Hopscotch : ಅಮಾರೈಟ್ ; ಮಾತನಾಡಬೇಕಾ ಅಂಟು ಬಿಟ್ಟಿರುವ ‘ಸೋಲ್‘ ಮತ್ತು ಡಿಸೈನರ್ ದೇಹವನ್ನು ಅಂಟಿಸುವ ಬಗ್ಗೆ

ಶ್ರೀದೇವಿ ಕಳಸದ

|

Updated on:Jan 11, 2022 | 5:12 PM

Poetry : ‘ನನಗೆ ಚಂದ ಕಾಣಿಸುವುದು ಹೇಗಂತ ಗೊತ್ತಿಲ್ಲ, ನನಗದರ ಮೇಲೆ ಆಸಕ್ತಿಯೂ ಇಲ್ಲ. ಹಾಗೇ ಹಾಗೇ ಇದ್ದಾಗಲೇ ಯಾವಾಗಾದರೊಮ್ಮೆ ಕ್ಯೂಟ್ ಅಂತಲೋ, ಮುದ್ದು ಅಂತಲೋ ಎಂದೋ ಕರೆಸಿಕೊಂಡಿದ್ದು ಬಿಟ್ಟರೆ ಬ್ಯೂಟಿಫುಲ್, hot,,, ಸ್ವೀಟ್, ಸೆಕ್ಸಿ... ಇವೆಲ್ಲದರ ಗುಂಪಿನಾಚೆ ಪದ ನಾನು.’ ಭವ್ಯಾ ನವೀನ

Hopscotch : ಅಮಾರೈಟ್ ; ಮಾತನಾಡಬೇಕಾ ಅಂಟು ಬಿಟ್ಟಿರುವ ‘ಸೋಲ್‘ ಮತ್ತು ಡಿಸೈನರ್ ದೇಹವನ್ನು ಅಂಟಿಸುವ ಬಗ್ಗೆ
ಫೋಟೋ : ಕೃಷ್ಣ ದೇವಾಂಗಮಠ

ಅಮಾರೈಟ್ | AmaRight : ಎಷ್ಟೋ ಹೊತ್ತಿನ ನಂತರವೂ ಎಗ್ಗಿಲ್ಲದೇ ಉಕ್ಕುತ್ತಲೇ ಇದ್ದ ನನ್ನ ದುಃಖ ಕಡಿಮೆ ಮಾಡಲು ಹಗೂರ ತಮಾಷೆ ಮಾಡುತ್ತಾ ಇವನು ಮತ್ತು ಗೆಳತಿ ಇಬ್ಬರೂ ಸೇರಿ ನಾನು ತೊಟ್ಟಿದ್ದ “ಕಪ್ಪು ನಿಲುವಂಗಿಯ” ಡ್ರೆಸ್ ಬಗ್ಗೆ ಕಿಚಾಯಿಸತೊಡಗಿದ್ದರು. ‘ನಾನಾಗಿದ್ದರೆ ಚಪ್ಪಲಿ ಕಿತ್ತಿದೆ ಅಂತ ತೋರಿಸಿ ಅವನ ಮುಖದ ಮೇಲೆ ಎಸೆಯುತ್ತಿದ್ದೆ’ ಅಂದಳು ಗೆಳತಿ, ‘ನೀನ್ಯಾಕೆ ಕಾರ್ ನಂಬರ್ ನೋಡಿಕೊಳ್ಳಲಿಲ್ಲ’ ಅಂಥ ಇವನು ಬುದ್ಧಿವಂತಿಕೆಯ ಮಾತಾಡಿದ್ದು ಕೇಳಿ ಒಂದು ಸಲ ಜೋರಾಗಿ ಅತ್ತು ಅಳುವುದನ್ನು ಅಲ್ಲಿಗೆ ಮುಗಿಸಿದೆ. ‘ನೀನೊಬ್ಳು ಡಬ್ಬಾ’ ಅಂತ ಆಡಿಕೊಳ್ಳುತ್ತಲೇ ಇಬ್ಬರೂ ಹೊಸ ಚಪ್ಪಲಿ ಕೊಡಿಸಿದರು. ಆ ಹೊಸ ಚಪ್ಪಲಿ ತೊಟ್ಟವಳೇ ಅದೇ ಕವರಿನಲ್ಲಿ ಕಿತ್ತು ಹೋಗಿದ್ದ ಚಪ್ಪಲಿಯನ್ನು ಜೋಪಾನವಾಗಿ ಎತ್ತಿಟ್ಟುಕೊಂಡೆ. ಇವನು ಮತ್ತೆ ಬೈದ. ಸೋಲ್ ಕಿತ್ತು ಹೋಗಿದ್ದು ಬಿಟ್ಟರೆ ಮೇಲಿಂದ ಚಪ್ಪಲಿ ಚಂದವಾಗೇ ಇತ್ತು. ಕೆಳಗೆ ಸೋಲ್ ಕೂಡ ಗಟ್ಟಿ ಗಟ್ಟಿ. ಕಿತ್ತು ಹೋಗಿದ್ದು ಅವೆರಡರ ನಡುವಿನ ಅಂಟು ಮಾತ್ರ. ಎಸೆದರೆ ಒಂದು ಕೆಟ್ಟ ಕನಸು ಬಹುಶಃ ಮುಗಿದು ಬಿಡುತ್ತಿತ್ತು. ನನಗೆ ಮುಗಿಸಿಕೊಳ್ಳಲು ಇಷ್ಟವಿರಲಿಲ್ಲ. ಭವ್ಯಾ ನವೀನ, ಕವಿ, ಲೇಖಕಿ

*

ಬಿಲ್ಲೆ – 1

ಇನ್ನು ರಾತ್ರಿಯಾಗಿರದ, ಸಂಜೆ ಉಳಿದಿರದ ಅರೆಹೊತ್ತಲ್ಲಿ ಒಬ್ಬಳೇ ರಾಜಕಾಲುವೆ ಸೇತುವೆ ಮಧ್ಯೆ ನಿಂತು ಕಾಯುತ್ತಿದ್ದೆ. ತುಂಬುತೋಳು, ಕಾಲರ್‌ನೆಕ್‌ನ ಕಪ್ಪು ಕುರ್ತಾ ಮೈ ತುಂಬಾ ಮುಚ್ಚಿ ಕೊರೆವ ಚಳಿಯ ಜೊತೆ ಸಣ್ಣಗೆ ಜಗಳಕ್ಕೆ ನಿಂತಿತ್ತು. ಇನ್ನೂ ತಿಂಗಳೂ ತುಂಬದೇ ಕಿತ್ತುಹೋದ ಚಪ್ಪಲಿಯ ಕೈಯ್ಯಲ್ಲಿಡಿದು ನಾನು ಬೇಜಾನು ದುಃಖದಲ್ಲಿ ನಿಂತಿರುವಾಗ ಒಂದು ಗಾಯವಾಯಿತು. ಈಗಲೂ ಆಗೀಗೊಮ್ಮೆ ಉರಿಹತ್ತುವ ಆ ಗೀರು ಗಾಯ ಮಾಯುವ ಬಗ್ಗೆ ಯಾವ ಅಂಥ ಗ್ಯಾರಂಟಿಗಳಿಲ್ಲ. ಇಂತಿಪ್ಪ ಗೀರು ತಾಕುವ ಮೊದಲಿನ ಆ ಬೆಳಗು ಎಂದೆಂದಿನಂತೆಯೂ, ಇಂದಿನಂತೆಯೂ ಇತ್ತು… ಒಂದು ಮುಖ್ಯವಾದ ಪಾಠವಿರದ ಪಠ್ಯಪುಸ್ತಕದ ಹಾಗೆ!

*

ನನಗೆ ಚಂದ ಕಾಣಿಸುವುದು ಹೇಗಂತ ಗೊತ್ತಿಲ್ಲ, ನನಗದರ ಮೇಲೆ ಆಸಕ್ತಿಯೂ ಇಲ್ಲ. ಹಾಗೇ ಹಾಗೇ ಇದ್ದಾಗಲೇ ಯಾವಾಗಾದರೊಮ್ಮೆ ಕ್ಯೂಟ್ ಅಂತಲೋ, ಮುದ್ದು ಅಂತಲೋ ಎಂದೋ ಕರೆಸಿಕೊಂಡಿದ್ದು ಬಿಟ್ಟರೆ ಬ್ಯೂಟಿಫುಲ್, hot, ಸ್ವೀಟ್, ಸೆಕ್ಸಿ… ಇವೆಲ್ಲದರ ಗುಂಪಿನಾಚೆ ಪದ ನಾನು. ಹಾಗಿದ್ದೂ ಆವತ್ತು ನಡೆದದ್ದೆಲ್ಲಾ ನೆನೆಸಿಕೊಂಡರೆ ಕೆಲವೊಂದಕ್ಕೆ ಕಾರಣಗಳೇ ಇರುವುದಿಲ್ಲವಲ್ಲಾಂತ. ಅದರಲ್ಲೂ ‘ಈ ಜಗತ್ತು ಮತ್ತು ಮೇಲ್ ಸೈಕೋಲಾಜಿ’ಗೆ ಪರ್ಟಿಕ್ಯುಲರ್ಲಿ ಈಗ ನಾನು ಹೇಳಲು ಹೊರಟಿರುವ ವಿಚಾರಕ್ಕೆ ಕಾರಣಗಳು ಬೇಕಿರುವುದಿಲ್ಲ ಅಂತಲೂ ಅನಿಸುತ್ತದೆ.

