ರೇಸ್ನಲ್ಲಿ ಚೀನಾ ಮುಂದೋಡಿದ್ಹೇಗೆ? ಭಾರತ ಹಿಂದುಳಿದಿದ್ದೇಗೆ? ನಿತಿನ್ ಕಾಮತ್ ನೇರಾನೇರ ವಿಶ್ಲೇಷಣೆ
Nithin Kamath compares India and China's growth story: ಎಐ ಕ್ಷೇತ್ರದಲ್ಲಿ ಚೀನಾ ಸಾಧಿಸಿರುವ ಬೆಳವಣಿಗೆ ಹಲವರನ್ನು ಅಚ್ಚರಿಗೊಳಿಸಿದೆ. ಝೀರೋಧ ಸಂಸ್ಥಾಪಕ ನಿತಿನ್ ಕಾಮತ್ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಚೀನಾದ ಬೆಳವಣಿಗೆಗೆ ಆರ್ ಅಂಡ್ ಡಿ ಕಾರ್ಯಗಳಿಗೆ ಕೊಟ್ಟ ಗಮನ ಎಂಬುದು ಅವರ ಅನಿಸಿಕೆ. ಎಪ್ಪತ್ತು, ಎಂಬತ್ತರ ದಶಕದವರೆಗೂ ಚೀನಾದಷ್ಟೇ ಜಿಡಿಪಿ ತಲಾದಾಯ ಹೊಂದಿದ್ದ ಭಾರತ, ಬಳಿಕ ಹಿಂದುಳಿಯಲು ಕಾರಣ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು, ಜನವರಿ 30: ಚೀನಾದ ಎರಡು ಎಐ ಮಾಡಲ್ಗಳು ಒಂದರ ನಂತರ ಒಂದು ಜಾಗತಿಕ ಎಐ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿವೆ. ಮೊದಲಿಗೆ ಡೀಪ್ಸೀಕ್ ಆರ್1 ಬಂತು. ಎರಡು ದಿನದ ಬಳಿಕ ಮೂನ್ಶಾಟ್ ಎಐ ಎನ್ನುವ ಚೀನೀ ಸಂಸ್ಥೆಯೊಂದು ಕಿಮಿ ಕೆ1.5 ಎನ್ನುವ ಹೊಸ ಎಐ ಮಾಡಲ್ ಅನ್ನು ಹೊರತಂದಿತು. ಎಐ ಟೆಕ್ನಾಲಜಿಯಲ್ಲಿ ಚೀನಾ ತಾನೆಷ್ಟು ಮುಂದುವರಿದಿದ್ದೇನೆ ಎಂಬುದನ್ನು ಜಗತ್ತಿಗೆ ತೋರಿಸಿದೆ. ಇಡೀ ವಿಶ್ವವು ಚೀನಾದ ಈ ಸಾಧನೆ ಕಂಡು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ. ಇದೇ ವೇಳೆ, ಝೀರೋಧ ಸಂಸ್ಥೆಯ ಸಹ-ಸಂಸ್ಥಾಪಕರಾದ ಮತ್ತು ಕನ್ನಡಿಗರೂ ಆದ ನಿತಿನ್ ಕಾಮತ್ ಭಾರತ ಹಾಗೂ ಚೀನಾವನ್ನು ನೇರಾ ನೇರ ಹೋಲಿಕೆ ಮಾಡಿದ್ದಾರೆ. ಭಾರತೀಯರ ‘ಜುಗಾಡ್’ತನ ಭಾರತದ ಓಟವನ್ನು ಮಂದಗೊಳಿಸಿದೆ ಎಂದು ಕಾಮತ್ ಝಾಡಿಸಿದ್ದಾರೆ.
ಅರವತ್ತು, ಎಪ್ಪತ್ತರ ದಶಕದಲ್ಲಿ ಭಾರತ ಮತ್ತು ಚೀನಾದ ಜಿಡಿಪಿ ತಲಾದಾಯ ಒಂದೇ ಸಮದಲ್ಲಿತ್ತು. ಎಂಬತ್ತರ ದಶಕದಲ್ಲಿ ಚೀನಾ ಸುಧಾರಣೆಗಳಿಗೆ ಅಡಿ ಇಟ್ಟಿತು. ತೊಂಬತ್ತರ ದಶಕದೊಳಗೆ ಅವರು ಭಾರತದ ಜಿಡಿಪಿ ತಲಾದಾಯ ಮಟ್ಟವನ್ನು ದಾಟಿ ಹೋಯಿತು ಎಂದು ನಿತಿನ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ದಿ ಎಕನಾಮಿಕಸ್ಟ್ ಪತ್ರಿಕೆಯಲ್ಲಿ ಚೀನಾದ ವೈಜ್ಞಾನಿಕ ಪ್ರಗತಿ ಬಗ್ಗೆ ಪ್ರಕಟವಾದ ಒಂದು ಲೇಖನವನ್ನು ಉಲ್ಲೇಖಿಸಿದ ಅವರು, ಭಾರತಕ್ಕೆ ಅದರ ಜುಗಾಡ್ತನ ಮುಳುವಾಗಿರುವುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಚೀನಾದ ಡೀಪ್ಸೀಕ್ ಎಐ ಮಾಡಲ್ನಿಂದ ಅಮೆರಿಕಕ್ಕೆ ಶಾಕ್ವೇವ್; ಚಿಪ್ ಕಂಪನಿಯ ಷೇರೂ ಕುಸಿಯುತ್ತಿರುವುದು ಯಾವ ಲಾಜಿಕ್ಕು?
