New Novel : ಅಚ್ಚಿಗೂ ಮೊದಲು ; ಉಷಾ ನರಸಿಂಹನ್ ಅವರ ‘ಕೆಂಡದ ರೊಟ್ಟಿ’ಗಾಗಿ ಗುರುವಾರದ ತನಕ ಕಾಯಲೇಬೇಕು
Writing : ‘ಆತ್ಮಪ್ರತ್ಯಯವುಳ್ಳ ಯಾವುದೇ ಜೀವ ತನ್ನ ಪರಿಸ್ಥಿತಿ ಪರಿಸರಗಳಲ್ಲಿ ತನ್ನ ಅಂತರಂಗವನ್ನು ಶೋಧಿಸಿಕೊಂಡು, ಜೀವನ್ಮುಖಿಯಾಗುವ ಹಲವು ಸನ್ನಿವೇಶಗಳಿಗೆ ಮುಖಾ-ಮುಖಿಯಾಗುತ್ತದೆ. ಅಂತಹದೇ ಸಾಧ್ಯತೆಯೊಂದನ್ನು ಹಂಜಿ ವಸ್ತ್ರವಾಗಿಸಿದ ಕಥನ ‘ಕೆಂಡದರೊಟ್ಟಿ’. ಕೆಂಡದ ಮೇಲಾಡದೆ ರೊಟ್ಟಿ ಪರಿಮಳಿಸುವುದಿಲ್ಲ, ಕೆಂಡದಿಂದ ಮೇಲೆತ್ತಿಕೊಳ್ಳುವ ಹದ ಗೊತ್ತಿಲ್ಲದಿದ್ದರೆ ಸೀದು ಕರಕಾದೀತು!’ ಉಷಾ ನರಸಿಂಹನ್
Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
*
ಕೃತಿ : ಕೆಂಡದ ರೊಟ್ಟಿ (ಕಾದಂಬರಿ)
ಲೇಖಕರು : ಉಷಾ ನರಸಿಂಹನ್
ಪುಟ : 128
ಬೆಲೆ : ರೂ. 130
ಮುಖಪುಟ ವಿನ್ಯಾಸ : ಅರುಣ ಕುಮಾರ್
ಪ್ರಕಾಶನ : ಅಂಕಿತ ಪುಸ್ತಕ, ಬೆಂಗಳೂರು
*
ಬದುಕಿನ ಬಹುಸಾಧ್ಯತೆಗಳ, ಮನಸ್ಸಿನ ಸಂಕೀರ್ಣತೆಯನ್ನು ಕಂಡಾಗಲೆಲ್ಲ ಚಿತ್ತ ಬೆರಗುವಡೆಯುತ್ತದೆ. ಒಪ್ಪಿತ ರೂಢಿಗತ ಬದುಕಿನಲ್ಲಿ ಹಲವು ಮನಸ್ಸುಗಳು, ನಡೆನುಡಿಗಳು ಕಿನಿಸು ಪೆಡಸುಗಳ ವಿಷ ಉಣಿಸುತ್ತ ಸಹಚರರಿಗೆ ಬದುಕನ್ನು ಅಸಹನೀಯವಾಗಿಸುತ್ತಾರೆ. ಪಥಕ್ರಮಣದ ನಡುವೆ ಅಕಸ್ಮಾತಾಗಿ ಬೇರೆಡೆ ಹೊರಳುವ ಜೀವಿಗಳು ಚೌಕಟ್ಟಿನಾಚೆಯ ಚಿತ್ರಗಳಾಗುತ್ತಾರೆ. ಜಾಲಿಯ ಮರವು ನೆರಳಲ್ಲವೆನಿಸಿದರೂ ತಮ್ಮ ಹರವು, ವಿಸ್ತೀರ್ಣ, ಒತ್ತರಗಳನ್ನು ಹೆಚ್ಚಿಸಿಕೊಂಡು ಎಲ್ಲವನ್ನು ಒಳಗೊಳ್ಳುತ್ತ ನೆರಳಾಗಿ ಬಿಡುವಂತೆ… ತಪ್ಪು ಒಪ್ಪುಗಳ ಅರ್ಥವನ್ನು ಬದುಕಿನ ಸಂದರ್ಭಗಳು ನಿರ್ಧರಿಸುತ್ತದೆಯಲ್ಲದೆ ರೀತಿ ನೀತಿಗಳಲ್ಲ! ನೀತಿ ನಿಜಾಯಿತಿಗಳಲ್ಲ. ಸ್ತ್ರೀ ಅಸ್ಮಿತೆಯನ್ನು ವಾದಗಳು, ಪಠ್ಯಗಳು ಕಲಿಸುವುದಕ್ಕಿಂತ ಬದುಕು ಸುಭಗವಾಗಿ ಕಟ್ಟಿಕೊಡುತ್ತದೆ. ಬದುಕಿನ ಸಂದರ್ಭಗಳಲ್ಲಿ ಅದು ಬೋಧೆಯಾಗುತ್ತದೆ. ಆತ್ಮಪ್ರತ್ಯಯವುಳ್ಳ ಯಾವುದೇ ಜೀವ ತನ್ನ ಪರಿಸ್ಥಿತಿ ಪರಿಸರಗಳಲ್ಲಿ ತನ್ನ ಅಂತರಂಗವನ್ನು ಶೋಧಿಸಿಕೊಂಡು, ಜೀವನ್ಮುಖಿಯಾಗುವ ಹಲವು ಸನ್ನಿವೇಶಗಳಿಗೆ ಮುಖಾ-ಮುಖಿಯಾಗುತ್ತದೆ. ಅಂತಹದೇ ಸಾಧ್ಯತೆಯೊಂದನ್ನು ಹಂಜಿ ವಸ್ತ್ರವಾಗಿಸಿದ ಕಥನ ‘ಕೆಂಡದರೊಟ್ಟಿ’. ಕೆಂಡದ ಮೇಲಾಡದೆ ರೊಟ್ಟಿ ಪರಿಮಳಿಸುವುದಿಲ್ಲ, ಕೆಂಡದಿಂದ ಮೇಲೆತ್ತಿಕೊಳ್ಳುವ ಹದ ಗೊತ್ತಿಲ್ಲದಿದ್ದರೆ ಸೀದು ಕರಕಾದೀತು! ಬದುಕಿನ ಸಂದಿಗ್ಧತೆಯೂ ಇಂತದ್ದೇ…
ಉಷಾ ನರಸಿಂಹನ್, ಲೇಖಕಿ
*
ಹೊನ್ನೇಸರದ ಊರನಾಲೆಯ ಕೆಳಗಿನ ಎಂಟೆಕೆರೆ ಫಲವತ್ತು ಜಮೀನು. ಭತ್ತ, ಕಬ್ಬು ಅದಲ್ಲದೆ ಹನ್ನೆರೆಡೆಕರೆ ತೆಂಗು, ಅದೆಷ್ಟು ಸಲ ದೊಡ್ಡಪ್ಪ ತನ್ನನ್ನು ಹೆಗಲ ಮೇಲೆ ಕೂರಿಸಿಕೊಂಡು ಅಣ್ಣನ ಕೈ ಹಿಡಿದು ಗದ್ದೆ ತೆವರಿಯಲ್ಲಿ ನಡೆಸಿಕೊಂಡು ಹೋಗಿಲ್ಲ? ದೊಡ್ಡಪ್ಪನ ನೆನಪು ಬಂದೊಡನೆ ಕಣ್ಣಂಚು ತೇವವಾಯ್ತು. ಎಂಥ ದೊಡ್ಡಪ್ಪ! ಎಷ್ಟು ಪ್ರೀತಿ, ಎಷ್ಟು ಅಕ್ಕರೆ, ಎಷ್ಟು ಕಕ್ಕುಲಾತಿ. ಪುಟ್ಟೀ ಪುಟ್ಟೀ ಅನ್ನುತ್ತಾ ಬೇಕು ಬೇಕಾದ್ದನ್ನು ತೆಗೆಸಿಕೊಡುತ್ತಾ… ಇಂಥದ್ದು ಬೇಕು ಅನ್ನುವುದಕ್ಕೆ ಮುನ್ನವೇ ಕೇಳಿದ್ದು ಕೈಯಲ್ಲಿರುತ್ತಿತ್ತು. ಅಮ್ಮನೇ ಆಗಾಗ್ಗೆ ಗದರುತ್ತಿದ್ದಳು ‘ಭಾವ ನೀವೀ ಪರಿ ಕೇಳಿದ್ದು ಕಂಡಿದ್ದೆಲ್ಲ ಕೊಡುಸ್ತಾ ಹೋದ್ರೆ ಅಷ್ಟೇ… ಮೊದ್ಲೇ ಚಂಡಿ ಇವಳು. ಇನ್ನೂ ಹಠ ಕಲ್ತುಕೋತಾಳೆ’ ಎಂದಾಗಲೆಲ್ಲ ಒಂದು ಸಣ್ಣ ನಗೆ ನಕ್ಕು ಅವಳ ತಲೆ ನೇವರಿಸಿ ಅಲ್ಲಿಂದ ಹೊರಟು ಬಿಡುತ್ತಿದ್ದರು. ತನಗೆ ಮಾತ್ರವಲ್ಲ… ಬಾಲಣ್ಣನಿಗೂ ಅವರು ಹಾಗೇ ಇದ್ದರು. ಇಬ್ಬರನ್ನು ಕಂಡರೆ ಅಷ್ಟು ಅಕರಾಸ್ಥೆ. ಇಬ್ಬರೂ ಅಪ್ಪನಿಗಿಂತ ದೊಡ್ಡಪ್ಪನಿಗೇ ಅಂಟಿಕೊಂಡಿದ್ದೆವೆಂಬುದು ಯಾರಿಗಾದರೂ ಗೊತ್ತಿದ್ದುದ್ದೇ ಆಗಿತ್ತು.
ಅಪ್ಪ ತನ್ನ ಕಾಫಿಪುಡಿ ಅಂಗಡಿ ತೆಗೆಯುವುದು ಒಂಬತ್ತು ಗಂಟೆಯ ಮೇಲೆ. ಬೆಳಗಿನ ಹೊತ್ತಿನ ವ್ಯಾಪಾರ ಬಿಡಬಾರದೆಂಬ ಮುಂದಾಲೋಚನೆಯಲ್ಲಿ ದೊಡ್ಡಪ್ಪ ಆರು ಗಂಟೆಗೆ ಅಂಗಡಿ ತೆರೆಯುತ್ತಿದ್ದ. ಅಪ್ಪ ಸ್ನಾನ ತಿಂಡಿ ಮುಗಿಸಿ ಬರುವವರೆಗೆ ಅವರಲ್ಲೇ ಪ್ರತಿಷ್ಠಾಪಿಸಿ ಕೂರುತ್ತಾ ತಮ್ಮ ಬಂದ ಮೇಲೆ ‘ರಾಮಣ್ಣ ಏನೇನು ವ್ಯಾಪಾರವಾಯ್ತು ಅಂತ ಬರೆದಿದೀನಿ, ದುಡ್ಡು ಗಲ್ಲಾದಲ್ಲಿದೆ ನೋಡ್ಕೋ’ ಎನ್ನುತ್ತಾ ಅಂಗಡಿಯನ್ನು ಅಪ್ಪನಿಗೆ ವಹಿಸಿಕೊಟ್ಟು ಮನೆಗೆ ಬಂದು ಅಮ್ಮ ಮಾಡಿಕೊಡುತ್ತಿದ್ದ ದೊಡ್ಡ ಲೋಟದ ಗಟ್ಟಿ ಕಾಫಿ ಕುಡಿದು ಸ್ನಾನ ಮಾಡಿ ಸಂಧ್ಯಾವಂದನೆ ಪೂರೈಸಿ ಅಡಿಗೆ ಮನೆಗೆ ಹೋದರೆ… ಅಮ್ಮ ಬಿಸಿಯಾದ ದೋಸೆಯೋ, ಇಡ್ಲಿಯೋ, ಉಪ್ಪಿಟ್ಟೋ, ರೊಟ್ಟಿಯೋ ತಂದು ಬಡಿಸುತ್ತಲೇ ಇರಬೇಕು. ಊ ಹೂಂಗಳೊಂದು ಇಲ್ಲದೇ ಹಾಕಿದಂತೆಲ್ಲ ತಿನ್ನುತ್ತಲೇ ಇರಬೇಕು. ಅದರಲ್ಲೂ ಕೆಂಡದರೊಟ್ಟಿ ಎಂದರೆ ಮುಗಿದೇ ಹೋಯಿತು!