ಅಂದು, ಅಲಾರಂ 4 ಗಂಟೆಗೆ ಭಾನುವಾರದ ಬೆಳ್ಳಂಬೆಳಗನ್ನು ಕಲಸುವಂತೆ ಸದ್ದುಮಾಡಿದಾಗ ಪಟ್ ಅಂತ ಆಫ್ ಮಾಡಲು ನಾನು ಬಹುಶಃ ಅವಸರದಿಂದ ಎಡಮಗ್ಗುಲಲ್ಲೇ ಎದ್ದಿರಬೇಕು ಅಂತ ತಿರುಗಿ ರಾತ್ರಿ ಮಲಗುವಾಗ ನೆನಪಿಸಿಕೊಂಡು, ಮತ್ತೆ ಹೀಗಾಗದಿರಲೀ ಅಂತ ಮೊಬೈಲ್‌ಅನ್ನು ಎಡಕ್ಕೆ ಕಿಟಕಿ ಕಟ್ಟೆಯಲ್ಲಿಡುವುದನ್ನು ಬಿಟ್ಟು, ಬೆಡ್‌ಮೇಲೆಯೇ ನನ್ನ ಬಲಕ್ಕೆ ಇಟ್ಟುಕೊಳ್ಳಲು ಅಂದಿನಿಂದಲೇ ಶುರುಮಾಡಿದೆ.

ಆ ಅದೇ ಭಾನುವಾರ ಅಮ್ಮನ ಮನೆಯಲ್ಲಿ ಮಗಳು ಬೆಚ್ಚಗೆ ಮಲಗಿರುವಾಗ ದೂರದ ಊರಿಗೆ ಪುಸ್ತಕ ಬಿಡುಗಡೆಗಂತ ನಾವು ಜೋಡಿಸಮೇತ ಹೊರಟಿದ್ದೆವು, ಜೊತೆಗೆ ಇನ್ನೊಬ್ಬರು. ಮೂವರಿಗೆ ಎರಡು ಕಾರ್ ಯಾಕೆ ಅಂತ ಒಂದನ್ನು ಅವರ ಮನೆ ಮುಂದೆಯೇ ನಿಲ್ಲಿಸಿ ಹೋದೆವು. ಕಾರ್ಯಕ್ರಮ ಚಂದಗೆ ನಡೆದು ಮುಗಿದರೂ, ಅಪರೂಪಕ್ಕೆ ಸಿಕ್ಕವರ ಜೊತೆ ನನ್ನ ಮಾತು ಮುಗಿದಿರಲಿಲ್ಲ. ಜೊತೆಗೆ ಬಂದವರಿಗೆ ಅವಸರವಿತ್ತು, ಹಾಗಾಗಿ ಕಾರು ಸಮೇತ ಅವರನ್ನು ಕಳಿಸಿದ್ದಾಯ್ತು. ಆಮೇಲೆ ಎಲ್ಲಾ ಮುಗಿಸಿ, ಸಂಜೆ ಹೊತ್ತಿಗೆ ಮತ್ತೊಬ್ಬರನ್ನು ಜೊತೆ ಹಾಕಿಕೊಂಡು ಕೆಂಪುಬಸ್ಸಿನಲ್ಲಿ ವಾಪಾಸ್ ಬಂದು ಕಾರು ನಿಲ್ಲಿಸಿದ ಮನೆಗೆ ಹತ್ತಿರದ ಸ್ಟಾಪಿನಲ್ಲಿ ಇಳಿದು ನಡೆಯುತ್ತಿರುವಾಗ, ನನ್ನ ಎಡಗಾಲ ಚಪ್ಪಲಿ ಕೊಂಚ ಸಡಿಲಾಗಿ, ಇನ್ನೊಂದೆರಡು ಹೆಜ್ಜೆ ನಡೆವಾಗ ಅರ್ಧ ಕಿತ್ತು… ಮತ್ತೊಂದು ನೂರು ಮೀಟರ್ ಕಾಲೆಳೆದು ನಡೆಯುವ ಹೊತ್ತಿಗೆ ಉಂಗುಷ್ಟ ಹೆಸರಿಗೆ ಮಾತ್ರ ಬೆರಳ ಮಧ್ಯೆ ಸಿಕ್ಕಿಕೊಂಡು ಪೂರ್ತಿ ಸೋಲ್ ಕಳಚಿ ಒಂದೆಜ್ಜೆ ಹಿಂದೆಯೇ ನಿಂತುಬಿಟ್ಟಿತು. ನಾನು ಇನ್ನು ಹೀಗೆ ನಡೆಯಲಾಗುವುದಿಲ್ಲ ಅನ್ನುವಂತೆ ಅದೇ ಮೇಲೆ ಹೇಳಿದ ರಾಜಕಾಲುವೆಯ ಸೇತುವೆಗೆ ಒರಗಿ ನಿಂತು ‘ಬೇಗ ಹೋಗಿ ಕಾರು ತನ್ನಿ’ ಅಂತ ಇಬ್ಬರಿಗೂ ಹೇಳಿ ಅಲ್ಲೇ ನಿಂತೆ.

