ಶರಣು ಮಣ್ಣಿಗೆ : 50 ರೂಪಾಯಿ ಮಣ್ಣಿಗೆ 300 ರೂಪಾಯಿ ಕೊಟ್ಟುಬಿಟ್ಟಿದ್ದೆ!

|

Updated on: Apr 24, 2021 | 11:32 AM

‘ಭತ್ತಕ್ಕೆ ಕದಿರು ಮೂಡಿ ಭತ್ತ ತೆನೆ ಒಡೆದಾಗ ಎಳೆ ಭತ್ತವನ್ನು ತಿನ್ನಲು ಬರುವ ಹಕ್ಕಿಗಳ ಓಡಿಸಲು ಜಂವಟೆ ತೆಗೆದುಕೊಂಡು ಬಾರಿಸುವಾಗ ಸಣ್ಣ ಸಣ್ಣ ಬದುವಿನ ಮೇಲೆ ಬ್ಯಾಲೆನ್ಸ್ ಮಾಡುತ್ತ , ಒಮ್ಮೊಮ್ಮೆ ನೀರು ಕಟ್ಟಿದ ಗದ್ದೆಯಲ್ಲೇ ದಬಕ್ಕೆಂದು ಬಿದ್ದು , ಅಂಗಿಯೆಲ್ಲಾ ಮಣ್ಣುಮಾಡಿಕೊಂಡು ಅದು ಅಲ್ಲೇ ಒಣಗಿ ರಟ್ಟಿನಂತಾದ ಸಮಯದಲ್ಲೆಲ್ಲೋ ಮಣ್ಣು ನನ್ನೊಳಗಾಯಿತು.‘ ವಿದ್ಯಾ ಭರತನಹಳ್ಳಿ

ಶರಣು ಮಣ್ಣಿಗೆ : 50 ರೂಪಾಯಿ ಮಣ್ಣಿಗೆ 300 ರೂಪಾಯಿ ಕೊಟ್ಟುಬಿಟ್ಟಿದ್ದೆ!
ಲೇಖಕಿ ವಿದ್ಯಾ ಭರತನಹಳ್ಳಿ
Follow us on

ಎಕರೆಗಟ್ಟಲೇ ಹೊಲವೇ ಬೇಕಿಲ್ಲ ಉಳಬೇಕೆಂಬ ಆಸೆ ಇದ್ದರೆ. ಬಂಡಿಗಟ್ಟಲೆ ಮಣ್ಣೇ ಬೇಕಿಲ್ಲ ಬೆಳೆಯಬೇಕೆಂದಿದ್ದರೆ. ಬೆಳೆ ಕೈಗೆ ಬರಲು ಬಾವಿಯನ್ನೇ ತೋಡಬೇಕಿಲ್ಲ. ಕೇವಲ ಒಂದು ಹಿಡಿ ಜೀವಚೈತನ್ಯ ಸಾಕು; ಚೈತನ್ಯ ಎಲ್ಲಿಂದಲೋ ಹಾರಿಬರುವಂಥದಲ್ಲ, ಹರಿದು ಬರುವಂಥದಲ್ಲ, ತಂದು ತೊಟ್ಟುಕೊಳ್ಳುವಂಥದ್ದಲ್ಲ, ಹಿಡಿದು ತೋರಿಸುವಂಥದ್ದಲ್ಲ. ಎಳೆದು ಕಟ್ಟುವಂಥದ್ದಲ್ಲ. ಧುತ್ತನೆ ಪವಡಿಸುವಂಥದ್ದೂ ಅಲ್ಲ! ಅಗಾಧ ಪ್ರೀತಿಯನ್ನೂ, ಅನವರತ ಆರೈಕೆಯನ್ನೂ, ತುಸು ಜೀವಕಾರುಣ್ಯವನ್ನೂ ಮತ್ತು ಹೆಚ್ಚು ಸಂಯಮವನ್ನೂ ದೂರ ದೃಷ್ಟಿಕೋನವನ್ನೂ ಬೇಡುವ ಶ್ರಮದ ಫಲ.

