AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid Diary : ಕವಲಕ್ಕಿ ಮೇಲ್ ; ‘ನಂಗೆ ಅಯ್ಯೋ ಪಾಪ ಅಂದೋರೆಲ್ಲ ಸತ್ತೋಗ್ತಾರೆ’

Single Woman : ಒಮ್ಮೆ ‘ಸೇಡೆ ಮೀನು ಬರ‍್ತ ಹೊಡಿತು’ ಎಂದು ಕೈಮೇಲೆ ಗಾಯವಾಗಿ ಬಂದಿದ್ದಳು. ಮೀನು ಹೊಡೆಯುವುದೆ? ಹೌದು. ಧಕ್ಕೆಯಿಂದ ತಾಜಾ ತರುವಾಗ ಚಾಟಿಯಂತಹ ಬಾಲದ ಮೀನು ಚೀಲದಲ್ಲಿ ಹಾಕಿದ್ದರೂ ಬಾಲ ಬೀಸಿ ಹೊಡೆದಿತ್ತು! ಔಷಧಕ್ಕೆ ದುಡ್ಡು ಕೊಡುವಾಗ ಚಿಲ್ಲರೆ ಕಾಸು ಜೋಡಿಸಿ ಕೊಟ್ಟು ನನ್ನ ಗಮನ ಅವಳ ಮೇಲೆ ಬಿದ್ದದ್ದು. ಬರಬರುತ್ತ ಕಷ್ಟಸುಖ ಹೇಳಿಕೊಂಡು ಆಪ್ತಳಾದಳು.

Covid Diary : ಕವಲಕ್ಕಿ ಮೇಲ್ ; ‘ನಂಗೆ ಅಯ್ಯೋ ಪಾಪ ಅಂದೋರೆಲ್ಲ ಸತ್ತೋಗ್ತಾರೆ’
Follow us
ಶ್ರೀದೇವಿ ಕಳಸದ
|

Updated on:Jun 23, 2021 | 8:59 AM

ಊರಿಗೆಲ್ಲ ಸಹಾಯಕಿಯಂತೆ ಬದುಕಿದ್ದ ಅವಳಿಗೂ ವಯಸ್ಸಾಗುತ್ತ ಬಂತು. ಇಬ್ಬರು ಅಕ್ಕಂದಿರೂ ತೀರಿಕೊಂಡರು. ಅಣ್ಣತಮ್ಮಂದಿರು ಪಾಲಾದಾಗ ವಂಶಪಾರಂಪರ್ಯವಾಗಿ ಏನೂ ಸಿಗಲಿಲ್ಲ. ಒಂದು ಕೊಡ್ಲಿನ ತುದಿಯಲ್ಲಿ ಅರಣ್ಯ ಇಲಾಖೆಯ ಜಾಗದಲ್ಲಿದ್ದ ಮೂಲಮನೆಯು ಈಗ ಐದು ಬಿಡಾರವಾಗಿ ಒಡೆದಿತ್ತು. ಜಮೀನು ಇದ್ದದ್ದೇ ಮೂವತ್ತು ಗುಂಟೆ. ಒಬ್ಬೊಬ್ಬರಿಗೆ ಅಂಗೈಯಗಲ ಆರು ಗುಂಟೆ ತೋಟ ಬಂದಿತು. ಸಂಸಾರವಿಲ್ಲದ ಸೀತೆಗೆ ಬೆರಳಗಲ ಜಾಗವೂ ಸಿಗಲಿಲ್ಲ. ಇವಳಾದರೂ ಗಟ್ಟಿಸಿ ಕೇಳಬಹುದಿತ್ತು. ಬದಲಾಗಿ ತೋರಿಸಿದಲ್ಲಿ ಸಹಿ ಹಾಕಿದಳು. ‘ಹೋಗ್ಲಿ ಪಾಪ, ತಿಂದ್ಕ ಸಾಯ್ಲಿ’ ಎಂದು ಅಣ್ಣಂದಿರು ಎರಡು ತೆಂಗಿನಮರ ಕೊಟ್ಟರು. ತೆಂಗಿನಮರವಿದ್ದರೆ ಆಯಿತೇ? ಇರಲೊಂದು ಜಾಗ ಬೇಡವೇ? ಯಾರೂ ತಮ್ಮ ಮನೆಯಲ್ಲಿ ಇರು ಎನ್ನುತ್ತಿಲ್ಲ. ಬಾ, ಉಣ್ಣು, ಮಲಗು ಎನ್ನುತ್ತಿಲ್ಲ. ಇವಳು ಸೊರಸೊರ ಎಂದಮೇಲೆ ಒಬ್ಬರ ಕೊಟ್ಟಿಗೆಯ ಮೂಲೆಯಲ್ಲಿ ಎಂದರೆ ಅವಳ ಎರಡು ತೆಂಗಿನ ಮರಗಳ ಮುಂದೆ ನಾಕು ಮೆಟ್ಟು ಜಾಗ ಕೊಟ್ಟು ಇರಲು ಬಿಟ್ಟರು.

*

ಸೀತೆಯರ ಕತೆಯೇ ಹಾಗೆ. ನಡುವಿಂದ ಶುರುಮಾಡಲು ಆಗುವುದಿಲ್ಲ. ಬುಡದಿಂದ ತುದಿತನಕ ತಿಳಿಯಬೇಕು.

