Budget Glossary: ಕ್ಯಾಪಿಟಲ್ ರೆಸಿಪ್ಟ್, ರೆವಿನ್ಯೂ ರೆಸಿಪ್ಟ್, ಎಕ್ಸೆಸ್ ಗ್ರ್ಯಾಂಟ್ ಇತ್ಯಾದಿ ಬಜೆಟ್ ಪದಗಳ ಪರಿಚಯ
Budget terms and words in Kannada: ಬಜೆಟ್ ಪ್ರಸ್ತುತಪಡಿಸುವಾಗ ಸಾಮಾನ್ಯ ಜನರಿಗೆ ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದಾದ ಕೆಲ ಪದಗಳ ಅರ್ಥ ಮತ್ತು ಸಂಕ್ಷಿಪ್ತ ವಿವರಣೆ ಇಲ್ಲಿದೆ. ಹಣದುಬ್ಬರ, ಕ್ಯಾಪಿಟಲ್ ರೆಸಿಪ್ಟ್, ಕ್ಯಾಪಿಟಲ್ ಎಕ್ಸ್ಪೆಂಡಿಚರ್, ರೆವಿನ್ಯೂ ರೆಸಿಪ್ಟ್, ರೆವಿನ್ಯೂ ಎಕ್ಸ್ಪೆಂಡಿಚರ್, ಆ್ಯನುಯಲ್ ಫೈನಾನ್ಷಿಯಲ್ ಸ್ಟೇಟ್ಮೆಂಟ್, ಎಕ್ಸೆಸ್ ಗ್ರ್ಯಾಂಟ್ ಇತ್ಯಾದಿ ಪದಗಳ ಅರ್ಥ ವಿವರಣೆ ಇಲ್ಲಿ ನೀಡಲಾಗಿದೆ.

Union Budget 2025: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025ರ ಫೆಬ್ರುವರಿ 1ರಂದು ಬಜೆಟ್ ಮಂಡಿಸುತ್ತಿದ್ದಾರೆ. ಇದು ಅವರಿಗೆ ಸತತ ಎಂಟನೇ ಬಜೆಟ್ ಆಗಿದೆ. ಹಲವು ನಿರೀಕ್ಷೆಗಳು ಮತ್ತು ಒತ್ತಡಗಳ ಮಧ್ಯೆ ಅವರು 2025-26ರ ಸಾಲಿಗೆ ಮುಂಗಡ ಪತ್ರವನ್ನು ಸಂಸತ್ನಲ್ಲಿ ಪ್ರಸ್ತುತಪಡಿಸುತ್ತಿದ್ದಾರೆ. ಬಜೆಟ್ ಪ್ರಸ್ತುತಪಡಿಸುವಾಗ ನಾವು ಕೇಳುವ ಕೆಲ ಪದಗಳು ಏನೆಂದು ಅರ್ಥವಾಗದೇ ಹೋಗಬಹುದು, ಅಥವಾ ಅರ್ಥ ಮಾಡಿಕೊಳ್ಳಲು ಗೂಗಲ್ ಮಾಡಬೇಕಾಗಬಹುದು. ಅಂಥ ಕೆಲ ಸ್ಪೆಷಲ್ ಪದಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ….
ಯೂನಿಯನ್ ಬಜೆಟ್ – ಕೇಂದ್ರ ಬಜೆಟ್
ಯೂನಿಯನ್ ಬಜೆಟ್ ಎನ್ನುವುದು ಮುಂಬರುವ ಆರ್ಥಿಕ ವರ್ಷಕ್ಕೆ ದೇಶದ ಆದಾಯ ಮತ್ತು ವೆಚ್ಚದ ಅಂದಾಜುಗಳನ್ನು ವಿವರಿಸುವ ದಾಖಲೆಯಾಗಿದೆ. ಬಜೆಟ್ ಎಂಬುದು ಸರ್ಕಾರದ ಒಂದು ವರ್ಷದ ಅಂದಾಜು ಆದಾಯ ಮತ್ತು ಖರ್ಚುಗಳ ಸಂಪೂರ್ಣ ಪಟ್ಟಿಯಾಗಿರುತ್ತದೆ. ಸರ್ಕಾರಕ್ಕೆ ಯಾವೆಲ್ಲಾ ಸಂಭಾವ್ಯ ಮೂಲಗಳಿಂದ ಆದಾಯ ಹರಿದುಬರಬಹುದು ಎಂಬುದನ್ನು ದಾಖಲಿಸಲಾಗುತ್ತದೆ. ಎಲ್ಲೆಲ್ಲಿಂದ ಸಾಲಗಳನ್ನು ತರಲಾಗುತ್ತದೆ. ಯಾವ್ಯಾವುದಕ್ಕೆಲ್ಲಾ ಹಣ ವ್ಯಯಿಸಲು ಯೋಜಿಸಲಾಗಿದೆ ಎಂಬ ವಿವರ ಇದರಲ್ಲಿ ಇರುತ್ತದೆ. ಕೇಂದ್ರ ಬಜೆಟ್ 2025 ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರುವರಿ 1ರಂದು ಮಂಡಿಸುತ್ತಿದ್ದಾರೆ.
ಆನುಯಲ್ ಫೈನಾನ್ಷಿಯಲ್ ಸ್ಟೇಟ್ಮೆಂಟ್- ವಾರ್ಷಿಕ ಹಣಕಾಸು ಹೇಳಿಕೆ (AFS)
ಮುಂಬರುವ ಹಣಕಾಸು ವರ್ಷಕ್ಕೆ ಮಂಡಿಸುವ ವಾರ್ಷಿಕ ಬಜೆಟ್ ಅನ್ನು Annual Financial Statement ಅಥವಾ ವಾರ್ಷಿಕ ಹಣಕಾಸು ಹೇಳಿಕೆ (AFS) ಎಂದೂ ಕರೆಯಲಾಗುತ್ತದೆ. ಅಂದರೆ ಕೇಂದ್ರ ಬಜೆಟ್ನ ಇನ್ನೊಂದು ಹೆಸರೇ ಆ್ಯನುಯಲ್ ಫಿನಾನ್ಷಿಯಲ್ ಸ್ಟೇಟ್ಮೆಂಟ್.
ಎಕನಾಮಿಕ್ ಸರ್ವೆ – ಆರ್ಥಿಕ ಸಮೀಕ್ಷೆ
ಆರ್ಥಿಕ ಸಮೀಕ್ಷೆಯು ಹಣಕಾಸು ಸಚಿವಾಲಯದ ಮುಖ್ಯ ದಾಖಲೆಯಾಗಿದೆ. ಪ್ರತಿ ವರ್ಷ ಕೇಂದ್ರ ಬಜೆಟ್‌ಗೆ ಮೊದಲು ಮಂಡಿಸಲಾಗುತ್ತದೆ. ಆರ್ಥಿಕ ಸಮೀಕ್ಷೆಯು ಹಿಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಎಕನಾಮಿಕ್ ಸರ್ವೆ ಆರ್ಥಿಕತೆಯ ಪ್ರಸ್ತುತ ಸ್ಥಿತಿ ಮತ್ತು ಆರ್ಥಿಕ ದೃಷ್ಟಿಕೋನವನ್ನು ಬಹಿರಂಗಪಡಿಸುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದ ತಂಡವು ಈ ಆರ್ಥಿಕ ಸಮೀಕ್ಷೆಯ ದಾಖಲೆಯನ್ನು ಸಿದ್ಧಪಡಿಸುತ್ತದೆ. ಕೇಂದ್ರ ಬಜೆಟ್ ಮಂಡನೆಗೆ ಒಂದು ದಿನ ಮುಂಚಿತವಾಗಿ ಸಂಸತ್ತಿನ ಉಭಯ ಸದನಗಳಲ್ಲಿ ದಾಖಲೆಯನ್ನು ಮಂಡಿಸಲಾಗುತ್ತದೆ. ಮೊದಲ ಆರ್ಥಿಕ ಸಮೀಕ್ಷೆಯನ್ನು 1950-51ರಲ್ಲಿ ಮಂಡಿಸಲಾಯಿತು. 1964 ರವರೆಗೆ ಇದನ್ನು ಕೇಂದ್ರ ಬಜೆಟ್‌ನಲ್ಲೇ ಒಳಗೊಂಡಿರಲಾಗುತ್ತಿತ್ತು.
