ಹದಿಹರೆಯದ – ಹರೆಯದ, ಎಂದರೆ 16 ರಿಂದ 24 ರ ವಯಸ್ಸಿನ ಯುವಕ – ಯುವತಿಯರಿಗೆ ಅಂಕಣವೊಂದನ್ನು ಬರೆಯಬೇಕು ಎಂದರೆ, ಮೊದಲು ನೆನಪಾಗುವುದೇನು? ಪ್ರೀತಿ-ಪ್ರೇಮ-ಪ್ರಣಯ! ಅದಕ್ಕೆ ಸರಿಯಾಗಿ ‘ಪ್ರೇಮಿಗಳ ದಿನ’ವೂ ಪೂರಕವಾಗಿದೆ. ವಿವಿಧ ರೀತಿಯ `ಪ್ರೇಮಗಳು…’ ಒನ್‍ಸೈಡ್- ಟೂವೇ ಲವ್ವುಗಳು, ತ್ರಿಕೋನ ಪ್ರೇಮಗಳು ಇವೆಲ್ಲ ನಮ್ಮ ಸಿನಿಮಾಗಳಲ್ಲಿರುವಂತೆ ನಿಜ ಜೀವನದಲ್ಲೂ ನಡೆಯುತ್ತವೆಯಷ್ಟೆ. ಕಾಲೇಜು-ಹೈಸ್ಕೂಲು ಓದುವ ಮಕ್ಕಳಲ್ಲಿ ಕೆಲಸಕ್ಕೆ ಸೇರಿ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕೈತುಂಬ ಸಂಪಾದಿಸುತ್ತಿರುವವರಲ್ಲಿ, ಕಾಲೇಜು ಮೆಟ್ಟಿಲು ಹತ್ತದೆ, ತಮ್ಮ ಇಷ್ಟದಂತೆ ಅಥವಾ ಇಷ್ಟಕ್ಕೆ ವಿರುದ್ಧವಾಗಿ ಕೆಲಸ ಮಾಡಬೇಕಾದವರಲ್ಲಿ ಹೀಗೆ ಯಾವುದೇ ವರ್ಗಕ್ಕೆ ಸೇರಿದರೂ, ‘ಪ್ರೇಮ-ಪ್ರೀತಿ-ಪ್ರಣಯ’ ಕಾಡದೆ ಬಿಡುವುದಿಲ್ಲ. ಅಪ್ಪ-ಅಮ್ಮ -ಹಿರಿಯರೊಡನೆ ಹೇಳಲಾಗದ, ಮನದೊಳಗೇ ಮುಚ್ಚಿಟ್ಟು, ಸ್ನೇಹಿತರೊಡನೆ ಅಲ್ಪ-ಸ್ವಲ್ಪ ಬಿಚ್ಚಿಟ್ಟು ಒಂಥರಾ ಸುಖ ಮಿಶ್ರಿತ ಭಯ-ಆತಂಕ ಚಡಪಡಿಕೆಗಳನ್ನು ಅನುಭವಿಸುವ ಸ್ಥಿತಿ ಈ ಹದಿ ಹೃದಯದ್ದು! ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದರೆ ಪ್ರಣಯದ ಹಾದಿ ಸುಗಮ ಎನಿಸುವ ಸಾಧ್ಯತೆ ಹೆಚ್ಚು.
ಇಂಗ್ಲಿಷ್ ಕವಿ -ನಾಟಕಕಾರ ಶೇಕ್ಸ್ಪಿಯರ್ ಗೊತ್ತಲ್ಲ? ಆತ ಕೇಳಿದ “What’tis to love ?” ಎಂಬ ಪ್ರಶ್ನೆಯನ್ನು ತಮ್ಮೊಳಗೇ ಕೇಳಿಕೊಳ್ಳುತ್ತ ನಮ್ಮ ಪೂರ್ವಜರ ಕಾಲದಿಂದಲೂ ಜನ ಅಚ್ಚರಿ ಪಡುತ್ತಲೇ ಇದ್ದಾರೆ. ನಮಗೆ ನಿರ್ದಿಷ್ಟ ವ್ಯಕ್ತಿಯೊಂದಿಗೇ ಏಕೆ ಪ್ರೇಮ ಉಂಟಾಗುತ್ತದೆ? `ಪ್ರೇಮ’ ಎಂಬ ಭಾವನೆಯಡಿ ಮನಸ್ಸು ಪ್ರೇಮಿಸುವ ವ್ಯಕ್ತಿಯ ಬಗ್ಗೆ ಕೆಟ್ಟ ಗುಣಗಳನ್ನೆಲ್ಲಾ ಹೇಗೆ ನಿರ್ಲಕ್ಷಿಸುತ್ತದೆ? “Love is blind” ಎನ್ನುವುದು ನಿಜವೆನ್ನುವ ಹಾಗೆ ಬೇರೆಯವರಿಗೆ ನಿಚ್ಚಳವಾಗಿ ಕಾಣುವ ಅಂಶಗಳು ಪ್ರೀತಿಯಲ್ಲಿರುವವರಿಗೆ ಕಾಣದಿರುವುದು ಏತಕ್ಕೆ? ಇವಕ್ಕೆಲ್ಲಾ ಮನೋವಿಜ್ಞಾನ ಏನೆನ್ನುತ್ತದೆ?
