Sign In

By signing in or creating an account, you agree with Associated Broadcasting Company's Terms & Conditions and Privacy Policy.

Economic Survey 2025: ಆರ್ಥಿಕ ಸಮೀಕ್ಷೆ ಎಂದರೇನು? ಬಜೆಟ್​ಗೆ ಮುಂಚೆ ಅದರ ಪ್ರಸ್ತುತಿ ಯಾಕೆ? ಇಲ್ಲಿದೆ ಡೀಟೇಲ್ಸ್

Union Budget 2025: ಕೇಂದ್ರ ಬಜೆಟ್ ಮಂಡನೆಗೆ ಒಂದು ದಿನ ಮುಂಚೆ ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯ ವರದಿಯನ್ನು ಪ್ರಸ್ತುತಪಡಿಸಲಾಗುತ್ತದೆ. ಫೆಬ್ರುವರಿ 1ರಂದು ಬಜೆಟ್ ಮಂಡಿಸಲಾಗುತ್ತದೆ. ಒಂದು ದಿನ ಮುಂಚೆ, ಅಂದರೆ ಇವತ್ತು ಆರ್ಥಿಕ ಸಮೀಕ್ಷಾ ವರದಿಯ ಮಂಡನೆ ನಡೆಯುತ್ತದೆ. ಮುಖ್ಯ ಆರ್ಥಿಕ ಸಲಹೆಗಾರ ವಿ ಅನಂತನಾಗೇಶ್ವರನ್ ನೇತೃತ್ವದಲ್ಲಿ ಈ ಬಾರಿಯ ಆರ್ಥಿಕ ಸಮೀಕ್ಷೆಯ ವರದಿ ತಯಾರಾಗಿದೆ.

Economic Survey 2025: ಆರ್ಥಿಕ ಸಮೀಕ್ಷೆ ಎಂದರೇನು? ಬಜೆಟ್​ಗೆ ಮುಂಚೆ ಅದರ ಪ್ರಸ್ತುತಿ ಯಾಕೆ? ಇಲ್ಲಿದೆ ಡೀಟೇಲ್ಸ್
ಆರ್ಥಿಕ ಸಮೀಕ್ಷೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 31, 2025 | 6:00 AM

ನವದೆಹಲಿ, ಜನವರಿ 31: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಶುಕ್ರವಾರ ಸಂಸತ್ತಿನಲ್ಲಿ 2024-25ರ ಸಾಲಿನ ಆರ್ಥಿಕ ಸಮೀಕ್ಷೆ ಅಥವಾ ಎಕನಾಮಿಕ್ ಸರ್ವೆ ವರದಿಯನ್ನು ಬಿಡುಗಡೆ ಮಾಡಲಿದ್ದಾರೆ. ಇವತ್ತು ಬೆಳಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನಲ್ಲಿ ಉಭಯ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದು, ಆ ಮೂಲಕ ಬಜೆಟ್ ಅಧಿವೇಶನಕ್ಕೆ ಚಾಲನೆ ಸಿಗಲಿದೆ. ನಂತರ, ಬೆಳಗ್ಗೆಯೇ ಆರ್ಥಿಕ ಸಮೀಕ್ಷೆಯ ವರದಿಯನ್ನು ಸಂಸತ್ತಿನಲ್ಲಿ ಮಂಡನೆ ಮಾಡಲಾಗುತ್ತದೆ. ಫೆಬ್ರುವರಿ 1, ಶನಿವಾರದಂದು ನಿರ್ಮಲಾ ಸೀತಾರಾಮನ್ ಅವರೇ ಮುಂಗಡ ಪತ್ರ ಅಥವಾ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸುತ್ತಾರೆ. ಒಂದು ದಿನ ಮುನ್ನ, ಇವತ್ತು ಆರ್ಥಿಕ ಸಮೀಕ್ಷೆಯ ಪ್ರಸ್ತುತಿ ನಡೆಯುತ್ತದೆ.

ಆರ್ಥಿಕ ಸಮೀಕ್ಷೆ ಏನು?

ಆರ್ಥಿಕ ಸಮೀಕ್ಷೆ ವರದಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯ ನೈಜ ಚಿತ್ರಣವನ್ನು ನೀಡಲಾಗಿರುತ್ತದೆ. ಮಧ್ಯಮಾವಧಿ ಮತ್ತು ದೀರ್ಘಾವಧಿಗೆ ಹಣದುಬ್ಬರದ ಗತಿ, ಹಣಕಾಸು ಪರಿಸ್ಥಿತಿ ಹೇಗಿರುತ್ತದೆ ಎನ್ನುವ ಚಿತ್ರಣ ಮತ್ತು ಅಂದಾಜನ್ನು ಈ ವರದಿಯಲ್ಲಿ ಮಾಡಲಾಗಿರುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದಲ್ಲಿ ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಗೆ ಸೇರಿದ ಆರ್ಥಿಕ ವಿಭಾಗವು ಈ ವರದಿಯನ್ನು ತಯಾರಿಸುತ್ತದೆ. ಇದೀಗ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿರುವುದು ವಿ ಅನಂತ ನಾಗೇಶ್ವರನ್. ಇವರ ನೇತೃತ್ವದಲ್ಲಿ 2024-25ರ ಸಾಲಿನ ಆರ್ಥಿಕ ಸಮೀಕ್ಷೆಯ ವರದಿ ಸಿದ್ಧವಾಗಿದೆ.

