ನಿಮ್ಮ ಟೈಮ್​ಲೈನ್ : ಅದ್ವೈತದಲ್ಲಿರುವುದು ಬರೀ ಚೈತನ್ಯ! ಇನ್ನು ಹಿಂದೂಮುಸ್ಲಿಂ, ಗಂಡುಹೆಣ್ಣು ಎಲ್ಲಿ ನುಸಳಬೇಕು ಮಣ್ಣು?

ನಿಮ್ಮ ಟೈಮ್​ಲೈನ್ : ಅದ್ವೈತದಲ್ಲಿರುವುದು ಬರೀ ಚೈತನ್ಯ! ಇನ್ನು ಹಿಂದೂಮುಸ್ಲಿಂ, ಗಂಡುಹೆಣ್ಣು ಎಲ್ಲಿ ನುಸಳಬೇಕು ಮಣ್ಣು?
ಡಾ. ಗಿರಿಜಾ ಶಾಸ್ತ್ರಿ

Dr. Girija Shastri : ಪ್ರಿಯ ಬಂಧು, ನಿನ್ನ ಅಭಿಪ್ರಾಯ ಭೇದವನ್ನು ನೇರ ತಿಳಿಸು, ಬಾ... ಅಖಾಡಕ್ಕೆ ಇಳಿ. ನೇರ ಮುಖಾಮುಖಿಯಾಗು. "ತೆಗೆದುಕೋ ನಿನ್ನ ಕೈದುವನು!" ನನಗಂತೂ ಈ ಲೇಖನಿಯೆಂಬ ಕೈದು ಲಾಗಾಯ್ತಿನಿಂದ ನನ್ನ ಜೊತೆಗಿದೆ. ನನ್ನ ಉಸಿರಾಗಿದೆ. ಅದು ಒಳಗಿದ್ದರೆ ಜೀವ, ಹೊರ ಹೋದರೆ ಶವ!

ಶ್ರೀದೇವಿ ಕಳಸದ | Shridevi Kalasad

|

Apr 16, 2022 | 11:24 AM

ನಿಮ್ಮ ಟೈಮ್​ಲೈನ್ | Nimma Timeline : ಪ್ರಿಯ ಬಂಧು, ಸಾಹಿತ್ಯದ ಪ್ರಕಾರಗಳಲ್ಲಿ ಆತ್ಮಚರಿತ್ರೆಯೆಂಬ ಪ್ರಕಾರವೂ ಒಂದಿದೆ ಎಂದು ನಿನಗೆ ಗೊತ್ತಿರಬಹುದು. ಇದರ ಗುಣಲಕ್ಷಣ, ಸ್ವರೂಪಗಳನ್ನು ಕಾದಂಬರಿ ಮತ್ತು ಪ್ರಬಂಧದ ನಡುವೆ ಗುರುತಿಸಬಹುದು. ಹೆಚ್ಚು ವಾಸ್ತವ ಸ್ವಲ್ಪ ಕಾಲ್ಪನಿಕತೆ. ಕಾಲ್ಪನಿಕತೆ ಎಂದರೆ ಸುಳ್ಳಲ್ಲ. ಸ್ವಲ್ಪ ಅಲಂಕಾರಿಕವಾಗಿ ಹೇಳುವ ಸತ್ಯ. ಸುಳ್ಳಿನ ಮೂಲಕ ಹೇಳುವ ಸತ್ಯ. ಇದೇ ಅದರ ಸೌಂದರ್ಯ. ಆತ್ಮಚರಿತ್ರೆಯೆಂದರೆ ಇದು ಪ್ರೇತಾತ್ಮಚರಿತ್ರೆಯಲ್ಲ! ಪ್ರೇತ ಯಾವಾಗಲೂ ಒಂಟಿ. ಜೀವಂತವಾಗಿರುವವರಿಗೆ ಕಾಟ ಕೊಟ್ಟು ತೃಪ್ತಗೊಳ್ಳುವ ಅತೃಪ್ತಜೀವ. ಆದರೆ ಆತ್ಮಚರಿತ್ರೆಯಲ್ಲಿ ಇರುವ ಆತ್ಮ, ಒಂಟಿಯಲ್ಲ ಅದು ದೇಹಿಯಾದದ್ದು. ಅದು ಕುಟುಂಬ ಮತ್ತು ಸಮಾಜದ ಮೂಲಕವೇ ತನ್ನ ಅಸ್ತಿತ್ವವನ್ನು ಸ್ಥಾಪಿಸುತ್ತದೆ. ಹೀಗೆ ಸ್ಥಾಪಿಸುವಾಗ ಅಲ್ಲಿ ದೇಹಾತ್ಮಗಳ ಉರವಣೆ ಇರುತ್ತದೆ. ಈ ಉರವಣೆಗಳನ್ನು ಹೇಳಿಕೊಳ್ಳುವಾಗ ನೀನೂ, ನಿನ್ನ ಅಜ್ಜನೂ ಕ್ವಚಿತ್ತಾಗಿ ಹಾದು ಹೋಗಬಹುದು. ಯಾಕೆಂದರೆ ನಿನ್ನಜ್ಜ ನನ್ನಜ್ಜನೇ ಆಗಿರುತ್ತಾನಲ್ಲಾ? ನೀನೇ ನಾನಾಗಿರುತ್ತೇನಲ್ಲ? ಡಾ. ಗಿರಿಜಾ ಶಾಸ್ತ್ರಿ, ಲೇಖಕಿ (Girija Shastri)

