ಆರ್ಥಿಕ ಸಮೀಕ್ಷೆ ಮಂಡನೆ; ಶೇ. 6.8ರವರೆಗೆ ಜಿಡಿಪಿ ಹೆಚ್ಚಳ ನಿರೀಕ್ಷೆ; ಉದ್ಯಮಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಲು ಸಲಹೆ
Economic Survey 2025 report: ಭಾರತದ ಜಿಡಿಪಿ ವೃದ್ಧಿ ದರ 2025-26ರ ಹಣಕಾಸು ವರ್ಷದಲ್ಲಿ ಶೇ. 6.3ರಿಂದ ಶೇ. 6.8 ಇರಬಹುದು ಎಂದು ಆರ್ಥಿಕ ಸಮೀಕ್ಷಾ ವರದಿಯಲ್ಲಿ ಅಂದಾಜು ಮಾಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಇಂದು ಆರ್ಥಿಕ ಸಮೀಕ್ಷಾ ವರದಿಯನ್ನು ಮಂಡನೆ ಮಾಡಿದ್ಧಾರೆ. ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ ನೇತೃತ್ವದಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯಿಂದ ಈ ವರದಿ ತಯಾರಾಗಿದೆ.

ನವದೆಹಲಿ, ಜನವರಿ 31: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ ಆರ್ಥಕ ಸಮೀಕ್ಷಾ ವರದಿಯನ್ನು ಪ್ರಸ್ತುತಪಡಿಸಿದ್ದಾರೆ. ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತ ನಾಗೇಶ್ವರನ್ ನೇತೃತ್ವದಲ್ಲಿ ತಯಾರಾಗಿರುವ 2024-25ರ ಸಾಲಿನ ಆರ್ಥಿಕ ಸರ್ವೇಕ್ಷಣಾ ವರದಿಯಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ಗತಿಯನ್ನು ಗುರುತಿಸುವ ಕೆಲಸ ಮಾಡಲಾಗಿದೆ. ಮುಂಬರುವ ಹಣಕಾಸು ವರ್ಷದಲ್ಲಿ (2025-26) ಭಾರತದ ಆರ್ಥಿಕತೆಯು ಶೇ. 6.3ರಿಂದ ಶೇ. 6.8ರ ಶ್ರೇಣಿಯಲ್ಲಿ ಬೆಳೆಯಬಹುದು ಎಂದು ಈ ಸಮೀಕ್ಷೆಯಲ್ಲಿ ಅಂದಾಜು ಮಾಡಲಾಗಿದೆ. ಸರ್ಕಾರದ ಅಧಿಕೃತ ಅಂದಾಜು ಪ್ರಕಾರ ಆರ್ಥಿಕತೆ ಶೇ. 6.4ರಷ್ಟು ಹೆಚ್ಚಬಹುದು ಎಂದಿತ್ತು. ಆರ್ಥಿಕ ಸಮೀಕ್ಷೆಯೂ ಈ ಅಂದಾಜನ್ನು ಪುಷ್ಟೀಕರಿಸಿದೆ.
