Bhagat Singh Birth Anniversary : ಶೆಲ್ಫಿಗೇರುವ ಮುನ್ನ ; ಇಂದಷ್ಟೇ ಬಿಡುಗಡೆಗೊಂಡ ಎಚ್. ಎಸ್. ಅನುಪಮಾ ಅವರ ‘ಜನ ಸಂಗಾತಿ ಭಗತ್‘

|

Updated on: Sep 28, 2021 | 3:58 PM

Freedom Fighter : ‘ಗಾಂಧಿವಾದಿಗಳಿಗೆ, ಭಾರತ ರಾಷ್ಟ್ರವಾದಿಗಳಿಗೆ, ಹಿಂದೂ ರಾಷ್ಟ್ರವಾದಿಗಳಿಗೆ, ಸಿಖ್ ರಾಷ್ಟ್ರವಾದಿಗಳಿಗೆ, ಪಾಕಿಸ್ತಾನಿಗಳಿಗೆ, ಸಂಸದೀಯ ಪ್ರಜಾಸತ್ತೆಗೆ ಬಂದ ಎಡದವರಿಗೆ, ಸಶಸ್ತ್ರ ಬಂಡಾಯ ಒಪ್ಪಿಕೊಳ್ಳುವ ಅತಿ ಎಡದವರಿಗೆ, ಸ್ತ್ರೀವಾದಿಗಳಿಗೆ, ಅಂಬೇಡ್ಕರ್​ವಾದಿಗಳಿಗೆ  – ಎಲ್ಲರಿಗೂ ಹಲವು ಕಡೆ ಅವನು ಇಷ್ಟವಾಗುತ್ತಾನೆ’ ಡಾ. ಎಚ್. ಎಸ್. ಅನುಪಮಾ

Bhagat Singh Birth Anniversary : ಶೆಲ್ಫಿಗೇರುವ ಮುನ್ನ ; ಇಂದಷ್ಟೇ ಬಿಡುಗಡೆಗೊಂಡ ಎಚ್. ಎಸ್. ಅನುಪಮಾ ಅವರ ‘ಜನ ಸಂಗಾತಿ ಭಗತ್‘
ಲೇಖಕಿ ಡಾ. ಎಚ್. ಎಸ್. ಅನುಪಮಾ
Follow us on

ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ‘ಶೆಲ್ಫಿಗೇರುವ ಮುನ್ನ’ ಹೊಸ ಅಂಕಣದಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ.

ಪ್ರಕಾಶಕರು ಮತ್ತು ಬರಹಗಾರರು ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com 

ಕೃತಿ : ಜನ ಸಂಗಾತಿ ಭಗತ್ (ಜೀವನ ಚರಿತ್ರೆ)
ಲೇಖಕರು : ಡಾ. ಎಚ್. ಎಸ್. ಅನುಪಮಾ
ಪುಟ : 192
ಬೆಲೆ : ರೂ. 150
ಮುಖಪುಟ ವಿನ್ಯಾಸ : ಜಿ. ಅರುಣ್ ಕುಮಾರ್
ಪ್ರಕಾಶನ : ಲಡಾಯಿ ಪ್ರಕಾಶನ, ಗದಗ

Bhagat Singh Birth Anniversary : ವೈದ್ಯೆ, ಲೇಖಕಿ ಡಾ. ಎಚ್. ಎಸ್. ಅನುಪಮಾ ಅವರ ‘ಜನ ಸಂಗಾತಿ ಭಗತ್’ ಕೃತಿಯು ಉತ್ತರ ಕನ್ನಡ ಜಿಲ್ಲೆಯ ಕವಲಕ್ಕಿಯಲ್ಲಿ ಇಂದು ಬೆಳಗ್ಗೆ ಬಿಡುಗಡೆಗೊಂಡಿದೆ. ಆಯ್ದ ಭಾಗ ನಿಮ್ಮ ಓದಿಗೆ.