ಕ್ಯಾಪಿಟಲ್ ಬಜೆಟ್
ಕ್ಯಾಪಿಟಲ್ ಬಜೆಟ್ ಎಂಬುದು ಸರ್ಕಾರಕ್ಕೆ ಸಿಗುವ ಬಂಡವಾಳದ ಲೆಕ್ಕಾಚಾರವಾಗಿದೆ. ಇದರಲ್ಲಿ ಕ್ಯಾಪಿಟಲ್ ರೆಸಿಪ್ಟ್ ಮತ್ತು ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಎಂದು ಎರಡು ವಿಧ ಇರುತ್ತದೆ. ಕ್ಯಾಪಿಟಲ್ ರೆಸಿಕ್ಟ್ನಲ್ಲಿ ಸಾರ್ವಜನಿಕರಿಂದ ಬಾಂಡ್ಗಳ ಮೂಲಕ ಸಂಗ್ರಹಿಸಿದ ಸಾಲ, ವಿದೇಶಗಳಿಂದ ಪಡೆದ ಸಾಲ, ಸರ್ಕಾರಿ ಸಂಸ್ಥೆಗಳ ಬಂಡವಾಳ ಹಿಂತೆಗೆತದಿಂದ ಸಿಕ್ಕ ಹಣ, ಆರ್ಬಿಐನಿಂದ ಪಡೆದ ಹಣ, ರಾಜ್ಯ ಸರ್ಕಾರಗಳಿಂದ ಸಾಲ ವಸೂಲಾತಿಯಿಂದ ಬಂದ ಹಣ ಇತ್ಯಾದಿಯವು ಒಳಗೊಂಡಿರುತ್ತದೆ.
ಕ್ಯಾಪಿಟಲ್ ಎಕ್ಸ್ಪೆಂಡಿಚರ್ನಲ್ಲಿ ಸರ್ಕಾರವು ಈ ಬಂಡವಾಳದ ಹಣವನ್ನು ಯಾವುದಕ್ಕೆಲ್ಲಾ ವಿನಿಯೋಗಿಸುತ್ತದೆ ಎಂಬುದರ ಲೆಕ್ಕ ಇರುತ್ತದೆ.
ರೆವಿನ್ಯೂ ಬಜೆಟ್
ಆದಾಯ ತೆರಿಗೆ, ಜಿಎಸ್‌ಟಿ ತೆರಿಗೆ, ಹೂಡಿಕೆಗಳಿಂದ ಬಂದ ಬಡ್ಡಿ, ಡಿವಿಡೆಂಡ್ ಇತ್ಯಾದಿ ಆದಾಯವು ರೆವಿನ್ಯೂ ರೆಸಿಪ್ಟ್ನಲ್ಲಿ ಒಳಗೊಂಡಿರುತ್ತದೆ. ಸರ್ಕಾರದ ಇಲಾಖೆಗಳ ನಿರ್ವಹಣೆಗೆ ವೆಚ್ಚ, ಸರ್ಕಾರದ ಸಾಲಕ್ಕೆ ಕಟ್ಟುವ ಬಡ್ಡಿ, ಸಬ್ಸಿಡಿಗೆ ವೆಚ್ಚ ಇತ್ಯಾದಿಯನ್ನು ರೆವಿನ್ಯೂ ಎಕ್ಸ್ಪೆಂಡಿಚರ್ನಲ್ಲಿ ದಾಖಲಿಸಲಾಗುತ್ತದೆ.
