Valentine’s Day: ಬಾನ ಚಂದಿರನಿಲ್ಲದ ಊರಿನಲ್ಲಿ ನಾವಿಬ್ಬರೇ ಚುಕ್ಕಿ ಚಂದ್ರರು

My Love Story: ನಿನ್ನನ್ನು ಹೂವ ಹಾಸಿಗೆಯ ಮೇಲಿಟ್ಟು ರಾಜಕುಮಾರಿಯಂತೆ ನೋಡಿಕೊಳ್ಳುವೆನೆಂಬ ಭಾವಾತಿರೇಕದಲ್ಲಿ ಪ್ರೀತಿ ಒಲಿಸಿಕೊಳ್ಳುವ ಹುಂಬತನದ ಭರವಸೆಯನ್ನು ನಾನು ಯಾವತ್ತೂ ನೀಡಲಾರೆ. ಅಂತಹ ಅಲ್ಪಾಯುಷಿ ಪ್ರೀತಿಯೂ ನನಗೆ ಬೇಕಿಲ್ಲ.

Valentine's Day: ಬಾನ ಚಂದಿರನಿಲ್ಲದ ಊರಿನಲ್ಲಿ ನಾವಿಬ್ಬರೇ ಚುಕ್ಕಿ ಚಂದ್ರರು
ನಮ್ಮಿಬ್ಬರ ಕಂಡು ಮತ್ಸರ ಸಹಿಸದೇ ಚಂದಿರ ದಿಗಂತದಾಚೆಗೆ ಸರಸರನೇ ಜಾರಿಕೊಳ್ಳುವಷ್ಟು ಗಾಢವಾಗಬೇಕಿದೆ ಈ ಪ್ರೀತಿ
Follow us
Skanda
|

Updated on: Feb 13, 2021 | 11:43 AM

ಡಿಯರ್, ಇಷ್ಟು ದಿನ ಇಳಿಸಂಜೆಯ ಸೂರ್ಯನ ಸಾನಿಧ್ಯದಲ್ಲಿ ಕೆರೆಯ ದಂಡೆಯ ಮೇಲೆ ಕುಳಿತು ಶಾಂತ ನೀರಿಗೆ ಕಲ್ಲೆಸೆಯುತ್ತಾ, ಸಣ್ಣ ಅಲೆಗಳನ್ನು ಒಂದೊಂದಾಗಿ ಎಣಿಸುತ್ತಾ ಒಲವಿನ ಚಿತ್ತಾರ ಬರೆದಿದ್ದು ಸುಳ್ಳಾಗಲಿಲ್ಲ. ಅದೊಂದು ದಿನ ಅಮವಾಸ್ಯೆಯ ಕತ್ತಲಲ್ಲಿ ಚಂದಿರನ ಅನುಪಸ್ಥಿತಿಯಲ್ಲಿ ಕಡಲ ತಡಿಗೆ ನಡೆದು ನಿನ್ನ ಕಂಗಳು ಚೆಲ್ಲುತ್ತಿದ್ದ ಬೆಳದಿಂಗಳಲ್ಲಿ ಮಿಣುಕುವ ಸಾಗರದ ಮುತ್ತುಗಳನ್ನು ಆಯ್ದು ತಂದು ನಿನಗೆ ಕೊಟ್ಟಿದ್ದು ಸಾರ್ಥಕ ಎನಿಸುತ್ತಿದೆ. ತಮಾಷೆಯ ಮಾತಿಗೆ ನೀ ಕೋಪಿಸಿಕೊಂಡಾಗ ನಿನ್ನ ತಲೆ ನೇವರಿಸುತ್ತಾ ಕೋಪ ತಣ್ಣಗಾಗಿಸಲು ಮೊಸರನ್ನ ತುತ್ತು ಮಾಡಿ ತಿನ್ನಿಸುವ ಹೊತ್ತಲ್ಲಿ ನೀ ನನ್ನ ಬೆರಳಿಗೆ ಕಚ್ಚಿದ ಪರಿ ನನಗೆ ನೋವುಂಟು ಮಾಡಲಿಲ್ಲ, ಹೊರತಾಗಿ ಮನದೊಳಗೆ ಸಾವಿರ ನಲಿವುಗಳಿಗೆ ಕಾರಣವಾಗಿ ನಿನ್ನ ಮೇಲಿನ ಪ್ರೀತಿಯನ್ನು ಇಮ್ಮಡಿಗೊಳಿಸಿತ್ತು.. ಅದೊಂದು ಪ್ರೀತಿಯ ಉತ್ತುಂಗದ ಶಿಖರವೇರುವ ಮೆಟ್ಟಿಲಾಗಿತ್ತು. ಈಗ ಅವೆಲ್ಲ ಸಿಹಿ ನೆನಪುಗಳಾಗಿ ನೆನಪಿನ ಕಣಜದ ತುಂಬ ತುಂಬಿಕೊಂಡ ಸಿರಿಯಾಗಿವೆ. ನೀ ನನ್ನ ಕೈ ಹಿಡಿದು ಬರುವ ದಿನಗಳೆಲ್ಲ ಸುಖದ ಘಳಿಗೆಯಾಗಲಿ. ನಮ್ಮಿಬ್ಬರ ಈ ನಿಷ್ಕಲ್ಮಶ ಪ್ರೀತಿ ಸಾವಿರ ಸಾವಿರ ಪ್ರೇಮಿಗಳಿಗೆ ಮಾದರಿಯಾಗಲಿ. ಈ ಒಲವಿನೋಲೆ ನನ್ನಂತರಂಗದ ಕನ್ನಡಿ. ಇದರಲ್ಲೇ ನಮ್ಮಿಬ್ಬರ ಬದುಕಿನ ಬಿಂಬ ಕಾಣ ಸಿಗುವುದು.. ಜೋಪಾನವಾಗಿಡು.

