Poetry Collection ; ಅಚ್ಚಿಗೂ ಮೊದಲು : ‘ನನ್ನದೇ ಆಕಾಶ ನನ್ನದೇ ರೆಕ್ಕೆ’ ಉದಯಕುಮಾರ ಹಬ್ಬು ಕವಿತೆಗಳು ನಿಮ್ಮೆಡೆ

Poem : ಈ ಕವಿತಾ ಸಂಕಲನ ಖಂಡಿತಾ ಬೆಳಕು ಕಾಣುತ್ತಿರಲಿಲ್ಲ; ಎಷ್ಟೊಂದು ಅಳುಕು, ಎಷ್ಟೊಂದು ಭಯ, ಅನುಮಾನಗಳು! ಕವಿತೆ ಓದುವವರಿಲ್ಲ. ಇದು ಗದ್ಯದ ಕಾಲ. ಆದರೆ ನನಗೆ ಕವಿತೆ ನನ್ನನ್ನು ಬರಿದು ಮಾಡಲು ಇರುವ ಒಂದು ಮಾಪನ. ಬತ್ತಲಾಗಲು, ಬಯಲಾಗಲು ಇರುವ ಹಾಯಿದೋಣಿ.’ ಉದಯಕುಮಾರ ಹಬ್ಬು

Poetry Collection ; ಅಚ್ಚಿಗೂ ಮೊದಲು : ‘ನನ್ನದೇ ಆಕಾಶ ನನ್ನದೇ ರೆಕ್ಕೆ’ ಉದಯಕುಮಾರ ಹಬ್ಬು ಕವಿತೆಗಳು ನಿಮ್ಮೆಡೆ
ಕವಿ ಉದಯಕುಮಾರ ಹಬ್ಬು
Follow us
ಶ್ರೀದೇವಿ ಕಳಸದ
|

Updated on: Nov 18, 2021 | 12:42 PM

New Book : ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.

ಟಿವಿ9 ಕನ್ನಡ ಡಿಜಿಟಲ್​ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com

ಕೃತಿ : ನನ್ನದೇ ಆಕಾಶ ನನ್ನದೇ ರೆಕ್ಕೆ ಲೇಖಕರು : ಉದಯಕುಮಾರ ಹಬ್ಬು ಪುಟ : 108 ಬೆಲೆ : ರೂ. 80 ಮುಖಪುಟ ವಿನ್ಯಾಸ : ಟಿ. ಎಫ್. ಹಾದಿಮನಿ ಪ್ರಕಾಶನ : ಸ್ನೇಹಾ ಎಂಟರ್​ಪ್ರೈಝಸ್, ಬೆಂಗಳೂರು

ಈ ಸಂಕಲನ ಇಂದಿನಿಂದ ಲಭ್ಯ. ಕವಿ ಉದಯಕುಮಾರ ಹಬ್ಬು ಮತ್ತು ಕವಿ ವಾಸುದೇವ ನಾಡಿಗ ಅವರ ಮಾತುಗಳು ಇಲ್ಲಿವೆ.

ಒಳ್ಳೆಯವನಾಗುವುದೆಂದರೆ

ಸೀತೆಯ ಕುಟಿರಕೆ ಸನ್ಯಾಸಿ ವೇಷ, ಬಂಗಾರದ ಜಿಂಕೆ. ಮಾತಾಡಿದರೆ ಒಳ್ಳೆಯವನು; ದ್ರೌಪದಿಯ ವಸ್ತ್ರಾಪಹರಣದ ಭೀಮ ಉರಿದು ನುಡಿ ಅಬ್ಬರದ ಮಾತು ಸರಿಯಲ್ಲ ಒಳ್ಳೆಯವನೆನೆಸಿಕೊಳ್ಳಬೇಕಿದ್ದರೆ.. ಹಿಂದಿನಿಂದ ಮರೆಯಾಗಿ ಬಿಟ್ಟು ವಾಲಿಯ ವಧಿಸಿದ ಬಾಣದಂತಹ ಮತು ಒಳ್ಳೆಯತನದ ಲಕ್ಷಣ.

