Literature: ಅನುಸಂಧಾನ; ‘ನೋಟವು ಶಬ್ದಗಳಿಗಿಂತ ಮೊದಲು ತೊಡಗುತ್ತದೆ’

Jane Alison : ಜೇನ್ ಅಲಿಸನ್ (1961) ಹುಟ್ಟಿದ್ದು ಆಸ್ಟ್ರೇಲಿಯಾದಲ್ಲಾದರೂ ಅವರ ಶಿಕ್ಷಣ, ಉದ್ಯೋಗ, ನೆಲೆ ಎಲ್ಲವೂ ಅಮೆರಿಕೆಯಲ್ಲಿ. ವರ್ಜೀನಿಯಾ ಯೂನಿವರ್ಸಿಟಿಯಲ್ಲಿ ಕ್ರಿಯೇಟಿವ್ ರೈಟಿಂಗ್ ಪ್ರೊಫೆಸರ್ ಆಗಿರುವ ಜೇನ್ ನಾಲ್ಕು ಕಾದಂಬರಿಗಳೂ ಸೇರಿ ಇದುವರೆಗೆ ಏಳು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

Literature: ಅನುಸಂಧಾನ; ‘ನೋಟವು ಶಬ್ದಗಳಿಗಿಂತ ಮೊದಲು ತೊಡಗುತ್ತದೆ’
ಲೇಖಕಿ ಜೇನ್ ಆಲಿಸನ್
Follow us
ಶ್ರೀದೇವಿ ಕಳಸದ
|

Updated on: Apr 17, 2022 | 8:46 AM

ಅನುಸಂಧಾನ | Anusandhaana : ಜೇನ್ ಅಲಿಸನ್ (Jane Alison) ಅವರ Meander, Spiral, Explode (Design and Pattern in Narrative) ಕೃತಿಯಲ್ಲಿ ಸಾಹಿತ್ಯ ಕೃತಿಯೊಂದು ತನ್ನ ನಿರೂಪಣಾ ವಿಧಾನದ ಹತ್ತು ಹಲವು ಪಟ್ಟುಗಳಿಂದ, ಅಂದರೆ ಅದರ ಭಾಷೆ, ಭಾಷೆಯ ಲಯ, ನಿರ್ದಿಷ್ಟ ಶಬ್ದದ ಬಳಕೆ, ಕಥನದ ಗೊತ್ತಿರುವ ವಿವರವನ್ನು ಹಿಡಿದಿಟ್ಟುಕೊಂಡು ಬಿಚ್ಚುತ್ತ ಹೋಗುವ ತಂತ್ರ, ಓದುಗನ ಮೆದುಳನ್ನು ನಿಯಂತ್ರಿಸುತ್ತಾ ಅವನನ್ನು ಯಾವುದಕ್ಕೋ ಸಜ್ಜುಗೊಳಿಸಿ ಪರವಶಗೊಳಿಸುವ ಮೋಡಿಕಾರಕ ಶೈಲಿ, ಪಂಚೇಂದ್ರಿಯಗಳಿಗೂ ಒಂದು ಅನುಭವವನ್ನು ಭಾಷೆಯ ಮೂಲಕವೇ ತಲುಪಿಸಲು ಒಬ್ಬ ನಿರೂಪಕ ಪಡುವ ಪಡಿಪಾಟಲು ಎಂದೆಲ್ಲ ವಿವರವಾಗಿ ನಿರ್ದಿಷ್ಟ ಸಾಹಿತ್ಯ ಕೃತಿಗಳ ಸ್ಪಷ್ಟ ಸಾಕ್ಷ್ಯದೊಂದಿಗೆ ವಿವರಿಸುತ್ತ ಹೋಗುತ್ತಾರೆ. ಅವರ ಹಲವಾರು ವರ್ಷಗಳ ಅಧ್ಯಯನ ಮತ್ತು ಅಧ್ಯಾಪನದ ಅನುಭವವೇ ಇಲ್ಲಿ ಹರಳುಗಟ್ಟಿರುವುದನ್ನು ಗಮನಿಸಬಹುದು. ಕೃತಿಯ ಹೆಸರಿನಲ್ಲಿ ಆಕೆ ಮೂರನ್ನು ಮಾತ್ರ ಹೆಸರಿಸಿದ್ದರೆ ಉಳಿದ ನೂರನ್ನು ಕೃತಿಯ ಒಳಪುಟಗಳು ತೆರೆದಿಡುತ್ತ ಹೋಗುತ್ತವೆ. ಓದುಗರ ಬೆವರಿಳಿಸಬಲ್ಲ ಅಪರೂಪದ ಕೃತಿಯಿದು. ಈ ಕೃತಿಯ ಪ್ರವೇಶಿಕೆಯ ಒಂದೆರಡು ಸೊಲ್ಲು ಇಲ್ಲಿವೆ. ನರೇಂದ್ರ ಪೈ, ಲೇಖಕ, ಅನುವಾದಕ (Narendra Pai)

