Sydney Diary : ಹೆಣ್ಣುಮಕ್ಕಳನ್ನು ಅಡುಗೆಮನೆಯಲ್ಲಿ ಬೆಳೆಸಿ ಗಂಡುಹುಡುಗರನ್ನು ಹೊರಗೆ ಬೆಳೆಸಿದರೆ ಇನ್ನೇನಾಗುತ್ತದೆ?
Body Politics : ‘ಗಂಡುಮಕ್ಕಳು ಬರಿಯ ಡ್ರೈವಿಂಗ್ ಅನ್ನು ಕಲಿಯಬೇಕು ಆದರೆ ಹೆಣ್ಣುಮಕ್ಕಳು ಮೊದಲು ತಮ್ಮ ದೇಹಕ್ಕೆ ಲೆಕ್ಕಾಚಾರಗಳನ್ನು ಕಲಿಸಿ ನಂತರ ಡ್ರೈವಿಂಗ್ ಕಲಿಯಬೇಕಾಗುತ್ತದೆ. ಆದರೆ ಮಜಾ ಏನು ಗೊತ್ತಾ? ಹೆಣ್ಣುಮಕ್ಕಳ ಡ್ರೈವಿಂಗ್ ಕೌಶಲದ ಬಗ್ಗೆ ಎಷ್ಟೇ ಜೋಕುಗಳಿದ್ದರೂ ಅಂಕಿಅಂಶಗಳ ಪ್ರಕಾರ ಅಪಘಾತಗಳಲ್ಲಿ ಪುರುಷರ ಪಾಲು ಶೇ 71 ರಷ್ಟಿದ್ದರೆ ಮಹಿಳೆಯರದು ಶೇ. 29 ಮಾತ್ರ!’ ಶ್ರೀಹರ್ಷ ಸಾಲಿಮಠ
ಸಿಡ್ನಿ ಡೈರಿ | Sydney Diary : ಇತ್ತೀಚೆಗೆ ಕೆಲ ಮಹಾನ್ ವಿಜ್ಞಾನಿಗಳು ಸೈಕಾಲಾಜಿಸ್ಟ್ಗಳು ಗಂಡಸುಗಳ ಮತ್ತು ಹೆಂಗಸರ ಮಿದುಳುಗಳನ್ನು ಅಧ್ಯಯನ ಮಾಡಿ ಎರಡೂ ಮೆದುಳುಗಳು ಹೇಗೆ ವಿಭಿನ್ನ, ಇವರ್ಯಾಕೆ ಹಂಗೆ ಅವರ್ಯಾಕೆ ಹಿಂಗೆ ಅಂತ ಚಿಲ್ಲರೆ ಪ್ರಶಸ್ತಿಗಳಿಗೋಸ್ಕರ ವಿವರಣೆ ನೀಡುತ್ತಾರೆ. ಆದರೆ ಇದರಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೇಟ್ರಿಯಾರ್ಕಿಯನ್ನು ಮಾತ್ರ ಮರೆತುಬಿಡುತ್ತಾರೆ. ಐವತ್ತು ಅರವತ್ತು ವರ್ಷಗಳ ಕಾಲ ಪೇಟ್ರಿಯಾರ್ಕಿಯಲ್ಲಿ ಬೆಳೆದ ಮೆದುಳುಗಳನ್ನು ಕೆಲವು ಪ್ರಶ್ನೆಗಳ ಆಧಾರದ ಮೇಲೆ ವಿಂಗಡಿಸುವುದೇ ಮೂರ್ಖತನ. ಹೆಣ್ಣುಮಕ್ಕಳು ಮಲ್ಟಿಟಾಸ್ಕಿಂಗ್ನಲ್ಲಿ ಬಲವಂತರು ಆದರೆ ಲಾಜಿಕಲ್ ಥಿಂಕಿಂಗ್ನಲ್ಲಿ ದುರ್ಬಲರು ಅಂತ ಹೇಳಲಾಗುತ್ತದೆ. ಚಿಕ್ಕಂದಿನಿಂದ ಹೆಣ್ಣುಮಕ್ಕಳನ್ನು ಅಡುಗೆಮನೆಯಲ್ಲಿ ಬೆಳೆಸಿ ಗಂಡುಹುಡುಗರನ್ನು ಹೊರಗೆ ಬೆಳೆಸಿದರೆ ಇನ್ನೇನಾಗುತ್ತದೆ? ಆರು ತಿಂಗಳು ಅಡುಗೆಮನೆಯಲ್ಲಿ ಕೆಲಸ ಮಾಡಿದರೆ ಗಂಡುಮಕ್ಕಳಿಗೂ ಈ ಮಲ್ಟಿಟಾಸ್ಕಿಂಗ್ ಅಭ್ಯಾಸವಾಗುತ್ತದೆ. ಆದರೆ ಹೊರಬಂದ ಕೂಡಲೇ ಲಾಜಿಕಲ್ ಥಿಂಕಿಂಗ್ ಹೆಣ್ಣುಮಕ್ಕಳು ಬೆಳೆಸಿಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಏಕೆಂದರೆ ಅಡುಗೆಮನೆ ಚಿಕ್ಕ ಜಗತ್ತು ಹೊರಗಡೆ ಇರುವುದು ಸಾವಿರ ಪಟ್ಟು ವಿಶಾಲ ಜಗತ್ತು! ಇದನ್ನು ನಾನು ಇಂಡಿಯನ್ ಮನೆಗಳಿಗೆ ಅನ್ವಯಿಸಿ ಮಾತ್ರ ಹೇಳುತ್ತಿಲ್ಲ. ಇದು ಆಸ್ಟ್ರೇಲಿಯಾ ಮತ್ತು ಅಮೇರಿಕದಂತಹ ಮುಂದುವರಿದ ಜಗತ್ತಿಗೂ ಅನ್ವಯ.
ಶ್ರೀಹರ್ಷ ಸಾಲಿಮಠ, ಲೇಖಕ, ಆಸ್ಟ್ರೇಲಿಯಾ (Shriharsha Salimat)
*
(ಕಂತು – 11)
ನಾನು ಯಾವತ್ತೂ ಅತ್ಯಂತ ಕಿವಿಯಾಗಿ ಕೂರುವ ವಿಷಯ ಅಂದರೆ ಹೆಣ್ಣುಮಕ್ಕಳು ಗಂಡಸುಗಳಿಗೆ ಅಂದರೆ ಇಡಿ ಗಂಡಸು ಜಾತಿಗೆ ಬಯ್ಯುತ್ತಾರಲ್ಲ ಅದು. ಎಲ್ಲಾ ಗಂಡಸರು ಹಂಗಲ್ಲ, ನಾನು ಒಳ್ಳೆಯವನು ಅಂತ ಹೇಳಿಕೊಳ್ಳುತ್ತಾ ನಾನು ಸಮಯ ಹಾಳು ಮಾಡುವುದಿಲ್ಲ. ಅದು ನಾನು ಇಡಿ ಗಂಡುಕುಲದ ಪರವಾಗಿ ಜವಾಬ್ದಾರಿ ಹೊತ್ತುಕೊಳ್ಳುವ ಸಮಯ. ಎಷ್ಟೋ ವಿಷಯಗಳ ಬಗ್ಗೆ ಇಲ್ಲಿ ಹೊಸ ಹೊಳಹುಗಳು ಹೊಳೆಯುತ್ತವೆ. ವಿಜ್ಞಾನ ಮತ್ತು ತರ್ಕದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ನನಗೆ ಇಲ್ಲಿ ಒಂದೇ ವಾಕ್ಯವನ್ನೂ ತಪ್ಪಿಸಿಕೊಳ್ಳಲು ಇಷ್ಟವಾಗುವುದಿಲ್ಲ. ಈ ಬಾರಿ ಹಿಂಗಾಯಿತು.
ಸಿಡ್ನಿಯಿಂದ ಸ್ಟಾನ್ ವೆಲ್ ಬೆಟ್ಟದ ತುದಿ ಒಂದು ತಾಸಿನ ಹಾದಿ. ನನ್ನ ಹೆಂಡತಿ ಪ್ರಯಾಣದ ಬೇಸರ ಕಳೆಯಲು ನನಗೆ ನೀವು ಗಂಡಸರನ್ನೆಲ್ಲ ಎಷ್ಟು ಅಯೋಗ್ಯರು ಅಂತ ಬಯ್ಯತೊಡಗಿದಳು. ಎಂದಿನಂತೆ ನಾನು ಕಿವಿ ನಿಮಿರಿಸಿ ಕುಳಿತೆ. ಆಕೆಗೆ ಇದ್ದಕ್ಕಿದ್ದಂತೆ ಗಂಡಸುಗಳನ್ನು ಬಯ್ಯಲು ಪ್ರೇರಣೆ ಹೇಗೆ ಬಂದಿತು ಅಂತ ಒಂದು ಹಿನ್ನೆಲೆ ಹೇಳಿಬಿಡಬೇಕು. ಆಕೆ ಫಿಸಿಕ್ಸ್ ಅಂದರೆ ಭೌತಶಾಸ್ತ್ರದ ಪ್ರೊಫೆಸರ್ ಆಗಿರುವುದರಿಂದ ಸುತ್ತ ನಡೆಯುವುದೆಲ್ಲವನ್ನು ಅಳೆದು ತೂಗಿ ಲೆಕ್ಕ ಹಾಕಿ ಅಭ್ಯಾಸ. ಕಾರುಗಳ ವೇಗವನ್ನು ಲೆಕ್ಕ ಹಾಕಿ ನಾನು ಮುಂದಿನ ಕಾರನ್ನು ಮುಟ್ಟಲು ಎಷ್ಟು ಸಮಯ ಹಿಡಿಯುತ್ತದೆ, ಸೂರ್ಯನ ಬೆಳಕು ಬೀಳುತ್ತಿರುವ ಕೋನದ ಪ್ರಕಾರ ನಮ್ಮ ಮತ್ತು ನಮ್ಮ ನೆರಳಿನ ಕೋನ ಹೇಗಿರಬೇಕು, ತಿರುವುಗಳಲ್ಲಿ ಸೆಂಟ್ರಿಫ್ಯುಗಲ್ ಫೋರ್ಸ್ ಪ್ರಕಾರ ತಿರುಗಬೇಕಾದ ವೇಗ ಇತ್ಯಾದಿ ಲೆಕ್ಕ ಹಾಕುವುದಲ್ಲದೇ ಮಕ್ಕಳಿಗೂ ಹೇಳಿಕೊಡುವುದು ವಾಡಿಕೆ.