ನಮ್ಮ ಈ ಸೀತೆ, ಸೀತಿ, ಸೀತಕ್ಕ ಅರವತ್ತರ ಆಸುಪಾಸಿನಲ್ಲಿರುವ ಮಹಿಳೆ. ಕರುಣೆಯನ್ನು ಬಯಸದವಳು. ಸಂಕೋಚವೋ, ಸ್ವಾತಂತ್ರ್ಯಪ್ರಿಯತೆಯೋ ಅರ್ಥವಾಗದಂತೆ ಹತ್ತಿರ ಹೋದಷ್ಟೂ ಮಾರು ದೂರ ಸರಿಯುವವಳು. ಮನುಷ್ಯರನ್ನು ಅರ್ಥಮಾಡಿಕೊಳ್ಳಲು ಇನ್ನೂ ಬಹಳವಿದೆ ಎನಿಸುವಂತೆ ಮಾಡಿದವಳು. ಒಂಟಿ ಮಹಿಳೆ. ಅವಳಿಗೇನು ಒಂಟಿಯಾಗಿರಬೇಕೆಂದಿರಲಿಲ್ಲ, ಮನೆಯವರ ಸ್ವಾರ್ಥ, ಮರೆವು, ಬಡತನಗಳು ಮದುವೆಗೆ ಅಡ್ಡಿಯಾದವು. ಹನ್ನೊಂದು ಮಕ್ಕಳನ್ನು ಹೆತ್ತ ಅವಳಮ್ಮ, ದಮ್ಮು ಎಳೆಯುತ್ತ ತೊಂಭತ್ತರ ತನಕ ಬದುಕಿದ್ದ ಅವಳಪ್ಪನನ್ನು ನೋಡಿಕೊಳ್ಳುವ ಕಿರಿಯ ಮಗಳಾಗಿ ಇದ್ದುಬಿಟ್ಟಳು. ‘ಇದ್ನೂ ಮದಿ ಮಾಡಿ ಕಳ್ಸಿರೆ ನಮ್ಮನ್ಯಾರು ನೋಡ್ಕಂತ್ರು?’ ಎಂದೇ ಅವಳಪ್ಪ ಹೇಳುತ್ತಿದ್ದನಂತೆ. ಅವರ ನಂತರ ಅವಳ ಬದುಕು ಮಾತ್ರ ಸೂತ್ರ ತಪ್ಪಿದ ಗಾಳಿಪಟದಂತೆಯೇ ಆಯಿತು. ಮದುವೆಯಾದ ಹಿರಿಯಕ್ಕಂದಿರ, ಅಣ್ಣಂದಿರ, ಅವರ ಮಕ್ಕಳ ಮನೆಯಲ್ಲಿ, ನೆಂಟರ ಮನೆಯಲ್ಲಿ ಗೇಯುತ್ತ ಬದುಕು ನಡೆಯಿತು.

ನಾನು ಮೊದಲು ನೋಡಿದಾಗ ಇನ್ನೂ ಮೂವತ್ತರ ಆಸುಪಾಸಿನಲ್ಲಿದ್ದ ಗಟ್ಟಿಗಿತ್ತಿ ಸುಂದರಿ. ಅವಳ ಮನೆಯ, ಜಾತಿಯ, ಕೇರಿಯ ಯಾರೇ ನಮ್ಮಲ್ಲಿ ಅಡ್ಮಿಟ್ ಆದರೂ ಅವಳು ಅವರೊಡನೆ ಇರುತ್ತಿದ್ದಳು. ಸಂಸಾರ ಇಲ್ಲದವಳೆಂಬ ಕಾರಣಕ್ಕೆ ಎಲ್ಲರೂ ಪುಕ್ಕಟೆ ಕೆಲಸಕ್ಕೆ ಕರೆಯುವವರೇ. ಎಷ್ಟು ಬಸುರಿಯರ, ರೋಗಿಗಳ ಜೊತೆ ಆಸ್ಪತ್ರೆಯಲ್ಲಿ ಕಳೆದಳೋ? ಎಷ್ಟು ಪೇಶೆಂಟುಗಳ ಜೊತೆಗೆ ನಮ್ಮ ಆಸ್ಪತ್ರೆಯಿಂದ ಹಿಡಿದು ಮಂಗಳೂರಿನ ತನಕ ಎಲ್ಲೆಲ್ಲಿಗೆ ಪಯಣಿಸಿದಳೋ? ಎಷ್ಟು ಬಾಣಂತನಗಳನ್ನು, ರೋಗಿಗಳ ಆರೈಕೆಯನ್ನು ಮಾಡಿದಳೋ ಲೆಕ್ಕವಿಲ್ಲ. ಆಸ್ಪತ್ರೆಯಲ್ಲಿದ್ದಾಗ ಪೇಶೆಂಟನ್ನು ನೋಡಿಕೊಳ್ಳಲು ಸೀತೆಯಿದ್ದರೆ ಮುಗಿಯಿತು. ಡಾಕ್ಟರು, ಸಿಸ್ಟರುಗಳನ್ನು ಹೇಗೆ, ಏನು ಕೇಳಬೇಕು, ಮಾತಾಡಿಸಬೇಕೆಂದು ಅವಳಿಗೆ ಗೊತ್ತು.

ಅದಕ್ಕೆಲ್ಲ ಸಿಗುತ್ತಿದ್ದದ್ದಾದರೂ ಏನು? ಹೊಟ್ಟೆ ತುಂಬ ಊಟ, ಎಲ್ಲೋ ಒಮ್ಮೊಮ್ಮೆ ಸೀರೆ. ಹೆಚ್ಚು ಕೊಡುವಷ್ಟು ಅವರಿಗೂ ಅನುಕೂಲವಿಲ್ಲ, ಇವಳಿಗೂ ಬಾಯಿಲ್ಲ.