ಒಳ್ಳೆಯವನೆಂದು ಕರೆಸಿಕೊಳ್ಳಬೇಕಿದ್ದರೆ ಸವಿ ನಾಲಿಗೆ ಹುಸಿ ನಾಲಿಗೆ ಇದ್ದರೆ ನೂರಕ್ಕೆ ನೂರು ಅಂಕ. ಸನಾತನ ಸಂಸ್ಕೃತಿ ಕಲಿಸಿದ ಪಾಠ, ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ ಆಡಿ ಪ್ರಿಯವಾದ ಸತ್ಯವನು ಆಡದಿರಿ ಅಪ್ರಿಯ ಸತ್ಯವನು. ಹೀಗೆಂದರೆ ನಾವು ಒಬ್ಬ ಹಿಪೋಕ್ರೆಟ್ ಆಗದೆ ದಾರಿಯುಂಟೆ ಬೇರೆ? ಅವರು ನನಗೆ ಹಿಪೋಕ್ರೆಟ್ ಎಂದು ನಿಂದಿಸಿದಾಗ ತಲೆಬಾಗಿ ಒಳಗೊಳಗೆ ಒಪ್ಪಿಕೊಂಡೆ, ಹೊರಗೆ ಪ್ರತಿಭಟಿಸುತ್ತ ಎಲ್ಲರೊಡನೆ ಹೀಗೆ, ಅನಿಸಿದ್ದನ್ನು ಹೇಳಕೂಡದು ಥಟ್ಟನೆ ಅವರು ನನ್ನ ಒಡಹುಟ್ಟಿದವರು ಹೆಂಡತಿ, ಸ್ನೇಹಿತನಾದರೂ.

ಹೊಗಳಿದ ಕೂಡಲೆ ಉಬ್ಬದೆ ತೆಗಳಿದಾಗ ಕುಗ್ಗದೆ ಇರಲು ಸಾಧ್ಯವಿಲ್ಲವೆ ನಮಗೆ? ಅಗಸ ಹೇಳಿದಾಗ ಮಡದಿಯ ಕಾಡಿಗಟ್ಟಿದ ರಾಮನಾಗಲು ಏನು ಕಷ್ಟ? ಒಳ್ಳೆಯವನಾಗುವುದೆಂದರೆ ಕೆಲವೊಮ್ಮೆ ಕೆಟ್ಟವರಾಗುವುದು ಕೆಲವರಿಗೆ ಕೆಟ್ಟವರು

ಈ ಕವಿತಾ ಸಂಕಲನ ಖಂಡಿತಾ ಬೆಳಕು ಕಾಣುತ್ತಿರಲಿಲ್ಲ; ಎಷ್ಟೊಂದು ಅಳುಕು, ಎಷ್ಟೊಂದು ಭಯ, ಅನುಮಾನಗಳು! ಕವಿತೆ ಓದುವವರಿಲ್ಲ. ಇದು ಗದ್ಯದ ಕಾಲ. ಆದರೆ ನನಗೆ ಕವಿತೆ ನನ್ನನ್ನು ಬರಿದು ಮಾಡಲು ಇರುವ ಒಂದು ಮಾಪನ. ಬತ್ತಲಾಗಲು, ಬಯಲಾಗಲು ಇರುವ ಹಾಯಿದೋಣಿ. ಹೇಳಲೇಬೇಕಾದ್ದು, ಹೇಳದಿದ್ದರೆ ಏನನ್ನೋ ಕಳೆದುಕೊಂಡಂತೆ ತ್ರಸ್ತ ಮನಸ್ಸು. ವಸ್ತುಶಃ ಉಸಿರುಕಟ್ಟಿದ ಸ್ಥಿತಿ. ಹಾಗಾಗಿ ಒಳಗಿನ ಒತ್ತಡದಿಂದ ಬರೆದೆ. ನನ್ನ ಕಾವ್ಯ ನನ್ನೊಳಗೆ ಮತ್ತು ಲೋಕದೊಡನೆ ಸಂವಾದಕ್ಕಿಳಿಯುತ್ತದೆ. ಲೋಕದ ಡೊಂಕು, ನಮ್ಮ ನಮ್ಮ ತನುವಿನ ಡೊಂಕು ಮತ್ತು ಲೋಕದಲ್ಲಿ ನನ್ನ ಪಾತ್ರ ಇವಿಷ್ಟನ್ನು ನನ್ನ ಕವಿತೆ ಹೇಳಲು ಪ್ರಯತ್ನಿಸುತ್ತದೆ. ನನ್ನ ಆಸಕ್ತಿಗಳು ಹಲವು. ಅವುಗಳಲ್ಲಿ ಕಾವ್ಯ ಪ್ರಧಾನ ಆಸಕ್ತಿಯಾಗಿದೆ. ನನ್ನ ಮೊದಲ ಕವನ ಸಂಕಲನ ‘ಅನ್ವೇಷಣೆ’ 1980ರಲ್ಲಿ ಪ್ರಟಗೊಂಡಿದ್ದು, ಆ ಸಂಕಲನಕ್ಕೆ ಬನ್ನಂಜೆ ಗೋವಿಂದಾಚಾರ್ಯರರು ಮುನ್ನುಡಿಯನ್ನು ಬರೆದು ಹರಿಸಿದ್ದರು. ನನ್ನ ಅನೇಕ ಕವಿತೆಗಳನ್ನು ‘ಉದಯವಾಣಿ’ಯಲ್ಲಿ ಪ್ರಕಟಿಸಿದ್ದರು. ‘ಬಂಡಾಯ ಕವಿ’ ಎಂಬ ಹಣೆಪಟ್ಟಿ ನನ್ನ ಹೆಸರಿಗೆ ಅಂಟಿಕೊಂಡಿತು. 2000ನೇ ಇಸವಿಯಲ್ಲಿ ನನ್ನ ಎರಡನೆಯ ಕವಿತಾ ಸಂಕಲನ ‘ರಥೋತ್ಸವ’ ಪ್ರಕಟಗೊಂಡಿತು. ಈಗ ಇದು ‘ನನ್ನದೆ ಆಕಾಶ ನನ್ನದೆ ರೆಕ್ಕೆಗಳು’ ಮೂರನೆಯ ಕವಿತಾ ಸಂಕಲನ. ಈ ಸಂಕಲನಕ್ಕೆ ಶೀರ್ಷಿಕೆ ಕೊಟ್ಟವರು ವಾಸುದೇವ ನಾಡಿಗರು.

