‘ಮತ್ತೆ ಮೊದಲಿಂದ’ ಆಲ್ಬಂ ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ; ಮೊದಲ ಸಾಂಗ್ ರಿಲೀಸ್
‘ಮತ್ತೆ ಮೊದಲಿಂದ’ ಆಲ್ಬಂ ಹಾಡುಗಳನ್ನು ಒಂದೊಂದಾಗಿಯೇ ಬಿಡುಗಡೆ ಮಾಡಲಾಗುತ್ತಿದೆ. ಈ ಆಲ್ಬಂನಿಂದ ನಟ ಸಂಜನ್ ಕಜೆ ಅವರು ಪರಿಚಯಗೊಳ್ಳುತ್ತಿದ್ದಾರೆ. ‘ಮತ್ತೆ ಮೊದಲಿಂದ’ ಹಾಡುಗಳಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ‘ಪಂಚರಂಗಿ ಆಡಿಯೋ’ ಯೂಟ್ಯೂಬ್ ಚಾನಲ್‌ನಲ್ಲಿ ಮೂಲಕ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ.

‘ಮತ್ತೆ ಮೊದಲಿಂದ’ ಆಲ್ಬಂ ಅನ್ನು ನಿರ್ದೇಶಕ ಯೋಗರಾಜ್ ಭಟ್ (Yogaraj Bhat), ಶ್ರೀನಿಧಿ ಮತ್ತು ಪ್ರಸನ್ನ ಅವರು ನಿರ್ಮಿಸಿದ್ದಾರೆ. ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದಾರೆ. ಕರಾವಳಿ ಮೂಲದ ಹೊಸ ಪ್ರತಿಭೆ ಸಂಜನ್ ಕಜೆ ಅವರು ನಾಯಕನಾಗಿ ನಟಿಸಿದ್ದಾರೆ. ನಿಧಿ ಸುಬ್ಬಯ್ಯ, ಅಮೀತಾ ಎಸ್. ಕುಲಾಲ್, ದೇವಿಕಾ ಶಿಂಧೆ ಹಾಗೂ ಅಂಜಲಿ ಗೌಡ ಅವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ‘ಮತ್ತೆ ಮೊದಲಿಂದ’ (Matte Modalinda) ಆಲ್ಬಂನಲ್ಲಿ 4 ಹಾಡುಗಳಿವೆ. ಖ್ಯಾತ ಗಾಯಕ, ಗಾಯಕಿಯರು ಈ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ನಾಲ್ಕು ಬಣ್ಣಗಳ ಥೀಮ್ನಲ್ಲಿ ಅಚ್ಚ ಕನ್ನಡದ ಹಾಡುಗಳು ಮೂಡಿಬಂದಿವೆ. ಮೊದಲ ಹಾಡು ‘ಮೋಹದ ಬಣ್ಣ ನೀಲಿ’ ಇತ್ತೀಚಿನ ಬಿಡುಗಡೆ ಆಗಿದೆ.
ಯೋಗರಾಜ್ ಭಟ್ ಅವರು ಬರೆದಿರುವ ‘ಮೋಹದ ಬಣ್ಣ ನೀಲಿ’ ಹಾಡನ್ನು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ಅನಿರುದ್ಧ್ ಶಾಸ್ತ್ರಿ ಅವರು ಸಂಗೀತ ನೀಡಿದ್ದಾರೆ. ಟೈಟಲ್ ಪರಿಚಯಿಸಿದ ಯೋಗರಾಜ್ ಭಟ್ ಅವರು ಇನ್ನಷ್ಟು ವಿವರ ನೀಡಿದರು. ‘ಈ ಆಲ್ಬಂನಲ್ಲಿ 4 ಹಾಡುಗಳಿದ್ದು, ನಾಲ್ಕು ಸಂಗೀತ ನಿರ್ದೇಶಕರು, ನಾಲ್ಕು ಗಾಯಕರು, ನಾಲ್ಕು ನಾಯಕಿಯರು ಇರುವುದು ವಿಶೇಷ. ಕರಾವಳಿ ಮೂಲದ ಯುವ ನಟ ಸಂಜನ್ ಕಜೆ ಅವರನ್ನು ಈ ಮೂಲಕ ಪರಿಚಯಿಸುತ್ತಿದ್ದೇನೆ’ ಎಂದು ಅವರು ಹೇಳಿದರು.