ಬೆಳಗಿಂದ ಪ್ರಯಾಣ, ದಾರಿಯುದ್ದದ ‘ಕಾರಿ’ಕೆಗಳು… ನನ್ನ ಅಚ್ಚ ಹಳೇ ಕತ್ತು ನೋವೂ ಸೇರಿ ಬಳಲಿದ್ದ ಮುಖದ ತುಂಬಾ ಚಪ್ಪಲಿ ಕಿತ್ತು ಹೋದ ದುಃಖ ಮತ್ತು ಸಂಕಟ ಬೇರೆ. ಇನ್ನು ನಾನು ಶುರುವಲ್ಲೇ ವಿವರಿಸಿದ್ದ ಭರ್ತಿ ಮೈಮುಚ್ಚುವ ಡ್ರೆಸ್. ಹೀಗಿರುವಾಗ ಅವನ್ಯಾರೋ ಅನಾಮಿಕ ಕಿರಾತಕನಿಗೆ ನನ್ನಲ್ಲಿ ಯಾವ ಸೂಚನೆಗಳು ಸಿಕ್ಕವೋ. ನಾನು ಒರಗಿ ನಿಂತಿದ್ದ ಬ್ರಿಡ್ಜಿನ ತುದಿಗೆ ಕಾರು ನಿಲ್ಲಿಸಿ ಲೈಟ್ ಆನ್ ಆಫ್ ಮಾಡತೊಡಗಿದ. ರಾಗಬದ್ಧವಾಗಿ ಹಾರ್ನ್ ಮಾಡುತ್ತಾ ನನ್ನೇ ಗುರಾಯಿಸುತ್ತಾ ಕೂತಿದ್ದ ಆ ದೊಡ್ಡ ಕಾರಿನ ಯಜಮಾನ ಅದು ಹೇಗೋ ನನಗೇ ವಿವರಿಸಲೂ ಬಾರದ ಹಾಗೆ ಕಣ್ಸನ್ನೆ ಮಾಡಿದ, ತಲೆ ಸುತ್ತುವಂತಾಯ್ತು. ಇನ್ನೂ ಏಳೂ-ಏಳೂವರೆ. ಆದರೂ ಭಾನುವಾರ ಅಂತ ಅಷ್ಟೇನೂ ಜನರಿರಲಿಲ್ಲ. ಭಯಕ್ಕೆ ಚೇಳು ಹತ್ತಿದ ಹಾಗೇ ಚಡಪಡಿಸತೊಡಗಿದೆ, ಸದ್ಯಕ್ಕೆ ಯಾರೋ ಒಬ್ಬ ಬೈಕಿನಲ್ಲಿ ಬಂದದ್ದು ನೋಡಿ ಧೈರ್ಯ ತಂದುಕೊಳ್ಳುವಷ್ಟರಲ್ಲೇ ಅವನು ‘ಏನೋ ಒಂಥರ’ ನೋಡಿ ತನ್ನ ಪಾಡಿಗೆ ತಾನು ಹೋಗಿಬಿಟ್ಟ. ನನಗೀಗ ಭಯಕ್ಕಿಂತ ಹೆಚ್ಚಿಗೆ ಹಿಂಸೆಯಾಗತೊಡಗಿತು, ‘ಇವರು ನನ್ನನ್ನು ಏನಂದುಕೊಳ್ಳುತ್ತಿದ್ದಾರೆ’ ಅನ್ನುವ ಮುಜುಗರ, ಸಾಯುವಷ್ಟು ಮುಜುಗರ!

ಭಯ ತೋರಿಸಿಕೊಳ್ಳದೆ ‘ಏನು’ ಅಂದೆ. ಅವನಿಗೆ ಕೇಳಿಸಿದ ಹಾಗಾಗಲಿಲ್ಲ, ಬಹುಶಃ ನನ್ನ ಧ್ವನಿ ನನಗೇ ಕೇಳಿಸಿರಲಿಕ್ಕಿಲ್ಲ. ಕಿತ್ತ ಚಪ್ಪಲಿಯನ್ನು ಬಲಗೈಲಿ ಹಿಡಿದು ಕಾಲೆಳೆಯುತ್ತಾ ಮುಂದೆ ಬಂದೆ. ಹೆದರಿಸುವವಳಂತೆ ಫೋನು ಹಿಡಿದರೂ ಅವನ ಕಾರು ಹಿಂದೆ ಬಂತೇ ವಿನಾ ಮುಂದೆ ಹೋಗಲಿಲ್ಲ. ಇನ್ನೇನು ಈಗ ಏನೋ ಘಟಿಸಿತು ಅನ್ನುವ ಹಾಗೆ ನಾನು ಕುಸಿಯುವಷ್ಟರಲ್ಲಿ ಗಂಡ ಹೆಂಡತಿ ಮಕ್ಕಳಿದ್ದ ಮತ್ತೊಂದು ಕಾರು ನಿಧಾನಕ್ಕೆ ಆ ತಿರುವಿಗೆ ಬಂತು. ಗುಂಡಿ ಬಿದ್ದಿದ್ದ ರಸ್ತೆ ನನಗೆ ಉಪಕರಿಸುವಂತೆ ಕಾರಿನ ಸ್ಪೀಡನ್ನು ಮತ್ತಷ್ಟು ತಗ್ಗಿಸಿತು, ನಾನು ಇನ್ನೂ ಹೆಚ್ಚು ಸ್ಪೀಡಾಗಿ ರಸ್ತೆ ದಾಟಿದೆ. ಅಷ್ಟರಲ್ಲಿ ಆ ಬೈಕಿನಲ್ಲಿ ಹೋಗಿದ್ದ ಹುಡುಗ ‘ಏನೋ ನಡೆದಿರಬಹುದು’ ಅಂತ ನೋಡುವ ಹಾಗೆ ವಾಪಸ್ ಬರುತ್ತಿದ್ದ, ಹೇಸಿಗೆಯಾಯಿತು. ಬಹುಶಃ ಆ ನಾಲ್ಕೈದು ನಿಮಿಷದ ಗ್ಯಾಪಿನಲ್ಲಿ ಏನೆಲ್ಲಾ ಕೆಟ್ಟ ಘಾಟು ಮೈಗೆ ಮೆತ್ತಿಕೊಂಡಿತೋ ಅನ್ನಿಸಿತು. ತಿರುಗಿ ಏನೂ ಮಾಡಲಾಗದ ಅಸಹಾಯಕತೆ ಇನ್ನಷ್ಟು ತಿವಿಯುತ್ತಿತ್ತು. ಬೇರೆ ಯಾರೇ ಆ ಜಾಗದಲ್ಲಿದ್ದರೂ ಕಾರಿನವನಿಗೆ ಶಾಸ್ತಿ ಮಾಡುತ್ತಿದ್ದೆನೇನೋ ಗೊತ್ತಿಲ್ಲ, ಆದರೆ ನಾನೇ ಆ ಪರಿಸ್ಥಿತಿಯಲ್ಲಿದ್ದಾಗ ನನಗೆ ಉಸಿರು ಸಿಕ್ಕಿಬಿದ್ದಿತ್ತು.

