New Books : ಅಚ್ಚಿಗೂ ಮೊದಲು ; ಸದ್ಯದಲ್ಲೇ ದೀಪಾ ಫಡ್ಕೆಯವರ ‘ಮುಂದಣ ಹೆಜ್ಜೆ’, ‘ಓದಿನ ಮನೆ’ ಕೃತಿಗಳು ನಿಮ್ಮ ಓದಿಗೆ

Short Stories : ‘ನನ್ನ ಕಲ್ಪನೆಯ ಊರು ಮಂಜಾಡಿಯಲ್ಲಿ ಗಿರಿಜೆಯರು ಅವರಿಷ್ಟದಂತೇ ಪ್ರೀತಿಸಬಲ್ಲರು. ಪಾರೋತಿಯರು ನಿರ್ಧಾರ ಮಾಡಬಲ್ಲರು. ಚಂದ್ರಭಾಗಾಳಂತಹ ಗಟ್ಟಿ ಗುಂಡಿಗೆಯ ಹೆಣ್ಣುಮಗಳು ವಠಾರದ ಉದಾಸೀನತೆಗೆ ಸಡ್ಡು ಹೊಡೆದೂ ಬದುಕಬಲ್ಲರು. ಇನ್ನು ಅತ್ಯಂತ ದುಃಖದಿಂದ ನಾನು ಆಗಾಗ ನೆನಪಿಸಿಕೊಳ್ಳುವ ಸಂದೀಪ ಪಾಠಣಕರನೂ ಇದೇ ಊರಿನವ’ ದೀಪಾ ಫಡ್ಕೆ

New Books : ಅಚ್ಚಿಗೂ ಮೊದಲು ; ಸದ್ಯದಲ್ಲೇ ದೀಪಾ ಫಡ್ಕೆಯವರ ‘ಮುಂದಣ ಹೆಜ್ಜೆ’, ‘ಓದಿನ ಮನೆ’ ಕೃತಿಗಳು ನಿಮ್ಮ ಓದಿಗೆ
ಲೇಖಕಿ ದೀಪಾ ಫಡ್ಕೆ
Follow us
ಶ್ರೀದೇವಿ ಕಳಸದ
|

Updated on: Jan 21, 2022 | 11:16 AM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

*

ಕೃತಿ : ಮುಂದಣ ಹೆಜ್ಜೆ (ಕಥಾ ಸಂಕಲನ)