ಲೋಕ ಮತ್ತು ನಾನು ಇವೆರಡರ ಸಂಬಂಧ ಮತ್ತು ಅಂತರ್ಮುಖಿ ಆತ್ಮವಿಶ್ಲೇಷಣೆ ಈ ಸಂಕಲನದ ವಿಷಯಗಳು ಅಂತ ನಾನು ಭಾವಿಸಿದ್ದೇನೆ. ನನಗೆ ಇತ್ತೀಚಿಗೆ ಗಝಲ್ ರಚನೆಯತ್ತ ಆಕರ್ಷಣೆಯಾಗಿ ಕೆಲವು ಗೀತೆಗಳನ್ನು ಬರೆದೆ. ಆದರೆ ಅವು ಗಝಲ್​ಗಳಲ್ಲ. ಅದನ್ನು ಹೋಲುವ ಹಾಡುಗಳು. ಜಗತ್ತಿನಲ್ಲಿ ನಾನು ನೋಡಿದ ನೋಡುತ್ತಿರುವ ಎಲ್ಲ ಸಂಕಥನಗಳ ಪ್ರತಿಕ್ರಿಯೆ ಈ ಸಂಕಲನ. ಉದಯಕುಮಾರ ಹಬ್ಬು ಕಿನ್ನಿಗೋಳಿ, ಕವಿ

Acchigoo Modhalu Udaykumar habbu

ಉದಯಕುಮಾರರ ಪುಸ್ತಕಗಳು

*

ಭಿನ್ನ ದಾರಿಯನು ಹಿಡಿಯದಿರು ಮರುಳೆ

ಭಿನ್ನ ದಾರಿಯನು ಹಿಡಿಯದಿರು ಮರುಳೆ ಖಿನ್ನಾಗುವೆ ಈ ಜಗದಿ ಅನ್ಯನೆಂದೆಣಿಸುವರು ನಿನ್ನ ಮನ್ನಣೆಯೆ ನಿನಗಿರದು ಮನೆಯಿಂದ ಹೊರ ಹಾಕುವರು ಭಿನ್ನ ದಾರಿಯನು ಹಿಡಿಯದಿರು ಮರುಳೆ.

ಬಂಧು ಬಂಧವರು ವೈರಿಗಳಾಗುವರು ಎಲ್ಲರೊಳಗೊಂದಾಗದೆ ಬಾಣ ಮುರಿವರು ಪ್ರಾಕ್ತಿನ ದಾರಿಯನು ಅನುಸರಿಸು ಕುರಿಯೆ, ಮುದ್ದು ಮರಿಯೆ ಪುರಾಣಮಿತ್ಯೇವ ನ ಸಾಧು ಸರ್ವಂ ಭಿನ್ನ ದಾರಿಯನು ಹಿಡಿಯದಿರು ಮರುಳೆ.

