Milkha Singh : ಶೆಲ್ಫಿಗೇರುವ ಮುನ್ನ ; ಕಾಲದೊಂದಿಗೆ ಓಟದ ಮುಖಾಮುಖಿ

New Book : ‘ತಂದೆಗೆ ಸಾವಿನ ಮನೆ ಕಂಡಿತೇನೋ. ‘ಭಾಗ್, ಮಿಲ್ಖಾ ಭಾಗ್’ ಎಂಬುದು ಅವರ ಕೊನೆಯ ಮಾತಾಗಿತ್ತು. ಒಂದೆಡೆ ಹೆತ್ತವರು ಮತ್ತು ಒಡಹುಟ್ಟಿದವರ ಕಳೆಬರಹ. ಇನ್ನೊಂದೆಡೆ ಸಾವಿನಂಚಿನಲ್ಲಿರುವವರ ನರಳಾಟ ಮತ್ತು ಆಕ್ರಂದನ. ಮತ್ತೊಂದೆಡೆ ಧರ್ಮಾಂಧರ ಅಟ್ಟಹಾಸ. ಆ ಕ್ಷಣ ಅಲ್ಲಿಂದ ಓಡಿ ಹೋಗಿ ಜೀವ ಉಳಿಸಿಕೊಳ್ಳುವುದೇ ಜೀವನದ ಮಹತ್ಸಾಧನೆಯಾಗಿತ್ತು.’

Milkha Singh : ಶೆಲ್ಫಿಗೇರುವ ಮುನ್ನ ; ಕಾಲದೊಂದಿಗೆ ಓಟದ ಮುಖಾಮುಖಿ
ಲೇಖಕ ಆರ್. ಬಿ. ಗುರುಬಸವರಾಜ
Follow us
ಶ್ರೀದೇವಿ ಕಳಸದ
|

Updated on: Jul 14, 2021 | 11:54 AM

ಮಾಹಿತಿಯ ಪ್ರವಾಹದ ನಡುವೆ ನಮ್ಮನ್ನು ನಾವು ದೃಢವಾಗಿ ನಿಲ್ಲಿಸಿಕೊಂಡು ನಮ್ಮ ಆಸಕ್ತಿಗಳ ಆಳ ತಲುಪಲು, ವಿಚಾರಗಳನ್ನು ಪರಾಮರ್ಶಿಸಿಕೊಳ್ಳಲು ವಿಷಯಾಧಾರಿತ ಅಧ್ಯಯನ ಬೇಕೇಬೇಕು. ಕಾಲಮಾನಕ್ಕೆ ತಕ್ಕಂತೆ ಜ್ಞಾನಸಂಪಾದನೆಗೆ ಈವತ್ತು ಸಾಕಷ್ಟು ಪರ್ಯಾಯ ಮತ್ತು ಕ್ಷಿಪ್ರ ಮಾರ್ಗಗಳಿದ್ದರೂ, ಸವಿಸ್ತಾರದ ಓದಿಗಾಗಿ ಪುಸ್ತಕ ಎಂಬ ಗಂಭೀರ ಮಾಧ್ಯಮವೇ ಅದಕ್ಕೆ ಒತ್ತಾಸೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಪುಸ್ತಕಗಳು ಹೊರಬರುತ್ತ ಜ್ಞಾನಾಕಾಂಕ್ಷಿಗಳಿಗೆ ದಾರಿ ತೋರುತ್ತಲೇ ಇವೆ. ಈಗಿಲ್ಲಿ ಪುಸ್ತಕದಂಗಡಿಗಳಿಗೆ ಹೊರಟುನಿಂತ ಬಂಡಲ್​ನಿಂದ ಒಂದು ಪ್ರತಿಯನ್ನು ‘ಶೆಲ್ಫಿಗೇರುವ ಮುನ್ನ’ ಹೊಸ ಅಂಕಣದಲ್ಲಿ ಇಳಿಸಿಕೊಂಡು, ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ತೆರೆದಿಡಲಾಗಿದೆ.

ಪ್ರಕಾಶಕರು ಮತ್ತು ಬರಹಗಾರರು ಹೊಸ ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ಮೊಬೈಲ್​ ನಂಬರ್​ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com   

*

ಕೃತಿ : ಮಿಲ್ಖಾ ಸಿಂಗ್ – ಜೀವನ ಕಥನ  ಲೇಖಕರು : ಬಿ. ಆರ್. ಗುರುಬಸವರಾಜ ಪುಟ : 150 ಬೆಲೆ : ರೂ. 150 ಪ್ರಕಾಶನ : ಸಾಹಿತ್ಯಲೋಕ ಪಬ್ಲಿಕೇಷನ್ಸ್ ಮುಖಪುಟ ವಿನ್ಯಾಸ : ಎಸ್. ಮಂಜುನಾಥ

