ಮಾರಣಾಂತಿಕ ಗಂಭೀರ ರೋಗದಿಂದ ಬಳಲುತ್ತಿರುವವರಿಗೆ ದಯಾಮರಣ ಹಕ್ಕು: ಕರ್ನಾಟಕ ಸರ್ಕಾರ ಮಹತ್ವದ ಆದೇಶ
ಅತ್ತ ದೀರ್ಘ ಕಾಲದ ರೋಗದಿಂದ ಬದುಕಲೂ ಆಗದೆ ಇತ್ತ ಸಾಯಲೂ ಆಗದೆ ಜೀವನ್ಮರಣ ಸ್ಥಿತಿಯಲ್ಲಿರುವ ರೋಗಿಗಳಿಗೆ ದಯಾಮರಣದ ಹಕ್ಕನ್ನು ನೀಡಿ ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಆ ಮೂಲಕ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನ ಪಾಲಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ದಯಾಮರಣಕ್ಕೆ ಅನುಮತಿ ಪ್ರಕ್ರಿಯೆ ಹೇಗಿರಲಿದೆ ಎಂಬುದೂ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

ಬೆಂಗಳೂರು, ಜನವರಿ 31: ಮಹತ್ವದ ಬೆಳವಣಿಗೆಯೊಂದರಲ್ಲಿ, ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕು ನೀಡಿ ಕರ್ನಾಟಕ ಆರೋಗ್ಯ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ. ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದು, ಚೇತರಿಕೆಯೇ ಕಾಣದೆ ಜೀವನಪೂರ್ತಿ ಸಂಕಷ್ಟ ಅನುಭವಿಸುವ ಸ್ಥಿತಿಯಲ್ಲಿರುವವರಿಗೆ ಈ ಅವಕಾಶ ಕಲ್ಪಿಸಲಾಗಿದೆ. ದಯಾಮರಣಕ್ಕೆ ಅವಕಾಶ ನೀಡುವುದನ್ನು ನಿರ್ಧರಿಸಲು ಇಬ್ಬರು ವೈದ್ಯರನ್ನೊಳಗೊಂಡ ಎರಡು ಮಂಡಳಿಗಳ ಸ್ಥಾಪನೆ ಮಾಡುವ ಬಗ್ಗೆಯೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇದೀಗ ಮಾರಕ ರೋಗದಿಂದ ಬಳಲುತ್ತಿರುವವರಿಗೆ ಸಾಯುವ ಹಕ್ಕನ್ನು ನೀಡುವ ಮೂಲಕ ಕರ್ನಾಟಕ ಆರೋಗ್ಯ ಇಲಾಖೆ ಸುಪ್ರೀಂ ಕೋರ್ಟ್ನ ನಿರ್ದೇಶನ ಜಾರಿ ಮಾಡಿದಂತಾಗಿದೆ.
ದಯಾಮರಣಕ್ಕೆ ಅನುಮತಿ ಪ್ರಕ್ರಿಯೆ ಹೇಗೆ?
ಗಂಭೀರವಾದ ಮತ್ತು ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವವರ ಕುಟುಂಬಸ್ಥರ ಮನವಿ ಮೇರೆಗೆ ವೈದ್ಯರ ತಂಡ ಕಾರ್ಯ ನಿರ್ವಹಿಸಬೇಕು. ಇದಕ್ಕಾಗಿ ಎರಡು ಪ್ರೈಮರಿ ಹಾಗೂ ಸೆಕೆಂಡರಿ ಎಂಬ ಎರಡು ವೈದ್ಯರ ಬೋರ್ಡ್ಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರೈಮರಿ ಬೋರ್ಡ್ನಲ್ಲಿ ಮೂವರು ವೈದ್ಯರು ಇರುತ್ತಾರೆ. ಸೆಕೆಂಡರಿ ಬೋರ್ಡ್ನಲ್ಲಿ ಕೂಡ ಮೂವರು ವೈದ್ಯರು ಇರಲಿದ್ದಾರೆ. ಈ ಪೈಕಿ ಒಬ್ಬರು ಸರ್ಕಾರಿ ವೈದ್ಯರು ಇರುತ್ತಾರೆ.
ರೋಗಿಯ ಕುಟುಂಬಸ್ಥರು ಮಾಡಿದ ಮನವಿಯನ್ನು ಮೊದಲು ಪ್ರೈಮರಿ ಬೋರ್ಡ್ ಪರಿಶೀಲನೆ ನಡೆಸಿ ವರದಿ ನೀಡುತ್ತದೆ. ನಂತರ ಆ ವರದಿಯನ್ನು ಸೆಕೆಂಡರಿ ಬೋರ್ಡ್ ಪರಿಶೀಲನೆ ನಡೆಸುತ್ತದೆ. ಬಳಿಕ ಕೋರ್ಟ್ಗೆ ವರದಿಯ ಪ್ರತಿ ನೀಡಲಾಗುತ್ತದೆ. ಕೋರ್ಟ್ ಅನುಮತಿ ನೀಡಿದ ಬಳಿಕ ರೋಗಿಯ ಲೈಫ್ ಸಪೋರ್ಟ್ ಸಿಸ್ಟಮ್ ಅನ್ನು ವೈದ್ಯರು ತೆಗೆಯುತ್ತಾರೆ.
ಸುಪ್ರೀಂ ಕೋರ್ಟ್ ಏನು ಹೇಳಿತ್ತು?
ತಾವು ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲೇ ಸರಿಸುಮಾರು 42 ವರ್ಷಗಳ ಕಾಲ ಜೀವಚ್ಛವದಂತೆ ಬದುಕಿದ ಅರುಣಾ ಅರುಣಾ ಶಾನಭಾಗ್ ಅವರ ದಯಾಮರಣ ಅರ್ಜಿಯ ಕುರಿತ ತೀರ್ಪಿನ ವೇಳೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿತ್ತು. ದಯಾಮರಣ ನೀಡುವ ವಿಚಾರವಾಗಿ ಮಾರ್ಗದರ್ಶಕ ಸೂತ್ರಗಳನ್ನು ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.
ಇದನ್ನೂ ಓದಿ: ನೀವು 35 ರಿಂದ 40 ವರ್ಷ ವಯಸ್ಸಿನವರಾಗಿದ್ದರೆ, ಈ ವಿಷಯಗಳನ್ನು ನೆನಪಿನಲ್ಲಿಡಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:02 pm, Fri, 31 January 25