ಈ ನಡುವೆ ನಾನು ಸಹ ಆಕೆಯೊಡನೆ ಸರಿಯಾದ ಲೆಕ್ಕ ಮಾಡಿರುತ್ತೇನೆ. ಈ ಬಾರಿಯೂ ಸಹ ನನ್ನ ಜೊತಗೆ ನನ್ನಷ್ಟೇ ವೇಗದಲ್ಲಿ ನನ್ನ ಜೊತೆ ಬರುತ್ತಿದ್ದ ಕಾರು ಹಿಂದಕ್ಕೆ ಉಳಿದು ನನ್ನ ಕಾರು ಮುಂದಕ್ಕೆ ಹೋಯಿತು. ನಾನು ಆತನಿಗಿಂದ ಮೊದಲೇ ಆಕ್ಸಲರೇಟರ್ ಅನ್ನು ತುಳಿದಿದ್ದರಿಂದ ಸ್ಥಿರವೇಗವನ್ನು ತಲುಪುವವರೆಗೆ ನನ್ನ ಕಾರಿನ ವೇಗ ಅವನದಕ್ಕಿಂತ ಹೆಚ್ಚಾಗಿರುತ್ತದೆ ಅಂತ ಕಾರಣ ಕೊಟ್ಟಳು. ಇದನ್ನು ವಿವರಿಸುತ್ತಾ ವೇಗ ದೂರಗಳ ಈ ಮಾದರಿಯ ಲೆಕ್ಕಗಳನ್ನು ಕಲಿಯಲು ಆಕೆ ಓದಿನ ದಿನಗಳಲ್ಲಿ ಎಷ್ಟು ಕಷ್ಟ ಪಡಬೇಕಾಯಿತು ಆದರೆ ಹುಡುಗರು ಹೇಗೆ ಇದನ್ನು ಸುಲಭವಾಗಿ ಅರ್ಥಮಾಡಿಕೊಳ್ಳುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳತೊಡಗಿದಳು. ಆಕೆಯ ಜೊತೆಗೆ ಸುಲಭವಾಗಿ ಲೆಕ್ಕಗಳನ್ನು ಮಾಡುತ್ತಿದ್ದ ನಾನು ಭೌತಶಾಸ್ತ್ರವನ್ನು ಚನ್ನಾಗಿ ಬಲ್ಲ ಬುದ್ಧಿವಂತ ಎಂಬ ಭ್ರಮೆಯಲ್ಲಿ ಇಷ್ಟು ವರ್ಷ ಆಕೆ ಇದ್ದಳೆನಿಸುತ್ತದೆ, ಇವತ್ತು ಆ ಭ್ರಮೆಯಿಂದ ಹೊರಬಂದು ನಾನೊಬ್ಬ ಗಂಡಸಾಗಿರುವುದರಿಂದ ನನ್ನ ಫಿಸಿಕ್ಸ್ ಚನ್ನಾಗಿದೆ ಅಂತ ಹೊಸ ಥಿಯರಿಯನ್ನು ಮುಂದಿಟ್ಟಳು. ನನಗೆ ಅದರಲ್ಲಿ ತಪ್ಪಾಗಲಿ ಉತ್ಪ್ರೇಕ್ಷೆಯಾಗಲಿ ಕಾಣಲಿಲ್ಲ.