ಸೆಪ್ಟೆಂಬರ್ ಹಾಗೂ ಮಾರ್ಚ್ ತಿಂಗಳುಗಳು ಹುತಾತ್ಮ ಭಗತ್ ಸಿಂಗರ ನೆನಪುಗಳನ್ನು ಹೊತ್ತು ತರುತ್ತವೆ. ಆಗ ಗಿಡಮರಗಳಲ್ಲಿ ಹೂವರಳುವ ವಸಂತ ಕಾಲವೂ ಹೌದು. ನೆಲಕ್ಕೆ ಹಸಿರಿನ ಹೊದಿಕೆಯನ್ನು ಹೊದಿಸುವ ವರ್ಷ ಋತುವೂ ಹೌದು. ಈ ವರ್ಷ ಈ ತರುಣ ವೀರನನ್ನು ನೆನಪಿಸಿಕೊಳ್ಳಲು ಯಥೇಚ್ಛ ಕಾರಣಗಳಿವೆ. ಒಂಭತ್ತು ತಿಂಗಳುಗಳಿಂದಲೂ ಪ್ರತಿಭಟನೆಯಲ್ಲಿ ನಿರತರಾಗಿರುವ ಉತ್ತರ ಭಾರತದ ರೈತರು ಭಗತ್ ಭಾವಚಿತ್ರವನ್ನು ಹಿಡಿದು ಚಳಿ, ಮಳೆ, ಸೆಕೆಯ ನಡುವೆ ಘೋಷಣೆ ಕೂಗುತ್ತಿದ್ದಾರೆ. ಇನ್ನೊಂದು ಕಡೆ ಯಾವ ಕರಾಳ ಶಾಸನಗಳನ್ನು ಬ್ರಿಟಿಷರು ಜಾರಿ ಮಾಡಿದಾಗ ಭಗತನಂತಹ ತರುಣರು ಚರಿತ್ರೆಯಲ್ಲಿ ತ್ಯಾಗ ಬಲಿದಾನಗಳೊಂದಿಗೆ ಹೋರಾಡಿದ್ದರೋ, ಅಂಥವೇ ಶಾಸನಗಳು ಈಗ ಜಾರಿಯಾಗಿವೆ. ಜನರ ಒಗ್ಗಟ್ಟನ್ನು ಮುರಿಯುವ ಯಾವ ಕೋಮುವ್ಯಾಧಿಯ ವಿರುದ್ಧ ಭಗತ್ ಮತ್ತು ಗೆಳೆಯರು ಸೆಣಸಿದ್ದರೋ, ಅದು ಮತ್ತೊಮ್ಮೆ ವಿಕಾರವಾಗಿ ತಲೆಯೆತ್ತಿದೆ. ಹಾಗೆಯೇ ಹಿಂದೆ ಭಾರತವನ್ನು ಕಾಡಿದ್ದ ನಿರಾಶೆ, ಸಿನಿಕತನ, ಅವಕಾಶವಾದಗಳು ಇಂದು ನಾಡಿನುದ್ದಕ್ಕೂ ವಿಜೃಂಭಿಸುತ್ತಿವೆ. ಭಗತನ ನೆನಪು ಇಂತಹ ಋಣಾತ್ಮಕ ಬೆಳವಣಿಗೆಗಳ ವಿರುದ್ಧ ಯಾವ ಅಂಜಿಕೆಯೂ ಇಲ್ಲದೆ ಹೋರಾಡಲು ನಮಗೆ ಪ್ರೇರಣೆ ನೀಡುತ್ತದೆ. ಈ ದಿಶೆಯಲ್ಲಿ ಡಾ. ಎಚ್. ಎಸ್. ಅನುಪಮಾ ಅವರು ಬರೆದಿರುವ ಈ ಹೊತ್ತಿಗೆ ಬಹಳ ಸಕಾಲಿಕವಾದದ್ದು. ಅವರದು ಮೊದಲೇ ಸುಲಲಿತವಾದ ಶೈಲಿ. ಹಾಗಾಗಿಯೇ ಅವರಿಗೆ ದೊಡ್ಡ ಸಂಖ್ಯೆಯ ಓದುಗರಿದ್ದಾರೆ. ಈ ಪುಸ್ತಕದಲ್ಲಂತೂ ಅವರು ಅನೇಕ ದಾಖಲೆಗಳನ್ನು, ಅಪರೂಪದ ಮಾಹಿತಿಗಳನ್ನು ನೀಡಿದ್ದಾರೆ. ಭಗತನನ್ನು ಅವನ ಆದರ್ಶ ಮತ್ತು ಚಿಂತನೆಗಳನ್ನು ಬಚ್ಚಿಟ್ಟು ತಮ್ಮ ದುರುದ್ದೇಶಗಳಿಗೆ ಬಳಸಿಕೊಳ್ಳಲೆತ್ನಿಸುವ ಪ್ರತಿಗಾಮಿಗಳ ಪ್ರಯತ್ನ ತಡೆಯಿಲ್ಲದೆ ನಡೆಯುತ್ತಿರುವಾಗ ಇಂತಹ ಹೊತ್ತಗೆಗಳು ಬಹಳ ಅವಶ್ಯವಾಗಿವೆ.
ಬಿ. ಆರ್, ಮಂಜುನಾಥ, ಲೇಖಕರು 