ಈಗ ಹೇಳು ನನ್ನ ಆತ್ಮಕಥಾನಕವನ್ನು ಓದಿ ನಿನಗೆ ತೀವ್ರವಾದ ನೋವಾಗಿದೆ ಎಂದರೆ ಅದಕ್ಕೇನಾದರೂ ಅರ್ಥವಿದೆಯೇ? ಹಾಗೆ ಆಗಿದೆಯೆಂದರೆ ನಿನಗೆ ಆತ್ಮಚರಿತ್ರೆಯ ಪ್ರಕಾರದ ಬಗ್ಗೆಯೇ ಅಜ್ಞಾನವಿರಬೇಕು! ಹೀಗೆ ನಿನಗೆ ಗೊತ್ತಿಲ್ಲದ ವಿಷಯದ ಮೇಲೆ ಪ್ರತಿಕ್ರಿಯಿಸುವ ಹಕ್ಕು ನಿನಗಿದೆ ಎಂದು ಎನಿಸುತ್ತದೆಯೇ? ನಿನ್ನ ಯಾವ ಸಾಮರ್ಥ್ಯದ ಮೇಲೆ ನನ್ನ ಬರಹಗಳನ್ನು ಆಕ್ಷೇಪಿಸುತ್ತೀ? ನಲವತ್ತು ವರುಷಗಳಿಂದ ನಾನು ಇದಕ್ಕೆ ಅಲ್ಪ ಸ್ವಲ್ಪ ಮಣ್ಣು ಹೊತ್ತವಳು, ಈಗಲೂ ಹೊರುತ್ತಿರುವವಳು! ನನಗೆ ನಿಜವಾಗಿ ಇದರ ಅಆಇಈ ಗೊತ್ತಿಲ್ಲ ಎನ್ನುತ್ತೀಯ?

ಕಾಲವೂ ಈ ಫೇಸ್ ಬುಕ್ ಎಂಬ ಸಮುದ್ರದ ಒಳಗೆ ಗರ್ಕಾಗಿರುವ ನಾನೇ ಮುಖವಿಲ್ಲದವಳು. ಇನ್ನು, ಇದರ ಪರಿಚಯವೇ ಇಲ್ಲದೆ ಹೊರಗೇ ಉಳಿದಿರುವ ನೀನು? ಯಾರೋ ಚುಗಲಿ ಖೋರರು ( ಚಾಡಿ) ನನ್ನ ಗೋಡೆ ಹಾರಿ ಬಂದು ಕದ್ದು ಓದಿ ನಿನಗೆ ತಿಳಿಸಿ… ನಾನು ಏನು ಬರೆಯುತ್ತೇನೆ ನನ್ನ ಗೋಡೆಯಮೇಲೆ ಎಂದು ಎಂದಾದರೂ ನೀನು ಗಮನಿಸಿದ್ದೀಯ? ಒಂದಾದರೂ ಕಾಮೆಂಟ್ ಹಾಕಿದ್ದೀಯ? ನಿನಗೆ ನಿಜವಾಗಿ ನನ್ನ ಬಗ್ಗೆ ಕಾಳಜಿ ಇರುವುದಾದರೆ ನಿನ್ನ ಅಭಿಪ್ರಾಯ ಭೇದವನ್ನು ನೇರ ತಿಳಿಸು, ಬಾ.. ಅಖಾಡಕ್ಕೆ ಇಳಿ. ನೇರ ಮುಖಾಮುಖಿಯಾಗು. “ತೆಗೆದುಕೋ ನಿನ್ನ ಕೈದುವನು!” ನನಗಂತೂ ಈ ಲೇಖನಿಯೆಂಬ ಕೈದು ಲಾಗಾಯ್ತಿನಿಂದ ನನ್ನ ಜೊತೆಗಿದೆ. ನನ್ನ ಉಸಿರಾಗಿದೆ. ಅದು ಒಳಗಿದ್ದರೆ ಜೀವ, ಹೊರ ಹೋದರೆ ಶವ!