ಹೆಣ್ಣುಮಕ್ಕಳು ಕೆಲ ವಿಷಯಗಳಲ್ಲಿ ಅಥವಾ ಆ ವಿಷಯಗಳ ಕಲಿಕೆಯಲ್ಲಿ ದುರ್ಬಲರಾಗಿರುವುದು ಏಕೆ? ಹಾಗೂ ಇದೇ ಕಾರಣಕ್ಕಾಗಿ ನಗೆಪಾಟಲಿಗೀಡಾಗುವುದು ಏಕೆ? ಇದರ ಹಿಂದೆ ಕೆಲವು ಪಿತೃಪುರುಷ ಸಮಾಜದ ಮತ್ತು ವಿಕಾಸವಾದದ ಹಿನ್ನೆಲೆಗಳಿವೆ. ಇದಕ್ಕೆ ಕೆಲ ಉದಾಹರಣೆಗಳನ್ನು ಕೊಡಬಹುದಾದರೆ ಡ್ರೈವಿಂಗ್, ಭೌತಶಾಸ್ರ್ತ, ಗಣಿತ, ಕ್ರಿಕೆಟ್, ಫುಟ್ಬಾಲ್ನಂತಹ ಆಟಗಳು, ಸಾಫ್ಟ್ವೇರ್ ಕೋಡಿಂಗ್ ಮತ್ತಿತ್ಯಾದಿ. ಡ್ರೈವಿಂಗ್ ಹೆಣ್ಣುಮಕ್ಕಳಿಗಲ್ಲ ಎಂಬುದು ಗಂಡಸುಗಳ ವಾದ. ಇದಕ್ಕಾಗಿ ಅವರು ರಸ್ತೆಗಳಲ್ಲಿ ಪದೇಪದೆ ತಪ್ಪು ಮಾಡುವ ದಾರಿ ತಪ್ಪುವ ಪಾರ್ಕಿಂಗ್ ಮಾಡುವಾಗ ಒದ್ದಾಡುವ ಅನೇಕ ವಿಡಿಯೋಗಳು ವೈರಲ್ ಆಗುತ್ತವೆ. ಕ್ರಿಕೆಟ್ನಲ್ಲಿ ರನೌಟ್ ಮಾಡಲು ಗುರಿ ತಪ್ಪುವುದು, ಕ್ಯಾಚ್ ಹಿಡಿಯುವಾಗ ತಪ್ಪಾಗುವುದು, ಚೆಂಡನ್ನು ಎಸೆಯುವಾಗ ಸರಿಯಾದ ಕೋನದಲ್ಲಿ ಕೈ ತಿರುಗಿಸಲಾಗದಿರುವುದು, ಫುಟ್ಬಾಲ್ ಬಾಸ್ಕೆಟ್ ಬಾಲ್ಗಳಲ್ಲಿ ಚೆಂಡಲ್ ಅನ್ನು ಹಿಡಿತದಲ್ಲಿಟ್ಟುಕೊಳ್ಳಲು ಒದ್ದಾಡುವುದು ಇತ್ಯಾದಿ. ಕೊಂಚ ಗಮನವಿಟ್ಟು ನೋಡಿದರೆ ಇವೆಲ್ಲಾ ಕೌಶಲಗಳಲ್ಲಿ ವೇಗ, ರಭಸ, ದಿಕ್ಕು ಮತ್ತು ಅಂತರಗಳನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಬೇಕಾಗುತ್ತದೆ. ಈ ಕರಾರುವಾಕ್ಕು ಲೆಕ್ಕ ಹಾಕುವುದು ಗಂಡಸರಲ್ಲಿ ಸಹಜವಾಗಿ ಬಂದರೆ ಹೆಣ್ಣುಮಕ್ಕಳು ಒದ್ದಾಡುತ್ತಾರೆ. ನನ್ನ ಹೆಂಡತಿ ತನ್ನ ಅನುಭವವನ್ನು ವಿವರಿಸಿದಂತೆ ಮಕ್ಕಳಿಗೆ ಪಾಠ ಮಾಡುವಾಗ ಯಾವುದೇ ಪ್ರಶ್ನೆ ಕೇಳಿದರೆ ಹೆಣ್ಣುಮಕ್ಕಳು ಉತ್ತರ ಕೊಡಲು ಒದ್ದಾಡಿದರೆ ಗಂಡುಹುಡುಗರು ಛಕ್ಕನೆ ಉತ್ತರ ಕೊಡುತ್ತಾರಲ್ಲದೇ ಒಂದೇ ಪ್ರಶ್ನೆಗೆ ಉತ್ತರ ಪಡೆಯಲು ವಿವಿಧ ದಾರಿಗಳನ್ನು ಹುಡುಕುವ ಗುಣ ಅವರಲ್ಲಿ ಸಿದ್ಧಿಸಿರುತ್ತದೆ.
