Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid diary ; ಕವಲಕ್ಕಿ ಮೇಲ್ : ಇಂಗ್ಲೆಂಡಿನ ಪೋರ್ಟ್ಸ್​ಮೌತ್ ಹಡಗುಕಟ್ಟೆಯಲ್ಲಿ ಕಾಯುತ್ತಿರುವ ಟ್ರೀಜಾ

Migrants : ಬ್ರದರ್ ಕೊಟ್ಟ ಕವರಿನಲ್ಲಿ ಎರಡು ಸಾವಿರದ ಐವತ್ತು ನೋಟುಗಳಿದ್ದವು. ಅದರ ಜೊತೆಗೆ ಮಾಯಿ ಅವಳ ಮದುವೆಯ ಕಾಲದ ನಾಲ್ಕು ಚಿನ್ನದ ಬಳೆ ಮತ್ತು ನೆಕ್ಲೇಸನ್ನು ಬ್ಯಾಂಕಿನಲ್ಲಿಟ್ಟು ಒಂದು ಲಕ್ಷ ಸಾಲ ಪಡೆದಳು. ಅಂತೂ ವೀಸಾ ಬಂದಿತು. ಮನೆಗೆ ಬಂದು, ಎಲ್ಲರಿಗೂ ಹೇಳಿ, ಬ್ರದರ್ ಬಳಿ ತನಗಾಗಿ ಪ್ರಾರ್ಥಿಸಲು ಹೇಳಿ ವಂದಿಸಿ, ಮುಂಬೈಗೆ ಹೊರಟಳು. ಕಡಿಮೆ ಹಣದಲ್ಲಿ ಹೋಗಬಹುದೆಂದು ಹಡಗಿನಲ್ಲಿ ಟಿಕೆಟ್ ತೆಗೆದಿದ್ದರು.

Covid diary ; ಕವಲಕ್ಕಿ ಮೇಲ್ : ಇಂಗ್ಲೆಂಡಿನ ಪೋರ್ಟ್ಸ್​ಮೌತ್ ಹಡಗುಕಟ್ಟೆಯಲ್ಲಿ ಕಾಯುತ್ತಿರುವ ಟ್ರೀಜಾ
Follow us
ಶ್ರೀದೇವಿ ಕಳಸದ
|

Updated on:Jun 18, 2021 | 1:50 PM

ದೂರದಲ್ಲಿ ಮೈದುಂಬಿ ಶರಾವತಿ ಹರಿಯುತ್ತಿದೆ. ಗುಡ್ಡದ ಇಳಿಜಾರಿನಲ್ಲಿರುವ ಬ್ರದರ್ ಮನೆಯಿಂದ ಬೆಟ್ಟಸಾಲುಗಳೂ, ಹಸಿರು ಕಾಡೂ ಕಾಣುತ್ತಿದೆ. ಒಂದೇಸಮ ಹಕ್ಕಿಗಳ ಉಲಿತ. ಹಗಲಿಡೀ ಮಳೆ ಸುರಿದಿದೆ. ಕಿಟಕಿಯ ಗ್ರಿಲ್‌ನಿಂದ ಹೊರನೋಡುತ್ತಿರುವಾಗ ಹೊರದೇಶವೆಂದು ಇದನ್ನೆಲ್ಲ ಬಿಟ್ಟುಹೋಗಬೇಕಲ್ಲ ಎಂದು ಚಣದ ಮಟ್ಟಿಗೆ ಅನಿಸಿತು. ‘ತಂಗೀ’ ಎಂಬ ಕರೆಗೆ ಹಿಂದಿರುಗಿ ನೋಡಿದಳು. ಬ್ರದರ್ ನಿಂತಿದ್ದರು. ಮಿರಿಮಿರಿ ಹೊಳೆಯುವ ಎಣ್ಣೆಗಪ್ಪು ಮುಖದಲ್ಲಿ ಕಣ್ಣು ಇನ್ನೂ ಹೊಳೆಯುತ್ತಿದ್ದವು. ವೇದಿಕೆಯ ಹಿಂದಿನ ಕೋಣೆಗೆ ಕರೆದೊಯ್ದರು. ‘ಇವತ್ತು ನಿನಗಾಗಿ ಪ್ರಾರ್ಥಿಸುವೆ’ ಎನ್ನುತ್ತ ವಿದೇಶ ಪ್ರಯಾಣದ ತಯಾರಿಯ ಬಗೆಗೆ ವಿಚಾರಿಸಿದರು. ‘ನಾ ಹೋದ್ರೆ ಬಾಳಾ ಹೋಗಲಿಕ್ಕಾಗಲ್ಲ ಅಂತ ಚಿಂತೆಯಾಗ್ತಿದೆ. ಒಂದು ಮನೆಯಿಂದ ಒಬ್ರಿಗೇ ಬಿಡುವುದಂತೆ’ ಎಂದು ಟ್ರೀಜಾ ಹೇಳಿದರೆ, ‘ಅದನ್ನೆಲ್ಲ ಅವರ ಹತ್ರ ಯಾಕೆ ಕೇಳಕ್ಕೆ ಹೋಗ್ತಿರಿ?’ ಎಂದರು ತಣ್ಣಗೆ. * ‘ಅಟ್‌ಲಾಸ್ಟ್, ನಿಮ್ಮನ್ನು ಇನ್ನೊಂದು ತಿಂಗಳಲ್ಲಿ ಭೇಟಿ ಮಾಡುವೆ’

ಕುಣಿಯುವ ಹುಡುಗಿಯ ಚಿತ್ರವಿರುವ ಮೆಸೇಜು ಒಂದು ಬೆಳಿಗ್ಗೆ ಏಳುವುದರಲ್ಲಿ ಬಂದುಕೊಂಡಿತ್ತು. ಕಳಿಸಿದವಳು ಮೆಲೊಬಿನಮ್ಮನ ನಿದ್ರಾಹೀನತೆಗೆ ಕಾರಣವಾದ ಮಗಳು ಟ್ರೀಜಾ! ಅಂದರೆ, ಇಂಗ್ಲೆಂಡಿಂದ ಹೊರಟಳೇ? ‘ಬಾನ್ ವಾಯೇಜ್ ಅಂಡ್ ಹಾರ್ಟಿ ವೆಲ್ಕಂ’ ಎಂದು ಉತ್ತರಿಸಿದೆನಾದರೂ ಅವಳು ಆನ್‌ಲೈನಿರಲಿಲ್ಲ. ಅವಳೀಗ ಎಲ್ಲಿರಬಹುದು? ಏನು ಮಾಡುತ್ತಿರಬಹುದು?