covid diary

ಇಲ್ಲಸ್ಟ್ರೇಷನ್ : ಕೃಷ್ಣ ಗಿಳಿಯಾರ್

ಎಲ್ಲೆಂದರಲ್ಲಿ ಕೆಲಸಕ್ಕೆ ಒಂಟಿ ಹೆಂಗಸು ಹೋದರೆ ಮನೆಯವರಿಗೆ ‘ಸುಮಾರು’, ಜಾತಿ ಮರ್ಯಾದೆಯ ಗತಿಯೇನು ಎಂದು ಆಸ್ಪತ್ರೆ, ಅಡುಗೆ ಕೆಲಸಗಳಿಗೆ ಬಾರದೆ ದೂರವಿದ್ದಳು. ಅವಳನ್ನು ಜಂತುಹುಳ ಮತ್ತು ರಕ್ತಹೀನತೆ ಸದಾ ಬಾಧಿಸುತ್ತಿದ್ದವು. ಕಬ್ಬಿಣಾಂಶ ಮಾತ್ರೆ ತಗೊಳ್ಳದಿದ್ದರೆ ಆಗುವುದೇ ಇಲ್ಲ ಎನ್ನುವಷ್ಟು ಬಿಳಿಚಿದ ಮೇಲೆಯೇ ಬರುವಳು. ಆರೋಗ್ಯ ಕಾರ್ಯಕರ್ತೆಯರು ಕೊಟ್ಟ ಕಬ್ಬಿಣಾಂಶದ ಮಾತ್ರೆ ಅವಳ ಬಾಯಲ್ಲಿ ತುಕ್ಕಿನ ಗುಳಿಗೆ! ‘ಅದ್ ಜಂಬು.’ ಬೇರೆ ಕೊಡಿ ಎನ್ನುತ್ತಾ ಒಯ್ಯುತ್ತಿದ್ದಳು. ಒಮ್ಮೆ ‘ಸೇಡೆ ಮೀನು ಬರ‍್ತ ಹೊಡಿತು’ ಎಂದು ಕೈಮೇಲೆ ಗಾಯವಾಗಿ ಬಂದಿದ್ದಳು. ಮೀನು ಹೊಡೆಯುವುದೆ? ಹೌದು. ಧಕ್ಕೆಯಿಂದ ತಾಜಾ ತರುವಾಗ ಚಾಟಿಯಂತಹ ಬಾಲದ ಮೀನು ಚೀಲದಲ್ಲಿ ಹಾಕಿದ್ದರೂ ಬಾಲ ಬೀಸಿ ಹೊಡೆದಿತ್ತು! ಔಷಧಕ್ಕೆ ದುಡ್ಡು ಕೊಡುವಾಗ ಚಿಲ್ಲರೆ ಕಾಸು ಜೋಡಿಸಿ ಕೊಟ್ಟು ನನ್ನ ಗಮನ ಅವಳ ಮೇಲೆ ಬಿದ್ದದ್ದು. ಬರಬರುತ್ತ ಕಷ್ಟಸುಖ ಹೇಳಿಕೊಂಡು ಆಪ್ತಳಾದಳು. ಬರೀ ಎರಡು ಕಾಸಿಗೆ ಪರದಾಡುವ ಅವಳ ಪರಿಸ್ಥಿತಿ ಕಂಡು, ‘ನಿನ್ನ ಅನ್ನ ನೀನೇ ದುಡಿದುಕೋ ಸೀತೆ, ಏನಾದರೂ ಕೆಲಸಕ್ಕೆ ಸೇರು’ ಎಂದು ಹಲವೊಮ್ಮೆ ಹೇಳಿದ್ದೆ. ಅಣ್ಣಂದಿರ ಅನುಮತಿ ಪಡೆದು ಹತ್ತಿರದ ಪಟ್ಟಣದಲ್ಲಿ ಸಜಾತಿಯವರ ಮನೆಯಲ್ಲಿ ನಿಂತಳು. ಜೀವದಲ್ಲಿ ಸ್ವಲ್ಪ ಸುಧಾರಿಸಿದ್ದಳು.

ತಗಾ, ಹಾಗವಳು ಹೋದದ್ದೇ ಬಂಧುಗಳಿಗೆ ಅವಳ ನೆನಪು ಜೋರಾಯಿತು. ಸೇರುಗಟ್ಟಲೇ ಚಕ್ಕುಲಿ ಮಾಡುವುದು, ಹತ್ತಾರು ಕಡಿಗೆ ಕಾಯಿಯ ಹಪ್ಪಳ ಹಚ್ಚುವುದು, ಗದ್ದೆಕೊಯ್ಲಿನ ಸಮಯದಲ್ಲಿ ಆಳುಗಳಿಗೆ ಬೇಯಿಸಿ ಹಾಕುವುದು, ಮನೆ ಕಟ್ಟುವಲ್ಲಿ ಹೋಗಿ ಕಲ್ಲುಮಣ್ಣು ಹೊತ್ತು ಬರುವುದು, ಹೆಂಗಸರು ಮುಟ್ಟಾದರೆ ಐದುದಿನ ಅಡುಗೆ ಬೇಯಿಸುವುದು, ಹೂವಿನಗಿಡ ನೆಡುವುದು ಮೊದಲಾದ ಪುಕ್ಕಟೆ ಕೆಲಸಗಳಿಗೆ ಸೀತೆಯೆಂಬ ಸಸಾರದ ಹೆಣ್ಣು ಇಲ್ಲವೇ ಇಲ್ಲ! ಅವರೆಲ್ಲ ಗೊಣಗುಟ್ಟಿದ್ದೇ ತನ್ನ ಗುಣಗಾನವೆಂದು ತಿಳಿದು ಕೆಲಸ ಬಿಟ್ಟಳು. ಅಕ್ಕಂದಿರ ಮನೆಯಲ್ಲಿ ಅಷ್ಟಷ್ಟು ದಿನ ಕಳೆದಳು. ಯಾರು ಕರೆದರಲ್ಲಿ ಹೋಗುವುದು. ಅಂತೂ ಒಂದುಕಡೆ ನಿಲ್ಲದ ಸವಾರಿ. ಸಂಚಾರಿ ಸೀತೆ.

ಇಂಥವಳನ್ನು ಏನೆಂದು ಕರೆಯುವುದು? ದಡ್ಡಿಯೆಂದೋ, ಮುಗ್ಧೆಯೆಂದೋ? ಬುದ್ಧಿ, ಶಕ್ತಿ ಇದ್ದರೂ ತನ್ನ ಬದುಕು ಕಟ್ಟಿಕೊಳ್ಳಲು ಬಳಸಿಕೊಳ್ಳದಿದ್ದರೆ ಹೀಗೇ ಆಗುವುದು. ಎನಿಸುತ್ತಿತ್ತು.

