ಜಿಎಸ್​ಟಿಯನ್ನು ಸರಳೀಕರಿಸಿದರೆ ದೇಶದ ಆರ್ಥಿಕತೆ ಸುಧಾರಣೆಯಾಗದೆ?

|

Updated on: Oct 06, 2020 | 8:53 PM

ಗೂಡ್ಸ್ ಮತ್ತು ಸರ್ವಿಸಸ್ ಟ್ಯಾಕ್ಸ್ (ಜಿಎಸ್​ಟಿ), ಕನ್ನಡದಲ್ಲಿ ಸರಕು ಮತ್ತು ಸೇವಾ ತೆರಿಗೆ ನಮ್ಮ ದೇಶದಲ್ಲಿ ಜಾರಿಗೊಂಡು ಕಳೆದ ಜುಲೈ ತಿಂಗಳಿಗೆ ಮೂರು ವರ್ಷಗಳಾಯಿತು. ಅದನ್ನು ರೂಪಿಸಿ ಮತ್ತು ಜಾರಿಗೊಳಿಸುವ ಹಿಂದೆ ಒಂದು ಮಹದುದ್ದೇಶವಿತ್ತು, ದೇಶದ ಆರ್ಥಿಕತೆಗೆ ಮಾರಕವಾಗುತ್ತಿದ್ದ ತೆರಿಗೆ ವಂಚನೆಯನ್ನು ನಿಲ್ಲಿಸುವುದು. ಅಂದಹಾಗೆ ಆ ಉದ್ದೇಶ ಈಡೇರಿದೆಯೇ? ಖಂಡಿತವಾಗಿಯೂ ಇಲ್ಲ. ವಾಸ್ತವ ಸಂಗತಿಯೇನೆಂದರೆ ಮೂರು ವರ್ಷಗಳಿಂದ ತೆರಿಗೆ ವಂಚನೆ ನಿಂತಿಲ್ಲ, ನಿಲ್ಲುವ ಲಕ್ಷಣಗಳೂ ಇಲ್ಲ. ತಂತ್ರಜ್ಞಾನದ (ತಾಂತ್ರಿಕ ನೆಲೆಗಟ್ಟು) ಆಧಾರದಲ್ಲಿ ಜಿಎಸ್​ಟಿಯನ್ನು ರೂಪಿಸಿರುವುದರಿಂದ ವಂಚಿಸಲು ಸಾಧ್ಯವಾಗದೆಂದು […]

ಜಿಎಸ್​ಟಿಯನ್ನು ಸರಳೀಕರಿಸಿದರೆ ದೇಶದ ಆರ್ಥಿಕತೆ ಸುಧಾರಣೆಯಾಗದೆ?
Follow us on

ಗೂಡ್ಸ್ ಮತ್ತು ಸರ್ವಿಸಸ್ ಟ್ಯಾಕ್ಸ್ (ಜಿಎಸ್​ಟಿ), ಕನ್ನಡದಲ್ಲಿ ಸರಕು ಮತ್ತು ಸೇವಾ ತೆರಿಗೆ ನಮ್ಮ ದೇಶದಲ್ಲಿ ಜಾರಿಗೊಂಡು ಕಳೆದ ಜುಲೈ ತಿಂಗಳಿಗೆ ಮೂರು ವರ್ಷಗಳಾಯಿತು. ಅದನ್ನು ರೂಪಿಸಿ ಮತ್ತು ಜಾರಿಗೊಳಿಸುವ ಹಿಂದೆ ಒಂದು ಮಹದುದ್ದೇಶವಿತ್ತು, ದೇಶದ ಆರ್ಥಿಕತೆಗೆ ಮಾರಕವಾಗುತ್ತಿದ್ದ ತೆರಿಗೆ ವಂಚನೆಯನ್ನು ನಿಲ್ಲಿಸುವುದು. ಅಂದಹಾಗೆ ಆ ಉದ್ದೇಶ ಈಡೇರಿದೆಯೇ? ಖಂಡಿತವಾಗಿಯೂ ಇಲ್ಲ. ವಾಸ್ತವ ಸಂಗತಿಯೇನೆಂದರೆ ಮೂರು ವರ್ಷಗಳಿಂದ ತೆರಿಗೆ ವಂಚನೆ ನಿಂತಿಲ್ಲ, ನಿಲ್ಲುವ ಲಕ್ಷಣಗಳೂ ಇಲ್ಲ.

