Valentine’s Day: Top 10 ಯುಗಳ ಗೀತೆಗಳು, ಸಂಗಾತಿಯನ್ನು ವರ್ಣಿಸಲು ಒಂದು ಪ್ರೇಮ ಗೀತೆ ಇಲ್ಲದೇ ಇದ್ದರೆ ಹೇಗೆ?
ಪ್ರೀತಿ ವ್ಯಕ್ತಪಡಿಸಲು ಯುಗಳ ಗೀತೆಗಳು ಕೂಡ ಸಹಕಾರಿಯಾಗಿದ್ದು, ಒಂದು ನೆಚ್ಚಿನ ಸಿನಿಮಾದ ಹಾಡನ್ನು ತಮ್ಮ ಸಂಗಾತಿಗಾಗಿ ಡೆಡಿಕೇಟ್ ಮಾಡುವ ಯುವ ಪ್ರೇಮಿಗಳಿಗಾಗಿ ಮೀಸಲಾಗಿದೆ ಟಾಪ್ 10 ಯುಗಳ ಗೀತೆಗಳು.

ಕೆಲವು ಹಾಡುಗಳೇ ಹಾಗೆ. ಬೆಳಗ್ಗೆ ಏಳುವಾಗಲೇ ನಮ್ಮನ್ನು ಕಾಡಲು ಶುರುಮಾಡಿಬಿಡುತ್ತವೆ. ಯಾವುದೋ ಸಂದರ್ಭಕ್ಕೆ ಯಾವುದ್ಯಾವುದೋ ಹಾಡುಗಳು ಜೊತೆಯಾಗಿ ಇದ್ದಕ್ಕಿದ್ದಂತೆ ಸೆಳೆದುಬಿಡುತ್ತವೆ. ಅದೊಮ್ಮೆ, ಸುಮ್ಮನೆ ಕುಳಿತಾಗ ದೂರದಲ್ಲಿ ಕೇಳಿಸಿದ ಆ ಸಾಲಿನ ಅರ್ಥ ಮನದಲ್ಲಿದ್ದ ಸಾವಿರಾರು ಗೊಂದಲಗಳಿಗೆ ಉತ್ತರ ಹೇಳುವಂತಿತ್ತು, ಅಂತರಾಳದಲ್ಲಿನ ಹಲವು ಗೊಂದಲಗಳನ್ನು ಎತ್ತಿ ಹಿಡಿದು ನನ್ನನ್ನೇ ಅಣುಕಿಸುವಂತಿತ್ತು, ಮುಖದಲ್ಲಿ ನಗು ತರಿಸುವಂತಿತ್ತು, ಕಣ್ಣಂಚಲ್ಲಿ ಸುಮ್ಮನೆ ಒಮ್ಮೆ ನೀರು ತೊಟ್ಟಿಕ್ಕಿತು. ಇಷ್ಟಕ್ಕೆಲ್ಲಾ ಕಾರಣ ಆ ಸಾಲುಗಳು . ಮೌನಿಯಾದ ನನ್ನನ್ನು ವಿರಹ, ಒಲವು, ಉದ್ವೇಗ, ರೋಮಾಂಚನ, ದುಖಃ ಹೀಗೆ ನಾನಾ ರೀತಿಯ ಭಾವನೆಗಳಿಗೆ ತಳ್ಳಿ ಮಜಾ ತೆಗೆದುಕೊಳ್ಳುತ್ತಿರುವ ಆ ಸಾಲುಗಳು ನನ್ನನ್ನು ಹುಡುಕಿ ಬಂದಿದ್ದು ಪಯಣದಲ್ಲಿ. ಹಾಡು ಕೇಳುವ ಅಭ್ಯಾಸ ಸ್ವಲ್ಪ ಕಡಿಮೆ ಆದರೂ ಬಸ್ನಲ್ಲಿ ಪಯಣಿಸುವಾಗ ಕೇಳಿದ ಆ ಗೀತೆಗಳು ನನ್ನನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗಿಬಿಟ್ಟವು. ಒಟ್ಟಾರೆಯಾಗಿ ನೋಡಿದರೆ, ಒಂದು ಅದ್ಭುತವಾದ ಗೀತೆಗೆ ಎಲ್ಲವನ್ನು ಹೇಳುವ ಶಕ್ತಿ ಇದೆ ಎನ್ನುವುದು ಅರ್ಥವಾಯಿತು.. ಅದೇ ನೆಪದಲ್ಲಿ ಈ ಲೇಖನ..