ಈಗ ಭಗತ್ ಭಾರತದ ಸಾರ್ವಜನಿಕ ಆಸ್ತಿಯಾಗಿದ್ದಾನೆ. ಭಗತ್ ಸಿಂಗನನ್ನು ಎಲ್ಲರೂ ತಂತಮ್ಮ ಅನುಕೂಲಕ್ಕೆ ತಕ್ಕಂತೆ ಬಣ್ಣಿಸುತ್ತ, ವ್ಯಾಖ್ಯಾನಿಸುತ್ತ, ಹಾಡಿ ಹೊಗಳುತ್ತಿದ್ದಾರೆ. ಅವತ್ತಿನ ಕಾಂಗ್ರೆಸ್ ಭಗತ್ ಮತ್ತವನ ಗೆಳೆಯರನ್ನು ವ್ಯವಸ್ಥಿತವಾಗಿ ದೂರವಿಟ್ಟಿತು; ಇವತ್ತು ಕಾಂಗ್ರೆಸ್ ಪಕ್ಷಕ್ಕೆ ದೇಶಪ್ರೇಮಿ ಭಗತ್ ಬೇಕಿದ್ದಾನೆ. ಕಮ್ಯುನಿಸ್ಟರನ್ನು ಧರ್ಮವಿರೋಧಿಗಳಂತೆ, ಪ್ರಗತಿಪರ ಮನಸ್ಥಿತಿಯವರನ್ನು ಸಮಾಜಕಂಟಕರೆಂಬಂತೆ ಬಿಂಬಿಸುವ ಧಾರ್ಮಿಕ ಮೂಲಭೂತವಾದಿಗಳು ಅಂದು ತನ್ನ ಕ್ರಾಂತಿಯ ಮೊದಲ ದಿನಗಳಲ್ಲಿ ಅಂಥದೇ ಹೋರಾಟ ಕಟ್ಟಿದ ಭಗತನನ್ನು ತಮ್ಮ ‘ರತ್ನ’ಗಳ ಜೊತೆ ಸೇರಿಸಿಕೊಂಡುಬಿಟ್ಟಿದ್ದಾರೆ. ಭಗತನನ್ನು ಪ್ರಭಾವಿಸಿದ ಗಧರ್ ಚಳವಳಿ ಮತ್ತು ಕಮ್ಯುನಿಸಂಗಳು ಭಾರತದಲ್ಲಿ ಕಮ್ಯುನಿಸ್ಟ್-ಮಾರ್ಕ್ಸಿಸ್ಟ್​ ವಿಚಾರಧಾರೆಯ ಹಲವು ಪಕ್ಷ-ಗುಂಪುಗಳಾಗಿ ಒಡೆದು ಕ್ಷೀಣಿಸುವ-ಪುನರುಜ್ಜೀವನಗೊಳ್ಳುವ ಕಷ್ಟದ ಹಾದಿಯನ್ನೆದುರಿಸುತ್ತಲಿವೆ. ಆದರೆ ಈ ಎಲ್ಲಾ ಗುಂಪುಗಳಿಗೂ ಭಗತ್ ಆದರ್ಶವಾಗಿದ್ದಾನೆ! ಎಲ್ಲರೂ ಭಗತನ ನೆನೆದರೂ ಎಲ್ಲರಿಗೂ ಅವನೊಂದು ಸವಾಲೇ ಆಗಿ ಮುಂದುವರೆದಿದ್ದಾನೆ.

ಗಾಂಧಿವಾದಿಗಳಿಗೆ, ಭಾರತ ರಾಷ್ಟ್ರವಾದಿಗಳಿಗೆ, ಹಿಂದೂ ರಾಷ್ಟ್ರವಾದಿಗಳಿಗೆ, ಸಿಖ್ ರಾಷ್ಟ್ರವಾದಿಗಳಿಗೆ, ಪಾಕಿಸ್ತಾನಿಗಳಿಗೆ, ಸಂಸದೀಯ ಪ್ರಜಾಸತ್ತೆಗೆ ಬಂದ ಎಡದವರಿಗೆ, ಸಶಸ್ತ್ರ ಬಂಡಾಯ ಒಪ್ಪಿಕೊಳ್ಳುವ ಅತಿ ಎಡದವರಿಗೆ, ಸ್ತ್ರೀವಾದಿಗಳಿಗೆ, ಅಂಬೇಡ್ಕರ್​ವಾದಿಗಳಿಗೆ  – ಎಲ್ಲರಿಗೂ ಹಲವು ಕಡೆ ಅವನು ಇಷ್ಟವಾಗುತ್ತಾನೆ; ಒಂದಲ್ಲ ಒಂದು ಅಂಶದಲ್ಲಿ ಅವನನ್ನು ಒಪ್ಪಿಕೊಳ್ಳುವುದು ತೊಡಕಾಗುತ್ತದೆ. ಅವನ ಸಶಸ್ತ್ರ ಬಂಡಾಯ, ನಾಸ್ತಿಕತೆ, ಅರಾಜಕತಾವಾದ, ವ್ಯಕ್ತಿಗತ ಭಯೋತ್ಪಾದನೆಗಿಳಿಯುವುದರ ವಿರೋಧಗಳು ಅವನನ್ನು ಸಂಪೂರ್ಣ ನಮ್ಮವನೇ ಎನ್ನಲು ಅವರಿಗೆ ಕಷ್ಟ ಮಾಡಿವೆ. ಆದರೂ ಅವನ ದಾರಿಯ ಕುರಿತು ತಕರಾರುಗಳಿದ್ದವರೂ ಗುರಿಯಿಂದ ಅವನನ್ನು ಗುರುತಿಸುತ್ತಾರೆ.
ಡಾ. ಎಚ್. ಎಸ್. ಅನುಪಮಾ, ಲೇಖಕಿ

(ಆಯ್ದ ಭಾಗ)

