Literary Magazine : ‘ಅಕ್ಷರ ಸಂಗಾತ’ಕ್ಕೆ ನಾಲ್ಕು ತುಂಬಿದ ಹೊತ್ತಿನಲ್ಲಿ ಸುವರ್ಣಾ ಚೆಳ್ಳೂರರ ‘ಕಂಬದ ಹಕ್ಕಿ’ ನಿಮ್ಮ ಓದಿಗೆ
Kannada Writer : ‘ಮೂಲತಃ ನಮ್ಮದು ಕೃಷಿ ಕುಟುಂಬ. ಅಪ್ಪನಿಗೆ ಚೆಳ್ಳೂರಿನ ಗ್ರಂಥಾಲಯದಲ್ಲಿ ಕೆಲಸ. ಅವ್ವ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿ. ಅಪ್ಪ ಅವ್ವ ನಿರ್ವಹಿಸುತ್ತಿರುವ ಈ ಕೆಲಸಗಳಿಂದಾಗಿ ನನ್ನ ಅಣ್ಣ, ತಮ್ಮ, ಅಕ್ಕ ಮತ್ತು ನನಗೆ ಪುಸ್ತಕಗಳ ಒಡನಾಟ ದಕ್ಕಿತು. ಓದುತ್ತಾ ಕಥೆ, ಕವನ ಬರೆಯುತ್ತಾ ಇಂಗ್ಲಿಷ್ ಎಂ.ಎ ಮಾಡಿದೆ. ಈಗ ಪ್ರಾಧ್ಯಾಪಕಿಯಾಗಲು ತಯಾರಿ ನಡೆಸಿದ್ದೇನೆ.’ ಸುವರ್ಣಾ ಚೆಳ್ಳೂರು
Short Story Writer : ನಾನು ಬರೆದೆ ಅನ್ನೋದಕ್ಕಿಂತ ಆ ಕತೆ ನನ್ನನ್ನ ಇಡಿಯಾಗಿ ಕಾಡಿ ಬರೆಸಿಕೊಂಡಿತು. ಕತೆ ಹುಟ್ಟೋದಕ್ಕೆ ಮೊದಲ ಪ್ರೇರಣೆ ನಾ ಹುಟ್ಟಿ ಬೆಳೆದ ಬಯಲುಸೀಮೆಯ ಹಳ್ಳಿಗಳ ಬದುಕು ಮತ್ತವರ ಗಾಢವಾದ ನಂಬಿಕೆಗಳು. ಕೃಷಿಯೇ ಬದುಕಾಗಿರುವ ಬಯಲುಸೀಮೆಯ ನೀರಾವರಿ ಇರುವ ಈ ಹಳ್ಳಿಗಳಲ್ಲಿ ಹೊಲ, ಗದ್ದೆ, ಹಳ್ಳ, ಹಸಿರು, ಬೆವರಿಗಂಟಿ ಸಾಗುವ ಬದುಕಿನ ಜೊತೆ ನನ್ನ ಬಾಲ್ಯ ಸಾಗಿದ್ದರಿಂದ ಅವು ಸಹಜವಾಗಿ ಕತೆ ಬರೆಯೋದಕ್ಕೆ ಪ್ರೇರೆಪಿಸಿದವು. ಮತ್ತೆ ವಿಶೇಷವಾಗಿ ಇಲ್ಲಿನ ‘ಹೆಣ್ಣು ಬದುಕು’ ಅವರ ಬದುಕಿನ ಹಾದಿಗಳು, ಚೌಕಟ್ಟು, ಹೊಲಮನೆಯಲ್ಲಿ ಕಸುವಿಲ್ಲದೆ ದುಡಿಯುವ ಅವರ ಧೈರ್ಯ, ನಂಬಿಕೆಗಳಲ್ಲಿನ ಅವರ ಮುಗ್ಧ, ನಿಷ್ಠೆ ಎಲ್ಲವೂ ಈ ‘ಕಂಬದ ಹಕ್ಕಿ’ ಕಟ್ಟೋಕೆ ಸ್ಪೂರ್ತಿ ನೀಡಿದ ಅಡಿಗಲ್ಲುಗಳು. ‘ಕಂಬದ ಹಕ್ಕಿ’ಯ ರೂಪಕ ಸಿಕ್ಕಿದ್ದು ನನ್ನ ಮನೆಯಿಂದಲೇ. ಸಾಮಾನ್ಯವಾಗಿ ಹಳ್ಳಿಗಳಲ್ಲಿರುವ ಹಳೆಯ ಮನೆಗಳನ್ನು ಗಮನಿಸಿದರೆ ಅಲ್ಲಿ ತಲಬಾಗಲಿ ಎನ್ನುವ ಚಿಕ್ಕ ಚಿತ್ರಗಳ ಕುಸುರಿ ಕಲೆ ಇರುವ ವಿಶಾಲವಾದ ಬಾಗಿಲು, ಬಂಕ, ಕಂಬಗಳು, ದನದ ಕೊಟ್ಟಿಗೆ ಇದ್ದೇ ಇರುತ್ತವೆ. ಈ ರೀತಿಯ ಮನೆಯಲ್ಲಿ ನಾನು ಹುಟ್ಟಿ ಬೆಳೆದಿದ್ದರಿಂದ ಸಹಜವಾಗಿ ಈ ಕಂಬಗಳು ಕೂತೂಹಲ ಕೆಡವುತ್ತಿದ್ದವು. ಹೀಗೆ ಈ ರೂಪಕ ಚಿಕ್ಕಂದಿನಿಂದ ತಲೆಯಲ್ಲಿತ್ತು, ಈಗ ಅದೇ ಚಿತ್ರ ಈ ಕತೆಯಲ್ಲಿ ಮಾಯಿ ಪಾತ್ರಕ್ಕೆ ಜೀವ ತುಂಬಲು ಮುನ್ನುಡಿಯಾಯಿತು.
ಸುವರ್ಣಾ ಚೆಳ್ಳೂರು, ಲೇಖಕಿ (Suvarna Chelluru)
*
ಕೊಪ್ಪಳ ಜಿಲ್ಲೆ, ಕಾರಟಗಿ ತಾಲೂಕು, ಚೆಳ್ಳೂರಿನಲ್ಲಿ ವಾಸಿಸುತ್ತಿರುವ ಈ ಲೇಖಕಿ ‘ಅಕ್ಷರ ಸಂಗಾತ-2021’ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದ್ದರು. ಅವರ ಕಥೆ ‘ಕಂಬದ ಹಕ್ಕಿ’ಯ ಆಯ್ದ ಭಾಗ ನಿಮ್ಮ ಓದಿಗೆ.
*