`ರೊಮ್ಯಾಂಟಿಕ್ ಪ್ರೀತಿ’ಯ ಬಗ್ಗೆ ನೋಡಿದಾಗ ಪ್ರೀತಿಯಲ್ಲಿ `ಬಿದ್ದಾಗ’ ಒಂದಿಷ್ಟು ನಿರ್ದಿಷ್ಟ ಸಂಗತಿಗಳ ಅನುಭವ ಆ ಪ್ರೇಮಿಗಳಿಗಾಗುತ್ತದೆ. ಅದರಲ್ಲಿ ಮೊದಲನೆಯದು `ಒಂದು ವಿಶೇಷ ಅರ್ಥ’ವನ್ನು ಜೀವನದಲ್ಲಿ ಪ್ರೇಮಿಗಳು ಕಾಣಲಾರಂಭಿಸುತ್ತಾರೆ. ಒಬ್ಬ ಯುವ ಆಟೋ ಡ್ರೈವರ್ ನನಗೆ ಒಮ್ಮೆ ಹೇಳಿದ ಮಾತು “ನಾನು ಒಂದು ಹುಡುಗೀನ `ಲವ್’ ಮಾಡ್ತಿದೀನಿ ಮೇಡಂ. ಕಳೆದ ಒಂದು ತಿಂಗಳಿನಿಂದ ನನ್ನ ಪ್ರಕಾರ ಜಗತ್ತಿಗೊಂದು ಹೊಸ ಕೇಂದ್ರ. ಆ ಕೇಂದ್ರ ನನ್ನ ಹುಡುಗಿ!”. ಹೀಗೆ ಒಮ್ಮೆ ವ್ಯಕ್ತಿಯ ಕೇಂದ್ರ ತನ್ನ ಪ್ರೇಮಿ ಎಂಬ ಕ್ಷಣದಲ್ಲಿ ಆಕೆ / ಆತನ ಬಗ್ಗೆ ಯಾವುದು ಇಷ್ಟವಾಗದು ಅವೆಲ್ಲ ಅಂಶಗಳೂ ಪಕ್ಕಕ್ಕೆ ಸರಿಸಲ್ಪಡುತ್ತವೆ. ಆಗಲೇ “ಪ್ರೇಮ ಕುರುಡು” ಎಂದು ನಾವೆನ್ನುವುದು. ಒಬ್ಬ ಕಾಲೇಜು ಹುಡುಗ ಹೇಳಿದ್ದು “ಮೇಡಂ, ಪ್ರೀತಿ ಅಂದ್ರೆ ಹೇಗೆ ಗೊತ್ತಾ? ಅವಳಿಗೇನಿಷ್ಟ ಅಂದ್ರೂ ಅದು ನನಗೂ ಇಷ್ಟ ! ಅಷ್ಟೊಂದೇ ತರಹ”. ಪ್ರೀತಿ ಸುಗಮವಾಗಿ ಸಾಗುವಾಗ “ಆಕಾಶಕ್ಕೆ ಹಾರುವಷ್ಟು ಉತ್ಸಾಹ”. ರಾತ್ರಿಯಿಡೀ ಎಚ್ಚರವಿದ್ದರೂ ಆಯಾಸವಿಲ್ಲ. ಪ್ರೇಮಿ ಕೋಪಗೊಂಡರೆ – ಮಾತನಾಡಲಾಗದಿದ್ದರೆ ನಿರಾಶೆಯ ಪಾತಾಳಕ್ಕೆ ಮನಸ್ಸು ಇಳಿಯುತ್ತದೆ.