‘ಅಲ್ಪ ದೃಷ್ಟಿಕೋನವೇ ಭಾರತಕ್ಕೆ ಯಾವಾಗಲೂ ತಲೆನೋವಾಗಿರುವುದು. ಸಮಸ್ಯೆ ಇದ್ದರೆ ಜುಗಾಡ್ ಪರಿಹಾರ ಸಿದ್ದವಾಗುತ್ತದೆ. ಸಮಸ್ಯೆಗೆ ಥೇಪೆ ಹಾಕುವ ಪ್ರಯತ್ನ ಆಗುತ್ತದೆ ಅಷ್ಟೇ. ಬಿಸಿನೆಸ್, ರಾಜಕೀಯ, ಕಾನೂನು ಅಳವಡಿಕೆ ವಿಚಾರದಲ್ಲಿ ಇದು ನಿಜ. ದೂರಗಾರಿ ಯೋಚನೆಯ ಅಗತ್ಯ ಇರುವ ಅದೆಷ್ಟೋ ಸಮಸ್ಯೆಗಳಿಗೆ ಬ್ಯಾಂಡ್ ಏಡ್ನಂತೆ ಪರಿಹಾರ ಹುಡುಕುತ್ತೇವೆ. ಇಲ್ಲಿ ನಾವು ಪ್ರಗತಿಯನ್ನೇ ಮಾಡಿಲ್ಲ ಎಂದೇನಲ್ಲ. ನನ್ನ ಜೀವಿತಾವಧಿಯಲ್ಲಿ ಸಾಕಷ್ಟು ಬೆಳವಣಿಗೆ ಹೊಂದಿರುವುದನ್ನು ಕಂಡಿದ್ದೇನೆ. ಆದರೆ, ಇದು ಯಾತಕ್ಕೂ ಸಾಲದು’ ಎಂದು ನಿತಿನ್ ಕಾಮತ್ ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಅವರು ಎಐ ಕ್ಷೇತ್ರದ ಉದಾಹರಣೆಯನ್ನೂ ನೀಡಿದ್ದಾರೆ.
In the 1960s-1970s, India and China had roughly the same per capita GDP. They started their reforms in the 1980s, and by 1990, they had overtaken our per capita GDP. Say what you will about the differences in our worldviews and economic models, but their scientific and… pic.twitter.com/SSddVpEoOB
— Nithin Kamath (@Nithin0dha) January 29, 2025
‘ನೀವು ಸಾಕಷ್ಟು ಜಿಪಿಯುಗಳನ್ನು ಖರೀದಿಸಿದಾಕ್ಷಣ ಭಾರತೀಯರಿಂದ ಉಚ್ಚತಮ ಎಐ ಅಪ್ಲಿಕೇಶನ್ಗಳನ್ನು ನಿರ್ಮಿಸಲು ನಿರೀಕ್ಷಿಸಲು ಸಾಧ್ಯವಿಲ್ಲ. ಸರಿಯಾದ ಪ್ರತಿಭೆ ಇಲ್ಲದಿದ್ದರೆ ಮತ್ತು ನಾವೀನ್ಯತೆಗೆ ಉತ್ತೇಜಿಸುವ ಇಕೋಸಿಸ್ಟಂ ಇಲ್ಲದಿದ್ದರೆ ವಿಶ್ವದ ಎಲ್ಲಾ ಜಿಪಿಯುಗಳನ್ನು ತಂದರೂ ಏನೂ ಪ್ರಯೋಜನ ಆಗುವುದಿಲ್ಲ ಎಂಬುದು ಅವರ ನಿಷ್ಠುರ ನುಡಿ.
ಇದನ್ನೂ ಓದಿ: ಫೆ. 1ರಿಂದ ಈ ಯುಪಿಐ ವಹಿವಾಟುಗಳಿಗೆ ಅವಕಾಶ ಇಲ್ಲ; ನಿಮ್ಮಲ್ಲಿ ಈ ಪಿಎಸ್ಪಿಗಳಿವೆಯಾ ಪರಿಶೀಲಿಸಿ
‘ಸಂಶೋಧನೆ ಕ್ಷೇತ್ರದ ಮೇಲೆ ಚೀನಾ ಎರಡು ದಶಕ ಕಾಲ ಕನಿಷ್ಠ ಗಮನ ಮಾತ್ರ ಕೊಟ್ಟಿತ್ತು. ನಾವೂ ಕೂಡ ಸಂಶೋಧನೆ ತ್ತು ವೈಜ್ಞಾನಿಕ ಬಲವನ್ನು ಹೆಚ್ಚಿಸಲು ಗಮನ ಕೊಟ್ಟರೆ ಐದತ್ತು ವರ್ಷದಲ್ಲಿ ಏನಾದರೂ ಫಲ ನಿರೀಕ್ಷಿಸಬಹುದು’ ಎಂದು ನಿತಿನ್ ಕಾಮತ್ ತಮ್ಮ ಎಕ್ಸ್ ಪೋಸ್ಟ್ವೊಂದರಲ್ಲಿ ಬರೆದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:04 pm, Thu, 30 January 25