ಆ ಬೆಳಿಗ್ಗೆ ಪುಸ್ತಕದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ರಘುನಾಥ್ ಮೇಷ್ಟ್ರು (ಸ. ರಘುನಾಥ) ಭಾಷಣದಲ್ಲಿ ಹೇಳಿದ ‘‘ಕವಿತೆ ಸೂಳೆಯ ಹಾಗೇ ಅಲಂಕೃತವಾಗಿ ಹೊಸಿಲಲ್ಲಿ ನಿಂತು ಕವಿಯ ಕೈ ಬೀಸಿ ಕರೆಯುತ್ತದೆ’’ ಎನ್ನುವ ಸಾಲು ಮಾತ್ರ ನೆನಪಲ್ಲುಳಿಯಿತು. ಆ ದಿನದ ಆಘಾತದ ಪರಿಣಾಮ ಈ ಸಾಲಿನ ಪೂರ್ವಾಪರವೇನೂ ನೆನಪಲ್ಲುಳಿಯದೆ, “ನಾನು ಆ ಕಡುಪಾಪಿ ಕಾರಿನವನಿಗೆ ‘ಕವಿತೆ’ಯಂತೆ ಕಂಡೆನಾ” ಅಂತ ಮತ್ತೂ ಮತ್ತೂ ಹಿಂಸೆಯಾಗತೊಡಗಿ ವಿಚಿತ್ರ ಅವಮಾನದಿಂದ ಕುಗ್ಗಿದ್ದೆ ನನ್ನ ಕಾರಿನ ದಾರಿ ನೋಡುತ್ತಾ…