ಮಲ್ಲಿಗೆಯಂತೆ ಬೆಳ್ಳಗಿನ ಮೃದುವಾದ ಹಿಟ್ಟನ್ನ ಮಣೆಯ ಮೇಲಿನ ಮುತ್ತಗದೆಲೆಯಲ್ಲಿ ತಟ್ಟುತ್ತಾ ಅಗಲವಾಗಿಸಿ, ಪೂರ್ತಿಯಾಗಿ ತೆಳ್ಳಗೆ ಹರಡಿಕೊಂಡ ರೊಟ್ಟಿಗೆ ಪಕ್ಕದಲ್ಲಿಟ್ಟುಕೊಂಡ ಬಟ್ಟಲಿನಿಂದ ಬಲಗೈಯಿಂದ ನೀರೆತ್ತಿ ತಳಿದು ಎಲೆಯ ಸಮೇತ ಒಲೆಯ ಮೇಲೆ ಹೊಗೆ ಏಳುವಂತೆ ಕಾದಿದ್ದ ಕಬ್ಬಿಣದ ಕಾವಲಿಗೆ ಹಾಕಿ, ಚುರುಚುರು ಎಂದು ಎಲೆ ಸುಡುವ ಸದ್ದಾಗಿ, ಎಲೆ ಕಂದಿ ತುಸು ಸುಕ್ಕಾಗುತ್ತಿದ್ದಂತೆ ನಾಜೂಕಾಗಿ ರೊಟ್ಟಿಯ ಮೈಯಿಂದ ಅದನ್ನೆತ್ತಿಕೊಂಡು… ಒಂದು ಬದಿ ಬೇಯಲು ಕನಿಷ್ಠ ಎರಡು ನಿಮಿಷಗಳಾದರೂ ತೆಗೆದುಕೊಳ್ಳುತ್ತಿತ್ತು. ರೊಟ್ಟಿಯನ್ನು ಕಬ್ಬಿಣದ ಮೊಗಚು ಕೈಯಿಂದ ಎಬ್ಬಿ ತಿರುವಿ, ಹತ್ತು ಸೆಕೆಂಡುಗಳಲ್ಲಿ ಉಬ್ಬಲು ಶುರುವಾಗುತ್ತಿದ್ದ ರೊಟ್ಟಿಯನ್ನೆತ್ತಿ ಒಲೆಯ ಬಾಯಲ್ಲಿ ಹರಡಿದ್ದ ಬೆಂಬೂದಿಯೊಳಗಿನ ಕೆಂಡದ ಮೈಗಿಟ್ಟು, ಕೆಂಡದ ಮೇಲೆ ರೊಟ್ಟಿ ಪೂರಾ ದುಂಡಗೆ ಉಬ್ಬುವುದನ್ನು ನೋಡುವುದೇ ಒಂದು ಸೊಗಸು! ದುಂಡಾಡಿ ಉಬ್ಬಿ ಘಮ್ಮೆನ್ನುವ ರೊಟ್ಟಿಯ ಕೆಳಮೈಯಲ್ಲಿ ಕಪ್ಪುಚುಕ್ಕೆಗಳು ಹತ್ತುವ ಮೊದಲೆ ಗ್ರಹಿಸಿ ಅಲ್ಲಿಂದೆತ್ತಿ ನೇರ ತಾಟಿಗೆ, ಜೊತೆಗಿಷ್ಟು ಬೆಣ್ಣೆ, ಜೋನಿಬೆಲ್ಲ, ಕಾಯಿಚಟ್ನಿ. ಕೆಂಡದ ಮೇಲೆ ಸುಟ್ಟ ಕಂಪು ಮನೆಯೆಲ್ಲ ಅಡರುತ್ತಿದ್ದಂತೆ ಎಲ್ಲಿದ್ದರು