ಬೆಳೆವ ಸಿರಿಯ ಮೊಳಕೆ

ಅವತ್ತಿನ ಭಾರತ ದೇಶದ (ಈಗಿನ ಪಾಕಿಸ್ತಾನದ) ಪಂಜಾಬ್ ರಾಜ್ಯದ ಲೈಲಾಪುರ್ ಜಿಲ್ಲೆಯ ಚಾಕ್. ನಂ. 105, ಬಂಗಾ ಎನ್ನುವ ಹಳ್ಳಿ. ಸರ್ದಾರ್ ಅರ್ಜುನ್ ಸಿಂಗ್ ಊರಿಗೇ ದೊಡ್ಡ ಜಮೀನ್ದಾರರು. ಅವರ ಕುಟುಂಬದವರು ಖಾಲ್ಸಾ ಸರದಾರರು. ಪಶ್ಚಿಮದಲ್ಲಿ ಪಠಾಣರು ಮತ್ತು ಪೂರ್ವದಲ್ಲಿ ಬ್ರಿಟಿಷರ ನಡುವೆ ರಾಜಾ ರಣಜಿತ್ ಸಿಂಗ್‍ನ ಸಿಖ್ ಸಾಮ್ರಾಜ್ಯವನ್ನು ವಿಸ್ತರಿಸಲು ಸೇನೆ ಸೇರಿದ್ದರು. ತ್ಯಾಗ, ಬಲಿದಾನಕ್ಕೆ ಹೆಸರಾಗಿದ್ದರು. ಅದಕ್ಕೆಂದೇ ಇನಾಮಾಗಿ ವಿಪುಲ ಭೂಮಿಕಾಣಿ ಪಡೆದಿದ್ದರು. ಸರ್ದಾರ್ ಅರ್ಜುನ್ ಸಿಂಗ್ ರಾಷ್ಟ್ರೀಯತೆಯ ಉತ್ಸಾಹ, ದೇಶಭಕ್ತಿ ತುಂಬಿಕೊಂಡಂಥವರು. ಅವರ ಅಣ್ಣನ ಮಕ್ಕಳು ಬ್ರಿಟಿಷ್ ಸರ್ಕಾರದಲ್ಲಿ ಕೆಲಸ ಮಾಡಿ ಉನ್ನತ ಹುದ್ದೆ, ಹಣ ಗಳಿಸಿದರೆ; ಅರ್ಜುನ್ ಸಿಂಗ್ ಮತ್ತವರ ಹೆಂಡತಿ ಜೈ ಕೌರ್ ತಮ್ಮ ಮಕ್ಕಳಲ್ಲಿ ದೇಶಭಕ್ತಿ, ಹೋರಾಟದ ಸ್ಫೂರ್ತಿ ತುಂಬಿದರು. ಅವರ ಮನೆಗೆ ಸೂಫಿ ಅಂಬಾ ಪ್ರಸಾದ ಎಂಬ ಹೋರಾಟಗಾರ ಬರುತ್ತಿದ್ದ. ಒಮ್ಮೆ ಪೊಲೀಸರು ಅಂಬಾಪ್ರಸಾದನನ್ನು ಹುಡುಕಿಕೊಂಡು ಅರ್ಜುನ್ ಸಿಂಗರ ಮನೆಗೆ ಬಂದಾಗ ಆತ ಒಳಗೇ ಇದ್ದರೂ ಅವ ಅಲ್ಲಿಲ್ಲವೆಂದು ವಾದಿಸಿ ಜೈ ಕೌರ್ ರಕ್ಷಿಸಿದ್ದಳು.

ಬಂಗಾ ಹಳ್ಳಿಯ ಭಗತನ ಮನೆ ಅರ್ಜುನ್ ಸಿಂಗ್

ಅರ್ಜುನ್ ಸಿಂಗರಿಗೆ ಕಿಶನ್, ಅಜಿತ್, ಸ್ವರಣ್ ಎಂಬ ಮೂವರು ಮಗಂದಿರು. ಅವರೆಲ್ಲ ದೇಶಸೇವಕರೆಂದು ಪಂಜಾಬಿನಲ್ಲಿ ಹೆಸರಾದವರು. ಅಜಿತ್ ಸಿಂಗ್ ಶ್ರೀಮಂತ ಜಮೀನ್ದಾರಿ ಕುಟುಂಬದ ಸುಖಗಳನ್ನೆಲ್ಲ ಬಿಟ್ಟು ಸಮಾಜ ಕಟ್ಟುತ್ತ ತಿರುಗಾಡುತ್ತಿದ್ದರು. ಗಧರ್ ಪಕ್ಷವನ್ನು ಸೇರಿದ್ದರು. ತಮ್ಮ ಗೆಳೆಯ ಲಾಲಾ ಲಜಪತರಾಯರನ್ನು ರಾಜಕೀಯಕ್ಕೆಳೆದರು. ಲಾರ್ಡ್ ಕರ್ಜನ್ನನ ಒಡೆದು ಆಳುವ ನೀತಿಯಿಂದ 1904-05ರ ಹೊತ್ತಿಗೆ ಬಂಗಾಳ ವಿಭಜನೆಯಾದಾಗ ಅದನ್ನು ವಿರೋಧಿಸಿ ಲಾಹೋರಿನಲ್ಲಿ ಲಾಲಾ ಲಜಪತರಾಯ್, ಅಂಬಾಪ್ರಸಾದರ ಜೊತೆಸೇರಿ ಜನರನ್ನು ಹೋರಾಟಕ್ಕೆ ಅಣಿಗೊಳಿಸಿದರು. ಕಿಶನ್, ಸ್ವರಣ್ ಸಿಂಗರೂ ಅವರೊಡನೆ ಕೈ ಜೋಡಿಸಿದರು. ಮಕ್ಕಳ ಈ ಎಲ್ಲ ಚಟುವಟಿಕೆಗೂ ಅರ್ಜುನ್ ಸಿಂಗರ ತನುಮನಧನ ಸಹಕಾರವಿತ್ತು. ಯಾವ ವಿಚಾರಣೆಯೂ ಇಲ್ಲದೆ ಅಜಿತ್ ಸಿಂಗ್ ಮತ್ತು ಲಜಪತರಾಯ್ ಬಂಧನಕ್ಕೊಳಗಾಗಿ ದೂರದ ಬರ್ಮಾದಲ್ಲಿ ಸೆರೆವಾಸ ಅನುಭವಿಸಿದರು. ಒಂದು ವರ್ಷ ಬಳಿಕ ಅಜಿತ್ ವಾಪಸಾಗುವ ವೇಳೆಗೆ ರಾಜದ್ರೋಹದ ಆಪಾದನೆಯ ಮೇರೆಗೆ ಪ್ರಚೋದನಕಾರಿ ಭಾಷಣ ಮಾಡಿದರೆಂದು ಕಿಶನ್ ಮತ್ತು ಸ್ವರಣ್ ಬಂಧನಕ್ಕೊಳಗಾಗಿ ಬಿಡುಗಡೆಯಾಗುತ್ತಿದ್ದರು.

