- Kannada News Photo gallery Cricket photos Shardul Thakur's Ranji Hattrick: Mumbai's Star Bowler Shines
Ranji Trophy: ಶಾರ್ದೂಲ್ ಠಾಕೂರ್ ಹ್ಯಾಟ್ರಿಕ್ ವಿಕೆಟ್; ಎರಡಂಕಿ ಮೊತ್ತಕ್ಕೆ ಎದುರಾಳಿ ಆಲೌಟ್
Shardul Thakur's Ranji Hattrick: ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡುತ್ತಿರುವ ಶಾರ್ದೂಲ್ ಠಾಕೂರ್ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಹ್ಯಾಟ್ರಿಕ್ ಸೇರಿದಂತೆ 4 ವಿಕೆಟ್ ಪಡೆದು ತಮ್ಮ ತಂಡ ಮೇಲುಗೈ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಶಾರ್ದೂಲ್ ಅವರ ಅತ್ಯುತ್ತಮ ಪ್ರದರ್ಶನಗಳಲ್ಲಿ ಒಂದಾಗಿದೆ.
Updated on: Jan 30, 2025 | 4:31 PM

ಒಂದೆಡೆ ಟೀಂ ಇಂಡಿಯಾದ ಸ್ಟಾರ್ ಆಟಗಾರರು ರಣಜಿ ಟ್ರೋಫಿಯಲ್ಲಿ ಧಯನೀಯವಾಗಿ ವಿಫಲರಾಗುತ್ತಿದ್ದರೆ, ಮತ್ತೊಂದೆಡೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಲುವಾಗಿ ಇತರೆ ಆಟಗಾರರು ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಅವರುಗಳಲ್ಲಿ ವೇಗದ ಬೌಲಿಂಗ್ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಕೂಡ ಒಬ್ಬರು. ರಣಜಿ ಟ್ರೋಫಿಯಲ್ಲಿ ತಮ್ಮ ಪ್ರದರ್ಶನದ ಮೂಲಕ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುವಲ್ಲಿ ಶಾರ್ದೂಲ್ ಯಶಸ್ವಿಯಾಗಿದ್ದಾರೆ.

ರಣಜಿಯಲ್ಲಿ ಮುಂಬೈ ಪರ ಆಡುತ್ತಿರುವ ಶಾರ್ದೂಲ್ ಕಳೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯದಲ್ಲಿ ರೋಹಿತ್, ಶ್ರೇಯಸ್, ರಹಾನೆ, ಯಶಸ್ವಿ ಜೈಸ್ವಾಲ್ರಂತಹ ಸ್ಟಾರ್ ಆಟಗಾರರ ವೈಫಲ್ಯದ ನಡುವೆಯೂ ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದ ಶಾರ್ದೂಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿದ್ದರು. ಆದಾಗ್ಯೂ ತಂಡದ ಸೋಲನ್ನು ತಪ್ಪಿಸಲು ಸಾಧ್ಯವಾಗಿರಲಿಲ್ಲ

ಆದರೀಗ ಇಂದಿನಿಂದ ಆರಂಭವಾಗಿರುವ ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್ನಲ್ಲಿ ಕಮಾಲ್ ಮಾಡಿರುವ ಶಾರ್ದೂಲ್ ಹ್ಯಾಟ್ರಿಕ್ ವಿಕೆಟ್ ಪಡೆದು ಎದುರಾಳಿ ತಂಡ ಮಂಡಿಯೂರುವಂತೆ ಮಾಡಿದ್ದಾರೆ. ಶಾರ್ದೂಲ್ ಅವರ ಮಾರಕ ಬೌಲಿಂಗ್ಗೆ ತತ್ತರಿಸಿದ ಮೇಘಾಲಯ ತಂಡದ ಅರ್ಧದಷ್ಟು ಆಟಗಾರರು ಎರಡಂಕಿ ಮೊತ್ತ ದಾಟಲಾಗದೆ ಪೆವಿಲಿಯನ್ ಸೇರಿಕೊಂಡಿದ್ದಾರೆ.

ಈ ಮೂಲಕ ಶಾರ್ದೂಲ್ ಠಾಕೂರ್ ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಐದನೇ ಬೌಲರ್ ಎನಿಸಿಕೊಂಡಿದ್ದಾರೆ. ಮುಂಬೈ ಮತ್ತು ಮೇಘಾಲಯ ನಡುವಿನ ಈ ಪಂದ್ಯ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮುಂಬೈ ನಾಯಕ ಅಜಿಂಕ್ಯ ರಹಾನೆ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು.

ಮುಂಬೈ ಪರ ದಾಳಿಗಿಳಿದ ಶಾರ್ದೂಲ್ ಠಾಕೂರ್ ಮತ್ತು ಮೋಹಿತ್ ಅವಸ್ಥಿ ಮೇಘಾಲಯ ಆಟಗಾರರನ್ನು ರನ್ಗಾಗಿ ಪರದಾಡುವಂತೆ ಮಾಡಿದರು. ಶಾರ್ದೂಲ್ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ನಿಶಾಂತ್ ಚಕ್ರವರ್ತಿ ಅವರನ್ನು ಔಟ್ ಮಾಡುವ ಮೂಲಕ ಮೇಘಾಲಯಕ್ಕೆ ಮೊದಲ ಹೊಡೆತ ನೀಡಿದರು. ಎರಡನೇ ಓವರ್‌ನಲ್ಲಿ ಮೋಹಿತ್ ಒಂದು ವಿಕೆಟ್ ಪಡೆದರು.

ಇದಾದ ನಂತರ ಮೂರನೇ ಓವರ್‌ನ ಮೊದಲ 3 ಎಸೆತಗಳಲ್ಲಿ ಶಾರ್ದೂಲ್ 1 ರನ್ ನೀಡಿದರು. ಆ ನಂತರ ನಾಲ್ಕನೇ, ಐದನೇ ಮತ್ತು ಆರನೇ ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ 3 ವಿಕೆಟ್ ಪಡೆದು ಹ್ಯಾಟ್ರಿಕ್ ಪೂರೈಸಿ ಮೇಘಾಲಯ ತಂಡದ ಅರ್ಧದಷ್ಟು ಆಟಗಾರರನ್ನು ಪೆವಿಲಿಯನ್ಗೆ ಕಳುಹಿಸಿದರು. ಇದಾದ ನಂತರವೂ ವಿಕೆಟ್‌ಗಳ ಸರಣಿ ಮುಂದುವರಿಯಿತು.

ಮೊದಲ ದಿನದಾಟದಲ್ಲೇ ತತ್ತರಿಸಿದ ಮೇಘಾಲಯ ತಂಡ 24.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 86 ರನ್ ಕಲೆಹಾಕಿದೆ. ತಂಡದ ಪರ ಶಾರ್ದೂಲ್ 11 ಓವರ್ ಗಳಲ್ಲಿ 43 ರನ್ ನೀಡಿ 4 ವಿಕೆಟ್ ಪಡೆದರೆ, ಮೋಹಿತ್ ಅವಸ್ತಿ 7 ಓವರ್ ಗಳಲ್ಲಿ 27 ರನ್ ನೀಡಿ 3 ವಿಕೆಟ್ ಹಾಗೂ ಸಿಲ್ವೆಸ್ಟರ್ ಡಿಸೋಜಾ 5.3 ಓವರ್ ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದರು.



