ಇನ್ಫ್ಲೇಶನ್- ಹಣದುಬ್ಬರ
ಹಣದುಬ್ಬರದ ದರವನ್ನು ಸಾಮಾನ್ಯವಾಗಿ ಶೇಕಡಾವಾರುಗಳಲ್ಲಿ ವ್ಯಕ್ತಪಡಿಸಲಾಗುತ್ತದೆ. ಆಂತರಿಕ ಅಥವಾ ಬಾಹ್ಯ ಆರ್ಥಿಕ ಅಂಶಗಳಿಂದ ಒಂದು ನಿರ್ದಿಷ್ಟ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಏರಿದಾಗ, ಅದನ್ನು ಹಣದುಬ್ಬರ ಎಂದು ಕರೆಯಬಹುದು. ಹಣದುಬ್ಬರದ ಹೆಚ್ಚಳವು ದೇಶದ ಕರೆನ್ಸಿಯ ಕೊಳ್ಳುವ ಸಾಮರ್ಥ್ಯದಲ್ಲಿನ ಇಳಿಕೆಯನ್ನು ಸೂಚಿಸುತ್ತದೆ. ಹಣದುಬ್ಬರವನ್ನು ತಡೆಯಲು RBI ಪ್ರಮುಖ ಬಡ್ಡಿದರಗಳನ್ನು ಪರಿಷ್ಕರಿಸುತ್ತಲೇ ಇರುತ್ತದೆ. ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರು ಈ ಪದವನ್ನು ಪ್ರಸ್ತಾಪಿಸುತ್ತಾರೆ. ಹಣದುಬ್ಬರದ ಪರಿಸ್ಥಿತಿ ಹೇಗಿರಬಹುದು ಎಂದು ಅವರು ಉಲ್ಲೇಖಿಸಬಹುದು.
Cess- ಸೆಸ್
ಸೆಸ್ ಎನ್ನುವುದು ನಿರ್ದಿಷ್ಟ ಉದ್ದೇಶಗಳಿಗೆ ಸರ್ಕಾರ ವಿಧಿಸುವ ಹೆಚ್ಚುವರಿ ತೆರಿಗೆಯಾಗಿದೆ. ಸೆಸ್‌ನಿಂದ ಬರುವ ಆದಾಯವನ್ನು ಭಾರತದ ಕನ್ಸಾಲಿಡೇಟೆಡ್ ಫಂಡ್‌ನಲ್ಲಿ ಠೇವಣಿ ಮಾಡಲಾಗುತ್ತದೆ. ದೇಶದಲ್ಲಿ ಕೆಲವು ವಿಧದ ಸೆಸ್‌ಗಳಲ್ಲಿ ಶಿಕ್ಷಣ ಸೆಸ್, ಮಾಧ್ಯಮಿಕ, ಉನ್ನತ ಶಿಕ್ಷಣ ಸೆಸ್, ಕೃಷಿ ಕಲ್ಯಾಣ ಸೆಸ್, ಸ್ವಚ್ಛ ಭಾರತ್ ಸೆಸ್ ಸೇರಿವೆ.
