ಭಾಷಾ ಪ್ರೇಮಕ್ಕೆ ಮುನ್ನುಡಿ ಬರೆದ ಕನ್ನಡ ಕ್ಯಾಲೆಂಡರ್; ಇದು ಕನ್ನಡಿಗರ ಹೆಮ್ಮೆ!

ಭಾಷಾ ಪ್ರೇಮಕ್ಕೆ ಮುನ್ನುಡಿ ಬರೆದ ಕನ್ನಡ ಕ್ಯಾಲೆಂಡರ್; ಇದು ಕನ್ನಡಿಗರ ಹೆಮ್ಮೆ!
ಕನ್ನಡ ಕ್ಯಾಲೆಂಡರ್

ನಾನು ಮಾರುಕಟ್ಟೆಗೆ ಹೋಗಿ ಕನ್ನಡ ಅಂಕಿಗಳ ಕ್ಯಾಲೆಂಡರ್​ ಹುಡುಕಿದಾಗ ನನಗೆ ಸಿಗಲಿಲ್ಲ. ಬೆಂಗಳೂರಿನಲ್ಲಿಯೇ ರೋಮನ್​, ಹಿಂದಿ, ಮರಾಠಿ ಭಾಷೆಯ ಕ್ಯಾಲೆಂಡರ್​ ಸಿಗುವಾಗ ಕನ್ನಡದ ಕ್ಯಾಲೆಂಡರ್​ ಯಾಕೆ ಇಲ್ಲ ಎಂದು ಯೋಚಿಸಿದಾಗ ಆರಂಭವಾಗಿದ್ದು ‘ಕನ್ನಡ ನಾಳುತೋರುಗೆ’

Preethi Shettigar

| Edited By: preethi shettigar

Jan 21, 2022 | 5:07 PM

ಕನ್ನಡ ಎನ್ನುವ ಮೂರಕ್ಷರದ ಪದವೇ ಹಾಗೆ, ಎಲ್ಲರನ್ನೂ ತನ್ನತ್ತ ಬರಮಾಡಿಕೊಳ್ಳುತ್ತದೆ ಮತ್ತು ಎರಡೂ ಕೈಗಳಿಂದ ಬಿಗಿದಪ್ಪಿ ಮುನ್ನಡೆಸುತ್ತದೆ. ಇದಕ್ಕೇ ಏನೋ ಅನೇಕರು ತಮ್ಮೂರನ್ನು ಬಿಟ್ಟು ಕನ್ನಡದ ನೆಲ, ಜಲ, ಗಾಳಿಗೆ ಹೊಂದಿಕೊಂಡು ಇಲ್ಲಿಯೇ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಪ್ರತಿಯೊಬ್ಬ ಕನ್ನಡಿಗನ ಆಶಯ ಒಂದೇ. ಇಂಗ್ಲಿಷ್​, ಹಿಂದಿ ಇನ್ನಿತರ ಭಾಷೆಗೆ ಸಿಗುವ ಪ್ರಾಮುಖ್ಯತೆ ಕನ್ನಡಕ್ಕೂ ಸಿಗಬೇಕು. ಕನ್ನಡ ಎಂಬುದು ಎಂದಿಗೂ ಆರದ ದೀಪವಾಗಿರಬೇಕು. ಇಂತಹದ್ದೇ ಆಶಯದೊಂದಿಗೆ ಜೀವನ ನಡೆಸುತ್ತಿರುವವರು ವೆಬ್ ಡೆವಲಪರ್  ಶ್ರೀಪತಿ ಗೋಗಡಿಗೆ (Shreepti gogadige). ಸದ್ಯ ಅವರು ಕನ್ನಡ (Kannada) ಕೇವಲ ಮಾತಿಗಷ್ಟೇ ಸೀಮಿತವಾಗಿದ್ದರೆ ಸಾಲದು ಅದು ಪ್ರಸ್ತುತಿಗೂ ಬರಬೇಕು ಎಂಬ ನಾಣ್ಣುಡಿಯೊಂದಿಗೆ ನೂತನ ನಿರ್ಧಾರಕ್ಕೆ ಸಾಕ್ಷಿಯಾಗಿದ್ದಾರೆ. ಕನ್ನಡ ಪತ್ರಿಕೆ ಪ್ರತಿನಿತ್ಯ ಬಂದರೆ ಸಾಲದು ಅದರ ಜತೆಗೆ ಮನೆಯಲ್ಲಿ ಸದಾ ಕಾಲ ಗೊಡೆಗೆ ನೇತುಬಿದ್ದಿರುವ ಕ್ಯಾಲೆಂಡರ್​ನಲ್ಲೂ ಕನ್ನಡ ಬೇಕು ಎಂಬ ಮುನ್ನುಡಿ ಬರೆದಿದ್ದಾರೆ. ಕನ್ನಡ ನಾಳುತೋರುಗೆ ಎಂಬ ಅಚ್ಚ ಕನ್ನಡದ ಕ್ಯಾಲೆಂಡರ್ (kannada calendar)​ ಮಾರುಕಟ್ಟೆಗೆ ದಾಪುಗಾಲಿಟ್ಟಿದ್ದು, ಕನ್ನಡ ಪ್ರೇಮಿ ಶ್ರೀಪತಿ ಗೋಗಡಿಗೆ ಟಿವಿ9 ಡಿಜಿಟಲ್​ ಜತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅವರದೇ ಮಾತುಗಳಲ್ಲಿ ಅವರ ಆಶಯ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

