Covid Diary : ಅಚ್ಚಿಗೂ ಮೊದಲು : ಡಾ. ಎಚ್. ಎಸ್. ಅನುಪಮಾ ಅವರ ‘ಕೋವಿಡ್ ಡಾಕ್ಟರ್ ಡೈರಿ’ ಇಂದಿನಿಂದ ನಿಮ್ಮ ಓದಿಗೆ

Covid Stories : ‘ಟಿವಿ9 ಕನ್ನಡ ಡಿಜಿಟಲ್​’ನಲ್ಲಿ ಒಂದು ತಿಂಗಳ ಕಾಲ ಪ್ರಕಟವಾದ ಡಾ. ಎಚ್. ಎಸ್. ಅನುಪಮಾ ಅವರ ‘ಕವಲಕ್ಕಿ ಮೇಲ್’​ ಸರಣಿಯು ‘ಕೋವಿಡ್ ಡಾಕ್ಟರ್ ಡೈರಿ’ ಎಂಬ ಶೀರ್ಷಿಕೆಯಡಿ ಇಂದಷ್ಟೇ ಉತ್ತರ ಕನ್ನಡ ಜಿಲ್ಲೆಯ ಕವಲಕ್ಕಿಯಲ್ಲಿ ಬಿಡುಗಡೆಗೊಂಡಿದೆ. ಇದರಲ್ಲಿ ಅಡಕವಾದ, ನೀವು ಸರಣಿಯಲ್ಲಿ ಓದಿರದ ಹೊಸ ಕಥೆಯೊಂದು ಇಲ್ಲಿದೆ.

Covid Diary : ಅಚ್ಚಿಗೂ ಮೊದಲು : ಡಾ. ಎಚ್. ಎಸ್. ಅನುಪಮಾ ಅವರ ‘ಕೋವಿಡ್ ಡಾಕ್ಟರ್ ಡೈರಿ’ ಇಂದಿನಿಂದ ನಿಮ್ಮ ಓದಿಗೆ
Follow us
ಶ್ರೀದೇವಿ ಕಳಸದ
|

Updated on:Sep 28, 2021 | 6:48 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ಕೋವಿಡ್ ಡಾಕ್ಟರ್ ಡೈರಿ  ಲೇಖಕರು : ಡಾ. ಎಚ್. ಎಸ್. ಅನುಪಮಾ ಪುಟ : 278 ಬೆಲೆ : ರೂ. 200 ವಿನ್ಯಾಸ : ಅರುಣಕುಮಾರ್ ಜಿ. ಪ್ರಕಾಶನ : ಲಡಾಯಿ ಪ್ರಕಾಶನ, ಗದಗ

*

‘ಟಿವಿ9 ಕನ್ನಡ ಡಿಜಿಟಲ್​’ನಲ್ಲಿ ಒಂದು ತಿಂಗಳ ಕಾಲ ಪ್ರಕಟವಾದ ಡಾ. ಎಚ್. ಎಸ್. ಅನುಪಮಾ ಅವರ ‘ಕವಲಕ್ಕಿ ಮೇಲ್’​ ಸರಣಿಯು ‘ಕೋವಿಡ್ ಡಾಕ್ಟರ್ ಡೈರಿ’ ಎಂಬ ಶೀರ್ಷಿಕೆಯಡಿ ಇಂದಷ್ಟೇ ಉತ್ತರ ಕನ್ನಡ ಜಿಲ್ಲೆಯ ಕವಲಕ್ಕಿಯಲ್ಲಿ ಬಿಡುಗಡೆಗೊಂಡಿದೆ. ಈ ಕೃತಿಯಲ್ಲಿ ಅಡಕವಾದ, ನೀವು ಸರಣಿಯಲ್ಲಿ ಓದಿರದ ಹೊಸ ಕಥೆಯೊಂದು ಇಲ್ಲಿದೆ.

ಕ್ಯಾಸ ಕಥನ 

‘ಗಂಡ ಹೆಂಡತಿ ಸಮಸ್ಯೆ, ಋತುಮತಿ ಸಮಸ್ಯೆ, ಮದುವೆ ಯೋಗ, ಸಂತಾನ, ಕೋರ್ಟ್ ಕೇಸ್, ಆರೋಗ್ಯ, ವಿದ್ಯಾಭ್ಯಾಸ, ಉದ್ಯೋಗ, ಶತ್ರುಕಾಟ, ಸ್ತ್ರೀ ಪ್ರೇಮ ವಿಚಾರ, ಕುಜದೋಷ, ಗಾಳಿ ಸೋಕು ಮುಂತಾದ ಯಾವುದೇ ಸಮಸ್ಯೆಗೂ ಇಲ್ಲಿದೆ ಪರಿಹಾರ. ಇದು ಒಂದು ಅಮೃತ ಘಳಿಗೆ, ಇಂದೇ ಕರೆ ಮಾಡಿರಿ. ಸ್ತ್ರೀ ಪುರುಷ ವಶೀಕರಣ, ಲಕ್ಷ್ಮೀ ವಶೀಕರಣ, ಲೈಂಗಿಕ ವಶೀಕರಣ, ಜನ ವಶೀಕರಣ – ಭದ್ರಕಾಳಿ ಶಕ್ತಿಯಿಂದ ಪರಿಹಾರ ಶತಸ್ಸಿದ್ಧ. ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್. ಮಕ್ಕಳ ವಿದ್ಯಾಭ್ಯಾಸಕ್ಕೆ ಸರಸ್ವತಿ ಯಂತ್ರ. ಮಾಂಗಲ್ಯ ಭಾಗ್ಯಕ್ಕೆ ಸ್ವಯಂವರ ಕವಚಂ, ಧನಪ್ರಾಪ್ತಿಗೆ ಲಕ್ಷ್ಮೀ ಕವಚಂ, ಸ್ತ್ರೀ ಪುರುಷ ಮಿಲನಕ್ಕೆ ಗಂಧರ್ವ ಕವಚಂ, ಅನಾರೋಗ್ಯಕ್ಕೆ ದಶಮೂಲ ಕವಚಂ, ಮನಶಾಂತಿಗೆ ಅಂಜನ ಕವಚಂ. ನಿಮ್ಮ ಧ್ವನಿ ಆಲಿಸಿ ಪರಿಹಾರ ಹೇಳುತ್ತಾರೆ. ಫೋನ್ ಮೂಲಕವೂ ಸೇವೆ ಲಭ್ಯ’

ದೊಡ್ಡ ಹಸ್ತದ ಚಿತ್ರವಿರುವ ಬೋರ್ಡಿನಲ್ಲಿ ಹೀಗೆಂದು ಬರೆದುಕೊಂಡ ಬಾಗಿಲ ಎದುರು ಕ್ಯಾಸ ಕುಳಿತಿದ್ದಾನೆ. ಅದು ‘ಶ್ರೀ ಭಗವತಿ ಮಹಾಕಾಳಿ ಮಹಾಮಾಯಿ ಜ್ಯೋತಿಷ್ಯಾಲಯ’. ಅವನ ಕಾಯಂ ಅಡ್ಡೆ. ವಾರಕ್ಕೆರಡು ದಿನ ಅವರಲ್ಲಿಗೆ ಬಂದಾಗ ಬರುವವರ ನೋಟ, ನಡೆ, ಮಾತುಗಳ ಕೇಳುತ್ತ ಅವನಿಗೆ ದಿನ ಸರಿದದ್ದೇ ತಿಳಿಯುತ್ತಿರಲಿಲ್ಲ. ಒಂದುಕೋಣೆಯ ಜ್ಯೋತಿಷ್ಯಾಲಯದ ಎದುರು ಅವರು ಬರುವ ಮೊದಲೇ ಗುಡಿಸಿ ಕ್ಯಾಸ ಕುಳಿತಿರುತ್ತಿದ್ದ. ಅವರು ಚಾ ದುಕಾನಿಂದ ಚಾ ತಿಂಡಿ, ಬೇಕರಿಯಿಂದ ಬ್ರೆಡ್ಡು, ಬನ್ಸು, ಹಣ್ಣುಗಳನ್ನು ಇವನ ಬಳಿಯೇ ತರಿಸುತ್ತಿದ್ದರು. ತಂದುಕೊಟ್ಟದ್ದರಲ್ಲಿ ಒಂದು ಪಾಲು ಇವನಿಗೂ ಸಿಗುತ್ತಿತ್ತು. ಈಗ ಲಾಕ್ಡೌನ್ ಎಂದು ಮುಚ್ಚಿಕೊಂಡವು ಒಂದೊಂದಾಗಿ ಬಾಗಿಲು ತೆರೆದರೂ ಜ್ಯೋತಿಷ್ಯಾಲಯ ತೆರೆದಿರಲಿಲ್ಲ. ಮಲಯಾಳ ದೇಶದ ಅವರು ಅಲ್ಲೇ ಹರಹರ ಶಿವಶಿವ ಆಗಿಬಿಟ್ಟರೇ? ಎಂದಿಗೆ ಈ ಜ್ಯೋತಿಷಿಯು ಬಂದಾರು? ಎಂದು ಯೋಚಿಸುತ್ತ ಬೋರ್ಡಿನ ಅಕ್ಷರಗಳ ನೋಡುತ್ತ ಕೂತುಬಿಟ್ಟಿದ್ದಾನೆ ಕ್ಯಾಸ.