* 1947 ರ ದೇಶ ವಿಭಜನೆ ಬಹುಜನರನ್ನು ಬಹುವಿಧವಾಗಿ ಕಾಡಿದೆ, ಅದರಲ್ಲಿ ನತದೃಷ್ಟರೆಂದರೆ ಬಡವರು. ಅದರಲ್ಲೂ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ನೋವು ಅನುಭವಿಸಿದರು. ಕೆಲ ಮಕ್ಕಳು ತಂದೆ ತಾಯಿಗಳನ್ನು ಕಳೆದುಕೊಂಡು ಅನಾಥರಾದರು. ಯಾರೂ ದಿಕ್ಕುದೆಸೆ ಇಲ್ಲದೇ ಅನಾಥರಾಗಿ ಬೆಳೆದ ಅಂತಹ ಎಷ್ಟೋ ಮಕ್ಕಳು ಇಡೀ ವಿಶ್ವವೇ ಬೆಕ್ಕಸಬೆರಗಾಗಿ ನೋಡುವಂತೆ ಸಾಧನೆ ಮಾಡಿದ್ದಾರೆ. ಅದರಲ್ಲಿ ಮಿಲ್ಖಾಸಿಂಗ್ ಒಬ್ಬರು. ಮಿಲ್ಖಾಸಿಂಗ್ ಜನಿಸಿದ್ದು ಪಾಕಿಸ್ತಾನದಲ್ಲಿ. ಬೆಳೆದದ್ದು ಭಾರತದಲ್ಲಿ. ಆದರೆ ಆತನ ಕೀರ್ತಿ ಹಬ್ಬಿದ್ದು ಮಾತ್ರ ಇಡೀ ಜಗತ್ತಿನಾದ್ಯಂತ. ಮಿಲ್ಖಾಸಿಂಗ್ ಅವರದು ಅಪರೂಪದ ಹಾಗೂ ವಿಭಿನ್ನ ಜೀವನಯಾನ. ಮಿಲ್ಖಾಸಿಂಗ್‍ನ ಜನ್ಮ ದಿನಾಂಕದ ಬಗ್ಗೆ ಒಂದಿಷ್ಟು ಗೊಂದಲಗಳಿವೆ. ಮಿಲ್ಖಾಸಿಂಗ್ ಜನಿಸಿದ್ದು 20 ನೇ ನವೆಂಬರ್ 1929ರಲ್ಲಿ ಎಂದು ಕೆಲ ಕಡೆಗಳಲ್ಲಿ ದಾಖಲಾಗಿದೆ. ಆದರೆ ಮಿಲ್ಖಾಸಿಂಗ್ ಅವರು ತಮ್ಮ ಆತ್ಮಚರಿತ್ರೆ ‘ರೇಸ್ ಆಫ್ ಮೈ ಲೈಫ್’ ಕೃತಿಯಲ್ಲಿ ತಮ್ಮ ಜನ್ಮದಿನಾಂಕವನ್ನು 20 ನೇ ನವೆಂಬರ್ 1932 ಎಂದು ಅವರೇ ಹೇಳಿಕೊಂಡಿದ್ದಾರೆ. ‘ಇದೂ ಸಹ ನಿಖರವಲ್ಲ, ಸದ್ಯ ನನ್ನ ಪಾಸ್‍ಪೋರ್ಟ್‍ನಲ್ಲಿ ಈ ದಿನಾಂಕ ದಾಖಲಾಗಿದೆ’ ಎಂಬುದು ಅವರ ಹೇಳಿಕೆ.

ಆಗಿನ ಕಾಲದಲ್ಲಿ ನಿಖರ ಜನ್ಮದಿನಾಂಕವನ್ನು ಬರೆದಿಡುವ ಪರಿಪಾಠ ಇರಲಿಲ್ಲ. ಆಯಾ ಕಾಲಘಟ್ಟದಲ್ಲಿ ಬರುತ್ತಿದ್ದ ಹುಣ್ಣಿಮೆ, ಅಮವಾಸ್ಯೆ, ಹಬ್ಬ ಹರಿದಿನಗಳೇ ಜನನ ಮತ್ತು ಮರಣದ ಕಾಲಸೂಚಕಗಳಾಗಿದ್ದವು. ಬಹುತೇಕ ಗ್ರಾಮೀಣ ಸಮುದಾಯದ ಜನರಿಗೆ ವರ್ತಮಾನ ಮುಖ್ಯವೇ ಹೊರತು ಭವಿಷ್ಯವಲ್ಲ. ಹಾಗಾಗಿ ಬಹುತೇಕರ ಜನ್ಮದಿನಾಂಕದ ಬಗ್ಗೆ ನಿಖರತೆ ಇರುವುದಿಲ್ಲ. ಈಗಿನಂತೆ ಜನನ ಮತ್ತು ಮರಣ ನೊಂದಣಿಯು ಆಗ ಕಡ್ಡಾಯವಿರಲಿಲ್ಲ ಮತ್ತು ಅದಕ್ಕೆ ಸೂಕ್ತ ವ್ಯವಸ್ಥೆಯೂ ಇರಲಿಲ್ಲ. ಇಂದಿನ ಪಾಕಿಸ್ತಾನಕ್ಕೆ ಸೇರಿದ ಮುಜಾಫರ್‍ಘರ್ ಜಿಲ್ಲೆಯ ಗೋವಿಂದಪುರ ಎಂಬ ಚಿಕ್ಕ ಹಳ್ಳಿಯ ಚಿಕ್ಕ ಮನೆಯಲ್ಲಿ ಜನಿಸಿದರು.

