ವಿವಾದಕ್ಕೀಡಾದ ಧಾರವಾಡ ವಿವಿ ಕನ್ನಡ ಪಠ್ಯ ಪುಸ್ತಕ: ಬಲಪಂಥೀಯ ಚಿಂತನೆ ಹೇರಿದ ಆರೋಪ
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ "ಬೆಳಗು -1" ಎಂಬ ಕನ್ನಡ ಪಠ್ಯಪುಸ್ತಕದಲ್ಲಿ ಬಲಪಂಥೀಯ ಚಿಂತನೆಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿ ಹಿರಿಯ ನ್ಯಾಯವಾದಿ ಅರುಣ ಜೋಶಿ ಕುಲಪತಿಗಳಿಗೆ ಎಚ್ಚರಿಕೆ ಪತ್ರ ಬರೆದಿದ್ದಾರೆ. ಪುಸ್ತಕದಲ್ಲಿ ರಾಷ್ಟ್ರೀಯತೆ ಮತ್ತು ಭಾರತ ಮಾತೆಯ ಚಿತ್ರಣದ ಬಗ್ಗೆ ವಿವಾದಾತ್ಮಕ ವಿಷಯಗಳಿವೆ ಎಂದು ಅವರು ಪ್ರತಿಪಾದಿಸಿದ್ದು, ಕೋರ್ಟ್ ಮೊರೆ ಹೋಗುವುದಾಗಿಯೂ ತಿಳಿಸಿದ್ದಾರೆ. ಏನಿದು ವಿವಾದ ಎಂಬ ವಿವರ ಇಲ್ಲಿದೆ.
ಧಾರವಾಡ, ಜನವರಿ 23: ಧಾರವಾಡದ ಕರ್ನಾಟಕ ವಿವಿ ಪಠ್ಯ ಈಗ ವಿವಾದಕ್ಕೆ ಗುರಿಯಾಗಿದೆ. ವಿವಿಯ ಪ್ರಸಾರಂಗಾದಿಂದ ಮುದಿತ್ರವಾಗಿರುವ ವಿವಿಯ ಪದವಿ ಪುಸ್ತಕ ‘‘ಬೆಳಗು -1’’ರಲ್ಲಿ ಎಡವಟ್ಟಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಿಎ, ಬಿ ಮ್ಯೂಸಿಕ್, ಬಿಎಫ್ಎ, ಬಿಎಸ್‌ಡಬ್ಲ್ಯೂ, ಬಿವಿಎ ಪದವಿಗಳ ಪ್ರಥಮ ಸೆಮಿಸ್ಟರ್ ಕನ್ನಡ ಪಠ್ಯ ಪುಸ್ತಕದಲ್ಲಿ ಬಲಪಂಥೀಯ ಚಿಂತನೆ ಹೇರಲಾಗಿದೆ ಎಂದು ಧಾರವಾಡದ ಹಿರಿಯ ನ್ಯಾಯವಾದಿ ಅರುಣ ಜೋಶಿ ಆರೋಪಿಸಿದ್ದಾರೆ.
ರಾಷ್ಟ್ರ ಚಿಂತನೆಯ ಮಹತ್ವ ಹೇಳುವ ಎನ್ಇಪಿ ಪದ್ಧತಿ ಅನ್ವಯ ಮುದ್ರಣಗೊಂಡಿರುವ, ಅನೇಕ ವಿಷಯ ತಜ್ಞರು ಪರಿಷ್ಕರಿಸಿರುವ ಮಹತ್ವದ ಪಠ್ಯ ಪುಸ್ತಕವೇ ಈಗ ವಿವಾದಕ್ಕೆ ಗುರಿಯಾಗಿದೆ.
ವಿವಾದವೇನು?