ನಾನು ಬಾಲಕನಾಗಿದ್ದಾಗ ಪ್ರತಿಷ್ಠಿತ ಕನ್ನಡ ಕ್ಯಾಲೆಂಡರ್​ ಬರುತ್ತಿತ್ತು. ಆದರೆ ಇತ್ತೀಚೆಗೆ ನಾನು ಮಾರುಕಟ್ಟೆಗೆ ಹೋಗಿ ಕನ್ನಡ ಅಂಕಿಗಳ ಕ್ಯಾಲೆಂಡರ್​ ಹುಡುಕಿದಾಗ ನನಗೆ ಸಿಗಲಿಲ್ಲ. ಬೆಂಗಳೂರಿನಲ್ಲಿಯೇ ರೋಮನ್​, ಹಿಂದಿ, ಮರಾಠಿ ಭಾಷೆಯ ಕ್ಯಾಲೆಂಡರ್​ ಸಿಗುವಾಗ ಕನ್ನಡದ ಕ್ಯಾಲೆಂಡರ್​ ಯಾಕೆ ಇಲ್ಲ ಎನ್ನುವುದೇ ನನ್ನ ಮೊದಲ ಪ್ರಶ್ನೆಯಾಗಿತ್ತು. ಕನ್ನಡಿಗನಾಗಿ ನನಗೆ ಅಂದು ಅವಮಾನ ಆಗಿತ್ತು. ಹೀಗಾಗಿ ಕನ್ನಡ ಭಾಷೆಯಲ್ಲಿಯೇ ಕ್ಯಾಲೆಂಡರ್​ ತರುವುದಕ್ಕೆ ಮುಂದಾದೆ.