ಎಲ್ಲರೂ ಅಡಿಗೆ ಮನೆಯತ್ತ ಕಾಲಾಗುತ್ತಿದ್ದರು. ತಾಟಿನಲ್ಲಿದ್ದ ಬಿಸಿ ರೊಟ್ಟಿ ಎರಡೆ ಬೆರಳಲ್ಲಿ ಹರಿದರು ಕೈಗೆ ಬಂದು ಪದರಪದರವಾಗಿ ಅರಳೆಯಂತೆ ಮೃದುವಾಗಿ, ವಿಶಿಷ್ಟ ಕಂಪಿನಿಂದ ಜಿಹ್ವೆಯಲ್ಲಿ ನುರಿದು ಹೋಗುತ್ತಿತ್ತು. ಮಲೆನಾಡಿನ ಮನೆಗಳಲ್ಲಿ ಈ ರೊಟ್ಟಿ ಅಪರೂಪವೇನಲ್ಲ.
ಆದರೂ ಅಮ್ಮನ ಕೈರುಚಿಗೊಂದು ಮಹತ್ವ. ಎರಡು ತಿನ್ನುವವರು ನಾಕು ತಿನ್ನುವಷ್ಟು ರುಚಿ, ಕಂಪು. ಎದುರಿಗೆ ತಾನು ಕಂಡರೆ ತೊಡೆಯಲ್ಲಿ ಕೂರಿಸಿಕೊಂಡು ರೊಟ್ಟಿ ದೋಸೆಗಳ ತುಣುಕುಗಳನ್ನು ತುಪ್ಪದಲ್ಲದ್ದಿ ಬಾಯಿಗಿಡುತ್ತಾ… ಯಾಕೋ… ದೊಡ್ಡಪ್ಪನಿಗೆ ಬಾಲಣ್ಣನಿಗಿಂತ ತನ್ನ ಮೇಲೆ ಅಕ್ಕರೆ ಹೆಚ್ಚೆನ್ನುವಂತೆ ಅವರ ವರ್ತನೆ. ಅಮ್ಮ ಅಂಜುತ್ತಾ ‘ಭಾವ ಇನ್ನೊಂದ್ ರೊಟ್ಟಿ ತಟ್ಲಾ’ ಎಂದಾಗ ತಲೆಯೆತ್ತಿ ‘ಎಷ್ಟಾಯ್ತು? ಮೂರಾ… ಸಾಕು ಬಿಡು ಸತ್ಯ. ಅಲ್ಲ… ಈ ಥರಾನ ತಿಂಡಿ ಮಾಡದು? ನಾನು ಉಳ್ಕಾಬೇಕಾ ಬ್ಯಾಡ್ವಾ’? ಎನ್ನಬೇಕು. ಅಮ್ಮ ನಾಚುತ್ತಾ ಅವರ ತಟ್ಟೆಯೆತ್ತಿಕೊಂಡು ಬಚ್ಚಲಿಗೆ ಹೋಗಬೇಕು… ಹೌದು ಅಮ್ಮನ ಕೈಯಡಿಗೆ ಹಾಗೇನೆ, ಯಾರೇ ತಿಂದರೂ ಮತ್ತೊಮ್ಮೆ ಕೇಳಬೇಕಿನಿಸುವಂತಹ ರುಚಿ. ಇದೇ ಅಮ್ಮ ಅದೆಷ್ಟು ತುಂಬಿ ತುಂಬಿ ತನ್ನ ಸೂಟ್‌ಕೇಸಿನಲ್ಲಿ ಚಕ್ಕುಲಿ, ಕೋಡುಬಳೆ, ಕಾಯ್ಮಿಟಾಯಿಗಳನ್ನು ಕಳಿಸುತ್ತಿದ್ದಳು! ಈಗ ತಾನಿಲ್ಲಿ ಬಂದರೂ ಅವಳು ಬರಲಿಲ್ಲ. ಇದೆಲ್ಲ ಯಾವಾಗ ಬದಲಾಯ್ತೋ…