ಲೇ: ದೀಪಾ ಫಡ್ಕೆ

ಪುಟ : 106

ಬೆಲೆ: ರೂ. 100

ಮುಖಪುಟ ವಿನ್ಯಾಸ : ಅಪಾರ

ಪ್ರಕಾಶನ : ಸಾಹಿತ್ಯ ಸಾಧನ ಬೆಂಗಳೂರು

*

ಈ ಹನ್ನೊಂದು ಕಥೆಗಳು ಹೇಳುವುದು ನೂರೊಂದು ಬದುಕಿನ ಕಥೆಗಳನ್ನು, ಮುಖ್ಯವಾಗಿ ಹೆಣ್ಣಿನ ಎದೆಯ ಭಾವನೆ-ಬವಣೆಯನ್ನು ನೋವು-ನಲಿವನ್ನು, ತವಕ-ತಲ್ಲಣವನ್ನು. ಹೆಣ್ಣಿನ ಒಡಲಾಳವನ್ನು ದಕ್ಷಿಣ ಕನ್ನಡಕ್ಕೇ ವಿಶಿಷ್ಟವಾದ ಭಾಷೆಯಲ್ಲಿ ದೀಪಾ ಹೇಳುವ ಪರಿ ಆಕರ್ಷಕ ಹಾಗೂ ಪ್ರಭಾವಶಾಲಿ. ಪೋಷಕಪಾತ್ರಗಳಾಗಿ ಕಾಣಿಸಿಕೊಳ್ಳುವ ಇಲ್ಲಿನ ಬಹುತೇಕ ಪುರುಷಪಾತ್ರಗಳು ಕಥೆಗಾರ್ತಿ ತಮಗೆ ನೀಡುವ ಸೀಮಿತ ಆದರೆ ಮುಖ್ಯ ಜವಾಬ್ದಾರಿಗಳನ್ನು ಹೆಚ್ಚು ಸದ್ದುಗದ್ದಲವಿಲ್ಲದೇ ಅರ್ಥಪೂರ್ಣವಾಗಿ ನಿರ್ವಹಿಸಿ ದೂರ ನಿಂತುಬಿಡುತ್ತವೆ. ವಸ್ತುವಿಷಯದ ಆಯ್ಕೆಯಲ್ಲಿನ ಜಾಣ್ಮೆ, ಭಾಷೆಯ ಬಳಕೆಯಲ್ಲಿನ ನೈಪುಣ್ಯ, ಹಾಗೂ ನಿರೂಪಣೆಯ ಕೌಶಲಗಳಿಂದಾಗಿ ದೀಪಾರ ಕಥೆಗಳ ಹೆಚ್ಚಿನ ಸನ್ನಿವೇಶಗಳು ಓದುಗರ ಮನಸ್ಸಿನಲ್ಲಿ ದೃಶ್ಯಕಾವ್ಯಗಳ ರೂಪ ಪಡೆದುಕೊಳ್ಳುವುದು ಗಮನಿಸಬೇಕಾದ ಅಂಶ. ಈ ಎಲ್ಲಾ ಅರ್ಥಗಳಲ್ಲಿ ಬಹುಮುಖ ಪ್ರತಿಭೆಯ ದೀಪಾ ಫಡ್ಕೆಯವರ ಈ ಸೃಜನಶೀಲ ಅಭಿವ್ಯಕ್ತಿ ಕನ್ನಡ ಕಥಾಲೋಕಕ್ಕೊಂದು ಹೊಸ ನೀರು.

ಪ್ರೇಮಶೇಖರ, ಲೇಖಕರು

ಮದುವೆ ಎನ್ನುವ ಸಾಮಾಜಿಕ ವ್ಯವಸ್ಥೆಯಲ್ಲಿ ರೂಪುಗೊಂಡ ದಾಂಪತ್ಯದಲ್ಲಿ ನಿಧಾನಕ್ಕೆ ಕಾಣಿಸಿಕೊಳ್ಳುವ ಏಕತಾನತೆ, ಅದರಿಂದಾಗಿ ಉಂಟಾಗುವ ಬಿರುಕು ಹಾಗೂ ಅದನ್ನು ಮೀರುವ ಹಂಬಲದಲ್ಲಿ ಉಂಟಾಗುವ ತಳಮಳ ಕೂಡುಕುಟುಂಬದಲ್ಲಿ ಬದುಕುವ ಹೆಣ್ಣು ಎದುರಿಸುವ ಸಮಸ್ಯೆಗಳು ಮೊದಲಾದವನ್ನು ಆಧುನಿಕ ಕಾಲದಲ್ಲಿ ನಿಂತು, ಗುರುತಿಸುವ, ಆಗ ದಕ್ಕುವ ಅನುಭವವನ್ನು ಶೋಧಿಸುವ ಯತ್ನವನ್ನು ಈ ಕಥೆಗಳು ಮಾಡುತ್ತವೆ. ಅಂದರೆ, ಈ ಕಥೆಗಳು ಬಹುತೇಕವಾಗಿ ಸ್ತ್ರೀಲೋಕದ ಒಳಮನಸ್ಸಿನ ಆಸೆ ಆಕಾಂಕ್ಷೆಗಳಿಗೆ, ತಲ್ಲಣಗಳಿಗೆ ಅಕ್ಷರ ರೂಪವನ್ನು ಕೊಡುವ ಪ್ರಯತ್ನ ಮಾಡುತ್ತವೆ. ಮುಖ್ಯವಾಗಿ ಈ ಕಥೆಗಳೆಲ್ಲವೂ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ದಾಂಪತ್ಯದ ಸಾಂಪ್ರದಾಯಿಕ ವ್ಯಾಖ್ಯಾನದ ಬದಲು, ಅದರ ಮರುವ್ಯಾಖ್ಯಾನಕ್ಕೆ ತೊಡಗುವ ಅಥವಾ ಹೊಸದಾಗಿ ವ್ಯಾಖ್ಯಾನಿಸುವ ಪ್ರಯತ್ನವನ್ನು ಮಾಡುತ್ತವೆ. ಎಲ್ಲಿಯೂ ಆಕ್ರೋಶವಾಗಲೀ, ಭಾವೋದ್ವೇಗದ ಅಬ್ಬರವಾಗಲೀ ಇಲ್ಲದೆ, ನಿರ್ಮಮವಾಗಿ ಹಾಗೂ ಸಂಯಮಪೂರ್ಣವಾಗಿ ಈ ಕಥೆಗಳನ್ನು ನಿರೂಪಿಸಿದ ರೀತಿಯು ಗಮನಾರ್ಹವಾಗಿದೆ. ತಮ್ಮ ಮೊದಲ ಸಂಕಲನದಲ್ಲೇ ದೀಪಾ ಅವರು ಈ ಪ್ರಬುದ್ಧತೆಯನ್ನು ಸಾಧಿಸಿರುವುದು ಮೆಚ್ಚತಕ್ಕ ಅಂಶವಾಗಿದೆ.