ಬಂಗಾ ಹಳ್ಳಿಯ ಭಗತನ ಮನೆ, ಒಳಚಿತ್ರದಲ್ಲಿ ಅರ್ಜುನ್ ಸಿಂಗ್.

ಅಜಿತ್ ಸಿಂಗ್ ಕಿಶನ್ ಸಿಂಗ್

ಆ ಹೊತ್ತಿನಲ್ಲಿ ಒಂದು ಶನಿವಾರ ಬೆಳಗಿನ ಜಾವ..

1907, ಸೆಪ್ಟೆಂಬರ್ 28ನೇ ತಾರೀಕು. ಜೈಲಿನಲ್ಲಿದ್ದ ಮೂವರೂ ಸೋದರರು ಬಿಡುಗಡೆಯಾಗಿ ಮನೆಗೆ ಬಂದರು. ಅಂದು ನಸುಕು ವಿದ್ಯಾವತಿ ಹಾಗೂ ಸರ್ದಾರ್ ಕಿಶನ್ ಸಿಂಗ್‍ರ ಮಗನಾಗಿ ಭಗತ ಹುಟ್ಟಿದ. ಮನೆಯಲ್ಲಿ ದುಪ್ಪಟ್ಟು ಹರ್ಷದ ವಾತಾವರಣ. ದೀರ್ಘಕಾಲದಿಂದ ಜೈಲಿನಲ್ಲಿದ್ದ ಮೂವರು ಹಿಂದಿರುಗಿದ್ದಲ್ಲದೆ ಕುಟುಂಬಕ್ಕೆ ಒಬ್ಬ ಹೊಸ ಸದಸ್ಯ ಸೇರ್ಪಡೆಯಾಗಿದ್ದ. ಆದರೆ ಅವರ ಸಂತಸ ಹೆಚ್ಚು ಕಾಲ ಉಳಿಯಲಿಲ್ಲ. ಕೆಲವೇ ದಿನಗಳಲ್ಲಿ ಚಿಕ್ಕಪ್ಪ ಸ್ವರಣ್ ಸಿಂಗ್ ಟಿಬಿ ಕಾಯಿಲೆಯಿಂದ ತೀರಿಕೊಂಡರೆ ಮತ್ತೊಬ್ಬ ಚಿಕ್ಕಪ್ಪ ಅಜಿತ್ ಸಿಂಗ್ ದೇಶ ಭ್ರಷ್ಟರಾಗಬೇಕಾಯಿತು.

ದುಡಿಯುವ ಗಂಡಸರಿಲ್ಲದೆ ಆಗ ಮನೆಯು ಬಹಳ ಕಷ್ಟದಲ್ಲಿತ್ತು. ಹೆರಿಗೆಯಾದ ಕೆಲವು ತಿಂಗಳ ಬಳಿಕ ವಿದ್ಯಾವತಿ ತಾಯಿಯ ಮನೆಗೆ ಹೋಗುವಂತಾಯಿತು. ಸ್ವಾತಂತ್ರ್ಯ ಹೋರಾಟಗಾರರು ಎಂದು ಸರ್ಕಾರಕ್ಕೆ ಕೆಂಗಣ್ಣು, ಜೈಲಿನಲ್ಲಿರುವವರ ಬಿಡಿಸಲು, ಮನೆ ನಿಭಾಯಿಸಲು ಸಾಲ, ಖರ್ಚು ಆಗಿದ್ದವು. ತೀವ್ರ ಆರ್ಥಿಕ ಮುಗ್ಗಟ್ಟು ಎದುರಾಗಿತ್ತು. ಚಿಕ್ಕ ಭಗತ ಇದನ್ನೆಲ್ಲ ನೋಡುತ್ತ ಬೆಳೆದ. ಚಾಚಿಯ ಮುಖ ಸಣ್ಣಗಾಗಿದ್ದು ಕಂಡರೆ, ‘ಚಾಚಾನ ಪತ್ರ ಬಂತಾ?’ ಎಂದು ಕೇಳುತ್ತಿದ್ದ. ‘ನಾನು ಬ್ರಿಟಿಷರನ್ನ ಒದ್ದೋಡ್ಸಿ ಚಾಚನ್ನ ಕರ್ಕಂಡುಬರ್ತಿನಿ ಆಯ್ತಾ?’ ಎಂದು ಅವಳನ್ನು ಸಮಾಧಾನಿಸುತ್ತಿದ್ದ.