ನಿಟ್ಟುಸಿರೊಂದು ನಿಡಿದಾಗಿ ಹೊರಹೊಮ್ಮಿ ತನ್ನ ತೊಡೆಯ ಮೇಲಿದ್ದ ಅನ್ವಿತಾಳ ತಲೆಯನ್ನೊಮ್ಮೆ ನೇವರಿಸಿ, ತನ್ನ ಭುಜಕ್ಕೇ ಆತು ಕುಳಿತಿದ್ದ ಅನೀಶನನ್ನ ಇನ್ನಷ್ಟು ಒತ್ತಿಗೆಳೆದುಕೊಂಡಳು ‘ಮೇಡಮ್ ವಿಜಯನಗರಕ್ಕೆ ಬಂದ್ವಿ. ಇಲ್ಲಿ ಯಾವ ಕಡೆ’ ಎಂದ ಡ್ರೈವರ್ಗೆ ‘ಸ್ವಲ್ಪ ಮುಂದೆ ಹೌಸಿಂಗ್ ಬೋರ್ಡ್ ಕಡೆ ಹೋಗಬೇಕು. ಒಂಭತ್ತನೇ ಕ್ರಾಸ್’ ಎಂದಳು. ‘ಓ ಪ್ರಶಾಂತನಗರಾನಾ… ಗೊತ್ತು ಬಿಡಿ’ ಎಂದು ತನ್ನ ಸ್ಟೀಯರಿಂಗ್‌ನಲ್ಲಿ ಮಗ್ನವಾದ. ಅತ್ತಿಗೆಗೆ ಫೋನ್ ಮಾಡಬೇಕು ಎಂದು ಫೋನ್ ಹೊರತೆಗೆದಳು. ಇನ್ನೂ ನಾಕು ಮಿಸ್ಡ್ ಕಾಲ್! ಬರಲಿ ಎಂದುಕೊಂಡಳು. ‘ಅತ್ಗೆ, ಎದ್ದಿದ್ದೀರಾ ಅಲ್ವಾ? ನಾವಿನ್ನೇನು ಐದು ನಿಮಿಷದಲ್ಲಿ ಮನೇಲರ‍್ತೀವಿ’ ಅಂದಳು. ‘ಅಯ್ಯೋ… ನಂಗ್ ನಿದ್ದೇನೇ ಬಂದಿಲ್ಲ ರಮ್ಯ, ನಾನೆದ್ದೇ ಇದೀನಿ, ತಡೀ ಹೊರಗ್ ರ‍್ತೀನಿ’ ಎಂದ ಅತ್ತಿಗೆಗೆ ‘ಸರಿ’ ಅಂದು ಲೈನ್ ಕಟ್ ಮಾಡಿ ಫೋನ್ ಒಳಗಿಟ್ಟುಕೊಂಡು ಕ್ಯಾಬಿಗೆ ಕೊಡಬೇಕಾದ ದುಡ್ಡು ತೆಗೆದು ಕೈಯಲ್ಲಿ ಜೋಡಿಸಿಕೊಂಡಳು. ಒಂದಿಷ್ಟು ಭಾರತದ ಕರೆನ್ಸಿ ಕೈಯಲ್ಲಿಟ್ಟುಕೊಂಡಿರುವ ಅಭ್ಯಾಸ, ಹಲವು ಸಲದ ಸ್ವದೇಶ ಪ್ರಯಾಣಗಳಲ್ಲಿ ರೂಢಿಯಾಗಿತ್ತು.
