ಹೊಸದಾಗಿ ಕೃಷಿ ಮಾಡಬೇಕು. ಒಂದಿಷ್ಟು ಜಮೀನು ಮಾಡಿಕೊಂಡರೆ ನೆಮ್ಮದಿಯಾಗಿ ಬದುಕಬಹುದು. ಮಣ್ಣು, ಪರಿಸರ, ಪ್ರಕೃತಿಯೊಡನೆ ಒಡನಾಡುತ್ತಾ ಸ್ವಚ್ಛ ಗಾಳಿ ಸೇವಿಸಿದರೆ ಆರೋಗ್ಯವೂ ವೃದ್ಧಿಸುತ್ತದೆ ಎಂದು ಅನೇಕರು ಯೋಚಿಸುತ್ತಲೇ ಇರುತ್ತಾರೆ. ಆದರೆ, ಈ ಯೋಚನೆಯನ್ನು ಕಾರ್ಯಗತಗೊಳಿಸಲು ಹೊರಟರೆ ಮನಸ್ಸಿನಲ್ಲಿರುವ ಅವ್ಯಕ್ತ ಭಯ ಇನ್ನಿಲ್ಲದಂತೆ ಕಾಡಿಬಿಡುತ್ತದೆ.
ಕೃಷಿಯ ಬಗ್ಗೆ ಏನೇನೂ ಗೊತ್ತಿಲ್ಲ. ಹುಮ್ಮಸ್ಸಿನಲ್ಲಿ ಜಮೀನು ಖರೀದಿ ಮಾಡಲು ಹೋಗಿ ಕೈ ಸುಟ್ಟುಕೊಂಡರೆ ಏನು ಮಾಡೋದು? ಮಾಡುವ ಖರ್ಚಿಗೆ ತಕ್ಕ ಆದಾಯ ಸಿಗದಿದ್ದರೆ ಏನು ಗತಿ? ಎಂಬಿತ್ಯಾದಿ ಗೊಂದಲಗಳು ಸಹಜವಾಗಿ ಆವರಿಸಿಕೊಳ್ಳುತ್ತವೆ. ಈ ಕಾರಣಗಳಿಂದಲೇ ಅದೆಷ್ಟೋ ಮಂದಿ ಎದೆಯಾಳದಲ್ಲಿರುವ ಆಸೆಯನ್ನು ಭೂಮಿಯಲ್ಲಿ ಬಿತ್ತುವ ಧೈರ್ಯ ಮಾಡುವುದೇ ಇಲ್ಲ.
ಇದನ್ನೇ ಗಮನದಲ್ಲಿರಿಸಿಕೊಂಡು ರಾಷ್ಟ್ರೀಯ ಕೃಷಿ ದಿವಸದ ಪ್ರಯುಕ್ತ ಟಿವಿ9 ಕನ್ನಡ ಡಿಜಿಟಲ್ ಕೃಷಿಗೆ ಸಂಬಂಧಿಸಿದ ಅನುಮಾನಗಳನ್ನು ಬಗೆಹರಿಸುವ ಪ್ರಯತ್ನಕ್ಕೆ ಕೈ ಹಾಕಿದೆ. ಹೊಸದಾಗಿ ಕೃಷಿ ಮಾಡುವ ಉತ್ಸಾಹವಿರುವವರಿಗೆ ಸ್ವಾವಲಂಬಿ ಕೃಷಿಕರ ಕಿವಿಮಾತು, ಮಾರ್ಗದರ್ಶನ, ಅನುಭವದ ನುಡಿ ಮತ್ತು ಕೃಷಿಯ ಕುರಿತು ಸಾಂಪ್ರದಾಯಿಕ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಯ ಅಭಿಪ್ರಾಯ ಇವೆಲ್ಲವುಗಳ ಸಮ್ಮಿಲನ ಇಲ್ಲಿದೆ.