‘ಬಪ್ಪಾಚೆ ಪುತ್ರಾಚೆ ಅನೆ ಪವಿತ್ರ್ ಆತ್ಮಾಚೆ ನಾ ವಿ ಅಮೆನ್’

ಶಿಲುಬೆಯನ್ನು ಕಣ್ಣಿಗೊತ್ತಿ ಮುತ್ತಿಟ್ಟ ಟ್ರೀಜಾ ಇಂಗ್ಲೆಂಡಿನ ಪೋರ್ಟ್ಸ್​ಮೌತ್ ಹಡಗುಕಟ್ಟೆಯಲ್ಲಿ ಕಾಯುತ್ತಿದ್ದಾಳೆ. ಅಲ್ಲಿ ಅವಳೊಬ್ಬಳಲ್ಲ, ಅವಳಂತಹ ಇಪ್ಪತ್ತು ಸಾವಿರ ಜನರಿದ್ದಾರೆ. ಭಾರತದ ಬೇರೆಬೇರೆ ಕಡೆಗಳಿಂದ ಕೆಲಸ ಹುಡುಕಿ ಇಂಗ್ಲೆಂಡಿಗೆ ಬಂದವರು ಕೋವಿಡ್ ಲಾಕ್‌ಡೌನ್ ಆಗಿ ಇತ್ತ ಕೆಲಸವೂ ಇಲ್ಲ, ಅತ್ತ ತಿರುಗಿ ಹೋಗಲು ದುಡ್ಡು, ವಿಮಾನವೂ ಇಲ್ಲದೆ ಅತಂತ್ರರಾಗಿದ್ದರು. ನಲವತ್ತೆಂಟು ದಿನ ಅಲ್ಲಿಲ್ಲಿ ಇದ್ದು, ಅರೆಹೊಟ್ಟೆ ಕಂಡದ್ದು ತಿಂದು, ನವೆದು, ಕೊನೆಗಂತೂ ಭಾರತವು ಕಳಿಸಿದ ಹಡಗು ಅವರನ್ನು ಹೊತ್ತು ಹೊರಟಿದೆ. ತಾವು ಸ್ವರ್ಗವೆಂದು ಕನಸಿದ ದೇಶವು ಕೊರೊನಾದಲ್ಲಿ ನಲುಗುತ್ತಿರುವಾಗ ಹತ್ತೆಂಟು ಬಾರಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ‘ಕಾಯಿಲೆಯಿಲ್ಲ’ ಎಂಬ ಪ್ರಶಸ್ತಿ ಪಡೆದು ಹೊರಟಿದ್ದಾರೆ.

ಭಾರತದ ಹಡಗು, ಪರಿಚಿತ ಮುಖಚಹರೆಯ ಸಿಬ್ಬಂದಿಗಳನ್ನು ನೋಡಿದ್ದೇ ಟ್ರೀಜಾಗೆ ಎದೆ ತುಂಬಿಬಂತು. ಒಂದೂವರೆ ತಿಂಗಳಿನಿಂದ ಅವಳು ಪ್ರಾರ್ಥಿಸದ ಸಂತನಿಲ್ಲ. ನೆನಪು ಮಾಡಿಕೊಳ್ಳದ ಇಗರ್ಜಿ, ದೇವರಿಲ್ಲ. ಆತಂಕ. ಎದೆ ಢವಢವ ಹೊಡೆದುಕೊಳ್ಳುವುದು. ಕೈಕಾಲು ನಡುಗಿ ಕಿರುಬೆವರು ಹುಟ್ಟುವುದು. ಹೊಟ್ಟೆ ತೊಳೆಸಿ ವಾಂತಿ ಬಂದಂತಾಗುವುದು. ನಿದ್ದೆಯಿಲ್ಲ. ನೆಮ್ಮದಿಯೆನ್ನುವುದೇ ಇಲ್ಲ. ಭಯ. ಅಪರಿಚಿತತೆಯ ಭಯ. ಅನಿಶ್ಚಿತತೆಯ ಭಯ. ಕಾಯಿಲೆಯ ಭಯ. ಏನಾಗುವುದೋ ಏನೋ ಎಂಬ ತುದಿಮೊದಲಿರದ ಭಯ.

ಈಗ ಭಾರತದಲ್ಲಿ ಸಂಜೆ ಏಳುಗಂಟೆ ಎಂದು ಲೆಕ್ಕ ಹಾಕಿ ಮಾಯಿಗೆ ವೀಡಿಯೋಕಾಲ್ ಮಾಡಿದಳು. ‘ಓ ಮಾಯ್’ ಕರೆ ಕೇಳಿದ್ದೇ ಮೆಲೊಬಿನಮ್ಮನಿಗೆ ಅಳು ಬಂದೇಬಿಟ್ಟಿತು. ತಿಂಗಳೊಪ್ಪತ್ತಿನಲ್ಲಿ ಮಗಳು ಮನೆಗೆ ಬರುವಳೆಂಬ ಆನಂದಕ್ಕೆ ಹೊಟ್ಟೆ ತುಂಬಿಹೋಯಿತು. ಪೋರ್ಟ್ಸ್​ಮೌತ್​ನಿಂದ  ಸಾವಿರಾರು ಮೈಲು ದೂರದಲ್ಲಿ, ಭಾರತದ ಪಶ್ಚಿಮ ಕಡಲತೀರದ ಒಂದು ಪುಟ್ಟ ಊರಿನಲ್ಲಿ ಮೆಲೊಬಿನಮ್ಮ ಶಿಲುಬೆಯ ಎದುರು ಜೆಜುವನ್ನು ಪ್ರಾರ್ಥಿಸುತ್ತ ಕಣ್ಮುಚ್ಚಿ ಕೂತಿದ್ದಾಳೆ. ನಡೆದದ್ದೆಲ್ಲ ಸಿನಿಮಾದಂತೆ ಕಣ್ಮುಂದೆ ಹಾದುಹೋಗುತ್ತಿದೆ.