ಬಸ್ನಲ್ಲಿ ಓಡಾಡುವಾಗ, ಒಂಟಿತನ ಕಾಡಿದಾಗ, ಇನಿಯನನ್ನು ನೆನದುಕೊಳ್ಳುವಾಗ ಅಥವಾ ಸಂಗಾತಿಯನ್ನು ವರ್ಣನೆ ಮಾಡುವಾಗ ಮೊದಲು ನೆನಪಾಗುವುದೇ ಸಿನಿಮಾದ ಹಾಡುಗಳು. ಪ್ರೇಮಿಗಳಿಗಂತೂ ಸಿನಿಮಾದ ಯುಗಳ ಗೀತೆಗಳು ಅಚ್ಚುಮೆಚ್ಚು. ಹೀಗೆ ಮೆಲುಕು ಹಾಕುವ ಗೀತೆಗಳಲ್ಲಿ ಹೆಚ್ಚು ಕಾಡುವ ಪ್ರೇಮ ಗೀತೆಗಳು ಯಾವುದಿರಬಹುದು ಎನ್ನುವ ಕಿರುಪಟ್ಟಿ ಇಲ್ಲಿದೆ.
ಸಿನಿಮಾ: ಜಂಟಲ್‌ಮನ್ ಮರಳಿ ಮನಸಾಗಿದೆ ಸಾಗಿದೆ. ಮರಳಿ ಮನಸಾಗಿದೆ ಸಾಗಿದೆ ನಿನ್ನ ಹೃದಯಕೆ, ಪಯಣ ಶುರುವಾಗಿದೆ ಕೋರಿದೆ ಪ್ರೀತಿ ಕಾಣಿಕೆ ಮತ್ತೆ ಮತ್ತೆ ಮನಸು ಶರಣಾದ ಹಾಗಿದೆ. ಕಿರು ಬೆರಳು ಬಯಸಿದೆ ಸಲಿಗೆ ಇರಬೇಕು ಜೊತೆಯಾಗಿ ನಿನ್ನಲ್ಲೇ ನಾ…. ಮಿಂಚುತ್ತಿದೆ ಮಿಂಚುತ್ತಿದೆ ನಿನ್ನಿಂದ ಕನಸೆಲ್ಲಾ ಹೆಚ್ಚುತ್ತಿದೆ ಎಂಬ ಜಂಟಲ್‌ಮನ್ ಸಿನಿಮಾದ ಹಾಡು ಮನಸ್ಸಿನಲ್ಲಿರುವ ಹಲವು ಹೇಳಲಾಗದ ವಿಷಯಗಳಿಗೆ ಬೆಳಕು ಚೆಲ್ಲುತ್ತದೆ. ಹೀಗಾಗಿಯೇ ಈ ಸಿನಿಮಾ ಒಬ್ಬ ಪ್ರೇಮಿಗೆ ಎನ್ನುವುದಕ್ಕಿಂತ ಮನಸ್ಸಿನಲ್ಲಿ ಅಡಗಿರುವ ಹಲವು ಪದಗಳಿಗೆ ಸ್ಪೂರ್ತಿ.