ಸ್ವಾತಂತ್ರಕ್ಕೂ ಮೊದಲು ಗೋವಿಂದಪುರವು ದೊಡ್ಡ ಕುಟುಂಬದಂತೆ ಇತ್ತು. ಅಲ್ಲಿನ ಸಮುದಾಯಗಳ ನಡುವೆ ಪರಸ್ಪರ ಸೌಹಾರ್ದತೆ ಮನೆ ಮಾಡಿತ್ತು. ಹಿಂದೂ ಮತ್ತು ಸಿಖ್ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅಲ್ಪಸಂಖ್ಯಾತ ಮುಸ್ಲಿಮರೊಂದಿಗೆ ಸಹೋದರತ್ವ ಭಾವನೆ ಇತ್ತು. ಕುಟುಂಬಗಳು ಪರಸ್ಪರ ವಿನಿಮಯ ಪದ್ದತಿ ಅನುಸರಿಸುತ್ತಿದ್ದವು. ಮನೆಯ ಹೊರಗೆ ಕುಳಿತು ವಿನೋದದಿಂದ ಊಟ ಮಾಡುತ್ತ ಕಥೆಗಳನ್ನು, ಸುದ್ದಿಗಳನ್ನು, ಕಷ್ಟನಷ್ಟಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಇದು ಅನೇಕ ತಲೆಮಾರುಗಳಿಂದ ನಡೆದುಕೊಂಡು ಬಂದ ಪದ್ದತಿಯಾಗಿತ್ತು.

ರಾಜಕೀಯ ಪಕ್ಷಗಳು ಪರಸ್ಪರ ರಾಜಿ ಮಾಡಿಕೊಳ್ಳುವ ಪ್ರಯತ್ನದಲ್ಲಿ ಧರ್ಮದ ಹೆಸರಿನಲ್ಲಿ ಜನರ ಮನಸ್ಸನ್ನು ಒಡೆಯುವ ಕುತಂತ್ರ ಮಾಡಿದರು. ಮತೀಯ ದ್ವೇಷವನ್ನು ಪರಸ್ಪರ ಧರ್ಮಗಳಲ್ಲಿ ಭಿತ್ತತೊಡಗಿದರು. ಪರಿಣಾಮವಾಗಿ ಸೌಹಾರ್ದತೆ ಮಾಯವಾಗಿ ಅಸೂಯೆ ಭಾವನೆ ಮೂಡತೊಡಗಿತು. ದೇಶ ವಿಭಜನೆಯ ವೇಳೆ ನರಮೇಧದಂತಹ ಕ್ರೂರತ್ವ ವಿಜೃಂಭಿಸಿತು. ಎರಡೂ ಕಡೆಗಳಲ್ಲಿ ಸಾವಿರಾರು ಜನ ಅಮಾಯಕರು ಬಲಿಯಾದರು. ಮತೀಯ ಭಾವನೆ ಎಲ್ಲೆಡೆ ಹರಡತೊಡಗಿತು. ಸೌಹಾರ್ದದ ಹಳ್ಳಿಗಳೂ ಸಹ ಕೋಮುದಳ್ಳುರಿಯಲ್ಲಿ ಬೆಂದವು. ಕಟ್ಟುಕತೆಗಳು ಎಲ್ಲಡೆ ಜೀವ ಪಡೆದವು. ಹಿಂಸಾಚಾರವು ಗೋವಿಂದಪುರ ಮತ್ತು ಸುತ್ತಮುತ್ತಲ ಹಳ್ಳಿಗಳಿಗೂ ವ್ಯಾಪಿಸಿತು. ಸ್ನೇಹಪರರಾಗಿದ್ದ ರಾವಲ್ಪಿಂಡಿ ಮತ್ತು ಡೇರಾ ಘಾಜಿ ಖಾನ್‍ಗಳ ಮುಸ್ಲಿಂ ಗುಂಪುಗಳು ಹಿಂದು ಮತ್ತು ಸಿಖ್ ಕುಟುಂಬಗಳಿಗೆ ಬೆದರಿಕೆ ಹಾಕತೊಡಗಿದವು. ಮುಸ್ಲಿಂ ಮಕ್ಕಳು ಇವರೊಂದಿಗೆ ಸೇರಿ ಆಟವಾಡುವುದನ್ನು ತಡೆದರು. ತಲತಲಾಂತರಗಳಿಂದ ನಡೆದುಕೊಂಡು ಬಂದಿದ್ದ ಸೌಹಾರ್ದ ಕೂಟಗಳು ರಾತ್ರೋರಾತ್ರಿ ಕಣ್ಮರೆಯಾಗಿದ್ದವು. ಎರಡೂ ಸಮುದಾಯಗಳಲ್ಲಿ ಭಯ ಮತ್ತು ಅನುಮಾನಗಳು ಕಾಡತೊಡಗಿದವು. ಯಾವ ಸಮುದಾಯವು ಪ್ರಾಬಲ್ಯ ಹೊಂದುವುದೋ?, ಯಾರು ನಮ್ಮನ್ನು ಸೆದೆ ಬಡಿಯುವುದರೋ? ಎಂದು ಚಿಂತಿಸುವಂತಾಯ್ತು.