ಈಗಂತೂ ಅಟ್ಟಹಾಸಗೈಯ್ಯುತ್ತಿರುವ ಕೊರೊನಾದ ತೆಕ್ಕೆಯಿಂದ ಬಿಡಿಸಿಕೊಳ್ಳುವುದೊಂದೇ ನಮ್ಮೆಲ್ಲರ ಪರಮಗುರಿ. ಅತ್ತ ಹಳ್ಳಿಯ ರೈತರು ಆನ್​ಲೈನ್​ ಮಾರಾಟದ ಭಾಷೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಇತ್ತ ಕೈಬೀಸಿ ಕರೆದ ಕನಸುಗಳಿಗೋ ಅನಿವಾರ್ಯತೆಗಳಿಗೋ ನಗರ ಸೇರಿದ ಕೆಲವರು ನಿಧಾನ ಹಳ್ಳಿಗಳಿಗೆ ಮರಳುತ್ತಿದ್ದಾರೆ, ಹಸಿರಿನ ಹಂಬಲಕ್ಕೆ ಮುಖ ಮಾಡುತ್ತಿದ್ದಾರೆ. ಇನ್ನು ಸ್ವಂತ ಭೂಮಿ ಇಲ್ಲದವರು ರೈತರ ಭೂಮಿಯನ್ನು ಗುತ್ತಿಗೆಗೆ ಪಡೆದು ಅಂಬೆಗಾಲಿಡಲು ನೋಡುತ್ತಿದ್ದಾರೆ. ಸಾಫ್ಟ್​ವೇರ್ ತಂತ್ರಜ್ಞರು ಮಹಾನಗರಗಳ ಹೊರವಲಯಗಳಲ್ಲಿ ನಡೆಸುತ್ತಿರುವ ಹೊಲಪಾಠಗಳಿಗೆ ತಪ್ಪದೇ ವಾರಾಂತ್ಯವನ್ನು ಮೀಸಲಿಡುತ್ತಿದ್ದಾರೆ. ಇನ್ನೂ ಹಲವರು ಹಿತ್ತಲು, ಅಂಗಳು, ಮಾಳಿಗೆಯ ಮೇಲೆಲ್ಲ ಉತ್ತಿ ಬಿತ್ತಿ ಹಸಿರನ್ನೇ ಉಸಿರಾಡುತ್ತಿದ್ದಾರೆ; ಬೆಳೆಯುವುದು ಬೆಳೆಸುವುದು ಅಪ್ಪಟ ಜೈವಿಕ ಪ್ರಕ್ರಿಯೆ. ಈ ಬೆರಗುನೋಟಕ್ಕೆ ಹೊರಳುತ್ತಿರುವವರ ಅನುಭವ ಕಥನಗಳು ಇನ್ನುಮುಂದೆ ‘ಶರಣು ಮಣ್ಣಿಗೆ’ ಸರಣಿಯಲ್ಲಿ ಪ್ರಕಟವಾಗಲಿವೆ. ಓದುತ್ತ ಓದುತ್ತ ನೀವೂ ಕೂಡ ಈ ಸರಣಿಗೆ ಬರೆಯಬಹುದು. tv9kannadadigital@gmail.com

ವಿದ್ಯಾ ಭರತನಹಳ್ಳಿ ಅವರು ಸಂಯುಕ್ತ ಕರ್ನಾಟಕ, ಕರ್ಮವೀರ, ಹಾಯ್ ಬೆಂಗಳೂರ್ ಪತ್ರಿಕೆಗಳಲ್ಲಿ ಉಪಸಂಪಾದಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಕವಿತೆ, ಕತೆ, ಲೇಖನಗಳನ್ನು ಬರೆಯುವುದು ಹವ್ಯಾಸ. ಈಗಿವರು ಮಣ್ಣಿಗೆ ಶರಣಾದ ಬಗೆಯನ್ನು ಹಂಚಿಕೊಂಡಿದ್ದಾರೆ.