ಹ್ಞಂ, ಇದು ಯಾರು ಇವನು ಎಂದಿರಾ? ಎಲ್ಲಾರ ಸುದ್ದಿ ಹೇಳಿ ನಮ್ಮೂರಿನ ಕ್ಯಾಸನ ಸುದ್ದಿ ಹೇಳದಿದ್ದರೆ ತುಂಬ ಅನ್ಯಾಯವಾಗುತ್ತದೆ. ಅವನಂಥವರು ಎಲ್ಲ ಕಡೆ ಇರುವುದಿಲ್ಲ. ಕೋವಿಡ್ಡೋ, ನೆರೆಯೋ ಬರವೋ ಅವನಂಥವರು ಬದಲಾಗುವುದಿಲ್ಲ. ಅವನ ಬದುಕೇನೂ ಕೋವಿಡ್ಡಿನಿಂದ ಉಲ್ಟಸೀದ ಆಗಲಿಲ್ಲ. ಆದರೂ ಕೋವಿಡ್ ಕಾಲದ ಕತೆಯಲ್ಲಿ ಕ್ಯಾಸನ ಕಥನವೂ ಸೇರದಿದ್ದರೆ ಅದು ಪೂರ್ತಿಯಾಗುವುದಿಲ್ಲ.

ಅಂದಹಾಗೆ ಅವನ ಹೆಸರು ಕೇಶವ ಎಂದೂ, ಎಲ್ಲ ಅವನನ್ನು ಕ್ಯಾಸ ಎನ್ನುವರೆನ್ನುವುದೂ ಅಷ್ಟು ಮುಖ್ಯವಲ್ಲ. ಕರಿಮಗು ಎಂದು ಕರೆಸಿಕೊಳ್ಳುವ ಸಾವಿತ್ರಿಯ ಗಂಡನಾದ ಕ್ಯಾಸನು ಈ ಊರಿಗೆ ಯಾವಾಗ ಬಂದ ಎನ್ನುವುದಾಗಲೀ, ಅವನ ಅಬ್ಬೆ ಅಪ್ಪ ಯಾರು ಎನ್ನುವುದಾಗಲೀ ಯಾರಿಗೂ ಅಷ್ಟು ಮುಖ್ಯವಲ್ಲ. ಆದರೆ ಅವನಿಲ್ಲದಿದ್ದರೆ ಈ ಊರ ಬೀದಿಗಳು ಕೊಳೆತ ಶವದ ದುರ್ನಾತದಿಂದ ಗಬ್ಬೆದ್ದು ಊರಜನರ ಮೂಗು ಹೊಟ್ಟಿ ಹೋಗುತ್ತಿತ್ತು ಎನ್ನುವುದಂತೂ ನಿಜ. ಅವನ ಕೆಲಸ ಅಂತಹದ್ದು. ಜಾತಿ ಬಾಂಧವರು ಹಾಗೂ ಅವನ ಹೆಂಡತಿ ಇದು ತಮ್ಮ ಜಾತಿಗೆ ತಕ್ಕುದಲ್ಲದ ಕೆಲಸ ಎಂದು ಬೈದು, ಮೂಗು ಮುರಿದರೂ ಅದು ಎಷ್ಟು ಮುಖ್ಯ ಕೆಲಸವೆಂದು ಕ್ಯಾಸನಿಗೆ ಗೊತ್ತಾಗಿ ಹೋಗಿದೆ. ನಮ್ಮೂರಿನ ಯಾವುದಾದರೂ ಮನೆ, ಅಂಗಡಿ ಎದುರು ಸತ್ತು ಬಿದ್ದ ನಾಯಿ, ಬೆಕ್ಕು, ಹಂದಿ, ದನ, ಗೂಳಿ, ಹೆಗ್ಗಳ ಕಂಡರೆ ಆಗವರಿಗೆ ಕ್ಯಾಸನ ನೆನಪಾಗುತ್ತದೆ. ಅವರಿಗೆ ನೆನಪಾಗದಿದ್ದರೂ ಕ್ಯಾಸ ಅಂತಹ ಮನೆ, ಅಂಗಡಿಯೆದುರು ಪ್ರತಿಷ್ಠಾಪಿತನಾಗುತ್ತಾನೆ. ಸತ್ತ ಪ್ರಾಣಿಯನ್ನು ಎಳೆದು ಹಾಕುವ ಘನಕಾರ್ಯ ತನಗಾಗಿ ಕಾದಿರುವುದನ್ನು ಅವರಿಗೆ ನೆನಪಿಸುತ್ತಾನೆ. ಹೇಗೆ ಅದರ ಕಾಲು ಕಟ್ಟಬೇಕೆಂದು, ಕಟ್ಟುವ ಹಗ್ಗಕ್ಕೆ ಎಷ್ಟಾಗುವುದೆಂದು, ಅದನ್ನು ಗುಡ್ಡಕ್ಕೆ ಎಳೆದೊಯ್ದು ಗುಂಡಿ ತೆಗೆದು ಹೂಳಲು ಎಷ್ಟು ಸಮಯ ತಗಲುವುದೆಂದು ಸಂಬಂಧಪಟ್ಟವರಿಗೆ ವಿವರಿಸಿ ಕನಿಷ್ಟ ನೂರು ರೂಪಾಯಿ ಕೇಳುತ್ತಾನೆ. ನೂರು ರೂಪಾಯಿಯೇ ಎಂದು ಆ ಮನೆ/ಅಂಗಡಿಯವರು ಒಂದು ದಿನ ಮುಖ ಮುರಿಯುತ್ತಾರೆ.

Acchigoo Modhalu Covid Doctor Diary by HS Anupama Kavalakki Mail

ಆದರೆ ಕಸ ತೆಗೆಯುವ ಯಾವ ವ್ಯವಸ್ಥೆಯೂ ಇರದ ಹಳ್ಳಿಗಳಲ್ಲಿ ಅಂಥವನ್ನು ಎತ್ತಲು ಮುನ್ಸಿಪಾಲ್ಟಿ ಲಾರಿ ಬರುತ್ತದೆಯೆ? ಖಂಡಿತಾ ಇಲ್ಲ. ಅದರ ದುರ್ವಾಸನೆ ಒಳಗೂ ಬರತೊಡಗಿದಾಗ ಅನಿವಾರ್ಯವಾಗಿ ಕ್ಯಾಸನನ್ನು ಹುಡುಕಿ ಹೊರಡುತ್ತಾರೆ. ಕೊಳೆತ ಪ್ರಾಣಿಯ ವಾಸನೆ ಹದ್ದಿಗೆಷ್ಟು ಬೇಗ ತಿಳಿಯುವುದೋ ಅದಕ್ಕಿಂತ ಬೇಗ ಗಡಂಗಿನಲ್ಲಿ ಕುಳಿತ ಕ್ಯಾಸನಿಗೆ ತಿಳಿಯುತ್ತದೆ. ಅವ ಮತ್ತೆ ಅವರೆದುರು ಸುಳಿಯುತ್ತಾನೆ. ಅವರು ತೆಗೆ ಮಾರಾಯಾ ಎಂದು ರಾಗ ತೆಗೆದಕೂಡಲೇ ಹೊರಗೊಮ್ಮೆ ಹೋಗಿ ಕಾಗೆಗಳು ಕುಕ್ಕುತ್ತಿರುವ ದುರ್ನಾತ ಬೀರುವ ಮಾಂಸದ ಸುತ್ತ ಒಂದು ಸುತ್ತು ಹಾಕಿ ಅದರ ಮಾಂಸ ಈಗ ಶಿಥಿಲವಾಗಿದೆಯೆಂದೂ, ನಿನ್ನೆಯಾಗಿದ್ದರೆ ನಾಕು ಕಾಲಿಗೆ ಹಗ್ಗ ಕಟ್ಟಿ ಎಳೆದೊಯ್ದ ಹಾಗೆ ಇವತ್ತು ಎಳೆಯಲು ಹರ್ಗಿಸ್ ಆಗುವುದಿಲ್ಲೆಂದೂ, ಅದನ್ನು ಚೀಲಕ್ಕೆ ತುಂಬಿ ಹೊತ್ತೊಯ್ದು ಗುಡ್ಡ ಹತ್ತಬೇಕೆಂದೂ, ಅದಕ್ಕೆ ಇನ್ನೂರು ರೂಪಾಯ್ ಕೊಡದ ಹೊರತು ಅಂಥ ಕೆಲಸ ಮಾಡಲು ಮನಸ್ಸೇ ಬರುವುದಿಲ್ಲವೆಂದೂ ಹೇಳುತ್ತಾನೆ.

ನಿನ್ನೆಗಾದರೆ ನೂರಕ್ಕೇ ಮುಗಿಯುತ್ತಲಿದ್ದದ್ದು ಸುಮ್ಮನೇ ತಡ ಮಾಡಿ ಮತ್ತೆ ನೂರು ಕಳೆದುಕೊಂಡೆವಲ್ಲ ಎಂದವರು ಯೋಚಿಸುವಾಗ ಅವ ಅವರ ಮನೆಯೆದುರೇ ಕೂತು, ‘ಬೆಳುಗ್ಲಿಂದ ಎಂತಾದೂ ಇಲ್ಲ, ಸತ್ತಂವ ಅಂವ ನನ್ ಮಗಾ ದುಡುದ್ ದುಡ್ ಕೊಡುದಿಲ್ಲ. ಸತ್ತುಂದು, ನನ್ ಹೇಡ್ತಿ ಒಂದ್ ಚಾ ಕಣ್ ಕುದಿಸುದಿಲ್ಲ. ಒಂದ್ ಚಾ ಮಾಡಿ ಕಾಂತೆ’ ಎಂದು ಕೃಶ ಕಾಲುಗಳನ್ನು ಮಡಚಿ ಕೂತು ಬಿಡುತ್ತಾನೆ. ಬೆಳಿಗ್ಗೆಯೇ ಎರೆದು ತಣ್ಣಗಾಗಿರುವ ಒಂದೆರೆಡು ದೋಸೆಯೋ, ಅವಲಕ್ಕಿ ಹುಳಿಯೋ, ಕಡುಬೋ, ಎಲ್ಲ ಖಾಲಿಯಾಗಿದ್ದರೆ ಅನ್ನ-ಉಪ್ಪು-ಉಪ್ಪಿನಕಾಯಿ-ಮಜ್ಜಿಗೆಯೋ ಅವನೆದುರು ಬರುತ್ತವೆ. ಜೊತೆಗೊಂದು ಲೋಟ ಚಾ. ಅಷ್ಟಾದ ಮೇಲೆ ಅರ್ಧ ದುಡ್ಡು ಅವನ ಕೈಗೆ ಬೀಳಬೇಕು, ಇಲ್ಲದಿದ್ದರೆ ಏಳುವನಲ್ಲ. ಹಣ ಕಂಡದ್ದೇ ಅವನ ಕನಸುಗಳು ಗರಿಗೆದರುತ್ತವೆ. ಕ್ಯಾಸನಿಗೆ ಊಟದ ಕನಸು ಬೀಳಲು ಒಂದು ಪ್ರಾಣಿ ಸತ್ತು ಹಪ್ಪು ಎಳೆಯುವಂತಾಯ್ತೇ ಎಂದು ನನಗೆ ನಿಮಗೆ ಬೇಜಾರೆನಿಸಬಹುದು. ಆದರೆ ಬೆಳಿಗ್ಗೆಯೇ ಅರ್ಧ ಕೊಟ್ಟೆ ಸಾರಾಯಿ ಏರಿಸಿ ಬಂದಿರುವ ಅವನಿಗೇನೂ ಅನಿಸುವುದಿಲ್ಲ. ಮತ್ತು ಇಂಥ ಸಂದರ್ಭವಲ್ಲದಿದ್ದರೆ, ಅವನು ‘ಸ್ಟಿಕ್‘ ಆಗಿ ಇನ್ನರ‍್ರುಪಾಯ್ ಹರ‍್ತ ಆಗುದಿಲ್ಲ ಎಂದು ಹೇಳದಿದ್ದರೆ, ಅವನನ್ನು ಕರೆದು ಕೂಡಿಸಿ ಅವಲಕ್ಕಿ ಹುಳಿ, ದೋಸೆ ಚಾ ಕೊಟ್ಟು ಯಾರು ಸತ್ಕರಿಸುತ್ತಾರೆ!? ಹಾಗಾಗಿ ಅವನು ತನ್ನ ಕಳೆಯೇರಿಸಿಕೊಂಡು ಊಂಚಾಗೊಳ್ಳುವುದೇ ಈ ಸಂದರ್ಭದಲ್ಲಾದ್ದರಿಂದ ಖುಷಿಯಿಂದ ಎದ್ದು ಹೊರಡುತ್ತಾನೆ.

ಅವತ್ತು ಬೆಳಿಗ್ಗೆಯಿಡೀ ಅವನಿಗೆ ಕೆಲಸವಿರುತ್ತದೆ. ಕೊಳೆತ ದೇಹವನ್ನು ಕಮ್ತೀರ ಹತ್ರ ಬೇಡಿ ತಂದ ಶಿಮಿಟು ಚೀಲದೊಳಗೆ ತುಂಬಿ, ಬಾಳೆಪಟ್ಟೆ ಹಗ್ಗದಿಂದ ಅದರ ಬಾಯಿ ಕಟ್ಟಿ, ಎಳೆದುಕೊಂಡು ಹೋಗಲು ಮೊದಲು ಮಾಡುತ್ತಾನೆ. ಭಾರದ ಪ್ರಾಣಿಯಾಗಿದ್ದರೆ ಪರ್ಬುಗಳ ತೋಟದ ಕಳೆ ತುಂಬುವ ದೂಡು ಗಾಡಿ ತರುತ್ತಾನೆ. ಕ್ಯಾಸನ ಇಂಥಾ ಬೆಳಗುಗಳನ್ನು ನಮ್ಮೂರಿನಲ್ಲಿದ್ದರೆ ನೀವು ಸಾಕಷ್ಟು ಸಲ ನೋಡಬಹುದು.