milkha singh

ಮಿಲ್ಖಾ ಸಿಂಗ್

ದೇಶ ವಿಭಜನೆಯ ಸಮಯದಲ್ಲಿ ಮಿಲ್ಖಾಸಿಂಗ್‍ಗೆ ಸುಮಾರು 15-16 ವರ್ಷ. ಅವರು ವಾಸಿಸುತ್ತಿದ್ದ ಗ್ರಾಮ ಮುಲ್ತಾನ್ ಬಳಿಯ ದೂರದ ಪ್ರದೇಶದಲ್ಲಿತ್ತು. ಆ ಪ್ರದೇಶವು ತುಂಬಾ ಹಿಂದುಳಿದ ಪ್ರದೇಶವಾಗಿತ್ತು. ಯಾವುದೇ ಸುದ್ದಿ ಮಾಧ್ಯಮಗಳಾಗಲೀ ಇರಲಿಲ್ಲ. ಒಂದು ವೇಳೆ ಅಂದು ಈಗಿನಂತೆ ಸುದ್ದಿ ಮಾಧ್ಯಮಗಳ ಹಾವಳಿ ಇದ್ದಿದ್ದರೆ ವಿಭಜನೆಯ ಪರಿಸ್ಥಿತಿ ಹೇಗಿರುತ್ತಿತ್ತೋ ಊಹಿಸಲೂ ಕಷ್ಟವಾಗುತ್ತದೆ. ಕನಿಷ್ಠ ದಿನ ಪತ್ರಿಕೆ ವಾರಪತ್ರಿಕೆಗಳು ಸಹ ಅಲ್ಲಿ ದೊರೆಯುತ್ತಿರಲಿಲ್ಲ. ಜನರೇ ಸುದ್ದಿ ಸಂವಾಹಕರಾಗಿದ್ದರು. ವಿಭಜನೆಗೆ ಕಾರಣವಾಗುವ ಯಾವುದೇ ರಾಜಕೀಯ ಘಟನೆಗಳು ಗ್ರಾಮವನ್ನು ತಲುಪುತ್ತಲೇ ಇರಲಿಲ್ಲ. ಯಾರಾದರೂ ಅಗತ್ಯ ಸರಕು ಸಾಮಗ್ರಿಗಳನ್ನು ಖರೀದಿಸಲು ಪೇಟೆಗೆ ಹೊದಾಗ ಮಾತ್ರ ದೇಶದ ಆಗುಹೋಗುಗಳ ಸುದ್ದಿ ತಿಳಿಯುತ್ತಿತ್ತು. ನಂತರ ಅದು ಗ್ರಾಮದಲ್ಲಿ ಗುಲ್ಲಾಗುತ್ತಿತ್ತು.