*

‘ಈ ಓಳಿ ನಿಮ್ಮದು. ಇದಕ್ಕೆ ನೀರು, ಗೊಬ್ಬರ ಎಲ್ಲ ನೀವೇ ಹಾಕಿ’ ಅಂತ ಒಂದೊಂದು ಮಡಿಯನ್ನು ನಮಗೆ ಮಕ್ಕಳಿಗೆ ಬಿಟ್ಟುಕೊಡುವುದರ ಮೂಲಕ ಅಬ್ಬೆ( ಅಮ್ಮ) ಮಣ್ಣಿನೊಂದಿಗೆ ನಂಟು ಶುರು ಮಾಡಿಸಿದಳು. ಪಾಟಿಚೀಲ ಹೊತ್ತಾಕಿ, ಹಸಿವೆಗೆ ತಿಂದು, ಗದ್ದೆಗೆ ಓಡುತ್ತಿದ್ದೆವು, ಬೇಸಿಗೆಯ ಕಾಯಿಪಲ್ಲೆ ಬೆಳೆಯುವಲ್ಲಿ. ಪಂಪ್ಸೆಟ್ನಿಂದ ನೀರು ಪೈಪ್ ಮೂಲಕ ಬಿದ್ದ ಹೊಂಡದಿಂದ ನೀರು ಎತ್ತಿ ಹಾಕುವುದೇ ಒಂದು ಸಂಭ್ರಮ. ಆಮೇಲೆ ಮಗೆಕಾಯಿ, ಬದನೆಕಾಯಿ, ಸೌತೆಕಾಯಿ, ಅಂಗಿಕಸೆ, ಬೆಂಡೆಕಾಯಿ, ಮೆಕ್ಕೆಹಣ್ಣು, ಕಲ್ಲಂಗಡಿ ಹಣ್ಣು ಎಲ್ಲ ಬೆಳೆದಮೇಲೆ ಎಲ್ಲರ ಕಾಯಿಗಳೂ ಒಟ್ಟಾಗಿ ಮಂಕರಿ ತುಂಬಿ ಮನೆಗೆ ತರುವಾಗ ಖುಷಿಯೋ‌ ಖುಷಿ. ಮಳೆಗಾಲದಲ್ಲಿ ಘಟ್ಟದ ಕೆಳಗಿನಿಂದ ಬಂದು ಬಿಡಾರ ಮಾಡಿಕೊಂಡು ಗದ್ದೆ, ತೋಟದ ಕೆಲಸವೆಲ್ಲ ಮಾಡುತ್ತಿದ್ದ ತಂಡದವರ ಜೊತೆ ಅರಲು ಗದ್ದೆಗೆ ಇಳಿದು ಭತ್ತದ ಸಸಿ ನೆಡುವುದೂ ಒಂದು ಆಟವಾಗಿ ಮಣ್ಣು ರಾಡಿ ಇಶ್ಶೀ ಅನ್ನಿಸಲೇ ಇಲ್ಲ.

ಭತ್ತ ಬೆಳೆದಾದ ಮೇಲೆ ಗದ್ದೆಯನ್ನು ಖಾಲಿ ಬಿಡದೆ ಉದ್ದು, ಬವಡೆ,( ಅಲಸಂದೆ) ಶೇಂಗಾ ಇತ್ಯಾದಿ ಬೆಳೆಯುವಾಗ ಕೂಡ ಬಿಸಿಲು ಬೆಂಕಿಯಿಲ್ಲದೆ ಗದ್ದೆಯಲ್ಲಿ ಇರುವುದೇ ಹೆಚ್ಚಾಗಿತ್ತು. ಶೇಂಗಾವನ್ನಂತೂ ಬೆಳೆಯಿತಾ ಅಂತ ಕಿತ್ತು ಕಿತ್ತು ನೋಡಿ ಹಸಿ ಮಣ್ಣಿನ ವಾಸನೆಗೆ ಅಂಟಿಕೊಂಡ ಹಸಿಶೇಂಗಾ ವಾಸನೆಯನ್ನು ಮೂಗೊಳಗೆ ಇಳಿಸಿಕೊಂಡು ಅಕಸ್ಮಾತ್ ಬಲಿತಿದ್ದರೆ ಆ ಮಣ್ಣನ್ನು ಅಂಗಿಯಿಂದಲೇ ಒರೆಸಿಕೊಂಡು ತಿಂದಾಗಿನ ರುಚಿ ಈಗ ಅಂಗಡಿಯಿಂದ ತಂದು ತಿನ್ನುವಾಗ ಸಿಗುವುದೇ ಇಲ್ಲ.