covid diary

ಡಾ. ಕೃಷ್ಣ ಗಿಳಿಯಾರ್

***

ಮೆಲೊಬಿನಮ್ಮನಿಗೆ ತೆರೆಸಾ ಬಸ್ತ್ಯಾಂವ್ ಫುಡ್ತಾಡೊ ಅಥವಾ ಮಗಳು ಟ್ರೀಜಾಳ ಮಹತ್ವಾಕಾಂಕ್ಷೆ ಅರ್ಥವಾಗಿತ್ತು. ತಾನೂ ಒಂದುಕಾಲದಲ್ಲಿ ಕುವೈಟಿಗೆ ಹೊರಟವಳು. ‘ಹೆರಗೆ’ ಹೋಗಲು ಕನಿಷ್ಟ ಎಸ್ಸೆಲ್ಸಿ ಪಾಸು ಮಾಡಬೇಕು ಎಂಬ ಕಾನೂನು ಬಂದು ಏಳನೆಯ ಇಯತ್ತೆ ಓದಿದವಳ ವಿದೇಶದ ಕನಸು ಚೂರಾಗಿತ್ತು. ಮೂವತ್ತು ವರ್ಷಗಳಿಂದ ತಲೆಮೇಲೆ ಮೀನು ಹೊತ್ತು ಊರೂರು ತಿರುಗಿದ್ದಾಳೆ. ತನಗಂತೂ ಆಗಲಿಲ್ಲ, ಮಕ್ಕಳನ್ನಾದರೂ ವಿದೇಶಕ್ಕೆ ಕಳಿಸಬೇಕೆಂದುಕೊಂಡಿದ್ದಾಳೆ. ಹಿರಿಯವಳು ಟ್ರೀಜಾ ತುಂಬ ಹುಶಾರಿ. ಬಿಎಸ್ಸಿ ನರ್ಸಿಂಗ್ ಮಾಡಲು ಮಂಗಳೂರಿಗೆ ಹೋದಳು. ಮೂರು ವರ್ಷದ ಕೋರ್ಸು ಮುಗಿದ ಮೇಲೆ ಮಲೆಯಾಳಿ ಫ್ರೆಂಡುಗಳ ಪ್ರಭಾವದಿಂದ ತಾನು ಅಲ್ಲಿ ಹೋಗುವೆ, ಇಲ್ಲಿ ಹೋಗುವೆ ಎಂದು ದಿನಕ್ಕೊಂದು ದೇಶದ ಹೆಸರು ಹೇಳುವಳು. ಆದರೆ ಗ್ಯಾರೇಜ್ ಇಟ್ಟುಕೊಂಡಿದ್ದ ಬಾಪ್ಪಾ ಬಸ್ತ್ಯಾಂವ್ ಬಿದ್ದು ತೊಡೆ ಮುರಿದುಕೊಂಡರು. ವೀಸಾಗೆ ಹಣ ಹೊಂದಿಸುವುದು ಹೋಗಲಿ, ಮನೆ ನಡೆಸುವುದೇ ದುಸ್ತರವಾಯಿತು.

ತಾತ್ಕಾಲಿಕವಾಗಿ ಹೊರಗೆ ಹೋಗುವ ಆಸೆ ಬಿಟ್ಟು ಮಂಗಳೂರಿನ ಆಸ್ಪತ್ರೆಯಲ್ಲಿ ಟ್ರೀಜಾ ಕೆಲಸಕ್ಕೆ ಸೇರಿದಳು. ಮನೆಯ ಖರ್ಚಿಗೆ ತನ್ನ ಪಾಲೂ ನೀಡತೊಡಗಿದಳು. ಅಷ್ಟೊತ್ತಿಗೆ ಅವಳ ಜೊತೆ ಕೆಲಸ ಮಾಡುವ ಕೇರಳದ ಕಾಞ್ಞಂಗಾಡಿನ ಶಿವಗಾಮಿ, ಪರ್ಪೇತಾ ಗೆಳತಿಯರಾದರು. ಇಂಗ್ಲೆಂಡಿಗೆ ಹೋಗುವ ತಯಾರಿ ನಡೆಸಿದ್ದರು. ತಮಗೆ ಪರಿಚಯವಿರುವ ನಂಬಿಕಸ್ಥ ಏಜೆಂಟನನ್ನು ಸಂಪರ್ಕಿಸಿದ್ದರು. ಇಂಗ್ಲೆಂಡಿನಲ್ಲಿ ಕೆಲಸ ಕೊಡಿಸುವುದು, ಇಲ್ಲಿ ವೀಸಾ ಕಾಗದಪತ್ರ ಹಡಗು ಟಿಕೆಟ್ ಮಾಡಿಕೊಡುವುದು ಅವರದೇ ಜವಾಬ್ದಾರಿ. ಎಲ್ಲ ಸೇರಿ ಮೂರು ಕಂತಿನಲ್ಲಿ ಐದು ಲಕ್ಷ ಕೊಡಬೇಕು. ಅವನು ಕಳಿಸಿದ ಇಬ್ಬರು ನರ್ಸುಗಳು ನ್ಯೂಕ್ಯಾಸಲ್‌ನಲ್ಲಿದ್ದಾರೆ. ಅವರ ಸಂಪರ್ಕ ಸಾಧಿಸಿ ಮಾತನಾಡಿದ ಮೇಲೆ ತಾವೂ ಹೋಗುವುದೆಂದು ತೀರ್ಮಾನಿಸಿದರು.

ಏಜೆಂಟನಿಗೆ ಕೊಡುವಾಗ ಟ್ರೀಜಾ ನೋಡುತ್ತಾಳೆ, ಪಾಸ್‌ಪೋರ್ಟ್ ನವೀಕರಿಸಲು ಬಂದಿದೆ! ಅವಸರದಲ್ಲಿ ಆಗುವುದಲ್ಲ ಅದು. ಕಾಗದಪತ್ರಗಳನ್ನು ತೆಗೆಯಲು ಮನೆಗೆ ಹೋದರೆ ಜೇನುಹುಟ್ಟಿಗೆ ಕೈಯಿಕ್ಕಿದಂತಾಯ್ತು. ಇದಿಲ್ಲ, ಅದಿಲ್ಲ. ಇವತ್ತು ಇದು ಆಗಲ್ಲ, ನಾಳೆ ರಜ, ಅಪ್ಡೇಟ್ ಇಲ್ಲ. ಒಂದಾದಮೇಲೊಂದು ಆಫೀಸಿಗೆ ಸರಣಿಯಲ್ಲಿ ಅಲೆದಳು. ರಜೆಗಳೆಲ್ಲ ಖರ್ಚಾದವು. ಅಂತೂ ಸಂತ ಫ್ರಾನ್ಸಿಸ್ ಅಸ್ಸಿಸ್ಸಿಯ ಆಶೀರ್ವಾದದಿಂದ ಆರು ತಿಂಗಳಲ್ಲಿ ಪಾಸ್‌ಪೋರ್ಟ್ ನವೀಕರಣಗೊಂಡು ಬಂದಿತು. ವಿದೇಶದಲ್ಲಿ ಕೆಲಸ ಸಿಕ್ಕಿದ್ದೇ ಆದರೆ ವೆಲ್ಹಾ ಗೋವಾದ ಸಂತ ಅಸ್ಸಿಸ್ಸಿ ಚರ್ಚಿಗೆ ಬರುವೆನೆಂದು ಹರಕೆ ಹೊತ್ತಳು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಇನ್ನು ಹಣದ ಚಿಂತೆ. ಗೆಳತಿಯರಿಗೆ ಮನೆಯವರೇ ದುಡ್ಡು ಹೊಂದಿಸುತ್ತಾರೆ. ತಾನೇನು ಮಾಡುವುದು? ವರ್ಷವಿಡೀ ಪೈಸೆ ಖರ್ಚು ಮಾಡದೇ ಸಂಬಳ ಉಳಿಸಿದರೂ ಐದು ಲಕ್ಷವಾಗುವುದಿಲ್ಲ. ಏನು ಮಾಡುವುದು? ಪರ್ಪೇತಾಳ ತಾಯಿ ಒಮನಿನಲ್ಲಿರುವುದು. ಅವಳ ತಂದೆಯೇ ಮನೆ, ಮಕ್ಕಳನ್ನು ನಿಭಾಯಿಸುವವರು. ಅವಳ ಪಪ್ಪ ಮೊದಲ ಕಂತು ಕಟ್ಟಲು ಒಂದೂವರೆ ಲಕ್ಷ ಸಾಲ ಕೊಡಲು ಒಪ್ಪಿದರು. ಕಾಗದ ಪತ್ರ, ಮೊದಲ ಕಂತಿನ ಹಣವನ್ನು ಏಜೆಂಟನ ಕೈಯಲ್ಲಿಟ್ಟು ಕನಸು ಕಾಣತೊಡಗಿದಳು.