‘ನಾಳು’ ಎಂದರೆ ದಿನ ಎಂದು ಅರ್ಥ. ಇದು  ಅಪ್ಪಟ ಕನ್ನಡ ಪದ. ‘ತೋರುಗೆ’ ಎಂದರೆ ತೋರಿಸು ಎಂದರ್ಥ. ಹೀಗಾಗಿ ‘ಕನ್ನಡ ನಾಳು ತೋರುಗೆ’ ಎಂದು ಈ ಕ್ಯಾಲೆಂಡರ್​ಗೆ ಹೆಸರಿಡಲಾಗಿದೆ. ಮನೆಯಲ್ಲಿ ನಾವು ದಿನನಿತ್ಯದ ಕೆಲಸಗಳಿಗಾಗಿ ಅಥವಾ ಯಾವುದೋ ನಮ್ಮ ಮುಖ್ಯಕಾರ್ಯಗಳ ಬಗ್ಗೆ ಸದಾ ನೆನಪಲ್ಲಿ ಇಡಲು ಕ್ಯಾಲೆಂಡರ್​ ಮೇಲೆ ಬರೆದಿಡುವ ಅಭ್ಯಾಸ ಇದೆ. ಹೀಗಾಗಿ ಬರೀ ಕನ್ನಡ ಕ್ಯಾಲೆಂಡರ್​ ತರುವುದಷ್ಟೇ ಅಲ್ಲ ನಮ್ಮವರ ಮನಸ್ಥಿತಿಗೆ ಹೊಂದಿಕೊಳ್ಳುವಂತೆ ಇದು ಆರಂಭವಾಗಬೇಕು ಎಂಬುವುದಕ್ಕೆ ಪ್ರತಿ ತಿಂಗಳ ಕ್ಯಾಲೆಂಡರ್​ ಪುಟದಲ್ಲೂ ಏನಾದರೂ ಬರೆದಿಟ್ಟುಕೊಳ್ಳುವ ಎಡೆ ಎಂದು ಮಾಡಿದ್ದೇವೆ. ಇದು ಕೂಡ ಎಲ್ಲರಿಗೆ ಇಷ್ಟವಾಗಿದೆ.

ಈ ಕ್ಯಾಲೆಂಡರ್​ನ ಮತ್ತೊಂದು ಮುಖ್ಯ ವೈಶಿಷ್ಟ್ಯ ಎಂದರೆ ಪ್ರತಿ ತಿಂಗಳ ಪುಟದಲ್ಲೂ ಕವಿ, ವಿಜ್ಞಾನಿ, ಇನ್ನಿತರ ಪ್ರಮುಖ ಕನ್ನಡಿಗರ ಫೋಟೋಗಳು ಇವೆ. ಅಂದರೆ ಆಯಾ ತಿಂಗಳಲ್ಲಿ ಯಾವ ಪ್ರಮುಖ ವ್ಯಕ್ತಿಗಳ ಹುಟ್ಟುಹಬ್ಬ ಇದೆಯೋ ಅವರ ಫೋಟೋಗಳನ್ನು ಇಲ್ಲಿ ಹಾಕಲಾಗಿದೆ. ಕನ್ನಡ ಅಥವಾ ಕರ್ನಾಟಕಕ್ಕೆ ಸಂಬಂಧಿಸಿದ ವಿಶೇಷತೆಗಳ ಬಗ್ಗೆಯೂ ಆಯಾ ತಿಂಗಳಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇವೆ. ಉದಾಹರಣೆಗೆ ದಸರಾ, ರಾಜ್​ಕುಮಾರ್​ ಹುಟ್ಟುಹಬ್ಬ, ಪಂಪ ಕವಿಯ ಹುಟ್ಟುಹಬ್ಬ ಇತ್ಯಾದಿ.