ಆಗಸ್ಟ್ 14, 1947ರಂದು ಅಖಂಡ ಭಾರತ ಸ್ವತಂತ್ರದ ಹೆಸರಿನಲ್ಲಿ ಇಬ್ಬಾಗವಾಯಿತು. ಸ್ವಾತಂತ್ರ ಘೋಷಣೆಯಾಗುತ್ತಿದ್ದಂತೆ ಗಡಿಯಲ್ಲಿ ಮಾನಸಿಕ ಗೋಡೆ ಎದ್ದಿತು. ಕೋಮುವಾದದ ವ್ಯಾಪಕ ಅಲೆಗಳು ಸ್ನೇಹಸಂಬಂಧವನ್ನು ನಾಶ ಮಾಡಿದ್ದವು. ಜನರು ಮನುಷ್ಯರಂತೆ ವರ್ತಿಸದೆ ಹಿಂಸಾ ಪ್ರಾಣಿಗಳಾದರು. ಹಿಂದು ಸಿಖ್ಖರು ಮತ್ತು ಮುಸ್ಲಿಮರು ಪರಸ್ಪರ ಕ್ರೂರ ಹತ್ಯೆಗೆ ಇಳಿದರು. ಸಾವಿರಾರು ಮನೆಗಳು ನಾಶವಾದವು. ತಾಯಂದಿರು ಗಂಡನನ್ನು, ಮಕ್ಕಳು ಪೋಷಕರನ್ನು ಕಳೆದುಕೊಂಡರು. ಎಲ್ಲೆಡೆ ಇದ್ದದ್ದು ರಕ್ತಪಾತ ಮಾತ್ರ. ಸಹೋದರ ಮಖಾನ್ ಎಚ್ಚರಿಸಿದಂತೆ ಗೋವಿಂದಪುರದ ಜನರಿಗೆ ವಿಪತ್ತು ಕಾಯುತ್ತಿತ್ತು. ಪೊಲೀಸರು ಹಳ್ಳಿಯನ್ನು ಮತಾಂಧರಿಗೆ ಹಸ್ತಾಂತರಿಸಿದ್ದರು. ಮತಾಂಧರು ಮದ್ದುಗುಂಡುಗಳೊಂದಿಗೆ ಹಳ್ಳಿನಾಶಕ್ಕೆ ಹೊಂಚು ಹಾಕಿದ್ದರು. ಮಿಲ್ಖಾಸಿಂಗ್ ತಂದೆ ಸಂಜೆ ಹಳ್ಳಿಗೆ ಹಿಂದಿರುಗುವ ವೇಳೆಗೆ ಕೋಮುದ್ವೇಷದ ಜ್ವಾಲೆಗಳು ತಾಂಡವವಾಡತೊಡಗಿದವು. ಹಳ್ಳಿಯಿಂದ ಕೇವಲ 500 ಮೀಟರ್ ದೂರದಲ್ಲಿ ಫೈರಿಂಗ್ ಮಾಡಿದರು. ಧ್ವನಿವರ್ಧಕದ ಮೂಲಕ ಮತಾಂತರಗೊಳ್ಳಲು ಒತ್ತಾಯಿಸಿದರು. ಹಳ್ಳಿಯ ಸರಪಂಚನನ್ನು ಕೊಂದು ಹಾಕಿದರು. ಉಗ್ರ ಜನಸಮೂಹದ ವಿರುದ್ದ ಹೋರಾಡಲು ಇದ್ದ ಒಂದು ಶಕ್ತಿ ಹತ್ಯೆಯಾಗಿತ್ತು.