ಬುದ್ಧಿವಂತಿಕೆಯೇ ಬಂಡವಾಳ ಆಗಬೇಕು
ಹೊಸದಾಗಿ ಬೇಸಾಯ ಮಾಡಬೇಕು ಅಂತಿದ್ದೀವಿ, ನಿಜಕ್ಕೂ ನಾವು ಬದುಕುವಷ್ಟು ಆದಾಯ ಸಿಗುತ್ತಾ? ಒಬ್ಬ ಅನುಭವಿ ಕೃಷಿಕರಾಗಿ ಹೊಸಬರಿಗೆ ನೀವು ಏನು ಕಿವಿಮಾತು ಹೇಳುತ್ತೀರಿ? ಇಲ್ಲಿ ನೆಲೆ ಕಾಣಬಹುದು, ಲಾಭ ಗಳಿಸಬಹುದು ಎಂಬ ಭರವಸೆ ನಿಮಗಿದೆಯಾ? ಎಂಬ ಪ್ರಶ್ನೆಯನ್ನು ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಸಮೀಪದ ಸ್ವಾವಲಂಬಿ ಕೃಷಿಕ ನಾಗಭೂಷಣ್ ಸಾವಿತ್ರಿಮನೆ ಅವರ ಮುಂದಿಟ್ಟೆವು.
ತೋಟದ ಕೆಲಸ, ಅಡಿಕೆ ಕೊಯ್ಲಿನ ಗಡಿಬಿಡಿಯ ನಡುವೆ ಕೃಷಿಕರನ್ನು ಮಾತನಾಡಿಸುವುದು ಹೇಗೆ ಎಂದು ನಮ್ಮಲ್ಲಿದ್ದ ಹಿಂಜರಿಕೆಯನ್ನು ಬದಿಗೆ ಸರಿಸುತ್ತಾ ಆರಾಮಾಗಿ ಮಾತಿಗಿಳಿದರು. ಇಂದು ಬೆಲೆ ಇರುವುದೇ ವ್ಯವಸಾಯಕ್ಕೆ. ಕೃಷಿ ಯಾವತ್ತಿಗೂ ನಂಬಿದವರ ಕೈ ಬಿಡುವುದಿಲ್ಲ ಎಂದು ಅವರು ಹೇಳುವಾಗ ಮಾತಿನಲ್ಲಿ ನಿರುಮ್ಮಳ ಭಾವ ಕಾಣಿಸಿತು. ಮಾತು ಮುಂದುವರಿಸಿದ ಮಿತಭಾಷಿ ನಾಗಭೂಷಣ ಅವರು ಹೊಸದಾಗಿ ಕೃಷಿ ಆರಂಭಿಸಬೇಕು ಎನ್ನುವವರಿಗೆ ತಮ್ಮ ಅನುಭವದ ಆಧಾರದ ಮೇಲೆ ಒಂದಷ್ಟು ಸಲಹೆಗಳನ್ನಿತ್ತರು.
ಹೊಸದಾಗಿ ಕೃಷಿ ಆರಂಭಿಸಬೇಕು ಎಂದರೆ ಸುಖಾಸುಮ್ಮನೆ ಒದ್ದಾಡುವುದಕ್ಕಿಂತ ಒಂದಷ್ಟು ಸುಲಭ ಉಪಾಯಗಳನ್ನು ಕಂಡುಕೊಳ್ಳಬೇಕು. ಇಲ್ಲಿ ಬುದ್ಧಿವಂತಿಕೆಯೇ ಬಂಡವಾಳ ಆಗಬೇಕು. ದೈಹಿಕ ಶ್ರಮ, ಮಾನವ ಸಂಪನ್ಮೂಲವನ್ನು ನೆಚ್ಚಿಕೊಳ್ಳುವುದಕ್ಕಿಂತ ಯಂತ್ರೋಪಕರಣಗಳಿಗೆ ಒತ್ತು ನೀಡಿದಾಗ ಕೃಷಿಯೆಂದರೆ ಕಷ್ಟದ ಬದುಕು ಎನ್ನುವ ಪೊರೆಯಿಂದ ಹೊರಬರಬಹುದು ಎಂಬುದು ಅವರ ಅನುಭವದ ಮಾತು.