ವಿದ್ಯಾ ಅವರು ಬೆಳೆದ ಹೂ ಮತ್ತು ಹೂಕೋಸು

ಭತ್ತಕ್ಕೆ ಕದಿರು ಮೂಡಿ ಭತ್ತ ತೆನೆ ಒಡೆದಾಗ ಎಳೆ ಭತ್ತವನ್ನು ತಿನ್ನಲು ಬರುವ ಹಕ್ಕಿಗಳ ಓಡಿಸಲು ಜಂವಟೆ ತೆಗೆದುಕೊಂಡು ಬಾರಿಸುವಾಗ ಸಣ್ಣ ಸಣ್ಣ ಬದುವಿನ ಮೇಲೆ ಬ್ಯಾಲೆನ್ಸ್ ಮಾಡುತ್ತ , ಒಮ್ಮೊಮ್ಮೆ ನೀರು ಕಟ್ಟಿದ ಗದ್ದೆಯಲ್ಲೇ ದಬಕ್ಕೆಂದು ಬಿದ್ದು , ಅಂಗಿಯೆಲ್ಲಾ ಮಣ್ಣುಮಾಡಿಕೊಂಡು ಅದು ಅಲ್ಲೇ ಒಣಗಿ ರಟ್ಟಿನಂತಾದ ಸಮಯದಲ್ಲೆಲ್ಲೋ ಮಣ್ಣು ನನ್ನೊಳಗಾಯಿತು. ಹಳ್ಳಿಯಲ್ಲಿ ಹುಟ್ಟಿ ಬೆಳೆದವರಿಗೆ ಮಣ್ಣಿನ ಮೇಲೆ, ಭೂಮಿಯ ಮೇಲೆ ಪ್ರೀತಿ ತನ್ನಿಂದ ತಾನೇ ಹುಟ್ಟಿಬಿಡುವಂಥದ್ದು. ಆಮೇಲೆ ದೊಡ್ಡವರಾಗುತ್ತಿದ್ದಂತೆ ಓದಿನ ಮೇಲೆ ಹೆಚ್ಚು ಗಮನ ಹರಿಸುವಾಗ ಕೂಡ ಮಳೆಗಾಲದಲ್ಲಿ ಹೂ ಗಿಡಗಳ ನೆಡುವುದು ಮುಂದುವರೆಯಿತು. ಮನೆ ಬಿಟ್ಟು ಪಟ್ಟಣದಲ್ಲಿ ರೂಮು ಮಾಡಿಕೊಂಡು ಕಾಲೇಜಿಗೆ ಹೋಗುವಾಗ ಕೂಡ ಗೆಳತಿಯರ ಮನೆಯಿಂದ ನಮ್ಮನೆಯಲ್ಲಿ ಇರದ ಹೊಸಜಾತಿಯ ಹೂವಿನ ಗಿಡ ತಂದು ನೆಟ್ಟು ಅದು ನಮ್ಮನೆಯಲ್ಲೂ ಮೊಗ್ಗರಳಿಸುವುದನ್ನು ಕಣ್ಣರಳಿಸಿ ನೋಡುತ್ತ, ಆ ಗಿಡಗಳ ನಡುವೆಯೇ ಕುರ್ಚಿ ಹಾಕಿಕೊಂಡು ಓದುವುದು ಖುಷಿಯ ವಿಷಯವಾಗಿತ್ತು.