ಎಕ್ಸೆಸ್ ಗ್ರ್ಯಾಂಟ್ – ಹೆಚ್ಚುವರಿ ಅನುದಾನ
ಎಕ್ಸೆಸ್ ಗ್ರಾಂಟ್ (Excess Grant) ಅಥವಾ ಅಡಿಶನಲ್ ಫಂಡ್ ಎಂಬುದು ಸರ್ಕಾರಕ್ಕೆ ಹೆಚ್ಚುವರಿ ವೆಚ್ಚದ ಬೇಡಿಕೆಗಳನ್ನು ಪೂರೈಸಲು ಸಂಸತ್ ಅನುಮೋದಿಸುವ ಫಂಡ್ ಆಗಿರುತ್ತದೆ. ಬಜೆಟ್ ಹಂಚಿಕೆಗಳು ಸರ್ಕಾರದ ವೆಚ್ಚದ ಬೇಡಿಕೆಗಳನ್ನು ಪೂರೈಸಲು ವಿಫಲವಾದಾಗ, ಹೆಚ್ಚುವರಿ ಹಣಕ್ಕೆ ಸಂಸತ್ನಲ್ಲಿ ಮನವಿ ಮಾಡಲಾಗುತ್ತದೆ. ಡಿಮ್ಯಾಂಡ್ಸ್ ಫಾರ್ ಗ್ರಾಂಟ್ಸ್ ಮುಖಾಂತರ, ಮತ್ತು ನಿರ್ದಿಷ್ಟ ಮಸೂದೆಗಳ ಮೂಲಕ ಸಂಸತ್ನಲ್ಲಿ ಹೆಚ್ಚುವರಿ ಅನುದಾನಕ್ಕೆ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ ಸರ್ಕಾರ.
ಡಿಸ್ಇನ್ವೆಸ್ಟ್ಮೆಂಟ್ – ಬಂಡವಾಳ ಹಿಂತೆಗೆತ
ಕೇಂದ್ರ ಸರ್ಕಾರವು ಪಿಎಸ್‌ಯುನಲ್ಲಿ ತನ್ನ ಪಾಲನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಮಾರಾಟ ಮಾಡುವ ಪ್ರಕ್ರಿಯೆಯೇ ಡಿಸ್ ಇನ್ವೆಸ್ಟ್ಮೆಂಟ್ ಎನಿಸುತ್ತದೆ. ಈಗ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಉತ್ತಮ ಲಾಭ ತೋರುತ್ತಿರುವುದರಿಂದ ಬಂಡವಾಳ ಹಿಂತೆಗೆತ ಪ್ರಸ್ತಾಪವನ್ನು ಈ ಬಾರಿಯ ಬಜೆಟ್‌ನಲ್ಲಿ ಮಾಡುವುದು ಅನುಮಾನ ಎನ್ನಲಾಗುತ್ತಿದೆ.
ಸರ್ಚಾರ್ಜ್- ಹೆಚ್ಚುವರಿ ಶುಲ್ಕ
ಸರ್‌ಚಾರ್ಜ್ ಎನ್ನುವುದು ಒಂದು ಸರಕು ಅಥವಾ ಸೇವೆಗೆ ನಿಗದಿತ ಬೆಲೆಗಿಂತ ಹೆಚ್ಚುವರಿ ಶುಲ್ಕವಾಗಿದೆ. ಸಮಾಜದಲ್ಲಿ ಸಮಾನತೆಯನ್ನು ತರುವ ಉದ್ದೇಶದಿಂದ ಇದನ್ನು ಸಾಮಾನ್ಯವಾಗಿ ಶ್ರೀಮಂತರಿಂದ ಸಂಗ್ರಹಿಸಲಾಗುತ್ತದೆ.