ಮಾಯಿಯ ಊರು ಅಂತ ದೊಡ್ಡ ಹಳ್ಳಿ ಆಗಿರಲಿಲ್ಲ , ಯಾರಿಗೂ ಬೇಗ ಗುರುತು ಸಿಗದಂತ, ನಾಲ್ಕೈದು ಹಳ್ಳಿಗಳ ಸಾಲಿನ ಗುಂಟ ಹರಿದು ಹಾದು ಹೋಗುತ್ತಿದ್ದ ಹಳ್ಳದ ಆಚೆಗೆ ಇತ್ತು . ಆದರೆ ಮಾಯಿಯ ತಂದೆ ಸೀನಪ್ಪ ಹೊಲದ ಕೆಲಸಕ್ಕಾಗಿ ದೊಡ್ಡ ಹಳ್ಳಿ ಖ್ಖ್ಯಾಡೇವು ಬಿಟ್ಟು , ಖ್ಖ್ಯಾಡೇವು ಕ್ಯಾಂಪಿಗೆ ಬಂದು ಹೊಲಕ್ಕೆ ಸಮೀಪ ಇದ್ದ ಆ ಊರಲ್ಲೇ ಬದುಕು ಹೂಡಿದ್ದ. ಮಾಯಿಗೆ ಮನೆ, ಹೊಲ, ಹಳ್ಳ, ತೆನೆ ಎಂದರೆ ಎಲ್ಲಿಲ್ಲದ ಹುರುಪು. ಅದಕ್ಕೆ ಅವಳಿಗೆ ಶಾಲೆಯ ಹಾದಿ ಅಷ್ಟು ರುಚಿಸಿರಲಿಲ್ಲ. ಶಾಲೆಯಲ್ಲಿ ಕೂತಿದ್ದರೂ ಅವಳ ಮನಸ್ಸು ಹೊಲದಲ್ಲಿನ ಹಾರುವ ಹಕ್ಕಿಯಾಗಿರುತ್ತಿತ್ತು. ಶಾಲೆಯಲ್ಲಿ ಕೂರಿಸಿ ‘ಹಕ್ಕಿಹಾರುತಿದೆ ನೋಡಿದಿರಾ ?’ ಎಂಬ ಪದ್ಯ ಅವಳ ತಲೆಗೆ ತುಂಬುವಾಗೆಲ್ಲ ಮನಸ್ಸಿನೊಳಗೆ ಮಾಯಿ ಅಂದುಕೊಳ್ಳುತ್ತಿದ್ದಳು
‘ಈ ಸಾಲ್ಯಾಗ ಕುಂತು ಬುಕ್ಕಿನೊಳಗ ಹಾರಲಾರದ ಹಕ್ಕಿ ನೋಡಾದಕ್ಕಿನ, ನಮ್ಮೂರು ಹಳ್ಳದ ಬಗಲ ದೊಡ್ಡ ದೊಡ್ಡ ಗಿಡದಾಗ ಹಕ್ಕಿಗಳು ಎಷ್ಟ್ ಚೆಂದ ಹಾರ್ತಾವ, ಗೂಡುಕಟ್ಟಿ ಮರಿ ಎಬ್ಬಸ್ತಾವ ಹಳ್ಳದ್ ದಂಡಿಗೆ ಬಂದು ಹೆಂಗ್ ನೀರ ಕುಡದು ಸಣ್ಣ್ ಸಣ್ಣ್ ಉಳ ತಿಂತಾವ ಅನ್ನಾದು ಈ ಮಾಸ್ತರಿಗೆ ಒಂದ್ಸತಿ ತೊರುಸ್ಬೊಕು , ಈ ಬುಕ್ಕಿನೊಳಗಿರ ಹಕ್ಕಿಗಳಿಗೆ ಹಾರಾದು ಕಲುಸ್ಬೊಕು ‘ ಅಂದುಕೊಳ್ಳುತ್ತಿದ್ದಳು.
ಮನೆಯ ಮಾಳಿಗೆ ಮೇಲೆ ಕೂತು ಹಕ್ಕಿಗಳು ಹಾರೊದನ್ನ ನೋಡುತ್ತಾ ‘ಹಕ್ಕಿ ಹಾರುತಿದೆ ನೋಡಿದಿರಾ ?’ ಪದ್ಯವನ್ನ ಹಾರುವ ಹಕ್ಕಿಗಳಿಗೆ ಚೀರಿ ಹೇಳುತ್ತಿದ್ದಳು.
