- Kannada News Photo gallery Alert, these UPI transaction not allowed due to NPCI rules, news in Kannada
ಫೆ. 1ರಿಂದ ಈ ಯುಪಿಐ ವಹಿವಾಟುಗಳಿಗೆ ಅವಕಾಶ ಇಲ್ಲ; ನಿಮ್ಮಲ್ಲಿ ಈ ಪಿಎಸ್ಪಿಗಳಿವೆಯಾ ಪರಿಶೀಲಿಸಿ
ನವದೆಹಲಿ, ಜನವರಿ 30: ನೀವು ಯುಪಿಐನಲ್ಲಿ ಹಣ ಪಾವತಿ ಮಾಡಿದಾಗ ಒಂದು ಟ್ರಾನ್ಸಾಕ್ಷನ್ ಐಡಿ ಜನರೇಟ್ ಆಗುತ್ತದೆ. ಅದರಲ್ಲಿ ಅಕ್ಷರ, ಸಂಖ್ಯೆ ಮತ್ತು ಸ್ಪೆಷಲ್ ಕ್ಯಾರಕ್ಟರ್ಗಳ ಸಂಯೋಜನೆ ಇರಬಹುದು. ಎನ್ಪಿಸಿಐ ನಿರ್ದೇಶನದ ಪ್ರಕಾರ ಈ ಟ್ರಾನ್ಸಾಕ್ಷನ್ ಐಡಿ ಆಲ್ಫಾ ನ್ಯೂಮರಿಕ್ ಕ್ಯಾರೆಕ್ಟರ್ ಮಾತ್ರವೇ ಹೊಂದಿರಬೇಕೆಂದಿದೆ. ಈ ಬಗ್ಗೆ ವರದಿ....
Updated on: Jan 30, 2025 | 12:30 PM

ಫೆಬ್ರುವರಿ 1ರಿಂದ ಯುಪಿಐ ವಹಿವಾಟು ನಿಯಮಗಳಲ್ಲಿ ಕೆಲ ಬದಲಾವಣೆ ಬರಲಿದೆ. ಯುಪಿಐ ಟ್ರಾನ್ಸಾಕ್ಷನ್ ಐಡಿಯಲ್ಲಿ ಸ್ಪೆಷಲ್ ಕ್ಯಾರಕ್ಟರ್ಗಳಿದ್ದರೆ ಅಂಥವಕ್ಕೆ ಅವಕಾಶ ಇರುವುದಿಲ್ಲ. ನಿಮ್ಮಲ್ಲಿರುವ ಯುಪಿಐ ಆ್ಯಪ್ಗಳಲ್ಲಿ ಈ ರೀತಿಯ ಟ್ರಾನ್ಸಾಕ್ಷನ್ ಐಡಿ ಬಳಸುತ್ತಿದ್ದರೆ ಎಚ್ಚರ ವಹಿಸಿ. ನಿಮ್ಮ ವಹಿವಾಟನ್ನು ಸೆಂಟ್ರಲ್ ಸಿಸ್ಟಂ ತಿರಸ್ಕರಿಸಬಹುದು. ಯುಪಿಐ ಟ್ರಾನ್ಸಾಕ್ಷನ್ ಐಡಿ ನೀಡುವ ಪ್ರಕ್ರಿಯೆಯನ್ನು ಸಂಬದ್ದಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಪೇಮೆಂಟ್ ಕಾರ್ಪೊರೇಶನ್ (ಎನ್ಪಿಸಿಐ) ಈ ಕ್ರಮ ತೆಗೆದುಕೊಳ್ಳುತ್ತಿದೆ.

ಎನ್ಪಿಸಿಐ ಹೊರಡಿಸಿರುವ ನಿರ್ದೇಶನಗಳ ಪ್ರಕಾರ, ಯುಪಿಐ ಆಪರೇಟರ್ಗಳು ಯಾವುದೇ ವಹಿವಾಟಿನಲ್ಲಿ ಜನರೇಟ್ ಮಾಡುವ ಟ್ರಾನ್ಸಾಕ್ಷನ್ ಐಡಿಯಲ್ಲಿ ಆಲ್ಫಾನ್ಯೂಮರಿಕ್ ಕ್ಯಾರಕ್ಟರ್ಗಳು ಮಾತ್ರ ಇರಬೇಕು. ಅಂದರೆ, ಅಂಕಿ ಮತ್ತು ಅಕ್ಷರಗಳ ಸಂಯೋಜನೆ ಮಾತ್ರವೇ ಇರಬೇಕು. ಸ್ಟಾರ್, ಅಂಡರ್ಸ್ಕೋರ್, ಹೈಫನ್ ಇತ್ಯಾದಿ ಬೇರೆ ವಿಶೇಷ ಕ್ಯಾರಕ್ಟರ್ಗಳಿರಬಾರದು ಎಂದು ತಿಳಿಸಲಾಗಿದೆ.