ಓದು, ನೌಕರಿ, ಮದುವೆ , ಬೇರೆ ಬೇರೆ ಊರಿನ ವಾಸದಲ್ಲಿ ಮಣ್ಣಿನ ಸಹವಾಸ ಕೊಂಚ ಕಡಿಮೆಯಾಯಿತು. ಬದುಕಿನ ರೀತಿ ಬದಲಾದಾಗ ಅರಿವಿಲ್ಲದೆ ಸೊಫೆಸ್ಟಿಕೇಟೆಡ್ ಲೇಡಿಯಾಗಿ ಬದಲಾದಮೇಲೂ ಯಾರದೋ ಮನೆಯ ಬಾಲ್ಕನಿಯಲ್ಲಿ ಹೂಗಳ ಕಂಡಾಗ, ಊಟಿ, ಲಾಲ್ಬಾಗ್ ಎಲ್ಲ ನೋಡಿದಾಗ ಇವೆಲ್ಲ ನಮ್ಮ ಮನೆಯಲ್ಲೂ ಮಾಡಿಕೊಳ್ಳಬೇಕು ಅನಿಸುತ್ತಿತ್ತು. ಆದರೆ ಗಡಿಯಾರವನ್ನು ನೋಡದೆ ಕೆಲಸ ಮಾಡುವ ಅನಿವಾರ್ಯತೆ ಇರುವ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದರಿಂದ ಹೂವು, ತರಕಾರಿ ಬೆಳೆಯಲು ಸಮಯವಾಗುತ್ತಿರಲಿಲ್ಲ. ಆದರೆ ಯಾವಾಗ ಇರುವ ಒಬ್ಬಳೇ ಮಗಳಿಗೆ ತೊಂದರೆಯಾಗುತ್ತಿದೆ ಅನಿಸಲು ಶುರುವಾಗಿ ಕೆಲಸ ಬಿಟ್ಟೆನೋ ಆಗ ನನ್ನ ಕನಸಿಗೆ ಮತ್ತೆ ಜೀವ ಬಂತು. ಆದರೆ ಬೆಂಗಳೂರಿನಂತಹ ಊರಲ್ಲಿ ಕುಂಡಗಳನ್ನೇನೊ ತಾರಸಿಯಲ್ಲಿಟ್ಟು ಬೆಳೆಯಬಹುದು. ಆದರೆ ಮಣ್ಣು? ಮನೆಯ ಬಾಗಿಲಿಗೇ “ಮಣ್ಣು” ಅಂತ ಕೂಗಿಕೊಂಡು ಬರುವವರಿಗೆ ಆಗ ಮಣ್ಣಿಗೆ ಎಷ್ಟು ದುಡ್ಡು ಅಂತಲೂ ಗೊತ್ತಿಲ್ಲದ ನಾನು 50 ರೂಪಾಯಿಯ ಚೀಲಕ್ಕೆ ಮುನ್ನೂರು ರೂಪಾಯಿ ಕೊಟ್ಟುಬಿಟ್ಟಿದ್ದೆ!

ವಿದ್ಯಾ ಅವರ ಹೂಹಕ್ಕಿ ಪ್ರಪಂಚ

ಅಂತೂ ಒಂದುಚೀಲ ಮಣ್ಣು ತೆಗೆದುಕೊಂಡು ಗಾರ್ಡನ್ ಶುರು ಮಾಡಿಕೊಂಡೆ. ಎಷ್ಟು ಲಾರಿ ತುಂಬಿದರೂ ಮುಗಿಯದಷ್ಟು ಮಣ್ಣಿರುವ ಊರಿಂದಲೇ ಇಬ್ಬರೂ ಬಂದವರಾಗಿದ್ದರೂ ಇಲ್ಲಿ ಒಂದು ಹಿಡಿ ಮಣ್ಣಿಗಾಗಿ ಎಲ್ಲೆಲ್ಲೋ ಅಲೆದಿದ್ದೂ ಇದೆ. ಆದರೆ ಈಗ ಹಾಗಿಲ್ಲ. ಮನೆಯಲ್ಲೇ ಕುಳಿತು ಆನ್ಲೈನಲ್ಲೇ ಎಲ್ಲ ತರಿಸಿಕೊಂಡು ಬಿಡಬಹುದು. ಆದರೆ ಮಣ್ಣನ್ನು ಮಾತ್ರ ನಾನು “ಮಣ್ಣು” ಅಂದರೆ ಸಾಕು, ಪತಿ, ಮೂಟೆಮೂಟೆಗಟ್ಟಲೇ ತರಿಸಿ ಹಾಕುತ್ತಾರೆ. ಅವರೂ ರೈತ ಕುಟುಂಬದಿಂದಲೇ ಬಂದವರಾದ್ದರಿಂದ ಅವರ ರವಿವಾರವನ್ನು ಹೂದೋಟಕ್ಕಾಗಿ ಮೀಸಲಿಡುತ್ತಾರೆ.