ಎನ್ನು, ನಾನೆಂದು ನಿಮ್ಮವನೆ ಹಳೆಯ ಬಟ್ಟೆಯ ಧರಿಸಿದ ನಾನು ಅವನೆ ಅವನೆ ಎಂದೂ ಬಿಟ್ಟಿಲ್ಲ ನೀವ್ ಹಾಕಿದ ಬಟ್ಟೆಯಲ್ಲಿದ್ದವ ನಾನು ಬಟ್ಟೆಯಿಲ್ಲದ ರಾಜ ಬಟ್ಟೆಯಲಿರುವನೆಂದು ಹೇಳು ಭಿನ್ನ ದಾರಿಯನು ಹಿಡಿಯದಿರು ಮರುಳೆ.

ಭಿನ್ನ ದಾರಿಯ ಹಿಡಿದು ಹೋದವರು ಏನಾದರು? ಭಿನ್ನ ದಾರಿಯ ಹಿಡಿದ ಬುದ್ಧ ಹೊರಗಾದನು ಭಿನ್ನ ದಾರಿಯ ಹಿಡಿದ ಏಸು ಶಿಲುಬೆಗೇರಿದನು. ಪ್ರಶ್ನೆಗಳ ಕೇಳುತ್ತ ಸಾಕ್ರೆಟಿಸ್​ಗೆ ವಿಷವ ಕುಡಿಸಿದರು. ಸತ್ಯ ಹೇಳಿದ ಗೆಲಿಲಿಯೋಗೆ ಮರಣ ದಂಡನೆ ವಿಧಿಸಿದರು. ಬಸವಣ್ಣನು ಕಲ್ಯಾಣದಲಿ ಐಕ್ಯನಾಗಿಸಿದರು ಭಿನ್ನ ದಾರಿಯನು ಹಿಡಿಯದಿರು ಮರುಳೆ.

ಒಳಗಿನ ದಾರಿ ಸ್ವಚ್ಛವಿದೆ; ಪಯಣ ನಿರಾಳ, ನಿರಾತಂಕ.

ನನ್ನದೇ ಆಕಾಶ ನನ್ನದೇ ರೆಕ್ಕೆಯ ಕವನಗಳು ಉದಯಕುಮಾರ ಹಬ್ಬು ಅವರ ಜೀವನ ಕ್ರಮ ಮತ್ತು ಚಿಂತನಾ ಕ್ರಮದ ಕ್ರಮಣದ ರೂಪಗಳು ಮತ್ತು ಅಕ್ಷರ ಸಾಕ್ಷಿ ಕೂಡ ಇಲ್ಲಿ ಅವರ ಅಪಾರ ಜೀವನಾನುಭವದ ಚಿಂತನೆ ಓದಿನ ಹರಹು ಢಾಳಾಗಿ ಕಾಣಿಸುತ್ತದೆ. ಪದ್ಯಗಳನ್ನು ಬಾಳ ವಿಸ್ತರಣೆಯ ಮಾಧ್ಯಮ ಎಂದೆ ನಂಬಿದಂತೆ ಕಾಣುಬ ಹಬ್ಬು ಅವರ ಪದ್ಯ ಪ್ರೀತಿ ಮತ್ತು ಆ ಮೂಲಕ ಅವರು ತೋರುವ ಜೀವನೋತ್ಸಾಹ ಈ ತಲೆಮಾರಿನ ಬರಹಗಾರರಿಗೆ ಮಾದರಿ. ಹಿರಿಯರಿಂದ ನಾವು ಕಲಿಯಬೇಕಾದುದು ಇದನ್ನೇ. ಆಕಾಶ ತಲೆ ಮೇಲೆ ಕಳಚಿ ಬಿದ್ದಂತೆ ಆಡುವ, ಖಿನ್ನತೆಗೆ ಬೀಳುವ, ವಿಷಾದವನ್ನೇ ಜೀವನ ಶೈಲಿಯನ್ನಾಗಿ ಮಾಡಿಕೊಳ್ಳುವ ಈ ಹೊತ್ತಿನ ಆಧುನಿಕ ಮನಸ್ಥಿತಿಯ ‘ನಿಜವಾದ ವ್ಯಾಪಾರ’ದ ಅರಿವಿಲ್ಲದ ಸಂತೆ ಬಾಳಿನಲ್ಲಿ, ಹಬ್ಬು ಅವರ ಬರಹ ಯಾವತ್ತೂ ಸಾಂತ್ವನ ಮತ್ತು ಧೈರ್ಯ ಹೇಳುತ್ತವೆ. ಕಥನಕಲೆಯಲ್ಲಿ ಈಗಾಗಲೇ ಸ್ಥಾಪಿತ ಹೆಸರನ್ನು ಪಡೆದಿರುವ ಇವರು ಪದ್ಯ ಪ್ರಕಾರದಲ್ಲಿ ಇನ್ನಷ್ಟು ತೀವ್ರವಾಗಿ ತೊಡಗಿಸಿಕೊಂಡರೆ ಪದ್ಯದ ಬಂಧ ಮತ್ತು ಪರಿಣಾಮಗಳಲ್ಲಿ ಇನ್ನೂ ಹೆಚ್ಚಿನ ವಿಸ್ಮಯವನ್ನು ಮಾಡಬಲ್ಲರು. ಸಾಹಿತ್ಯ ಮತ್ತು ಬರಹವನ್ನು ತಮ್ಮನ್ನು ತಾವೇ ಓದಿಕೊಳ್ಳುವ ಅರ್ಥ ಮಾಡಿಕೊಳ್ಳುವ ಮಾರ್ಗವೆಂದೇ ನಂಬಿರುವ ನಾನು ಕಿರಿಯನಾಗಿ ಹೆಚ್ಚಿನ ಸಲಹೆ ಕೊಡುವುದು ಅಹಂಕಾರವಾಗಬಲ್ಲದು. ವಾಸುದೇವ ನಾಡಿಗ, ಕವಿ