ಭಾರತದ ಆರ್ಥಿಕತೆಯಲ್ಲಿನ ಸವಾಲುಗಳು ಮತ್ತು ಶಕ್ತಿಗಳು
ವ್ಯಾಪಾರ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಜಾಗತಿಕ ಅನಿಶ್ಚಿತ ಸ್ಥಿತಿ 2024ರಲ್ಲಿ ಹೆಚ್ಚಿದ್ದುದನ್ನು ಆರ್ಥಿಕ ಸಮೀಕ್ಷೆಯಲ್ಲಿ ಗುರುತಿಸಲಾಗಿದೆ. ವಿಶ್ವ ವ್ಯಾಪಾರ ಅನಿಶ್ಚಿತ ಸೂಚ್ಯಂಕ 2023ರಲ್ಲಿ 8.5 ಇತ್ತು. 2024ರಲ್ಲಿ ಅದು 13.0ಗೆ ಏರಿದೆ. ಇನ್ನು, ಜಾಗತಿಕ ರಾಜಕೀಯ ಅನಿಶ್ಚಿತ ಸ್ಥಿತಿಯ ಸೂಚ್ಯಂಕವು 2023ರಲ್ಲಿ 121.7 ಇದ್ದದ್ದು 2024ರಲ್ಲಿ 133.6ಕ್ಕೆ ಏರಿದೆ ಎಂಬ ಅಂಕಿ ಅಂಶವನ್ನು ವಿವಿಧ ಮೂಲಗಳಿಂದ ಪಡೆದು ಈ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಜಾಗತಿಕ ಅನಿಶ್ಚಿತ ಪರಿಸ್ಥಿತಿಯಲ್ಲೂ ಭಾರತದ ಆರ್ಥಿಕ ಬೆಳವಣಿಗೆ ಉತ್ತಮ ಮಟ್ಟದಲ್ಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Economic Survey 2025: ಆರ್ಥಿಕ ಸಮೀಕ್ಷೆ ಎಂದರೇನು? ಬಜೆಟ್ಗೆ ಮುಂಚೆ ಅದರ ಪ್ರಸ್ತುತಿ ಯಾಕೆ? ಇಲ್ಲಿದೆ ಡೀಟೇಲ್ಸ್
ಭಾರತದಲ್ಲಿ ಹೂಡಿಕೆ, ಅನುಭೋಗದ ಪ್ರಮಾಣ ವೃದ್ಧಿಯಾಗುತ್ತಿದೆ. ಸರಕು ಮತ್ತು ಸೇವಾ ವ್ಯಾಪಾರ ಉತ್ತಮವಾಗಿದೆ. ಬ್ಯಾಂಕಿಂಗ್ ವ್ಯವಸ್ಥೆಯ ಆರೋಗ್ಯ ಉತ್ತಮವಾಗಿದೆ. ಆರ್ಥಿಕ ಚಟುವಟಿಕೆ ವಿಸ್ತಾರ ಸ್ಥಿರವಾಗಿ ಹೆಚ್ಚುತ್ತಿದೆ. 2024-25ರ ಆರ್ಥಿಕ ಸಮೀಕ್ಷಾ ವರದಿಯಲ್ಲಿ ಈ ಮೇಲಿನ ಸಂಗತಿಗಳನ್ನು ಗುರುತಿಸಲಾಗಿದೆ.
ಉದ್ಯಮಗಳಿಗೆ ಹೆಚ್ಚು ಸ್ವಾತಂತ್ರ್ಯದ ಅಗತ್ಯ
ದೇಶದಲ್ಲಿ ಉದ್ಯಮ ವಲಯದಲ್ಲಿ ಕಾನೂನು ಕಟ್ಟಳೆಗಳ ತೀವ್ರತೆ ಕಡಿಮೆ ಮಾಡಿದರೆ ಆರ್ಥಿಕ ಬೆಳವಣಿಗೆಗೆ ಒಳ್ಳೆಯದು. ಉದ್ದಿಮೆಗಳ ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರಬಾರದು. ಉದ್ಯಮಗಳಿಗೆ ಹೆಚ್ಚು ಸ್ವಾತಂತ್ರ್ಯದ ಅವಶ್ಯಕತೆ ಇದೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಅಭಿಪ್ರಾಯಪಡಲಾಗಿದೆ.
ಉನ್ನತ ಶಿಕ್ಷಣ ಕ್ಷೇತ್ರದಲ್ಲೂ ಸರ್ಕಾರದ ಹಸ್ತಕ್ಷೇಪ ಕಡಿಮೆ ಆಗಬೇಕು. ಶಿಕ್ಷಣ ಸಂಸ್ಥೆಗಳು ತಮಗೆ ಬೇಕಾದ ಪಠ್ಯಕ್ರಮ ರಚಿವ ಸ್ವಾತಂತ್ರ್ಯ ಹೊಂದಿರಬೇಕು ಎಂದೂ ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ.
ಆರ್ಥಿಕ ಸಮೀಕ್ಷಾ ವರದಿಯನ್ನು ಓದಲು, ಡೌನ್ಲೋಡ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ:
indiabudget.gov.in/economicsurvey/index.php
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:10 pm, Fri, 31 January 25