ಊರಿಗೆಲ್ಲ ಸಹಾಯಕಿಯಂತೆ ಬದುಕಿದ್ದ ಅವಳಿಗೂ ವಯಸ್ಸಾಗುತ್ತ ಬಂತು. ಇಬ್ಬರು ಅಕ್ಕಂದಿರೂ ತೀರಿಕೊಂಡರು. ಅಣ್ಣತಮ್ಮಂದಿರು ಪಾಲಾದಾಗ ವಂಶಪಾರಂಪರ್ಯವಾಗಿ ಏನೂ ಸಿಗಲಿಲ್ಲ. ಒಂದು ಕೊಡ್ಲಿನ ತುದಿಯಲ್ಲಿ ಅರಣ್ಯ ಇಲಾಖೆಯ ಜಾಗದಲ್ಲಿದ್ದ ಮೂಲಮನೆಯು ಈಗ ಐದು ಬಿಡಾರವಾಗಿ ಒಡೆದಿತ್ತು. ಜಮೀನು ಇದ್ದದ್ದೇ ಮೂವತ್ತು ಗುಂಟೆ. ಒಬ್ಬೊಬ್ಬರಿಗೆ ಅಂಗೈಯಗಲ ಆರು ಗುಂಟೆ ತೋಟ ಬಂದಿತು. ಸಂಸಾರವಿಲ್ಲದ ಸೀತೆಗೆ ಬೆರಳಗಲ ಜಾಗವೂ ಸಿಗಲಿಲ್ಲ. ಇವಳಾದರೂ ಗಟ್ಟಿಸಿ ಕೇಳಬಹುದಿತ್ತು. ಬದಲಾಗಿ ತೋರಿಸಿದಲ್ಲಿ ಸಹಿ ಹಾಕಿದಳು. ‘ಹೋಗ್ಲಿ ಪಾಪ, ತಿಂದ್ಕ ಸಾಯ್ಲಿ’ ಎಂದು ಅಣ್ಣಂದಿರು ಎರಡು ತೆಂಗಿನಮರ ಕೊಟ್ಟರು. ತೆಂಗಿನಮರವಿದ್ದರೆ ಆಯಿತೇ? ಇರಲೊಂದು ಜಾಗ ಬೇಡವೇ? ಯಾರೂ ತಮ್ಮ ಮನೆಯಲ್ಲಿ ಇರು ಎನ್ನುತ್ತಿಲ್ಲ. ಬಾ, ಉಣ್ಣು, ಮಲಗು ಎನ್ನುತ್ತಿಲ್ಲ. ಇವಳು ಸೊರಸೊರ ಎಂದಮೇಲೆ ಒಬ್ಬರ ಕೊಟ್ಟಿಗೆಯ ಮೂಲೆಯಲ್ಲಿ ಎಂದರೆ ಅವಳ ಎರಡು ತೆಂಗಿನ ಮರಗಳ ಮುಂದೆ ನಾಕು ಮೆಟ್ಟು ಜಾಗ ಕೊಟ್ಟು ಇರಲು ಬಿಟ್ಟರು.

ಹೀಗೆ ಬಂದರೆ ಇಲ್ಲಿ ಕಾಣುತ್ತಿದೆ ನೋಡಿ, ಮಡ್ಲು ಮಾಡಿನ ಪುಟ್ಟ ಗುಡಿಸಲು, ಇದೇ ಅವಳ ಬಿಡಾರ. ಅಣ್ಣನ ಮಕ್ಕಳ ಕೈಕಾಲು ಹಿಡಿದು ಒಬ್ಬರ ಬಳಿ ಮಣ್ಣು ಗೋಡೆ, ಒಬ್ಬರ ಬಳಿ ಮಾಡು ಹೊದಕಲು ಮಾಡಿಸಿಕೊಂಡಿದ್ದಾಳೆ. ಅವಳ ಮನೆಯ ಮಾಡಿಗೆ ಅವಳ ತೆಂಗಿನಮರದ್ದೇ ಮಡ್ಲು. ಅವಳ ಮನೆ ಗುಡಿಸಲಿಕ್ಕೆ ಅವಳ ಗರಿಯದೇ ಪೊರಕೆ, ಅವಳ ಬಚ್ಚಲು, ಅಡಿಗೆ ಒಲೆಗೆ ಅವಳ ತೆಂಗಿನಮರದ್ದೇ ಹೆಡೆಪೆಂಟೆ, ಕಾಯಿಸಿಪ್ಪೆ, ಮಡ್ಲು. ಎರಡು ತೆಂಗಿನಮರದ ಉತ್ಪನ್ನ ದೋಸೆ, ಹುಳಿ, ಚಟ್ನೆ, ಮೀನ ಎಂದು ಸರಿಯಾಗುತ್ತದೆ. ಅವಳಿಗೆ ಆ ಎರಡು ಮರಗಳು ಕಲ್ಪವೃಕ್ಷವಿದ್ದಂತೆ. ಈಚೆಕಡೆ ಕೊಟ್ಟಿಗೆಯಲ್ಲಿ ಗಂಟಿಗಳ ಸದ್ದು ಕೇಳುತ್ತ, ಆ ಕಡೆ ಗಾಳಿ, ಬಿಸಿಲು ಬೀಳದಂತೆ ನಿಂತಿರುವ ದರೆಯು ಎಂದು ಕುಸಿಯುವುದೋ ಎಂದು ಅಂಜುತ್ತ ತನ್ನ ತೆಂಗಿನಮರದ ಬುಡದಲ್ಲಿ ತಾನು ಇದ್ದಾಳೆ. ಹಿಂದಿನ ದರೆಯ ಜಾಗದಲ್ಲಿ ಕಂಡರೆ ಕಣ್ತುಂಬುವಂತಹ ಹೂದೋಟ ಬೆಳೆಸಿದ್ದಾಳೆ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಮೂರು ಮೈಲು ನಡೆದು ಶೀನಪ್ಪಯ್ಯ ಪ್ರಭುಗಳ ಮನೆಗೆ ಹೋಗಿ ಅಡಿಕೆ ಸುಲಿದು ಬರುತ್ತಾಳೆ. ಅವಳ ಸೊಂಟನೋವು ಬೆನ್ನುನೋವಿನಿಂದ ನಿಧಾನ ಸಾಗುವ ಕೆಲಸಕ್ಕೆ ಹೆಚ್ಚೆಂದರೆ ದಿನಕ್ಕೆ ಇಪ್ಪತ್ತು ರೂಪಾಯಿ ಸಿಗುವುದು. ಆ ಕೆಲಸವೂ ವರ್ಷಪೂರ್ತಿ ಇರುವುದಿಲ್ಲ. ಮಳೆಯಿರುವಾಗ ಹೋಗಲಾಗುವುದಿಲ್ಲ. ಬದುಕು ಇಷ್ಟು ಕಷ್ಟವಿದ್ದರೂ ತಾಯ್ತಂದೆಯರ ಆಸ್ತಿಯಲ್ಲಿ ನಿನ್ನ ಪಾಲು ಕೇಳು, ಬದುಕಿನ ಭದ್ರತೆಗೆ ಸ್ವಲ್ಪ ದುಡ್ಡಾದರೂ ತೆಗೆದುಕೋ ಎಂದು ಪ್ರಭುಗಳೂ, ನಾನೂ ಹೇಳಿದೆವು. ಆದರೆ ತನ್ನ ಅಣ್ಣಂದಿರು ತನಗಿಂತ ಬಡವರು, ಅವರ ಬದುಕು ತನ್ನದಕ್ಕಿಂತ ಕಷ್ಟದ್ದು. ತನ್ನ ಪಾಲು ಅವರೇ ಇಟ್ಟುಕೊಳ್ಳಲಿ ಎಂದು ಅಪಾಯಕಾರಿ ಉದಾರತೆ ಮೆರೆದಳು!

