ಪುತ್ರಿಗಾಗಿ ಮಂತ್ರಿ ತ್ಯಾಗ: ಅಂತೆ ಕಂತೆಗಳಿಗೆ ಸ್ಪಷ್ಟನೆ ನಿಡಿದ ಸಚಿವ ಕೆ.ಹೆಚ್. ಮುನಿಯಪ್ಪ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಸಮಾಧಾನಗೊಂಡಿರುವ ಶಾಸಕರು ಹಾಗೂ ನಾಯಕರನ್ನು ಸಮಾಧಾನಪಡಿಸಲು ಸಂಪುಟದಲ್ಲಿ ಕೆಲ ಸಣ್ಣ ಬದಲಾವಣೆ ಮಾಡುವ ಬಗ್ಗೆ ಕಾಂಗ್ರೆಸ್ ವಲಯದಲ್ಲಿ ಚಿಂತನೆ ಆರಂಭಗೊಂಡಿದೆ ಎನ್ನಲಾಗಿದೆ. ಅದರಲ್ಲೂ ಮುಖ್ಯವಾಗಿ ಕೆಎಚ್ ಮುನಿಯಪ್ಪ ಕೈಬಿಟ್ಟು ಪುತ್ರಿ ರೂಪಾಗೆ ಸಚಿವ ಸ್ಥಾನ ನೀಡಲಾಗುತ್ತೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೀಗಾಗಿ ಈ ಬಗ್ಗೆ ಖುದ್ದು ಮುನಿಯಪ್ಪ ಸ್ಪಷ್ಟನೆ ಕೊಟ್ಟಿದ್ದಾರೆ.

ಮುಖ್ಯಾಂಶಗಳು
- ಮುನಿಯಪ್ಪ ಬದಲು ಪುತ್ರಿಗೆ ಸಚಿವಸ್ಥಾನ ಎಂಬ ವಿಚಾರ
- ಸಚಿವ ಮುನಿಯಪ್ಪ ಕಚೇರಿಯಿಂದ ಮಾಧ್ಯಮ ಪ್ರಕಟಣೆ
- ಪುತ್ರಿಗೆ ಸಚಿವ ಸ್ಥಾನ ಬಿಟ್ಟುಕೊಡುತ್ತಾರೆಂಬ ಸುದ್ದಿ ಸುಳ್ಳು, ಈ ವರದಿ ಸತ್ಯಕ್ಕೆ ಬಹಳ ದೂರವಾಗಿದೆ ಎಂದು ಸ್ಪಷ್ಟನೆ
ಬೆಂಗಳೂರು, (ಆಗಸ್ಟ್ 07): ಸಂಪುಟ ಪುನಾರಚನೆ (karnataka Cabinet Expansion) ಬೆನ್ನಲ್ಲೇ ಕರ್ನಾಟಕ ಕಾಂಗ್ರೆಸ್ನಲ್ಲಿ (Karnataka Congress) ಗೊಂದಲಗಳು ಉದ್ಭವಿಸಿವೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶದಿಂದ ಸಚಿವ ಕೆ.ಎಚ್. ಮುನಿಯಪ್ಪ (KH Muniyappa) ಅವರ ಪುತ್ರಿ, ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರಿಗೆ ಸಚಿವ ಸ್ಥಾನ ನೀಡುವ ಪ್ರಯತ್ನವೂ ನಡೆದಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಖುದ್ದು ಸಚಿವ ಕೆಎಚ್ ಮುನಿಯಪ್ಪ ಅವರು ಪ್ರತಿಕ್ರಿಯಿಸಿದ್ದು, ರೂಪಕಲಾ ಶಶಿಧರ್ ರವರಿಗೆ ಸಚಿವ ಸ್ಥಾನವನ್ನು ತ್ಯಾಗ ಮಾಡಲಿದ್ದಾರೆ ಎಂಬ ಸುದ್ದಿಗಳು ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬರುತ್ತಿದೆ.ಈ ವರದಿಯು ಸತ್ಯಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಚಿವ ಕೆಎಚ್ ಮುನಿಯಪ್ಪ ಕಚೇರಿ, ದಲಿತ ಎಡ ಸಮುದಾಯದ ಹಿರಿಯ ಹಾಗೂ ಮುಂಚೂಣಿ ನಾಯಕರಾದ ಕೆ.ಹೆಚ್. ಮುನಿಯಪ್ಪ, ಕಳೆದ 50 ವರ್ಷಗಳ ಸುದೀರ್ಘ ಕಾಲದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ನಾಯಕರಾಗಿ ಪಕ್ಷವನ್ನು ಬಲವರ್ಧನೆಗೊಳಿಸುತ್ತಾ ಬಂದಿದ್ದಾರೆ. ರೂಪಕಲಾ ಶಶಿಧರ್ ರವರಿಗೆ ಸಚಿವ ಸ್ಥಾನವನ್ನು ತ್ಯಾಗ ಮಾಡಲಿದ್ದಾರೆ ಎಂಬ ಸುದ್ದಿಗಳು ಕೆಲವು ದೃಶ್ಯ ಮಾಧ್ಯಮಗಳಲ್ಲಿ ಬರುತ್ತಿದೆ.ಈ ವರದಿಯು ಸತ್ಯಕ್ಕೆ ದೂರವಾಗಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಅಂತ್ಯ ಕಂತೆಗಳಿಗೆ ತೆರೆ ಎಳೆದಿದ್ದಾರೆ.