ಎಲ್ಲ ಊರುಗಳಲ್ಲಿರುವಂತೆ ಈ ಊರ ತುಂಬಾ ಆರಾರು ತಿಂಗಳಿಗೊಮ್ಮೆ ಬೆದೆಗೆ ಬರುವ ಹೆಣ್ಣುಗಳು, ಹೆಣ್ಣುಗಳ ಹಿಂದೆ ಉಚ್ಚೆ ಹಾರಿಸುತ್ತಾ ಪರಸ್ಪರ ಕಚ್ಚಾಡುತ್ತ ಓಡುವ ಗಂಡು ನಾಯಿಗಳು ಇವೆ. ದೊಡ್ಡ ನಾಯಿಗಳು ಕಚ್ಚಾಡಿ ಸತ್ತರೆ ಹೆಣ್ಣುನಾಯಿ ಹಾಕುವ ಮರಿಗಳು ಒಂದೆರೆಡು ತಿಂಗಳಾಗುವುದರೊಳಗೆ ಗಾಡಿಯ ಕೆಳಗೆ ಪಚಡಿಯಾಗಿ, ಚರಂಡಿಗೆ ಬಿದ್ದು, ದೊಡ್ಡ ನಾಯಿ ಮುರಿದು, ಬೀದಿ ದನಗಳ ಕಾಲ್ತುಳಿತಕ್ಕೆ ಸಿಕ್ಕು ವಾರಕ್ಕೊಂದರಂತೆ ಸಾಯುತ್ತವೆ. ಗೋರಕ್ಷಕರು ರಿಫ್ಲೆಕ್ಟರು ಕಟ್ಟಿ ಕಾಪಾಡಲು ನೋಡಿದರೂ ಎಲ್ಲೋ ಒಂದೊಂದು ಬೀದಿ ದನಗಳೂ ಸಾಯುತ್ತಿರುತ್ತವೆ. ಅಂಥಾ ಸಾವುಗಳಿಗೆಲ್ಲ ದಾತ ನಮ್ಮ ಕ್ಯಾಸನೇ. ಅವನಿಗೆ ಒಂದಲ್ಲಾ ಒಂದು ಪ್ರಾಣಿಯ ಸಂಸ್ಕಾರದ ಕೆಲಸ ವಾರಕ್ಕೊಮ್ಮೆಯಾದರೂ ಸಿಗುತ್ತದೆ. ಹೆಂಡಕ್ಕಾಗುವಷ್ಟು ದುಡ್ಡಿಗೆ ಅದುಇದು ಮಾಡುತ್ತ ಉಳಿದ ಆರು ದಿನಗಳು ಕಳೆಯುತ್ತವೆ. ಆ ಆರು ದಿನಗಳಲ್ಲಿ ಅವನ ದೊಡ್ಡ ಕೆಲಸ ಹೆಂಡತಿಯನ್ನು ಪೀಡಿಸಿ ಬಡಿಯುವುದು. ‘ನಾ ವಬ್ನೆ ದುಡ್ಕಂಬ್ಯರ್ಬಕ? ಸತ್ತಳು ನೀ ಯಾಕಿದಿ? ಅಂವಾ ಮಿಂಡ್ರಿಗುಟ್ಟಿದ ನಿನ್ ಮಗಾ ಅಂವಾ ತಂದುದ್ ಎಲ್ಲೋಯ್ತು, ಐವತ್ರುಪಾಯ್ ಕೊಡು’ ಎಂದವಳನ್ನು ಬೈದು, ಹೊಡೆದು; ಅವಳ ಬಳಿ ಬೈಸಿಕೊಂಡು, ದೂಡಿಸಿಕೊಂಡು; ಮಗನ ಬಳಿ ಹೊಡೆಸಿಕೊಂಡು ಆರು ದಿನ ಕಳೆಯುತ್ತಾನೆ. ‘ಆ ಸತ್ತಳು ಹ್ವಟ್ಟೀಗೂ ಹಾಕ್ತಿಲ್ಲ’ ಎಂದು ಶಾಪ ಹಾಕುತ್ತ ದೊಡ್ಡವರ ಮನೆಯಲ್ಲೋ, ಚಾ ಅಂಗಡಿಯಲ್ಲೋ, ಆಮ್ಲೆಟ್ ಗಾಡಿಯ ಬದಿಯಲ್ಲೋ ಕಸ ಹೊಡೆದು, ನಾಯಿಕಾಗೆಗಳ ಹಚಾ ಎಂದು ಓಡಿಸಿ, ಗಿರಾಕಿಗಳನ್ನು ಕೂಗಿ ಕರೆದು ಹಾಡು ಹೇಳಿ ಎಂಥದೋ ಒಂದನ್ನು ಬೇಡಿ ಅಷ್ಟಿಷ್ಟು ಹೊಟ್ಟೆಗೆ ಹಾಕಿಕೊಳ್ಳುತ್ತಾನೆ. ಜ್ಯೋತಿಷಿಗಳ ಆಪ್ತ ಸಹಾಯಕನಾಗಿ ಹೊಟ್ಟೆಗಷ್ಟು ದಾರಿ ಮಾಡಿಕೊಳ್ಳುತ್ತಾನೆ.

ಅಂಥವನ ಕೈಗೆ ಇನ್ನೂರು ರೂಪಾಯಿ ಬಂದ ದಿನ ಅವನಿಗೆ ತಾನೇ ರಾಜ್ಕುಮಾರ್ ಎನಿಸುವುದು. ಯಾರೇ ಕೂಗಾಡಲಿ ಹಾಡು ಹೇಳುತ್ತ ಅರೆ ಉಂಯ್ಞ್ ಒರೆ ಹುಂಯ್ಞ್ ಎಂದರಚುತ್ತ ಚೀಲ ಎಳೆದೊಯ್ಯುತ್ತಾನೆ.

ಹೀಗಿದ್ದ ನಮ್ಮ ಕ್ಯಾಸನಿಗೆ ಲಾಕ್‌ಡೌನ್ ವಿಚಿತ್ರ ಕಷ್ಟ ತಂದೊಡ್ಡಿತು. ಕೆಲಸವೂ ಇಲ್ಲ, ಪೇಟೆಯೂ ಇಲ್ಲ, ಹೋಟೆಲೂ ಇಲ್ಲ, ಬಾರೂ ಇಲ್ಲದೆ ಸತ್ತಿರುವೆನೋ ಬದುಕಿರುವೆನೋ ತಿಳಿಯದಂತೆ ಉಸಿರಾಡಿಕೊಂಡಿರುವಂತಾಗಿತ್ತು. ಅಂಥದ್ದರಲ್ಲಿ ಇವತ್ತು ಕೆಲಸ ಸಿಕ್ಕಿಬಿಟ್ಟಿದೆ. ಲಾಕ್ಡೌನಂಬೋ ಗ್ರಾಚಾರ ಮುಗಿದುಹೋಗಿ ಅವನಿಗೆ ಬಲು ಖುಷಿಯಾಗಿದೆ. ಆ ಖುಷಿಗೆ ಮತ್ತಷ್ಟು ನಶೆ ಏರುವಂತೆ ಇಷ್ಟುದಿನ ರಸ್ತೆ ಮೇಲೆ ಬಿದ್ದುಕೊಂಡು ರೂಢಿಯಾದ ಎಳೆ ಗೂಳಿಗೆ ಯಾವುದೋ ಒಂದು ಲಾರಿ ಹೊಡೆದು ಹೋಗಿಬಿಟ್ಟಿದೆ. ಕೊಂದವರು ಯಾರೆಂದು ಯಾರಿಗೂ ಗೊತ್ತಿಲ್ಲ. ಆದರೆ ಹಾಲಿನಂಗಡಿ ಎದುರು ಬಿದ್ದ ಗೂಳಿ ವಿಲೇವಾರಿಯಾಗದಿದ್ದರೆ ಸುಖವಿಲ್ಲ. ಕೊನೆಗೆ ಹಾಲಿನಂಗಡಿಯ ಶೇಖರಿಯು ಇನ್ನೂರಕ್ಕೆ ಮಾತಾಡಿ ಕ್ಯಾಸನಿಗೆ ಆ ಪುಟ್ಟ ಗೂಳಿಯನ್ನು ವಿಲೇವಾರಿ ಮಾಡುವ ಕೆಲಸ ಕೊಟ್ಟೇ ಬಿಟ್ಟ.