ಅವಳು ಹಿರಿಯರ ಆಸ್ತಿಯನ್ನೇನೋ ಬೇಡವೆಂದಳು. ಆದರೆ ಹಿರಿಯರ ಸಿಹಿಮೂತ್ರ, ದಮ್ಮುಗಳು ಕರೆಯದೆ ಬಂದು ಅವಳ ಹೆಸರಿಗಂಟಿಕೊಂಡವು.

ಇದುವರೆಗಿನ ಅವಳ ಬದುಕು ಒಂದುಬಗೆಯ ಕಷ್ಟದ್ದಾದರೆ, ಮುಂದಿನದು ಬೇರೆಯೇ ಆಯಿತು. ಸಿಹಿಮೂತ್ರದ ಜೊತೆಗೆ ಹೃದಯ ಕಾಯಿಲೆಯೂ, ಕಣ್ಣಿನ ಗ್ಲಕೋಮವೂ ಅರಸಿಕೊಂಡು ಬಂದವು. ತಲೆನೋವು ಬಂದು ಮಲಗಿದಳಲ್ಲ ಎಂದರೆ ಏಳಗತಿಯಿಲ್ಲ. ಹೊಟ್ಟೆಗೆ ತಿನ್ನದೆ ಶುಗರ್ ಇಳಿದು ಬೆವೆತು ತೆವಳಿಕೊಂಡು ಅಣ್ಣನ ಮನೆಗೆ ಬಂದು ಅವರೊಮ್ಮೆ ಹೊತ್ತು ತಂದಿದ್ದರು. ತಜ್ಞರ ಬಳಿ ಕಳಿಸಿದೆವಾದರೂ ಪದೇಪದೇ ಕರೆದೊಯ್ಯುವವರಾರು? ನಮ್ಮ ಬಳಿ ಬರಲೂ ಮೂರು ಮೈಲು ನಡೆದುಬರಬೇಕು. ಒಬ್ಬ ಅಣ್ಣನ ಮಗ ಮಹಾ ಕುಡುಕ. ಅವನೊಬ್ಬನೇ ಅತ್ತೆ ಮೇಲೆ ಅಷ್ಟಿಷ್ಟು ಕಾಳಜಿ ಇಟ್ಟುಕೊಂಡವ. ಆಗೀಗ ತೇಲಾಡುತ್ತಾ ಬಂದು ಗುಳಿಗೆ ಒಯ್ದು ಕೊಡುತ್ತಾನೆ. ಮನಸ್ಸು ಬಂದಾಗ ಅಷ್ಟಿಷ್ಟು ಕಿರಾಣಿ ವಸ್ತು ಹೊತ್ತಾಕುತ್ತಾನೆ. ಅವನ ಪ್ರಯತ್ನದಿಂದ ತಿಂಗಳಿಗೆ ಆರುನೂರು ರೂಪಾಯಿ ಮಾಸಾಶನ ಬರುವಂತೆ ಆಯಿತು.

ಸೀತೆ ಅದೇನು ಅಡುಗೆ ಮಾಡುವಳೋ, ಏನು ತಿನ್ನುವಳೋ, ಬರಬರುತ್ತ ರಕ್ತಹೀನತೆ ಸಿಕ್ಕಾಪಟ್ಟೆ ಏರಿತು. ಪ್ರಾಯದಲ್ಲಿ ಕೆಂಪಗೆ ನಳನಳಿಸುತ್ತಿದ್ದ ಸೀತೆ ಎಲ್ಲಿ? ಮುಖ ಬೆಳ್ಳಗಾಗಿ ಕೂದಲುದುರಿ ಒಂದು ಅಡಕೆಕಾಯಷ್ಟು ದೊಡ್ಡ ಗಂಟು ಕಟ್ಟಿಕೊಂಡು ಬರುವ ಈ ಸೀತೆಯೆಲ್ಲಿ? ಶುಗರ್ ಸದಾ ೪೦೦ರ ಮೇಲೇ. ಇಷ್ಟಿದ್ದರೂ ಅದುಹೇಗೆ ನಡೆದು ಬಂದಳೋ ಎಂದು ಗ್ಲುಕೋಮೀಟರಿಗೇ ನಾಚಿಕೆಯಾಗುತ್ತಿತ್ತು.

ಬಂದಾಗೆಲ್ಲ ಶುಗರಿಗೆ ಅನುಕೂಲವಾಗುವ, ಹೀಮೋಗ್ಲೋಬಿನ್ ಹೆಚ್ಚಿಸುವ ಅಡುಗೆ ಮಾಡುವುದು ಹೇಗೆಂದು ನಾನು ಹೇಳುವುದು, ಅವಳದಕ್ಕೆ ತಣ್ಣಗೆ ಇನ್ನೇನೋ ಒಂದು ಹೇಳುವುದು ನಡೆಯುತ್ತದೆ.

‘ಮೈಕೈ ಎಲ್ಲ ಗಮಿಸ್ತದೆ. ನಾ ಎಂತೆಂತದು ತಿಂತಿಲ್ಲೆ, ಆದ್ರೂ ಎಲ್ಲಿ ಅಡ್ಚರೂ ಗ್ಯಾಸು. ಹೊಟ್ಟಿ ನೂವ್ ಬಂದ್ರೆ ರಾತ್ರೆಲ್ಲ ಸಂಡಾಸಿಗೆ ಹೋಗೂದು ಕಷ್ಟ ಅಂತ ಕಮ್ಮಿ ತಿಂತೆ’ ‘ಬಟಾಟೆ ಬಾಳೆಕಾಯಿ ಬೇರಲಸಿನಕಾಯಿ ಬಿಡು ಸೀತೆ. ಅದು ಗ್ಯಾಸು. ರಾಗಿ ತಿನ್ನು, ಜೀವಕ್ಕೆ ಒಳ್ಳೇದು.’ ‘ಅಯ್ಯಯ್ಯ ರಾಗಿ ತಂಪು. ಕಪ ಆಗಿ ಕೊರೊನ ಅಂತ್ರು ಹೇಳಿ ತಿಂತಿಲ್ಲೆ’ ‘ರಾಗಿ ಒಳ್ಳೆದು ಮಾರಾಯ್ತಿ. ಈರುಳ್ಳಿ ಉಪ್ಪು ಮೆಣಸು ಹಾಕಿ ಕಲಸಿ ಬಾಳೆಯೆಲೆ ಮೇಲೆ ತಟ್ಟಿ ರೊಟ್ಟಿ ಮಾಡು,’ ‘ಹಲ್ಲು ಸರಿ ಇಲ್ರಾ, ಅಷ್ಟೂ ಅಲುಗ್ತವೆ.’ ‘ಬಿಸಿನೀರು ಹಾಕಿ ಕಲಸಿದ್ರೆ ಮೆತ್ತಗಾಗುತ್ತೆ ಸೀತೆ. ಅಥವಾ ಸೊಪ್ಪುಆದ್ರು ತಿನ್ನು. ಸೊಪ್ಪು ತಿಂದ್ರೂ ರಕ್ತ ಆಗುತ್ತೆ.’