(ಸಂಧಾನ 3)

ಸಿಕ್ಕಾಪಟ್ಟೆ ವೈಭವದ, ಚಿತ್ರವಿಚಿತ್ರ ಪೀಠೋಪಕರಣಗಳನ್ನು ರೂಪಿಸುತ್ತಿದ್ದ, ತೀರ ಅಪರೂಪಕ್ಕೆಂಬಂತೆ ಮನೆಗಳನ್ನು ಡಿಸೈನ್ ಮಾಡುತ್ತಿದ್ದ ಐರಿಷ್ ಡಿಸೈನರ್ ಎಲೀನ್ ಗ್ರೇ ಎಂಬಾಕೆ 1926ರಲ್ಲಿ ಫ್ರಾನ್ಸ್‌ನ ದಕ್ಷಿಣ ಕಡಲ ತೀರದಲ್ಲಿ ಹಡಗಿನಾಕೃತಿಯ ಒಂದು ಮನೆಯನ್ನು ನಿರ್ಮಿಸತೊಡಗಿದಳು. ಪರಿಣಾಮ, ಹೆಸರಾಂತ ಆರ್ಕಿಟೆಕ್ಟ್ ಲೆ ಕಾರ್ಬ್ಯುಸಿರ್ ಇವಳ ಕಾಟಕ್ಕೆ ತಲೆಕೆಟ್ಟು ಕೂತ. ಆ ಹೊತ್ತಿಗಷ್ಟೇ ಕಾರ್ಬೂ ಎಲ್ಲೋ ಒಂದೆಡೆ, ‘ಮನೆ ಎಂಬುದು ವಾಸಿಸುವುದಕ್ಕಿರುವ ಒಂದು ತಾಂತ್ರಿಕ ವ್ಯವಸ್ಥೆ’ ಎಂಬರ್ಥದ ಹೇಳಿಕೆಯನ್ನು ಕೊಟ್ಟಿದ್ದನಷ್ಟೇ. ಆದರೆ ಗ್ರೇಯ ವಿಚಾರ ಬೇರೆ ಹಾದಿಯಲ್ಲಿ ಹರಿದಿತ್ತು, ನೊ, ಮನೆಯೆಂಬುದು ಅವಳಿರುವ ಗರ್ಭ, ಅವಳ ಜೀವ ಚೈತನ್ಯ ಸುಪ್ತವಾಗಿರುವ ಮೊಟ್ಟೆ, ಅವಳ ಮೈಗಂಟಿದ ಚರ್ಮ, ಅವಳ ಬದುಕಿನ ಗತಿಗೆ ಅದರ ಲಯವಿನ್ಯಾಸ ಹೊಂದುವಂತಿರಬೇಕು.