ತುಂಬು ಕುಟುಂಬದಲ್ಲಿ ಬೆಳೆದ ಭಗತನಿಗೆ ಶಾಲೆಗೆ ಹೋಗುವುದಕ್ಕಿಂತ ಹೊಲ, ತೋಟ, ಬಯಲುಗಳ ಅಲೆದಾಟವೇ ಹೆಚ್ಚು ಪ್ರಿಯವಾಗಿತ್ತು. ಅವನ ಅಣ್ಣ ಜಗತ್ ಎಳವೆಯಲ್ಲೇ ತೀರಿಕೊಂಡದ್ದು ಭಗತನ ಮನಸ್ಸಿನ ಮೇಲೆ ಅಪಾರ ಖೇದ ಉಳಿಸಿತ್ತು. ಭಗತನಿಗೆ ಹಾಲು, ತುಪ್ಪ ಎಂದರೆ ತುಂಬ ಇಷ್ಟ. ಅನಾರ್ಕಲಿ ಬಜಾರಿನ ಮಿಠಾಯಿ ಅಂಗಡಿಗೆ ಭಗತ ಹಾಜರಿ ಇದ್ದೇ ಇರುತ್ತಿತ್ತು. ಅವ ಬೆಳೆಯುತ್ತಿರುವಾಗ ತಂದೆ ಕಿಶನ್ ಸಿಂಗ್ ಇನ್ಶೂರೆನ್ಸ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದರು. ಕುಟುಂಬ ಕೊಂಚ ಚೇತರಿಕೆ ಕಂಡಿತು. ಮನೆ, ಬಟ್ಟೆ, ಬಂಗಾರಗಳು ಮರಳಿ ಕುಟುಂಬವನ್ನು ಸೇರಿದವು. ಲಾಹೋರ್ ಬಳಿಯ ನವಾನ್‍ಕೋಟ್‍ಗೆ ವಾಸ ಬದಲಾಯಿಸಿದರು. ಭಗತನನ್ನು ಲಾಹೋರಿನ ದಯಾನಂದ ಸರಸ್ವತಿ ಆಂಗ್ಲೋ ವೇದಿಕ್ (ಡಿಎವಿ) ಪ್ರೌಢಶಾಲೆಗೆ ಕಳಿಸಿದರು. ಅಜ್ಜ ಅರ್ಜುನ್ ಸಿಂಗ್ ಆಚಾರ್ಯ ದಯಾನಂದ ಸರಸ್ವತಿಯವರ ಆರ್ಯ ಸಮಾಜದ ಸದಸ್ಯರಾಗಿದ್ದರು. ಅವರ ಪ್ರಭಾವದಿಂದ ಉಳಿದ ಸಿಖ್ ಹುಡುಗರಂತೆ ಭಗತನು ಖಾಲ್ಸಾ ಹೈಸ್ಕೂಲಿಗೆ ಸೇರಲಿಲ್ಲ. ಆ ಶಾಲೆಯವರು ಬ್ರಿಟಿಷರಿಗೆ ವಿಧೇಯರಾಗಿದ್ದಾರೆನ್ನುವುದು ಅಜ್ಜನ ತಕರಾರಾಗಿತ್ತು.

ಭಗತ್ ಸಂಕೋಚ ಸ್ವಭಾವದ, ಭವಿಷ್ಯ ಕುರಿತು ಅಷ್ಟೇನೂ ಮಹತ್ವಾಕಾಂಕ್ಷಿಯಲ್ಲದ ಮೌನಿ ಹುಡುಗನಾಗಿದ್ದ. ಚುರುಕಾಗಿದ್ದ, ಓದುಗುಳಿಯಾಗಿದ್ದ, ಮೇಧಾವಿಯಾಗಿದ್ದ, ನಾಟಕಗಳಲ್ಲಿ ಭಾಗವಹಿಸುತ್ತಿದ್ದ, ಹಾಡುತ್ತಿದ್ದ, ಆಟವಾಡುತ್ತಿದ್ದ. ಚರಿತ್ರೆ, ರಾಜ್ಯಶಾಸ್ತ್ರ ಇಷ್ಟದ ವಿಷಯಗಳು. ಆದರೆ ಇಂಗ್ಲಿಷ್‍ನಲ್ಲಿ ಅಂಕ ಕಡಿಮೆ ಬರುತ್ತಿದ್ದವು. ಸಿನಿಮಾ ಅದರಲ್ಲೂ ಚಾರ್ಲಿ ಚಾಪ್ಲಿನ್ ಸಿನಿಮಾ ಎಂದರೆ ಬಹಳ ಪ್ರೀತಿ. ಓದುವುದರಲ್ಲಿ ಅತಿ ಆಸಕ್ತಿ. ಕೈಗೆ ಬಂದ ಪುಸ್ತಕಗಳನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸುತ್ತಿದ್ದ. ಗ್ರಂಥಾಲಯಗಳು ಅವನ ಆಪ್ತ, ಅಚ್ಚುಮೆಚ್ಚಿನ ತಾಣಗಳಾಗಿದ್ದವು. ಓದುವುದು ಹೇಗೆ ನಿರಾಯಾಸವಾಗಿತ್ತೋ, ಯೋಚಿಸಿ ಬರವಣಿಗೆ ಮಾಡುವುದೂ ಅಷ್ಟೇ ಸಹಜವಾಗಿ ಬಂದಿತು. ಓದುವ ಪಾತ್ರಗಳೊಡನೆ ತಾನೂ ತಲ್ಲೀನನಾಗಿಬಿಡುತ್ತಿದ್ದ. ಚಾಲ್ರ್ಸ್ ಡಿಕೆನ್ಸ್ ಅವನ ಇಷ್ಟದ ಲೇಖಕ. ಅಪ್ಟನ್ ಸಿಂಕ್ಲೇರ್, ಹಾಲ್ ಕೇನ್, ರೀಡ್ಸ್, ರಾಸ್ಫಿನ್, ಗಾರ್ಕಿ, ಆಸ್ಕರ್ ವೈಲ್ಡ್, ಸ್ಟಿಪಾನಿಕ್ .. ಹೀಗೇ ಅವನು ಓದುತ್ತಿದ್ದ ಲೇಖಕರ ಪಟ್ಟಿ ದೀರ್ಘವಾದದ್ದು. ಕಮ್ಯುನಿಸ್ಟ್ ಸಾಹಿತ್ಯ ಓದತೊಡಗಿದ ಮೇಲೆ ಅವನು ತನ್ನ ಬದುಕಿನ ಶೈಲಿಯನ್ನು ಬದಲಿಸಿಕೊಳ್ಳಲು ಪ್ರಯತ್ನಿಸಿದ.