ಬೆಳಗಿನ ಜಾವ ನಾಲ್ಕು ಗಂಟೆಗೆ ಉಗ್ರಸಮೂಹ ಹಳ್ಳಿಯನ್ನು ಮುತ್ತಿಗೆ ಹಾಕಿತ್ತು. ಮಹಿಳೆಯರು ಮತ್ತು ಮಕ್ಕಳನ್ನು ಗುರುದ್ವಾರದಲ್ಲಿ ಅಡಗಿಸಿಟ್ಟರು. ಯುವಕರನ್ನು ಸೇರಿದಂತೆ ಪ್ರತಿಯೊಬ್ಬ ಪುರುಷರು ದಾಳಿ ತಡೆಯುವ ಪ್ರಯತ್ನದಲ್ಲಿ ತೊಡಗಿಕೊಂಡರು. ಅವರ ಬಂದೂಕಿನ ಮುಂದೆ ಇವರ ಲಾಠಿಗಳು ಕೆಲಸ ಮಾಡಲಿಲ್ಲ. ಮುಖಾಮುಖಿಯು ರಕ್ತಸಿಕ್ತವಾಗಿತ್ತು. ಮಾರಾಮಾರಿಯಿಂದ ತಪ್ಪಿಸಿಕೊಳ್ಳಲು ಮಿಲ್ಖಾಸಿಂಗ್ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತಿದ್ದ. ಮಿಲ್ಖಾನ ತಂದೆ ಧೈರ್ಯದಿಂದ ಹೋರಾಡುತ್ತಿದ್ದರು. ನೋಡನೋಡುತ್ತಿದ್ದಂತೆ ತಂದೆ ಕೆಳಕ್ಕೆ ಬಿದ್ದರು. ಕುದುರೆ ಸವಾರನೊಬ್ಬ ಮಾರಣಾಂತಿಕವಾಗಿ ತಂದೆಯ ಮೇಲೆ ಹಲ್ಲೆ ಮಾಡಿದ್ದ. ಮಿಲ್ಖಾನ ತಂದೆ ನೆಲಕ್ಕೆ ಬೀಳುತ್ತಿದ್ದಂತೆ ‘ಭಾಗ್, ಮಿಲ್ಖಾ ಭಾಗ್’ ಎಂದು ಜೋರಾಗಿ ಅರಚಿದನು. ಈ ಮಾತು ಕೇಳುತ್ತಿದ್ದಂತೆ ಮಿಲ್ಖಾನಲ್ಲಿ ಭಯ ಮೂಡಿತು. ಚಲಿಸಲು ಪ್ರಯತ್ನಿಸಿದ. ಕಾಲುಗಳು ಶಕ್ತಿ ಕಳೆದುಕೊಂಡಂತೆ ಚಲಿಸಲು ಸಾಧ್ಯವಾಗಲೇ ಇಲ್ಲ. ಹತ್ಯಾಕಾಂಡ ಮುಂದುವರೆದಿತ್ತು. ಅತ್ತ ಗುರುದ್ವಾರದಲ್ಲಿದ್ದ ತಾಯಿಯ ರೋದನ ಕೇಳಿಸಿತು. ದುರುಳರು ಅಲ್ಲಿಯೂ ದಾಳಿ ಮಾಡಿರುವುದನ್ನು ಮಿಲ್ಖಾ ಊಹಿಸಿದ. ಸಹೋದರ ಗೋವಿಂದ ಕೂಡಾ ಹತ್ಯೆಯಾಗಿದ್ದ. ಸಹೋದರಿ ಮಖಾನಿ ಮತ್ತು ಅತ್ತಿಗೆಯರೂ ಕೂಡಾ ಹತ್ಯೆಯಾಗಿದ್ದರು. ಸಹೋದರಿ ಹೂಂಡಿ ತನ್ನ ಒಂದು ವರ್ಷದ ಮಗುವನ್ನು ಎದೆಗೆ ಅವಚಿಕೊಂಡು ಧೈರ್ಯವಾಗಿ ಓಡಿದ್ದಳು. ತಾಯಿಯ ಪ್ರೀತಿ ಎಂದರೆ ಇದೇ ಅಲ್ಲವೇ?

ಮಿಲ್ಖಾಸಿಂಗ್‍ನ ಬಾಲ್ಯ ಅತ್ಯಂತ ಕಷ್ಟಕರದಿಂದ ಕೂಡಿತ್ತು ಎಂಬುದನ್ನು ಒತ್ತಿ ಹೇಳುವ ಅಗತ್ಯವಿಲ್ಲ ಎನಿಸುತ್ತದೆ. ಏಕೆಂದರೆ ದೇಶ ವಿಭಜನೆಯ ವೇಳೆ ಅವರು ಅನುಭವಿಸಿದ ನೋವು, ಯಾತನೆಗಳೇ ಎಲ್ಲವನ್ನೂ ಹೇಳುತ್ತವೆ. 1947ರಲ್ಲಿ ದೇಶ ವಿಭಜನೆ ಮತ್ತು ಸ್ವಾತಂತ್ರ ಏಕಕಾಲದಲ್ಲಿಯೇ ನಡೆದವು. ಅಂತೆಯೇ ಬಾಲಕ ಮಿಲ್ಖಾಸಿಂಗನ ಜೀವನವೂ ಸಹ ಒಂದು ರೀತಿಯಲ್ಲಿ ವಿಭಜನೆ ಆಯಿತು ಎಂದೇ ಹೇಳಬಹುದು. ಇತ್ತ ಭಾರತ ಮತ್ತು ಪಾಕಿಸ್ತಾನಗಳು ವಿಭಜನೆಯಾದರೆ ಅತ್ತ ಮಿಲ್ಖಾಸಿಂಗ್ ತನ್ನ ತಂದೆ ತಾಯಿ ಮತ್ತು ಒಡಹುಟ್ಟಿದವರನ್ನು ಕಳೆದುಕೊಂಡ. ಅಂತೆಯೇ ಮಿಲ್ಖಾಸಿಂಗ್ ತನ್ನ ಹುಟ್ಟಿದ ಊರನ್ನು ತೊರೆದು ಗೊತ್ತಿಲ್ಲದ ಊರಿನಲ್ಲಿ ಜೀವಿಸಲು ಮಾನಸಿಕವಾಗಿ ಸಿದ್ದನಾದ.

