ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ನಿರ್ಮಾಪಕ ಉಮಾಪತಿ ಹೇಳಿದ್ದೇನು?
Producer Umapathy Srinivas: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ನಿನ್ನೆ ಫಿಲಂ ಫೆಸ್ಟ್ ಉದ್ಘಾಟನೆ ಸಮಾರಂಭದ ಭಾಷಣದಲ್ಲಿ ಕನ್ನಡ ಚಲನಚಿತ್ರರಂಗದ ಕೆಲವು ನಟ-ನಟಿಯರಿಗೆ ನೇರವಾಗಿ ಎಚ್ಚರಿಕೆ ನೀಡಿದರು. ಈ ಬಗ್ಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದು ಯಾರಿಗೆ? ಏಕೆ?

ನಿನ್ನೆ (ಮಾರ್ಚ್ 02) ಬೆಂಗಳೂರಿನ ವಿಧಾನಸೌಧದ ಮುಂಭಾಗ 16ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವದ ಉದ್ಘಾಟನೆ ಬಲು ಅದ್ಧೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವರಿದ್ದರು. ಉದ್ಘಾಟನೆ ಬಳಿಕ ಮಾತನಾಡಿದ ಉಪ ಮುಖ್ಯ ಮಂತ್ರಿ ಡಿಕೆ ಶಿವಕುಮಾರ್, ಚಿತ್ರರಂಗಕ್ಕೆ ವಿಶೇಷವಾಗಿ ಕೆಲ ಸ್ಟಾರ್ ನಟ, ನಟಿಯರಿಗೆ ನೇರವಾಗಿ ಎಚ್ಚರಿಕೆ ನೀಡಿದರು. ‘ನಿಮ್ಮ ನೆಟ್ಟು-ಬೋಲ್ಟು ಟೈಟ್ ಮಾಡುವುದು ಗೊತ್ತಿದೆ’ ಎಂದು ಎಚ್ಚರಿಕೆ ದನಿಯಲ್ಲಿ ಹೇಳಿದರು. ಈ ಬಗ್ಗೆ ನಿರ್ಮಾಪಕ, ಕಾಂಗ್ರೆಸ್ ಪಕ್ಷ ಮುಖಂಡರೂ ಆಗಿರುವ ಉಮಾಪತಿ ಶ್ರೀನಿವಾಸ್ ಮಾತನಾಡಿದ್ದಾರೆ.
‘ನೆಲ, ಜಲ, ಭಾಷೆಯ ವಿಷಯದಲ್ಲಿ ಎಲ್ಲರಿಗೂ ಜವಾಬ್ದಾರಿ ಇರುತ್ತದೆ. ರಾಜಕೀಯ ಪಕ್ಷಗಳು ಹೋರಾಟ ಮಾಡುವ ಉದ್ದೇಶ ಸಾರ್ವಜನಿಕರಿಗಾಗಿ. ಸಿನಿಮಾ ರಂಗವೇ ಆಗಲಿ ಅಥವಾ ಇನ್ಯಾವುದೇ ಆಗಲಿ ಸರ್ಕಾರ ಆಡಳಿತ ಅಡಿಯಲ್ಲಿಯೇ ನಾವೆಲ್ಲರೂ ಬದುಕಬೇಕಾಗಿರುತ್ತದೆ. ಒಂದು ದಿನ ನೀರು ಬರಲಿಲ್ಲವೆಂದರೆ ಸರ್ಕಾರವನ್ನು ಬೈಯ್ಯುತ್ತಾರೆ. ಆದರೆ ನಾವು ಸರ್ಕಾರಕ್ಕೆ ಯಾವ ರೀತಿ ಸಹಕಾರ ಕೊಡುತ್ತಿದ್ದೇವೆ ಎಂಬುದು ಸಹ ಮುಖ್ಯ ಆಗುತ್ತದೆ’ ಎಂದರು ನಿರ್ಮಾಪಕ ಉಮಾಪತಿ.