ಈಗ ಬಾಳಾ ಎಂದು ಕರೆಸಿಕೊಳ್ಳುವ ತಮ್ಮ ಸಿಂಕ್ಲೇರನು ಪಿಯುಸಿ ಕಲಿಯುತ್ತಿದ್ದಾನೆ. ಡಿಗ್ರಿ ಮುಗಿಸಿ ತಾನೂ ಹೊರಗೆ ಹೋಗಬೇಕೆಂದು ನಿರ್ಧರಿಸಿದ್ದಾನೆ. ಬಾಪ್ಪಾ ಸುಮಾರು ಆರಾಮಾಗಿದ್ದರು. ತೊಡೆಯ ಪ್ಲಾಸ್ಟರ್ ತೆಗೆದು ವಾಕರ್ ಸಹಾಯದಿಂದ ನಡೆದಾಡುವಷ್ಟಾಗಿದ್ದರು. ಮೆಲೊಬಿನಮ್ಮನಿಗೆ ಹೊಸದೊಂದು ಕೆಲಸ ಸಿಕ್ಕಿದೆ. ಅವರ ಊರಿನಲ್ಲಿ ಕಷ್ಟದಲ್ಲಿರುವವರಿಗೆ ಪ್ರಾರ್ಥನೆ, ಹೀಲಿಂಗ್ ಸೆಷನ್ ನಡೆಸುವ, ಪ್ರವಚನ ಸಭೆ ಮಾಡುವ ಫ್ರಾಂಕೋ ಬ್ರದರ್ ಬಳಿ ಸಹಾಯಕಿಯಾಗಿ ಸೇರಿದ್ದರು. ಮೊದಲು ತಮ್ಮ ಸಂಕಟ ಪರಿಹಾರಕ್ಕಾಗಿ ಪ್ರಾರ್ಥನಾ ಸಭೆಗೆ ಹೋದವರು ಬಳಿಕ ಪದೇಪದೇ ಹೋಗತೊಡಗಿ ಸೆಷನ್ನುಗಳ ಖಾಯಂ ಸದಸ್ಯೆಯಾದರು. ಬ್ರದರ್ ನಿಧಾನವಾಗಿ ಪ್ರಾರ್ಥನೆ ಹೇಳುತ್ತ, ಕಣ್ಮುಚ್ಚಿ ಕುಳಿತು ಜಪಮಣಿ ತಿರುಗಿಸುತ್ತ, ಅಭಯ ಕೊಡುವಾಗ ದೇವಸುತರ ಅಂಶವೇ ಧರೆಗಿಳಿದು ಬಂದಂತೆ ಅವಳಿಗೆ ಅನ್ನಿಸುವುದು.

ಫ್ರಾಂಕೋ ಬ್ರದರ್ ಅಲ್ಲೀಗ ಖ್ಯಾತ ವ್ಯಕ್ತಿಯಾಗಿದ್ದರು. ತಮ್ಮ ಸಂಕಟಕಾಲದಲ್ಲಿ ಕಾಣಿಕೆ ಕೊಡಲಿಲ್ಲವೆಂದು ಪ್ರಾರ್ಥಿಸಲೂ ಅವಕಾಶ ಕೊಡದ ಚರ್ಚಿನ ಮೇಲೆ ಕೋಪಗೊಂಡು ತಾವೇ ಪ್ರಾರ್ಥನಾಸಭೆ ನಡೆಸಲು ಶುರುಮಾಡಿದ್ದರು. ಮೂರು ಕಿಲೋಮೀಟರು ದೂರದ ಸಂತ ಅಸ್ಸಿಸ್ಸಿ ಚರ್ಚಿಗೆ ಬ್ರದರ್ ಹೋಗುವುದಿಲ್ಲ. ಚರ್ಚಿಗೆ ಹೋಗುವವರಿಗಿಂತ ಹತ್ತುಪಟ್ಟು ಹೆಚ್ಚುಜನ ಅವರ ಪ್ರಾರ್ಥನಾಸಭೆಗೆ ಬರುತ್ತಾರೆ. ಎಲ್ಲ ಜಾತಿ ಧರ್ಮದ ಜನರೂ ಬರುತ್ತಾರೆ. ಆದರೆ ಚರ್ಚಿನ ಫಾದರ‍್ರಿಗೆ ಬ್ರದರ್ ಬಳಿ ಹೋಗುವವರ ಮೇಲೆ ಸಿಟ್ಟು. ದೇವರ, ದೇವಸುತರ ಕರುಣೆಯು ಪಡಪೋಶಿ ಬ್ರದರುಗಳಿಂದ ಸಿಗುವುದಿಲ್ಲ, ತಮ್ಮ ಚರ್ಚಿಗೆ ಬರುವವರು ಅಲ್ಲಿ ಹೋಗಬಾರದು ಎಂದು ಆದೇಶ ಹೊರಡಿಸಿದರು. ಬೇರೆಯವರ ತೋಟದಲ್ಲಿ ಅರಳಿ ಪರಿಮಳ ಬೀರುವ ಹೂವನ್ನು ನಮ್ಮ ತೋಟದಲ್ಲಿರುವವರು ನೋಡಬೇಡಿ, ಪರಿಮಳ ತೆಗೆದುಕೊಳ್ಳಬೇಡಿ ಎಂದರೆ ಆಗುವುದೇ? ಇದೂ ಹಾಗೆಯೇ ಆಯಿತು.

