ಪಠ್ಯ ಕೈಬಿಟ್ಟರಷ್ಟೇ ಸಾಲದು, ಆ ಲೇಖಕನಿಗೆ ಗುಂಡು ಹೊಡೆಯಬೇಕು ಎಂದ ಪ್ರಮೋದ್ ಮುತಾಲಿಕ್
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕದಲ್ಲಿನ ರಾಷ್ಟ್ರವಿರೋಧಿ ವಿಷಯದ ಕುರಿತು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಠ್ಯದಲ್ಲಿನ ಅವಮಾನಕರ ವಿಷಯಗಳನ್ನು ಖಂಡಿಸಿರುವ ಅವರು, ಲೇಖಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ವಿವಾದವು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಧಾರವಾಡ, ಜನವರಿ 31: ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ (Karnataka University) ಬಿಎ ಪದವಿ ಪುಸ್ತಕದಲ್ಲಿನ ಪಠ್ಯ ಕೈಬಿಟ್ಟರಷ್ಟೇ ಸಾಲದು, ಸಂಬಂಧಿಸಿದವರ ಮೇಲೆ ಕ್ರಮ ಆಗಬೇಕು. ಆ ಲೇಖಕನಿಗೆ ಗುಂಡು ಹೊಡೆಯಬೇಕು. ಭಾರತ ಮಾತೆಯ ಬಗ್ಗೆ ಅಪಮಾನ ಮಾಡಿದವರಿಗೆ ಕ್ಷಮೆ ಇಲ್ಲ. ಅಕ್ಷಮ್ಯ ಅಪರಾಧ ಆಗಿದೆ. ಹೀಗಾಗಿ ಕ್ರಮ ಆಗಲೇಬೇಕು. ಇಲ್ಲದೇ ಹೋದಲ್ಲಿ ಹೋರಾಟ ಮುಂದುವರೆಯುತ್ತದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಾಗ್ದಾಳಿ ಮಾಡಿದ್ದಾರೆ.
ಕವಿವಿಯಲ್ಲಿ ನಡೆದ ಪುಷ್ಪ ನಮನ ಕಾರ್ಯಕ್ರಮ ಬಳಿಕ ಮಾತನಾಡಿದ ಅವರು, ಕವಿವಿಯಲ್ಲಿ ಅತ್ಯಂತ ಅವಮಾನಕರ ಘಟನೆ ಆಗಿದೆ. ಇದೊಂದು ಕಳಂಕದ ರೀತಿಯ ಘಟನೆ. ಬೆಳಗು-1 ರ ಪಠ್ಯ ವಿವಾದ ಆಗಿದೆ. ಭಾರತ ಮಾತಾ ಕೀ ಜೈ ಶಬ್ದಕ್ಕೆ ಅಪನಂಬಿಕೆ ಮೂಡಿಸುವ ಪಾಠ ಹಾಕಿದ್ದಾರೆ. ನಾನು ಈ ಸಂಬಂಧ ವಿಸಿ ಅವರಿಗೂ ಮನವಿ ಕೊಟ್ಟಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ವಿವಾದಕ್ಕೀಡಾದ ಧಾರವಾಡ ವಿವಿ ಕನ್ನಡ ಪಠ್ಯ ಪುಸ್ತಕ: ಎಡಪಂಥೀಯ ಚಿಂತನೆ ಹೇರಿದ ಆರೋಪ
ಪಾಠಗಳನ್ನು ನಾಲ್ಕು ಜನ ಪರಿಷ್ಕರಣೆ ಮಾಡುತ್ತಾರಂತೆ. ಸಂಪಾದಕೀಯ ಮಂಡಳಿ ಇದೆ. ಆ ನಾಲ್ಕು ಜನರ ಕಣ್ಣಿಗೆ ಇದು ಗೊತ್ತಾಗಲಿಲ್ಲವಾ? ಈ ರೀತಿಯ ಅಪಚಾರ ಮಹಾಅಪರಾಧ. ಇದು ದೇಶದ್ರೋಹಕ್ಕೆ ಸಮಾನವಾಗಿರೋದು. ಇದು ತುಕಡೆ ಗ್ಯಾಂಗ್ನ ಕೆಲಸ. ಎಲ್ಲ ವಿವಿಗಳಲ್ಲಿ ತುಕಡೆ ಗ್ಯಾಂಗ್ನವರು ಇದ್ದಾರೆ. ಎಲ್ಲ ಕಡೆ ಈ ರೀತಿಯ ವಿಕೃತವಾದಿಗಳು ಇದ್ದಾರೆ. ಅಂತಹ ಒಬ್ಬ ಮಾತ್ರವಲ್ಲ, ಒಂದು ತಂಡ ಕವಿವಿದಲ್ಲಿಯೂ ಇದೆ. ಇವರದ್ದು ಚೀನಾ ಡಿಎನ್‌ಎ. ಇವರ ಮಾನಸಿಕತೆ ಕಂಡು ಹಿಡಿಯಬೇಕು ಎಂದು ಕಿಡಿಕಾರಿದ್ದಾರೆ.