ಮನೆಯ ಡಿಸೈನಿಂಗ್ ಪ್ರಾರಂಭಿಸುವ ಮುನ್ನ ಗ್ರೇ, ಅವಳು ಮತ್ತು ಅವಳ ಮನೆಯ ಕೆಲಸದಾಕೆ ಇಡೀ ದಿನ ಮನೆಯೊಳಗೆ ಓಡಾಡುವ ವಿಧಾನವನ್ನು ಅಭ್ಯಾಸ ಮಾಡತೊಡಗಿದಳು. ಕೋಣೆಯಿಂದ ಕೋಣೆಗೆ ಅವರ ಚಲನೆಯ ವಿಧಾನವನ್ನು ಅನುಸರಿಸಿ ಡಯಗ್ರಾಮ್ ರೂಪಿಸಿಕೊಂಡಳು. ಅದರ ಜೊತೆ ಜೊತೆಗೇ ಸೂರ್ಯನ ಚಲನೆ, ಗಾಳಿಯ ಚಲನೆ, ಕಿಚನ್ನಿನಲ್ಲಿ ಎಲ್ಲಿ ಹಾದಿ ತೆರೆದಿದ್ದರೆ ಚೆನ್ನ, ಕಿಟಕಿ ಎಲ್ಲಿರಬೇಕು (ಅಲ್ಲಿ ದಪ್ಪನೆಯ ಗೆರೆ), ಎಲ್ಲಿ ತಿರುವು, ಲಿವಿಂಗ್ ರೂಮಿನ ಎಲ್ಲೆಲ್ಲಿ ಸುರುಳಿ – ಒಟ್ಟಾರೆ ಒಂದು ಜೈವಿಕ ರಂಗಚಲನೆ. ಕಡಲಿಗೆದುರಾಗಿ ಬಂಡೆಗಳ ಮೇಲೆ ಅವಳು ಹಾಗೆ ಕಟ್ಟಿದ ಮನೆ ನಂತರ ಈ ರಂಗಚಲನೆಯ ಜೀವಂತ ಅಭಿವ್ಯಕ್ತಿಯಾಗಿತ್ತು. ಬಾಯಿಯಂಥ ದ್ವಾರ ನಿಮ್ಮನ್ನು ತನ್ನೊಳಗೆ ಸೆಳೆಯುತ್ತಿತ್ತು. ತೆರೆಗಳು, ಕನ್ನಡಿಗಳು ಗೋಡೆಯಿಂದ ರೆಕ್ಕೆಯಂತೆ ತೆರೆದುಕೊಳ್ಳುತ್ತಿದ್ದವು. ಕಿಟಕಿಗಳೂ, ಮುಚ್ಚುಗಿಂಡಿಗಳು ಎಲ್ಲಾ ಕಡೆಯೂ ಕಾಲಕ್ಕೆ ಸರಿಯಾಗಿ ತಕ್ಕುದಾದ ದಿಕ್ಕಿನಿಂದ ಎಷ್ಟು ಬೇಕೋ ಅಷ್ಟು ಗಾಳಿ, ಬೆಳಕು ಬರುವಂತೆ, ದಿನದ ಯಾವ ಸಮಯದಲ್ಲಾದರೂ ಹೊರಗಿನ ನೋಟ ಸಿಗುವಂತೆ ತೆರೆದುಕೊಳ್ಳುತ್ತಿದ್ದವು. ಆಕೆಯ ನೀಲಿನಕ್ಷೆಯೇನಿತ್ತು, ಅದು ನೀವು ಆ ಮನೆಯಲ್ಲಿ ಓಡಾಡಬಹುದಾದ, ನೋಡಬಹುದಾದ ಮತ್ತು ಬದುಕಬಹುದಾದ ಬಗೆಯನ್ನು ತೋರುತ್ತಿದ್ದವು. ಮನೆ ಕಟ್ಟಿ ಮುಗಿದಾಗ ಈ ರೇಖೆಗಳೆಲ್ಲಾ ಅಲ್ಲಿ ಒಂದು ಹೊಸ ವಿನ್ಯಾಸವಾಗಿ ಬದಲಾದವು.

ಇದನ್ನೂ ಓದಿ : Literature : ಇದು ಮೌನ ಮಾತಾಗುವ ‘ಅನುಸಂಧಾನ’, ನರೇಂದ್ರ ಪೈ ಅಂಕಣ ನಾಳೆಯಿಂದ ಆರಂಭ