ಇಲ್ಲೆಂಥ ಸೊಪ್ಪು ಸಿಗ್ತದೆ? ಹರಿಗಿ ನೆಡಲಿಲ್ಲ. ಪಾಲಕ ಗೀಲಕ ತಕಣುಕೆ ಸಗ್ತಿಲ್ಲ’ ‘ಬಸಳೆ ತಿನ್ನು’ ‘ಅದ್ ತಂಡಿ’ ‘ನುಗ್ಗೆಸೊಪ್ಪು ಬಳಸು, ಎಲ್ಲಾ ಕಡೆ ಸಿಗುತ್ತೆ’ ‘ಅದು ಗರ್ಮಿ, ಬಾಯಲ್ಲಿ ಅಗ್ರಬಕ್ಕೆ ಆಗ್ತದೆ.’ ‘ತೊಂಡೆಸೊಪ್ಪು ಸಹ ತಿನ್ಬೋದು’ ‘ಶೀಶೀ, ನಾ ಅದ್ನೆಲ್ಲ ತಿಂತಿಲ್ಲೆ ಅಮ’ ‘ಹಂಗಾರೆ ಹಸ್ರು ಬಣ್ಣದ್ ಎಂತಾ ತಿಂತೆ ಮಾರಾಯ್ತಿ?’ ‘ವಂದೆಲಗದ್ ತಂಬ್ಳಿ ಮಾಡ್ತು ನಾವು’ ‘ಅದಕ್ ಹಾಕೋದು ನಾಕೆಲೆ. ಅಷ್ಟೆಲ್ಲಿ ಸಾಕಾಗುತ್ತೆ? ಜಾಸ್ತಿ ಸೊಪ್ಪು ತಿನ್ಬೇಕು. ಸಪ್ಪೆ ಪಲ್ಯ ಮಾಡ್ಕ. ತೊಂಡೆಸೊಪ್ಪು, ಗೋಳಿಸೊಪ್ಪು, ಬಂಬಾಯಿ ಬಸಳೆ, ಕುಂಬ್ಳಬಳ್ಳಿ ಸೊಪ್ಪು, ಚಕ್ರಮುನಿ ಸೊಪ್ಪು, ನುಗ್ಗೆಹುವ್ವದಲ್ಲಿ ಸುಕ್ಕ ಮಾಡ್ಕ.’ ‘ಶ್ಶೀ, ನಾವೇನ್ ಗಂಟಿನೇನ್ರ ಅದ್ನೆಲ್ಲ ತಿನ್ನುಕೆ’ ‘ಅವಕ್ಕಿಂತ ಜಾಸ್ತಿ ತಿನ್ಬೇಕು ಸೀತೆ. ಇಲ್ದಿದ್ರೆ ರಕ್ತ ಆಗಲ್ಲ’ ‘ಹೌದ್ರ. ಏನೂ ಶಕ್ತಿ ಇಲ್ಲ. ಒಂದ್ ಚೊಲೊ ಟಾನಿಕ್ ಬರ‍್ಕೊಡಿ’

ಎಂಬಲ್ಲಿಗೆ ಅವಳ ಡಯಟಿಷಿಯನ್ ಆಗುವ ನನ್ನ ಪ್ರಯತ್ನ ವಿಫಲಗೊಳ್ಳುತ್ತಿತ್ತು!

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಕೆಲವೊಮ್ಮೆ ಅವಳ ಕಷ್ಟ ತಿಳಿದು ಹೊಟ್ಟೆ ಹಿಂಡಿದಂತಾಗುತ್ತಿತ್ತು. ದುಡಿಮೆ ಸಾಧ್ಯವಿಲ್ಲ. ತಿಂಗಳಿಗೆ ಬರುವ ಆರುನೂರು ರೂಪಾಯಿ ಪಿಂಚಣಿಯೇ ಬೆಂಬಲ. ಅದು ಎರಡು ಮೂರು ತಿಂಗಳಿಗೊಮ್ಮೆ ಬರುತ್ತದೆ. ಕೈಗೆ ಸಿಗುವಾಗ ನೂರು ಕಟ್ ಆಗಿ ಸಿಗುತ್ತದೆ. ಅಂದರೆ ದಿನಕ್ಕೆ ಹದಿನೇಳು ರೂಪಾಯಿ. ಅವಳ ಇನ್ಸುಲಿನ್‌ಗೆ, ಕಬ್ಬಿಣಂಶದ ಗುಳಿಗೆಗೆ, ಊಟ ತಿಂಡಿಗೆ, ತಾನೊಬ್ಬಳೇ ಇರಲು ಕಟ್ಟಿಕೊಂಡ ಸೋಗೆ ಗುಡಿಸಲ ರಿಪೇರಿಗೆ ಎಲ್ಲಕ್ಕೂ ಅದೇ ಒದಗಬೇಕು. ಆದರೆ ದುಡ್ಡು ಸಿಗದಿದ್ದರೆ ಅನ್ನನೀರು ಇಲ್ಲದೆ ಮನೆಯಲ್ಲಿ ತೆವಳುವಳೇ ಹೊರತು ಯಾರಲ್ಲೂ ಕೇಳುವವಳಲ್ಲ. ನಾನೇನಾದರೂ ಔಷಧಿ ಕೊಟ್ಟು ದುಡ್ಡು ಬೇಡವೆಂದರೆ ತಗೊಳ್ಳುವವಳಲ್ಲ. ಒಂದೆರೆಡು ಸಲ ಪಿಂಚಣಿ ಬರುವತನಕ ಆಪತ್ತಿಗಿರಲಿ ಎಂದು ಕೊಡಹೋದರೂ ತೆಗೆದುಕೊಳ್ಳಲಿಲ್ಲ. ‘ಈ ಮಂಜಟ್ಲೆ ಹೂವ್ವ ಬಿಟ್ರೆ ನಂಗೇನೂ ತಂದು ಕೊಡ್ಲಿಕ್ಕಾಗಲ್ಲ, ನಂಗ್ ಬ್ಯಾಡ’ ಎನ್ನುವಳು.