ಈ ಸಂದರ್ಭದಲ್ಲಿ ಕುವೆಂಪು ಅವರ ‘ಓ ನನ್ನ ಚೇತನ’ ಗೀತೆಯ ಸಾಲುಗಳು ನೆನಪಾಗುತ್ತವೆ. ‘ಎಲ್ಲಿಯೂ ನಿಲ್ಲದಿರು, ಮನೆಯನೆಂದು ಕಟ್ಟದಿರು, ಕೊನೆಯನೆಂದು ಮುಟ್ಟದಿರು, ಓ! ಅನಂತವಾಗಿರು’. ಕವಿಯ ಈ ಸಾಲುಗಳಿಗೂ ಹಾಗೂ ಮಿಲ್ಖಾಸಿಂಗನ ಜೀವನಕ್ಕೂ ಸಾಮ್ಯತೆ ಇದೆ. ತನ್ನವರನ್ನೆಲ್ಲಾ ಕಳೆದುಕೊಂಡು ತಾನು ಉಳಿಯಬೇಕಾದರೆ ಈಗ ಎಲ್ಲಿಯೂ ನಿಲ್ಲುವಂತಿಲ್ಲ. ಗುರಿ ಯಾವುದೋ ಗೊತ್ತಿಲ್ಲ. ಆದರೆ ಮುಂದೊಂದು ದಿನ ಅನಂತದಲ್ಲಿ ಸೇರಿ ಅನಂತವಾಗುತ್ತೇನೆ ಎಂದು ಸ್ವತಃ ಮಿಲ್ಖಾನಿಗೂ ತಿಳಿದಿರಲೇ ಇಲ್ಲ.

ತಂದೆ ಕೂಗಿ ಹೇಳಿದ ‘ಭಾಗ್, ಮಿಲ್ಖಾ ಭಾಗ್’ ಎಂಬ ಮಾತು ಎದೆಯಲ್ಲಿ ಚೂರಿ ಇರಿದಂತೆ ಆಯಿತು. ಆದರೆ ಓಡುವುದು ಅನಿವಾರ್ಯವಾಗಿತ್ತು. ತನ್ನ ಕುಟುಂಬದವರ ಮೇಲಿನ ಹತ್ಯೆಯನ್ನು ನೆನಯುತ್ತಾ ತನ್ನ ಪ್ರಾಣ ಉಳಿಸಿಕೊಳ್ಳಲು ಓಡಿದ್ದ. ಒಂದಿಷ್ಟು ದೂರ ಓಡುತ್ತಾ, ಮತ್ತೊಂದಿಷ್ಟು ದೂರ ದಣಿವಾರಿಸಿಕೊಳ್ಳಲು ನಡೆಯುತ್ತಾ, ಮತ್ತೆ ಓಡುತ್ತಾ ಕೋಟ್ ಆಡ್ಡುಗೆ ನಡೆದ. ಶಾಲೆಗೆ ಹೋಗಿ ಬರುವ ವೇಳೆ ಕೋಟ್ ಆಡ್ಡು ದಾರಿ ಆಗಲೇ ಚಿರಪರಿಚಿತವಾಗಿತ್ತು. ಓಡಿ ಓಡಿ ಕೋಟ್ ಆಡ್ಡು ಸೇರಿದ್ದ.

milkha singh

ಓಡು ಮಿಲ್ಖಾ ಓಡು

ದೇಶ ಇಬ್ಬಾಗವಾದಾಗ ಮಿಲ್ಖಾಸಿಂಗ್ ತನ್ನ ಕುಟುಂಬದ ಬಹುತೇಕ ಸದಸ್ಯರನ್ನು ಕಳೆದುಕೊಳ್ಳಬೇಕಾಗುತ್ತದೆ. ಸಂಚುಕೋರರ ದಾಳಿಗೆ ಕುಟುಂಬದವರು ಬಲಿಯಾಗಬೇಕಾಗುತ್ತದೆ. ಕಣ್ಣೆದುರಿಗೆ ತನ್ನ ಹೆತ್ತವರು ಮತ್ತು ಒಡಹುಟ್ಟಿದವರನ್ನು ಕಳೆದುಕೊಳ್ಳುವ ನೋವು ಯಾವ ವೈರಿಗೂ ಬೇಡ ಎನಿಸುತ್ತದೆ. ಪ್ರತಿರೋಧ ಒಡ್ಡಲು ಶಕ್ತಿಯಿಲ್ಲದೇ ಜೀವ ಉಳಿದರೆ ಸಾಕು ಎಂಬ ಸ್ಥಿತಿ ನಿರ್ಮಾಣವಾಗಿ ಅಲ್ಲಿಂದ ತಪ್ಪಿಸಿಕೊಂಡು ಬಂದು ಭಾರತ ಸೇರುವ ಸನ್ನಿವೇಶವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವೇ?

‘ನನ್ನ ಹೆತ್ತವರು ಮತ್ತು ಒಡಹುಟ್ಟಿದವರು ನನ್ನ ಕಣ್ಣೆದುರೇ ಹತ್ಯೆಯಾದರು. ಜೊತೆಗೆ ಅವರೆಲ್ಲರೂ ಸಂಚಿನ ನರಮೇಧಕ್ಕೆ ಬಲಿಯಾದರು. ರಕ್ತದ ಮಡುವಿನಲ್ಲಿ ವಿಲವಿಲನೆ ಒದ್ದಾಡುವ ಆ ಜೀವಗಳಿಗೆ ನಾನೆಂತು ಸಹಾಯ ಮಾಡಲಿ. ಎಲ್ಲೆಡೆ ಆಕ್ರಂದನ, ನರಳಾಟ. ಅರೆಬರೆಯಾದ ಜೀವಗಳು ಉಳಿವಿಗಾಗಿ ಹೋರಾಟ ನಡೆಸಿವೆ. ಜೀವನ್ಮರಣದಲ್ಲಿ ಗೆದ್ದವರೇ ಚಿರಾಯುಗಳು ಎಂಬಂತಹ ಸ್ಥಿತಿ ಅಲ್ಲಿ ನಿರ್ಮಾಣವಾಗಿತ್ತು. ತಂದೆಗೆ ಸಾವಿನ ಮನೆ ಕಂಡಿತೇನೋ. ‘ಭಾಗ್, ಮಿಲ್ಖಾ ಭಾಗ್’ (ಓಡು, ಮಿಲ್ಖಾ ಓಡು) ಎಂಬುದು ಅವರ ಕೊನೆಯ ಮಾತಾಗಿತ್ತು. ಮರುಕ್ಷಣವೇ ಅವರು ನಿರ್ಜೀವವಾದರು. ಒಂದೆಡೆ ಹೆತ್ತವರು ಮತ್ತು ಒಡಹುಟ್ಟಿದವರ ಕಳೆಬರಹ. ಇನ್ನೊಂದೆಡೆ ಸಾವಿನಂಚಿನಲ್ಲಿರುವವರ ನರಳಾಟ ಮತ್ತು ಆಕ್ರಂದನ. ಮತ್ತೊಂದೆಡೆ ಧರ್ಮಾಂಧರ ಅಟ್ಟಹಾಸ. ಆ ಕ್ಷಣ ಅಲ್ಲಿಂದ ಓಡಿ ಹೋಗಿ ಜೀವ ಉಳಿಸಿಕೊಳ್ಳುವುದೇ ಜೀವನದ ಮಹತ್ಸಾಧನೆಯಾಗಿತ್ತು.’ ಎಂದು ಆ ಕ್ಷಣದ ಘಟನೆಯನ್ನು ಆಗಾಗ್ಗೆ ಆಪ್ತರಲ್ಲಿ ಮಿಲ್ಖಾಸಿಂಗ್ ಹೇಳಿಕೊಳ್ಳುತ್ತಿದ್ದರು. ಅಂದು ಜೀವ ಉಳಿಸಿಕೊಳ್ಳಲು ಪ್ರಾರಂಭವಾದ ಅವರ ಓಟ ಸಾಧನೆಗಳ ಶಿಖರ ತಲುಪುತ್ತದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಸ್ವತಃ ಮಿಲ್ಖಾಸಿಂಗ್ ಕೂಡಾ ತಮ್ಮ ಜೀವನದ ದಿಕ್ಕನ್ನು ಊಹಿಸಿರಲಿಲ್ಲ.

* ಪರಿಚಯ : ಬಳ್ಳಾರಿ ಜಿಲ್ಲೆಯ ಹೊಳಗುಂದಿಯಲ್ಲಿ ವಾಸಿಸುತ್ತಿರುವ ಲೇಖಕ ಆರ್.ಬಿ.ಗುರುಬಸವರಾಜ ಅವರು 22 ವರ್ಷಗಳಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿ ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ, ಪ್ರವಾಸಿ ತಾಣಗಳು ಈ ವಿಷಯದಡಿ ಈತನಕ 500 ಕ್ಕೂ ಹೆಚ್ಚು ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಈಗಾಗಲೇ ಎಂಟು ಪುಸ್ತಕಗಳು ಪ್ರಕಟಗೊಂಡಿದ್ದು, ಎರಡು ಪುಸ್ತಕಗಳು ಮುದ್ರಣ ಹಂತದಲ್ಲಿವೆ. * ಪ್ರತಿಗಳನ್ನು ಕಾಯ್ದಿರಿಸಲು ಸಂಪರ್ಕಿಸಿ : ರಘುವೀರ್, ಸಾಹಿತ್ಯಲೋಕ ಪ್ರಕಾಶನ, ಬೆಂಗಳೂರು – 9945939436

ಇದನ್ನೂ ಓದಿ : New Book ; ಶೆಲ್ಫಿಗೇರುವ ಮುನ್ನ : ‘ಅಮರ ಸುಳ್ಯದ ರೈತ ಹೋರಾಟ’

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