ಈಗಂತೂ ಬಹುತೇಕ ಕೃಷಿ ಕೆಲಸಗಳಿಗೆ ಯಂತ್ರೋಪಕರಣ ಲಭ್ಯವಿದೆ. ಅವುಗಳನ್ನು ಉಪಯೋಗಿಸಿಕೊಂಡರೆ ಕಡಿಮೆ ಶ್ರಮ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡುವುದು ಸಾಧ್ಯ. ಉದಾಹರಣೆಗೆ ಒಂದು ಮರಕ್ಕೆ ಗೊಬ್ಬರವನ್ನು ತಲೆಯ ಮೇಲೆ ಹೊತ್ತು ಹೋಗಲು ಶ್ರಮ ಹಾಕುವುದಕ್ಕಿಂತ ನೀರಿನಲ್ಲೇ ಆ ಬೆಳೆಗೆ ಬೇಕಾದ ಪೌಷ್ಠಿಕಾಂಶ ಬೆರೆಸಿ ಸುಲಭವಾಗಿ ಕೆಲಸವನ್ನು ಮುಗಿಸಬೇಕು. ಆಗ ಗೊಬ್ಬರವನ್ನು ಹೊರುವ ಶ್ರಮವೂ ಉಳಿಯುತ್ತದೆ ಮತ್ತು ಆ ಸಮಯದಲ್ಲಿ ಬೇರೆ ಕೆಲಸಗಳತ್ತ ಗಮನ ನೀಡುವುದೂ ಸಾಧ್ಯ. ಹೀಗೆ ಒತ್ತಡವನ್ನು ಕಡಿಮೆ ಮಾಡಿಕೊಂಡಾಗ ತೋಟದತ್ತ ಸಮಚಿತ್ತದಲ್ಲಿ ಗಮನಹರಿಸಬಹುದು ಎನ್ನುವುದು ಅವರೇ ಸ್ವತಃ ಕಂಡುಕೊಂಡ ಮಾರ್ಗ.
ಕೃಷಿಯನ್ನು ನಾವು ಕಡೆಗಣಿಸಿದರೆ ಅದು ನಮ್ಮನ್ನು ಕಡೆಗಣಿಸುತ್ತೆ. ಆದ್ದರಿಂದ ಕೃಷಿಕರಿಗೆ ಶ್ರದ್ಧೆ ಮುಖ್ಯ. ಇದೆಲ್ಲದರೊಂದಿಗೆ ಕೃಷಿಯಲ್ಲಿ ಕೇವಲ ಒಂದೇ ಮೂಲವನ್ನು ನಂಬಿ ಕೂರುವುದು ಒಳ್ಳೆಯದಲ್ಲ. ಏಕಕಾಲಕ್ಕೆ ಬೇರೆ ಬೇರೆ ಮಾರ್ಗಗಳಲ್ಲಿ ಆದಾಯ ಬರುವಂತೆ ಮಾಡಬೇಕು. ಮುಖ್ಯ ಬೆಳೆಯಾಗಿ ಬೆಳೆಯೊಂದಿಗೆ ಬೇರೆ ಬೇರೆ ಬೆಳೆ ಅಥವಾ ಜೇನು, ಆಡು ಸಾಕಾಣಿಕೆ ರೀತಿಯ ಮಾರ್ಗ ಅನುಸರಿಸಬೇಕು. ಕೃಷಿಯನ್ನು ಒಂದು ಉದ್ಯೋಗ ಎಂದೇ ಪರಿಗಣಿಸಿ ಅದರೆಡೆಗೆ ಆಸಕ್ತಿ ತೋರಿದರೆ ಗೆಲುವು ನಿಶ್ಚಿತ ಎಂದು ಹೇಳುವಾಗ ಅವರ ಮಾತಿನಲ್ಲಿ ಕೃಷಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎನ್ನುವ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು.
ಅವಶ್ಯಕತೆ ಇದ್ದವರಿಗೆ ಯೋಜನೆಗಳು ತಲುಪಬೇಕು.. ಆಗ ನಿಜವಾದ ಗೆಲುವು ಸಾಧ್ಯ
ಈ ವಿಷಯಕ್ಕೆ ಯುವಕರು ಹೇಗೆ ಪ್ರತಿಕ್ರಿಯಿಸಬಹುದು ಎಂಬ ಕುತೂಹಲದಿಂದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಂಟೇಶನ್ ಮ್ಯಾನೇಜ್ಮೆಂಟ್ ಸಂಸ್ಥೆಯ ವಿದ್ಯಾರ್ಥಿ ಶ್ರೇಯಸ್ ಕೆ.ಎಸ್. ಅವರನ್ನು ಸಂಪರ್ಕಿಸಿದಾಗ, ಅವರು ಸಹ ಸಕಾರಾತ್ಮಕ ಅಭಿಪ್ರಾಯವನ್ನೇ ವ್ಯಕ್ತಪಡಿಸಿದರು.