ಈ ಕೈದುವಿನಿಂದ ಕೊಚ್ಚಿಕೊಲ್ಲುವುದು ಅನ್ಯರನ್ನು ನೋಯಿಸುವುದು ನನ್ನ ಉದ್ದೇಶವಲ್ಲ. ನನ್ನದು ಬುದ್ಧನ ಮಾರ್ಗ, ಸೌಹಾರ್ದದ ಮಾರ್ಗ. ಅಂಗುಲಿಮಾಲನನ್ನು ಬುದ್ಧ ಕೊಚ್ಚಿಕೊಂದು ಬಿಡಬಹುದಿತ್ತು (ಅದೇನು ಕಲ್ಲಂಗಡಿ ಹಣ್ಣೇ ಕೊಚ್ಚಿ ಬಿಸಾಕಲು?) ಅವನಿಗೇತರ ಭಯ. ಯಾವ ಕಷ್ಟ? ಆದರೆ ಬುದ್ಧ ಹಾಗೆ ಮಾಡಲಿಲ್ಲ.

ಇದನ್ನೂ ಓದಿ : Ali Akbar Khan Birth Centenary: ನಿಮ್ಮ ಟೈಮ್​ಲೈನ್; ‘ಪುರುಸೊತ್ತು ಸಿಗಲೆಂದು ತಂತಿ ತುಂಡರಿಸುವುದನ್ನು ಕಲಿತೆ!’

ಅವನನ್ನು ಭಿಕ್ಷುವಾಗಿ ಪರಿವರ್ತಿಸಿದ. ಆನಂದದ ಪ್ರತೀಕವಾಗಿಸಿದ. ಈ ಆನಂದ, ಸೌಹಾರ್ದದ ಆನಂದ, ಸಹಬಾಳ್ವೆಯ ಆನಂದ. ನನ್ನ ಈ ಕೈದುವಿನ‌ ಉದ್ದೇಶವೂ ಅದೇ ಆಗಿದೆ. ನನ್ನ ಉದ್ದೇಶವೆಂದಾಕ್ಷಣ, ನನ್ನ ಅಹಂಕಾರದ ಬೆಲೂನಿಗೆ ಗಾಳಿತುಂಬುವುದಲ್ಲ. ಬದಲಾಗಿ ಅದು ನನ್ನ ಸಾಮಾಜಿಕ ಜವಾಬ್ದಾರಿ.

ನನ್ನ ಬರಹ ನಿನ್ನ ಇಮೇಜ್ ಗೆ ಧಕ್ಕೆ ತಂದಿದೆ ಎಂದರೆ, ನೀನು ಯಾರು? ನಾನು ಯಾರು? ನಾವೇನು ಮದರ್ ತೆರೇಸಾ, ಇಂದಿರಾಗಾಂಧಿಯರೇ, ಜಗತ್ತು ನಮ್ಮತ್ತಲೇ ಸದಾ ನೋಡುತ್ತಿರುತ್ತದೆ ಎನ್ನುವುದಕ್ಕೆ? ಅದಕ್ಕೇನು ಬೇರೆ ಕಸುಬಿಲ್ಲವೇ? ಇಡೀ ಈ ಬ್ರಹ್ಮಾಂಡದಲ್ಲಿ ನಾವು ಧೂಳಿನ ಕಣಗಳಿಗೆ ಸಮಾನವಲ್ಲವೇನೇ? ಸುನಾಮಿಯೋ, ಕಾಡ್ಗಿಚ್ಚೋ, ಅಥವಾ ನಾವೇ ಮೈಮೇಲೆ ಎಳೆದುಕೊಂಡ ಯುದ್ಧವೋ! ಪ್ರಕೃತಿ ಒಂದು ಸಲ ಉಫ್ ಎಂದರೆ ಸಾಕು ನಾಮೋ ನಿಶಾನ್ ಇಲ್ಲದಂತೆ ನಾವು ಹಾರಿಹೋಗಿಬಿಡುತ್ತೇವೆ. ಮನುಷ್ಯನಷ್ಟು volatile ಆದ ಪ್ರಾಣಿ ಇನ್ನೊಂದಿಲ್ಲವೇನೋ! ಅವನಷ್ಟು ಕುದಿತ ಇನ್ನಾವ ಪ್ರಾಣಿಗೆ ಇದೆ.