ತಂತ್ರಜ್ಞಾನದ (ತಾಂತ್ರಿಕ ನೆಲೆಗಟ್ಟು) ಆಧಾರದಲ್ಲಿ ಜಿಎಸ್​ಟಿಯನ್ನು ರೂಪಿಸಿರುವುದರಿಂದ ವಂಚಿಸಲು ಸಾಧ್ಯವಾಗದೆಂದು ಸರ್ಕಾರ ಭಾವಿಸಿತ್ತು. ನಮ್ಮ ಜನರ ಜಾಯಮಾನವನ್ನು ಸರ್ಕಾರ ನಡೆಸುವವರು ಅಂಡರ್​ಎಸ್ಟಿಮೇಟ್ ಮಾಡಿದ್ದು ದುರಂತ. ಸರ್ಕಾರ ಚಾಪೆ ಕೆಳಗೆ ನುಸುಳಿದರೆ, ತೆರಿಗೆ ಕಟ್ಟಬೇಕಾದವರು ರಂಗೋಲಿ ಕೆಳಗೆ ನುಸುಳಿದರು. ಹಾಗಾಗಿ, ಮೂರು ವರ್ಷಗಳ ಹಿಂದಿನ ಸ್ಥಿತಿ ಜಿಎಸ್​ಟಿ ಜಾರಿಗೊಳಿಸಿದ ನಂತರ ಎಳ್ಳಷ್ಟೂ ಬದಲಾಗಿಲ್ಲ.

ಪರಿಣಿತರ ಪ್ರಕಾರ ಜಿಎಸ್​ಟಿ ಎರಡು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಮೊದಲನೆಯದ್ದು ಎಲ್ಲರಿಗೂ ಗೊತ್ತಿರುವಂತೆ ನಿಲ್ಲದ ತೆರಿಗೆ ವಂಚನೆ ಹಾಗೂ ಎರಡನೆಯದ್ದು ಅದಕ್ಕಿರುವ ಆಡಳಿತಾತ್ಮಕ ಅಡೆತಡೆಗಳು. ತೆರಿಗೆ ಸಂಗ್ರಹಿಸುವ ಪ್ರಾಧಿಕಾರ ಅಥವಾ ವ್ಯವಸ್ಥೆ ಕಳಂಕರಹಿತವಾದ ತಾಂತ್ರಿಕತೆಯ ಹೊರತಾಗಿಯೂ ಗುರಿ ತಲುಪಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬ ಯೋಚನೆಯಲ್ಲೇ ಬಸವಳಿದಿದೆ.

ಪ್ರತಿ ವಾರಕಕ್ಕೊಮ್ಮೆ ಬದಲಾಗುತ್ತಿರುವ ಜಿಎಸ್​ಟಿ ನಿಯಮಗಳು ತೆರಿಗೆ ಪಾವತಿದಾರ ಮತ್ತು ತೆರಿಗೆ ಸಂಗ್ರಹಿಸುವ ಸರ್ಕಾರೀ ಅಂಗ ಇಬ್ಬರನ್ನೂ ಗೊದಲಕ್ಕೆ ದೂಡುತ್ತಿವೆ. ಬೇರೆ ಯಾವುದೆ ನಿಯಮ, ಕಾನೂನುಗಳಲ್ಲಿ ಕಾಣದಷ್ಟು ತಿದ್ದುಪಡಿ, ಬದಲಾವಣೆಗಳನ್ನು ಜಿಎಸ್​ಟಿ ನಿಯಮಾವಳಿಗಳಲ್ಲಿ ಮಾಡಲಾಗುತ್ತಿದೆ. ವಾಣಿಜ್ಯ, ವ್ಯಾಪಾರಗಳಿಗೆ ಸಂಬಂಧಿಸಿದ ಹೊಸ ನೀತಿಗಳನ್ನು ರೂಪಿಸಿದಾಗ ಅವು ಜಿಎಸ್​ಟಿ ನಿಯಮಗಳೊಂದಿಗೆ ತಾಳೆ ಹೊಂದದಂಥ ಸ್ಥಿತಿ ನಿರ್ಮಾಣವಾಗುತ್ತಿದೆ.