ಹೂವಿನ ಕಾರಣಕ್ಕಾಗಿಯೇ ಹಲವರು ಗೆಳತಿಯರಾಗಿದ್ದಾರೆ. ತಾರಸಿಯ ತೋಟಕ್ಕಾಗೇ ಮೀಸಲಿಟ್ಟ ವಾಟ್ಸಪ್ ಗುಂಪಿದೆ. ಅಲ್ಲಿ ಮಣ್ಣು, ಗೊಬ್ಬರ, ಗಿಡದ ಮಾಹಿತಿಗಳು ಭರಪೂರ ರವಾನೆಯಾಗುತ್ತವೆ. ಗಿಡಕ್ಕೆ ಯಾವುದೋ ಹುಳ ಹತ್ತಿದರೆ ಏನು ಮಾಡಬೇಕೆಂಬ ಮಾಹಿತಿ ಅಂಗೈ ತುದಿಯಲ್ಲೇ ಸಿಗುತ್ತದೆ.

ಗಿಡಗಳಿಗೆ ನೀರು ಹೆಚ್ಚಾದರೆ ಮಣ್ಣು ಹೇಗಾಗುತ್ತದೆ, ಕಡಿಮೆಯಾದರೆ ಏನಾಗುತ್ತದೆ ಅನ್ನುವುದನ್ನು ಅನುಭವವೇ ಕಲಿಸಿದೆ. ಗಿಡಗಳನ್ನು ನಾವು ಪ್ರೀತಿಸಿದರೆ ಅವೂ ಕೂಡ ಚೈತನ್ಯದಾಯಕವಾಗುತ್ತವೆ. ಕಪ್ಪು ಮಣ್ಣೋ, ಕೆಂಪು ಮಣ್ಣೋ, ಜಂಬಿಟ್ಗೆ ಮಣ್ಣೋ, ಕಲ್ಲು ಮಣ್ಣೋ ,ಸ್ವಾದಿಷ್ಟ ಮಣ್ಣೋ, ಶಕ್ತಿಯೇ ಇಲ್ಲದ ಕಳೆಗುಂದಿದ ಮಣ್ಣೋ ಯಾವುದಾದರಾಗಲಿ ಮಣ್ಣು ಸಿಕ್ಕರೆ ಸಾಕು ನಾವು ಹೂವು, ಸಣ್ಣ ಪುಟ್ಟ ತರಕಾರಿ ಎಲ್ಲ ಬೆಳೆಯಲು ಕಲಿತುಕೊಂಡಿದ್ದೇವೆ. ನಮ್ಮನೆ ಮಜ್ಜಿಗೆ, ಸಾರು, ಹುಳಿ, ದೋಸೆ ಹಿಟ್ಟು ಯಾವುದೇ ಹೆಚ್ಚಾಗಲಿ, ಈಗ ತಲೆಬಿಸಿಯಿಲ್ಲ. ಗೊಬ್ಬರ ಗುಂಡಿಗೋ, ಅಕ್ಕಚ್ಚಿಗೋ ಸುರಿಯುತ್ತಿದ್ದುದೆಲ್ಲ ಈಗ ಗಿಡಗಳ ಪಾಲು. ಆ ಮಣ್ಣು ಎಲ್ಲ ಹೀರಿಕೊಂಡು ಹೂಗಳ ಕೊಡುತ್ತಿವೆ. ಸಿಪ್ಪೆಗಳು, ಕಳಿತ,ಕೊಳೆತ ಹಣ್ಣುಗಳು, ನೋಡಲಿಕ್ಕೇ ಮರೆತ, ಹುಳುಬಂದ ಹಿಟ್ಟುಗಳೆಲ್ಲ ಗೊಬ್ಬರ ವಾಗಿ, ಮಣ್ಣಿನೊಂದಿಗೆ ಬೆರೆತು, “ಸುಮ್ಮನೆ ಉಣ್ಲಿಲ್ಲ, ತಿನ್ಲಿಲ್ಲ ಹಾಳು ಮಾಡಿಬಿಟ್ಟೆನಲ್ಲಾ” ಅನ್ನುವ ಸಂಕಟದಿಂದ ಪಾರು ಮಾಡಿವೆ. ಮಣ್ಣಿಗೆ ಮಾತ್ರ ಈ ಗುಣವಿದೆ ಅನಿಸುತ್ತದೆ.