ಈ ಹಕ್ಕಿಗಳು ಹಾರುವ ಬಗೆ, ಬುಕ್ಕಿನಲ್ಲಿ ಅವು ಹಾರದೇ ಇರುವ ಬಗೆ, ಕಂಬದ ಹಕ್ಕಿ ಕಟ್ಟಿಗೆಯಾಗಿ ಕಂಬದ ತುದಿಯಲ್ಲಿ ಕುಳಿತಿರುವ ಬಗೆ ಅವಳಲ್ಲಿ ಹೊಸ ಗೊಂದಲವನ್ನೆ ಎಬ್ಬಿಸಿತ್ತು . ಒಮ್ಮೆ ಅಂಗಳದಲ್ಲಿ ಕಸ ಗೂಡಿಸುವಾಗ, ಎತ್ತಲೋ ಹೊರಟಿದ್ದ ಹಕ್ಕಿ ಸಾಲು ನೋಡಿ
‘ಯಮ್ಮ ಲೇ !…
ಯವ್ವಂಗೇ ಬಡಾssನ ಬಾ ಇಲ್ಲಿ …ಯಪಾss.. ಇಲ್ಲಿ ನೋಡು ಈಗಾ, ಬಡಾನ ನೋಡು ಎಂಥಪರಿ ಹಕ್ಕಿಗಳ್ದು ದೊಡ್ಡ್ ಸಾಲು ಹಾರಾಕುಂತೈತಿ’
ಅಂಗಳದ ಮುಂದಿನ ಕಟ್ಟಿ ಮೇಲಿದ್ದ ಕಂಬಕ್ಕೆ ಸೀನಪ್ಪ ಒರಗಿ ಕುಂತು ಹಗ್ಗದ ದಂಟು ಬಿಗಿ ಮಾಡ್ತಾ ಕೂತಿದ್ದ, ಮಗಳ ಮಾತು ಕೇಳಿ
‘ಅಲಂಗೇ ನಮ್ಮವ್ವ ಅವು ತಮ್ಮ ತಮ್ಮ ಮನಿಗೆ ತಾವು ಹಾರಿಕ್ಯಂತ ಹೊಂಟಾವ ಅದರಾಗೇನೈತಿ ಅಂಥಾದ್ದು ?’ ಅಂದ.
ಮಾಯಿ ಬಿರುಸಿನಿಂದ ಅಂಗಳದ ಕಸವನ್ನೆಲ್ಲಾ ಗೂಡಿಸಿ, ಚಳ್ಳ ಬಾರಿಗಿಯ ಹಿಂಬದಿಯನ್ನ ಗೊಡೆಗೊಮ್ಮೆ ಕುಕ್ಕಿ , ಅದನ್ನ ಅಂಗಳದಲ್ಲಿದ್ದ ಕಟ್ಟಿಗೆ ಕುಂಪಿಯೊಳಗೆ ಹಾಕಿ, ಕೈ ಮುಖ ತೊಳದು, ಓಡಿಬಂದು ಹಗ್ಗದ ದಂಟು ಹಿಡಿದು, ಕಟ್ಟಿ ಮೇಲೆ ಅಪ್ಪನೊಂದಿಗೆ ಕುಳಿತು ಮಾತಿಗಿಳಿದಳು.
‘ಯಪಾ .. ಹಕ್ಕಿ ಹಾರತಾವದಿಲ?’
‘ಹ್ಮೂಂ ನಂಗೆ ಹಾರತಾವ, ರೆಕ್ಕಿ ಎದಕಿರ್ತಾವ ಅವಕ್ಕ ಹಾರಾಕ ಮತ್ಯ ‘
‘ಮತ್ತ ಹಂಗಂದ್ರ , ನಮ್ಯನ್ಯಾಗ ಒಂದ್ಯಾಲ್ಡು ಹಕ್ಕಿ ಅದಾವಲ ಅವು ಎದುಕ ಹಾರಗಲ್ಲಪ ?’
‘ಯಾವು ? ಈಗ ಪುಟ್ಯಾಗ ಮುಚ್ಚಿ ಹಾಕಿ ಬಂದ್ಯಲ ಕೋಳಿ ಮರಿಗಳನು?
ಅವು ಹಾರ್ತಾವಂಗೆ ಆದ್ರ ದೂರ ಆಕಾಶತ್ತನ ಹೊಗಲ್ಲ ಅಷ್ಟ, ಅವು ಅಡ್ಯಾಡಿ ಅಡ್ಯಾಡಿ ತಮ್ಮ ರೆಕ್ಕಿಗಳ್ನ ಜಾಸ್ತಿ ಬಳಸಿಲ್ಲ, ನೆಲದ್ ಮ್ಯಾಗ ಬಾಳ ಬದುಕ್ತಾವ.