ಜಂಟಲ್‌ಮನ್ ಸಿನಿಮಾದ ಚಿತ್ರ
ಸಿನಿಮಾ: ಚಕ್ರವರ್ತಿ ಒಂದು ಮಳೆಬಿಲ್ಲು ಒಂದು ಮಳೆಬಿಲ್ಲು… ಒಂದು ಮಳೆ ಮೋಡ…. ಹೇಗೋ ಜೊತೆಯಾಗಿ ತುಂಬಾ ಸೊಗಸಾಗಿ ಏನನೋ ಮಾತಾಡಿವೆ. ಭಾವನೆ ಬಾಕಿ ಇವೆ, ತೇಲಿ ನೂರಾರು ಮೈಲಿಯೂ ಸೇರಲು ಸನಿಸನಿಹ ಮೋಡ ಸಾಗಿ ಬಂದಿವೆ ಪ್ರೀತಿಗೆ ಮುದ್ದಾಗಿ ಸೇರಿವೆ ಎರಡೂ ಸಹ ಏನನೋ ಮಾತನಾಡಿವೆ, ಭಾವನೆ ಬಾಕಿ ಇದೆ ಎಂಬ ಚಕ್ರವರ್ತಿ ಸಿನಿಮಾದ ಪ್ರೀತಿಯಲ್ಲಿ ಕಳೆದ ಸಾಕಷ್ಟು ಗಳಿಗೆಯನ್ನು ನೆನಪಿಸುವ ಒಂದು ಅಧ್ಯಾಯ ಎಂದರೆ ತಪ್ಪಾಗಲಾರದು. ಬಹುಷಃ ಇದೇ ಕಾರಣಕ್ಕೆ ಈ ಹಾಡು ತುಂಬಾ ಫೇಮಸ್ ಆಗಿದೆ.

ಚಕ್ರವರ್ತಿ ಸಿನಿಮಾದ ಚಿತ್ರ
ಸಿನಿಮಾ: ಯಜಮಾನ ಒಂದು ಮುಂಜಾನೆ ಹಂಗೇ ಸುಮ್ಮನೇ ನಾವು ಹೋಗುವ ಬಾರೇ ಒಂದು ಮುಂಜಾನೆ ಹಂಗೇ ಸುಮ್ಮನೇ ನಾವು ಹೋಗುವ ಬಾರೇ…. ದಾರಿ ಇದ್ದಷ್ಟು ದೂರ ಹೋಗುವ ಬೇಡ ಅನ್ನೋರು ಯಾರೇ, ನನ್ನ ತಾರೆ ನಿನ್ನ ಮೇಲೆ ಗೋಲಿ ಆಡ್ತಿದ್ದ ವಯಸ್ಸಲ್ಲೇ ಪ್ರೀತಿ ಶುರುವಾಗೋಯ್ತೇ… ನೀ ಕಾಣೋ ಎಲ್ಲಾ ಕನಸ ಮಾಡುವೇನು ಎಲ್ಲಾ ನನಸ. ದಾಸ ನಿಂಗೆ ಕಾಸ…… ಕೆಲವೊಂದಿಷ್ಟು ಪ್ರೀತಿ ನಿನ್ನೆ ಮೊನ್ನೆಯ ಪರಿಚಯವಾಗಿರುವುದಿಲ್ಲ ಅಥವಾ ಕೆಲವು ತಿಂಗಳ ಪ್ರೀತಿಯಾಗಿರುವುದಿಲ್ಲ ಬದಲಾಗಿ ವರ್ಷಾನುಗಟ್ಟಲೇ ಒಬ್ಬರನ್ನು ಒಬ್ಬರು ನೋಡಿಕೊಂಡು ಬೆಳೆದ ಅಪೂರ್ವವಾದ ಸಂಬಂಧವಾಗಿರುತ್ತದೆ. ಅಂತಹ ಪ್ರೀತಿಯಲ್ಲಿ ಕಾಂಪ್ರಮೈಸ್, ಪೊಸೆಸಿವ್ನೆಸ್ ಹಾಗೇ ಇತರರಿಗಿಂತ ಸ್ವಲ್ಪ ಜಾಸ್ತಿಯೇ ಜಗಳ ಇರುತ್ತದೆ ಆದರೆ ಇದೆಲ್ಲದಕ್ಕೂ ಮಿಗಿಲಾಗಿ ಪ್ರೀತಿ ಹೆಚ್ಚಾಗಿರುತ್ತದೆ. ಅದಕ್ಕೆ ಒತ್ತು ನೀಡುವಲ್ಲಿ ಯಜಮಾನ ಸಿನಿಮಾದ ಈ ಹಾಡು ಹೆಚ್ಚು ಜನಪ್ರಿಯತೆ ಪಡೆದಿದೆ.