ಈ ಆಲ್ಬಂನಲ್ಲಿ ಇರುವ ನಾಲ್ಕೂ ಹಾಡುಗಳಿಗೆ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಸಂಗೀತ ನಿರ್ದೇಶಕರಾಗಿ ಮನೋಮೂರ್ತಿ, ವಿ. ಹರಿಕೃಷ್ಣ, ಚೇತನ್-ಡ್ಯಾವಿ, ಅನಿರುದ್ಧ ಶಾಸ್ತ್ರಿ ಕೆಲಸ ಮಾಡಿದ್ದಾರೆ. ವಿಜಯ್ ಪ್ರಕಾಶ್, ವಾಸುಕಿ ವೈಭವ್, ಚೇತನ್ ಸೋಸ್ಕ, ಅದಿತಿ ಖಂಡೇಗಲ ಅವರ ಗಾಯನದಲ್ಲಿ ಹಾಡುಗಳು ಮೂಡಿಬಂದಿವೆ.
ಇತಿಹಾಸ ತಜ್ಞ ಧರ್ಮೇಂದ್ರ ಕುಮಾರ್ ಆರೇನಹಳ್ಳಿ ಅವರು ಮೊದಲ ಗೀತೆ ಬಿಡುಗಡೆ ಮಾಡಿದರು. ‘ಪಂಚರಂಗಿ ಆಡಿಯೋ’ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಿಲಾಗಿದೆ. ‘ಸುಗಮ ಸಂಗೀತ, ಭಾವಗೀತೆಗಳು ವಿರಳವಾಗಿರುವ ಈ ಸಂದರ್ಭದಲ್ಲಿ ಇದೊಂದು ಶ್ಲಾಘನೀಯ ಪ್ರಯತ್ನ. ಭಾವಗೀತೆಗಳು ಕನ್ನಡ ನೆಲದ ಸೊಗಡು. ಅದನ್ನು ಉಳಿಸಿ ಬೆಳಸುವುದು ಸಾಹಿತಿಗಳ ಕರ್ತವ್ಯ. ಬಹಳ ವರ್ಷಗಳ ನಂತರ ಅದೇ ರೀತಿಯ ಗೀತೆಯನ್ನು ಕೇಳಿ ಬಹಳ ಖುಷಿ ಆಯಿತು’ ಎಂದು ಧರ್ಮೇಂದ್ರ ಹೇಳಿದರು.
ಇದನ್ನೂ ಓದಿ: ‘ನಿಮಗಿಂತ ಮೂಗೇ ಮೊದಲು ಬರುತ್ತೆ’; ಪೂಜಾ ಗಾಂಧಿಗೆ ನೇರವಾಗಿ ಹೇಳಿದ್ದ ಯೋಗರಾಜ್ ಭಟ್
ಸಿನಿಮಾ ಹಾಡುಗಳಿಗಿಂತಲೂ ಹೆಚ್ಚು ಮುತುವರ್ಜಿ ವಹಿಸಿ ಈ ಗೀತೆಗಳನ್ನು ಹಾಡಿರುವುದಾಗಿ ವಿಜಯ್ ಪ್ರಕಾಶ್ ಹೇಳಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ ಶಾಸ್ತ್ರಿ ಮಾತನಾಡಿ, ‘ಯೋಗರಾಜ್ ಭಟ್ ಜೊತೆಗಿನ ಸಾಂಗತ್ಯದಲ್ಲಿ ಇದು ನನ್ನ ಚೊಚ್ಚಲ ಸಂಗೀತ ಸಂಯೋಜನೆ. ಇದು ನನಗೆ ತುಂಬಾ ಖುಷಿಕೊಟ್ಟಿದೆ. ಹಿರಿಯ ಮತ್ತು ಖ್ಯಾತ ಸಂಗೀತ ನಿರ್ದೇಶಕರುಗಳ ಸಂಗೀತ ಸಂಯೋಜನೆ ಈ ಆಲ್ಬಂನಲ್ಲಿದ್ದದ್ದು ನನಗೆ ಸವಾಲಿನ ವಿಷಯವಾಗಿತ್ತು. ಅದನ್ನು ಸಮರ್ಪಕವಾಗಿ ನಿಭಾಹಿಸಲು ಅವರ ಮತ್ತು ಯೋಗರಾಜ್ ಅವರ ಸಹಕಾರ ಕಾರಣ’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