ಮೆಲೊಬಿನಮ್ಮ ಬ್ರದರ್‌ಗೆ ಸಹಾಯಕಳಾಗಿ ಸೇರಿದಳು. ಅಲ್ಲಿ ದಿನನಿತ್ಯ ಕನಿಷ್ಟ ನೂರೈವತ್ತು ಇನ್ನೂರು ಜನ ಊಟಕ್ಕೆ ನಿಲ್ಲುತ್ತಾರೆ. ಹೊರಜಿಲ್ಲೆ ಹೊರರಾಜ್ಯಗಳಿಂದ ಬರುವವರಿಗೆ ಉಳಿಯುವ ವ್ಯವಸ್ಥೆ ಮಾಡಿದ್ದಾರೆ. ಮೇಲ್ವಿಚಾರಣೆಗೆ ಎಷ್ಟು ಜನರಿದ್ದರೂ ಸಾಲದು. ಮೆಲೊಬಿನಮ್ಮ ಮಧ್ಯಾಹ್ನದ ಮೇಲಿನ ಪ್ರಾರ್ಥನಾಸಭೆಗಳ ಮೇಲ್ವಿಚಾರಣೆ ವಹಿಸಿಕೊಂಡಳು. ಬೆಳಿಗ್ಗೆ ಮೀನು ವ್ಯಾಪಾರ ಮುಗಿಸಿದ್ದೇ ಅಲ್ಲಿಗೆ ಹೋಗುವಳು. ಅವಳಿಗದು ಆರ್ಥಿಕವಾಗಿಯೂ, ಮಾನಸಿಕವಾಗಿಯೂ ನೆಮ್ಮದಿ ಕೊಟ್ಟ ಕೆಲಸ.

ಈ ವೇಳೆಗೆ ಎರಡನೆಯ ಕಂತಿನ ಹಣಕ್ಕೆ ಏನು ಮಾಡುವುದು ಎಂಬ ಯೋಚನೆಯಲ್ಲಿ ಟ್ರೀಜಾ ಮನೆಗೆ ಬಂದಳು. ಚರ್ಚಿನ ಫಾದರ್ ಹತ್ತಿರವೂ ಹೋಗಬೇಕಿತ್ತು. ಒಂದು ಮನೆಯಿಂದ ಒಬ್ಬರಷ್ಟೇ ವಿದೇಶಕ್ಕೆ ಹೋಗಬೇಕು ಎಂದು ಬಿಷಪ್ ಆದೇಶ ಮಾಡಿದ್ದರು. ಮಕ್ಕಳನ್ನು ಇಲ್ಲಿ ಬಿಟ್ಟು ತಾಯ್ತಂದೆಯರಿಬ್ಬರೂ ಹೊರಗೆ ಹೋಗುವುದು, ತಾಯ್ತಂದೆಯರನ್ನಷ್ಟೇ ಬಿಟ್ಟು ಮಕ್ಕಳೆಲ್ಲ ಹೊರಗೆ ಹೋಗುವ ಪ್ರಕರಣ ಹೆಚ್ಚಿ ಕೌಟುಂಬಿಕ ಸಮಸ್ಯೆಗಳು ಎದುರಾದ್ದರಿಂದ ಚರ್ಚು ಈ ಕ್ರಮ ತೆಗೆದುಕೊಂಡಿತ್ತು. ವಿದೇಶಕ್ಕೆ ಹೋಗುವ ಕ್ರೈಸ್ತಬಂಧುಗಳು ತಂತಮ್ಮ ಚರ್ಚಿನ ಪತ್ರ ಪಡೆಯುವುದು ಅವಶ್ಯವಾಗಿತ್ತು. ತಮ್ಮನೆಯಲ್ಲಿ ಹೋಗುತ್ತಿರುವ ಮೊದಲಿಗಳು ತಾನು, ಒಪ್ಪಿಗೆ ಕಷ್ಟವಾಗಲಿಕ್ಕಿಲ್ಲ. ಜೊತೆಗೆ ಧನಸಹಾಯವನ್ನೂ ಕೇಳಬೇಕೆಂದು ಟ್ರೀಜಾ ಹೊರಟಳು.

ಹೊರಗೆ ಹೋಗಲಿಕ್ಕೇನೋ ಫಾದರ್ ಅನುಮತಿಸಿದರು. ಆದರೆ ಆರ್ಥಿಕ ಸಹಾಯವನ್ನು, ಸಾಲವನ್ನು ಸಾರಾಸಗಟಾಗಿ ನಿರಾಕರಿಸಿದರು. ಚರ್ಚ್ ಇರುವುದು ದೇವಸುತನ ಸಂದೇಶ ಸಾರಲಿಕ್ಕೆ, ದೇವರ ದಾರಿಯಲ್ಲಿ ಜನರನ್ನು ಕೊಂಡೊಯ್ಯಲಿಕ್ಕೇ ಹೊರತು ಬಡತನ ನಿರ್ಮೂಲನೆಗಾಗಿ ಅಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟರು. ‘ನಿಷ್ಠಾವಂತ ಕ್ರೈಸ್ತಳಾದ ಮೆಲೊಬಿನಮ್ಮ ಆ ಗತಿಗೆಟ್ಟ ಬ್ರದರಿನ ಸಭೆಗೆ ಹೋಗುವುದು ಸರಿಯಲ್ಲ. ಹಾಗೇ ಮುಂದುವರಿದರೆ ಬಿಷಪ್ಪರಿಂದ ನೋಟೀಸ್ ಬರುವುದೆಂದು ತಿಳಿಸು’ ಎಂದು ಎಚ್ಚರಿಸಿದರು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಫಾದರ್ ಅಷ್ಟು ಹೇಳಿದ ಮೇಲೆಯೇ ಟ್ರೀಜಾ ಫ್ರಾಂಕೋ ಬ್ರದರನ್ನು ನೋಡಲು ನಿರ್ಧರಿಸಿದ್ದು. ಮಾಯಿ ಪ್ರಾರ್ಥನಾ ಸಭೆಗೆ ಬಾರೆಂದು ಕರೆದರೂ ಹೋಗದಿದ್ದವಳು ರವಿವಾರ ಸಂಜೆ ತಾನೂ ಹೊರಟಳು.

ಇನ್ನೂರು ಜನ ಕೂರುವಂತೆ ಕಟ್ಟಿದ ವಿಶಾಲವಾದ ಹಾಲ್. ಒಂದು ಪ್ರಾರ್ಥನಾ ಸಭೆ ಮುಗಿಸಿ ಮತ್ತೊಂದಕ್ಕೆ ಬ್ರದರ್ ಸಿದ್ಧವಾಗಿದ್ದಾರೆ. ಮಾಯಿ ಮುಂದಿನ ಸಭೆಗೆ ಸಿದ್ಧ ಮಾಡಿ ಎಲ್ಲರನ್ನು ಕೂರಿಸುತ್ತಿದ್ದಾಳೆ. ಈ ಮಳೆಯ ಕಾಲದಲ್ಲೂ ಮುಂಬೈ, ಗೋವಾ, ಮೈಸೂರು, ಮಡಿಕೇರಿ, ಬೆಂಗಳೂರಿನಿಂದೆಲ್ಲ ಜನ ಬಂದಿರುವುದು ನೋಡಿ ಅವಳಿಗೆ ಅಚ್ಚರಿಯಾಯಿತು. ತನ್ನಮ್ಮ ವೇಲಂಕಣಿಯ ತೈಲವನ್ನು, ತ್ರಿಶೂರಿನ ಪ್ರಾರ್ಥನಾಸ್ಥಳದ ಪವಿತ್ರ ವಿಭೂತಿಯನ್ನು ಹಚ್ಚುವುದು ನೋಡಿ ಬೈಯುತ್ತಿದ್ದಳು. ಇಲ್ಲಿ ನೋಡಿದರೆ ಎಲ್ಲರೂ ಪವಿತ್ರ ನೀರೆಂದು ತಲೆಗೆ ತಟ್ಟಿಕೊಳ್ಳುತ್ತಿದ್ದಾರೆ!