ಮಣ್ಣು ಮುಟ್ಟುವಾಗ ಗ್ಲೌಸ್ ಹಾಕಿಕೋ ಅಂತ ಮಗಳು ಗ್ಲೌಸ್ ಗಿಫ್ಟ್ ಕೊಟ್ಟರೂ ಅದನ್ನೆಲ್ಲ ಹಾಕಿಕೊಂಡು ಮಣ್ಣ ಕೆಲಸ ಮಾಡುವ ಮನಸ್ಸಾಗುವುದಿಲ್ಲ.ಮಣ್ಣಿನ ಸ್ಪರ್ಷ ಕೊಡುವ ಖುಷಿಯೇ ಬೇರೆ.

ತಾರಸಿಯ ತೋಟದಲ್ಲಿ ಬೆಳೆದ ತರಕಾರಿ ಸೊಪ್ಪು

“ಮಣ್ಣಿನ ಕೊಡುಗೆಗೆ, ನೋವಿಗೆ, ನಲಿವಿಗೆ ಕನ್ನಡಿ ಹಿಡಿವಾಸೆ/ಮಾನವ ಹೃದಯದ ಕರುಣೆಗೆ ಒಲವಿಗೆ ದನಿಯಾಗುವ ಆಸೆ…” ಕೆ.ಎಸ್.ನ ಅವರ ಕಾವ್ಯದಂತೆಯೇ ನನಗೂ ಆಸೆಯಾಗುತ್ತದೆ.
ಮಣ್ಣು ಸವಕಳಿಯಾಗುತ್ತಿದೆ, ತನ್ನ ಸ್ವಾರ್ಥಕ್ಕಾಗಿ ಮನುಷ್ಯ ಭೂಮಿಯನ್ನು ವಿರೂಪಗೊಳಿಸುತ್ತಲೇ ಇದ್ದಾನೆ.

ಮಣ್ಣಿಂದ ಕಾಯ ಮಣ್ಣಿಂದ,
ಮಣ್ಣಿಂದ ಸಕಲ ವಸ್ತುಗಳೆಲ್ಲ
ಮಣ್ಣ ಬಿಟ್ಟವರಿಗೆ ಆಧಾರವಿಲ್ಲ
ಅಣ್ಣಗಳಿರೆಲ್ಲರು ಕೇಳಿರಯ್ಯ
ಅಂತ ಪುರಂದರ ದಾಸರು ಹಾಡಿದ್ದನ್ನ

ಶರಣು ಶರಣೆಂಬೆ ನಿನಗೆ, ಹಿಡಿ ಮಣ್ಣಿಗೆ.

ಇದನ್ನೂ ಓದಿ : Earth Day 2021 : ಎಲ್ಲಿದ್ದೀಯೋ? ಇಲ್ಲಿ ಯಾವುದೂ ಹರಿಯುವ ಕಡೆ ಹರಿಯುತ್ತಿಲ್ಲ ನನ್ನ ಗೂಗಲ್​ ತೋಲಣ್ಣ

Published On - 11:04 am, Sat, 24 April 21