ಇದಕ್ಕೆ ಮುಖ್ಯವಾದ ಕಾರಣವೆಂದರೆ ಹುಡುಗರು ನಿಜಜೀವನದ ಘಟನಾವಳಿಗಳನ್ನು ಸುಲಭವಾಗಿ ಈ ಪ್ರಶ್ನೆಗಳಿಗೆ ಪ್ರಸ್ತುತವಾಗಿಸಿಕೊಳ್ಳಬಲ್ಲರು. ಉದಾಹರಣೆಗೆ ಭೌತಸಾಸ್ತ್ರದ ಪ್ರಶ್ನೆಯಲ್ಲಿ ಚೆಂಡನ್ನು ಇಷ್ಟು ವೇಗದಲ್ಲಿ ಇಂತಹ ಕೋನದಲ್ಲಿ ಎಸೆದರೆ ಎಷ್ಟು ಎತ್ತರವನ್ನು ಮುಟ್ಟಬಲ್ಲದು ಎಂದು ಕೇಳಿರುತ್ತಾರೆ ಎಂದುಕೊಳ್ಳೋಣ. ಚಿಕ್ಕಂದಿನಿಂದ ಚೆಂಡಿನಾಟ ಆಡಿಕೊಂಡು ಬೆಳೆದ ಗಂಡುಮಕ್ಕಳಿಗೆ ಎಸೆತದ ವೇಗ ಸಾಗುವ ಪಥ ಗಾಳಿಯ ದಿಕ್ಕು ಎಲ್ಲವನ್ನೂ ಕ್ಷಣದಲ್ಲಿ ತಮ್ಮ ಮಸಲ್ ಮೆಮೊರಿಯಿಂದಲೇ ಊಹಿಸಿ ತಕ್ಕಂತೆ ಉತ್ತರಗಳನ್ನು ಸಿದ್ಧಪಡಿಸಿಕೊಳ್ಳುವುದು ಸುಲಭ. ಯಾಕೆಂದರೆ ಚಿಕ್ಕಂದಿನಿಂದಲೂ ಅದೇ ಆಟಗಳನ್ನು ಆಡಿ ಅವರ ಮೈ ಮನಸ್ಸುಗಳೆಲ್ಲ ಈ ಲೆಕ್ಕಾಚಾರಗಳಿಗೆ ಕ್ಷಣಾರ್ಧದಲ್ಲಿ ಸಿದ್ದವಾಗಿಬಿಡುತ್ತವೆ. ಬರಿಯ ಮೆದುಳಲ್ಲದೇ ಇಡಿಯ ದೇಹವೇ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವಲ್ಲಿ ಭಾಗವಹಿಸುತ್ತದೆ. ಆದರೆ ಕುಂಟಾಪಿಲ್ಲೆ, ಕಣ್ಣುಮುಚ್ಚಾಲೆ, ರತ್ತೋ ರತ್ತೋ ರಾಯನ ಮಗಳೆ, ಗುಲಾಬಿ ಹೂವೆ ಅಂತಹ ಸರಳ ಆಟಗಳನ್ನು ಆಡಿಕೊಂಡು ಬೆಳೆದ ಹೆಣ್ಣುಮಕ್ಕಳಿಗೆ ಈ ಪ್ರಶ್ನೆಯನ್ನು ಮೆದುಳಿನಲ್ಲಿ ಪುನರ್ನಿರ್ಮಿಸಿಕೊಳ್ಳುವುದೇ ಅಸಾಧ್ಯವಾಗಿಬಿಡುತ್ತದೆ.
ಇದೇ ಕಾರಣದಿಂದ ಡ್ರೈವಿಂಗ್ ಕಲಿಕೆಯಲ್ಲಿ ಸಹ ಅವರಿಗೆ ಕಷ್ಟಗಳು ಎದುರಾಗುತ್ತವೆ. ಡ್ರೈವಿಂಗ್ನಲ್ಲಿಯೂ ಸಹ ವೇಗ, ದೂರಗಳನ್ನು ಲೆಕ್ಕ ಹಾಕುವ ಕೆಲಸವನ್ನು ಮಿದುಳಲ್ಲದೇ ಮೈಮನಗಳೂ ಸಹ ಮಾಡಬೇಕಾಗುತ್ತದೆ. ಇದನ್ನು ಗಂಡುಮಕ್ಕಳು ಚಿಕ್ಕಂದಿನಿಂದ ನಡೆಸಿಕೊಂಡು ಬಂದರೆ ಹೆಣ್ಣುಮಕ್ಕಳು ಹೊಸದಾಗಿ ಕಲಿಯಬೇಕಾಗುತ್ತದೆ. ಗಂಡುಮಕ್ಕಳು ಬರಿಯ ಡ್ರೈವಿಂಗ್ ಅನ್ನು ಕಲಿಯಬೇಕು ಆದರೆ ಹೆಣ್ಣುಮಕ್ಕಳು ಮೊದಲು ತಮ್ಮ ದೇಹಕ್ಕೆ ಲೆಕ್ಕಾಚಾರಗಳನ್ನು ಕಲಿಸಿ ನಂತರ ಡ್ರೈವಿಂಗ್ ಅನ್ನು ಕಲಿಯಬೇಕಾಗುತ್ತದೆ. ಆದರೆ ಮಜಾ ಏನು ಗೊತ್ತಾ ? ಹೆಣ್ಣುಮಕ್ಕಳ ಡ್ರೈವಿಂಗ್ ಕೌಶಲದ ಬಗ್ಗೆ ಎಷ್ಟೇ ಜೋಕುಗಳಿದ್ದರೂ ಅಂಕಿಅಂಶಗಳ ಪ್ರಕಾರ ಅಪಘಾತಗಳಲ್ಲಿ ಪುರುಷರ ಪಾಲು ಶೇ 71 ರಷ್ಟಿದ್ದರೆ ಮಹಿಳೆಯರದು ಶೇ. 29 ಮಾತ್ರ! ಇದೇ ಥಿಯರಿ ಕ್ರಿಕೆಟ್ ಸಾಕರ್ನಂತಹ ಆಟಗಳಿಗೂ ಸಹ ಅನ್ವಯವಾಗುತ್ತದೆ.