ಇನ್ನೂರು ರೂಪಾಯಿಗೆ ಕ್ಯಾಸನಿಗೆ ಎಂತೆಂಥ ರಮ್ಯ ಕನಸುಗಳಿವೆ ಗೊತ್ತೆ? ‘ಅದ್ರಲ್ಲಿ ನರ‍್ರುಪಾಯ ಹೆಂಡ್ದಗ್ಡಿ ರೋಯ್ತಪ್ಪನ ಮಕಕ್ಕೆ ಹಳೀ ಸಾಲದ್ ಬಾಬ್ತು ಅಂತ ಒಗ್ದು, ಒಂದು ಕೊಟ್ಟೆ ತಕಂಡಿ, ಜಾನಿ ಹತ್ರೆ ಐವತ್ರುಪಾಯಿ ಮೀನೂಟ ಪುಲ್ ಕೊಡು ಅನ್ಬೇಕು. ಮೊದ್ಲೆ ಮೀನೂಟ ಮಾಡ್ಲ ಅತ್ವ ಕೊಟ್ಟೆ ತಕಳ್ಳಾ? ಊಟುಕ್ ಮದ್ಲೆ ಕೊಟ್ಟೆ ಇಲ್ದಿದ್ರೆ ಸರಿಯಾಗಲ್ಲ, ಅದ್ಕೆ ನರ‍್ರುಪಾಯ ಮದ್ಲು ವಗದು, ಎಳ್ಡು ಪಾಕೀಟ ಸಾರಾಯ್ ಸರ‍್ಕಂಡು, ಐವತ್ರುಪಾಯಿ ಪುಲ್ ಊಟನೆ ತಕಬೇಕು…’

ರೇಶನ್ ಅಕ್ಕಿಗೆ ಎಂಥದೋ ಒಂದು ಚಟ್ನೆನೋ, ಗಸಿನೋ ಮಾಡಿ ಊಟ ಬಡಿಸುವ ಹೆಂಡತಿಯ ಮೇಲೆ ಕೋಪಗೊಂಡು ಒಳ್ಳೇ ಊಟ ಮಾಡುವ ಕನಸಿನಲ್ಲಿ ನಡೆಯುತ್ತಿರಲು ಗಾಜಿನ ಲೋಟದಲ್ಲಿ ನೊರೆ ತುಳುಕುವ ಸಾರಾಯಿ, ಬಂಗ್ಡೆ ಮೀನ ಫ್ರೈ, ಬಳಚಿನ ಸುಕ್ಕಾ, ಚಟ್ಲಿ ಸಾರು, ಚಪಾತಿ ಎಲ್ಲ ಅವನ ಕಣ್ಣೆದುರು ಅರಳತೊಡಗಿದವು. ‘ಥತ್, ಈ ಗೂಳಿ ತಡ್ ಒಡಿಯಾ’ ಎಂದು ಬೈದು, ಸತ್ತ ಗೂಳಿಯನ್ನು ಕಷ್ಟಪಟ್ಟು ಚೀಲದಲ್ಲಿ ತುಂಬಿದ. ಮಲ್ನಾಡು ಗಿಡ್ಡ ಜಾತಿಯ ಹೋರಿ ಕರು. ಇನ್ನೂ ಗೂಳಿ ಅನ್ನುವಷ್ಟೂ ದೊಡ್ಡದಾಗಿಲ್ಲ. ಸೋಂಬೇರಿಯಂತೆ ರಸ್ತೆ ಮೇಲೆ ಮೈ ಕಾಯಿಸುತ್ತ ಮಲಗಿ ಸತ್ತು ಹೋಯಿತಲ್ಲ ಅಂದುಕೊಂಡು ಹಗ್ಗ, ಚೀಲಗಳ ಒಟ್ಟು ಮಾಡಿದ. ಮೊದಲಾಗಿದ್ದರೆ ಗೋ ರಕ್ಷಕರು ಪೂಜೆ ಮಾಡಿ ಅವನೊಡನೆ ಅಷ್ಟುದೂರ ಕೈ ಜೋಡಿಸಿ ಪುಣ್ಯ ಕಟ್ಟಿಕೊಳ್ಳುತ್ತಿದ್ದರು. ಈಗ ಲಾಕ್ಡೌನಲ್ಲಿ ಎಲ್ಲ ನಾಪತ್ತೆಯಾಗಿಬಿಟ್ಟಿದ್ದಾರೆ. ಗೂಳಿ ತುಂಬಿದ ಚೀಲವನ್ನು ಪರ್ಬುಗಳ ಮನೆಯ ಕಳೆ ಗಾಡಿ ಮೇಲೆ ಎಳೆದು ಹಾಕಿ, ಒಬ್ಬನೇ ರಸ್ತೆ ಮೇಲೆ ಎಳೆದುಕೊಂಡು ಹೋಗುವುದರಲ್ಲಿ ಮಧ್ಯಾಹ್ನವಾಯಿತು. ‘ಬೆಗ್ರು ರ‍್ದು ಹಳ್ಳಾತು, ಛೇ, ಇನ್ನರ‍್ರುಪಾಯ್ ರಾಶ್ಶೀ ಕಮ್ಮಿಯಾತು’ ಎಂದು ಮೊದಲ ಬಾರಿ ಅನಿಸಿತು. ಇದನ್ನು ಗುಡ್ಡೆ ಹತ್ತಿಸುವುದರಲ್ಲಿ ತಾನೇ ಹೆಣವಾದೇನು ಅನಿಸಿ ಅಷ್ಟರಲ್ಲಿ ಜಾನಿ ಹೋಟೆಲು ಬಾಗಿಲು ಹಾಕಿಬಿಡಬಹುದಾ ಎಂದು ಭಯವಾಯಿತು. ಸರಸರ ಗಾಡಿ ದೂಡಿಕೊಂಡು ಹೋಗುತ್ತ, ‘ಸತ್ತ ದನಿನೆಲ್ಲ ಹುಗುದ್ ಎಂಥ ಸಾವುಕೆ? ಬಿಸಾಡ್ರೆ ಕಾಕಿ, ಹದ್ದು ನರೀನರೆ ತಿಂತೊ’ ಎಂದುಕೊಂಡು ಊರಗಡಿ ದಾಟಿದ್ದೇ ಸಿಗುವ ದೊಡ್ಡ ಚರಂಡಿಯಲ್ಲಿ ಯಾರೂ ರಸ್ತೆ ಮೇಲಿಲ್ಲದ್ದನ್ನು ಕಂಡು ಎತ್ತಿ ಬಿಸಾಡಿದ.

ಅದೆಲ್ಲಿಂದ ಆ ಕೃಶ ದೇಹಕ್ಕೆ ಅಷ್ಟು ಶಕ್ತಿ ಬಂತೋ, ಬೀಸಿದ ಹೊಡೆತಕ್ಕೆ ಚೀಲ ಸುದರ್ಶನ ಚಕ್ರದಂತೆ ರೊಂಯ್ಞ ರೊಂಯ್ಞ ತಿರುಗುತ್ತ ಅಲ್ಲೆಲ್ಲೋ ಹೋಗಿ ಬಿದ್ದಿತು. ಅದು ಹಳ್ಳದೊಳಗೆ ಬಿತ್ತೋ, ಅಥವಾ ಅಲ್ಲೇ ಇರುವ ಗಾಚ ಹೆಗ್ಡ ತ್ವಾಟದೊಳಗೆ ಬಿತ್ತೋ ಎಂಬ ಯೋಚನೆಯೇ ಅವನಿಗೆ ಬರಲಿಲ್ಲ. ಯಾಕೆಂದರೆ ಒಗಾಸಿದ ಹೊಡೆತಕ್ಕೆ ಅದರ ವಿರುದ್ಧ ದಿಕ್ಕಿಗೆಲ್ಲೋ ಹೋಗಿ ತಾನೇ ಬಿದ್ದಿದ್ದ. ಬಿದ್ದವನೆದ್ದು ಅರೆಗಣ್ಣು ಬಿಟ್ಟುಕೊಂಡು ಹೆಂಡ, ಊಟ ಎರಡನ್ನೂ ಕೊಡುವ ‘ಸನ್‌ಶೈನ್’ಗೆ ರಾಜಠೀವಿಯಿಂದ ಪ್ರವೇಶ ಪಡೆದ. ನೂರು ರೂಪಾಯಿಯನ್ನು ಬಾರ್ ಸೆಕ್ಷನ್ನಿನ ರೋಯ್ತಪ್ಪ ನಾಯ್ಕರ ಎದುರು ‘ಇದ್ ಹಳಿ ಬಾಕಿದು’ ಎಂದು ಟೇಬಲ್ಲಿನ ಮೇಲೆ ಹೊತ್ತಾಕಿ, ಎರಡು ಕೊಟ್ಟೆ ಕೊಂಡ. ‘ಒಂದ್ ಪಿಶ್ ಮೀಲ್ಸ್ ಪುಲ್’ ಎಂದು ಪಕ್ಕದಲ್ಲೇ ಇರುವ ಜಾನಿಯ ಮೀನು ಹೋಟೆಲಿಗೆ ಆಳ್ಡರ್ ಮಾಡಿ ಲೋಟಕ್ಕೆ ಕೊಟ್ಟೆಯಲ್ಲಿರುವುದನ್ನು ಸುರಿಯುತ್ತ ಕೂತ.