ಭಾರತ ಮಾತಾ ಕೀ ಜೈ ಅಂದರೆ ಏಕತೆ. ಇದು ಯಾವುದೇ ಜಾತಿ ಸೂಚಕ ಅಲ್ಲ. ಯಾವುದೇ ಭಾಷಾ ಸೂಚಕ ಅಲ್ಲ. ತಾಯಿ ಬಗ್ಗೆಯೇ ಅಪನಂಬಿಕೆಯಾ? ತಾಯಿ ಬಗ್ಗೆಯೇ ಅಪಪ್ರಚಾರವಾ? ಇದು ಬಹಳ ದೊಡ್ಡ ಅಪರಾಧ. ರಾಜ್ಯಪಾಲರಿಗೂ ಕ್ರಮಕ್ಕೆ ಆಗ್ರಹಿಸುತ್ತೇವೆ ಎಂದು ಹೇಳಿದ್ದಾರೆ.
ಯತೀಂದ್ರ ಇನ್ನೂ ಬಚ್ಚಾ
ಹಿಂದೂ ಮೂಲಭೂತವಾದಿಗಳು ಉಗ್ರರೆಂದು ಯತೀಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿದ್ದು, ಸಿದ್ದರಾಮಯ್ಯನವರ ಮಗ ಡಾ. ಯತೀಂದ್ರ ಕರ್ನಾಟಕಕ್ಕೆ ಇನ್ನೂ ಬಚ್ಚಾ. ಹಿಂದೂ, ಹಿಂದೂತ್ವದ ಬಗ್ಗೆ ಏನೂ ಗೊತ್ತಿಲ್ಲದ ಬಚ್ಚಾ. ಈಗ ಹಿಂದೂ ಮೂಲಭೂತವಾದಿಗಳ ಬಗ್ಗೆ ಪದ ಬಳಕೆ ಮಾಡಿದ್ದಾರೆ. ಅದನ್ನು ವಾಪಸ್ ಪಡೆಯಬೇಕು. ಹಿಂದೂ ಎಂದೂ ಉಗ್ರವಾದಿಯಾಗಲು ಸಾಧ್ಯವಿಲ್ಲ, ಎಂದಿಗೂ ಉಗ್ರವಾದಿ ಆಗಿಲ್ಲ. ಮುಂದೆಯೂ ಆಗುವುದಿಲ್ಲ ಎಂದರು.
ಇದನ್ನೂ ಓದಿ: ಆಕ್ರೋಶ ಬೆನ್ನಲ್ಲೇ ವಿವಾದಿತ ಪಠ್ಯ ವಾಪಸ್ ಪಡೆದ ಕರ್ನಾಟಕ ವಿವಿ: ಪರೀಕ್ಷೆ ಮುಂದೂಡಿಕೆ
ಉಗ್ರವಾದಿ ಶಬ್ಧದ ಅರ್ಥ ಗೊತ್ತಿದೆಯಾ? ನಿಮ್ಮ ಅಪ್ಪ ಸಿಎಂ ಅಂತಾ ಏನು ಬೇಕಾದ್ದು ಮಾತನಾಡಬಹುದಾ? ನಾಲಿಗೆ ಬಿಗಿ ಹಿಡಿದು ಮಾತನಾಡಿ. ಈ ರೀತಿ ಮಾತನಾಡುವುದನ್ನು ನಿಲ್ಲಿಸಿ. ಇಲ್ಲವಾದರೆ ಜನ ಚಪ್ಪಲಿಯಿಂದ ಹೊಡೆಯುತ್ತಾರೆ. ನೀವು ಹಿಂದೂವಾಗಿದ್ದಕ್ಕೆ ಬದುಕುಳಿದಿದ್ದೀರಾ. ಹಿಂದೂ ಉಗ್ರವಾದಿ ಆಗಿದ್ದರೆ ನೀವೂ ಬದುಕುತ್ತಿರಲಿಲ್ಲ. ಏನೂ ಬೇಕಾದ್ದು ಮಾತನಾಡುವುದು ಸರಿಯಲ್ಲ. ತಮ್ಮ ಹೇಳಿಕೆ ವಾಪಸ್ ಪಡೆಯಬೇಕು. ಇಲ್ಲಿದೇ ಹೋದಲ್ಲಿ ಯತೀಂದ್ರ ಭೇಟಿ ನೀಡುವ ಕಡೆಯಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ವಾಗ್ದಾಳಿ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.