ಇತ್ತೀಚೆಗೆ ಕೆಲ ಮಹಾನ್ ವಿಜ್ಞಾನಿಗಳು ಸೈಕಾಲಾಜಿಸ್ಟ್ಗಳು ಗಂಡಸುಗಳ ಮತ್ತು ಹೆಂಗಸರು ಮಿದುಳುಗಳನ್ನು ಅಧ್ಯಯನ ಮಾಡಿ ಎರಡೂ ಮೆದುಳುಗಳು ಹೇಗೆ ವಿಭಿನ್ನ ಇವರ್ಯಾಕೆ ಹಂಗೆ ಅವರ್ಯಾಕೆ ಹಿಂಗೆ ಅಂತ ಚಿಲ್ಲರೆ ಪ್ರಶಸ್ತಿಗಳಿಗೋಸ್ಕರ ವಿವರಣೆ ನೀಡುತ್ತಾರೆ. ಆದರೆ ಇದರಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೇಟ್ರಿಯಾರ್ಕಿಯನ್ನು ಮಾತ್ರ ಮರೆತುಬಿಡುತ್ತಾರೆ. ಐವತ್ತು ಅರವತ್ತು ವರ್ಷಗಳ ಕಾಲ ಪೇಟ್ರಿಯಾರ್ಕಿಯಲ್ಲಿ ಬೆಳೆದ ಮೆದುಳುಗಳನ್ನು ಕೆಲವು ಪ್ರಶ್ನೆಗಳ ಆಧಾರದ ಮೇಲೆ ವಿಂಗಡಿಸುವುದೇ ಮೂರ್ಖತನ. ಹೆಣ್ಣುಮಕ್ಕಳು ಮಲ್ಟಿಟಾಸ್ಕಿಂಗ್ನಲ್ಲಿ ಬಲವಂತರು ಆದರೆ ಲಾಜಿಕಲ್ ಥಿಂಕಿಂಗ್ನಲ್ಲಿ ದುರ್ಬಲರು ಅಂತ ಹೇಳಲಾಗುತ್ತದೆ. ಚಿಕ್ಕಂದಿನಲ್ಲಿಂದ ಹೆಣ್ಣುಮಕ್ಕಳನ್ನು ಅಡುಗೆಮನೆಯಲ್ಲಿ ಬೆಳೆಸಿ ಗಂಡುಹುಡುಗರನ್ನು ಹೊರಗೆ ಬೆಳೆಸಿದರೆ ಇನ್ನೇನಾಗುತ್ತದೆ? ಆರು ತಿಂಗಳು ಅಡುಗೆಮನೆಯಲ್ಲಿ ಕೆಲಸ ಮಾಡಿದರೆ ಗಂಡುಮಕ್ಕಳಿಗೂ ಈ ಮಲ್ಟಿಟಾಸ್ಕಿಂಗ್ ಅಭ್ಯಾಸವಾಗುತ್ತದೆ. ಆದರೆ ಹೊರಬಂದ ಕೂಡಲೇ ಲಾಜಿಕಲ್ ಥಿಂಕಿಂಗ್ ಹೆಣ್ಣುಮಕ್ಕಳು ಬೆಳೆಸಿಕೊಳ್ಳುವುದು ಬಹಳ ಕಷ್ಟವಾಗುತ್ತದೆ. ಏಕೆಂದರೆ ಅಡುಗೆಮನೆ ಚಿಕ್ಕ ಜಗತ್ತು ಹೊರಗಡೆ ಇರುವುದು ಸಾವಿರ ಪಟ್ಟು ವಿಶಾಲ ಜಗತ್ತು! ಇದನ್ನು ನಾನು ಇಂಡಿಯನ್ ಮನೆಗಳಿಗೆ ಅನ್ವಯಿಸಿ ಮಾತ್ರ ಹೇಳುತ್ತಿಲ್ಲ. ಇದು ಆಸ್ಟ್ರೇಲಿಯಾ ಮತ್ತು ಅಮೇರಿಕದಂತಹ ಮುಂದುವರಿದ ಜಗತ್ತಿಗೂ ಅನ್ವಯ.