ಪ್ರೇಮ ಒಂದು ಗೀಳು
ದೇಹ ಸಂಬಂಧ-ಲೈಂಗಿಕತೆ ಇಂಥ ಸಂಬಂಧಗಳು ಇಲ್ಲಿ ಇರುವುದಿಲ್ಲವೆಂದಲ್ಲ. ಆದರೆ ಭಾವನೆಗಳ ಮಹಾಪೂರವೇ ಹೆಚ್ಚು. ರೊಮ್ಯಾಂಟಿಕ್ ಪ್ರೀತಿಯ ಮುಖ್ಯ ಗುಣ ‘craving’ – `ತುಡಿತ’. ದೈಹಿಕವಾಗಿ ಅವರೊಂದಿಗೆ `ಒಂದಾಗಬೇಕು ಎನ್ನುವುದಕ್ಕಿಂತ, ಸಾಮೀಪ್ಯ, ಮಾತು ಇಲ್ಲಿ ಮುಖ್ಯವಾಗುತ್ತವೆ. ಅವರು ಫೋನ್ ಮಾಡಬೇಕು, ಹೊರಗೆ ತಿರುಗಾಡಲು ಕರೆಯಬೇಕು, ಒಟ್ಟಿಗೇ ಕುಳಿತು ಜ್ಯೂಸ್ ಕುಡಿಯಬೇಕು (ಜ್ಯೂಸ್ ಹೇಗಿದ್ದರೂ ಪರವಾಗಿಲ್ಲ, ಒಟ್ಟಿಗೆ ಕುಡಿಯುವುದೇ ಮುಖ್ಯ !) ಇತ್ಯಾದಿ ಇತ್ಯಾದಿ. ಈ ಸಾಮೀಪ್ಯದ ಸುಖಕ್ಕೆ ಪರಿಸರ ಹೇಗಿದೆ ಎನ್ನುವುದು ಲೆಕ್ಕಕ್ಕೇ ಬರುವುದಿಲ್ಲ ಎಂಬುದು ಅಚ್ಚರಿ ಮೂಡಿಸುತ್ತದೆ.
ಇದನ್ನೂ ಓದಿ: Valentine’s Day: ರಾಧಂಗೆ ಕೃಷ್ಣ, ಲೈಲಾಗೆ ಮಜನು, ರೋಮಿಯೋಗೆ ಜೂಲಿಯೆಟ್.. ಇವು ಜಗತ್ತಿನ ಬೆಸ್ಟ್ ಪ್ರೇಮಕಥೆಗಳು
ಕುತೂಹಲಕಾರಿಯಾದ ಅಧ್ಯಯನವೊಂದರಲ್ಲಿ ಸಂಶೋಧಕರು `ಪ್ರೇಮ’ ವನ್ನು ಒಂದು `ಗೀಳು – Obsession ಎಂದು ಗುರುತಿಸಿದ್ದಾರೆ ! `ಪ್ರೇಮಿ’ ಗಳನ್ನುಒಂದು ಥರಹದ ಮಿದುಳು ಪರೀಕ್ಷೆಗೆ ಒಳಪಡಿಸಿದಾಗ ಕೇಳಿದ ಎರಡು ಪ್ರಶ್ನೆಗಳು – ಮೊದಲನೆಯದು – `ದಿನ -ರಾತ್ರಿಗಳಲ್ಲಿ ಶೇಕಡಾವಾರು ಎಷ್ಟು ಸಮಯ ನಿಮ್ಮ `ಪ್ರೇಮಿ’ಯನ್ನು ನೆನೆಸಿಕೊಳ್ಳುತ್ತೀರಿ?’ ಅದಕ್ಕೆ ಪ್ರೇಮಿಗಳ ಉತ್ತರ ಸಾರ್ವತ್ರಿಕವಾಗಿ `ದಿನಪೂರ್ತಿ-ರಾತ್ರಿಪೂರ್ತಿ. ಅವಳ /ಅವನ ಬಗ್ಗೆ ಯೋಚಿಸುವುದನ್ನು ನಿಲ್ಲಿಸಲೇ ಸಾಧ್ಯವಿಲ್ಲ !’