ಸ್ಟೀವ್ ಸ್ಮಿತ್ ಹೆಸರಿಗೆ ಮತ್ತೊಂದು ಸೆಂಚುರಿ, ಮಗದೊಂದು ದಾಖಲೆ
Steve Smith Records: ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಇತಿಹಾಸದಲ್ಲಿ 10 ಸಾವಿರ ರನ್ ಕಲೆಹಾಕಿದ ವಿಶ್ವದ 15ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸ್ಟೀವ್ ಸ್ಮಿತ್ ಇದೀಗ ಮತ್ತೊಂದು ಸೆಂಚುರಿ ಸಿಡಿಸಿದ್ದಾರೆ. ಈ ಸೆಂಚುರಿಯೊಂದಿಗೆ ಟೆಸ್ಟ್ನಲ್ಲಿ ಮಗದೊಂದು ದಾಖಲೆಯನ್ನು ಸಹ ಬರೆದಿದ್ದಾರೆ.
Updated on: Jan 30, 2025 | 8:20 AM

ಟೆಸ್ಟ್ ಕ್ರಿಕೆಟ್ನಲ್ಲಿ ಸ್ಟೀವ್ ಸ್ಮಿತ್ ಆರ್ಭಟ ಮುಂದುವರೆದಿದೆ. ಗಾಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಮಿತ್ ಆಕರ್ಷಕ ಶತಕ ಬಾರಿಸಿದ್ದಾರೆ. ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಮಿತ್ 179 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಸೆಂಚುರಿಯೊಂದಿಗೆ ಟೆಸ್ಟ್ನಲ್ಲಿ ಅತೀ ವೇಗವಾಗಿ 35 ಶತಕಗಳನ್ನು ಬಾರಿಸಿದ 3ನೇ ಬ್ಯಾಟರ್ ಎಂಬ ದಾಖಲೆ ಬರೆದರು.

ಟೆಸ್ಟ್ ಇತಿಹಾಸದಲ್ಲಿ ಅತೀ ವೇಗವಾಗಿ 35 ಸೆಂಚುರಿ ಸಿಡಿಸಿದ ವಿಶ್ವ ದಾಖಲೆ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಹೆಸರಿನಲ್ಲಿದೆ. ಪಂಟರ್ ಪಾಂಟಿಂಗ್ ಕೇವಲ 194 ಇನಿಂಗ್ಸ್ಗಳ ಮೂಲಕ ಈ ಸಾಧನೆ ಮಾಡಿದ್ದರು. ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್.

ಸಚಿನ್ ತೆಂಡೂಲ್ಕರ್ 200 ಇನಿಂಗ್ಸ್ಗಳ ಮೂಲಕ 35 ಶತಕಗಳ ಸಾಧನೆ ಮಾಡಿದ್ದರು. ಇದೀಗ ಸ್ಟೀವ್ ಸ್ಮಿತ್ 205 ಇನಿಂಗ್ಸ್ಗಳೊಂದಿಗೆ 35 ಶತಕ ಪೂರೈಸಿದ್ದಾರೆ. ಈ ಮೂಲಕ ಟೆಸ್ಟ್ನಲ್ಲಿ ಅತೀ ವೇಗವಾಗಿ 35 ಸೆಂಚುರಿ ಸಿಡಿಸಿದ 3ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನು ಈ 35ನೇ ಶತಕದೊಂದಿಗೆ ಸ್ಟೀವ್ ಸ್ಮಿತ್ ಟೆಸ್ಟ್ ಶತಕಗಳ ಸರದಾರ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ (34), ಯೂನಿಸ್ ಖಾನ್ (34), ಬ್ರಿಯಾನ್ ಲಾರಾ (34), ಮಹೇಲ ಜಯವರ್ಧನೆ (34) ಯನ್ನು ಹಿಂದಿಕ್ಕಿದ್ದಾರೆ. ಅಲ್ಲದೆ ಸೆಂಚುರಿ ಸರದಾರರ ಪಟ್ಟಿಯಲ್ಲಿ ಸ್ಮಿತ್ 7ನೇ ಸ್ಥಾನಕ್ಕೇರಿದ್ದಾರೆ.

ಹಾಗೆಯೇ ಈ ಸೆಂಚುರಿಯೊಂದಿಗೆ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ 10000+ ರನ್ ಕಲೆಹಾಕಿದ ಬ್ಯಾಟರ್ಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ಅಲ್ಲದೆ ರಿಕಿ ಪಾಂಟಿಂಗ್, ಅಲನ್ ಬಾರ್ಡರ್, ಸ್ಟೀವ್ ವಾ ನಂತರ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ 4ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನು ಸ್ಟೀವ್ ಸ್ಮಿತ್ (104) ಹಾಗೂ ಉಸ್ಮಾನ್ ಖ್ವಾಜಾ (147) ಅವರ ಅಜೇಯ ಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡವು ಈ ಪಂದ್ಯದ ಮೊದಲ ದಿನದಾಟದ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 330 ರನ್ ಕಲೆಹಾಕಿದೆ. ಈ ಮೂಲಕ ಲಂಕಾ ಪಿಚ್ನಲ್ಲಿ ಆಸ್ಟ್ರೇಲಿಯಾ ಮೊದಲ ದಿನದಾಟದಲ್ಲೇ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ.



