Acchigoo Modhalu Covid Doctor Diary by Dr HS Anupama

ಕಲೆ : ಡಾ. ಕೃಷ್ಣ ಗಿಳಿಯಾರ್

*

ಎಲ್ಲ ಊರುಗಳಲ್ಲೂ ಬಡವರ ಅಂಗಡಿಗಳೆಂದು ಒಂದಷ್ಟು ಜಾಗಗಳಿರುತ್ತವೆ. ಅದು ಬಡವರು ತೆರೆದ ಅಂಗಡಿಯಲ್ಲ, ಎಂತಹ ಬಡವರಿಗೂ ಅವರಿಗಿರುವ ಕಾಸಿಗೆ ತಕ್ಕ ಕಜ್ಜಾಯವನ್ನೋ, ವಸ್ತುವನ್ನೋ ಕೊಡಲು ಅವರು ಸಿದ್ಧರಿರುತ್ತಾರೆ. ಹಾಗೆ ನಮ್ಮೂರಿನಲ್ಲಿಯೂ ಒಂದು ಬಡವರ ಅಂಗಡಿಯಿದೆ. ಸುರೇಶನ ಬಳಿ ಹೋಗಿ ನೀವು ಐದು ರೂಪಾಯಿಯ ಸಕ್ಕರೆ, ಎರಡು ರೂಪಾಯಿಯ ಚಹಾಪುಡಿ ತರಬಹುದು. ಐದು ರೂಪಾಯಿಯ ಗೋಡಂಬಿ, ಐದು ರೂಪಾಯಿಯ ದ್ರಾಕ್ಷಿ ತರಬಹುದು. ಒಂದು ರೂಪಾಯಿಯ ಉಪ್ಪಿನಕಾಯಿ, ಎರಡು ರೂಪಾಯಿಗೆ ನಾಲ್ಕು ಸೂಟಾ ಪಾರ್ಲೆ ಜಿ ಬಿಸ್ಕೀಟು, ಎಂಟಾಣೆ ಊದಬತ್ತಿ, ಒಂದ್ರುಪಾಯಿ ಎಣ್ಣೆ ತಗೊಳ್ಳಬಹುದು. ಬಂದವರ ಬಳಿ ಇರುವ ದುಡ್ಡಿಗೆ ತಕ್ಕಂತೆ ಅವರು ಬಯಸಿದ ವಸ್ತುವಿನ ರೂಪ, ಆಕಾರ, ಪರಿಮಳ ಹೊಂದಿದ ವಸ್ತು ಅಷ್ಟೋ ಇಷ್ಟೋ ಸಿಗುತ್ತದೆ. ಅದು ತಮ್ಮ ದುಡ್ಡಿಗೆ ತಕ್ಕ ತೂಕ ಇದೆಯೆ, ಅದರ ಗುಣ ಹೇಗಿದೆ ಎನ್ನುವುದರ ಬಗೆಗೆ ಕೊಳ್ಳುವವರು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲೋ ಬಿದ್ದ ಒಂದು ತೆಂಗಿನಕಾಯಿ ಹೆಕ್ಕಿ ತಂದು ಅಥವಾ ದಾರಿ ಮೇಲುದುರಿಬಿದ್ದ ಅಥವಾ ಬೀಳಿಸಿದ ಯಾರದೋ ಮನೆಯ ಹಲಸು, ಮಾವುಗಳನ್ನು ವಿನಿಮಯ ಮಾಡಿ ಒಂದೆರೆಡು ಸಾಮಾನು ಕೊಳ್ಳುವ ಪರಿಸ್ಥಿತಿಯಿರುವವರು ಅಂಥದನ್ನೆಲ್ಲ ಯೋಚಿಸುತ್ತ ಕೂತರೆ ಹೊಟ್ಟೆ ತುಂಬುವುದಿಲ್ಲ. ಮನೆಯಲ್ಲಿರುವ ಎಣ್ಣೆ ಪ್ಯಾಕೆಟ್ಟು, ಅಕ್ಕಿ, ಸಾಬೂನನ್ನು ಗೊತ್ತಿಲ್ಲದಂತೆ ಎತ್ತಿತಂದು ಇಲ್ಲಿ ಸಿಕ್ಕ ರೇಟಿಗೆ ಮಾರಿ ಕಳ್ಳಭಟ್ಟಿ ಕುಡಿಯುವ ಹೆಚಿಡ ಕುಡುಕರಿಗೆ ಎಷ್ಟು ಸಾರಾಯಿ ಬರುವುದು ಎಂಬ ಚಿಂತೆ ಬಿಟ್ಟರೆ ಲಾಭನಷ್ಟ ಮುಖ್ಯವೇ ಅಲ್ಲ.

ಇಂಥ ವ್ಯಾಪಾರದಿಂದ ಸುರೇಶನಿಗೂ ಲಾಭವಿದೆ. ಯಾಕೆಂದರೆ ಅವ ದೊಡ್ಡ ಬಂಡವಾಳ ಹೂಡುವ ವ್ಯಾಪಾರಿಯಲ್ಲ, ಅವನ ಅಂಗಡಿಯೆಂದರೆ ಒಂದು ಕೋಣೆ. ಏಳು ಹಲಗೆಗಳನ್ನು ಒಂದರ ಪಕ್ಕ ಒಂದು ನಿಲ್ಲಿಸಿ ಅಡ್ಡ ಎರಡು ಕಬ್ಬಿಣದ ರಾಡು ಇಟ್ಟು ಬೀಗ ಹಾಕುವ ಕೋಣೆಯಷ್ಟೆ ಅವನ ಅಂಗಡಿ. ಅದರ ಎದುರು, ಅಕ್ಕಪಕ್ಕ ಸ್ವಾಗೆಯ ನೆರಕೆ ಕಟ್ಟಿ, ಮಡ್ಲಿನ ಮಾಡು ಇಳಿಸಿ ಕೂರಲು ಒಂದು ಹಲಗೆ ಹಾಕಿದ ಬೆಂಚು, ಸಾಮಾನು ನೇಲಿಸಲು ಗಳ ಹಾಕಿದ್ದಾನೆ. ರಾತ್ರಿ ಅಂಗಡಿ ಮುಚ್ಚುವಾಗ ಅವನು ಎಲ್ಲವನ್ನು ತೆಗೆದು ನಡುಮಧ್ಯ ಇಟ್ಟು ಹೋಗಬೇಕು. ಹೀಗೆ ಪ್ರತಿದಿನ ಅಂಗಡಿಯ ನಡುಮಧ್ಯ ಒಂದರ ಮೇಲೊಂದು ಹೇರಿರುವ ಸಾಮಾನುಗಳನ್ನು ತೆಗೆದು ಜೋಡಿಸಿಡುವುದಕ್ಕೇ ಅವನಿಗೆ ತಾಸು ಹೊತ್ತು ಬೇಕಾಗುತ್ತದೆ. ಇಲಿ, ಹೆಗ್ಗಣಗಳು ಉಳಿಸಿರುವ ಸಾಮಾನುಗಳನ್ನೇ ಗಿರಾಕಿಗೆ ಮಾರುತ್ತಾನೆ. ಆ ಊರಲ್ಲಿ ಮತ್ತೆರೆಡು ದೊಡ್ಡ ಕಿರಾಣಿ ಅಂಗಡಿಗಳಿದ್ದರೂ ಇವನ ಅಂಗಡಿಗೆ ಬರುವ ಗಿರಾಕಿಗಳೇ ಬೇರೆ ಇದ್ದಾರೆ. ಹಾಗಾಗಿ ಚೀಲದ ಕೊನೆಗೆ ಇಷ್ಟು ವಸ್ತು ಉಳಿಯಿತೆಂದು, ಹುಳಿಯಿತೆಂದು, ಕುಟ್ಟೆಯಾಯಿತೆಂದು ಯಾವ ವಸ್ತುವೂ ಅವನಲ್ಲಿ ದಂಡವಾಗುವುದಿಲ್ಲ. ಎಷ್ಟೋ ಸಲ ಆ ದೊಡ್ಡ ಕಿರಾಣಿ ಅಂಗಡಿಯವರು ತಮ್ಮ ‘ಕಂಡೆ’ ಆದ ವಸ್ತುಗಳನ್ನು ಅರ್ಧ ಬೆಲೆಗೆ ಇವನಿಗೆ ಮಾರಿ ತಮ್ಮ ನಷ್ಟ ಕಡಿಮೆ ಮಾಡಿಕೊಳ್ಳುವುದಿದೆ.