ದೂರದಲ್ಲಿ ಮೈದುಂಬಿ ಶರಾವತಿ ಹರಿಯುತ್ತಿದೆ. ಗುಡ್ಡದ ಇಳಿಜಾರಿನಲ್ಲಿರುವ ಬ್ರದರ್ ಮನೆಯಿಂದ ಬೆಟ್ಟಸಾಲುಗಳೂ, ಹಸಿರು ಕಾಡೂ ಕಾಣುತ್ತಿದೆ. ಒಂದೇಸಮ ಹಕ್ಕಿಗಳ ಉಲಿತ. ಹಗಲಿಡೀ ಮಳೆ ಸುರಿದಿದೆ. ಕಿಟಕಿಯ ಗ್ರಿಲ್‌ನಿಂದ ಹೊರನೋಡುತ್ತಿರುವಾಗ ಹೊರದೇಶವೆಂದು ಇದನ್ನೆಲ್ಲ ಬಿಟ್ಟುಹೋಗಬೇಕಲ್ಲ ಎಂದು ಚಣದ ಮಟ್ಟಿಗೆ ಅನಿಸಿತು. ‘ತಂಗೀ’ ಎಂಬ ಕರೆಗೆ ಹಿಂದಿರುಗಿ ನೋಡಿದಳು. ಬ್ರದರ್ ನಿಂತಿದ್ದರು. ಮಿರಿಮಿರಿ ಹೊಳೆಯುವ ಎಣ್ಣೆಗಪ್ಪು ಮುಖದಲ್ಲಿ ಕಣ್ಣು ಇನ್ನೂ ಹೊಳೆಯುತ್ತಿದ್ದವು. ವೇದಿಕೆಯ ಹಿಂದಿನ ಕೋಣೆಗೆ ಕರೆದೊಯ್ದರು. ‘ಇವತ್ತು ನಿನಗಾಗಿ ಪ್ರಾರ್ಥಿಸುವೆ’ ಎನ್ನುತ್ತ ವಿದೇಶ ಪ್ರಯಾಣದ ತಯಾರಿಯ ಬಗೆಗೆ ವಿಚಾರಿಸಿದರು. ‘ನಾ ಹೋದ್ರೆ ಬಾಳಾ ಹೋಗಲಿಕ್ಕಾಗಲ್ಲ ಅಂತ ಚಿಂತೆಯಾಗ್ತಿದೆ. ಒಂದು ಮನೆಯಿಂದ ಒಬ್ರಿಗೇ ಬಿಡುವುದಂತೆ’ ಎಂದು ಟ್ರೀಜಾ ಹೇಳಿದರೆ, ‘ಅದನ್ನೆಲ್ಲ ಅವರ ಹತ್ರ ಯಾಕೆ ಕೇಳಕ್ಕೆ ಹೋಗ್ತಿರಿ?’ ಎಂದರು ತಣ್ಣಗೆ.

‘ಯಾರ ಅಪ್ಪಣೆನೂ ಇಲ್ಲ, ಕುಪ್ಪಳ ಹಕ್ಕಿ ಕೂಗ್ತಾ ಇದೆ. ಯಾರ ಪರ್ಮಿಷನ್ನೂ ಇಲ್ಲ, ಇವತ್ತು ಜೋರು ಮಳೆ ಬರಲಿದೆ. ಬೇರೆಯವರಿಗೆ ತೊಂದರೆ ಆಗದ ಹಾಗೆ ನಡೆಯಿರಿ. ಅದೇ ದೇವಸುತರ ಆದೇಶ. ಅಂಥವರಿಗೆಲ್ಲ ದೇವರ ಆಶೀರ್ವಾದ ಖಚಿತ’ ಎಂದು ಪ್ರಸಾದವನ್ನೂ, ಒಂದು ಕವರನ್ನೂ ಕೊಟ್ಟು ಎರಡೂ ಕೈಯೆತ್ತಿ ಹರಸಿ ಕಳಿಸಿದರು.

‘ತೆಂಕ್ಯು ಬ್ರದರ್, ದೇವ್ ಬರೇ ಕರೆ’ ಎಂದು ಮೆಲೊಬಿನಮ್ಮ ಮಗಳೊಡನೆ ಮನೆಗೆ ಬಂದಳು. ಓಹೋ, ಮಾಯಿ ಈಗ ಪದೇಪದೇ ಥ್ಯಾಂಕ್ಯು ಹೇಳಲು ಕಲಿತಿರುವುದು ಇಲ್ಲಿಂದ ಎಂದುಕೊಂಡ ಟ್ರೀಜಾ, ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮನೆಗೆ ಬಂದಳು.

ಬ್ರದರ್ ಕೊಟ್ಟ ಕವರಿನಲ್ಲಿ ಎರಡು ಸಾವಿರದ ಐವತ್ತು ನೋಟುಗಳಿದ್ದವು. ಅದರ ಜೊತೆಗೆ ಮಾಯಿ ಅವಳ ಮದುವೆಯ ಕಾಲದ ನಾಲ್ಕು ಚಿನ್ನದ ಬಳೆ ಮತ್ತು ನೆಕ್ಲೇಸನ್ನು ಬ್ಯಾಂಕಿನಲ್ಲಿಟ್ಟು ಒಂದು ಲಕ್ಷ ಸಾಲ ಪಡೆದಳು. ಅಂತೂ ವೀಸಾ ಬಂದಿತು. ಮನೆಗೆ ಬಂದು, ಎಲ್ಲರಿಗೂ ಹೇಳಿ, ಬ್ರದರ್ ಬಳಿ ತನಗಾಗಿ ಪ್ರಾರ್ಥಿಸಲು ಹೇಳಿ ವಂದಿಸಿ, ಮುಂಬೈಗೆ ಹೊರಟಳು. ಕಡಿಮೆ ಹಣದಲ್ಲಿ ಹೋಗಬಹುದೆಂದು ಹಡಗಿನಲ್ಲಿ ಟಿಕೆಟ್ ತೆಗೆದಿದ್ದರು.

