Hello, ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ನಿಮ್ಮ ಪ್ರೊಫೈಲ್ ನೋಡಿದ್ದೆ ಎಂಬ ಸಂದೇಶವೊಂದು ಫೇಸ್ ಬುಕ್ ಮೆಸೆಂಜರ್ನಲ್ಲಿ ಬಂದು ಕುಳಿತಿತ್ತು. Other messges ಫೋಲ್ಡರ್ಗೆ ಈ ಸಂದೇಶ ಬಂದಿರುವುದರಿಂದ ಅದನ್ನು ನೋಡಿಯೂ ಇರಲಿಲ್ಲ. ಹೀಗೇ ಒಂದು ದಿನ ಮೆಸೆಂಜರ್ ಚೆಕ್ ಮಾಡಿ ಆ ಫೋಲ್ಡರ್ ತೆರೆದಾಗ ಆ ಸಂದೇಶ ಬಂದು ಎರಡು ವಾರಗಳೇ ಆಗಿತ್ತು. ಪ್ರೊಫೈಲ್ ಎಲ್ಲ ಜಾಲಾಡಿದ ಮೇಲೆ ಹಲೋ ಎಂದು ಮೆಸೇಜ್ ಮಾಡಿದೆ. ಸಂಜೆ ಅದಕ್ಕೆ ಉತ್ತರ ಬಂತು. ಒಮಾನ್ನಲ್ಲಿದ್ದೇನೆ. ನೀವು ಫ್ರೀ ಆದಾಗ ಮೆಸೇಜ್ ಮಾಡಿ ಎಂದಿತ್ತು. ಈಗ ಫ್ರೀ ಇದ್ದೇನೆ ಮಾತಾಡಿ ಎಂದೆ. ಹೀಗೇಗೆ ಪ್ರೊಫೈಲ್ ನೋಡಿದೆ. ಕುತೂಹಲದಿಂದ ಫೇಸ್ಬುಕ್ನಲ್ಲಿ ಹುಡುಕಿದಾಗ ನೀವು ಸಿಕ್ಕಿದ್ರಿ ಅಂದ. (Valentine’s Day 2021)
ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ನನಗೆ ಗಂಡು ಹುಡುಕುವ ಜವಾಬ್ದಾರಿ ಅಕ್ಕ ತೆಗೆದುಕೊಂಡಿದ್ದಳು. ಹಾಗಾಗಿ ಯಾರ ಪ್ರೊಫೈಲ್ಗೆ interested ಬಟನ್ ಒತ್ತಿದ್ದಾಳೆ ಎಂದು ನನಗೆ ಗೊತ್ತಿರಲಿಲ್ಲ. ಮನೆಗೆ ಕರೆ ಮಾಡಿ ಹೇಳಿದಾಗ ಹೌದು, ಅದೇ ಹುಡುಗ.. ಪ್ರೊಫೈಲ್ ಮ್ಯಾಚಿಂಗ್ 90% ಅಂತ ತೋರಿಸ್ತಿತ್ತು ಅಂದ್ರು. ಮ್ಯಾಟ್ರಿಮೋನಿಯಲ್ಲ್ನಲ್ಲಿದ್ದ ಅವನ ಫೋಟೊ ಕಳುಹಿಸಿ ಕೊಟ್ರು ಫೇಸ್ಬುಕ್ ನಲ್ಲಿಯೂ ಅದೇ ಫೋಟೊ ಇತ್ತು. ಸುಮ್ಮನೆ ಚಾಟ್ ಮಾಡಲು ಹೋಗ್ಬೇಡಾ, ಅವನಲ್ಲಿ ಮನೆಯ ವಿಷಯ ಎಲ್ಲ ಕೇಳಿ ತಿಳಿದುಕೋ, ಅವರ ಮನೆಯವರಲ್ಲಿ ಮಾತನಾಡಲು ಹೇಳು ಎಂಬ ಸಲಹೆಯೂ ಅಮ್ಮನಿಂದ ಸಿಕ್ಕಿತು. ಮರುದಿನ ಗುಡ್ ಮಾರ್ನಿಂಗ್ ಎಂಬ ಸಂದೇಶ ಬಂತು. ಗುಡ್ ಮಾರ್ನಿಂಗ್ಗೆ ಉತ್ತರವಾಗಿ ಅಮ್ಮ ಹೀಗೆ ಹೇಳಿದ್ದಾರೆ ಅಂದೆ. ಅಮ್ಮ ಹೇಳಿದ್ದು ಸರಿ, ಮೊದಲು ನಾವಿಬ್ಬರೂ ಮಾತಾಡೋಣ, ಆಮೇಲೆ ಹಿರಿಯರು ಮಾತಾಡಲಿ ಅಂದ. ಆಯ್ತು ಅಂದೆ, ಹಾಗೆ ಶುರುವಾದ ಚಾಟಿಂಗ್ ಒಂದು ತಿಂಗಳು ನಡೆಯಿತು. ಮಾತನಾಡಬೇಕು ಅಂತ ಅನಿಸಿದರೆ ಈ ನಂಬರ್ಗೆ ಕಾಲ್ ಮಾಡು ಎಂದು ಅವನ ನಂಬರ್ ಕೂಡಾ ಕೊಟ್ಟ. ನಾನು ಹಾಗೆಲ್ಲ ಕರೆ ಮಾಡಲ್ಲ ಎಂದೆ. ಪರ್ವಾಗಿಲ್ಲ, ನಿನಗೆ ಯಾವಾಗ ಅನಿಸುತ್ತಿದೆಯೋ ಆವಾಗ ಮಾಡು ಎಂದ.
ಹುಡುಗನ್ನು ಭೇಟಿಯಾಗಲು ಹೋಗುವಾಗ ಚೂಡಿದಾರ ಹಾಕೊಂಡೇ ಹೋಗು, ಜೀನ್ಸ್ ಶರ್ಟ್ ಎಲ್ಲ ಬೇಡ…
ಊರು ಬಿಟ್ಟು ಬೆಂಗಳೂರಿನಲ್ಲಿರುವುದರಿಂದ ದಿನಾ ಮನೆಗೆ ಕಾಲ್ ಮಾಡುವಾಗ ಅವ ಮಾಡಿದ ಮೆಸೇಜ್ ವಿಷಯ ಹೇಳುತ್ತಿದ್ದೆ. ಇನ್ನೆರಡು ತಿಂಗಳಲ್ಲಿ ಊರಿಗೆ ಬರುವವನಿದ್ದಾನೆ, ಎಲ್ಲವೂ ಸರಿ ಆದರೆ ಮದುವೆ ನಿಶ್ಚಿತಾರ್ಥ ಮಾಡುವ ಅಂದ್ರು. ಅವ ನನ್ನ ವಿಷಯ ಮನೆಯವರಿಗೆ ತಿಳಿಸಿದ್ದ. ಅವರ ಅಮ್ಮನಿಗೇನೂ ಅಭ್ಯಂತರವಿರಲಿಲ್ಲ. ನಮ್ಮ ಮನೆಯಲ್ಲಿಯೂ. ಆದರೆ ಹುಡುಗ ಹುಡುಗಿ ಭೇಟಿಯಾಗದೆ ಹೇಗೆ? ಅಷ್ಟೊತ್ತಿಗಾಗಲೇ ನಾವು ಒಳ್ಳೆಯ ಗೆಳೆಯರಾಗಿದ್ದೆವು. ಮದುವೆಗೆ ನಮ್ಮ ಮನೆಯವರು ಒಪ್ಪಬಹುದು ಯಾಕೆಂದರೆ ನಿನ್ನ ಬಗ್ಗೆ ಹೇಳಿದ್ದೇನೆ. ಒಂದು ವೇಳೆ ನಿಮ್ಮ ಮನೆಯವರು ಒಪ್ಪದೇ ಇದ್ದರೆ? ಎಂದು ಕಾಲ್ ಮಾಡಿದಾಗ ಕೇಳಿದ್ದೆ. ಅಮ್ಮ ಒಪ್ಪಿದ್ದಾರೆ ಅಷ್ಟು ಸಾಕು . ಬೇರೆ ಯಾರ ಒಪ್ಪಿಗೆಯೂ ಬೇಕಿಲ್ಲ ಅಂದ. ಈ ನಡುವೆ ಅವರ ಹಿರಿಯರು ಹುಡುಗಿ ಮನೆ ತುಂಬಾ ದೂರ. ಸುಮಾರು 300 ಕಿಮೀ ಇದೆ. ಈ ಸಂಬಂಧ ಬೇಡ ಅಂದಿದ್ದರಂತೆ. ಅದನ್ನೇ ಅವ ಕಾಲ್ ಮಾಡಿ ಕೇಳಿದಾಗ, ಆಯ್ತು ಬಿಡು ಎಂದು ಹೇಳಿದೆನಾದರೂ ಬೇಜಾರಾಗಿತ್ತು.
ಇದನ್ನೂ ಓದಿ: Valentine’s Day: ನಮ್ಮೊಲವ ಬದುಕೀಗ ಇಂಗು ಒಗ್ಗರಣೆಯ ಘಮ, ಫಿಶ್ ಫ್ರೈ ರುಚಿ
ಎರಡು ತಿಂಗಳ ನಂತರ ಒಮಾನ್ ನಿಂದ ಊರಿಗೆ ಬಂದ. ಹೆಚ್ಚು ರಜೆ ಇಲ್ಲ ಈ ನಡುವೆ ಹುಡುಗಿ ನೋಡುವ ಕಾರ್ಯಕ್ರಮವೂ ಆಗಬೇಕಲ್ಲಾ. ಸರಿ, ನಾನೇ ಬೆಂಗಳೂರಿಗೆ ಬಂದು ಭೇಟಿಯಾಗುತ್ತೇನೆ ಎಂದ. ಅರೇ ಹುಡುಗಿ ನೋಡುವ ಕಾರ್ಯಕ್ರಮ ಎಂದರೆ ಚಹಾದ ಟ್ರೇ ಹಿಡಿದುಕೊಂಡು ಹೋಗಿ ಎಲ್ಲರಿಗೂ ಚಹಾ ಕೊಟ್ಟು ಒಳಕೋಣೆಯಲ್ಲಿ ಇಳಿಬಿಟ್ಟ ಪರದೆ ಹಿಡಿದುಕೊಂಡು ನಿಲ್ಲುವ ಕಲ್ಪನೆ ಮನಸ್ಸಿನಲ್ಲಿ ಇತ್ತು. ಆದರೆ ಅದಕ್ಕಿಂತ ವ್ಯತಿರಿಕ್ತವಾಗಿ ನಾನೂ ಅವನೂ ಭೇಟಿಯಾಗಬೇಕು, ನಮ್ಮ ಬಗ್ಗೆ ಮಾತನಾಡಿಕೊಳ್ಳಬೇಕು. ಅದೊಂಥರಾ ಸಂದಿಗ್ಧ ಪರಿಸ್ಥಿತಿ. ಬೆಂಗಳೂರು ನಗರ ಎಂಬುದನ್ನು ಸಿನಿಮಾ ದೃಶ್ಯಗಳಲ್ಲಿ ಮಾತ್ರ ಕಂಡಿದ್ದ ಹುಡುಗ ಮೊದಲ ಬಾರಿ ನನ್ನನ್ನು ನೋಡಲು ಬೆಂಗಳೂರಿಗೆ ಬಂದಿದ್ದ. ಹುಡುಗನ್ನು ಭೇಟಿಯಾಗಲು ಹೋಗುವಾಗ ಚೂಡಿದಾರ ಹಾಕೊಂಡೇ ಹೋಗು, ಜೀನ್ಸ್ ಶರ್ಟ್ ಎಲ್ಲ ಬೇಡ. ಪ್ರತಿಯೊಂದು ವಿಷಯವನ್ನೂ ಸ್ಪಷ್ಟವಾಗಿ ಕೇಳಬೇಕು ಎಂದು ಅಮ್ಮ ಸೂಚನೆ ನೀಡಿದ್ದರು.
ಅವ ದಿನಾ ಕಾಲ್ ಮಾಡಿ ಮಾತಾಡುತ್ತಿದ್ದ..
ಅಂತೂ ನಾವಿಬ್ಬರೂ ಜಯನಗರ ನಾಲ್ಕನೇ ಬ್ಲಾಕ್ನಲ್ಲಿ ಭೇಟಿಯಾಗಿ ಹತ್ತಿರದ ಪಾರ್ಕ್ನಲ್ಲಿ ಒಂದಷ್ಟು ಹೊತ್ತು ಹರಟಿದೆವು. ನಾನು ಮದುವೆಯಾಗುವ ಹುಡುಗನಿಗೆ ನಾನೇ ಮೊದಲು ಸರ್ಫ್ರೈಸ್ ಗಿಫ್ಟ್ ಕೊಡಬೇಕು ಎಂದು ಉಡುಗೊರೆಯೊಂದನ್ನು ತೆಗೆದುಕೊಂಡು ಹೋಗಿದ್ದೆ. ಅವನು ಇಷ್ಟವಾಗಿದ್ದ. ಹೊರಡುವ ಹೊತ್ತಿಗೆ ಉಡುಗೊರೆ ಕೈಗಿಟ್ಟೆ. ಇದೆಲ್ಲಾ ಯಾಕೆ? ನಿಮ್ಮನೆಯಲ್ಲಿ ಒಪ್ಪದೇ ಇದ್ದರೆ ನಾವು ಮುಂದೆ ಮಾತಾಡುವುದಿಲ್ಲ. ನನ್ನ ನೆನಪಿಗಾಗಿ ಇರಲಿ ಎಂದು ಮಾತು ತೇಲಿಸಿದೆ.
ಮರುದಿನ ಅವರ ಮನೆಯ ಹಿರಿಯರು ನನ್ನ ಅಪ್ಪನ ಜೊತೆ ಮಾತಾಡಿ ಒಪ್ಪಿಗೆ ಸೂಚಿಸಿದ್ದರು. ಅವ ದಿನಾ ಕಾಲ್ ಮಾಡಿ ಮಾತಾಡುತ್ತಿದ್ದ. ಅವತ್ತು ನಮ್ಮ ಮನೆಯವರು ಬೇಡ ಎಂದಾಗ ಯಾಕೆ ಅತ್ತಿದ್ದು? ಎಂದು ಕೇಳಿದ. ಬೇಜಾರಾಯ್ತು ಅಂದೆ. ನನಗೂ ಬೇಜಾರಾಯ್ತು, ಅದೇ ದಿನ ಮನೆಗೆ ಕರೆ ಮಾಡಿ ಮದುವೆಯಾಗುವುದಾದರೆ ಅದೇ ಹುಡುಗಿಯನ್ನು ಎಂದು ಹಿರಿಯರಲ್ಲಿ ಹೇಳಿದ್ದೆ ಎಂದ. ಇವನೇ ನನಗೆ ಫರ್ರ್ಫೆಕ್ಟ್ ಹುಡುಗ ಎಂದು ಅನಿಸಿದ ಕ್ಷಣ ಅದಾಗಿತ್ತು.
ಮದುವೆಗೆ ಮುನ್ನ ನಾವಿಬ್ಬರೂ ಭೇಟಿಯಾಗಿದ್ದು ಮೂರೇ ಬಾರಿ..
ಒಂದು ತಿಂಗಳೊಳಗೆ ನಮ್ಮ ಮದುವೆ ನಿಶ್ಚಿತಾರ್ಥವೂ ಆರು ತಿಂಗಳಲ್ಲಿ ನಮ್ಮ ಮದುವೆಯೂ ಆಯ್ತು. ಮದುವೆಗೆ ಮುನ್ನ ನಾವಿಬ್ಬರೂ ಭೇಟಿಯಾಗಿದ್ದು ಮೂರೇ ಬಾರಿ. ಹೆಣ್ಣು ನೋಡಲು ಬಂದಾಗ ಮೊದಲ ಭೇಟಿ, ಎರಡನೆಯದ್ದು ನಿಶ್ಚಿತಾರ್ಥ, ಮೂರನೆ ಬಾರಿ ಭೇಟಿ ಮಾಡಿದ್ದು ಮದುವೆಗೆ ಒಂದು ತಿಂಗಳಿರುವಾಗ. ಹಾಗೆ ಮ್ಯಾಟ್ರಿಮೋನಿಯಲ್ ಸೈಟ್ನಿಂದ ಪರಿಚಯವಾಗಿ. ಫೇಸ್ಬುಕ್ನಲ್ಲಿ ಚಾಟ್ ಮಾಡಿ, ವಾಟ್ಸ್ ಆ್ಯಪ್ ಕರೆ ಮಾಡಿ ಮಾತಾಡ್ಕೊಂಡು ಮಾತಾಡಿದ್ದ ಆ ಹುಡುಗ ಈಗ ನನ್ನ ಪತಿ. ಮದುವೆಯಾದ ಮರುದಿನ ನಿಮ್ಮ ಮನೆಯವರು ಮದುವೆಗೆ ಒಪ್ಪುವುದಿಲ್ಲ ಎಂದು ಹಠ ಹಿಡಿದಿದ್ದರೆ ನೀನೇನು ಮಾಡ್ತಿದ್ದೆ ಎಂದು ಕೇಳಿದಾಗ, ಒಂದು ರಾತ್ರಿ ಯಾರಿಗೂ ಗೊತ್ತಾಗದಂತೆ ಹಾರಿಸ್ಕೊಂಡು ಹೋಗ್ತಿದೆ ಅಂದ. ಹಾಗಾದ್ರೆ ಸಿನಿಮಾದಲ್ಲಿ ತೋರಿಸುವ ರೀತಿಯಲ್ಲಿ ಹಾರಿಸ್ಕೊಂಡು ಹೋಗ್ಬೇಕು ಅಂದೆ. ರಾತ್ರಿ 12 ಗಂಟೆ ಕಳೆದಿತ್ತು. ಮನೆಯಲ್ಲಿ ಎಲ್ಲರಿಗೂ ಗಾಢ ನಿದ್ದೆ. ಬಾ, ಒಂದು ರೈಡ್ ಹೋಗಿ ಬರೋಣ ಅಂದ. ಈ ರಾತ್ರಿಯಲ್ಲಿ? ಹಾಂ, ಸಿನಿಮಾ ಸ್ಟೈಲ್ ನಲ್ಲಿ ಹುಡುಗಿಯನ್ನು ಹಾರಿಸ್ಕೊಂಡು ಹೋಗುವುದು ಹೇಗೆ ಎಂದು ಗೊತ್ತಾಗ್ಬೇಕಲ್ಲಾ ಅಂದ. ನೈಟ್ ಡ್ರೆಸ್ ಮೇಲೆ ಒಂದು ಜಾಕೆಟ್ ಏರಿಸಿ, ಹೆಲ್ಮೆಟ್ ಧರಿಸಿ ಯಾರಿಗೂ ಗೊತ್ತಾಗದಂತೆ ಮನೆಯಿಂದ ಹೊರಗಿಳಿದು ಸ್ವಲ್ಪ ದೂರ ಬೈಕು ತಳ್ಳುತ್ತಾ ಬಂದು ಆಮೇಲೆ ಬೈಕ್ ಸ್ಟಾರ್ಟ್ ಮಾಡಿ ತಿರೂರ್ (ಅವನೂರು) ಪೇಟೆಯಲ್ಲಿ ಒಂದು ರೌಂಡ್ ಹೊಡೆದು ಬಂದೆವು. ಮರುದಿನ ಮನೆಯಲ್ಲಿ ಹೇಳಿದಾಗ, ನೀವು ರಾತ್ರಿ ಸುತ್ತಾಡಲು ಹೋಗ್ಬೇಕು ಅಂತ ಹೇಳ್ತಿದ್ರೆ ನಾವು ಬೇಡ ಅಂತಿದ್ವಾ ಅಂದ್ರು ನಮ್ಮತ್ತೆ. ಆದರೆ ಹೀಗೆ ಕದ್ದು ಮುಚ್ಚಿ ರೈಡ್ ಗೆ ಹೋಗುವ ಅನುಭವ ಸಿಗುತ್ತಿತ್ತಾ ಅಂದ್ಕೊಂಡು ನಾವಿಬ್ಬರೂ ಪರಸ್ಪರ ನೋಡಿ ನಕ್ಕೆವು.
ಇದನ್ನೂ ಓದಿ: Valentine’s Day: ನಾವಿಬ್ರೂ ಒಂದೇ ಆಸ್ಪತ್ರೆಯಲ್ಲಿ ಹುಟ್ಟಿದ್ದು.. ನಮ್ಮ ಲವ್ ಸ್ಟೋರಿಯನ್ನ ಎಲ್ಲಿಂದ ಶುರುಮಾಡ್ಲಿ?
Published On - 10:50 am, Sun, 14 February 21