ಕ್ಯಾಸನೂ ಇವತ್ತು ಸುರೇಶನ ಅಂಗಡಿಗೆ ಬಂದಿದ್ದಾನೆ. ಅವನ ಕೈಯಲ್ಲಿ ಐವತ್ತು ರೂಪಾಯಿಯ ಹಸಿರು ನೀಲಿಯ ನೋಟು ನವಿಲುಗರಿಯಂತೆ ನಳನಳಿಸುತ್ತಿದೆ. ರಾಜ ಠೀವಿಯಲ್ಲಿ ಸುರೇಶನ ಎದುರು ‘ಹ್ಞಂ, ಸಾಮಾನ ಬೇಕಿತ್ತು’ ಎಂದು ಐವತ್ತು ರೂಪಾಯ್ ಚಾಚಿದ. ಎರಡು ದಿನದಿಂದ ಮುರುಟಿ ಮಲಗಿರುವ ಹೆಂಡತಿಯ ಮುಖಕ್ಕೆ ಸಾಮಾನು ಒಯ್ದು ಬಿಸಾಡಬೇಕು. ‘ಏನಾರ ಅಡ್ಗಿ ಮಾಡು, ತಿಂದ್ ಸಾಯಿ ಅನ್ಬೇಕು’ ಎಂದುಕೊಂಡು ನಿಂತ. ‘ಏನ್ ಬೇಕ ರಾಜ್ಕುಮಾರ್?’ ಎಂದು ಸುರೇಶ ಕುಹಕದ ಎಳೆಯಿರುವ ನಗುವನ್ನು ಅವನತ್ತ ಒಗೆದ. ‘ಒಂದ್ ಐದ್ರುಪಾಯ್ ಎಣ್ಣಿ, ಐದ್ರುಪಾಯ್ ತಗ್ರಿ ಬ್ಯಾಳಿ, ಐದ್ರುಪಾಯಿ ಕಾರ, ಐದ್ರುಪಾಯ್ ಹುಳಿ, ಐದೈದ್ರುಪಾಯ್ ಈರೊಳ್ಳಿ ಬಳ್ಳೊಳ್ಳಿ, ಔಲಕ್ಕಿ ಹತ್ರುಪಾಯಿಂದು, ಸಕ್ರಿ ಚಾಪುಡಿ ಹತ್ರುಪಾಯುಂದು, ಒಂದ್ ಶಣ್ ತೆಂಗ್ನಕಾಯಿ, ಎಡ್ರುಪಾಯುಂದು ಉಪ್ಪು, ಒಂದ್ ಲೈಬಾಯ್ ಸಾಬು, ಗಣೇಶ ಎಡ್ರುಪಾಯುಂದು…’

ಅವನ ಕಣ್ಣೆದುರು ಮನೆಯಲ್ಲಿ ಏನೇನು ಇಲ್ಲವೆಂದು ಹೆಂಡತಿ ಕೂಗಾಡುತ್ತಿದ್ದಳೋ ಅದೆಲ್ಲ ಬರುತ್ತಿದ್ದಾಗ ‘ಹ್ವಾಯ್, ತಡ್ಯ, ಇದು ಎಷ್ಟ್ರುಪಾಯಿ ನೋಟು ಹೇಳಿ ಗೊತ್ತದೆಯಾ?’ ಎಂದು ಗಾಳಿಯಲ್ಲಿ ನೋಟು ಆಡಿಸಿ ಕೇಳಿದ ಸುರೇಶ.

ಕ್ಯಾಸ ಪಿಚ್ಚನೆ ಮಳ್ಳುನಗೆ ನಕ್ಕ.

ಅವ ಹೀಗೆ ಆಗಿದ್ದಾದರೂ ಯಾಕೆ? ಮೊದಲೆಲ್ಲ ಕೈತುಂಬ ಕೆಲಸ ಮಾಡಿ ತಲೆಹೊರೆ ತುಂಬ ಸಾಮಾನು ಒಯ್ದು ಮಕ್ಕಳ, ಹೆಂಡತಿಯ ಹೊಟ್ಟೆ ಹೊರೆದವ ಅವನು. ನಡುನಡುವೆ ಟೆಂಟಿಗೆ ಸಿನಿಮಾ ಬಂದಾಗೆಲ್ಲ ಸಿನಿಮಾ ನೋಡಿ, ಆಟ ಇದ್ದಾಗೆಲ್ಲ ಯಕ್ಷಗಾನ ನೋಡಿ, ಯಾರದೋ ಮನೆಯ ಬಾಗಿಲಾಚೆ ಕೂತು ವಾರಕ್ಕೊಂದು ಸಲ ಟಿವಿಯಲ್ಲಿ ಬರುವ ಸಿನಿಮಾ ನೋಡಿ ದುಡಿಮೆಯನ್ನೂ ಕಲಾಸಕ್ತಿಯನ್ನೂ ಒಟ್ಟೊಟ್ಟು ನಡೆಸಿಕೊಂಡು ಹೋದವ. ಅದ್ಭುತವಾಗಿ ಕೊಳಲು ಬಾರಿಸುತ್ತಿದ್ದವ. ಅಂಥವ ಹೀಗೇಕಾದ? ಕ್ಯಾಸನೇ ಹೇಳುವ ಪ್ರಕಾರ ಈಗ ಟೆಂಟು ಸಿನಿಮಾ ಬರುವುದೇ ನಿಂತು ಅವನಿಗೆ ‘ಬ್ಯಾಜಾರಾಗದೆ.’ ಜೆಸಿಬಿ ಬಂದು ಮಣ್ಣು ಕೆಲಸಕ್ಕೆ ಕರೆಯುವವರೇ ಇಲ್ಲವಾಗಿ ‘ಬಾಳಾಟ ಕಷ್ಟಾಗದೆ.’ ಪ್ಲಾಸ್ಟಿಕ್ ಬುಟ್ಟಿ, ಗೊರಬುಗಳೆದುರು ಅವನು ಬಿದಿರು, ಬಳ್ಳಿಯಲ್ಲಿ ನೇಯ್ದ ಬುಟ್ಟಿ, ಗೊರಬುಗಳ ಕೇಳುವವರೇ ಇಲ್ಲವಾಗಿ ‘ಬುಡದ್ ಕೆಲ್ಸ ಮರ‍್ತು ಹೋಗುಕಾಗದೆ.’ ಮೊಬೈಲು ಬಂದು ಯಾರ ಮನೆಯಲ್ಲೂ ಈಗ ಕನ್ನಡ ಸಿನೆಮಾ ಹಚ್ಚುವುದಿಲ್ಲ. ಹಚ್ಚಿದರೂ ಅದರಲ್ಲಿ ಬರುವ ಈಚಿನ ಹೀರೋಗಳ ಕಂಡರೆ ಅವನಿಗೆ ಆಗುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಅಣ್ಣೋರಾದ ಡಾಕ್ಟರ್ ರಾಜ್ಕುಮಾರ್ ಸತ್ತೋದ ಮೇಲೆ ಅವನಿಗೆ ಜೀವನವೇ ಸಾಕೆನ್ನುವಂತಾಗಿದೆ. ಅಣ್ಣೋರು ಸತ್ತಾಗ ತಾನೇ ಸತ್ತಷ್ಟು ದುಃಖ ಪಟ್ಟು ಕೈ ಕಾಲಾಡಿಸದೆ ಮಲಗಿಬಿಟ್ಟಿದ್ದ. ಅದಾದಮೇಲೆ ಅಣ್ಣೋರ ಸಿನಿಮಾ ಒಂದಾದರೂ ನೋಡಬೇಕೆಂದು ಹಂಬಲಿಸುವನಾದರೂ ಹೇಗೆ ಎಂದು ಗೊತ್ತಾಗುತ್ತಿಲ್ಲ. ಅವನ ಏಕಾಂಗಿತನ ಬೆಳೆದಂತೆ ಸಾರಾಯಿ ಅವನ ದೋಸ್ತಿ ಬೆಳೆಸಿ ಈಗ ‘ಕಾಮ್ ನ ಪುರ್ಸತ್ ನ’ (ಕೆಲಸವೂ ಇಲ್ಲ, ಪುರುಸೊತ್ತೂ ಇಲ್ಲ)ದ ರಾಜ್ಕುಮಾರ್ ಆಗಿಬಿಟ್ಟಿದ್ದ. ಅವ ಸದಾ ರಾಜಕುಮಾರ್ ಹಾಡುಗಳನ್ನೇ ಹೇಳುವುದರಿಂದ ಅವನಿಗೆ ಊರವರು ಕ್ಯಾಸನೆಂಬ ಅವನ ಹೆಸರು ಬಿಟ್ಟು ರಾಜ್ಕುಮಾರ್ ಎಂದೇ ಹಲವೊಮ್ಮೆ ಕರೆಯುವರು. ಅದಕ್ಕವನಿಗೆ ಬೇಸರವಿಲ್ಲ, ಅದು ತನಗೆ ದೊರೆತ ಪ್ರಶಸ್ತಿಯೆಂದೇ ಭಾವಿಸಿದ್ದಾನೆ.

