್ತಿದ್ದರು. ದೈಹಿಕವಾಗಿ ಅವರು ಸಣಕಲಾಗಿದ್ದರು. ಹೀಗಾಗಿ ಒಮ್ಮೊಮ್ಮೆ ಸಮಸ್ಯೆ ತಲೆದೋರುತ್ತಿತ್ತು. ಒಮ್ಮೆ ಒಬ್ಬ ಧಾಂಡಿಗ ನಾಟ್ಯಗೃಹಕ್ಕೆ ನುಗ್ಗಿದ, ಅವನು ಗಡಕರಿಯವರನ್ನು ಬದಿಗೆ ತಳ್ಳಿದ. ಒಬ್ಬನಂತೂ ಕತ್ತೆ ಮರಿಯ ಟಿಕೇಟ ತೆಗೆದು ಅದನ್ನು ಒಳಗೆ ಕರೆದೊಯ್ಯುವ ಪ್ರಯತ್ನ ಮಾಡಿದ. ಆಗ ಗಡಕರಿಯವರು ‘ಮೊದಲು ನಿನ್ನ ಕಿವಿಯ ಉದ್ದಳತೆ ತೆಗೆದುಕೊಳ್ಳುತ್ತೇನೆ. ಅನಂತರ ನಿನಗೆ ಬಾಲವಿದೆಯೋ ಇಲ್ಲವೋ ನೋಡುತ್ತೇನೆ. ಈಗ ನಿನಗಂತೂ ಎರಡೇ ಕಾಲಿದೆ, ಮತ್ತೆರಡು ಕಾಲು ತಂದು ಕೊಟ್ಟು ಹೊರಗೆ ದಬ್ಬುತ್ತೇನೆ’ ಎಂದರು.
ಆದರೂ ನಾಟಕ ಕಂಪನಿಯ ಸಂಬಂಧ ಗಡಕರಿಯವರಿಗೆ ಬಂದಿದ್ದರಿಂದ ಅವರು ನಾಟಕ ರಚಿಸುವಂತಾಯಿತು. ಅವರು ಮೊದಲಿಗೆ ‘ಗರ್ವನಿರ್ವಾಣ’ ನಾಟಕ ರಚಿಸಿದರು. ಇದನ್ನು ಅವರು ಸಿಟ್ಟಿನಿಂದ ಕಿರ್ಲೋಸ್ಕರ ಕಂಪನಿ ತೊರೆದು ಬಾಳಾಪೂರಗೆ ಹೋದಾಗ ಬರೆದರು. ಅಲ್ಲಿ ಅವರಿಗೆ ಸಮಾಧಾನವಾಗದೆ ಮರಳಿ ಮತ್ತೇ ಕಂಪನಿಗೆ ಬಂದರು. ನಾಟಕ ಬೋಡಸರ ಮೂಲಕ ಮುಜುಮದಾರರ ಕೈಗೆ ಸಿಕ್ಕಿತು. ಅವರು ಆ ವಹಿಯನ್ನು ಒಂದು ಸುರುಳಿಯಲ್ಲಿ ಸುತ್ತಿಟ್ಟರು. ದುರ್ದೈವಕ್ಕೆ ಅದು ಕಳೆದುಹೋಯಿತು. ಗಡಕರಿಯವರು ನೆನಪಿನಿಂದ ಕೆಲವು ಸಂವಾದವನ್ನು ಮತ್ತೆ ಬರೆದರು. ಬಾಳಾಪುರ ಮುಸಲ್ಮಾನರ ಊರು. ಊರ ಸುತ್ತಲೂ ತಡೆಗೋಡೆಯಿತ್ತು. ಊರು ಮಾತ್ರ ತೀರ ಭಣಗುಡುತ್ತಿತ್ತು. ಗಡಕರಿಯವರಿಗೆ ಅಲ್ಲಿ ನೆಮ್ಮದಿ ಸಿಗಲಿಲ್ಲ. ಅವರು ಬೋಡಸರಿಗೆ ಬರೆದ ಪತ್ರ ಹೀಗಿತ್ತು : ‘ ಕೇವಲ ಎರಡೇ ದಿನದಲ್ಲಿ ನಾನು ದುರ್ಬಲ ಮತ್ತು ಮುದುಕನಂತಾಗಿದ್ದೇನೆ. ಅವರು ಮುದುಕನೆಂದು ಬರೆದುಕೊಂಡಿದ್ದರೂ ಹಾಸ್ಯ ಬುದ್ಧಿ ಮಾತ್ರ ತಾರುಣ್ಯದಿಂದ ಕೂಡಿತ್ತು, ‘ಆಂಗ್ಲ ಸರಕಾರ ತಿಲಕರನ್ನು ಆರು ವರ್ಷ ಮಂಡಾಲೆಗೆ ಏಕೆ ಕಳಿಸಿದರೋ ಗೊತ್ತಿಲ್ಲ. ಅದರ ಬದಲಿಗೆ ಬಾಳಾಪುರದಲ್ಲಿ ಮಾಸ್ತರಿಕೆ ಮಾಡಲು ಕಳಿಸಿದ್ದರೂ ಅವರಿಗೆ ಶಿಕ್ಷೆ ಕೊಟ್ಟಂತಾಗುತ್ತಿತ್ತು’ ಎಂದವರು ಬರೆದಿದ್ದರು.
ಸೌಜನ್ಯ : ಬೆಳದಿಂಗಳು ಪ್ರಕಾಶನ, ಬೆಳಗಾವಿ. 9902130041
*
ಇದನ್ನೂ ಓದಿ : Tantrik : ಅಭಿಜ್ಞಾನ : ಆ ಶವದ ಕೆಳದುಟಿಯಲ್ಲಿ ಸಾತ್ವಿಕ ನಗೆ ಮೂಡಿತು
Published On - 4:03 pm, Sat, 22 January 22