ರೈತರಿಗಾಗಿ ಅನೇಕ ಯೋಜನೆಗಳಿವೆ. ಆದರೆ, ಅದು ಅವಶ್ಯಕತೆ ಉಳ್ಳವರಿಗೆ ತಲುಪುತ್ತಿಲ್ಲ. ಗ್ರೀನ್ ಹೌಸ್, ಪಾಲಿಹೌಸ್, ಡ್ರಿಪ್ ನೀರಾವರಿ ಹೀಗೆ ಬಹುತೇಕ ಎಲ್ಲದಕ್ಕೂ ಸಬ್ಸಿಡಿ ಸಿಗುತ್ತದೆ ಎಂಬುದನ್ನು ರೈತರಿಗೆ ತಿಳಿಸುವ ಕೆಲಸ ಮೊದಲು ಆಗಬೇಕು ಎಂಬ ಕಾಳಜಿಯೊಂದಿಗೆ ಮಾತು ಆರಂಭಿಸಿದ ಶ್ರೇಯಸ್, ಹೊಸದಾಗಿ ಕೃಷಿ ಮಾಡುವುದಾದರೆ ಆರಂಭದಿಂದಲೇ ಮಿಶ್ರಬೆಳೆಯತ್ತ ಒಲವು ಮೂಡಿಸಿಕೊಳ್ಳಬೇಕು. ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಕೈ ಹಿಡಿಯುವಂತೆ ನಿಗಾ ವಹಿಸಬೇಕು. ಅದರೊಟ್ಟಿಗೆ ಸುಲಭ ಮತ್ತು ಶೀಘ್ರವಾಗಿ ಬೆಳೆಯುವ ಬೆಳೆಗಳಲ್ಲಿ ಮಾರುಕಟ್ಟೆಯಲ್ಲಿ ಯಾವುದಕ್ಕೆ ಬೇಡಿಕೆ ಇರುತ್ತದೆಯೋ ಅದನ್ನು ಬೆಳೆಸುವತ್ತ ಗಮನ ಹರಿಸಬೇಕು ಎಂದು ತಾವು ತಮ್ಮ ಅಧ್ಯಯನ ಕ್ಷೇತ್ರದಲ್ಲಿ ಕಂಡುಕೊಂಡ ಸಂಗತಿಯನ್ನು ಹಂಚಿಕೊಂಡರು.
ಈಗೀಗ ಮೆಟ್ರೋಪಾಲಿಟನ್ ನಗರಗಳ ಜೀವನದಿಂದ ಬೇಸತ್ತವರು ಕಾಂಟ್ರ್ಯಾಕ್ಟ್ ಫಾರ್ಮಿಂಗ್ ಪರಿಕಲ್ಪನೆಯನ್ನು ಹಳ್ಳಿಗಳಿಗೆ ಪರಿಚಯಿಸುತ್ತಿದ್ದಾರೆ. ರೈತರ ಹೊಲ, ಗದ್ದೆ, ತೋಟಗಳನ್ನು ವಹಿಸಿಕೊಂಡು ಇಂತಿಷ್ಟು ಹಣ ಎಂದು ಆರಂಭದಲ್ಲೇ ನಿಗದಿಪಡಿಸುತ್ತಾರೆ. ನಂತರ ತಮಗೆ ಬೇಕಾದ ಬೆಳೆಯನ್ನು ರೈತರಿಂದಲೇ ಬೆಳೆಸುತ್ತಾರೆ. ಹಲವು ಕಂಪೆನಿಗಳು ಕೂಡ ಕಾಂಟ್ರ್ಯಾಕ್ಟ್ ಫಾರ್ಮಿಂಗ್ ಮಾಡಲು ಒಲವು ತೋರುತ್ತಿವೆ ಇದು ಹೊಸದಾಗಿ ಕೃಷಿ ಮಾಡುವವರಿಗೆ ಪ್ರೋತ್ಸಾಹ ನೀಡಬಲ್ಲದು ಎನ್ನುವುದು ಶ್ರೇಯಸ್ ಅವರ ಅಭಿಪ್ರಾಯ.