ಪಯಣ ಶುರುವಾಯಿತು. ಕುತೂಹಲ, ಕನಸು, ನಿರೀಕ್ಷೆಗಳ ಭಾರ. ಮುಂಬರಲಿರುವ ಕಷ್ಟಗಳ ಸೂಚನೆಯೆಂಬಂತೆ ಹಡಗಿನ ಒಬ್ಬ ಕ್ಯಾಪ್ಟನ್ ಇದ್ದಕ್ಕಿದ್ದಂತೆ ಕಾರ್ಡಿಯಾಕ್ ಅರೆಸ್ಟ್ ಆಗಿ ತೀರಿಕೊಂಡರು. ಆ ವೇಳೆಗೆ ಕೋವಿಡ್ ಜ್ವರ ವಿಶ್ವವನ್ನೇ ಆವರಿಸಿಬಿಟ್ಟಿತ್ತು. ಸಾವು ಕೋವಿಡ್‌ನಿಂದ ಇರಬಹುದೆಂದು ಏಳುವಾರ ಕಳೆದರೂ ಯಾವ ಬಂದರೂ ಹಡಗು ನಿಲ್ಲಲು ಅವಕಾಶ ನೀಡಲಿಲ್ಲ. ಶವ ವಿಲೇವಾರಿಯಾಗಲಿಲ್ಲ. ಪೋರ್ಟ್ಸ್​ಮೌತ್ ತಲುಪಿದರೂ ಹಡಗಿನಲ್ಲಿದ್ದವರು ಇಳಿಯಲು ಬಿಡಲಿಲ್ಲ. ಕೊನೆಗೂ ಎಲ್ಲರೂ ಕೋವಿಡ್ ನೆಗೆಟಿವ್ ಎಂಬ ವರದಿ ಬಂತು. ಅಷ್ಟೊತ್ತಿಗೆ ಹೊರದೇಶದಿಂದ ಬಂದವರಿಗೆ ಪ್ರವೇಶ ಇಲ್ಲವೆಂದು ಇಂಗ್ಲೆಂಡ್ ಲಾಕ್‌ಡೌನ್ ಹೇರಿಬಿಟ್ಟಿತು. ಇಳಿಸಿದ ಹಡಗು ಹೋಗಿಯಾಗಿದೆ. ವಿಮಾನಗಳಿಲ್ಲ. ಈಗೇನು ಮಾಡುವುದು?

ಮುಂದಿನದು ಹೋರಾಟ. ಒಬ್ಬಳದೇ ಅಲ್ಲ, ಅವಳಂಥ ಸಾವಿರಾರು ಜನರಿದ್ದರು. ಸಾಮಾಜಿಕ ಮಾಧ್ಯದ ಮೂಲಕ ಭಾರತದಲ್ಲಿರುವವರನ್ನು, ಅಧಿಕಾರಿಗಳನ್ನು ಸಂಪರ್ಕಿಸಿದರು. ಪರ್ಪೇತಾ, ಶಿವಗಾಮಿ ಮೊದಲೇ ಹೋಗಿ ಕೆಲಸ ಶುರುಮಾಡಿದ್ದರೂ ಕಟ್ಟುನಿಟ್ಟಿನ ಲಾಕ್‌ಡೌನ್ ನಿಯಮಗಳೆದುರು ಟ್ರೀಜಾಳನ್ನು ನೋಡಲು ಸಾಧ್ಯವಾಗಲಿಲ್ಲ. ಕೊನೆಗೂ ಭಾರತದ ಹಡಗು ತನ್ನ ಮಕ್ಕಳನ್ನು ಕರೆತರಲು ಪೋರ್ಟ್ಸ್​ಮೌತ್ ಮುಟ್ಟುವವರೆಗೆ ವನವಾಸ, ಸೆರೆವಾಸ ಎಲ್ಲದರ ಅನುಭವವೂ ಆಯಿತು.

***

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಕತೆ ಹೇಳಿಕೊಳ್ಳುವ ಉತ್ಸಾಹಕ್ಕೆ ನನ್ನೆದುರು ಕುಳಿತ ಟ್ರೀಜಾಳ ಕೈ ಬೆರಳುಗಳು ಟಕಟಕ ಲಟಿಕೆ ಮುರಿಯುತ್ತಿವೆ. ಚಂಚಲ ಕಣ್ಣುಗಳು ಆಚೀಚೆ ತಿರುಗುತ್ತಿವೆ. ಒಂದೇಸಮ ಏನೇನಾಯಿತೆಂದು ಹೇಳಿದಳು. ಇಲ್ಲಿನ ಕಷ್ಟದ ಪರಿಸ್ಥಿತಿ ಕಂಡಮೇಲೆ ಇನ್ನಿಲ್ಲೇ ಕೆಲಸ ಮಾಡಬೇಕೆನಿಸಿದೆಯಂತೆ. ನೋಡಲು ಬಾರೀಕಾಗಿದ್ದಳು. ಸರಳವಾಗಿದ್ದಳು. ಮೊದಲೆಲ್ಲ ಸೆಂಟಿನ ಪರಿಮಳ, ಲಿಪ್‌ಸ್ಟಿಕ್, ಮುಖ ಕಣ್ಣು ಹುಬ್ಬಿನ ಬಣ್ಣ ಎದ್ದು ಕಾಣುತ್ತಿದ್ದವು. ಈಗ ಅಲಂಕಾರ ಇಲ್ಲವೆಂದರೂ ನಡೆದೀತು.

‘ಅಂತೂ ಬಂದ್ಯಲ. ನಿನ್ನಮ್ಮನಿಗೆ ಯಾವ ಆಂಕ್ಸಿಟ್ ಮಾತ್ರೆಗೂ ನಿದ್ದೆ ಬರ‍್ತಿರಲಿಲ್ಲ ಗೊತ್ತಾ’ ಎಂದೆ.