ಯಜಮಾನ ಸಿನಿಮಾದ ಚಿತ್ರ
ಸಿನಿಮಾ: ಲವ್ ಮಾಕ್ಟೇಲ್ ನನ್ನಲ್ಲೇ ನೀನು ನಿನ್ನಲ್ಲೇ ನಾನು ಸುಮಧುರಾ ಈ ಸಂಗಮ ನನ್ನಲ್ಲೇ ನೀನು ನಿನ್ನಲ್ಲೇ ನಾನು ಸುಮಧುರಾ ಈ ಸಂಗಮ. ಸುಮ್ಮನೆ ನಿನ್ನ ಸನಿಹ ಸಾಕು ಮನದಿ ಪೂರ ಸಂಭ್ರಮ. ನನಗೆ ಇನ್ನೂ ಜಗವೇ ನೀನು ನಿನ್ನಲ್ಲೇ ನಾನಾಗೋ ಸವಿ ಭಾವ ಈ ಪ್ರೇಮ. ಲವ್ ಮಾಕ್ಟೇಲ್ನ ಸಿನಿಮಾದ ಈ ಹಾಡು ಲಾಕ್ಡೌನ್ ಸಮಯದಲ್ಲಿ ಬಹಳಷ್ಟು ಜನರ ಬಾಯಲ್ಲಿ ಗುನುಗುತ್ತಿದ್ದ ಹಾಡು. ಮದುವೆಯಾದ ಇಬ್ಬರೂ ಹೇಗೆ ದಾಂಪತ್ಯ ಜೀವನವನ್ನು ಸೊಗಸಾಗಿ ಇಟ್ಟುಕೊಳ್ಳುತ್ತಾರೆ ಎನ್ನುವುದು ಇದರ ಒಳಾರ್ಥ. ಲವ್ ಯು ಚಿನ್ನ ಎನ್ನುವ ಹಾಡಿನ ಮಧ್ಯದಲ್ಲಿ ಬರುವ ಸಾಲು ನಿಜಕ್ಕೂ ಪ್ರೀತಿಯ ಭಾವನೆಯಲ್ಲಿ ಮೈಮರೆಯುವಂತೆ ಮಾಡಿ ಒಂದೊಮ್ಮೆ ಕಚಗುಳಿ ಇಡುವ ಸನ್ನಿವೇಶ. ಸಂಗಾತಿಗಾಗಿ ಜೀವನದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದು ನಿಜಕ್ಕೂ ಒಂದು ಸಂಬಂಧದ ಮೊದಲ ಅಧ್ಯಾಯ. ಅವನಿಗಾಗಿ ನಾನು ನನಗಾಗಿ ಅವನು ತಿದ್ದಿಕೊಳ್ಳುವುದೇ ಜೀವನವಷ್ಟೇ.

ಲವ್ ಮಾಕ್ಟೇಲ್ ಸಿನಿಮಾದ ಚಿತ್ರ
ಸಿನಿಮಾ: ಪಂಚತಂತ್ರ ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ… ನಾಚಿಕೆ ನಮ್ಮಾ ತೆ ಟು ಬಿಟ್ಟಿದೆ… ಕಳ್ಳಾಟಕೆ ಮಳ್ಳಾ ಮನ ಛೀ ಅಂದಿದೆ ಚೆಲ್ಲಾಟಕೆ ಮನವು ಹೂ ಅಂದಿದೆ. ಇಬ್ಬರ ಕಾಮನೆ ನೂರು ತುಟಿ ಗಾಯಕ್ಕೆ ಕಾರಣ ಯಾರು? ಇದು ಗೊತ್ತಿಲ್ಲದ ರೋಮಾಂಚನ ಹೋಗಿ ಬಂತು ಪ್ರಾಣ…. ಪ್ರೀತಿ ಎಂದ ಮೇಲೆ ಅಲ್ಲಿ ಕಲಹ, ಮುನಿಸು, ಕಾಳಜಿ, ಪೊಸೆಸಿವ್ನೆಸ್, ಒಲವು ಅಷ್ಟೇ ಅಲ್ಲ. ರೊಮ್ಯಾನ್ಸ್ ಕೂಡ ಒಂದು ಭಾಗವಾಗಿರುತ್ತದೆ. ಹೀಗಾಗಿ ಸಂಗಾತಿಯ ಜೊತೆಗೆ ಕಳೆಯುವ ಪ್ರತಿಯೊಂದು ಕ್ಷಣಗಳು ಕೂಡ ಮುಖ್ಯ ಮತ್ತು ಈ ಎಲ್ಲಾ ಅಂಶಗಳು ಇರದ ಹೊರತು ಒಂದು ಸಂಬಂಧ ಬಿಗಿಯಾಗುವುದಿಲ್ಲ ಎನ್ನುವುದು ಪಂಚತಂತ್ರ ಸಿನಿಮಾದ ಹಾಡು ಕೇಳಿದ ಎಲ್ಲರಿಗೂ ಅನುಭವಕ್ಕೆ ಬಂದಿರುತ್ತದೆ.