ಕಸ್ಟಮ್ಸ್ ಡ್ಯೂಟಿ – ಆಮದು ಸುಂಕ
ಕಸ್ಟಮ್ಸ್ ಡ್ಯೂಟಿ ಎಂಬುದು ಕೆಲವು ಸರಕುಗಳನ್ನು ಇತರ ದೇಶಗಳಿಂದ ಆಮದು/ರಫ್ತು ಮಾಡಿದಾಗ ವಿಧಿಸುವ ಒಂದು ರೀತಿಯ ತೆರಿಗೆಯಾಗಿದೆ. ಈ ಆಮದು ಸುಂಕದ ಹೊರೆ ಅಂತಿಮವಾಗಿ ಗ್ರಾಹಕರಿಗೆ ವರ್ಗಾಯಿಸಲ್ಪಡುತ್ತದೆ. ಕಸ್ಟಮ್ಸ್ ಸುಂಕವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಯಿಂದ ಹೊರಗಿರುವುದರಿಂದ, ಸರ್ಕಾರವು ತನ್ನ ಬಜೆಟ್‌ನಲ್ಲಿ ಅದಕ್ಕೆ ಬದಲಾವಣೆಗಳನ್ನು ಘೋಷಿಸುವ ಸಾಧ್ಯತೆಯಿದೆ. ಬಜೆಟ್‌ನಲ್ಲಿ ಪ್ರಮುಖ ಅಂಶವಾಗಿರುವ ಕಸ್ಟಮ್ಸ್ ಡ್ಯುಟಿ ಕುರಿತು ಕೇಂದ್ರ ಸರ್ಕಾರದ ನಿರ್ಧಾರವನ್ನು ಹಲವು ವಲಯಗಳು ಕಾತರದಿಂದ ಕಾಯುತ್ತಿವೆ.
ಜಿಎಸ್‌ಟಿ- ಸರಕು ಮತ್ತು ಸೇವಾ ತೆರಿಗೆ
ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್‌ಟಿ) ಯಾವುದೇ ಬದಲಾವಣೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗುವುದಿಲ್ಲ. ಜಿಎಸ್‌ಟಿ ಸ್ಲ್ಯಾಬ್‌ಗಳಲ್ಲಿನ ಬದಲಾವಣೆಗಳನ್ನು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಜಿಎಸ್‌ಟಿಯನ್ನು ಪ್ರಸ್ತಾಪಿಸಿದರೂ, ಅದರಲ್ಲಿ ಯಾವುದೇ ಬದಲಾವಣೆಗಳನ್ನು ಅವರು ಮಾಡುವುದಿಲ್ಲ.
ರೆವೆನ್ಯೂ ಡೆಫಿಸಿಟ್ – ಆದಾಯ ಕೊರತೆ
ಆದಾಯ ಮತ್ತು ವೆಚ್ಚದ ನಡುವಿನ ಅಂತರವನ್ನು ಸೂಚಿಸುತ್ತದೆ. ಸರ್ಕಾರವು ತನ್ನ ಸಾಮಾನ್ಯ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುತ್ತಿದೆಯೇ ಎಂಬುದರ ಸೂಚಕ ಇದು.
ರೆವೆನ್ಯೂ ಸರ್ಪ್ಲಸ್- ಆದಾಯ ಹೆಚ್ಚುವರಿ
ಇದು ರೆವೆನ್ಯೂ ಡೆಫಿಸಿಟ್ಗೆ ತದ್ವಿರುದ್ಧವಾದುದು. ವೆಚ್ಚಕ್ಕಿಂತ ಆದಾಯ ಹೆಚ್ಚಿದ್ದರೆ ಆ ಸ್ಥಿತಿಯನ್ನು ರೆವೆನ್ಯೂ ಸರ್ಪ್ಲಸ್ ಎನ್ನಲಾಗುವುದು.
ಕರೆಂಟ್ ಅಕೌಂಟ್ ಡೆಫಿಸಿಟ್- ಚಾಲ್ತಿ ಖಾತೆ ಕೊರತೆ
ಚಾಲ್ತಿ ಖಾತೆ ಕೊರತೆ (ಸಿಎಡಿ) ಎಂಬುದು ದೇಶದ ವ್ಯಾಪಾರ ವಹಿವಾಟಿನ ಅಳತೆಯಾಗಿದೆ. ಆಮದು ಮಾಡಿದ ಸರಕು ಮತ್ತು ಸೇವೆಗಳ ಮೌಲ್ಯವು ರಫ್ತು ಮೌಲ್ಯವನ್ನು ಮೀರಿದಾಗ ಚಾಲ್ತಿ ಖಾತೆ ಕೊರತೆ ಉಂಟಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:15 pm, Thu, 30 January 25