ಇವುಗಳೊಟ್ಟಿಗೆ ಅಗ್ರಿ ಕ್ಲಿನಿಕ್, ಅಗ್ರಿ ಬ್ಯುಸಿನೆಸ್ ಸೆಂಟರ್ ಎನ್ನುವ ಹಲವು ಪರಿಕಲ್ಪನೆಗಳಿವೆ. ಕೆಲವು ನಿರ್ದಿಷ್ಟ ಕೃಷಿ ವಿಶ್ವವಿದ್ಯಾನಿಲಯಗಳು ಇದಕ್ಕೆ ಸಂಬಂಧಿಸಿದಂತೆ ಕಡಿಮೆ ಬಡ್ಡಿ ದರದಲ್ಲಿ 25 ಲಕ್ಷ ರೂಪಾಯಿ ತನಕ ಧನಸಹಾಯ ನೀಡುತ್ತವೆ. ಅಷ್ಟೇ ಅಲ್ಲದೇ ಹೇಗೆ ಬೆಳೆ ಬೆಳೆಯಬೇಕು, ಯಾವ ಪದ್ಧತಿ ಅನುಸರಿಸಬೇಕು, ಮಾರುಕಟ್ಟೆಯನ್ನು ಸೃಷ್ಟಿಸುವುದು ಹೇಗೆ ಎಂಬ ಬಗ್ಗೆಯೂ ನಿರಂತರ ಮಾರ್ಗದರ್ಶನ ನೀಡುತ್ತವೆ. ಹೊಸದಾಗಿ ಕೃಷಿ ಮಾಡುವವರು ಈ ಯೋಜನೆಗಳನ್ನು ಬಳಸಿಕೊಂಡರೆ ಬಹಳಷ್ಟು ಸಹಕಾರಿ ಎಂದು ಶ್ರೇಯಸ್ ಹೇಳುತ್ತಾರೆ.
ಸಿಕ್ಕರೆ ಲಾಭ, ಸಿಗದಿದ್ದರೆ ಅನುಭವ
ಕೃಷಿ ಕಾರ್ಯವನ್ನು ತನ್ನ 19ನೇ ವಯಸ್ಸಿನಲ್ಲಿಯೇ ಆರಂಭಿಸಿದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಶ್ರೀ ಹರ್ಷ ಅವರು ಕೃಷಿಯಲ್ಲಿ ತೃಪ್ತಿ ಸಿಕ್ಕಿದೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ. ಆರಂಭದ 6 ವರ್ಷಗಳ ಕಾಲ ಕೃಷಿ ಕಾರ್ಮಿಕನಾಗಿ ದುಡಿದು 25ನೇ ವಯಸ್ಸಿನಲ್ಲಿ 2.5 ಎಕರೆ ಖಾಲಿ ಭೂಮಿಯನ್ನು ಖರೀದಿಸಿದೆ. ಹೊಸ ಹಾಗೂ ಹಳೆಯ ಕೃಷಿ ಪದ್ಧತಿಗಳನ್ನು ಅನುಸರಿಸಿ ಹಲವು ಬೆಳೆಗಳನ್ನು ಬೆಳೆಯುವ ಪ್ರಯೋಗ ಮಾಡಿದೆ. ಕೆಲವು ಲಾಭ ತಂದುಕೊಟ್ಟರೆ, ಮಿಕ್ಕವು ಅನುಭವ ಕೊಟ್ಟವು ಎನ್ನುವುದು ಶ್ರೀ ಹರ್ಷ ಅವರ ಮಾತು.
ಹೊಸದಾಗಿ ಕೃಷಿ ಆರಂಭಿಸುವವರು ಅನುಭವಿ ಕೃಷಿಕರ ತೋಟಕ್ಕೆ ಭೇಟಿ ನೀಡಬೇಕು. ಮಾಹಿತಿ ಪಡೆದು ಅನುಮಾನಗಳನ್ನು ಬಗೆಹರಿಸಿಕೊಳ್ಳಬೇಕು. ನಾನು ಸಹ ಆರಂಭದಲ್ಲಿ ಅನುಭವಸ್ಥ ಕೃಷಿಕರ ತೋಟಗಳನ್ನು ಸುತ್ತಾಡಿದ್ದೆ. ಈಗ ನಮ್ಮ ತೋಟದಲ್ಲಿ ಅಡಿಕೆ, ತೆಂಗು, ಕಾಳುಮೆಣಸು, ಬಾಳೆ ಬೆಳೆಯುತ್ತಿದ್ದೇವೆ. ಮನೆ ಖರ್ಚಿಗೆ ಆಗುವಷ್ಟು ಹಣ್ಣು, ತರಕಾರಿ, ಶುಂಠಿ ಬೆಳೆದುಕೊಳ್ಳುತ್ತಿದ್ದೇವೆ. ಇದರೊಟ್ಟಿಗೆ ಪಶು ಸಂಗೋಪನೆ, ಎರೆಗೊಬ್ಬರ ತಯಾರಿಕೆಯೂ ಇದ್ದು ಮನೆಯವರ ಸಹಕಾರದಿಂದ ನೆಮ್ಮದಿಯ ಬದುಕು ಕಂಟಿಕೊಂಡಿದ್ದೇನೆ ಎಂದು ಶ್ರೀ ಹರ್ಷ ಕೃಷಿಯಲ್ಲಿ ಸಿಕ್ಕ ಸಂತಸವನ್ನು ಹಂಚಿಕೊಂಡರು.