ಇದನ್ನೂ ಓದಿ: Budget Glossary: ಕ್ಯಾಪಿಟಲ್ ರೆಸಿಪ್ಟ್, ರೆವಿನ್ಯೂ ರೆಸಿಪ್ಟ್, ಎಕ್ಸೆಸ್ ಗ್ರ್ಯಾಂಟ್ ಇತ್ಯಾದಿ ಬಜೆಟ್ ಪದಗಳ ಪರಿಚಯ

ಸರ್ಕಾರದ ನೀತಿಗಳೇನು, ಅವುಗಳ ಪರಿಣಾಮ ಹೇಗಿದೆ, ಇನ್ನೋವೇಶನ್ ಅಥವಾ ನಾವೀನ್ಯತೆ ಮತ್ತು ಅಭಿವೃದ್ಧಿ ಹೇಗಾಗುತ್ತಿದೆ ಎಂಬುದರ ಮಾಹಿತಿಯನ್ನು ಈ ವರದಿಯಲ್ಲಿ ಒಳಗೊಂಡಿರಲಾಗುತ್ತದೆ. ಈ ಹಣಕಾಸು ವರ್ಷದಲ್ಲಿ ಕೃಷಿ, ಉದ್ಯಮ, ಮೂಲಸೌಕರ್ಯ, ಸೇವೆ ಇತ್ಯಾದಿ ವಲಯಗಳನ್ನು ಅವಲೋಕಿಸಲಾಗಿರುತ್ತದೆ.

ಆರ್ಥಿಕ ಸಮೀಕ್ಷೆಯ ವರದಿ ಯಾಕೆ ಮುಖ್ಯ?

ಆರ್ಥಿಕ ಸಮೀಕ್ಷೆಯು ಸರ್ಕಾರ ಮತ್ತು ಜನತೆ ಇಬ್ಬರಿಗೂ ಅಗತ್ಯವಾಗಿರುವ ಮಾಹಿತಿಯನ್ನು ಒಳಗೊಂಡಿರುತ್ತದೆ. ದೇಶದ ಆರ್ಥಿಕ ಪರಿಸ್ಥಿತಿ ಈಗ ಹೇಗಿದೆ, ಮುಂದೆ ಹೇಗಿರಬಹುದು, ಆರ್ಥಿಕತೆಯ ವಿವಿಧ ಭಾಗಗಳ ಆರೋಗ್ಯ ಹೇಗಿದೆ, ಯಾವ ಆರ್ಥಿಕ ನೀತಿಗಳು ಸದ್ಯದಲ್ಲಿ ಅನುಕೂಲವಾಗಬಹುದು ಎಂಬಿತ್ಯಾದಿ ಸಂಗತಿಗಳನ್ನು ಈ ವರದಿಯಲ್ಲಿ ತಿಳಿಸಲಾಗುತ್ತದೆ. ಇದು ಸರ್ಕಾರಕ್ಕೆ ನೀತಿ ರೂಪಿಸಲು ಸಹಕಾರಿಯಾಗಬಲ್ಲುದು.

ಇದನ್ನೂ ಓದಿ: ಕೇಂದ್ರ ಹಣಕಾಸು ಸಚಿವೆ ನೇತೃತ್ವದ ಬಜೆಟ್ ಟೀಮ್​ನ ಪ್ರಮುಖ ಸದಸ್ಯರಿವರು…

ಹಾಗೆಯೇ, ಸರ್ಕಾರದ ಆರ್ಥಿಕ ನೀತಿಗಳ ಪರಿಣಾಮ ಹೇಗಾಗಿದೆ ಎಂಬುದರ ಚಿತ್ರಣ ಜನಸಾಮಾನ್ಯರಿಗೂ ತಿಳಿಯುತ್ತದೆ. ಈ ಸಮೀಕ್ಷೆಯಲ್ಲಿ ಸಾಮಾನ್ಯ ಜನರಿಗೆ ತಿಳಿಯುವ ರೀತಿಯಲ್ಲಿ ಬಹಳ ಸರಳವಾಗಿ ವಿವರಣೆ ಕೊಡಲಾಗಿರುತ್ತದೆ.

ಆರ್ಥಿಕ ಸಮೀಕ್ಷೆ ವರದಿ ಡೌನ್​ಲೋಡ್ ಮಾಡುವುದು ಹೇಗೆ?

ಇವತ್ತು ಸಂಸತ್ತಿನಲ್ಲಿ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆಯ ವರದಿಯನ್ನು ಮಂಡಿಸುವುದು ಮುಗಿಯುತ್ತಿರುವಂತೆಯೇ ಅದನ್ನು ಆನ್​ಲೈನ್​ನಲ್ಲಿ ಅಪ್​ಲೋಡ್ ಮಾಡಲಾಗುತ್ತದೆ. ಸರ್ಕಾರಕ್ಕೆ ಸೇರಿದ ಇಂಡಿಯಾ ಬಜೆಟ್ ವೆಬ್​ಸೈಟ್​ನಲ್ಲಿ ಇದನ್ನು ಡೌನ್​ಲೋಡ್ ಮಾಡಬಹುದು. ಅದರ ಲಿಂಕ್ ಇಲ್ಲಿದೆ:

indiabudget.gov.in/economicsurvey/index.php

ಇದೇ ಲಿಂಕ್​ನಲ್ಲಿ ನೀವು ಹಿಂದಿನ ವರ್ಷಗಳ ಆರ್ಥಿಕ ಸಮೀಕ್ಷೆಯ ವರದಿಗಳನ್ನು ನೋಡಬಹುದು, ಡೌನ್​ಲೋಡ್ ಮಾಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