ಸುಬ್ರಾಯ ಚೊಕ್ಕಾಡಿ, ಕವಿ

*

Acchigoo Modhalu excerpt of Mundana Hejje and Odina mane of Kannada Writer Deepa Phadke Published by Sahitya Sadhana Publications

ದೀಪಾ ಅವರ ಪ್ರಕಟಿತ ಕೃತಿಗಳು

ಕಥೆಯೊಂದು ಹೀಗೆಲ್ಲಾ ಕಣ್​ಬಿಡುತ್ತದೆ 

ಎಲ್ಲರದ್ದೂ ಕತೆಗಳೇ, ಎಲ್ಲವೂ ಕತೆಯೇ. ಕತೆಗೆ ಸಿಕ್ಕದ ಬದುಕಿಲ್ಲ. ಗಳಿಗೆಯೂ ಇಲ್ಲ. ಬರೆದುದನ್ನು ಒಂದಷ್ಟು ಜನ ಓದಿ ಮೆಚ್ಚಿಕೊಳ್ಳುವುದು ಒಂದು ಕತೆಯಾದರೆ, ಬರೆಯದೇ ಬಿಟ್ಟ ಕತೆಗಳ ಒದ್ದಾಟದ್ದೂ ದೊಡ್ಡ ಕಥಾಯಣ. ಒಮ್ಮೊಮ್ಮೆ ಬರವಣಿಗೆಗೂ ದಕ್ಕದೇ ಹೋಗುವ ಕತೆಗಳದ್ದು ಒಂದು ಪಾಡಾದರೆ ಬರವಣಿಗೆಗೆ ಸಿಕ್ಕಿ ನಲುಗಿ ಹೋಗುವ ಕತೆಗಳದ್ದೂ ಇನ್ನೊಂದು ಪಾಡು. ಪಾಡಂತೂ ತಪ್ಪಿಸುವಂತಿಲ್ಲ. ಕತೆಗಾರ್ತಿಯಾಗಬೇಕೆಂದು ಹೊರಟವಳೇ ಅಲ್ಲ. ಒಂದಷ್ಟು ಬರೆದೆ. ಮೊದಮೊದಲು ಪ್ರಕಟವಾಗುವಾಗ ಗಾಬರಿಯೂ ಆಗುವುದಿತ್ತು. ಈಗ ಬರೆಯುವುದೂ, ಪ್ರಕಟವಾದಾಗ ಸ್ವಲ್ಪ ಗಾಬರಿಯಾಗುವುದೂ ನಂತರ ಖುಷಿ ಪಡುವುದು ಅಭ್ಯಾಸವಾಗಿದೆ. ಹಾಗೆ ನೋಡಿದರೆ ಎಲ್ಲಾ ಅಭಿವ್ಯಕ್ತಿಯೂ ಕತೆಯೇ ಅಲ್ಲವೇ?