‘ಹೇ ಅವಲ್ಲ ಪೊ …ನಿಂಗೊತ್ತಿಲ್ಲನು ನಾ ಜಿಗ್ಗದ ಕೋಳಿ ಗೂಡು ಕಡಿಗ್ಯ ಓಡಿ ಹೊದಾಗೆಲ್ಲ ಅವು ಹಾರಿ ಮನಿ ಛತ್ತ ಮ್ಯಾಗ ಹೋಗಿ ನಿಂದ್ರತಾವ. ಆದ್ರ ನಾ ಹೇಳಕುಂತಿರಾದು ಬ್ಯಾರೆ. ಈ ಕಟ್ಟಿಗಿ ಕಂಬದ ಮ್ಯಾಗ ನೋಡು ಒಂದು ಬಳ್ಳಿ ಮತ್ತದರ ಮ್ಯಾಗೊಂದು ಹಕ್ಕಿ ಕುಂತೈತಲ. ಮತ್ತೆ ಬಂಕದಾಗ ಯಾಲ್ಡು ಕಂಬಕ್ಕ ಹಿಂಗಾ ಹಕ್ಕಿ ಸಿಗಕ್ಯಂದಾವ ಅವೇನು ಹಾರತಾವನು?’
ಪುಟ್ಟ ಮಾಯಿಯ ಮಾತಿಗೆ ಅವಳಪ್ಪ,
‘ಹೇ ..ಯವ್ವಾ ಹುಚ್ಚಮ್ಮ, ನೀ ಇನ್ನಾ ಸಣ್ಣಾಕಿ ಅದಿ ಮುಂದೆ ನಿನಿಗ್ಯ ಗೊತ್ತಾತೈತಿ ಯಾವುದು ಬದುಕು ಯಾವುದು ಚಿತ್ರ ಅಂತ. ಮತ್ತೆ ಈ ಚಿತ್ರ, ಬದುಕು ಎರಡೂ ಒಂದಕ್ಕೊಂದು ಬೆಸಗಂಡಿರತಾವ ಅವು ಬ್ಯಾರೆ ಬ್ಯಾರೆ ಅಂತಾನೂ ಹೇಳಾಕ ಬರಂಗಿಲ್ಲ, ಈಗ ನೋಡು ಜೀವ ಇರಾ ಹಕ್ಕಿ ಹಾರ್ಯಾಡತೈತಿ, ಅದಾ ಜೀವ ಇಲ್ಲದ ಕಂಬದ ಹಕ್ಕಿ ನಿನ್ನಂಥ ಕಣ್ಣುಗಳಿಂದ ಜೀವಪಡಕೊತೈತಿ, ನೀನೂ ಹಿಂಗಾ ಹಕ್ಕಿಗಳಂಗ ಗಟ್ಟಿರೆಕ್ಕೆ ಮೂಡಿಸಿಕೊಂಡು ಆಕಾಶದೆತ್ತರಕ್ಕ ಹಾರಬೇಕು, ಜೊತಿಗೆ ಬರೊರಿಗೆ ಹಾರೊದು ಕಲುಸ್ಬೊಕು ಮತ್ತೆ ರೆಕ್ಕಿ ಕಿತ್ತಾಕ ಬರೊ ಯಾರಿಗೂ ಹೆದರಬಾರದು, ಧೈರ್ಯವಾಗಿ ಎದರಸಬೊಕು. ನೀನೂ ಒಂದಿನ ರೆಕ್ಕಿ ಕಟ್ಟತಿ’ ಅಂದು ನಗತೊಡಗಿದ.
ಅಲ್ಲೆ ಬಂಕದ ಕಂಬಕ್ಕೆ ಕುಳಿತು ಅಕ್ಕಿ ಬೀಸುತ್ತಿದ್ದ ಭಾಗ್ಯಮ್ಮ ಗಂಡನತ್ತ ಮುಖಮಾಡಿ,
‘ಅಲಾ…ನೀ ಹಿಂಗ ಅರ್ಥ ಆಗಲಾರದಂಗ ದೊಡ್ಡ ದೊಡ್ಡ ಮಾತು ಆಕಿ ತಲಿಗೆ ತುರುಕಿದರ ಹೆಂಗ್ ತಿಳ್ಕೊತಾಳ ಆಕಿ ?’