ಪೇಟ್ರಿಯಾರ್ಕಿಯ ಹೆಣ್ಣುಮಕ್ಕಳ ಸ್ವಾತಂತ್ರದ ಬಗ್ಗೆ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವವರೂ ಸಹ ನನ್ನ ಮಗಳಿಗೆ ಬಾರ್ಬಿ ಗೊಂಬೆಗಳನ್ನು ಅಡುಗೆ ಆಟದ ಸಾಮಾನುಗಳನ್ನು ತಂದು ಕೊಡುವುದೇಕೆ ಅಂತ ಗೊತ್ತಾಗುವುದಿಲ್ಲ. ನನ್ನ ಮಗಳು ಅದು ಕೈಗೆ ಸಿಕ್ಕ ಕೂಡಲೆ ಮೂಲೆಗೆ ಬಿಸಾಕುತ್ತಾಳೆ. ಯಾಕೆಂದರೆ ಆಕೆಗೆ ಕೂತು ಆಡುವ ಆಟಗಳನ್ನು ನಾವು ಕಲಿಸಿಯೆ ಇಲ್ಲ. ಚೆಂಡು, ಸೈಕಲ್, ಕಟ್ಟುವ, ಬಡಿಯುವ, ರಿಪೇರಿ ಮಾಡುವ ಆಟಗಳೇ ಆಕೆಗೆ ಇಷ್ಟ! ಬಹುಷಃ ಆಕೆಗೆ ಡ್ರೈವಿಂಗ್ ಕಲಿಯುವುದು ಕಷ್ಟವಾಗಿಕ್ಕಿಲ್ಲ! ನಾನು ನನ್ನ ಗೆಳೆಯರನ್ನೂ ನೋಡುತ್ತೇನೆ. ಗಂಡುಮಕ್ಕಳು ಮಣ್ಣಲ್ಲಿ ಆಡುವ, ರಿಪೇರಿ ಮಾಡುವ ವಿಡಿಯೋಗಳನ್ನು ಹಾಕಿದೆರ ಹೆಣ್ಣುಮಕ್ಕಳು ಪಾತ್ರೆ ತೊಳೆಯುವ ನೆಲ ಒರೆಸುವ ವಿಡಿಯೋಗಳನ್ನು ಹಾಕಿಕೊಳ್ಳುತ್ತಾರೆ.
ಹೆಣ್ಣುಮಕ್ಕಳ ಈ ವರ್ತನೆಗೆ ವಿಕಾಸಾದದ ಕಾರಣಗಳನ್ನೂ ಕೆಲ ವಿಜ್ಞಾನಿಗಳು ಕೊಡುತ್ತಾರೆ. ಹಿಂದೆ ಮಕ್ಕಳನ್ನು ಹಡೆಯುವ ಮತ್ತು ಬೆಳೆಸುವ ಕಾರಣಕ್ಕಾಗಿ ಹೆಣ್ಣುಮಕ್ಕಳು ಮನೆಯಲ್ಲಿರುತ್ತಿದ್ದರು. ಆದರೆ ಗಂಡಸುಗಳು ಆಹಾರ ಹುಡುಕಲು ಬೇಟೆಯಾಡಲು ಕಾಡೆಲ್ಲ ಸುತ್ತಾಡುತ್ತಿದ್ದರಿಂದ ಅವರಲ್ಲಿ ಈ ವೇಗ ರಭಸ ದಿಕ್ಕುಗಳ ಲೆಕ್ಕಗಳು ವಿಕಾಸವಾಗಿದೆ ಅಂತ ಹೇಳುತ್ತಾರೆ. ಇದರಂತಹ ಸುಳ್ಳು ಮತ್ತೊಂದಿಲ್ಲ. ಮೊದಲನೆಯದಾಗಿ ಮನುಷ್ಯ ಮೊದಲು ಕಂಡುಬಂದದ್ದೇ ಮೂರು ಲಕ್ಷ ವರ್ಷಗಳ ಹಿಂದೆ ಈಗಿನ ಅವತಾರದಲ್ಲಿ ಬಂದದ್ದು ಹತ್ತು ಸಾವಿರ ವರ್ಷಗಳ ಹಿಂದೆ. ಮೂವತೈದು ಸಾವಿರ ವರ್ಷಗಳ ಹಿಂದಿನ ಮನುಷ್ಯ ಮೆದುಳಿಗೂ ಈಗಿನ ಮೆದುಳಿಗೂ ವ್ಯತ್ಯಾಸಗಳಾಗಿಲ್ಲ. ಮನುಷ್ಯನ ವಿಕಾಸ ಬೇರೆ ಪ್ರಾಣಿಗಳಿಗೆ ಹೋಲಿಸಿದರೆ ಬಹಳ ನಿಧಾನ. ಹತ್ತೇ ಸಾವಿರ ವರ್ಷಗಳಲ್ಲಿ ಗಂಡಸು ಹೆಂಗಸಿನ ಮೆದುಳುಗಳು ಅಷ್ಟು ವ್ಯತ್ಯಾಸದಿಂದ ವಿಕಾಸವಾಗುತ್ತವೆ ಅಂತ ನಂಬಲಾಗುವುದಿಲ್ಲ.