ಪಂಚತಂತ್ರ ಸಿನಿಮಾದ ದೃಶ್ಯ
ಸಿನಿಮಾ: ಐ ಲವ್ ಯು ಮಾತನಾಡಿ ಮಾಯವಾದೆ ನಿಂಗೆ ಕಾದೆನಾ ಮಾತನಾಡಿ ಮಾಯವಾದೆ ನಿಂಗೆ ಕಾದೆನಾ… ಬಳಿಗೆ ಬಂದು ಎದುರು ನಿಂತು ನನ್ನ ಪ್ರೀತಿಸು ಚಿನ್ನ, ನನ್ನ ಪ್ರೀತಿಸು. ಇದು ಐ ಲವ್ ಯು ಸಿನಿಮಾದ ಹಾಡು. ಒಪ್ಪಿಗೆ ಪಡೆದ ಪ್ರೀತಿಯ ಕಥೆ ಬೇರೆ ಒಪ್ಪಿಗೆ ಪಡೆಯದ ಅಥವಾ ಇನ್ನೂ ಲೈನ್ನಲ್ಲಿ ನಿಂತಿರುವ ಒನ್ ಸೈಡ್ ಲವ್ ಬೇರೆ. ಒಪ್ಪಿಗೆ ಪಡೆದ ಪ್ರೀತಿಯಲ್ಲಿ ಎಲ್ಲವೂ ಸಹಜ. ಆದರೆ ಸಿಗದ ಪ್ರೀತಿಯ ಕಾದು ತನ್ನ ಸಂಗಾತಿಯನ್ನು ನೆನೆದು. ಮನದಲ್ಲಿಯೇ ಒಂದಷ್ಟು ಕಲ್ಪನೆಗಳನ್ನು ಬೆಸೆದುಕೊಂಡು ಪ್ರೀತಿಸುವ ಪರಿ ಬೇರೆ. ಇಂತಹ ಪ್ರೀತಿಯ ತೂಕವು ಕೂಡ ಬೇರೆಯೇ. ಮನದಲ್ಲಿ ಅಡಗಿಕೊಂಡಿರುವ ಪ್ರೀತಿಗೆ ಆಯಸ್ಸು ಕಡಿಮೆ ಹೀಗಾಗಿ ಆದಷ್ಟು ಬೇಗ ಪ್ರೀತಿಯ ನಿವೇದನೆಯನ್ನು ಮಾಡಿಕೊಳ್ಳುವುದು ಒಳ್ಳೆಯದು.