. ಸಂಶೋಧಕರು ಅನುಮಾನ ಮಾಡಿ ಕೇಳಿದ ಎರಡನೇ ಪ್ರಶ್ನೆ “ನೀವು ಅವನು /ಅವಳಿಗಾಗಿ ಸಾಯಲು ಸಿದ್ಧವೇ?”, `ಉಪ್ಪು ಈ ಕಡೆ ಪಾಸ್ ಮಾಡಿ’ ಎಂದಾಗ ಅದನ್ನು ತೆಗೆದುಕೊಡುವಷ್ಟೆ ಸಹಜವಾಗಿ ಪ್ರೇಮಿಗಳು ಹೇಳಿದ್ದು “ಹೌದು, ಖಂಡಿತವಾಗಿ ! ”
ಅತಿ ಸಂತೋಷ, ತೀವ್ರ ದುಃಖ ಎರಡಕ್ಕೂ ಪ್ರೀತಿ ಕಾರಣ
ಮಿದುಳಿನಲ್ಲಿ ಹಲವು ಭಿನ್ನ ಭಾಗಗಳಿವೆಯಷ್ಟೆ. ಪ್ರೇಮ’ವನ್ನು ನಾವು ಯಾವಾಗಲೂ ಭಾವನೆಗಳಿಗೆ ಸಂಬಂಧಿಸಿದ ಭಾಗದಲ್ಲಿರುತ್ತದೆ ಎಂದು ಊಹಿಸುವುದು ಸುಲಭ. ಅಥವಾ ಬಹುಜನ ಪ್ರೇಮ `ಮನಸ್ಸಿಗೆ’ ಸಂಬಂಧಿಸಿದ್ದು, ಬುದ್ಧಿಯಿರುವ ಮಿದುಳಿಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಪ್ರೀತಿಗಿರುವ ಸಂಕೇತ ಹೃದಯವಾದರೂ, ಪ್ರೀತಿಯ ನಿಜವಾದ ಮೂಲ ಇರುವುದು ನಮ್ಮ ಮಿದುಳಿನಲ್ಲಿಯೇ. ಮನಸ್ಸಿರುವುದೂ ಮಿದುಳಿನಲ್ಲಿಯೇ ! `ಪ್ರೀತಿ’ ಒಂದು ಬಲವಾದ ಡ್ರೈವ್ ಅಥವಾ ತುಡಿತ. ನಮಗೆ ಯಾವುದಾದರೊಂದು ವಸ್ತು ಬೇಕೇ ಬೇಕು ಎನ್ನುವಾಗ ಪ್ರಚೋದನೆಗೊಳ್ಳುವ ಮಿದುಳಿನ ಭಾಗಗಳೇ `ಪ್ರೀತಿ’ಯ ಅನುಭವವಾಗುವಾಗಲೂ ಪ್ರಚೋದನೆಗೊಳ್ಳುತ್ತವೆ. ಲೈಂಗಿಕ ಕಾಮನೆಗಳಿಗಿಂತ `ಪ್ರೀತಿ’ ಎಂಬ ತುಡಿತವೇ ಹೆಚ್ಚು ಶಕ್ತಿಶಾಲಿ. ಆತ್ಮಹತ್ಯೆ ಮಾಡಿಕೊಳ್ಳುವುದು, ಖಿನ್ನತೆಗಿಳಿಯುವುದು, ಬೇರೆಯವರನ್ನು ಕೊಲ್ಲುವುದು, ಕವನ -ಕಥೆ-ಚಿತ್ರ ಬರೆಯುವುದು ಇವೆಲ್ಲಕ್ಕೂ `ಪ್ರೀತಿ’ ಕಾರಣವಾಗಬಹುದು. ಅತಿ ಸಂತೋಷ, ತೀವ್ರ ದುಃಖ ಎರಡಕ್ಕೂ ಪ್ರೀತಿ ಮೂಲವಾಗಿರಲು ಸಾಧ್ಯವಿದೆ.
ಪ್ರೀತಿಯ ಅನುಭವಕ್ಕೆ ಮಿದುಳಿನ ಮೂರು ಮುಖ್ಯ ವ್ಯೂಹಗಳು ಕೆಲಸ ಮಾಡುತ್ತವೆ. ಪ್ರಾಣಿಗಳಿಗೂ, ಮನುಷ್ಯರಿಗೂ ವ್ಯತ್ಯಾಸವಿರುವುದೇ ಈ ವ್ಯೂಹಗಳ ಬೆಳವಣಿಗೆಯಿಂದ. ಮೊದಲನೆಯದು, ಮೂಲಭೂತವಾದ ಪ್ರಾಣಿಗಳಿಗೂ -ಮನುಷ್ಯನಿಗೂ ಸಮಾನವಾದದ್ದು. “ಲೈಂಗಿಕ ತುಡಿತ” – Sex Drive. ಇದು ವ್ಯಕ್ತಿಯನ್ನು ಹಸಿವಿನ ರೀತಿಯಲ್ಲಿ ಕಾಡುತ್ತದೆ. ಎರಡನೆಯದು ಮೊದ ಮೊದಲಲ್ಲಿ ಹದಿಹರೆಯದಲ್ಲಿ `ಸ್ವೀಟ್ ಸಿಕ್ಸ್ಟೀನ್’ ನಲ್ಲಿ ಅನುಭವಕ್ಕೆ ಬರುವ ರೊಮ್ಯಾಂಟಿಕ್ ಪ್ರೀತಿ. ಒಂಥರಾ ನೆಲದ ಮೇಲೆ ತೇಲುತ್ತಿರುವಂತಹ ಅನುಭವ, heady love. ಪ್ರಾಣಕ್ಕೆ ಪ್ರಾಣ ಕೊಡುವಂತಹ ಪ್ರಣಯ. ಮೂರನೆಯದು ಪ್ರೇಮದ ಬಾಂಧವ್ಯ – attachment. ಇದು ಬೆಳೆಯುವುದು ಮಾತ್ರ ದೀರ್ಘಕಾಲಿಕ ಸಂಬಂಧಗಳಲ್ಲಿ. ನೆಮ್ಮದಿ-ಸುರಕ್ಷತೆಗಳು ಇಲ್ಲಿಯ ಮುಖ್ಯ ಭಾವಗಳು.
ವೈಜ್ಞಾನಿಕವಾಗಿ ಪ್ರಾಣಿಗಳಿಂದ ಮನುಷ್ಯರಿಗೆ ಈ ವ್ಯೂಹಗಳು ನಿಧಾನವಾಗಿ ಆವಿಷ್ಕಾರಗೊಂಡಿವೆ. ಹೇಗೆ? ! ಹಲವು ಸಂಗಾತಿಗಳನ್ನು ಹುಡುಕುವಂತೆ ಪ್ರೇರೇಪಿಸುವುದು ಲೈಂಗಿಕ ತುಡಿತ, ಹದಿಹರೆಯದ ಹುಡುಗ-ಹುಡುಗಿಯರು ಆಕರ್ಷಕವಾಗಿ ಕಾಣುವಂತೆ ಸಿಂಗರಿಸಿಕೊಳ್ಳುವುದು, ಇತರರೊಡನೆ ಬೆರೆಯುವುದು, ಕನಸು ಕಾಣುವುದು ಇವೆಲ್ಲ ಈ ಸಹಜ ಲೈಂಗಿಕ ತುಡಿತದ ಅಭಿವ್ಯಕ್ತಿಗಳೇ. ಇವು ಪ್ರಾಣಿಗಳಿಗಿಂತ ಬಹು ಭಿನ್ನವೇನೂ ಅಲ್ಲ. ಈ ನಡವಳಿಕೆಗಳು ಒಂದು ನಿರ್ದಿಷ್ಟ ವ್ಯಕ್ತಿಯ ಮೇಲೆ ಕೇಂದ್ರಿತವಲ್ಲ. ರೊಮ್ಯಾಂಟಿಕ್ ಭಾವ ಎಂದರೆ `ಪ್ರೀತಿ’ ಎಂಬುದು ಈ ಸಾಮಥ್ರ್ಯ ಒಂದು ವ್ಯಕ್ತಿಯ ಮೇಲೆ ಕೇಂದ್ರಿತಗೊಳ್ಳುವ ಹಂತ. ಮೂರನೆಯ ಬಾಂಧವ್ಯದ ಹಂತ, ಇನ್ನೊಬ್ಬ ವ್ಯಕ್ತಿಯನ್ನು ವಂಶಾಭಿವೃದ್ಧಿಗೆ ಬೇಕಾದಷ್ಟು ಕಾಲವಾದರೂ ಸಹಿಸಿಕೊಳ್ಳುವಂತೆ ಮಾಡುವ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು.
ಈ ಮೂರೂ ಹಂತಗಳಲ್ಲಿ ವಿವಿಧ ವ್ಯತ್ಯಾಸಗಳು ಕಾಣಬಹುದು. ಆದರೆ ಇವುಗಳನ್ನು ಅರ್ಥ ಮಾಡಿಕೊಳ್ಳುವುದು ನಾವು ಸಾಮಾನ್ಯವಾಗಿ `ತಲೆನೋವು’ ಎಂದುಕೊಳ್ಳುವ ಯುವಕ -ಯುವತಿಯರ `ಪ್ರೀತಿ’ಯನ್ನು ಸಹಜವಾಗಿ ನೋಡುವುದು ಸುಲಭವಾಗಿಸುತ್ತದೆ.
ಪ್ರೀತಿಯ ಉದ್ವೇಗ ಮಾತ್ರ ರೋಮಿಯೋ -ಜ್ಯೂಲಿಯಟ್‍ರಿಗಿದ್ದ ಅನುಭವವೇ!
ಪ್ರೀತಿಯಿಲ್ಲದ ನಾಗರೀಕತೆಯಿಲ್ಲ, ಸಮಾಜವಿಲ್ಲ. ಪ್ರೀತಿಯ ನಡವಳಿಕೆಗಳೂ ಅಷ್ಟೆ. ಅದರ ರೀತಿಗಳು ಬದಲಾಗಬಹುದಷ್ಟೆ. ಆದರೆ ಮೂಲಭೂತ ಭಾವ ಒಂದೇ. ಅಂದರೆ ಪ್ರೇಮಪತ್ರ -ಲವ್ ಲೆಟರ್ ಬರೆಯುವ ಬದಲು ಈಗ `ಟೆಕ್ಸ್ಟ್’ ಮಾಡಬಹುದು, ವಾಟ್ಸ್ ಆ್ಯಪ್/ಫೇಸ್‍ಬುಕ್ ಮೆಸೇಜ್ ಕಳಿಸಬಹುದು. ಆದರೆ ಪ್ರೀತಿಯ ಉದ್ವೇಗ ಮಾತ್ರ ರೋಮಿಯೋ -ಜ್ಯೂಲಿಯಟ್‍ರಿಗಿದ್ದ ಅನುಭವವೇ!
ಬಹಳಷ್ಟು ಯುವಜರು ಈ ಉದ್ವೇಗವನ್ನು ಅನುಭವಿಸಿ, ವಿಧವಿಧವಾದ ಸಮಸ್ಯೆಗಳಿಂದ ನನ್ನ ಬಳಿ ಆಪ್ತ ಸಲಹೆಗೆ, ಖಿನ್ನತೆಯ ಚಿಕಿತ್ಸೆಗೆ, ಆತ್ಮಹತ್ಯೆಯ ಪ್ರಯತ್ನಗಳೊಂದಿಗೆ ಬರುತ್ತಾರೆ. ಅಪ್ಪ-ಅಮ್ಮಂದಿರಿಗೆ ತಮ್ಮ ಹದಿಹರೆಯ -ಹರೆಯವನ್ನು ನೆನಪಿಸಿಕೊಂಡು ಅವರನ್ನು ಅರ್ಥ ಮಾಡಿಕೊಳ್ಳುವುದು ಈ ಸಂದರ್ಭದಲ್ಲಿ ಕಷ್ಟಸಾಧ್ಯ. `ಪ್ರೀತಿ’ ಎಂಬ ಗೀಳು ಹೇಗೆಂದರೆ ಪ್ರೀತಿಸಿದವರು ತಿರಸ್ಕರಿಸಿದರೆ ಆಗೀಳು ಮತ್ತಷ್ಟು ಹೆಚ್ಚುತ್ತದೆ !! ಒಬ್ಬ ಯುವತಿ ಕೇಳಿದ ಪ್ರಶ್ನೆ “ಈ ಹುಡುಗನಿಗೆ ನನ್ನನ್ನು ಕಂಡರೆ ತಾತ್ಸಾರ. ಆದರೆ ನನಗೆ ಅವನೇ ಬೇಕು. ಮತ್ತೊಬ್ಬನಿಗೆ ನನ್ನನ್ನು ಕಂಡರೆ ಅದೆಷ್ಟು ಗೌರವ, ನನ್ನ ಒಂದು ಮಾತಿಗೆ ಆತ ಹಾತೊರೆಯುತ್ತಾನೆ. ನನಗೋ ಅವನು ನನ್ನನ್ನು ತುಂಬಾ ಇಷ್ಟಪಟ್ಟಷ್ಟೂ ಸಿಟ್ಟು, ಅಸಹನೆ – ಏಕೆ ಹೀಗೆ?”
ಪ್ರೀತಿಯ ದೇವತೆ ಅವಶ್ಯಕತೆಯ ಸ್ಥಿತಿಯಲ್ಲಿ ವಾಸಿಸುತ್ತಾಳೆ.
ಟೆರೆನ್ಸ್ ಎಂಬ ರೋಮನ್ ಕವಿ ಹೇಳಿದಂತೆ The less my hope, the hotter my Love. ಹೀಗೇಕಾಗುತ್ತದೆ ಎಂಬುದಕ್ಕೆ ಇಂತಹ ಕವನಗಳು ಬಂದ ಸುಮಾರು 2,000 ವರ್ಷಗಳ ನಂತರ ವಿಜ್ಞಾನ ಉತ್ತರ ಹುಡುಕಿಬಿಟ್ಟಿದೆ. ಮಿದುಳಿನ `ರಿವಾರ್ಡ್ ವ್ಯವಸ್ಥೆ” ಬಹುಮಾನ ನೀಡುವ ವ್ಯೂಹ – ತುಡಿತ, ಏಕಾಗ್ರತೆ-ಉತ್ಸಾಹ ಎಲ್ಲವೂ ನಮಗೆ ಬೇಕಾದ್ದು ಸಿಗದಿದ್ದಾಗ ಮತ್ತೂ ಪ್ರಚೋದಿತವಾಗುತ್ತವೆ.
ಪ್ರೀತಿ ಎಂಬುದರ ಬಗ್ಗೆ ಪ್ಲೇಟೋ 2,000 ವರ್ಷಗಳ ಹಿಂದೆ ಹೇಳಿದ ಮಾತುಗಳು ಪ್ರೀತಿಯ ಬಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಸದಾ ಯೋಚಿಸುವ ಹದಿ ಹೃದಯಗಳಿಗೆ ಇಂದೂ ಅನ್ವಯಿಸುತ್ತದೆ ಎನಿಸುತ್ತದೆ. ಪ್ರೀತಿಯ ದೇವತೆ ಅವಶ್ಯಕತೆಯ ಸ್ಥಿತಿಯಲ್ಲಿ ವಾಸಿಸುತ್ತಾಳೆ. ಪ್ರೀತಿ ಎನ್ನುವುದೊಂದು ತುಡಿತ, ಅವಶ್ಯಕತೆ, ಅಸಮತೋಲನದ ಸ್ಥಿತಿ. ಬಾಯಾರಿಕೆ-ಹಸಿವುಗಳಂತೆ ಅದುಮಿಡಲು ಸಾಧ್ಯವಾಗದ್ದು. ಆದರೆ ಹಸಿವಾಯಿತೆಂದು-ಬಾಯಾರಿತೆಂದು ಏನನ್ನಾದರೂ ಕುಡಿಯುವುದು-ತಿನ್ನುವುದು ಆರೋಗ್ಯಕರವಲ್ಲವಷ್ಟೆ. ಹಾಗೆಯೇ ಪ್ರೀತಿಯಲ್ಲಿಯೂ ಅಷ್ಟೇ. ಅದು ದೀರ್ಘಕಾಲಿಕ ಬಾಂಧವ್ಯವನ್ನು ಬೆಳೆಸುವಂತಹ ಸುರಕ್ಷಿತತೆಯನ್ನು ಹೊಂದಿದ್ದರೆ ನಾವು ಪ್ರೀತಿಯಲ್ಲಿ ಬೀಳುವುದು – ಪ್ರೀತಿಯಿಂದ ಹೊರಬೀಳುವುದು ಅಷ್ಟೇ ಆಗದೆ, ಪ್ರೀತಿಯಲ್ಲಿ ಉಳಿಯುವಂತೆ ಆಗಬಹುದು !
ಡಾ|| ಕೆ.ಎಸ್. ಪವಿತ್ರ
ಇದನ್ನೂ ಓದಿ: Valentine’s Day 2021: ಪ್ರೇಮಿಗಳ ದಿನ 2021; ನಮ್ಮೊಲವ ಬದುಕೀಗ ಇಂಗು ಒಗ್ಗರಣೆಯ ಘಮ, ಫಿಶ್ ಫ್ರೈ ರುಚಿ
Published On - 2:58 pm, Sun, 14 February 21