ಮಣ್ಣಿಗಿಳಿಯಲು ಈಗಿನ ಕಾಲ ಹಿಂದೆಂದಿಗಿಂತಲೂ ಸೂಕ್ತ.
ಇದರಲ್ಲಿನ ಬಹುಪಾಲು ಪ್ರಶ್ನೆಗಳಿಗೆ ಉತ್ತರಿಸುವ ಅರ್ಹತೆ ಖಂಡಿತಾ ನನಗೆ ಈಗಿಲ್ಲ ಎಂದೇ ಮಾತು ಆರಂಭಿಸಿದ ಚೈತನ್ಯ ಕುಡಿನಲ್ಲಿ, ಕೃಷಿ ಲಾಭವೋ ನಷ್ಟವೋ ಎಂಬ ಸ್ವ-ಅನುಭವ ನನಗಿನ್ನೂ ದಕ್ಕಿಲ್ಲ. ಅದರ ಅನ್ವೇಷಣೆಯಲ್ಲಿದ್ದೇನೆ. ಹಾಗಾಗಿ ಅದರ ಬಗ್ಗೆ ‘ಇದಮಿತ್ಥಂ’ ಎಂಬಂತೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳುತ್ತಾ ತಮ್ಮ ಅನುಭವವನ್ನು ಹಂಚಿಕೊಂಡರು.
ಸುಮಾರು 4-5 ವರ್ಷಗಳ ಕೃಷಿಕರೊಟ್ಟಿಗಿನ ಒಡನಾಟದಿಂದ ಕಂಡುಕೊಂಡಿರುವುದೇನೆಂದರೆ ಕೃಷಿಯನ್ನು ಆರ್ಥಿಕವಾಗಿ ಬೇರೆ ಉದ್ಯೋಗಗಳಿಗೆ ಹೋಲಿಸಿದರೆ ಮಾತ್ರ ನಿಕೃಷ್ಟ ಎನಿಸಬಹುದು. ಅದರ ಹೊರತಾಗಿ ಖುಷಿ, ನೆಮ್ಮದಿ, ಸಂತೃಪ್ತಿ ಎಂಬ ಪ್ಯಾರಾಮೀಟರ್ ಅನ್ನೂ ದೃಷ್ಟಿಯಲ್ಲಿಟ್ಟುಕೊಂಡು ನೋಡುವುದಾದರೆ ಕೃಷಿ ಶ್ರೇಷ್ಠಮಟ್ಟದಲ್ಲಿ ನಿಲ್ಲುತ್ತದೆ ಎನ್ನುವುದು ಚೈತನ್ಯ ಅವರ ಗಟ್ಟಿನುಡಿ.