ಐ ಲವ್ ಯು ಸಿನಿಮಾದ ಚಿತ್ರಣ
ಸಿನಿಮಾ: ಕಿಸ್ ನೀನೆ ಮೊದಲು ನೀನೇ ಕೊನೆ ನೀನೆ ಮೊದಲು ನೀನೇ ಕೊನೆ ಬೇರೆ ಯಾರು ಬೇಡ ನನಗೆ ಉಸಿರು ಇರುವ ಕೊನೆಯವರೆಗೂ ಇರಲೇ ಬೇಕು ನನ್ನ ಜೊತೆಗೆ ನನ್ನನ್ನು ಪ್ರೀತಿಸು ಒಂದು ಬಾರಿ ನಿನ್ನೆಲ್ಲಾ ಪ್ರೀತಿಯ ನನಗೆ ತೋರಿ ಆ ಏಳು ಜನ್ಮದ ಪ್ರೀತಿಗಿದು ಮೊದಲ ದಿವಸ ಈ ಹಾಡು ಪ್ರೇಮಿಗಳಿಗಾಗಿಯೇ ಬರದಂತಹ ಸುಂದರ ಪ್ರೇಮ ಕಾವ್ಯ ಎಂದರೆ ತಪ್ಪಾಗಲಿಕ್ಕಿಲ್ಲ. ಸಿನಿಮಾದ ಹೆಸರು ಕೂಡ ಹಾಗೆಯೇ ಇದ್ದು, ಕಿಸ್ ಶೀರ್ಷಿಕೆಯೊಂದಿಗೆ ಯುವ ಮನಸ್ಸುಗಳ ಬಾಗಿಲನ್ನು ಈ ಗೀತೆ ತಟ್ಟಿದೆ. ಭಾವನೆಗಳನ್ನು ವ್ಯಕ್ತಪಡಿಸುವುದು ಅಷ್ಟು ಸುಲಭದ ಮಾತಲ್ಲ. ಸುಮ್ಮನ್ನೆ ಕೂತು ಮಾತನಾಡುವುದಕ್ಕೂ ಸಂಗಾತಿಯೊಂದಿಗೆ ತನ್ನ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ಹೀಗಾಗಿ ಭಾವನೆಗಳನ್ನು ಹಾಡಿನ ಮೂಲಕ ಹೇಳಲು, ಮೆಚ್ಚಿಕೊಂಡವರನ್ನು ಓಲೈಸಲು ಈ ಸಾಂಗ್ ಎಂದಿಗೂ ಸಹಕಾರಿ.

ಕಿಸ್ ಸಿನಿಮಾದ ಚಿತ್ರಣ
ಸಿನಿಮಾ: ತಾಯಿಗೆ ತಕ್ಕ ಮಗ ಹೃದಯಕೆ ಹೆದರಿಕೆ ಹೀಗೆ ನೋಡಿದರೆ ತಾಯಿಗೆ ತಕ್ಕ ಮಗ ಸಿನಿಮಾದ ಹಾಡು, ಹೃದಯಕೆ ಹೆದರಿಕೆ ಹೀಗೆ ನೋಡಿದರೆ ಹುಡುಕುತಾ… ಬರುವೆಯಾ ಹೇಳದೇ ಹೋದರೆ ಎದೆಯಲ್ಲಿ ಬಿರುಗಾಳಿ ಮೊದಲೇನೆ ಇತ್ತು. ನೀ ನನಗೆ ಏನೆಂದು ನನಗಷ್ಟೇ ಗೊತ್ತು. ಲವ್, ಕಾದಲ್, ಪ್ರೀತಿ ಎನ್ನುವುದು ಎಲ್ಲಾ ರೀತಿಯ ಭಾವನೆಗಳನ್ನು ಒಳಗೊಂಡಿರುವ ಒಂದು ರೀತಿಯ ಲೋಕ. ಇಲ್ಲಿ ನಂಬಿಕೆ ಇದೆ, ವಿಶ್ವಾಸ ಇದೆ, ಭಯ ಇದೆ ಎಲ್ಲವೂ ಇದೆ. ಅವನನ್ನು ಕಂಡರೆ ಭಯ ಎನ್ನುವ ಹುಡುಗಿಯರದ್ದು, ಒಂದು ಪರಿಯಾದರೆ. ಅವಳನ್ನು ಕಂಡರೆ ಭಯ ಕಣ್ಣ ಸನ್ನೆಯಲ್ಲೇ ನನ್ನನ್ನು ಹೆದರಿಸಿ ಬಿಡುತ್ತಾಳೆ ಎನ್ನುವ ಎಲ್ಲಾ ಹುಡುಗ ಮತ್ತು ಹುಡುಗಿಯರಿಗೆ ಈ ಹಾಡು ಒಮ್ಮೆಗೆ ಇಷ್ಟವಾಗುತ್ತದೆ. ಪ್ರಯಾಣದ ಹಾದಿಯಲ್ಲಿ ಪಯಣಿಸುವ ಎಲ್ಲರಿಗೂ ಇಂತಹ ನೂರಾರು ಸನ್ನಿವೇಶಗಳು ಎದುರಾಗುವುದು ಸಹಜ ಇವುಗಳಿಗೆ ಸಾಕ್ಷಿಯಾಗಿ ಇಂತಹ ಹಾಡುಗಳು ಬರುತ್ತಲೇ ಇರುತ್ತದೆ ಮತ್ತು ಪ್ರೇಮಿಗಳನ್ನು ತಲುಪುತ್ತಲೇ ಇರುತ್ತದೆ.