ನಮ್ಮಿಬ್ಬರ ಒಲವ ಮಧ್ಯೆ ಕಂಡ ಅದೆಷ್ಟೋ ವಿಘ್ನಗಳು ಸರಿದು ಕೊನೆಗೂ ನೀನು ನನ್ನವಳಾದೆಯಲ್ಲಾ ಎಂಬ ನಿಟ್ಟುಸಿರಿಗೆ ಈಗ ನಾಲ್ಕರ ಹರೆಯ. ಮೊದಮೊದಲು ತರಗತಿಯಲ್ಲಿ ಪಾಠ ಕೇಳುವ ನೆಪದಲ್ಲಿ ನೀ ನನ್ನ ದಿಟ್ಟಿಸಿದ್ದು, ನಿನ್ನ ಆ ಕಣ್ಸನ್ನೆಯಲ್ಲಿನ ಕೊಲ್ಲುವ ತಾಕತ್ತಿಗೆ ನಾ ಬಲಿಯಾಗಿದ್ದು, ನೀ ಕಂಡಾಗ ಅನ್ನಿಸಿದ್ದು, ಅನ್ನಿಸಿದ್ದನ್ನು ಹೇಳಿಕೊಳ್ಳಲಾಗದ್ದು, ಒಲವ ನಿವೇದನೆಗೆ ನಾ ಪಡೆದ ತಾಲೀಮು, ಕೊನೆಗೂ ನನ್ನ ಕನಸು ನನಸಾಗಿದ್ದು, ನೀ ನನ್ನ ಕೈ ಹಿಡಿದಿದ್ದು… ಈಗ ಎಲ್ಲವೂ ಹಸಿರ ನೆನಪುಗಳು. ಅದೆಷ್ಟೋ ಸಂಭ್ರಮದ ಘಳಿಗೆಗಳು ನಮ್ಮೀ ಸಹಬಾಳ್ವೆಯಲ್ಲಿ ಬಣ್ಣದೋಕುಳಿಯಾಡಿ ಸಂಭ್ರಮವನ್ನು ಸಾಕ್ಷೀಕರಿಸಿವೆ.