ಇದನ್ನೂ ನೋಡಿ: ಸಂಪುಟ ವಿಸ್ತರಣೆ ಬೆನ್ನಲ್ಲೇ ಇದೀಗ ಖಾತೆ ಕ್ಯಾತೆ, ಮತ್ತೆ ದಿಲ್ಲಿಯತ್ತ ಡಿಕೆ ಶಿವಕುಮಾರ್
ಇಂದಿರಾ ಗಾಂಧಿಯವರ ಕಾಲದಿಂದ ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಪಕ್ಷವನ್ನು ಕಟ್ಟುತ್ತಾ ಬಂದಿದ್ದಾರೆ. ಇಲ್ಲಿಯವರೆಗೂ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಕುಟುಂಬ ಸಮೇತ ನಿಷ್ಠೆಯನ್ನು ತೋರಿ, ಪಕ್ಷದ ಸಿದ್ಧಾಂತಗಳಿಗೆ ಬದ್ಧರಾಗಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತವಾಗಿ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಕೇಂದ್ರದಲ್ಲಿ ಮೂರು ಬಾರಿ ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಶಂಕರಾನಂದ ಹಾಗೂ ಜಾಫರ್ ಶರೀಫ್ ರವರ ನಂತರ ಮಾನ್ಯ ಕೆ.ಹೆಚ್. ಮುನಿಯಪ್ಪ ರವರ ದಾಖಲೆ ಜಯ ಐತಿಹಾಸಿಕವಾಗಿದೆ.
ದಕ್ಷಿಣ ಭಾರತದ ಬಾಬು ಜಗಜೀವನರಾಮ್ ಎಂದೇ ಖ್ಯಾತರಾಗಿರುವ ಕೆ.ಹೆಚ್. ಮುನಿಯಪ್ಪ ,ಪ್ರಸ್ತುತ ಆಹಾರ ಇಲಾಖೆಯನ್ನು ಉತ್ತಮವಾಗಿ ಮುನ್ನೆಡೆಸುತ್ತಿದ್ದು, ಸಮಾಜ ಕಲ್ಯಾಣ ಇಲಾಖೆ ಖಾತೆಯೊಂದಿಗೆ ಪರಿಶಿಷ್ಟ ಜಾತಿಯ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಖಾತೆ ಬದಲಾವಣೆಗಾಗಿ ಮಾನ್ಯ ಲೋಕಸಭಾ ವಿರೋಧ ಪಕ್ಷದ ನಾಯಕರಾದ ಶ್ರೀ ರಾಹುಲ್ ಗಾಂಧಿಯವರಿಗೆ ಬೇಡಿಕೆ ಇಟ್ಟಿದ್ದಾರೆ. ಸಕರಾತ್ಮ ಸ್ಪಂದನೆಯೊಂದಿಗೆ ಸಮಾಜ ಕಲ್ಯಾಣ ಖಾತೆ ನೀಡುವುದು ಬಹುತೇಕ ಖಚಿತವಾಗಿದೆ. ಮಾಧ್ಯಮಗಳಲ್ಲಿ ಇತ್ತಿಚೀಗೆ ಹರಿದಾಡುತ್ತಿರುವ ಸುದ್ಧಿಗಳು ನೈಜಕ್ಕೆ ದೂರವಾಗಿದ್ದು, ಅವುಗಳನ್ನು ಪರಿಗಣಿಸಿದಿರಲು ಈ ಮೂಲಕ ಕೋರುತ್ತೇವೆ ಎಂದು ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.