ತಾಯಿಗೆ ತಕ್ಕ ಮಗ ಸಿನಿಮಾದ ಚಿತ್ರಣ
ಸಿನಿಮಾ: ದಿಯಾ ಹಾಯಾದ ಹಾಯಾದ ನನ್ನ ಪುಟ್ಟ ಲೋಕ ನೀನೆ ಅಲ್ಲವೇ ಲಾಕ್ಡೌನ್ನಲ್ಲಿ ತೆರೆಕಂಡ ಹಲವು ಸಿನಿಮಾಗಳಲ್ಲಿ ದಿಯಾ ಕೂಡ ಒಂದು. ಸಿನಿಮಾದಲ್ಲಿ ಹಾಡು ಕಡಿಮೆ ಆದರೆ ಇದ್ದ ಕೆಲವೇ ಗೀತೆಗಳಲ್ಲಿ, ಹಾಯಾದ ಹಾಯಾದ ನನ್ನ ಪುಟ್ಟ ಲೋಕ ನೀನೆ ಅಲ್ಲವೇ ಮಾಯಾದ ಮಾಯಾದ ಕನಸಿನಲ್ಲಿ ನಾ ನಿನ್ನ ಸೇರಲೇ ಕೈ ಜಾರೋ ಸಂಜೆಯ, ಕೈ ಬಿಸಿ ಕರೆದೆಯಾ ನೂರಾರು ಕಲ್ಪನೆ ಮೆಲ್ಲನೆ ಮರೆಯಾಗಿದೆ ಎನ್ನುವ ಹಾಡು ಈ ಸಿನಿಮಾದ ಸೋಲ್ ಸಾಂಗ್ ಎಂದೇ ಫೇಮಸ್. ಸಾಮಾನ್ಯವಾಗಿ ಸೋಲ್ ಮೇಟ್ ಎನ್ನುವುದು ನಮ್ಮ ಹೃದಯಕ್ಕೆ ಹತ್ತಿರವಾದವರಾಗಿರುತ್ತಾರೆ. ಹತ್ತಿರದಲ್ಲಿದ್ದವರ ಮೇಲೆಯೇ ಸಾಕಷ್ಟು ಕಾಳಜಿ ಪ್ರೀತಿ ಇರಲು ಸಾಧ್ಯ. ಪುಟ್ಟ ಪ್ರಪಂಚವಾದರು ನೆಮ್ಮದಿ ಮುಖ್ಯ ಅದಕ್ಕೆ ತಾನೇ ಪ್ರೇಮಿಗಳ ಪುಟ್ಟ ಪ್ರಪಂಚ ಸಂಗಾತಿಯೇ ಆಗಿರುವುದು.

ದಿಯಾ ಸಿನಿಮಾದ ಚಿತ್ರಣ
ಇದನ್ನೂ ಓದಿ: ನಾವಿಬ್ರೂ ಒಂದೇ ಆಸ್ಪತ್ರೆಯಲ್ಲಿ ಹುಟ್ಟಿದ್ದು.. ನಮ್ಮ ಲವ್ ಸ್ಟೋರಿಯನ್ನ ಎಲ್ಲಿಂದ ಶುರುಮಾಡ್ಲಿ?