‘ಉಪ ಮುಖ್ಯ ಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಏನೇ ಕಾರ್ಯಕ್ರಮ ಮಾಡಿದರೂ ಸಹ ಅದರ ಹಿಂದೆ ಒಂದು ಒಳ್ಳೆಯ ಉದ್ದೇಶ ಇರುತ್ತದೆ. ಹೋರಾಟ ಮಾಡೋಕೆ ಜನರ ಕೊರತೆಯೇನೂ ಇಲ್ಲ. ಆದರೆ ಕೆಲವು ಜವಾಬ್ದಾರಿಯುತ ಜನಗಳು ಬಂದು ಹೋರಾಟದಲ್ಲಿ ಪಾಲ್ಗೊಂಡರೆ ಅದು ಹೆಚ್ಚು ಜನರಿಗೆ ತಲುಪುತ್ತದೆ ಎಂಬುದಷ್ಟೆ ಅವರ ಉದ್ದೇಶವಾಗಿತ್ತು. ಹಾಗಾಗಿ ಸಿನಿಮಾ ರಂಗದವರು ಹೋರಾಟದಲ್ಲಿ ಪಾಲ್ಗೊಳ್ಳಲಿ ಎಂದು ಅವರು ಬಯಸಿದ್ದರು’ ಎಂದಿದ್ದಾರೆ ಉಮಾಪತಿ.
ಇದನ್ನೂ ಓದಿ:ದುನಿಯಾ ವಿಜಯ್ದು ಇಷ್ಟ ಆಗೋ ವ್ಯಕ್ತಿತ್ವ, ಅವರ ಜೊತೆ ಸಿನಿಮಾ ಮಾಡ್ತೀನಿ; ಉಮಾಪತಿ ಶ್ರೀನಿವಾಸ್
ಫಿಲಂ ಫೇಸ್ಟ್ ಬಗ್ಗೆ ಮಾತನಾಡಿದ ಉಮಾಪತಿ, ‘ಫಿಲಂ ಫೆಸ್ಟ್ನ ಆಯೋಜನೆ ಸರಿಯಾಗಿ ಆಗಿಲ್ಲ. ನಾನು ಮಾತನಾಡಿದ ಕೆಲವರ ಪ್ರಕಾರ ಹಲವರಿಗೆ ಫಿಲಂ ಫೆಸ್ಟ್ಗೆ ಆಹ್ವಾನವೇ ಹೋಗಿಲ್ಲ. ಆಹ್ವಾನವೇ ಹೋಗದೆ ಬರುವುದಾದರೂ ಹೇಗೆ?’ ಎಂದು ಪ್ರಶ್ನೆ ಮಾಡಿದರು. ಮಾತು ಮುಂದುವರೆಸಿ, ‘ಡಿಕೆ ಶಿವಕುಮಾರ್ ಅವರು ಎಚ್ಚರಿಕೆ ಕೊಟ್ಟಿಲ್ಲ ಬದಲಿಗೆ ಅವರವರ ಕರ್ತವ್ಯವನ್ನು ನೆನಪು ಮಾಡಿಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಅವರು ಮೊದಲಿನಿಂದಲೂ ಚಿತ್ರರಂಗಕ್ಕೆ ಕನೆಕ್ಟೆಡ್ ಆಗಿದ್ದಾರೆ. ಹಲವಾರು ಸಿನಿಮಾಗಳಿಗೆ ಬೆಂಬಲ ಕೊಟ್ಟಿದ್ದಾರೆ. ವಿತರಣೆ ಮಾಡಿದ್ದಾರೆ. ಪ್ರದರ್ಶನ ಮಾಡಿದ್ದಾರೆ. ಅದೇ ಸಲುಗೆಯಲ್ಲಿ ಅವರು ಬುದ್ಧಿವಾದ ಹೇಳಿದ್ದಾರೆ’ ಎಂದರು ಉಮಾಪತಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Sun, 2 March 25