hindi calender

ಹಿಂದಿ ಅಂಕಿಗಳ ಕ್ಯಾಲೆಂಡರ್​ಗಳು

ಕನ್ನಡದಲ್ಲಿ ವಾರಗಳ ಹೆಸರು ಈಗ ವಾರಕ್ಕೆ ಏಳು ದಿನ ಎಂದು ಇರುವ ಪದ್ದತಿ ಭಾರತದ ವ್ಯಾಖ್ಯಾನ ಅಲ್ಲ. ಗ್ರೆಗೋರಿಯನ್​ ಕ್ಯಾಲೆಂಡರ್​ ಎನ್ನುತ್ತೇವೆ. ಇದು ಪಾಶ್ಚಿಮಾತ್ಯರಿಂದ ಬಂದಿದೆ. ಇದು ಮೊದಲು ಭಾರತಕ್ಕೆ ಬಂದಾಗ ಒಂದೊಂದು ದಿನಕ್ಕೆ ಒಂದೊಂದು  ಗ್ರಹಗಳ ಹೆಸರು ಕೊಟ್ಟರು. ಆದರೆ ಇದರಲ್ಲಿ ಕೆಲವೊಂದು ಗ್ರಹಗಳು ನೇರವಾಗಿ ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಹೀಗಾಗಿ ಬೇರೆ ಕನ್ನಡ ಪದಗಳ ಬಳಕೆ ಮಾಡಿದ್ದೇವೆ. ಅಂದರೆ ನೇಸರ ಅಂದರೆ ಸೂರ್ಯನನ್ನು ಪ್ರತಿನಿಧಿಸುವ ಕನ್ನಡ ಪದ ಹೀಗಾಗಿ ಭಾನುವಾರ ಬದಲಿಗೆ ನೇಸರ, ತಿಂಗಳ ಅಂದರೆ ಚಂದ್ರ ಹೀಗಾಗಿ ಸೋಮವಾರಕ್ಕೆ ಚಂದ್ರ, ನೆಲ ಎನ್ನುವುದು ನಮ್ಮ ಭೂಮಿಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಮಂಗಳವಾರಕ್ಕೆ ನೆಲ, ನಡು ಎಂದರೆ ಮಧ್ಯ ಎನ್ನುವುದು ಬುಧವಾರ ಜಾಗಕ್ಕೆ ಹಾಕಲಾಗಿದೆ. ಗಾಳಿ ಪ್ರತಿಯೊಬ್ಬರಿಗೂ ಅವಶ್ಯಕ ಇದನ್ನು ಗುರುವಾರದ ಸ್ಥಾನಕ್ಕೆ ತರಲಾಗಿದೆ. ಕಡಲ ಎಂದರೆ ನೀರು ಎಂಬರ್ಥ ಶುಕ್ರವಾರವನ್ನು ಪ್ರತಿನಿಧಿಸುತ್ತದೆ. ಕಡೆ ಎಂದರೆ ಕೊನೆಯ ದಿನ ಎನ್ನುವುದನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಶನಿವಾರವನ್ನು ಕಡೆ ಎಂದು ಕರೆಯಲಾಗಿದೆ.

ಕವಿಗಳ ಆಶಯವನ್ನು ಕೂಡ ಪ್ರತಿ ತಿಂಗಳ ಪುಟಗಳಲ್ಲಿ ಪ್ರಸ್ತುತ ಪಡಿಸಲಾಗಿದೆ. ಜನವರಿ ತಿಂಗಳಲ್ಲಿ ‘ಮನುಜ ಕುಲಂ ತಾನೊಂದೆ ವಲಂ’ ಎಂಬ ಪಂಪ ಕವಿಯ ಆಶಯ ಅಥವಾ ಬರವಣಿಗೆಯನ್ನು ಹಾಕಲಾಗಿದೆ. ಹೀಗೆ ವಿವಿಧ ಕವಿಗಳ ಬರವಣಿಗೆ ಕ್ಯಾಲೆಂಡರ್​ನಲ್ಲಿ ಇದೆ. ಕುವೆಂಪು, ಬಸವಣ್ಣ, ಪೂರ್ಣಚಂದ್ರ ತೇಜಸ್ವಿ ಇನ್ನಿತರ ಪ್ರಮುಖರ ನುಡಿಗಳು ಇಲ್ಲಿವೆ. ಕನ್ನಡ ಅಥವಾ ಕನ್ನಡಿಗರ ಹಿನ್ನಡವಳಿ ಎನ್ನುವ ಮತ್ತೊಂದು ವಿಶೇಷ ವಿಷಯ ಇಲ್ಲಿ ಪ್ರಸ್ತಾಪಿಸಲಾಗಿದೆ. ಹಿನ್ನಡವಳಿ ಎಂದರೆ ಇತಿಹಾಸ ಎನ್ನುವ ಅರ್ಥ ಬರುತ್ತದೆ. ಕನ್ನಡ ಇತಿಹಾಸವನ್ನು ಇಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ.