ಸಿನಿಮಾ: ಮುಂದಿನ ನಿಲ್ದಾಣ ಇನ್ನೂನು ಬೇಕಾಗಿದೆ ಒಲವು ಇನ್ನೂ ಬೇಕಾಗಿದೆ ಇನ್ನೂನು ಬೇಕಾಗಿದೆ ಒಲವು ಇನ್ನೂ ಬೇಕಾಗಿದೆ. ಇನ್ನೂನು ಬೇಕಾಗಿದೆ ಒಲವು ಇನ್ನೂನು ಬೇಕಾಗಿದೆ… ಸೋಕಿ ನಿನ್ನ ಮೌನ ತಂಗಾಳಿನು ಹಾಡಾಗಿದೆ. ಇನ್ನೂನು ಹೇಳೋದಿದೆ ನನಗೆ ಇನ್ನೂನು ಕೇಳೋದಿದೆ. ಇನ್ನೂನು ಹೇಳೋದಿದೆ ನನಗೆ ಇನ್ನೂನು ಕೇಳೋದಿದೆ. ಇದು ಮುಂದಿನ ನಿಲ್ದಾಣ ಸಿನಿಮಾದ ಹಾಡು. ಅವಿತ ಮಾತುಗಳು ಎಷ್ಟೇ ಹೇಳಿದರು ಇನ್ನೂ ಅವಳ ಅಥವಾ ಅವನ ಬಳಿ ಹೇಳುವುದು ಬಾಕಿ ಇರುತ್ತದೆ. ಅದಕ್ಕೆ ಗಂಟೆಗಟ್ಟಲೇ ಸಂಗಾತಿಯೊಂದಿಗೆ ಮಾತನಾಡಿದರು ಇನ್ನೂ ಏನೋ ಇದೆ ಎನಿಸುವುದು. ಪ್ರೀತಿಯಲ್ಲಿ ಹಗಲು- ರಾತ್ರಿ ಯಾವುದು ಗಣನೆಗೆ ಬರುವುದಿಲ್ಲ ಬದಲಿಗೆ ಪ್ರೀತಿಯಷ್ಟೇ ಅಂತಿಮ ಹೀಗಾಗಿಯೇ ಪ್ರೀತಿಸಿದವರನ್ನು ಒಂದು ಕ್ಷಣಕ್ಕೂ ಬಿಟ್ಟಿರಲು ಸಾಧ್ಯವಿಲ್ಲ ಎಂದು ಎನಿಸುತ್ತದೆ.

ಮುಂದಿನ ನಿಲ್ದಾಣ ಸಿನಿಮಾದ ಚಿತ್ರಣ
ಹಾಡುಗಳು ಫೇಮಸ್ ಆಗುವುದು ಹೀಗೆ ನಮ್ಮಲ್ಲಿನ ಭಾವನೆಗಳನ್ನು ಈ ರೀತಿ ಸಂಗೀತವಾಗಿಸಿದಾಗ ಅದು ಜನಪ್ರೀಯತೆ ಪಡೆದುಕೊಳ್ಳುತ್ತದೆ. ಪ್ರತಿಯೊಬ್ಬರು ಪ್ರೀತಿಯಲ್ಲಿ ಶ್ರೀಮಂತರೆ. ನನ್ನ ಸಂಗಾತಿಯನ್ನು ನಾನು ಹೀಗೆ ವರ್ಣಿಸಬೇಕು ಎಂದುಕೊಂಡಿದ್ದೆ. ನಮ್ಮ ಲವ್ ಸ್ಟೋರಿ ಕೂಡ ಹೀಗೆ ಇದೆ ಎನ್ನುವ ರೀತಿಯಲ್ಲಿ ಇಂದಿನ ಯುಗಳ ಗೀತೆಗಳು ಬರುತ್ತಿದ್ದು, ಈ ಕಾರಣಕ್ಕೆ ಇಷ್ಟೋಂದು ಪ್ರೇಮ ಗೀತೆಗಳು ಸೃಷ್ಟಿಯಾಗುತ್ತಿದೆ ಮತ್ತು ಬಿಡುಗಡೆಗೊಂಡು ಫೇಮಸ್ ಆಗುತ್ತಿವೆ. ತನ್ನ ಸಂಗಾತಿಯ ಜೊತೆಗೆ ಫೋಟೊ ಹಾಕಿಕೊಂಡು ಇಂತಹ ಹಾಡುಗಳನ್ನು ಸೆಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುವವರ ಸಂಖ್ಯೆಯೂ ಕೂಡ ಇತ್ತೀಚೆಗೆ ಹೆಚ್ಚಾಗಿದೆ. ಭಾವನೆಗಳ ಲೋಕದ ಹಕ್ಕಿಗಳಿಗೆ ಉತ್ತೇಜನ ನೀಡುವ ಇನ್ನಷ್ಟೂ ಹಾಡುಗಳು ಬರಲಿ ಎನ್ನುವುದೇ ನಮ್ಮ ಆಶಯ.
Published On - 1:12 pm, Sat, 13 February 21