ಹೊಸದಾಗಿ ಕೃಷಿಗೆ ಬರುವವರಿಗೆ ಕಿವಿಮಾತು ಹೇಳುವುದಾದರೆ. ನನ್ನ ಪ್ರಕಾರ ಮಣ್ಣಿಗಿಳಿಯಲು ಈಗಿನ ಕಾಲ ಹಿಂದೆಂದಿಗಿಂತಲೂ ಸೂಕ್ತ. ಕಾರಣ ಇಂಟರ್ನೆಟ್ ಯುಗ. ಸೋಶಿಯಲ್ ಮೀಡಿಯಾಗಳಿಂದಾಗಿ ರೈತನಿಗೆ ಮಾಹಿತಿ ಹಾಗೂ ಮಾರುಕಟ್ಟೆ ಅತ್ಯಂತ ಸುಲಭವಾಗಿ ದೊರಕುತ್ತಿದೆ. ಆದರೆ, ಈಗ ಕೃಷಿಗೆ ಕಾರ್ಮಿಕರ ಸಮಸ್ಯೆಯೇ ದೊಡ್ಡ ತಲೆಬೇನೆಯಾಗಿದ್ದು ಆದಷ್ಟು ಸ್ವಂತವಾಗಿಯೇ ಶ್ರಮಪಟ್ಟು, ಮೈ ಬಗ್ಗಿಸಿ ಕೆಲಸ ಮಾಡುವ ಮನಸ್ಸು, ಅದಕ್ಕೆ ತಕ್ಕಂತೆ ದೇಹ ಬೆಳೆಸಿಕೊಳ್ಳಬೇಕಾದ್ದು ಅಗತ್ಯ ಇದೆ. ಹೊಸದಾಗಿ ಕೃಷಿಯತ್ತ ಮುಖಮಾಡುವವರು ನಾನೇಕೆ ಕೃಷಿಗೆ ಹೋಗಬೇಕು ಎಂದು ಪ್ರಶ್ನಿಸಿಕೊಳ್ಳಬೇಕು.
ಈಗಿನ ಕೆಲಸಕ್ಕಿಂತ ಅದು ಲಾಭದಾಯಕ ಎಂಬ ಲೌಕಿಕ ವಿಚಾರವನ್ನು ಮಾತ್ರ ಇಟ್ಟುಕೊಂಡು ಕೃಷಿಗೆ ಬಂದರೆ ಕೃಷಿಕನಿಗೂ ಇತರೆ ಉದ್ಯೋಗಿಗೂ ವ್ಯತ್ಯಾಸವೇನಿಲ್ಲ. ಆದರೆ, ನೆಲ, ಜಲ, ಸಂಸ್ಕೃತಿ ಸಂರಕ್ಷಿಸಬೇಕೆಂಬ ಕಳಕಳಿ ಹಾಗೂ ನೆಲದ ಒಡನಾಟ ಬಯಸಿ, ತಾನು ತನ್ನವರಿಗಷ್ಟೇ ಅಲ್ಲದೇ ಇಡೀ ಸಮಾಜಕ್ಕೆ ಶುದ್ಧವಾದ ಆಹಾರ ಬೆಳೆದು ನೀಡುವೆ ಮತ್ತು ಅದರಲ್ಲೇ ಸಂತೋಷ, ನೆಮ್ಮದಿ, ಸಂತೃಪ್ತಿ ಕಾಣುವೆ ಎಂಬ ಅಧ್ಯಾತ್ಮ ದೃಷ್ಟಿಯೊಟ್ಟಿಗೆ ಕೃಷಿಗೆ ಬರುವುದು ಒಳಿತು. ಉಳಿದದ್ದು ‘ಲಾಭ’ ಎಂಬ ಲೌಕಿಕ ತತ್ತ್ವವನ್ನು ಸೂಕ್ತ ಪ್ರಜ್ಞೆಯೊಟ್ಟಿಗೆ ಅಳವಡಿಸಿಕೊಂಡಾಗ ಮಾತ್ರ ಆತ ಒಬ್ಬ ನಿಜವಾದ ರೈತ ಆಗಬಹುದು ಎಂದು ತಮ್ಮ ದೃಷ್ಟಿಕೋನವನ್ನು ತೆರೆದಿಟ್ಟರು.
ಹೀಗೆ ವಿಶಾಲ ದೃಷ್ಟಿಕೋನದಿಂದ ಕೃಷಿಯತ್ತ ಹೆಜ್ಜೆ ಇಟ್ಟರೆ ಕೃಷಿಯ ಉಳಿವು, ಬೆಳವಣಿಗೆಯ ಜೊತೆ ಬದುಕನ್ನೂ ಸಾರ್ಥಕಗೊಳಿಸಕೊಳ್ಳಬಹುದು. ಮತ್ತೊಮ್ಮೆ ಜ್ಞಾಪಿಸುತ್ತೇನೆ, ನೀವು ರಾಂಗ್ ನಂಬಲ್ ಡಯಲ್ ಮಾಡಿದ್ದೀರಿ, ಆದರೂ ಟಿಪಿಕಲ್ ಭಾರತೀಯನಂತೆ ಕರೆ ಸ್ವೀಕರಿಸಿ ಉತ್ತರಿಸಿದ್ದೀನಿ ಎಂದು ಮುಗುಳ್ನಗು ಮೂಡಿಸಿದ್ದು ಅವರ ಮಾತಿನ ಮೊದಲ ಸಾಲನ್ನು ಉದ್ದೇಶಪೂರ್ವಕವಾಗಿ ನೆನಪಿಸುವ ತುಂಟ ಪ್ರಯತ್ನ ಎನ್ನಿಸಿತು.