ಇದೇನು ಸ್ವಾಭಿಮಾನವೋ, ಕರುಣೆಯ ಕೂಸಾಗಲೊಲ್ಲದ ಆತ್ಮಗೌರವವೋ, ನನಗಂತೂ ಅವಳೊಂದು ಸೋಜಿಗ.

ಮೂರ‍್ನಾಕು ತಿಂಗಳ ಹಿಂದೆ ಅವಳಣ್ಣನ ಮಗ ತೂರಾಡುತ್ತ ಬಂದು ಹತ್ತು ಬಿಪಿ ಮಾತ್ರೆ ತೆಗೆದುಕೊಂಡ. ಹೇಗಿದ್ದಾಳೆ ಸೀತೆ ಎಂದೆ. ಜ್ವರ ಬಂದು ಮಲಗಿದ್ದಾಳೆ ಎಂದ. ಗಾಬರಿಯಾಯಿತು. ಕೋವಿಡ್ ಟೆಸ್ಟ್ ಮಾಡಿಸಿ ಎನ್ನುವುದರಲ್ಲಿ ಅವ ನಾಪತ್ತೆಯಾಗಿದ್ದ. ಎರಡು ದಿನ ಬಿಟ್ಟು ತನಗೆ ಜ್ವರವೆಂದು ಮಾತ್ರೆ, ಇಂಜೆಕ್ಷನ್ ತೆಗೆದುಕೊಂಡ. ಸೀತತ್ತೆ ಹೊಟ್ಟೆಗೇನೂ ತಿನ್ನುತ್ತಿಲ್ಲ. ಕೆಮ್ಮು, ಜ್ವರ, ಶ್ವಾಸ ಹೆಚ್ಚಾಗಿದೆ ಎಂದ. ಇಬ್ಬರೂ ಕೋವಿಡ್ ನೋಡಿಸಿ ಎಂದು ವಿವರಿಸಿದೆ. ಮೀಸೆ ಕುಣಿಸಿ ನಕ್ಕು ‘ಅದೆಲ್ಲ ನಮಗಿಲ್ರ’ ಎಂದು ಎದ್ದುಹೋದ. ನನ್ನ ಮಾತು ಕಿವಿಗೆ ಹಾಕಿಕೊಂಡಂತೆನಿಸಲಿಲ್ಲ. ವಾರದ ಬಳಿಕ ಆಶಾ ಬಂದಳು. ಆ ಕೇರಿಯ ಐದು ಜನ ಕೋವಿಡ್ ಪಾಸಿಟಿವ್. ಒಬ್ಬ ಸೀರಿಯಸ್ ಆಗಿ ಆಸ್ಪತ್ರೆಯಲ್ಲಿದ್ದಾನೆ. ಕಾಂಟಾಕ್ಟ್ ಟೆಸ್ಟಿಗೆ ಅಲ್ಲಿಗೇ ಹೋಗಿ ಎಲ್ಲರಿಗೂ ಟೆಸ್ಟ್ ಮಾಡಿದರೂ ಇವಳು ಮಾತ್ರ ಒಪ್ಪುತ್ತಿಲ್ಲ ಎಂದಳು. ಮನೆ ಹೊರಗೇ ಬರಲಿಲ್ಲವಂತೆ. ಒಳಗಿಂದಲೇ ಟೆಸ್ಟ್ ಬೇಡ ಎಂದು ಕೂಗಿದಳಂತೆ. ಏಕೆ ಬೇಡ ಎಂದರೆ ‘ನಿಮಗೆ ನಂಬರ್ ಕೊಡಲಿಕ್ಕೆ ನನ್ನ ಬಳಿ ಮೊಬೈಲಿಲ್ಲ, ಯಾರೂ ತಮ್ಮ ಮೊಬೈಲಿನ ನಂಬರ್ ನನಗೆ ಕೊಡುವುದಿಲ್ಲ’ ಅಂದಳಂತೆ! ಮೂರ್ನಾಲ್ಕು ದಿನದ ಬಳಿಕ ವಾರಿರಯರ್ಸ್ ತಂಡವು ಏಳಲಿಕ್ಕಾಗದಂತೆ ಮಲಗಿದವಳ ಮನೆಗೆ ಹೋಗಿ ಟೆಸ್ಟ್ ಮಾಡಿದರು. ಪಾಸಿಟಿವ್ ಬಂದರೂ ಆಸ್ಪತ್ರೆಗೆ ಅಡ್ಮಿಟ್ ಆಗಲೊಲ್ಲಳು. ಕೋವಿಡ್ ಕಿಟ್ ಕೊಟ್ಟರೆ ನನ್ನ ಬಳಿ ತೋರಿಸಿ, ತಗೋ ಎಂದರೆ ತಗೊಳ್ಳುತ್ತೇನೆ ಅಂದಳಂತೆ! ಇನ್ನವಳ ಕತೆ ಆಯ್ತು ಎಂದೇ ಭಾವಿಸಿದ್ದೆ.