2024ರ ಮಾರ್ಚ್ ತಿಂಗಳಲ್ಲೇ ಯುಪಿಐ ಇಕೋಸಿಸ್ಟಂನ ಭಾಗಿದಾರರಿಗೆ ಈ ಬಗ್ಗೆ ತಿಳಿಸಲಾಗಿತ್ತು. ಹೆಚ್ಚಿನ ಪಿಎಸ್ಪಿಗಳು ಈ ನಿಯಮಕ್ಕೆ ಬದ್ಧವಾಗಿವೆ. ಕೆಲವೇ ಪಿಎಸ್ಪಿಗಳು ಮಾತ್ರ ಈಗಲೂ ಟ್ರಾನ್ಸಾಕ್ಷನ್ ಐಡಿಯಲ್ಲಿ ಸ್ಪೆಷಲ್ ಕ್ಯಾರಕ್ಟರ್ ಬಳಸುತ್ತಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ, ಸ್ಪೆಷಲ್ ಕ್ಯಾರಕ್ಟರ್ ಇರುವ ಟ್ರಾನ್ಸಾಕ್ಷನ್ ಐಡಿ ಜನರೇಟ್ ಆದರೆ, ಅಂಥ ಪೇಮೆಂಟ್ ಅನ್ನು ತಿರಸ್ಕರಿಸಲು ನಿರ್ಧರಿಸಲಾಗಿದೆ. ಫೆಬ್ರುವರಿ 1ರಿಂದ ಈ ನಿಯಮ ಜಾರಿಗೆ ಬರಲಿದೆ.

ಇಲ್ಲಿ ಪಿಎಸ್ಪಿ ಎಂದರೆ ಪೇಮೆಂಟ್ ಸರ್ವಿಸ್ ಪ್ರೊವೈಡರ್. ಅಂದರೆ, ಬ್ಯಾಂಕುಗಳು ಇಲ್ಲಿ ಪಿಎಸ್ಪಿಗಳು. 600ಕ್ಕೂ ಹೆಚ್ಚು ಪಿಎಸ್ಪಿಗಳು ಯುಪಿಐನಲ್ಲಿವೆ. ನಾವು ನೀವು ಯುಪಿಐ ಆ್ಯಪ್ (ಟಿಪಿಎಪಿ) ಮೂಲಕ ಹಣ ವಹಿವಾಟು ಮಾಡುವಾಗ ಪಿಎಸ್ಪಿ ಮೂಲಕ ಇದು ನಡೆಯುತ್ತದೆ. ಒಂದು ಯುಪಿಐ ಆ್ಯಪ್ನಲ್ಲಿ ನೀವು ಹಲವು ಪಿಎಸ್ಪಿಗಳನ್ನು ಹೊಂದಿರಬಹುದು.

ಈಗ ಎನ್ಪಿಸಿಐ ನಿರ್ದೇಶನದ ಪ್ರಕಾರ, ಟ್ರಾನ್ಸಾಕ್ಷನ್ ಐಡಿಯಲ್ಲಿ ಆಲ್ಫಾನ್ಯೂಮರಿಕ್ ಕ್ಯಾರಕ್ಟರ್ ಮಾತ್ರವೇ ಇರಬೇಕು. ಸ್ಪೆಷಲ್ ಕ್ಯಾರಕ್ಟರ್ ಇರಬಾರದು. ನಿಯಮಕ್ಕೆ ಬದ್ಧವಾಗಿಲ್ಲದ ಪಿಎಸ್ಪಿಗಳನ್ನು ಯುಪಿಐ ಆ್ಯಪ್ಗಳು ತಮ್ಮ ಪ್ಲಾಟ್ಫಾರ್ಮ್ನಿಂದ ತೆಗೆದುಹಾಕಬೇಕಾಗಬಹುದು. ನಿಮ್ಮ ಯುಪಿಐ ಆ್ಯಪ್ಗಳಲ್ಲಿ ಹಿಂದೆ ಮಾಡಿರುವ ಪೇಮೆಂಟ್ಗಳನ್ನು ಪರಿಶೀಲಿಸಿ, ಅವುಗಳ ಟ್ರಾನ್ಸಾಕ್ಷನ್ ಐಡಿಯನ್ನು ಗಮನಿಸಿ ನೋಡಿ. ಅದರಲ್ಲಿ ಸ್ಪೆಷಲ್ ಕ್ಯಾರೆಕ್ಟರ್ ಇದ್ದಲ್ಲಿ, ನಿಮ್ಮ ಹಣ ವಹಿವಾಟಿಗೆ ಆ ಆ್ಯಪ್ ಅನ್ನು ಬಳಸಲು ಹೋಗದಿರಿ.
