ಎಲೀನ್ ಗ್ರೇ ರೂಪಿಸಿದ ವಿನ್ಯಾಸವನ್ನು ನಾನು ತುಂಬ ಮೆಚ್ಚಿಕೊಂಡೆ. ಅದಕ್ಕಿಂತ ಹೆಚ್ಚು ಅದು ಎಷ್ಟರಮಟ್ಟಿಗೆ ಕಾರ್ಬೂನ ತಲೆಕೆಡಿಸಿರಬಹುದು ಎಂದು ಕಲ್ಪಿಸಿಯೇ ಖುಷಿಪಟ್ಟೆ. ಬದುಕುವ ಬಗೆಯಿಂದಲೇ ವಿನ್ಯಾಸಗೊಂಡ ಕಲೆಯ ಈ ಹೊಸ ಬಗೆ, ಗ್ರೇ ರೂಪಿಸಿದ ಬಗೆ ಏನಿದೆ, ಅದು ಬರವಣಿಗೆಯ ಬಗೆಯನ್ನೂ ವಿವರಿಸಬಹುದು ಎಂದು ನನಗನಿಸುತ್ತದೆ. ನಾವು, ಬರಹಗಾರರು ನಮ್ಮ ಸುತ್ತಮುತ್ತಲಿನ ಬದುಕನ್ನು, ಮಂದಿಯನ್ನು, ಮನಸ್ಸುಗಳನ್ನು ಗಮನಿಸುತ್ತಿರುತ್ತೇವೆ, ಅವುಗಳ ಕುರಿತು ಕಲ್ಪಿಸುತ್ತಿರುತ್ತೇವೆ, ದಿನದಿಂದ ದಿನಕ್ಕೆ ಹೀಗೆಯೇ ಮುಂದುವರಿಯುತ್ತಿರುತ್ತೇವೆ. ಆದರೆ, ನಾವು ಸದಾ ಒಂದು ಆಕೃತಿಯತ್ತ ಮೊಗಮಾಡಿರುತ್ತೇವೆ – ಅನುಭವ ಒಂದು ಅರ್ಥಪೂರ್ಣ ಆಕೃತಿಯಾಗಿ ರೂಪುಗೊಳ್ಳುವ ಮತ್ತು ಶಬ್ದಗಳಲ್ಲಿ ನಿರೂಪಿಸುವ ಮೂಲಕ ಹೇಗೆ ಆ ಆಕೃತಿಯನ್ನು ಯಥಾವತ್ ಮರುರೂಪಿಸಬಹುದು ಎನ್ನುವುದು ನಮ್ಮ ಯೋಚನೆಯಾಗಿರುತ್ತದೆ. ನಾವೂ ಓದುಗರಿಗೆ ಅದೂ ಇದೂ ನೋಡುವುದಕ್ಕೆ, ಅವರು ನೋಡಲಿ ಎಂದೇ ನಾವು ಅಲ್ಲಿ ವ್ಯವಸ್ಥೆಗೊಳಿಸಿದ್ದನ್ನು ನೋಡಿ ನಮಗೇನನಿಸಿತೊ ಅದೇ ಅವರಿಗೂ ಅನಿಸಲಿ ಎಂದೇ, ಅವರಿಲ್ಲಿ ಅಡ್ಡಾಡುವುದಕ್ಕೆಂದೇ ಪ್ಯಾಸೇಜುಗಳನ್ನು ನಿರ್ಮಿಸುತ್ತಿರುತ್ತೇವೆ. ಮತ್ತದು ಸಂಭವಿಸಿದಾಗ – ಹಕ್ಕಿಯಾಗಿ ಹಾರಿದಂತೆಯೇ! ಅಲ್ಲಿಂದ ಅವಳು ಕೆಳಗೆ ನೋಡುತ್ತ, ತಾನೇ ಅಡ್ಡಾಡಿದ ತಾಣವನ್ನೆಲ್ಲ ಮತ್ತೊಮ್ಮೆ ಎತ್ತರದಿಂದ ಗಮನಿಸುತ್ತ, ಅದರ ವಿನ್ಯಾಸವನ್ನೂ ಇಡಿಯಾಗಿ ನೋಟಕ್ಕೆ ಹೊಂದಿಸಿಕೊಳ್ಳುತ್ತ ಪಡುವ ಖುಶಿ ಬೇರೆಯೇ.

Anusandhana Column Meander Spiral Explode of Jane Alison by Narendra Pai

Meander, Spiral, Explode (Design and Pattern in Narrative)