‘ಮೇಡಂ, ನೀವೆಲ್ಲ ಪ್ರೇ ಮಾಡಿದ್ದಕ್ಕೇ ನಾನು ವಾಪಸ್ ಬಂದದ್ದು. ಐದು ಲಕ್ಷ ಹೋಯ್ತು. ಹೋದ್ರೆ ಹೋಗಲಿ, ಹೇಗಾದ್ರೂ ಮಾಡಿ ಎಲ್ಲರ ಸಾಲ ತೀರಿಸ್ತೇನೆ. ಹಡಗಲ್ಲಿ ಬರ‍್ತ ಯೋಚ್ನೆ ಮಾಡ್ದೆ. ಪ್ರಪಂಚದ ಪಾಪದ ಕೊಡ ತುಂಬಿ ಹೀಗಾಗ್ತಿದೆ ಅಂತ ಅನಿಸ್ತು. ಎಲ್ಲರೂ ತುಂಬ ಪಾಪ ಮಾಡ್ತಿದೇವೆ. ನಾನೇ ಎಷ್ಟು ಪಾಪ ಮಾಡಿದೆ? ಒಬ್ಬ ತುಂಬ ಫ್ರೆಂಡಾಗಿದ್ದ. ಒಳ್ಳೆಯವನು. ಬ್ರದರ್ ಆಗಿ ಕೆಲ್ಸ ಮಾಡ್ತಿದ್ದ. ಆದ್ರೆ ಕಮಿಟ್ ಆಗ್ದೇ ತುಂಬ ಬಳಸಿಕೊಂಡೆ. ಕೊನೆತಂಕ ರಿಲೇಷನ್‌ಶಿಪ್ ಕನ್ಫರ್ಮ್ ಮಾಡ್ಲಿಲ್ಲ. ಹೊರಟಾಗ ಕಾಲ್ ಮಾಡಿದ್ದ, ನಾನು ರಿಸೀವ್ ಮಾಡಿರ್ಲಿಲ್ಲ. ನಂಗೆ ಬೇರೆಯೋನ ಜೊತೆ ಸಂಬಂಧ ಆಗಿತ್ತು. ಅದನ್ನೂ ಹೇಳಲಿಲ್ಲ. ಆದ್ರೆ ಅವನು ಕೋವಿಡ್ ತರ‍್ಕೊಂಡಿದಾನೆ ಮೇಡಂ. ಇವನು ಬ್ರೇಕಪ್ ಮಾಡ್ಕೊಂಡು ಸೈಪ್ರಸ್ಸಿಗೆ ಹೋಗಿ ನಾಪತ್ತೆಯಾಗಿಬಿಟ್ಟ’

ಪಾಪನಿವೇದನೆಯೋ ಎನ್ನುವಂತೆ ಮೆಲ್ಲನೆಯ ಸ್ವರದಲ್ಲಿ ಹೇಳಿ ಬಿಕ್ಕಿದಳು. ಅವಳಿಗದು ಕನ್ಫೆಷನ್ ಮಾಡಿರದ ಪಾಪ. ಅತ್ತರೂ ಕರಗದ ದುಃಖ. ಈಗಷ್ಟೇ ಮಡಕೆ ರೂಪ ತಳೆಯುತ್ತಿದೆ. ಇನ್ನೂ ಸುಟ್ಟುಕೊಳ್ಳಲಿಕ್ಕಿದೆ.

‘ಟ್ರೀಜಾ, ಭಾವುಕಳಾಗಬೇಡ. ಪಾಪ ಪುಣ್ಯವೆಂಬ ಹಣೆಪಟ್ಟಿಯೇ ಸರಿಯಲ್ಲ. ಬುದ್ಧ ಹೇಳಿದ್ದಾನೆ, ಎಲ್ಲ ಕೇಡಿನ ಮೂಲ ದುರಾಸೆ. ಹಣದ, ಹೆಸರಿನ, ಅಧಿಕಾರದ ದುರಾಸೆ. ನನಗನಿಸುವುದು ಕ್ರಿಸ್ತನ ಪ್ರೇಮ, ಕರುಣೆಯನ್ನು ಲೋಕಕ್ಕೆ ಮುಟ್ಟಿಸುತ್ತ ಸರಳವಾಗಿ ಬದುಕುವುದೇ ಕೇಡಿಗೆ ಉತ್ತರವಾಗಿದೆ. ಆದರೆ ಇದಷ್ಟು ಸರಳವಲ್ಲ. ಒನ್ ಟೈಂ ಅಚೀವ್‌ಮೆಂಟ್ ಅಲ್ಲ. ನಿತ್ಯಸಾಧನೆ. ಏಳು, ಕೆಲಸ ಶುರು ಮಾಡುವ’ ಎಂದೆ.

‘ಹೌದು ಮೇಡಂ. ಹೆಚ್​ಐವಿ ಪಾಸಿಟಿವ್ ಅನಾಥ ಮಕ್ಕಳನ್ನು ನೋಡಿಕೊಳ್ಳಲು ಕೇರ್‌ಟೇಕರ್ ಬೇಕಂತ ಬಾಲವಿಕಾಸ ಮಕ್ಕಳಧಾಮದವರ ಜಾಹೀರಾತು ನೋಡಿದೆ. ಜಾಯಿನ್ ಆಗಿದೇನೆ. ಸೋಮವಾರದಿಂದ ಹೋಗ್ತಿದೇನೆ. ಬ್ಲೆಸ್ ಮಿ’ ಎಂದು ಕೈ ನೀಡಿದಳು. * ಪದಗಳ ಅರ್ಥ

‘ಬಪ್ಪಾಚೆ ಪುತ್ರಾಚೆ ಅನೆ ಪವಿತ್ರ್ ಆತ್ಮಾಚೆ ನಾ ವಿ ಅಮೆನ್’ = ಪರಲೋಕ ಪಿತನೆ, ಪಿತನ ಸುತನೆ ಮತ್ತು ಪವಿತ್ರ ಆತ್ಮಗಳೇ, ನಮ್ಮನ್ನು ಹರಸಿ, ಶಾಂತಿ. ಮಾಯಿ = ತಾಯಿ, ಅಮ್ಮ ಜೆಜು = ಯೇಸುಕ್ರಿಸ್ತ ಹೆರಗೆ = ವಿದೇಶಕ್ಕೆ ಬಾಪ್ಪಾ = ತಂದೆ ಕಾಞ್ಞಂಗಾಡು = ಕೇರಳದ ಜಿಲ್ಲಾ ಕೇಂದ್ರ ವೆಲ್ಹಾ ಗೋವಾ = ಓಲ್ಡ್ ಗೋವಾ ಬಾಳಾ = ತಮ್ಮ ಕುಪ್ಪಳ ಹಕ್ಕಿ = ಕೆಂಬೂತ ದೇವ್ ಬರೇ ಕರು = ಕೊಂಕಣಿಯಲ್ಲಿ ‘ದೇವರು ಒಳ್ಳೇದು ಮಾಡಲಿ.’ ಬಾರೀಕು = ಸಪೂರ, ತೆಳ್ಳಗೆ * ಫೋಟೋ: ಎಸ್. ವಿಷ್ಣುಕುಮಾರ್ * ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್-19 ; ಹೊದಿಕೆ ಸರಿಸಿದರೆ ಬಿಟ್ಟ ಕಣ್ಣು ಬಿಟ್ಟುಕೊಂಡು ಗಪ್ಪತಿ ತಣ್ಣಗಾಗಿದ್ದ

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ‘ಅಮಾ, ನಂಗೆ ಕಣ್ಣಲ್ ನೀರು ಹುಟ್ಟೂವಂತ ಮದ್ದೇನಾದ್ರು ಕೊಡ್ರ’

Published On - 1:35 pm, Fri, 18 June 21

ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಬಿಜೆಪಿ ಶಾಸಕರು ಕಮಿಟಿ ಮೀಟಿಂಗ್​​ಗಳಲ್ಲಿ ಭಾಗಿಯಾಗಲ್ಲ: ವಿಜಯೇಂದ್ರ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