ಇಲ್ಲಿ ಇನ್ನೊಂದು ಮುಖ್ಯವಾಗಿ ಹಿಂಸೆಯಾಗಿದ್ದು ಎಂದರೆ, ಇದು ‘ನನ್ನೂರೇ ತಾನೇ?’ ಅಲ್ಲವಾ ಅಂತ. ಒಂದೇ ಊರಲ್ಲಿ ಹುಟ್ಟಿ ಮತ್ತದೇ ಊರಲ್ಲಿ ಹೆಚ್ಚೆಂದರೆ ಒಂದೆರೆಡು ರಸ್ತೆಯ ಆಚೆಗಿನ ಮನೆಯಲ್ಲಿಯೇ ಸಾಯುವವರೆಗೂ ಇರಬೇಕೆಂದರೆ ಅದೊಂಥರ ಪರಮಕಷ್ಟದ ಅನಿವಾರ್ಯ. ಆದರೂ ಅದೊಂಥರ ಹಿತವಾಗಿ ಅಭ್ಯಾಸವಾಗಿ ಖುಷಿಯಾಗಿರುವುದಕ್ಕೆ ಮಿಕ್ಕಿಯೂ ಸುಮಾರು ಕಾರಣಗಳು ಸಿಗುತ್ತವೆ. ಆ ರಸ್ತೆಗಳು, ಪರಿಚಯದ ಅಂಗಡಿಗಳು, ಉಪ್ಪು-ಖಾರದ ರುಚಿಯ ಅಳತೆ ಗುರುತಿಟ್ಟುಕೊಂಡ ಗೋಲ್‌ಗುಪ್ಪಾ ಪಾನಿಪುರಿ ಗಾಡಿಗಳು, ಮತ್ತೆ ಹುಡುಕಿಕೊಳ್ಳಬೇಕಾದ ಭಯವಿಲ್ಲದ ಯಾವತ್ತಿನ ಟೈಲರ್, ದಾರಿಯಲ್ಲಿ ಹೋಗುತ್ತಾ ಬರುತ್ತ ನಕ್ಕು ಕಣ್ಣಲ್ಲೇ ಮಾತಾಡಿಸುವ ಹೆಸರು ಗೊತ್ತಿಲ್ಲದ ಅದೇ ದಾರಿಯ ವಿಳಾಸಿಗರು… ಈ ಎಲ್ಲ ಹಳೆಯದೂ ಸೇರಿ ಹಳೆಯದಾಗಿಯೇ ಉಳಿದುಕೊಂಡು ಕೊಡುತ್ತಿದ್ದ ಕಂಫರ್ಟ್ ಹೊಸ ಜಗತ್ತಿಗೆ ತೆರೆದುಕೊಳ್ಳುವ ಆಸೆಗಿಂತ ದೊಡ್ಡದು ಅನಿಸಿ ಸುಖವಾಗಿದ್ದೆ. ಆದರೆ ‘ಇದು ನನ್ನ ಏರಿಯಾ… ಇಲ್ಲಿ ಎಲ್ಲವೂ ಸುಲಭ, ಎಲ್ಲವೂ ಸೇಫ್’ ಅನ್ನುವ ಅಭಿಮಾನ, ಈ ದಾರಿಗಳಿಗೆ ನನ್ನ ಪರಿಚಯವಿದೆ ಅನ್ನುವ ಅಹಂಕಾರ ಎಲ್ಲವೂ ನನ್ನ ವಿಳಾಸದ ಕೇವಲ ನಾಲ್ಕೈದು ಕಿ. ಮೀ ಆಚೆಯ ‘ನನ್ನದೇ ಪುಟ್ಟ ಊರಿನ’ ನಿರ್ಜನ ಪ್ರದೇಶದ ನಿಶ್ಯಬ್ಧದಲ್ಲಿ ಸತ್ತುಹೋಯಿತು ಆ ದಿನ.

ಇನ್ನು… ನಾನು ಕಲ್ಲೊತ್ತಿಸಿಕೊಂಡು ಕಾಲೆಳೆಯುತ್ತಾ ಹೋಗುವಾಗಲೇ ನಮ್ಮ ಕಾರು ಕಾಣಿಸಿತು. ಹಿಂದಿನ ಸೀಟಲ್ಲಿ ಕೂತು ಜೋರು ಉಸಿರಿನ ಮಧ್ಯೆ ಕೀರಲು ಧ್ವನಿಯಲ್ಲಿ ಹೀಗೀಗಾಯಿತು ಅಂತ ವಿವರಿಸುತ್ತಿದ್ದರೆ ವಿಪರೀತ ಸಿಟ್ಟಿಗೆ ಕಾರಿನ ಗೇರು ಬದಲಾಗಿ ಸ್ಪೀಡು ಹೆಚ್ಚಾಗುತ್ತಿತ್ತು. ಮಾತಿನ ಮಧ್ಯೆ ಅಸಹನೀಯವಾಗಿ ಹೂಂಗುಟ್ಟುತ್ತಾ, ಆ ಕಿರಾತಕನ ಮೇಲಿನ ಸಿಟ್ಟಿಗೆ ಮತ್ತೇನೂ ಮಾಡಲಾಗದ ಇವನು, ‘ಎಷ್ಟು ಹೇಳಿದರೂ ಒಳ್ಳೇ ಸ್ಲಿಪ್ಪರ್ ತಗೊಳ್ಳೋದೇ ಇಲ್ಲಾ’ ಅಂತ ನನ್ನ ಗದರಿದ್ದು ಕೇಳಿ ಕಿವಿಚಿಟ್ಟು ಹಿಡಿದು ಅಷ್ಟರವರೆಗೆ ಅಂಡಲೆಯುತ್ತಿದ್ದ ಕಣ್ಣೀರು ಸಿಡಿದು ಧಾರಾಕಾರ ಸುರುವಾಯಿತು.

