AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಲ್ಲೇ ಪ್ಲ್ಯಾನ್​​ ಮಾಡಿ ಫಿಲ್ಮಿ ಸ್ಟೈಲ್​ನಲ್ಲಿ ಪೆಟ್ರೋಲ್​​ ಬಂಕ್ ಸಿಬ್ಬಂದಿ​ ದೋಚಿದ್ದ ಐವರು ಅರೆಸ್ಟ್​

ಮೈಸೂರಿನ ಕಿರುಮುದ್ದನಹಳ್ಳಿ ಪೆಟ್ರೋಲ್ ಬಂಕ್‌ನಲ್ಲಿ ನಡೆದ 'ಫಿಲ್ಮಿ ಸ್ಟೈಲ್' ದರೋಡೆ ಪ್ರಕರಣವನ್ನು ಬಿಳಿಕೆರೆ ಪೊಲೀಸರು ಭೇದಿಸಿದ್ದಾರೆ. ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ದೋಚಿದ ಹಣ ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಡ್ಯ ಜೈಲಿನಲ್ಲಿ ಪರಿಚಯವಾಗಿ ಅಲ್ಲಿಯೇ ದರೋಡೆಗೆ ಸಂಚು ರೂಪಿಸಿದ್ದರು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಸಿಸಿಟಿವಿ ಕ್ಯಾಮೆರಾದಿಂದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.

ಜೈಲಲ್ಲೇ ಪ್ಲ್ಯಾನ್​​ ಮಾಡಿ ಫಿಲ್ಮಿ ಸ್ಟೈಲ್​ನಲ್ಲಿ ಪೆಟ್ರೋಲ್​​ ಬಂಕ್ ಸಿಬ್ಬಂದಿ​ ದೋಚಿದ್ದ ಐವರು ಅರೆಸ್ಟ್​
ದರೋಡೆ ನಡೆದಿದ್ದ ಪೆಟ್ರೋಲ್​​ ಬಂಕ್​Image Credit source: Tv9 Kannada
ರಾಮ್​, ಮೈಸೂರು
| Edited By: |

Updated on: Mar 10, 2026 | 3:34 PM

Share

ಮೈಸೂರು, ಮಾರ್ಚ್​ 10: ಕಿರುಮುದ್ದನಹಳ್ಳಿ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದ್ದ ಫಿಲ್ಮಿ ಸ್ಟೈಲ್ ದರೋಡೆ ಪ್ರಕರಣವನ್ನ ಭೇದಿಸಿರುವ ಬಿಳಿಕೆರೆ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಡೀಸೆಲ್ ಕೇಳುವ ನೆಪದಲ್ಲಿ ಬಂದು ಮಚ್ಚು-ಡ್ರಾಗರ್ ತೋರಿಸಿ ಅಟ್ಟಹಾಸ ಮೆರೆದಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟಲಾಗಿದ್ದು, ದರೋಡೆಗೆ ಇವರು ಸ್ಕೆಚ್​​ ಹಾಕಿದ್ದಿದ್ದು ಮಂಡ್ಯದ ಸೆಂಟ್ರಲ್ ಜೈಲಿನಲ್ಲಿ ಎಂಬ ವಿಷಯವೂ ತನಿಖೆ ವೇಳೆ ಬಯಲಾಗಿದೆ. ಕಳೆದ ತಿಂಗಳು ಫೆಬ್ರವರಿ 12ರಂದು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಿರುಮುದ್ದನಹಳ್ಳಿ ಬಳಿಯ ಇಂಡಿಯನ್ ಆಯಿಲ್ ಬಂಕ್‌ನಲ್ಲಿ ದರೋಡೆ ಮಾಡಿದ್ದ ಐವರ ತಂಡ ಕೊನೆಗೂ ಜೈಲು ಪಾಲಾಗಿದೆ.