shreepati gogadi

ಶ್ರೀಪತಿ ಗೋಗಡಿಗೆ

ತಿಂಗಳ ವಿವರಣೆ ಪಿಸುಮಾತು ಎಂಟರ್​ಪ್ರೈಸಸ್​ ಸಂಸ್ಥೆಯ ಮೂಲಕ ನೂತನ ಪ್ರಯತ್ನ ಮಾಡಲಾಗಿದೆ. ಪ್ರತಿ ತಿಂಗಳ ವಾಸ್ತವ ಸ್ಥಿತಿಯ ಬಗ್ಗೆ ವಿವರಣೆ ನೀಡುವ ಪ್ರಯತ್ನ ನಮ್ಮದಾಗಿದೆ. ಅಂದರೆ ಜನವರಿಯನ್ನು ನಾಲ್ಚಳಿ ತಿಂಗಳು, ಫೆಬ್ರವರಿ- ಅಯ್ಚಳಿ, ಮಾರ್ಚ್- ಮೊಬ್ಬೇಸಿಗೆ ತಿಂಗಳು​, ಎಪ್ರಿಲ್- ಇಬ್ಬೇಸಿಗೆ ತಿಂಗಳು, ಮೇ ಮುಬ್ಬೇಸಿಗೆ ತಿಂಗಳು, ಜೂನ್​- ಮೊಮ್ಮಳೆ ತಿಂಗಳು, ಜುಲೈ- ಇಮ್ಮಳೆ ತಿಂಗಳು, ಆಗಸ್ಟ್​-ಮುಮ್ಮಳೆ ತಿಂಗಳು, ಸೆಪ್ಟೆಂಬರ್​-ನಾಲ್ಮಳೆ, ಅಕ್ಟೋಬರ್​-ಮೊಚ್ಚಳಿ ತಿಂಗಳು, ನವೆಂಬರ್​- ಇಚ್ಚಳಿ ತಿಂಗಳು, ಡಿಸೆಂಬರ್​- ಮುಚ್ಚಳಿ ತಿಂಗಳು ಎಂದು ವಿವರಿಸಲಾಗಿದೆ. ಇನ್ನು ಅಮಾವಾಸ್ಯೆಗೆ ಕಾರಿರುಳು ಎಂದು, ಹುಣ್ಣಿಮೆಗೆ ಬೆಳಕಿರುಳು ಎಂದು ಅಚ್ಚ ಕನ್ನಡದ ಪದ ಬಳಕೆಯ ಮೂಲಕ ಜನರಲ್ಲಿ ಕನ್ನಡಾಭಿಮಾನವನ್ನು ಮತ್ತಷ್ಟು ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ ಎಂದು ಶ್ರೀಪತಿ ಗೋಗಡಿಗೆ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡ ನಾಳುತೋರುಗೆ ಕೊಳ್ಳಲು ಸಂಪರ್ಕಿಸಬೇಕಾದ ಜಾಲತಾಣ: https://pisumathu.com/calendar-2022

ಇದನ್ನೂ ಓದಿ: Book Release: ಉಪನ್ಯಾಸಕಿ ಶ್ರುತಿ ಜೈನ್ ಅಂತರಾಳದ ಮಾತು; ಇದು ಲೋಕಾರ್ಪಣೆಗೆ ಸಿದ್ಧವಾದ ಪ್ರೀತಿಯ ಝಿಪ್ಪಿ ಗ್ರಫಿ

ಕುಂದಾಪ್ರ ಕನ್ನಡ ನಿಘಂಟು: ಕುಂದಾಪುರ ಕನ್ನಡದ ಭಾಷಿ ಅಳಿಯದೆ ಉಳಿಯಲು ಒಂದು ಹೊಸ ಪ್ರಯತ್ನ

Follow us on

Related Stories

Most Read Stories

Click on your DTH Provider to Add TV9 Kannada