ಗೇಟಿಂದ ಹೊರಬಂದು ಟ್ಯಾಕ್ಸಿಯ ಹತ್ತಿರವೇ ನಿಂತ ಅತ್ತಿಗೆ ‘ಬಾ ಚೆನ್ನಾಗಿದ್ದೀಯಾ? ಸ್ವಲ್ಪ ಲೇಟಾಯ್ತು ಅಲ್ವಾ? ಈಗಾಗ್ಲೇ ನಾಕೂವರೆ… ಹಗಲಾಗ್ತಾಯಿದೆ. ಆಗ್ಲೆ ವಾಕಿಂಗ್‌ನೋರೆಲ್ಲ ಓಡಾಡೋಕೆ ಶುರು ಮಾಡಿದ್ದಾರೆ’ ಎನ್ನುತ್ತಾ ‘ಬಾ ಪುಟ್ಟಿ’ ಎನ್ನುತ್ತಾ ಅನ್ವಿತಾಳನ್ನು ತಬ್ಬಿ ಎಳೆದೊಯ್ಯುವಂತೆ ಒಳನಡೆದಳು. ಒಂದೊಂದಾಗಿ ಲಗೇಜಿಳಿಸಿಕೊಂಡು ಟ್ಯಾಕ್ಸಿ ಕಳಿಸಿ ಕೊಟ್ಟು ಮಗನನ್ನು ಅಲ್ಲೇ ನಿಲ್ಲ ಹೇಳಿ ಸಾಮಾನುಗಳನ್ನು ಒಳಗಿಟ್ಟುಕೊಳ್ಳತೊಡಗಿದಳು. ಮೂರು ಸೂಟುಕೇಸು ಒಂದು ಕ್ಯಾಬಿನ್ ಬ್ಯಾಗೇಜು, ಒಂದು ಕೈಚೀಲ ಮಗನ ಕೈಯಲ್ಲೊಂದು ಲ್ಯಾಪ್‌ಟಾಪ್ ಬ್ಯಾಗು ಎಲ್ಲವನ್ನು ಎಣಿಸಿ ಸರಿಯಾಗಿದೆಯೆಂದು ಖಚಿತಪಡಿಸಿಕೊಂಡು ಒಳಹೋದಳು. ಎಲ್ಲಾ ಲಗೇಜುಗಳನ್ನು ಅಲ್ಲೇ ಹಜಾರದಲ್ಲಿಟ್ಟು ‘ಅತ್ಗೆ ಒಂದ್ ನಿಮಿಷ ಬಾತ್ರೂಮ್ಗೆ ಹೋಗ್ಬರತೀನಿ’ ಎಂದಳು. ‘ಈಗ ಮಲ್ಕೋತೀಯಾ ಅಥ್ವಾ?’ ಎಂದ ಅತ್ತಿಗೆಗೆ ‘ಇಲ್ಲ ಅತ್ಗೆ ಈಗಿನ್ನು ಮಲಗಿಬಿಟ್ರೆ ರಾತ್ರಿ ನಿದ್ರೆ ಕಷ್ಟ, ಸ್ನಾನ ಮಾಡಿಬರ‍್ತೀನಿ’ ಎಂದವಳಿಗೆ’ ‘ತಡಿ ರಮ್ಯ ಡಿಕಾಕ್ಷನ್ ಹಾಕಿದೀನಿ ಒಂದ್ಲೋಟ ಕಾಫಿ ಕುಡಿದು ಹೋಗುವಂತೆ’ ಎಂದರು. ‘ಸರಿ ಅತ್ಗೆ ಕಾಫಿ ಕೊಡಿ. ಅನ್ವಿ ಅನಿ ಇಬ್ರೂ ತಾಚೋತಿ ರೇನೋ?’ ಎಂದಾಗ ಮಕ್ಕಳು ಹೂಂಗುಟ್ಟಿದವು. ಹ್ಯಾಂಡ್ ಬ್ಯಾಗಿನಿಂದ ಮಕ್ಕಳ ಮಲಗುಡುಗೆ ತೆಗೆದುಕೊಟ್ಟಳು.