*

Amaright Column by Kannada Poet Writer Bhavya Naveen

ಫೋಟೋ : ಕೃಷ್ಣ ದೇವಾಂಗಮಠ

ಎಷ್ಟೋ ಹೊತ್ತಿನ ನಂತರವೂ ಎಗ್ಗಿಲ್ಲದೇ ಉಕ್ಕುತ್ತಲೇ ಇದ್ದ ನನ್ನ ದುಃಖ ಕಡಿಮೆ ಮಾಡಲು ಹಗೂರ ತಮಾಷೆ ಮಾಡುತ್ತಾ ಇವನು ಮತ್ತು ಗೆಳತಿ ಇಬ್ಬರೂ ಸೇರಿ ನಾನು ತೊಟ್ಟಿದ್ದ “ಕಪ್ಪು ನಿಲುವಂಗಿಯ” ಡ್ರೆಸ್ ಬಗ್ಗೆ ಕಿಚಾಯಿಸತೊಡಗಿದ್ದರು. ‘ನಾನಾಗಿದ್ದರೆ ಚಪ್ಪಲಿ ಕಿತ್ತಿದೆ ಅಂತ ತೋರಿಸಿ ಅವನ ಮುಖದ ಮೇಲೆ ಎಸೆಯುತ್ತಿದ್ದೆ’ ಅಂದಳು ಗೆಳತಿ, ‘ನೀನ್ಯಾಕೆ ಕಾರ್ ನಂಬರ್ ನೋಡಿಕೊಳ್ಳಲಿಲ್ಲ’ ಅಂಥ ಇವನು ಬುದ್ಧಿವಂತಿಕೆಯ ಮಾತಾಡಿದ್ದು ಕೇಳಿ ಒಂದು ಸಲ ಜೋರಾಗಿ ಅತ್ತು ಅಳುವುದನ್ನು ಅಲ್ಲಿಗೆ ಮುಗಿಸಿದೆ. ‘ನೀನೊಬ್ಳು ಡಬ್ಬಾ’ ಅಂತ ಆಡಿಕೊಳ್ಳುತ್ತಲೇ ಇಬ್ಬರೂ ಹೊಸ ಚಪ್ಪಲಿ ಕೊಡಿಸಿದರು. ಆ ಹೊಸ ಚಪ್ಪಲಿ ತೊಟ್ಟವಳೇ ಅದೇ ಕವರಿನಲ್ಲಿ ಕಿತ್ತು ಹೋಗಿದ್ದ ಚಪ್ಪಲಿಯನ್ನು ಜೋಪಾನವಾಗಿ ಎತ್ತಿಟ್ಟುಕೊಂಡೆ. ಇವನು ಮತ್ತೆ ಬೈದ. ಸೋಲ್ ಕಿತ್ತು ಹೋಗಿದ್ದು ಬಿಟ್ಟರೆ ಮೇಲಿಂದ ಚಪ್ಪಲಿ ಚಂದವಾಗೇ ಇತ್ತು. ಕೆಳಗೆ ಸೋಲ್ ಕೂಡ ಗಟ್ಟಿ ಗಟ್ಟಿ. ಕಿತ್ತು ಹೋಗಿದ್ದು ಅವೆರಡರ ನಡುವಿನ ಅಂಟು ಮಾತ್ರ. ಎಸೆದರೆ ಒಂದು ಕೆಟ್ಟ ಕನಸು ಬಹುಶಃ ಮುಗಿದು ಬಿಡುತ್ತಿತ್ತು. ನನಗೆ ಮುಗಿಸಿಕೊಳ್ಳಲು ಇಷ್ಟವಿರಲಿಲ್ಲ.

ತಲುಪಿಸಿಕೊಳ್ಳುವವರಿಗೆ ತಲುಪಿರುತ್ತದೆ ಸಂಕಟ… ನನ್ನದೇ ಊರು, ಹೆಚ್ಚೆಂದರೆ ನನ್ನದೇ ಏರಿಯಾದ ಹತ್ತಾರು ರಸ್ತೆಗಳಾಚೆ ಒಂದು ಪ್ರದೇಶದಲ್ಲಿ ನಾನು ಯಾವನೋ ಒಬ್ಬನ ಕಣ್ಣು ಮತ್ತು ಯೋಚನೆಗಳಿಂದಲೇ ಅತ್ಯಾಚಾರಕ್ಕೊಳಗಾಗಿದ್ದೆ ಅಂತ ಅನಿಸಿದ ಅರೆಕ್ಷಣದ ನಂತರದಲ್ಲಿ “ನಾನು ಅಂತಹ ಹುಡುಗಿಯಲ್ಲ” ಅನ್ನುವ ಸಾಲೊಂದನ್ನು ನನ್ನ ಡೈರಿಯಿಂದ ಸಂಪೂರ್ಣ ಅಳಿಸಿಹಾಕಿದೆ, ಮತ್ತೆ ಅಂದಿನಿಂದ ಈವತ್ತಿನ ತನಕ ಯಾವ ಪರಿಸ್ಥಿತಿಯಲ್ಲೂ ‘ನಾನು ಅಂಥವಳಲ್ಲ’ ಅಂತ ನಾನು ಎಲ್ಲೂ ಬಳಸಿಲ್ಲ. ‘ಯಾರು ಎಂತಹ ಹುಡುಗಿ? ಹೇಗೆ ತಿಳಿಯುವುದು? ನಿರ್ಧರಿಸುವವರು ಯಾರು? ಅಂತಹ ಹುಡುಗಿಯರ ಬಗ್ಗೆಯಾದರೂ ನಮಗೇನು ಗೊತ್ತಿದೆ? ಅಕಾರಣ ಅವಳು ಹಾಗೆ ಕಾಣಿಸಲ್ಪಟ್ಟರೆ, ಹೇಗೋ ಕರೆಯಲ್ಪಟ್ಟರೆ, ಯೋಚಿಸಿಯೇ ಸಂಕಟವಾಗುತ್ತದೆ. ಉಸಿರು ಕೂಡ ತಾಕಿಸಿಕೊಳ್ಳದೆಯೂ ಅನುಭವಿಸಿದ ಉರಿಹಿಂಸೆಯ ಆ ಇಡೀ ರಾತ್ರಿ, ಪಾಪ ನಿಜಕ್ಕೂ ನೇರ ದಾಳಿಗೊಳಗಾಗಿ ಮುರುಟಿಹೋದ ಹುಡುಗಿಯರ ನೆನಪಾಗುತ್ತಿತ್ತು. ಅವರ ಭಯ, ಹಿಂಸೆ ಎಷ್ಟು ದೊಡ್ಡದಿರಬಹುದು… ಇನ್ನೆಷ್ಟು ಜನುಮದವರೆಗೂ ಅದು ಮುಂದುವರೆಯುತ್ತದೋ ಏನೋ! ಹಾಗೇ ಬದುಕುತ್ತಿರುವವರ ಬದುಕಿಗೆ, ಸತ್ತವರ ಸಾವಿಗೆ ನೆಮ್ಮದಿ ಸಿಗುತ್ತದೆಯಾ ಅಂತಲೇ ಯೋಚನೆ.

