- Kannada News Photo gallery Cricket photos Mohammed Siraj's Resurgence: Stellar Ranji Performance After Team India Omission
Mohammed Siraj: 87 ಎಸೆತಗಳಲ್ಲಿ ಸೊನ್ನೆ ರನ್; ರೋಹಿತ್ಗೆ ತಕ್ಕ ಉತ್ತರ ನೀಡಿದ ಸಿರಾಜ್
Mohammed Siraj: ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮೊಹಮ್ಮದ್ ಸಿರಾಜ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿದೆ. ಆದರೆ, ರಣಜಿ ಟ್ರೋಫಿಯಲ್ಲಿ ಸಿರಾಜ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ವಿದರ್ಭ ವಿರುದ್ಧದ ಪಂದ್ಯದಲ್ಲಿ ಒಂದೇ ಒಂದು ವಿಕೆಟ್ ಪಡೆದರೂ, ತಮ್ಮ ಬಿಗಿ ಬೌಲಿಂಗ್ ಮೂಲಕ ಸಿರಾಜ್, ಬರೋಬ್ಬರಿ 87 ಡಾಟ್ ಬಾಲ್‌ಗಳನ್ನು ಎಸೆದಿದ್ದಾರೆ. ಈ ಮೂಲಕ ತಾನು ಯಾವ ರೀತಿಯ ಬೌಲರ್ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ.
Updated on:Jan 30, 2025 | 9:46 PM

ಆಸ್ಟ್ರೇಲಿಯಾ ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮೊಹಮ್ಮದ್ ಸಿರಾಜ್ರನ್ನು ಸದ್ಯ ಟೀಂ ಇಂಡಿಯಾದಿಂದ ಕೈಬಿಡಲಾಗಿದೆ. ಇದೀಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲೂ ಸಿರಾಜ್ಗೆ ಅವಕಾಶ ನೀಡಿಲ್ಲ. ಇದರ ಜೊತೆಗೆ ಏಕದಿನ ಸರಣಿಯಲ್ಲೂ ಸ್ಥಾನ ಪಡೆದಿಲ್ಲ. ಅಷ್ಟೇ ಅಲ್ಲ, ಚಾಂಪಿಯನ್ಸ್ ಟ್ರೋಫಿಗೂ ಸಿರಾಜ್ ಭಾರತ ತಂಡದಲ್ಲಿ ಆಯ್ಕೆಯಾಗಿಲ್ಲ.

ಹೀಗಾಗಿ ತಮ್ಮ ಹಳೆಯ ಲಯವನ್ನು ಮರಳಿ ಪಡೆಯುವತ್ತ ಗಮನ ಹರಿಸಿರುವ ಸಿರಾಜ್ ಇದೀಗ ರಣಜಿ ಟ್ರೋಫಿಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. ನಾಗ್ಪುರದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹೈದರಾಬಾದ್ ಹಾಗೂ ವಿದರ್ಭ ತಂಡಗಳ ನಡುವೆ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಿದರ್ಭ ತಂಡ ಕೇವಲ 190 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದೆ.

ವಿದರ್ಭ ತಂಡವನ್ನು ಇಷ್ಟು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಮೊಹಮ್ಮದ್ ಸಿರಾಜ್ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಕೇವಲ ಒಂದು ವಿಕೆಟ್ ಪಡೆದರಾದರೂ, ತಮ್ಮ ಬಿಗಿ ಬೌಲಿಂಗ್ ದಾಳಿಯಿಂದ ಎದುರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಇದರ ಲಾಭ ಪಡೆದ ಸಹ ಬೌಲರ್‌ಗಳು ಸುಲಭವಾಗಿ ವಿಕೆಟ್ ಪಡೆದರು.

ಸಿರಾಜ್ ಮಾಂತ್ರಿಕ ದಾಳಿಯ ಮುಂದೆ ವಿದರ್ಭ ತಂಡ ಅಕ್ಷರಶಃ ತತ್ತರಿಸಿತು. ಅದು ಎಷ್ಟರಮಟ್ಟಿಗೆ ಎಂದರೆ ಸಿರಾಜ್ ಬೌಲ್ ಮಾಡಿದ 87 ಎಸೆತಗಳಲ್ಲಿ ವಿದರ್ಭ ತಂಡಕ್ಕೆ ಒಂದೇ ಒಂದು ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ವಿದರ್ಭ ವಿರುದ್ಧ 18 ಓವರ್‌ಗಳನ್ನು ಬೌಲ್ ಮಾಡಿದ ಸಿರಾಜ್, 7 ಮೇಡನ್ ಓವರ್‌ಗಳನ್ನು ಬೌಲ್ ಮಾಡಿದರು. ಇದಲ್ಲದೆ ಇದರಲ್ಲಿ 87 ಡಾಟ್ ಬಾಲ್ಗಳು ಸೇರಿರುವುದು ವಿಶೇಷ.

ವಾಸ್ತವವಾಗಿ ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾವನ್ನು ಪ್ರಕಟಿಸುವ ವೇಳೆ ಮಾತನಾಡಿದ್ದ ರೋಹಿತ್ ಶರ್ಮಾ, ಸಿರಾಜ್ ಹಳೆಯ ಚೆಂಡಿನಲ್ಲಿ ಅಷ್ಟು ಪರಿಣಾಮಕಾರಿಯಾಲ್ಲ ಎಂದಿದ್ದರು. ಇದೀಗ ವಿದರ್ಭ ತಂಡದ ವಿರುದ್ಧ ಮಾರಕ ದಾಳಿ ನಡೆಸಿರುವ ಸಿರಾಜ್, ರೋಹಿತ್ ಹೇಳಿಕೆಗೆ ಟಾಂಗ್ ನೀಡಿದಂತ್ತಾಗಿದೆ. ಅಂದಹಾಗೆ, ಟೀಂ ಇಂಡಿಯಾದಿಂದ ಹೊರಗಿದ್ದರೂ ಸಿರಾಜ್ ಸುಮ್ಮನೆ ಕುಳಿತಿಲ್ಲ. ನಿರಂತರವಾಗಿ ಅಭ್ಯಾಸದಲ್ಲಿ ಮುಳುಗಿರುವ ಸಿರಾಜ್ ತಂಡಕ್ಕೆ ಮರಳಬಹುದು ಎಂದು ಹೇಳಲಾಗುತ್ತಿದೆ.

ಏಕೆಂದರೆ ಜಸ್ಪ್ರೀತ್ ಬುಮ್ರಾ ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಅಷ್ಟೇ ಅಲ್ಲ ಮೊಹಮ್ಮದ್ ಶಮಿ ಕೂಡ ಇನ್ನೂ ಫಿಟ್ ಆಗಿಲ್ಲ. ಆದಾಗ್ಯೂ ಇಂಗ್ಲೆಂಡ್ ವಿರುದ್ಧ ಮೂರನೇ ಟಿ20 ಪಂದ್ಯದಲ್ಲಿ ಆಡುವ ಅವಕಾಶವನ್ನು ಶಮಿ ಪಡೆದರಾದರೂ ಅವರ ಬೌಲಿಂಗ್ನಲ್ಲಿ ಯಾವುದೇ ವಿಶೇಷತೆ ಕಂಡುಬರಲಿಲ್ಲ. ಹೀಗಾಗಿ ಸಿರಾಜ್ರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆಗಳಿವೆ.
Published On - 7:54 pm, Thu, 30 January 25



