ಅಜಿತ್ ಸಿಂಗ್ ಮತ್ತು ಕಿಶನ್ ಸಿಂಗ್

ಲಾಹೋರಿನ ದ್ವಾರಕಾದಾಸ್ ಲೈಬ್ರರಿ ಪ್ರಖ್ಯಾತವಾಗಿತ್ತು. ಅಲ್ಲಿಯ ಗ್ರಂಥಪಾಲಕ ರಾಜಾರಾಂ ಮತ್ತು ನ್ಯಾಷನಲ್ ಕಾಲೇಜಿನ ಪ್ರೊ. ಛಬೀಲ್ ದಾಸ್ ಭಗತನ ಓದುಗುಳಿತನವನ್ನು ಗುರುತಿಸಿದರು. ಅವನ ಇಚ್ಛೆಯಂತೆ ಲೈಬ್ರರಿಗೆ ಒಂದಾದಮೇಲೊಂದು ಹೊಸಹೊಸ ಪುಸ್ತಕಗಳು ಬಂದವು. ಅದರಲ್ಲೂ ಕ್ರಾಂತಿಕಾರಿ ಚಳವಳಿಗೆ ಸಂಬಂಧಪಟ್ಟ ಸಾಹಿತ್ಯದ ಭಂಡಾರವೇ ಬೆಳೆಯಿತು. ಇಟಲಿ, ರಷಿಯಾ, ಐರ್ಲೆಂಡ್ ಕ್ರಾಂತಿ ಕುರಿತಾದ ಹಲವು ಪುಸ್ತಕಗಳು ಬಂದವು. ಅವ ಕೇಳುತ್ತ ಹೋದಂತೆ ಹೊಸ ಪುಸ್ತಕಗಳು ಸೇರತೊಡಗಿ ಗ್ರಂಥ ಭಂಡಾರ ಅಮೂಲ್ಯವಾಯಿತು.