ಇಲ್ಲ. ಒಂದೆರೆಡು ತಿಂಗಳಲ್ಲಿ ಸೀತೆ ಬಂದೇಬಿಟ್ಟಳು! ರಕ್ತಹೀನತೆ, ಶುಗರ್, ಸುಸ್ತು ಮತ್ತಷ್ಟು ಬಿಗಡಾಯಿಸಿತ್ತು. ಅವಳ ಕಷ್ಟಸುಖಕ್ಕೆ ಎಂದೋ ಒಮ್ಮೆ ಕಿವಿಗೊಡುತ್ತಿದ್ದ ಅಣ್ಣನ ಮಗ ತೀರಿಹೋಗಿದ್ದ. ‘ನನ್ನ ಕಂಡ್ರೆ ಯಮದೂತರಿಗೂ ಆಗಲ್ಲ’ ಎಂದು ಖಿನ್ನಳಾಗಿ ಅತ್ತಳು. ತಡೆಯಲಾಗದೇ ನಾವು ಕಟ್ಟಿಸಿಟ್ಟ ಕಿರಾಣಿ ಗಂಟು ಕೊಡುವೆನೆಂದೆ. ಸರಳ ಆಹಾರ ಅಗತ್ಯಕ್ಕೆ ದಿನನಿತ್ಯ ಬೇಕಾಗುವ ದಿನಸಿ ವಸ್ತುಗಳನ್ನು ಕಟ್ಟಿಸಿದ್ದೆವು. ಅಂಗಡಿಗಳೂ ಮುಚ್ಚಿವೆ, ಹೋಗಲು ಕಷ್ಟ, ಒಯ್ಯಿ ಎಂದೆ. ಅವಳು ಬೇಡ ಎನ್ನುತ್ತಾಳೆ, ಹೇಗೆ ಒಪ್ಪಿಸುವುದು ಎಂದು ನಾನು ಯೋಚಿಸುತ್ತಿದ್ದರೆ ಅದಕ್ಕೆ ವ್ಯತಿರಿಕ್ತವಾಗಿ ಕಿರಾಣಿಯ ಗಂಟು ನೋಡಿದ್ದೇ ಮುಖವರಳಿತು.

ನಮ್ಮ ಎದುರೇ ಗಂಟು ಬಿಚ್ಚಿದಳು. ‘ನಾ ಒಬ್ಳೇ ಅಲ್ವ? ನಂಗಿಷ್ಟ್ ಬ್ಯಾಡ’ ಎಂದು ಕೆಲವು ಸಾಮಾನುಗಳನ್ನು ಹೊರಗಿಟ್ಟಳು. ತನಗೆ ಬೇಕಿದ್ದನ್ನು ಗಂಟುಕಟ್ಟುತ್ತ, ‘ನಂಗೆ ದುಡ್ ಬಂದಕೂಡ್ಲೆ ತಂದ್ಕೊಡ್ತೆ ಆಯ್ತಾ?’ ಎಂದಳು. ‘ಅದು ಮಾರಾಟಕ್ಕಿಟ್ಟದ್ದು ಅಲ್ಲ ಮಾರಾಯ್ತಿ’ ‘ನಂಗ್ ದುಡ್ ಬರುತ್ತಲ, ಯಂತ ಮಾಡುದು ಅದ್ನ ಇಟ್ಕಂಡು, ತಂದುಕೊಡ್ತೆ’ ‘ಔಷಧಕ್ಕೆ ಇಟ್ಟುಕೋ, ಆರೋಗ್ಯ ನೋಡಿಕೋ. ಅಲ್ಲ, ನೀನು ಒಂದು ಗಂಟು, ಎರಡು ರೂಪಾಯಿ ತಗೊಳ್ಳಕ್ಕೆ ಯಾಕಿಷ್ಟು ಯೋಚನೆ ಮಾಡ್ತಿ? ನಾನು ಯಾರ್ಗೂ ಹೇಳಲ್ಲ’ ‘ಅಯ್ಯೋ, ಹೇಳ್ತಿರಿ ಅದುಕ್ಕಲ್ಲ. ನಿಮಗ್ಗೊತ್ತಿಲ್ಲ.’ ಎನ್ನುತ್ತ ಗಂಟು ತಲೆಮೇಲೆ ಹೊತ್ತು ‘ಬತ್ತೆ’ ಎಂದಳು. ಯಾಕೋ ಅವಳ ದನಿ ಗದ್ಗದವಾಯಿತು.

‘ನನ್ನ ಹಣಿಬರಾ ಸರಿ ಇಲ್ಲರಾ. ನಂಗ್ಯಾರಾದ್ರೂ ಅಯ್ಯೋಪಾಪ ಅಂದ್ರೆ ಅವ್ರು ಸತ್ತೋಗ್ತಾರೆ. ಅಕ್ಕ ಅಪ್ಪ ಅವ್ವಿ ಶಂಕ್ರ ಪರ್ಬು ತುಂಬ ಜನ್ಕೆ ಹಂಗೇ ಆಗಿದೆ. ಅದ್ಕೇ, ನೀವು ನಂಗೆ ಅಯ್ಯೋಪಾಪ ಅನ್ಬೇಡಿ. ಹೆಂಗೋ ಬದಿಕ್ಕಂತೆ. ನೀವ್ ಹುಶಾರು’ ಎನ್ನುತ್ತ ತಿರುಗಿ ನೋಡದೆ ನಡೆದು ಹೋದಳು!

ಮೌಢ್ಯವೋ, ಕಕ್ಕುಲಾತಿಯೋ, ಆತ್ಮಮರುಕವೋ, ಆತ್ಮಾವಹೇಳನವೋ, ಏನು ಇದು?

*

ಪದಗಳ ಅರ್ಥ ಜಂಬು = ದುರ್ವಾಸನೆ ಕಡಿಗೆ = ಹಲಸಿನ ಕಾಯಿ ಕೊಡ್ಲು = ತಗ್ಗಿನ ಜಾಗ ಧಕ್ಕೆ = ದೋಣಿ ನಿಲ್ಲುವ ಸ್ಥಳ ಅಡ್ಚು = ಒತ್ತು ಗಮಿಸು = ಉರಿಯಾಗು ಗುಂಟೆ = 33 x 33 (1089 ಚ. ಅಡಿ), 40 ಗುಂಟೆ = 1 ಎಕರೆ ಮಡ್ಲು = ತೆಂಗಿನ ಗರಿ ಮಾಡು = ಸೂರು

* ಫೋಟೋ : ಎಸ್. ವಿಷ್ಣುಕುಮಾರ್

* ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ – 23 ; ‘ಡಾಕ್ಟರ್ ಸಾಹಿಬಾ, ರುಖೋ ರುಖೋ. ಆಪನೆ ಕ್ಯಾ ಲಿಖ್ರೇ ಹೈ ಥೋಡಾ ದಿಖಾವೋ’

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ : ಕೊಡುವಾಗ ಕೈನೋಡು, ತಗೊಳ್ಳುವಾಗ ಮುಖನೋಡು

Published On - 8:59 am, Wed, 23 June 21