ಪುಸ್ತಕದಲ್ಲಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವುದರ ಜತೆಗೆ ಕೋಮು ದ್ವೇಷ ಹುಟ್ಟಿಸುವ ರೀತಿಯಲ್ಲಿ ಪಠ್ಯ ಅಳವಡಿಸಲಾಗಿದೆ ಎಂದು ನ್ಯಾಯವಾದಿ ಅರುಣ ಜೋಶಿ ಆರೋಪಿಸಿದ್ದಾರೆ. ಈ ಸಂಬಂಧ ವಿವಿ ಕುಲಪತಿಗೆ ಎಚ್ಚರಿಕೆಯ ಪತ್ರವನ್ನೂ ರವಾನಿಸಿದ್ದು, ಪಠ್ಯ ವಾಪಸ್ ಪಡೆಯಲು ಆಗ್ರಹಿಸಿದ್ದಾರೆ. ಇಲ್ಲದೇ ಹೋದಲ್ಲಿ ಕೋರ್ಟ್ನಲ್ಲಿ ದಾವೆ ಹೂಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಪಠ್ಯ ಪುಸ್ತಕ ವಿವಾದಕ್ಕೆ ಕಾರಣವೇನು?
ಪುಸ್ತಕದ 4ನೇ ಅಧ್ಯಾಯದಲ್ಲಿ ‘ರಾಷ್ಟ್ರೀಯತೆಯ ಆಚರಣೆಯ ಸುತ್ತ’ ಎಂಬ ಲೇಖನವಿದ್ದು, ಇದರ ಬಗ್ಗೆಯೇ ಅರುಣ ಜೋಶಿ ಆಕ್ಷೇಪ ವ್ಯಕ್ತಪಡಿಸಿರುವುದು. ‘ಭಾರತಾಂಬೆಯ ಕಲ್ಪನೆ’ ಎಂಬ ಉಪ ಅಧ್ಯಾಯಯದಲ್ಲಿ ‘ಭಾರತ ಮಾತೆಯ ಚಿತ್ರವು ಹಿಂದೂ ಮಾತೆಯ ಚಿತ್ರವಾಗಿದೆ. ಇದು ಒಂದು ವರ್ಗ ಸಮುದಾಯದ ಕಲ್ಪನೆ ಆಗಿದೆ’ ಎಂದು ಉಲ್ಲೇಖಿಸಲಾಗಿದ್ದು, ಇದನ್ನು ಇತರರು ಒಪ್ಪುವಂತೆ ಒತ್ತಾಯಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರತಿ ಸಭೆ, ಸಮಾರಂಭಗಳಲ್ಲಿ ಭಾರತ್ ಮಾತಾ ಕೀ ಜೈ ಎಂದು ಕೂಗಿದಾಗ ಉಳಿದವರೂ ಜೈ ಎನ್ನುತ್ತಾರೆ. ಈ ಜೈ ಎನ್ನುವ ಕಲ್ಪನೆ ಇನ್ನೊಬ್ಬರ ಸೋಲನ್ನು ನೆನಪಿಸುತ್ತದೆ ಎಂದು ಬರೆಯಲಾಗಿದೆ. ಅಲ್ಲದೇ ‘ಭುವನೇಶ್ವರಿ ಕೂಡ ಕೋಮುವಾದಿ ಮಾತೆ ಎನ್ನಲಾಗಿದೆ’. ಮುಸ್ಲಿಮರಿಗೆ ಮೆಕ್ಕಾ ಇರುವಂತೆ ಹಿಂದೂಗಳಿಗೂ ಒಂದು ಪವಿತ್ರ ಕ್ಷೇತ್ರ ಆಯೋಧ್ಯಾ ಇರಲಿ ಎಂದು ಕೆಲ ಪರಿವಾರದವರು ಒತ್ತಾಯಿಸುತ್ತಾ ಬಂದಿದ್ದಾರೆ ಎಂದು ಮುದ್ರಿತವಾಗಿದೆ ಎಂಬುದಾಗಿ ಅರುಣ ಜೋಶಿ ಆರೋಪಿಸಿದ್ದಾರೆ.
ಇದರೊಂದಿಗೆ ಅಲ್ಲಲ್ಲಿ ‘ಪರಿವಾರ’ ಮತ್ತು ‘ಸಂಘ ಪರಿವಾರ’ ಎಂಬ ಶಬ್ದಗಳ ಬಳಕೆ ಮಾಡಲಾಗಿದೆ. ಆ ಮೂಲಕ ಪರೋಕ್ಷವಾಗಿ ಆರ್ಎಸ್ಎಸ್ ಅನ್ನು ಪಠ್ಯದಲ್ಲಿ ಎಳೆದು ತರಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ಕೋರ್ಟ್ ಮೊರೆ ಹೋಗಲು ಕೂಡ ಅರುಣ್ ಜೋಶಿ ನಿರ್ಧರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