ಅಭಿವ್ಯಕ್ತಿ ಹುಟ್ಟುವುದು, ಚಿಗುರುವುದು, ಬೆಳೆಯುವುದು… ಹೀಗೆಲ್ಲಾ ಹಂತಗಳು ಇದೆಯೇ? ಹಾಗೆ ಅನಿಸುತ್ತಿಲ್ಲ. ಒಳಗಿನ ತಹತಹ ಅಕ್ಷರವಾಗಿಯೋ ಬಣ್ಣವಾಗಿಯೋ ರೇಖೆಯಾಗಿಯೋ ಅಭಿನಯವಾಗಿಯೋ ಪ್ರಕಟಗೊಳ್ಳುತ್ತದೆ ಅಷ್ಟೇ. ಕಣ್ಣಿಗೆ ಕಂಡ ದುಃಖ, ಉಮ್ಮಳಿಸಿದ ಶೋಕ, ಉಮ್ಮಳಿಸದೇ ಕಂಗೆಟ್ಟ ಸೋತ ಮುಖಗಳ ಹಾಡು ಪಾಡು, ಶೋಕ ಬಣ್ಣಗೆಟ್ಟು ರೋಷವಾದ ಹೊತ್ತಿನ ಸ್ಫೋಟ, ಹತಾಶೆ… ಎಲ್ಲದರ ಕಲಸುಮೇಲೋಗರ ಬದುಕು. ನಡುವೆ ಮಿಂಚಿನಂತೇ ಸುಳಿದು ಹೋಗುವ ಸುಖದ ತೆಳು ರೇಖೆಗಳಿಂದ ಕತೆಗಳು ಹುಟ್ಟತ್ತಲೇ ಇರುತ್ತವೆ, ಅಷ್ಟೇ ಸಹಜವಾಗಿ ಸಾಯುತ್ತಲೂ ಇರುತ್ತವೆ. ಇದರ ನಡುವೆ ಅಕ್ಷರದ ಜೊತೆಗೆ ನಂಟುಂಟಾದಾಗ ಈ ಕತೆಗಳು ಹೊರ ಜಗತ್ತಿಗೂ ಕಾಣಿಸಿಕೊಳ್ಳುತ್ತವೆ. ಪ್ರಕಟಗೊಳ್ಳುತ್ತವೆಯೇನೋ! ಹೀಗಾಗಿ ಪ್ರತೀ ಜೀವ ಪ್ರಕಟವಾಗಲು, ತನ್ನೊಳಗಿನ ಸುಖದುಃಖದ ತಲ್ಲಣಗಳಿಗೆ ರೂಪ ಕೊಡಲು ಕಾಯುತ್ತಿರುತ್ತೇನೋ! ಕತೆಗಳು ಬರೆಸಿಕೊಂಡಿದ್ದೂ ಹಾಗೇ ಏನೋ.

ಈ ಸಂಕಲನದ ಹೆಚ್ಚಿನ ಕತೆಗಳಲ್ಲಿ ಪ್ರಸ್ತಾಪವಾದ ‘ಮಂಜಾಡಿ’ ಎನ್ನುವ ಊರು ನನ್ನ ಕಲ್ಪನೆಯಲ್ಲಿ ಅರಳಿದ ಊರು. ಈ ಊರಿನಲ್ಲಿ ಗಿರಿಜೆಯರು ಅವರಿಷ್ಟದಂತೇ ಪ್ರೀತಿಸಬಲ್ಲರು. ಪಾರೋತಿಯರು ನಿರ್ಧಾರ ಮಾಡಬಲ್ಲರು. ಚಂದ್ರಭಾಗಾಳಂತಹ ಗಟ್ಟಿ ಗುಂಡಿಗೆಯ ಹೆಣ್ಣುಮಗಳು ವಠಾರದ ಉದಾಸೀನತೆಗೆ ಸಡ್ಡು ಹೊಡೆದೂ ಬದುಕಬಲ್ಲರು. ನಾನು ಅತ್ಯಂತ ದುಃಖದಿಂದ ಆಗಾಗ ನೆನಪಿಸಿಕೊಳ್ಳುವ ಸಂದೀಪ ಪಾಠಣಕರನ ಊರೂ ಇದು ಹೌದು. ಒಟ್ಟಿನಲ್ಲಿ ‘ಮಂಜಾಡಿ’ ನಾನು ಕಲ್ಪನೆಯಲ್ಲಿ ಸದಾ ವಿಹರಿಸುವ ಊರು. ಇಲ್ಲಿ ಸೃಷ್ಟಿಯಾದ ಕತೆಗಳು ಭಾರೀ ಅಂತಲೋ ಪರಿಪೂರ್ಣ ಅಂತಲೋ ತೋರಲ್ಲ. ಮೊದಲಿಗೆ ಪರಿಪೂರ್ಣ ಅನ್ನೋದೇ ಏನೆಂದು ಗೊತ್ತಿಲ್ಲದ ಕಾರಣ ಅದರ ಬಗ್ಗೆ ಅಂಥ ಚಿಂತೆ ಇಲ್ಲ. ಈ ಕತೆಗಳು ಕೆಲವೊಂದು ಅವಸ್ಥೆಗಳಲ್ಲಿ ಇರುವ ಕತೆಗಳು. ಆ ಅವಸ್ಥೆಗಳು ಆಯಾ ಕಾಲದ ವ್ಯವಸ್ಥೆಗಳೂ ಆಗಿದ್ದವು ಎಂದರೆ ನಂಬಲೇಬೇಕು. ಈ ಕತೆಗಳು ಓದಿಸಿಕೊಂಡು ಹೋಗಿ ನಿಮ್ಮನ್ನೂ ಮುಟ್ಟಿದರೆ ಸಂತೋಷ.