Acchigoo Modhalu Covid Doctor Diary by Dr HS Anupama

ಕಲೆ : ಡಾ. ಕೃಷ್ಣ ಗಿಳಿಯಾರ್

‘ನೀ ಕೊಟ್ಟುಂದು ಐವತ್ರುಪಾಯೋ ಐನರ‍್ರುಪಾಯೋ ಗೊತ್ತದೆಯ ರಾಜ್ಕುಮಾರ?’ ಸುರೇಶ ಮತ್ತೆ ಕೇಳಲು ತಲೆ ಕೊಡವಿ ಎಚ್ಚೆತ್ತ ಕ್ಯಾಸ ಅದರಲ್ಲಿ ಐವತ್ತಕ್ಕೆ ಸರಿಯಾಗುವ ಹಾಗೆ ಪಟ್ಟಿ ಇಳಿಸಿದ. ಇಳಿದ ಮೇಲೂ ಬಿಟ್ಟದ್ದರಲ್ಲಿ ಒಂದೆರಡಾದರೂ ಕೊಡು ಎಂದು ಚೌಕಾಸಿ ಮಾಡಿ ಅಂತೂ ತನ್ನ ಹರಕು ಟವೆಲು ತುಂಬುವಷ್ಟು ಸಾಮಾನು ಕಟ್ಟಿಕೊಂಡು ತಲೆ ಮೇಲೆ ಹೊತ್ತು ಹೊರಟ. ಅವ ತೇಲುತ್ತ ಹೊರಡುವುದಕ್ಕೂ, ಅದೆಲ್ಲಿಂದಲೋ ಬಂದು ನಿಂತ ಕಾರಿನ ರೇಡಿಯೋವು ರೇನ್ ಬೊ ಆಕಾಶವಾಣಿಯಲ್ಲಿ ಅಣ್ಣಾವರ ‘ಚಿನ್ನದ ಮಲ್ಲಿಗೆ ಹೂವೇ’ ಹಾಡು ಹಾಕುವುದಕ್ಕೂ ಸರಿಯಾಗಿ ಆ ಹಾಡೂ, ಅದನ್ನು ಹಾಡುವಾಗಿನ ಅಣ್ಣಾವರ ಅಭಿನಯದ ಸೀನೂ ನೆನಪಾಗಿ ಕ್ಯಾಸ ಕುಡಿದದ್ದೆಲ್ಲ ಗರ‍್ರನೆ ತಲೆಗೇರಿ ಹಾರಿಹೋಯಿತು. ಅವರು ಯಾರೋ, ಒಬ್ಬರೂ ಮಾಸ್ಕು ಕಟ್ಟಿಕೊಳ್ಳದ ಅದರಲ್ಲಿರುವವರು ಎಲ್ಲಿಯವರೋ, ಯಾರಿಗೆ ಗೊತ್ತು? ಆದರೆ ಅವರ ಕಾರಿನಲ್ಲಿ ಅಣ್ಣಾವರ ಹಾಡು ಕೇಳಿದ್ದೇ ಕ್ಯಾಸನಿಗೆ ಅವರು ತಮ್ಮವರು ಎನಿಸಿ ಹೋಯಿತು. ರೇಡಿಯೋ ಅನ್ನೋ ವಸ್ತುವೇ ಕಾಣದಿರುವಾಗ ಕಾರಿನಲ್ಲೂ ರೇಡಿಯೋ ಇರುವುದು ಕೇಳಿ ಕಗ್ಗತ್ತಲ ನಡುವೆ ಮಿಂಚುಬೆಳಕು ಕಂಡಂತಾಯಿತು. ಹೇಗಾದರೂ ರೇಡಿಯೋ ಇರುವ ಒಂದು ಕಾರು ಕೊಳ್ಳುವಂತಿದ್ದರೆ ಎಂಬ ಕನಸು ಕಾಣುತ್ತ ಹಾಡು ಬಂದ ದಿಕ್ಕಿನ ಕಡೆಗೆ ಸಾಮಾನು ಹೊತ್ತು ಭಾರವೇ ಇಲ್ಲದ ಹಗುರ ಹತ್ತಿಯಂತೆ ತೇಲಿ ಹೋಗತೊಡಗಿದನು.

*

ಪದಗಳ ಅರ್ಥ

ಹರ್ಗಿಸ್ = ಖಂಡಿತಾ ಹಪ್ಪು = ಕೊಳೆತ ದೇಹ ರಾಶ್ಶೀ = ತುಂಬಾ ಶಿಮಿಟು = ಸಿಮೆಂಟು ನೇಲಿಸಲು ಗಳ = ನೇತಾಡಿಸಲು ಬಿದಿರು ಗಾಚ ಹೆಗ್ಡ = ಗಜಾನನ ಹೆಗಡೇರ ಕೊಟ್ಟೆ = ಪ್ಯಾಕೆಟ್ ಸಾರಾಯಿ ಬೆಗ್ರು = ಬೆವರು ಸೂಟಾ = ಬಿಡಿ

(ಈ ಪುಸ್ತಕ ಖರೀದಿಸಲು : 9480286844)

ಕವಲಕ್ಕಿ ಮೇಲ್​ ಸರಣಿಯ ಎಲ್ಲಾ ಕಥೆಗಳು ಇಲ್ಲಿವೆ : https://tv9kannada.com/tag/kavalakki-mail

ಇದನ್ನೂ ಓದಿ : Bhagat Singh Birth Anniversary : ಶೆಲ್ಫಿಗೇರುವ ಮುನ್ನ ; ಇಂದಷ್ಟೇ ಬಿಡುಗಡೆಗೊಂಡ ಎಚ್. ಎಸ್. ಅನುಪಮಾ ಅವರ ‘ಜನ ಸಂಗಾತಿ ಭಗತ್

Published On - 6:42 pm, Tue, 28 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