ಬರಿಯ ಓದಷ್ಟೇ ಅಲ್ಲ, ಕ್ರಾಂತಿಕಾರಿಗಳ ಸಭೆ, ಹೋರಾಟಗಳಲ್ಲೂ ಭಗತ ಪಾಲ್ಗೊಳ್ಳುತ್ತಿದ್ದ. 12 ವರ್ಷದವನಾದಾಗ ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ಸಂಭವಿಸಿದಾಗ ಗೆಳೆಯರೊಡನೆ ಹೋಗಿಬಂದ. ಮೆಟ್ರಿಕ್ಯುಲೇಷನ್ ಬಳಿಕ ಕಾಲೇಜು ಸೇರಿದ. ಒಂಭತ್ತನೆಯ ತರಗತಿಯಲ್ಲಿದ್ದಾಗ ಅವನ ತಂದೆ ಕಾಂಗ್ರೆಸ್ ಅಧಿವೇಶನಕ್ಕೆ ಅವನನ್ನು ಕರೆತಂದಿದ್ದರು. (1924ರ ಬೆಳಗಾವಿಯ ಅಧಿವೇಶನಕ್ಕೂ ಅಪ್ಪ, ಮಗ ಹೋಗಿದ್ದರು.) ಆದರೆ ಕಾಂಗ್ರೆಸ್ಸಿನ ಹಾದಿಗಳೆಲ್ಲ ಕಿಶನ್ ಸಿಂಗರಿಗೆ ಒಪ್ಪಿಗೆಯಿರಲಿಲ್ಲ. ಅವರು ಬಬ್ಬರ್ ಅಕಾಲಿ ಎಂಬ ತೀವ್ರಗಾಮಿ ಸಿಖ್ ಧಾರ್ಮಿಕ ಸಂಘಟನೆಯವರ ಜೊತೆಗೆ ಸಂಪರ್ಕ ಹೊಂದಿದ್ದರು. ರಕ್ತಸಿಕ್ತ ಸಂಘರ್ಷಕ್ಕೆ ಹೆಸರಾದ ಬಬ್ಬರ್ ಅಕಾಲಿಗಳು 1914-15ರ ಲಾಹೋರ್ ಪಿತೂರಿಗಳಿಗೆ ಕಾರಣರಾದರು. 1914ರ ಆಸುಪಾಸು ಅಲ್ಲಿಲ್ಲಿ ಚದುರಿದಂತೆ ಕೆಲವು ಕ್ರಾಂತಿಕಾರಿ ಚಟುವಟಿಕೆಗಳು ನಡೆಯುತ್ತಿದ್ದವು. ಮೊದಲ ಮಹಾಯುದ್ಧ ಶುರುವಾಯಿತು. ಪಂಜಾಬ್, ಬಂಗಾಳ, ಉತ್ತರಪ್ರದೇಶದ ಕೆಲವು ಸಂಘಟನೆಗಳು ತಾವೂ ಸಶಸ್ತ್ರ ಬಂಡಾಯದ ಪ್ರಯತ್ನವನ್ನು ನಡೆಸುತ್ತ ಬ್ರಿಟಿಷರನ್ನು ಓಡಿಸಿ ಸ್ವಾತಂತ್ರ್ಯ ಗಳಿಸುವ ಪ್ರಯತ್ನ ಮಾಡತೊಡಗಿದವು. ರಾಶ್ ಬಿಹಾರಿ ಬೋಸ್, ಸಚಿಂದ್ರನಾಥ ಸನ್ಯಾಲ್, ಜತಿನ್ ಮುಖರ್ಜಿ ಮೊದಲಾದವರು ಸಿಖ್ ಮತ್ತು ರಾಜಪೂತ ರೆಜಿಮೆಂಟಿನೊಂದಿಗೆ ಗುಪ್ತ ಮಾತುಕತೆ ನಡೆಸಿ ಭಾರತದಲ್ಲಿ ಸಶಸ್ತ್ರ ಕ್ರಾಂತಿಯ ಯೋಜನೆ ಹಾಕಿದ್ದರು. ಆದರೆ ಇದರ ಸುಳಿವು ಸಿಗುತ್ತಲೇ ಅವರನ್ನು ಬ್ರಿಟಿಷ್ ಯೋಧರು ಸುತ್ತುವರೆದರು. ರೆಜಿಮೆಂಟಿನವರ ಶಸ್ತ್ರಾಸ್ತ್ರ ಕಸಿದುಕೊಂಡರು. 7000 ಜನರನ್ನು ಬಂಧಿಸಿದರು. ಫ್ರಾನ್ಸಿನ ಭೀಕರ ಕದನ ಕಣಕ್ಕೆ ಅವರನ್ನೆಲ್ಲ ಕಳಿಸಿದರು. 1916ರ ಹೊತ್ತಿಗೆ ಬಹುತೇಕ ಚಟುವಟಿಕೆಗಳನ್ನು ದಮನಿಸಲಾಯಿತು.

ಈ ಸಮಯದ ಕ್ರಾಂತಿಕಾರಿ ಚಟುವಟಿಕೆಗಳಿಗೆ, ಅದರಲ್ಲೂ ಬಬ್ಬರ್ ಖಾಲ್ಸಾ ಸದಸ್ಯರಿಗೆ ಸಾವಿರಾರು ರೂಪಾಯಿಯ ಧನಸಹಾಯವನ್ನು ಕಿಶನ್ ಸಿಂಗ್ ಮಾಡಿದ್ದರು. ಅವರು ತನ್ನ ಸೋದರರಂತೆ ಗಧರ್ ಪಕ್ಷದ ಸದಸ್ಯರಾಗಿದ್ದರು. ಗಧರ್ ಎಂದರೆ ‘ಕ್ರಾಂತಿ’ ಅಥವಾ ‘ಬಂಡಾಯ’. ಅಂದಿನ ಪಂಜಾಬಿನಲ್ಲಷ್ಟೇ ಏಕೆ, ಭಾರತದಾದ್ಯಂತ ಮತ್ತು ವಿದೇಶಗಳಲ್ಲಿಯೂ ಜನಪ್ರಿಯವಾಗಿದ್ದದ್ದು ಗಧರ್ ಪಕ್ಷ. ಅದರಲ್ಲೂ ಉತ್ತರ ಭಾರತದ ಸಿಖ್ ತರುಣರನ್ನು ಕಾಂಗ್ರೆಸ್ ಪ್ರಭಾವದಾಚೆಗಿನ ಸ್ವಾತಂತ್ರ್ಯ ಹೋರಾಟದತ್ತ ಸೆಳೆದದ್ದು ಗಧರ್ ಪಕ್ಷ. ಭಗತನ ಕುಟುಂಬದವರು, ಅವನ ಸಹವರ್ತಿಗಳು ಒಂದಲ್ಲಾ ಒಂದು ರೀತಿಯಲ್ಲಿ ಅದರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರು.

(ಪುಸ್ತಕದ ಖರೀದಿಗೆ ಸಂಪರ್ಕಿಸಿ : 9480286844)

ಇದನ್ನೂ ಓದಿ : Milkha Singh : ಶೆಲ್ಫಿಗೇರುವ ಮುನ್ನ ; ಕಾಲದೊಂದಿಗೆ ಓಟದ ಮುಖಾಮುಖಿ

Published On - 1:00 pm, Tue, 28 September 21