ನಾನಿಲ್ಲಿ ‘ನೋಟ, ನೋಡು’ ಎಂಬ ಶಬ್ದವನ್ನು ಮತ್ತೆಮತ್ತೆ ಬಳಸಿದ್ದೇನೆ. ಒಂದು ಪಠ್ಯವನ್ನು ನಾವು ತತ್ಕಾಲೀನವಾದ, ಹೇಗೆ ಗಾಯನವು ಒಂದು ಕಾಲಬದ್ಧವಾಗಿ ಅನುಭವಕ್ಕೆ ದಕ್ಕುವ ಕಲೆಯೊ ಹಾಗೆ, ಓದುತ್ತಿರುವ ಕಾಲಕ್ಕೆ ಸತ್ಯವಾಗುವ ಕಾಲಬದ್ಧ ಕಲೆ ಎಂದು ಕಾಣುತ್ತೇವಾದರೂ, ಅದು ಬಹುಮಟ್ಟಿಗೆ ದೃಶ್ಯ ಕಲೆ ಕೂಡಾ ಎನ್ನುವುದು ಕುತೂಹಲಕರ ಸತ್ಯ. ಒಂದು ಕತೆ ಕೂಡಾ ಒಂದು ಹಾಡಿನಷ್ಟೇ ಒಂದು ಮನೆಯೊ, ಉದ್ಯಾನವೋ ಆಗಿ ಮೂಡುವುದು ಸಾಧ್ಯ. Northrop Frye ಮಾತುಗಳಲ್ಲಿ, “ನಾವು ಒಂದು ಪಠ್ಯವನ್ನು ಓದುವಾಗ ಅದನ್ನು ಕೇಳುತ್ತೇವೆ ಅಥವಾ ಆಲಿಸುತ್ತೇವೆ. ಆದರೆ ಒಬ್ಬ ಬರಹಗಾರನ ಒಟ್ಟಾರೆ ಆಕೃತಿಯನ್ನು ಮನಸ್ಸು ಗ್ರಹಿಸುತ್ತಲೇ ನಾವು ಅವನು ಏನನ್ನು ಹೇಳಹೊರಟಿದ್ದಾನೆ ಎಂಬುದನ್ನು ‘ಕಾಣ’ತೊಡಗುತ್ತೇವೆ.” John Berger ಮತ್ತಷ್ಟು ಸ್ಫುಟವಾಗಿಸುವ ಬಗೆ ಹೀಗಿದೆ: “ನೋಟವು ಶಬ್ದಗಳಿಗಿಂತ ಮೊದಲು ತೊಡಗುತ್ತದೆ.” ಒಂದು ಪುಟವನ್ನು ತೆರೆದಾಗ, ನಮಗೆ ಮೊದಲು ಕಾಣುವುದು ಅಕ್ಷರಗಳು. ಅವು ನಿರ್ಮಿಸುವ ಒಂದು ವಿನ್ಯಾಸ, ಆಕೃತಿ. ಬಿಳಿಯ ಬಣ್ಣದ ಹೊಲದ ನಡುವಿನ ಬದುಗಳಲ್ಲಿ, ಹಾದಿಗಳಲ್ಲಿ ಕೈಚಾಚಿ ಬಾನತ್ತ ನೋಡಲು ಸಾಕಷ್ಟು ಖಾಲೀ ಸ್ಥಳ, ಅಥವಾ ದಟ್ಟ, ದಪ್ಪ ದಪ್ಪ ತುಂಡುಗಳು, ಅಡಿಬರಹಗಳ ಭಾರ ಹೊತ್ತ ಸಂದುಗೊಂದಿಗಳು.  ಸನಿಹದಿಂದ ನೋಡಿದರೆ ಪ್ರತಿಯೊಂದು ಶಬ್ದವೂ ಒಂದೊಂದು ಚಿತ್ತಾರ ನಿರ್ಮಿಸುತ್ತದೆ. ಶಬ್ದಗಳನ್ನು ಅದರ ಭೌತಿಕ ಗಾತ್ರದಲ್ಲಿ ಗುರುತಿಸುವ ನಮ್ಮ ಮೆದುಳಿನ ಪ್ರತಿಸ್ಪಂದನವೂ ಎರಡು ಬಗೆಯದು. ನಾವೆಂದೂ ಓದಲು ಕಲಿಯದೇ ಇದ್ದಲ್ಲಿ ಎರಡೂ ಪ್ರತಿಸ್ಪಂದನಕ್ಕೆ ದಕ್ಕುವುದು ಕೇವಲ ಭೌತಿಕ ಆಕೃತಿಯಷ್ಟೇ. ನಾವು ಶಬ್ದಗಳನ್ನು ದಾಟಿ ಮುಂದೆ ಸಾಗಿದಂತೆಲ್ಲ ದೃಶ್ಯಗಳು ಸಿಗುತ್ತವೆ, ಅವುಗಳು ಅರ್ಥವನ್ನುಂಟು ಮಾಡತೊಡಗುತ್ತವೆ, ಕ್ರಮೇಣ ನಾವು ‘ನೋಡುವ’ ಬಗೆ ಹೊರಳುದಾರಿಯನ್ನು ಹಿಡಿಯುತ್ತದೆ, ಮತ್ತಾಗ ಭಾಷೆಯೇ ರೂಪಿಸುವ ಒಂದು ದೃಶ್ಯ ಚಿತ್ರಚಿತ್ತಾರಗಳ ಪ್ರವಾಹವೇ ಹರಿಯುತ್ತ ನಮ್ಮನ್ನು ಆವರಿಸತೊಡಗುತ್ತದೆ.

ಇದನ್ನೂ ಓದಿ : Literature: ಅನುಸಂಧಾನ; ಬರವಣಿಗೆ ಆತ್ಮಕಥಾನಕವೇ, ನೀವು ಬರೀತೀರೋ ಹೊತ್ತಿಗೇ ಅದು ನಿಮ್ಮನ್ನ ಬರೀತಿರುತ್ತೆ

ನಾವು ನಮ್ಮ ದೃಷ್ಟಿಗೆ ಇನ್ನೂ ಒಂದು ಪಾತಳಿಯ ನೋಟವನ್ನು ದಕ್ಕಿಸಿಕೊಳ್ಳುವುದು ಸಾಧ್ಯವಿದೆ. ಇಡೀ ಕತೆಗೆ ಒಂದು ಆಕೃತಿಯನ್ನು ಒದಗಿಸುತ್ತಿರುವ ಅಂಶಗಳನ್ನು ಗಮನಿಸುತ್ತಲೇ ಮೊದಮೊದಲು ಸಿಕ್ಕ ನೋಟದಲ್ಲಿಯೇ ಇಡೀ ಕತೆಯ ಅಂತ್ಯದಲ್ಲಿ ಅದು ಕೊಡಲಿರುವ ನೋಟವನ್ನು ಮುಂಗಾಣುವ ಕಾಣ್ಕೆಯೊಂದು ಇರುವುದನ್ನು ಗುರುತಿಸುವುದು.  ಸುಪ್ತಮನಸ್ಸಿನ ಲೆಕ್ಕಾಚಾರ, ದಾರಗಳ ವರ್ಣವಿನ್ಯಾಸದ ಸ್ಥೂಲ ಗ್ರಹಿಕೆಯಲ್ಲೇ ಒಟ್ಟು ಬಟ್ಟೆ ಉಟ್ಟು ನೋಡಿದ ಮನಸ್ಸಿನಂತೆ. ಓದುತ್ತ ಹೋದಂತೆ ನಾವು ಕೇವಲ ಕತೆಯಲ್ಲಿ ಬಂದು ಹೋಗುವ ಸ್ಥಳಗಳಿಗೆಲ್ಲ ಹೋಗಿ ಬರುತ್ತಿರುವುದಿಲ್ಲ, ಇಡೀ ನಿರೂಪಣೆಯೇ ಒಂದು ಪ್ರವಾಸವಾಗಿರುತ್ತದೆ. ಅದು ಸರೋವರದ ಉದ್ದಕ್ಕೂ  ಒಂದು ಗ್ಲೈಡಿಂಗ್ ತರದ ಹಾರಾಟವಾಗಬಹುದು. ವರ್ತುಲ ವರ್ತುಲಗಳಲ್ಲಿ ಒಳಸೇರುತ್ತ ಹೋಗುವ ಪ್ರಯಾಣವೋ, ನೆಲಕ್ಕೆ ಕಾಲಿಡದೆ ಒಂದರಿಂದ ಇನ್ನೊಂದಕ್ಕೆ, ಇನ್ನೊಂದರಿಂದ ಮತ್ತೊಂದಕ್ಕೆ , ಮತ್ತೊಂದರಿಂದ ಮಗದೊಂದಕ್ಕೆ ನೆಗೆಯುತ್ತ ಸಾಗುವ ದೂರನೆಗೆತದ ಪ್ರಯಾಣವೋ ಆಗಬಹುದು. ನ್ಯೂರೋಸೈಂಟಿಸ್ಟ್ಸ್ ಓದುವ ಪ್ರಕ್ರಿಯೆಯ ಆಂತರಿಕ ಸಂವೇದನೆಗಳನ್ನು “ಮನಸ್ಸಿನ ಅಂತರಿಕ್ಷದಲ್ಲಿ ಸಾಗುವ  ಚಲನೆರಹಿತ ಸಾಗುವಿಕೆ” ಎಂದು ದಾಖಲಿಸಿದ್ದಾರೆ. ನೀವು ಒಮ್ಮೆ ನಿಮ್ಮ ಓದನ್ನು ಮುಗಿಸಿದ್ದೇ, ಈ ಚಲನೆರಹಿತ ಸಾಗುವಿಕೆಯ ಉದ್ದಕ್ಕೂ ನೀವು ಸಾಗಿಬಂದ ಹಾದಿಯ ಸ್ಪಷ್ಟಚಿತ್ರವನ್ನು ಆ ಓದು ನಿಮ್ಮ ಮನಸ್ಸಿನಲ್ಲಿ ಉಳಿಸಿ ಹೋಗಿರುತ್ತದೆ. ಅಲ್ಲೊಂದು ನದಿ, ಜುಂಯೆಂದು ಸಾಗಿದ ರೋಲರ್ ಕೋಸ್ಟರ್, ಅಲೆಗಳು.

ಇದೆಲ್ಲ ಒತ್ತಟ್ಟಿಗಿರುತ್ತ, ನನ್ನೊಳಗಿನ ಬರಹಗಾರ ಎರಡು ವಿಚಾರಗಳ ಬಗ್ಗೆ ಯೋಚಿಸುತ್ತಾನೆ.  ಮೊದಲನೆಯದು, ಮೇಲ್ಮೈ, ಬಣ್ಣ ಮುಂತಾದ ದೃಶ್ಯ ಸಂಗತಿಗಳ ಬಗ್ಗೆ ಅರಿತಿರುವುದು ಅಥವಾ ದಾರಗಳ ಬಣ್ಣ ಗಮನಿಸಿಕೊಂಡು ಬಟ್ಟೆಯ ವರ್ಣವಿನ್ಯಾಸದ ಕಲ್ಪನೆಗೆ ತಲುಪುವುದು, ಇದು ಬರೆಯುವಷ್ಟೇ ಹೊಸ ವಿನ್ಯಾಸಗಳ ಎಷ್ಟೊಂದು ಕಿಟಕಿಗಳನ್ನು ನಮ್ಮೆದುರು ತೆರೆಯುತ್ತ ಹೋಗುತ್ತದೆ ಎನ್ನುವುದು. ಟೆಕ್ಸ್ಟ್ (ಪಠ್ಯ) ಎನ್ನುವ ಶಬ್ದ ಬಂದಿದ್ದು Texere ಎಂಬ ಶಬ್ದದಿಂದ, ಕೊನೆಗೂ. ಅದರ ಅರ್ಥ, ನೇಯುವುದು. ಬಳಿಕ ನಾವು ನಮ್ಮ ಶಬ್ದಗಳ ಮೂಲಕ ಕೆತ್ತುವ ಹೊಸ ಹಾದಿಗಳ ಬಗ್ಗೆ ಹೆಚ್ಚು ಪ್ರಜ್ಞಾವಂತರಾಗಬಹುದು, ಉದ್ದೇಶ ಸ್ಪಷ್ಟವಿದ್ದು, ಹೊಸ ಹೊಸ ಸಾಧ್ಯತೆಗಳನ್ನು ಪ್ರಯತ್ನಿಸುವ, ಪ್ರಯೋಗಗಳನ್ನು ಮಾಡುವ ಕುರಿತು ಯೋಚಿಸಬಹುದು.

(ಮುಂದಿನ ಸಂಧಾನ : 1.5.2022)

ಹಿಂದಿನ ಸಂಧಾನ : Literature: ಅನುಸಂಧಾನ; ಸಂಪಾದಕರು ಕೊಟ್ಟ ಒಂದು ಶಬ್ದ, ಪ್ರಶ್ನೆಯಿಂದ ಎಲೆನಾ ಅಂಕಣ ಸಿದ್ಧವಾಗುತ್ತಿತ್ತು

ಪ್ರತಿಕ್ರಿಯೆಗಾಗಿ : tv9kannadadigital@gmail.com

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