ಕಲ್ಪಾಂತರ ಸ್ಥಾಯಿಯೇ ಈ ಒಡಲು ಪೇಳಾ ಎಂದು ತನ್ನ ಹೆತ್ತಬ್ಬೆಗೆ ಕರ್ಣ ಕೇಳುತ್ತಾನಲ್ಲಾ? ಆ ಒಂದು ಮಾತು ಸರ್ವದಾ ನನ್ನೊಳಗೆ ಕುದಿಯುತ್ತಿರುತ್ತದೆ. ಪಾಪಿಯ ಹಾಗೆ ನಾನು ನರಳುತ್ತೇನೆ.

ಅದ್ವೈತ ನನಗೆ ಈಚೆಗೆ ಬಹಳ ಪ್ರಿಯವಾಗುತ್ತಿರುವುದಕ್ಕೆ ನನ್ನ ಈ ಪಾಪಪ್ರಜ್ಞೆಯೇ ಕಾರಣವೇನೋ? ಅದ್ವೈತ ಶುಷ್ಕ ವೇದಾಂತವಲ್ಲ. ಅದನ್ನು ಪ್ರಾಯೋಗಿಕವಾಗಿ ಜೀವನದೊಳಗೆ ಹೇಗೆ ಅಳವಡಿಸಬಹುದೆಂದು ತಿಳಿಸಿಕೊಟ್ಟವರು ಸ್ವಾಮಿ ವಿವೇಕಾನಂದರು. ವಿವೇಕಾನಂದರ‌ ಈ ಅಪ್ಲೈಡ್ ಅದ್ವೈತ ವೇ ನನಗೆ ತುಂಬಾ ಇಷ್ಟ. ಅದರಲ್ಲಿ ದೇಹವೇ ಇಲ್ಲ. ಇರುವುದು ಬರೀ ಚೈತನ್ಯ! ಇನ್ನು ಹಿಂದೂ, ಮುಸ್ಲಿಂ-ಗಂಡು, ಹೆಣ್ಣು ಎಲ್ಲಿ ನುಸಳಬೇಕು ಮಣ್ಣು? ನುಸುಳುವುದಕ್ಕೆ ಎರಡಿರಬೇಕಲ್ಲ? There is no second to it. That Thou Art! (ಸರ್ವಪ್ರಿಯಾನಂದ) ನನ್ನ ಐಡಿಯಾಲಜಿಯನ್ನು ರೂಪಿಸುತ್ತಿರುವುದು ಇದೇ. ನನ್ನ ಬರಹದ ಉದ್ದೇಶವೂ ಇದೇ. ಬದುಕಿನಲ್ಲಿ ಅದನ್ನು ಎಷ್ಟರಮಟ್ಟಿಗೆ ಇಳಿಸುತ್ತೇನೋ ಗೊತ್ತಿಲ್ಲ. ಬರಹದಲ್ಲಾದರೂ ಇಳಿಸಬೇಕೆನ್ನುವ ಹಂಬಲ ನನ್ನದು. ಈಗ ಹೇಳು ನಾನು ಬರೆಯಬಾರದೇ? ಇದನ್ನು ಓದಿದ ಮೇಲೂ ನನ್ನ ಬರಹಗಳಿಂದ ನಿನಗೆ ನೋವಾಗುವುದಾದರೆ, ಕ್ಷಮಿಸು ನಾನೇನೂ ಮಾಡಲಾರೆ.

ಇದನ್ನೂ ಓದಿ : Woman Scientist: ನಿಮ್ಮ ಟೈಮ್​ಲೈನ್; ‘ಕೋಪ, ರೋಷ ನನ್ನನ್ನು ಬಡಿದೆಬ್ಬಿಸಿತು’ ಮೂಷಕ ತಜ್ಞೆ ಡಾ. ಶಕುಂತಲಾ ಶ್ರೀಧರ

ಪ್ರತಿಕ್ರಿಯೆಗಾಗಿ : tv9kannadadigital@gmail.com

ಗಮನಿಸಿ: ನಿಮ್ಮ ಟೈಮ್​ಲೈನ್ ಆಗಾಗ ಪ್ರಕಟವಾಗುವ ಈ ಅಂಕಣದಲ್ಲಿ ನಿಮ್ಮ ಫೇಸ್​ಬುಕ್​ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್​ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. tv9kannadadigital@gmail.com

Follow us on

Related Stories

Most Read Stories

Click on your DTH Provider to Add TV9 Kannada