ದೀಪಾ ಫಡ್ಕೆ, ಲೇಖಕಿ

*

ಕೃತಿ: ಓದಿನ ಮನೆ (ಅಂಕಣ ಬರಹ)

ಲೇ: ದೀಪಾ ಫಡ್ಕೆ

ಪುಟ : 168

ಬೆಲೆ: ರೂ. 150

ಮುಖಪುಟ ವಿನ್ಯಾಸ : ಅಪಾರ

ಪ್ರಕಾಶನ : ಸಾಹಿತ್ಯ ಸಾಧನ, ಬೆಂಗಳೂರು

ಈ ರೀತಿಯ ವಿಮರ್ಶಾ ಮಾರ್ಗ ಕನ್ನಡಕ್ಕೆ ಅಗತ್ಯವಿದೆ. ಒಂದು ಪುಸ್ತಕ ಹೀಗೆಯೇ ಇರಬೇಕು ಎನ್ನುವ ಸ್ಥಾಪಿತ ಸಿದ್ಧಾಂತದ ಮೂಲಕ ನೋಡುವ ವಿಮರ್ಶಾ ಕ್ರಮಕ್ಕಿಂತ ಭಿನ್ನವಾದ ಕ್ರಮವಿದು. ಒಂದು ಪುಸ್ತಕ ಹೇಗಿದೆಯೋ ಹಾಗೆಯೇ ಅದನ್ನು ಸ್ವೀಕರಿಸುವುದು ಇಲ್ಲಿ ಕಾಣಿಸುವ ‘ಓದುಗ ದೃಷ್ಟಿ’. ಆ ಮೂಲಕ ಪುಸ್ತಕ ಹೇಗಿದ್ದರೆ ಓದುಗರ ಅನುಭವದೊಂದಿಗೆ ಒಂದಾಗಿ ಬೆಳೆಯುತ್ತದೆ ಎನ್ನುವುದನ್ನು ಹೇಳುವ ಮೂಲಕ ದೀಪಾ ಅವರು ಲೇಖಕರಿಗೆ ಹೆಚ್ಚು ಸಾಧ್ಯತೆಗಳನ್ನು ತೆರೆದಿಡುತ್ತಾರೆ. ತಾನು ಓದುವ ಲೇಖಕ/ಲೇಖಿಕೆಯರ ಸ್ವಾತಂತ್ರ್ಯವನ್ನು ರಕ್ಷಿಸುವುದರಲ್ಲಿ ದೀಪಾ ಅವರದು ಎತ್ತಿದ ಕೈ. ಆದ್ದರಿಂದ ದೀಪಾ ಅವರ ಬರೆಹಗಳನ್ನು ಸಮಾಜಮುಖಿ ಎನ್ನುವುದಕ್ಕಿಂತ ಜೀವನ್ಮುಖಿ ಎನ್ನುವುದು ನನಗೆ ಪ್ರಿಯವೆನಿಸುತ್ತದೆ. ಸಾಕ್ಷಿ ಬೇಕಾದರೆ ‘ನೆನಪೇ ಸಂಗೀತ’ದ ಬಗ್ಗೆ ಬರೆಯುತ್ತಾ, ‘ದಾಂಪತ್ಯ ಮತ್ತು ಸನ್ಯಾಸ’ ಎರಡೂ ವ್ಯಕ್ತಿ ತನ್ನ ವೈಯಕ್ತಿಕ ಗುರುತನ್ನು ಕಳೆದುಕೊಳ್ಳುವ ಸುಂದರವಾದ ದಾರಿಗಳು” ಎಂಬ ಮಾತನ್ನು ಗಮನಿಸಿ.