ಇಂಥ ಘಟನೆಗಳು ಯಾವತ್ತಿಗೂ ಮರೆತುಹೋಗುವಂಥದ್ದಲ್ಲ. ಕೊಂಚ ಮಸುಕೂ ಆಗಿಲ್ಲ. ಆದರೂ, ಮತ್ತೆ ಹಸಿ ಹಸಿಯಾಗಿ ಆ ಗೀರುಗಾಯ ಮರುಕಳಿಸುವುದಕ್ಕೆ ಆಗೀಗ ಏನಾದರೊಂದು ಅಪದ್ಧ ಮಾತು-ಘಟನೆ ಕೇಳಲು, ನೋಡಲು ಸಿಗುತ್ತಲೇ ಇರುತ್ತದೆ. ಮೊನ್ನೆ ಸದನದಲ್ಲಿ ನಮ್ಮ ಘನವೆತ್ತ ನಾಯಕರು ಇಂಥದ್ದೊಂದು ಗಂಭೀರ ಸಂಗತಿಯನ್ನು ತಮಾಷೆಯಾಗಿ ಹೇಳಿ ಅಷ್ಟು ಆರಾಮಾಗಿ ನಗುತ್ತಿದ್ದರೆ ನನಗೆ ನಾನು ಮತ್ತೆ ರಾಜಕಾಲುವೆಯ ಸೇತುವೆ ಮೇಲೆ ನಿಂತಂತಾಯಿತು. ಅಂಥಹ ಯೋಚನೆಗಳನ್ನೇ ಅರಗಿಸಿಕೊಳ್ಳಲಾಗದೆ ಚಡಪಡಿಸುತ್ತಿರುವ ಅಸಂಖ್ಯರ ನಡುವೆ, ಇನ್ನು ದಾಳಿಗೆ ನರಳಿದವರ ಆಳಗಾಯಗಳ ನೋವು ಎಂಥದ್ದಿರಬಹುದೋ? ಅಳತೆಗೆ ಸಿಗುವುದಿಲ್ಲ ಬಿಡಿ. ಈಗಲೂ ಆ ಕಿತ್ತುಹೋದ ಚಪ್ಪಲಿ ನನ್ನಲ್ಲಿ ಜೋಪಾನವಾಗಿದೆ. ಅಂಟಿಸುವುದಕ್ಕಂತ ಎತ್ತಿಟ್ಟುಕೊಂಡ ಆ ಒಂಟಿ ಚಪ್ಪಲಿಯ ಸೋಲ್ ಮತ್ತು ಲೆದರ್ ಲೇಸ್ ಇರುವ ಅಂಗುಷ್ಟದ ಡಿಸೈನ್ ಅನ್ನು ಯಾವಾಗದರೂ ನೋಡುತ್ತಾ ಕೂರುತ್ತೇನೆ. ಅಂಟಿಸುವ ಪ್ರಯತ್ನ ಮಾತ್ರ ಶುರುವಾಗಿಲ್ಲ.

ಯಾವತ್ತೋ ಅಂಟು ಬಿಟ್ಟಿರುವ ಆತ್ಮ (ಸೋಲ್) ಮತ್ತು ಡಿಸೈನರ್ ದೇಹವನ್ನು ಅಂಟಿಸುವ ಕುರಿತಾಗಿಯೂ ನಾವು ಅಷ್ಟೊಂದು ಮಾತಾಡುವುದಿಲ್ಲ ಅಲ್ಲವಾ..!

ಮುಂದಿನ ಬಿಲ್ಲೆ : 25.1.2022

ಅಂಕಣದ ಆಶಯ : Hopscotch : ಅಮಾರೈಟ್? : ಅಗಾ ಬಿಲ್ಲೆ ಎಸೆದಾಯ್ತು! ಇಂದಿನಿಂದ ಭವ್ಯಾ ನವೀನ ಅಂಕಣ ಆರಂಭ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada