Valentine’s Day: ನಾವಿಬ್ರೂ ಒಂದೇ ಆಸ್ಪತ್ರೆಯಲ್ಲಿ ಹುಟ್ಟಿದ್ದು.. ನಮ್ಮ ಲವ್ ಸ್ಟೋರಿಯನ್ನ ಎಲ್ಲಿಂದ ಶುರುಮಾಡ್ಲಿ?
My Love Story: ನಾವಿಬ್ರೂ ಒಂದೇ ಆಸ್ಪತ್ರೆಯಲ್ಲಿ ಹುಟ್ಟಿದ್ದು ಅನ್ನೋದ್ರಿಂದ ಹಿಡಿದು, ಮೊದಲ ಭೇಟಿಯ ದಿನ ಮಾತಾಡಿಕೊಳ್ಳದೆಯೂ ಇಬ್ಬರೂ ನೀಲಿ ಡ್ರೆಸ್ ಹಾಕ್ಕೊಂಡು ಬಂದಿದ್ವಿ ಅನ್ನೋವರೆಗೆ ನಮ್ಮ ನಡುವೆ ಅನೇಕ ಸಾಮ್ಯತೆಗಳಿವೆ.
ಸೋನೆಮಳೆ, ತಂಗಾಳಿ, ಹಿತವಾದ ಹಾಡು ಅಥವಾ ಎಲ್ಲಿಂದಲೋ ಹಾರಿ ಬಂದು ಹುಡುಗನ್ನ ತಾಕುವ ದುಪಟ್ಟಾ.. ಇವು ಸಿನಿಮಾದಲ್ಲಿ ಹುಡುಗ, ಹುಡುಗಿಗೆ ಪ್ರೀತಿ ಹುಟ್ಟೋ ಮುನ್ಸೂಚನೆ. ಆದ್ರೆ, ನಿಜ ಜೀವನದಲ್ಲಿ ಹಾಗೆಲ್ಲಾ ಆಗೋಕೆ ಸಾಧ್ಯಾನ ಹೇಳಿ? ಗೊತ್ತೇ ಆಗದಂತೆ ಚಿಗುರಿ, ಆವರಿಸಿಕೊಳ್ಳೋದೇ ಪ್ರೀತಿಯ ಲಕ್ಷಣ ತಾನೇ! ಈ ಜನ್ಮದಲ್ಲಿ ನಂಗೆ ಲವ್ವಾಗುತ್ತೆ ಅನ್ನೋ ನಂಬಿಕೆ ನನಗೇ ಇರಲಿಲ್ಲ. ಒಬ್ಬ ಮನುಷ್ಯನ ಎಲ್ಲಾ ಓರೆ-ಕೋರೆಗಳನ್ನು ಒಪ್ಪಿಕೊಂಡು, ಪ್ರೀತಿಸುವುದು ನನ್ನ ಮಟ್ಟಿಗಂತೂ ಆಗದ ಮಾತೇ ಆಗಿತ್ತು. ಆದ್ರೇನು ಮಾಡೋದು, ಜಗತ್ತನ್ನೇ ಗೆಲ್ಲುವ ಶಕ್ತಿ ಇರೋ ಪ್ರೀತಿಯ ಮುಂದೆ ಸೋಲದೇ ಇರೋಕೆ ಆಗುತ್ತಾ?
ನಮ್ಮಿಬ್ಬರದು Love at First Sight ಅಂತೂ ಅಲ್ಲವೇ ಅಲ್ಲ. ಯಾಕಂದ್ರೆ ನಾವಿಬ್ಬರೂ ಮುಖ ನೋಡದೆಯೇ ಪ್ರೀತಿಸಿದವರು. ಇಸ್ಸನಿ ಅನ್ನೋ ಕನ್ನಡ ಬ್ಲಾಗ್ ಸದಸ್ಯರಾಗಿರೋ ನಟರಾಜ್, ‘ನಮ್ಮ ಬ್ಲಾಗ್ನಲ್ಲಿ ಬರೀತೀರಾ?’ ಅಂತ ಕೇಳೋಕೆ ನಂಗೆ ಮೆಸೇಜ್ ಮಾಡಿದ್ರು. ಈಗ ನಮ್ಮಿಬ್ರಿಗೆ ನೆನಪಿರೋದು ಅಷ್ಟೇ! ಆ ಒಂದು ಮೆಸೇಜ್ ಹತ್ತಾಗಿ, ನೂರಾಗಿ, ಸಾವಿರ ಆಗಿ, ನಮ್ಮ ಸಂಬಂಧ ಸ್ನೇಹದ ಬೇಲಿ ದಾಟಿ, ಪ್ರೀತಿಯ ದಾರಿಗೆ ಇಳಿದಿದ್ದು ಯಾವಾಗಂತ ನಮಗೆ ಗೊತ್ತೇ ಆಗ್ಲಿಲ್ಲ. ‘May be he is the one…’ ಅಂತ ಮನ್ಸು ಹೇಳ್ತಿದ್ರೂ, ‘ನೀನಿನ್ನೂ ಅವ್ನನ್ನ ಕಣ್ಣಾರೆ ನೋಡಿಲ್ಲ ಕಣೇ..’ ಅಂತ ಬುದ್ಧಿ ಎಚ್ಚರಿಸ್ತಿತ್ತು.. ಹಾಂ, ಕತೆ ಇಷ್ಟೆಲ್ಲಾ ಮುಂದೆ ಹೋಗಿದ್ದರೂ ನಾವಿಬ್ರೂ ಇನ್ನೂ ಭೇಟಿ ಆಗಿರ್ಲಿಲ್ಲ, ಫೋನಲ್ಲಿ ಮಾತೂ ಆಡಿರಲಿಲ್ಲ! ಅವರು ಹೈದರಾಬಾದ್ ಅಲ್ಲಿದ್ರೆ, ನಾನು ಬೆಂಗ್ಳೂರಲ್ಲಿದ್ದೆ. ಆದರೆ, ಇದು ಬರೀ ಸ್ನೇಹ ಅಲ್ಲ ಅನ್ನೋದು ನಮ್ಮ ಅಂತರಾಳಕ್ಕೆ ಅರ್ಥವಾಗಿತ್ತು.
ಪರಿಚಯ ಆಗಿ ಮೂರ್ನಾಲ್ಕು ತಿಂಗಳ ನಂತರ ನನ್ನ ಹುಟ್ಟಿದಹಬ್ಬಕ್ಕೆ ವಿಶ್ ಮಾಡೋಕೆ ನಟರಾಜ್ ಮೊದಲ ಸಲ ಕಾಲ್ ಮಾಡಿದ್ದು. ಬರೋಬ್ಬರಿ ಮೂರು ಗಂಟೆ ಮಾತಾಡಿದ್ಮೇಲೆ ನೆನಪಾಯ್ತು, ಈ ಹುಡುಗನ ಜೊತೆ ಇದೇ ಮೊದಲ ಸಲ ಮಾತಾಡ್ತಿರೋದು ನಾನು ಅಂತ. ಬಾಲ್ಯದಲ್ಲಿ ಕಳೆದು ಹೋಗಿದ್ದ ಗೆಳೆಯನೊಬ್ಬ ಅಚಾನಕ್ಕಾಗಿ ಸಿಕ್ಕಿಬಿಟ್ರೆ ಆಗುತ್ತಲ್ಲ ಖುಷಿ, ಅದೇ ಖುಷಿಯಲ್ಲಿದ್ದೆ ನಾನವತ್ತು. ಅದಾದ್ಮೇಲೆ ದಿನಾ ಮಾತಾಡ್ತಿದ್ವಿ, ಭೇಟಿಯಾಗಿದ್ದು ಮತ್ತೆರಡು ತಿಂಗಳ ನಂತರ.. ಅವತ್ತು ಪರಸ್ಪರ ಪ್ರಪೋಸ್ ಮಾಡದೆಯೇ ನಾವಿಬ್ರೂ ಒಪ್ಪಿಕೊಂಡುಬಿಟ್ವಿ. ಎದುರಿಗಿರೋ ವ್ಯಕ್ತಿಯನ್ನೇ ಸರಿಯಾಗಿ ನಂಬದ ನನಗೆ, ಮುಖವೇ ನೋಡದ ಈ ಮನುಷ್ಯನ ಮೇಲೆ ಅದ್ಯಾಕೆ ನಂಬಿಕೆ ಮೂಡಿತೋ ಗೊತ್ತಿಲ್ಲ. ಲಾಂಗ್ ಡಿಸ್ಟೆನ್ಸ್ ಆಗಿದ್ರೂ ನನ್ನ ನಂಬಿಕೆಗೆ ಚೂರೂ ಮೋಸ ಮಾಡದ ಅವರ ಗುಣ ನನ್ನ ವಿಶ್ವಾಸವನ್ನು ಮತ್ತಷ್ಟು ಗಟ್ಟಿ ಮಾಡಿತು.
ಪ್ರೀತಿಗೆ ಎಲ್ಲವನ್ನೂ, ಎಲ್ಲರನ್ನೂ ಬದಲಾಯಿಸೋ ಶಕ್ತಿ ಇದೆ ಅನ್ನೋದು ನಿಜ. ಪ್ರೀತೀಲಿ ಬಿದ್ದ ಮೇಲೆ ನಾವೂ ಬದಲಾಗಿದ್ದೇವೆ. ಮೂಗಿನ ತುದೀಲೇ ಇರೋ ನನ್ನ ಸಿಟ್ಟನ್ನ ಅವನ ತಾಳ್ಮೆ ಒಂಚೂರು ಶಾಂತಗೊಳಿಸಿದೆ. ವಟವಟ ಅಂತ ಮಾತಾಡೋ ನನ್ನಿಂದ, ಅಳೆದು ತೂಗಿ ಮಾತಾಡೋ ಅವನು ಮಾತು ಕಲಿತಿದ್ದಾನೆ. ಎಮೋಜಿಯನ್ನೂ ಬಳಸೋಕೆ ಬರದ ಬೋರಿಂಗ್ ಹುಡುಗ ಈಗ ಮೆಸೇಜಿಗೊಂದರಂತೆ ವಾಟ್ಸಪ್ ಸ್ಟಿಕ್ಕರ್ ಕಳಿಸುತ್ತಾನೆ. ಹಳೇ ಜೀನ್ಸ್, ಟಾಪ್, ಬಾತ್ರೂಮ್ ಚಪ್ಪಲಿಯಲ್ಲೇ ಊರಿಡೀ ತಿರುಗ್ತಿದ್ದ ನನ್ನ ಕಪಾಟಿನಲ್ಲೀಗ ಬಳೆ, ಬಿಂದಿ, ಜುಮುಕಿಗಳು ನಗುತ್ತಿವೆ.. ಹೀಗೆ, ಪ್ರೀತಿ ನಮಗೆ ಸಾಕಷ್ಟನ್ನು ಕಲಿಸಿದೆ, ಕಲಿಸುತ್ತಲೇ ಇದೆ.
ಇದನ್ನೂ ಓದಿ: ನಿಮ್ಮನ್ನ Love ಮಾಡ್ಬೇಕಂತ ಮಾಡೇನ್ರಿ, ಪ್ಲೀಸ್ ಹಂಗ..
ನಾವಿಬ್ರೂ ಒಂದೇ ಆಸ್ಪತ್ರೆಯಲ್ಲಿ ಹುಟ್ಟಿದ್ದು ಅನ್ನೋದ್ರಿಂದ ಹಿಡಿದು, ಮೊದಲ ಭೇಟಿಯ ದಿನ ಮಾತಾಡಿಕೊಳ್ಳದೆಯೂ ಇಬ್ಬರೂ ನೀಲಿ ಡ್ರೆಸ್ ಹಾಕ್ಕೊಂಡು ಬಂದಿದ್ವಿ ಅನ್ನೋವರೆಗೆ ನಮ್ಮ ನಡುವೆ ಅನೇಕ ಸಾಮ್ಯತೆಗಳಿವೆ. ನಮ್ಮ ಆದರ್ಶ, ಅಭಿರುಚಿ, ಆಲೋಚನೆಗಳು ಒಂದೇ ಆಗಿವೆ. ಕೆಲವೊಂದು ವಿಚಾರದಲ್ಲಿ ಉತ್ತರ – ದಕ್ಷಿಣ ಅನ್ನುವಷ್ಟು ಭಿನ್ನವಾಗಿಯೂ ಯೋಚಿಸುತ್ತೇವೆ. ಆದರೆ, ನಾವಿಬ್ಬರಲ್ಲ ಒಬ್ಬರು ಎಂದು ಭಾವಿಸಿದ ಮೇಲೆ, ಪ್ರೀತಿಸಿದ ಮೇಲೆ ಎಲ್ಲ ಭಿನ್ನತೆಗಳೂ ಅರ್ಥಹೀನವಲ್ಲವೆ. ದೇವರ ದಯೆಯಿಂದ ನಮ್ಮ ಪ್ರೀತಿಗೆ ಹಿರಿಯರ ಒಪ್ಪಿಗೆ ಸಿಕ್ಕಿದೆ. ಈಗ ನಮ್ಮ ಮದುವೆಯಾಗಿ ಎರಡೂವರೆ ತಿಂಗಳಾಗಿದೆ. ಆದರೆ, ಮೊದಲು ಪ್ರಪೋಸ್ ಮಾಡಿದ್ದು ಯಾರು ಅಂತ ಎಲ್ಲರೂ ಕೇಳುವ ಪ್ರಶ್ನೆಗೆ, ಇಬ್ಬರಲ್ಲೂ ಒಮ್ಮತ ಇಲ್ಲ. ನಿಮ್ ಲವ್ ಸ್ಟೋರಿ ಹೇಳಿ ಅಂತ ಕೇಳಿದ್ರೆ, ಎಲ್ಲಿಂದ ಆರಂಭಿಸ್ಬೇಕು ಅಂತ ನಮಗೇ ಗೊತ್ತಿಲ್ಲ..!
ಪ್ರಿಯಾಂಕಾ ನಟರಾಜ್
Published On - 12:02 pm, Sat, 13 February 21