ಅರವಿಂದ ಚೊಕ್ಕಾಡಿ, ಲೇಖಕ

*

ಪುಸ್ತಕಗಳಿಗಾಗಿ ಸಂಪರ್ಕಿಸಿ : 9480088960

*

ಡಾ. ದೀಪಾ ಫಡ್ಕೆ : ಬೆಂಗಳೂರಿನಲ್ಲಿ ನೆಲೆಸಿರುವ ಇವರು ಮೂಲತಃ ದಕ್ಷಿಣ ಕನ್ನಡದ ಬೆಳ್ತಂಗಡಿಯವರು. ಉಜಿರೆಯಲ್ಲಿ ಪದವಿ, ಮೈಸೂರು ಮುಕ್ತ ವಿವಿಯಲ್ಲಿ ಕನ್ನಡ ಎಂ.ಎ., ಮೈಸೂರು ವಿವಿ ಮೂಲಕ ‘ಪುರಂದರ ಕನಕರ ಕೀರ್ತನೆ ಗಳಲ್ಲಿ ಅಭಿವ್ಯಕ್ತಿ : ಮನೋವೈಜ್ಞಾನಿಕ ಅಧ್ಯಯನ’ ವಿಷಯದಲ್ಲಿ ಪಿಎಚ್​.ಡಿ. ‘ಋತ’, ‘ಹರಪನಹಳ್ಳಿ ಭೀಮವ್ವ’, ‘ಡಾ. ಪ್ರದೀಪಕುಮಾರ್ ಹೆಬ್ರಿ-ಮಹಾಕಾವ್ಯಗಳ ಕವಿ’ ಹಾಗೂ ’ಲೋಕಸಂವಾದಿ’ (ಮೊಗಸಾಲೆಯವರ ಬದುಕು ಬರಹಗಳ ಕುರಿತು), ನಾಡಿಗೆ ನಮಸ್ಕಾರ ಮಾಲೆಗಾಗಿ ಈ ಕೃತಿಯಲ್ಲದೆ ಸುಬ್ರಾಯ ಚೊಕ್ಕಾಡಿಯವರ ಕುರಿತು ಹಾಗೂ ಶಿಕ್ಷಣ ತಜ್ಞ ಡಾ. ಚಂದ್ರಶೇಖರ ದಾಮ್ಲೆ ಅವರ ಕುರಿತು ಕೃತಿಗಳನ್ನು ಬರೆದಿದ್ದಾರೆ. ಅನುಪಮಾ ನಿರಂಜನ ಕಥಾ ಸ್ಪರ್ಧೆಯ ಬಹುಮಾನ ಲಭಿಸಿದೆ.

*

ದೀಪಾ ಫಡ್ಕೆ ಬರಹ : Ramanavami : ಕೃಷ್ಣ ದಕ್ಕಿದಂತೇ ರಾಮ ದಕ್ಕಲಾರ

ಇದನ್ನೂ ಓದಿ : Poetry : ಅಚ್ಚಿಗೂ ಮೊದಲು ; ‘ಪೂರ್ಣಚಂದ್ರನಿಗೆ ಮುಖವಾಡವಿಲ್ಲ’ ಮತ್ತು ‘ಬಣ್ಣಗಳು ಮಾತಾಡಲಿ’ ಕವನ ಸಂಕಲನಗಳು ಸದ್ಯದಲ್ಲೇ ಓದಿಗೆ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್