​ರಾತ್ರಿ 10 ಗಂಟೆ ಮೇಲೆ ಪಂಪ್ ಆಫ್ ಮಾಡಿ ಸಿಬ್ಬಂದಿ ಹಣ ಎಣಿಸುತ್ತಿದ್ದಾಗ, ಹಳೇ ಮಾಡೆಲ್‌ನ ಸ್ಕೋಡಾ ಕಾರ್‌ನಲ್ಲಿ ಬಂದಿದ್ದ ಐವರು ಕಿರಾತಕರು ಏಕಾಏಕಿ ಕಚೇರಿ ಒಳಗೆ ನುಗ್ಗಿದ್ದರು. ಮಚ್ಚು ಮತ್ತು ಡ್ರಾಗರ್ ತೋರಿಸಿ ಸಿಬ್ಬಂದಿ ಅಜಯ್ ಕುಮಾರ್ ಮತ್ತು ದಿನೇಶ್ ಮೇಲೆ ಹಲ್ಲೆ ನಡೆಸಿ ಹಣ ದೋಚಿದ್ದರು. ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಈ ಫೂಟೇಜ್ ಬೆನ್ನತ್ತಿದ ಪೊಲೀಸರು ಈ ಕೃತ್ಯದ ಪ್ರಮುಖ ಆರೋಪಿ ಮಂಡ್ಯ ಮೂಲದ ಲಕ್ಷ್ಮಣ್ ಸೇರಿ ಚನ್ನಪಟ್ಟಣ ಮತ್ತು ಹಾಸನ ಮೂಲದ ಒಟ್ಟು 5 ಜನರನ್ನು ಬಂಧಿಸಿದ್ದಾರೆ. ಇವರೆಲ್ಲರಿಗೂ ಮಂಡ್ಯ ಜೈಲಿನಲ್ಲಿ ಪರಿಚಯವಾಗಿತ್ತು. ಅಲ್ಲಿಯೇ ಪ್ಲಾನ್ ಮಾಡಿ ಈ ರಾಬರಿ ನಡೆಸಿದ್ದರು ಎಂಬುದು ಕೂಡ ಪೊಲೀಸರಿಗೆ ಗೊತ್ತಾಗಿದೆ. ಬಂಧಿತರಿಂದ ರಾಬರಿ ಮಾಡಿದ್ದ ಹಣ ಮತ್ತು ಕೃತ್ಯಕ್ಕೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ರಿಕವರಿ ಮಾಡಲಾಗಿದೆ.

ಇದನ್ನೂ ಓದಿ: ಅಸಲಿ ಬದಲು ನಕಲಿ ಚಿನ್ನ ಇಟ್ಟು 3 ಲಕ್ಷ ರೂ. ಮೌಲ್ಯದ ಬಂಗಾರ ಕದ್ದ ಕದೀಮರು!

ಪ್ರಮುಖ ಆರೋಪಿ ಲಕ್ಷ್ಮಣ್ ಈ ಹಿಂದೆ ಬೇರೆ ಕೇಸ್‌ನಲ್ಲಿ ಜೈಲು ಸೇರಿದ್ದಾಗ ಉಳಿದ ನಾಲ್ವರ ಪರಿಚಯವಾಗಿತ್ತು. ಜೈಲಿನಿಂದ ಹೊರಬಂದ ಮೇಲೆ ಈ ಗ್ಯಾಂಗ್ ಕಳ್ಳತನಕ್ಕೆ ಸ್ಕೆಚ್ ಹಾಕಿತ್ತು. ಮೊದಲು ಒಬ್ಬ ಬಂದು ನೀರು ಕುಡಿಯುವ ನೆಪದಲ್ಲಿ ಬಂಕ್ ಪರಿಶೀಲನೆ ಮಾಡಿದ್ದ. ನಂತರ ಪೇಟಿಎಂ ಸ್ಕ್ಯಾನರ್ ಫೋಟೋ ತಗೆದುಕೊಂಡು ಹೋಗಿ, ಸ್ವಲ್ಪ ಹೊತ್ತಿನಲ್ಲೇ ಗ್ಯಾಂಗ್ ಕಟ್ಟಿಕೊಂಡು ಬಂದು ಅಟ್ಯಾಕ್ ಮಾಡಿದ್ದ. ಒಟ್ಟಿನಲ್ಲಿ ಬಿಳಿಕೆರೆ ಪೊಲೀಸರ ಚಾಣಾಕ್ಷತನದಿಂದ ಸಿನಿಮೀಯ ದರೋಡೆಕೋರರು ಈಗ ಕಂಬಿ ಎಣಿಸುವಂತಾಗಿದೆ. ಪದೇ ಪದೇ ಇಂತಹ ಘಟನೆಗಳಿಂದ ಬೆಚ್ಚಿಬಿದ್ದಿದ್ದ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us