* ಇವಳ ಎರಡೆವೆಗಳ ಒಳಗೆ

ಇವಳ ಎರಡೆವೆಗಳ ಒಳಗೆ ತೇಲುತಿವೆ ಎರಡು ಹಾಯದೋಣಿ ಬಿಳಿ ನೊರೆಯ ಹಾಲು ನೊರೆಯಲಿ ಹೊಳೆ ಹೊಳೆವ ಕಪ್ಪು ದೋಣಿ

ಭಾವನೆಯ ಹಾಯಿ ತಂಗಾಳಿಯಲ್ಲಿ ಹೋಗುತಿವೆ ಚೆಲ್ಲಾಪಿಲ್ಲಿ ರಾಗ ಕೋಮಲ ಹುಟ್ಟು ಹಾಕುತ ಕವಿತೆ ಹಾಡುತ್ತ ಹೋಗುವಲ್ಲಿ

ಯಾರಿಂಗೆ ಕಾಯುತಿದೆ ಕಂಬನಿಯ ಎವೆ ಪಾತ್ರೆಗಳಲಿ ಮಧುವ ತುಂಬಿ ಕುದುರೆಯೇರಿ ಬರುತಿಹನೆ ಜಯದ ಪದಕಗಳ ಚೆಲುವ ದುಂಬಿ

ಇದು ಯಾವ ಆಟ ಎಲ್ಲಿಗೀ ಪಯಣ ಬಿಳಿನೀರಿನಲಿ ಹುಟ್ಟು ಹಾಕಿ ಆ ಎರಡು ದೋಣಿಗಳು ತಂಗಿ ಎವೆಗಳಲಿ ರಾತ್ರಿ ಕನಸುಗಳಲೆ ಬಾಕಿ

ಯಾಕೆ ಅರಳುವುದೊ ಯಾರಿಗರಳುವುದೊ ಬೆಳಗೆದ್ದು ಹಕ್ಕಿ ಹಾಡಿ ಬರುವನೆ ಕನಸ ಬುಟ್ಟಿಯ ತಂದು ಹಾಡುವನೆ ಅವಳ ಜೋಡಿ

ಕವಿಯು ನಿರುಕಿಸಿದ ಕ್ರೌಂಚ ಜೋಡಿಯ ಬಳ್ಳಿ ಮರವನಾಂತು ಅವರ ಸಮ್ಮಿಲನ ಸಂಭ್ರಮದ ಚಿತ್ರಪಟ ಕಲೆಯ ಮರೆವೆನೆಂತು

(ಈ ಸಂಕಲನದ ಖರೀದಿಗೆ ಸಂಪರ್ಕಿಸಿ : 9845062549)

ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ರಾಜಶೇಖರ ಕುಕ್ಕುಂದಾ ಮಕ್ಕಳಿಗಾಗಿ ‘ಸೋನ ಪಾಪಡಿ’ ಕಳಿಸುತ್ತಿದ್ದಾರೆ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