ಬಂಡವಾಳ ಇಟ್ಟುಕೊಂಡು ಕೃಷಿಗೆ ಬರಬೇಕು
ಕೃಷಿಯಲ್ಲಿ ಒಂದೇ ಸಲಕ್ಕೆ ಕೋಟ್ಯಾಧಿಪತಿ ಆಗಲು ಸಾಧ್ಯವಿಲ್ಲ. ಕೃಷಿ ಎನ್ನುವುದು ಎಂದೂ ನಿಲ್ಲದ ನಿರಂತರ ಪ್ರಕ್ರಿಯೆ. ಇದರಲ್ಲಿ ಒಮ್ಮೊಮ್ಮೆ ಕಡಿಮೆ ಲಾಭ ಬರಬಹುದು. ಇನ್ನು ಕೆಲವೊಮ್ಮೆ ಭರಪೂರ ಲಾಭ ಸಿಗಬಹುದು. ಆದ್ದರಿಂದ ವ್ಯವಸಾಯದಲ್ಲಿ ತೊಡಗಿಕೊಳ್ಳಲು ಸಾವಧಾನವೇ ಪ್ರಧಾನ. ಹಳೆಯದಷ್ಟನ್ನೇ ನಂಬಿಕೊಳ್ಳದೇ ಹೊಸ ಹೊಸ ಆವಿಷ್ಕಾರಗಳನ್ನು ಅಳವಡಿಕೆ ಮಾಡಿಕೊಂಡಾಗ ಗೆಲುವು ಸಾಧ್ಯ. ಬಹುಮುಖ್ಯವಾಗಿ ಹೊಸದಾಗಿ ಕೃಷಿಗೆ ಕೈ ಹಾಕುವುದಾದರೆ ಬಂಡವಾಳ ಇರವಂತವರು ಬರಬೇಕು ಎನ್ನುವುದು ಯಲ್ಲಾಪುರದ ಯುವ ಕೃಷಿಕ ರಾಘು ಕುಂದರ್ಗಿ ಅವರ ಅಭಿಪ್ರಾಯ.
ಎದೆಯೊಳಗಿನ ಆಸೆ ಮೊಳಕೆಯೊಡೆದು ಭೂಮಿಗೆ ಬೀಳಲಿ
ಈ ಅಭಿಪ್ರಾಯಗಳನ್ನು ಗಮನಿಸಿದರೆ ಹೊಸದಾಗಿ ಕೃಷಿಯತ್ತ ಮುಖಮಾಡಲು ಬಯಸುವವರಿಗೆ ಧೈರ್ಯ ಮೂಡಬಹುದು. ಕೃಷಿಯನ್ನೇ ಮುಖ್ಯ ಉದ್ಯೋಗ ಎಂದು ನಂಬಿ ಹೆಜ್ಜೆ ಹಾಕಲು ಭರವಸೆ ಹುಟ್ಟಬಹುದು. ಇದನ್ನು ಓದಿ ಮುಗಿಸುವ ವೇಳೆಗೆ ನಿಮ್ಮ ಎದೆಯೊಳಗಿರುವ ಕೃಷಿ ಮಾಡುವ ಆಸೆ ಮೊಳಕೆ ಒಡೆದು ಭೂಮಿಯಲ್ಲಿ ಚಿಗುರು ಮೂಡುವಂತಾದರೆ ನಮ್ಮ ಉದ್ದೇಶ ಸಾರ್ಥಕ.
National Farmers Day 2020 | ಐಟಿಯಿಂದ ಮೇಟಿಗೆ ಬಂದ ವಸಂತ ಕಜೆ ಕಂಡುಕೊಂಡ ಕೃಷಿ ಫಿಲಾಸಫಿ
Published On - 5:17 pm, Wed, 23 December 20