ಈ ಕಾದಂಬರಿಯ ಖರೀದಿಗೆ : 080 – 2661 7100
*
ಉಷಾ ನರಸಿಂಹನ್ : ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಉಷಾ ನರಸಿಂಹನ್ ಮಂಡ್ಯ ಜಿಲ್ಲೆಯ ಶಿವನಸಮುದ್ರ ಮೂಲದವರು. ಮೂರು ಕವನ ಸಂಕಲನ, ನಾಲ್ಕು ಕಥಾಸಂಕಲನ ಮತ್ತು ನಾಲ್ಕು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ; ‘ಪಯಣಕ್ಕೆ ಮುನ್ನ’, ‘ಅಂಗರಾಗ’, ‘ಮಾಮಿ ಮತ್ತು ಇತರ ಕತೆಗಳು’, ‘ತಾವರೆದೇಟು’ ಹಾಗೂ ‘ಹರಿವ ನೀರು ಕೊರೆವ ಬಂಡೆ’, ‘ಕದಳಿ ಕಲ್ಯಾಣ’. ‘ಜಗಜ್ಯೋತಿ ಕಲಾವೃಂದ-ಮುಂಬೈ’, ಅಖಿಲ ಭಾರತ ಮಹಿಳೆಯರಿಗಾಗಿ ಆಯೋಜಿಸಿದ್ದ ‘ಸುಶೀಲಾ ಶೆಟ್ಟಿ ಸ್ಮಾರಕ’ ಕಥಾಸಂಕಲನ ಸ್ಪರ್ಧೆಯಲ್ಲಿ ‘ಮಾಮಿ ಮತ್ತು ಇತರ ಕಥೆಗಳು’ ಪುರಸ್ಕಾರ ಪಡೆದಿದೆ. ಅತ್ಯುತ್ತಮ ಕಾದಂಬರಿ ರಚನೆಗಾಗಿ ಎರಡು ಬಾರಿ ಮಾಸ್ತಿ ಕಾದಂಬರಿ ಪುರಸ್ಕಾರ, ಸುಧಾ ಯುಗಾದಿ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ತುಷಾರ ಕಥಾ ಸ್ಪರ್ಧೆಯಲ್ಲಿ ಬಹುಮಾನ, ನಾಟಕ ರಚನಾ ಸ್ಪರ್ಧೆಯಲ್ಲಿ ಬಹುಮಾನ, ಲೇಖಕಿಯರ ಸಂಘದ ತ್ರಿವೇಣಿ ಸಾಹಿತ್ಯ ಪುರಸ್ಕಾರ, ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ, ಸುಧಾ ಮೂರ್ತಿ ದತ್ತಿ ನಿಧಿ ಪ್ರಶಸ್ತಿ, ಜಾಗತಿಕ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳ ಜೊತೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವೂ 2019ರಲ್ಲಿ ಲಭಿಸಿದೆ.
ಇದನ್ನೂ ಓದಿ : New Books : ಅಚ್ಚಿಗೂ ಮೊದಲು ; ಸದ್ಯದಲ್ಲೇ ದೀಪಾ ಫಡ್ಕೆಯವರ ‘ಮುಂದಣ ಹೆಜ್ಜೆ’, ‘ಓದಿನ ಮನೆ’ ಕೃತಿಗಳು ನಿಮ್ಮ ಓದಿಗೆ
Published On - 5:10 pm, Sat, 22 January 22