ಹೇ ಮಾಯಿ ನೀ ಇಲ್ಲಿ ಬಾ ಅಕ್ಕಿಯೊಳಗ ಸಣ್ಣ ಸಣ್ಣ ಕಲ್ಲು ಅದಾವ ಆರಸ ಬಾ ಎಂದು ಮಾಯಿಯನ್ನ ಕರೆದಳು.
ಅಪ್ಪನ ನಗು ಮತ್ತೆ ಅವ್ವನ ಮಾತು, ಮಾಯಿಗೆ ಯಾವ ಉತ್ತರವನ್ನೂ ದೊರಕಿಸಿ ಕೊಡಲಿಲ್ಲ, ಬದಲಿಗೆ ಕಂಬದ ಮೇಲಿದ್ದ ಹಕ್ಕಿಗಳಿಗೆ ರೆಕ್ಕೆ ಮೂಡಿಸುವ ಯೋಚನೆ ಇನ್ನಷ್ಟು ಗಟ್ಟಿಯಾಯ್ತು. ತನಗೂ ರೆಕ್ಕೆ ಬರುತ್ತವೆ ಅನ್ನೊ ಆಲೋಚನೆ ಅವಳಲ್ಲಿ ಒಂಥರಾ ಖುಷಿಯನ್ನ ಮೂಡಿಸಿತು. ಕೂಡಲೆ ಕಟ್ಟೆ ಮೇಲಿಂದ ಜಿಗಿದು ಬಂಕದೊಳಗೆ ಬಂದು ಕಂಬದ ಮುಂದೆ ಕೂತು ‘ಹಕ್ಕಿ ಹಾರುತಿದೆ ನೋಡಿದಿರಾ ?’ ಪದ್ಯವನ್ನ ಗಟ್ಟಿಯಾಗಿ ಒಂದೇ ಧ್ವನಿಯಲ್ಲಿ ಮನೆಯ ಎಲ್ಲಾ ಕಂಬಗಳಿಗೂ ಮತ್ತೆ ಅವುಗಳ ಮೇಲೆ ಕೆತ್ತಿದ್ದ ಹಕ್ಕಿಗಳ ಕಿವಿಗೂ ಮುಟ್ಟಿ, ಅವು ಹಾರಲು ಕಲಿಯುವಂತೆ ಜೋರಾಗಿ ಪದ್ಯವನ್ನ ಬಾಯಿಪಾಠ ಮಾಡಲು ಶುರು ಮಾಡಿದಳು…
(ಕಥೆಯ ಪೂರ್ಣಭಾಗ ಡಿಸೆಂಬರ್-ಫೆಬ್ರವರಿ 2022ರ ‘ಅಕ್ಷರ ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯಲ್ಲಿ)
ಈ ಪತ್ರಿಕೆಯ ಚಂದಾ ವಿವರ : ವಾರ್ಷಿಕ ರೂ. 600, ದ್ವೈವಾರ್ಷಿಕ ರೂ. 1,200, ತ್ರೈವಾರ್ಷಿಕ ರೂ. 1,800, ಅಜೀವ ರೂ. 6,000. ಸಂಪರ್ಕಿಸಿ : 9341757653
‘ಸಂಗಾತ’ ಪ್ರಕಟಿಸಿರುವ ಈ ಕೃತಿಯ ಆಯ್ದ ಭಾಗವನ್ನೂ ಓದಿ : New Book : ಅಚ್ಚಿಗೂ ಮೊದಲು : ನರಸಿಂಹಮೂರ್ತಿ ಪ್ಯಾಟಿಯವರ ಪ್ರಬಂಧಗಳು
ಟಿ. ಎಸ್. ಗೊರವರ ಪುಸ್ತಕದ ಆಯ್ದ ಭಾಗ : New Book : ಅಚ್ಚಿಗೂ ಮೊದಲು : ‘ಬೆಳೀ ಬರದಿದ್ರ ನಾಳೆ ಏನು ಊಟಾ ಮಾಡ್ತೀರಿ?’
Published On - 1:31 pm, Sat, 22 January 22