ದೊಡ್ಡ ಉದ್ಯಮಿಗಳು ತೆರಿಗೆ ವಂಚಿಸುವುದಿಲ್ಲ, ಅದೇನಿದ್ದರೂ ಸಣ್ಣಪುಟ್ಟ ವ್ಯಾಪಾರಸ್ಥರ ಕೆಲಸ ಎಂಬ ಸರ್ಕಾರದ ನಂಬಿಕೆಯಲ್ಲಿ ಎಷ್ಟುಮಾತ್ರವೂ ಹುರುಳಿಲ್ಲ. ಬೃಹತ್ ಪ್ರಮಾಣದ ಕಂಪನಿಗಳು ಯಾವುದೇ ಸಂಕೋಚಭಿಡೆಗಳಿಲ್ಲದೆ ತೆರಿಗೆ ಕಟ್ಟುವ ಪ್ರಮೇಯದಿಂದ ಲೀಲಾಜಾಲವಾಗಿ ತಪ್ಪಿಸಿಕೊಳ್ಳುತ್ತಿವೆ.

ಆದರೆ, ಜಿಎಸ್​ಟಿ ಸಣ್ಣಪುಟ್ಟ ವ್ಯಾಪಾರಿಗಳ ಬದುಕನ್ನು ನರಕ ಮಾಡಿದ್ದು ಸುಳ್ಳಲ್ಲ. ಲಕ್ಷಾಂತರ ವ್ಯಾಪಾರಿಗಳು ಬೀದಿಗೆ ಬಿದ್ದರು, ಕೋಟ್ಯಾಂತರ ಜನ ಉದ್ಯೋಗಗಳನ್ನು ಕಳೆದುಕೊಂಡರು. ರಾಜ್ಯಗಳ ಪಾಲನ್ನು ನೀಡಲು ಕೇಂದ್ರ ನಿರಾಕರಿಸುತ್ತಿರುವುದರಿಂದ ಹಲವಾರು ರಾಜ್ಯಗಳು ಸಹ ದಿವಾಳಿಯ ಅಂಚನ್ನು ತಲುಪಿವೆ.

ಕೊರೊನಾ ವೈರಸ್ ಮಹಾಮಾರಿ ನಮ್ಮ ದೇಶ ಮಾತ್ರವಲ್ಲ, ಇಡೀ ವಿಶ್ವದ ಆರ್ಥಿಕತೆ ಮೇಲೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡಿದೆ. ಮುಂದಿನ ಐದಾರು ವರ್ಷಗಳವರೆಗೆ ಈಗಿನ ಸ್ಥಿತಿ ಮುಂದುವರಯಲಿದೆ ಇಲ್ಲವೇ ಇದಕ್ಕಿಂತ ದುಸ್ತರವಾದ ದಿನಗಳು ಎದುರಾಗಲಿವೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.

ಪರಿಸ್ಥಿತಿ ಹೀಗಿರುವಾಗ ಸರ್ಕಾರದ ಮುಂದೆ ಜಿಎಸ್​ಟಿಯನ್ನು ಸರಳೀಕರಿಸಿ ಸಣ್ಣ ವ್ಯಾಪಾರಿಗಳಲ್ಲಿ ವಿಶ್ವಾಸ ಮೂಡಿಸಿ, ಪಾತಾಳಕ್ಕೆ ಕುಸಿದಿರುವ ಆರ್ಥಿಕ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಸದವಕಾಶವಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಈ ನಿಟ್ಟಿನಲ್ಲಿ ಯೋಚಿಸುತ್ತಾರೆಯೇ ಎನ್ನುವುದನ್ನು ಕಾದು ನೋಡಬೇಕು.