ನಾನು ಕಾಲೇಜು ಸೇರಿದ ಹೊಸದರಲ್ಲಿ ಒಂದು ಘಟನೆ ನಡೆಯಿತು. ಹುಡುಗರು ಕಿಟಕಿಯ ಪಕ್ಕದ ಸಾಲುಗಳಲ್ಲಿ ಕೂರುತ್ತಿದ್ದರೆ ಹುಡುಗಿಯರು ಕೋಣೆಯ ಮಧ್ಯದಲ್ಲಿ ಕೂತಿರುತ್ತಿದ್ದರು. ಅವರಿಗೆ ಫ್ಯಾನ್ನ ಅವಶ್ಯಕತೆ ಬೀಳುತ್ತಿತ್ತು. ಬೇಸಗೆಯ ಮೊದಲನೆಯ ದಿನ ಹುಡುಗಿಯರು ಬಂದು ಫ್ಯಾನ್ ಸ್ವಿಚ್ ಆನ್ ಮಾಡತೊಡಗಿದರು . ಆದರೆ ಫ್ಯಾನ್ ಆನ್ ಆಗುತ್ತಿಲ್ಲ. ಹತ್ತಾರು ಹುಡುಗಿಯರು ಬಂದು ಅನೇಕ ಪ್ರಯತ್ನ ಮಾಡಿ ಅನೇಕ ಬಾರಿ ಸ್ವಿಚ್ ಆನ್ ಆಫ್ ಮಾಡಿದರೂ ಫ್ಯಾನ್ ಆನ್ ಆಗಲಿಲ್ಲ. ನಾನು ಎದ್ದು ಹೋಗಿ ಫ್ಯಾನ್ ಸ್ವಿಚ್ನ ಮೇಲ್ಭಾಗದಲ್ಲಿದ್ದ ಮೇನ್ ಸ್ವಿಚ್ ಅನ್ನು ಆನ್ ಮಾಡಿದ ಕೂಡಲೇ ಫ್ಯಾನ್ ತಿರುಗತೊಡಗಿತು. ಗಂಡುಹುಡುಗರೆಲ್ಲ ಹುಡುಗಿಯರನ್ನು ಗೇಲಿ ಮಾಡುವಂತೆ ಜೋರಾಗಿ ನಕ್ಕರು. ನಿಜ ಹೇಳಬೇಕೆಂದರೆ ಅಲ್ಲಿ ಮೇನ್ ಸ್ವಿಚ್ಚನ್ನು ಆನ್ ಮಾಡಬೇಕು ಅಂತ ಅಲ್ಲಿದ್ದ ಗಂಡಸು ಮೆದುಳುಗಳಿಗೂ ಸಹ ಹೊಳೆದಿರಲಿಲ್ಲ! ನನಗೊಬ್ಬನಿಗೇ ಹೊಳೆದದ್ದು. ಆದರೆ ನಾನು ಸಮಸ್ಯೆ ಪರಿಹರಿಸಿದ್ದರಿಂದ ಯಶಸ್ಸಿನ ಶ್ರೇಯಸ್ಸು ಇಡಿಯ ಗಂಡಸು ಕುಲಕ್ಕೆ ದೊರೆಯಿತು. ಹುಡುಗಿಯರು ಪಾಪ ಸಮಸ್ಯೆ ಪರಿಹರಿಸುವ ಪ್ರಯತ್ನವನ್ನಾದರೂ ಮಾಡಿದ್ದರು. ಇವುಗಳು ಗಡವಾಗಳಂತೆ ಕುಳಿತಿದ್ದವು. ಹೆಣ್ಣುಮಕ್ಕಳ ಕೆಲ ಕ್ಷೇತ್ರಗಳಲ್ಲಿ ಹಿಂದುಳಿಕೆಯ ಬಗ್ಗೆ ಬಂದಿರುವ ಪೂರ್ವಗ್ರಹಗಳು ಹೇಗೆ ಹುಟ್ಟುತ್ತವೆ ಎಂಬುದರ ಬಗ್ಗೆ ಇದೊಂದು ಉದಾಹರಣೆಯಷ್ಟೇ!
(ಮುಂದಿನ ಕಂತು : 6.2.2022)
ಹಿಂದಿನ ಕಂತು : Sydney Diary : ತಿಪ್ಪತಿಪ್ಪಿಯ ದಾಂಪತ್ಯಕಲಹವೂ ಅಂಕಲ್ನ ಕಲ್ಲಲೆ ಬಲ್ಲಲೆ ಶೌವಲೆಯೂ ಮತ್ತು ಕೆಲ ಸತ್ಯಗಳೂ
ಇದನ್ನೂ ಓದಿ : Pandita Ramabai : Vaishaliyaana : ಅತ್ತ ಪುರೋಹಿತಶಾಹಿಗಳ ಇತ್ತ ಪಾದ್ರಿಗಳ ಅಡಿಯಾಳಾಗದ ರಮಾಬಾಯಿ ಇಂದಿಗೂ ಪ್ರಸ್ತುತ