ಸಣ್ಣಪುಟ್ಟ ತಮಾಷೆಗೆ ಕ್ಷಣಿಕ ಕೋಪದಲ್ಲಿ ಮಾತು ಬಿಟ್ಟಾಗೆಲ್ಲ ಮತ್ತೆ ಮೌನ ಮೀರಿ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತು ಕಣ್ಣಿರು ಹಾಕಿ Sorry ಕೇಳಿದ್ದು, ಈ ಬಣ್ಣ ಬಣ್ಣದ ನೆನಪುಗಳೆಲ್ಲ ಒಂದೆಡೆ ಸೇರಿ ಭಾವಬಾನಿನಲ್ಲಿ ಸುಂದರ ರಂಗುರಂಗಿನ ಕಾಮನಬಿಲ್ಲನ್ನೇ ಸೃಷ್ಟಿಸಿಬಿಟ್ಟಿವೆ. ನಾಗರ ಪಂಚಮಿ ದಿನ ಹಸಿರ ಸೀರೆಯನುಟ್ಟು ತಲೆ ಮೇಲೆ ಬುಟ್ಟಿ ಹೊತ್ತು ಹಸಿರು ಪೈರಿನ ಮಧ್ಯೆ ಅಪ್ಪಟ ಹಳ್ಳಿ ದಿರಿಸಿನಲ್ಲಿ ನಿಂತು ನನ್ನ ಕ್ಯಾಮರಾಕ್ಕೆ ಫೋಸು ಕೊಟ್ಟಿದ್ದನ್ನು ಎಂದಾದರೂ ಮರೆಯೋಕಾಗುತ್ತಾ? ವಿಶಾಲ ಹಣೆಯಲಿ ನಗುತ್ತಿದ್ದ ಆ ಬಿಂದಿ, ತುಟಿಯಂಚಲ್ಲಿ ಚೆಲ್ಲಿದ್ದ ಆ ನಗು, ಮುದ್ದು ಮುಖ, ಕಣ್ಣೊಳಗಿನ ನಿಷ್ಕಲ್ಮಶ ಪ್ರೀತಿ… ನಿಜಕ್ಕೂ ಆವತ್ತು ನೀನು ವರ್ಣನೆಗೂ ನಿಲುಕದಷ್ಟು ಅಂದವಾಗಿದ್ದಿ. ಕ್ಯಾಮರಾದ ಕಣ್ಣೊಳಗಿಂದ ಆ ಅದ್ಭುತ ಕ್ಷಣಗಳನ್ನು ಕಂಡು ಕಣ್ತುಂಬಿಕೊಂಡಿದ್ದ ಆ ಚಿತ್ರ ಈಗಲೂ ನನ್ನ ಕಣ್ಣೊಳಗೆ ಅಚ್ಚಾಗಿದೆ. ನಿಜ ಹೇಳು, ಆವತ್ತು ನಿಂಗೆ ದೃಷ್ಟಿ ಆಗಿರಬೇಕಲ್ಲಾ?

ಇದನ್ನೂ ಓದಿ: ಗೆದ್ದು ಸೋಲುವ ಸೋತು ಗೆಲ್ಲುವ ಪ್ರೇಮದಾಟದ ಪರಿಯೇ ರುಚಿರುಚಿ ಮೇಲೋಗರದಡುಗೆ!

ನಿನ್ನನ್ನು ಹೂವ ಹಾಸಿಗೆಯ ಮೇಲಿಟ್ಟು ರಾಜಕುಮಾರಿಯಂತೆ ನೋಡಿಕೊಳ್ಳುವೆನೆಂಬ ಭಾವಾತಿರೇಕದಲ್ಲಿ ಪ್ರೀತಿ ಒಲಿಸಿಕೊಳ್ಳುವ ಹುಂಬತನದ ಭರವಸೆಯನ್ನು ನಾನು ಯಾವತ್ತೂ ನೀಡಲಾರೆ. ಅಂತಹ ಅಲ್ಪಾಯುಷಿ ಪ್ರೀತಿಯೂ ನನಗೆ ಬೇಕಿಲ್ಲ. ಆದರೆ, ನಿಷ್ಕಲ್ಮಶ ಭಾವದ ನನ್ನೀ ಹೃದಯದರಮನೆಯಲ್ಲಿ ನೀನು ಯಾವತ್ತೂ ಪಟ್ಟದರಸಿಯೇ ಎಂಬುದು ಕೊನೆಯವರೆಗೂ ನೆನಪಿನಲ್ಲಿರಲಿ. ಸಂಕಟಗಳಿಗೆ ಸಾವಿರ ನೆಪಗಳಿದ್ದರೇನಂತೆ, ನನ್ನೀ ಖುಷಿಗೆ ನೀ ಕೊಟ್ಟ ಪ್ರೀತಿಯೊಂದೇ ಸಾಕು ಬದುಕಿನ ತುಂಬಾ ಹಬ್ಬಗಳೇ ಜರುಗುತ್ತವೆ. ನಗು, ನಲಿವುಗಳೆಂಬ ಬಣ್ಣಬಣ್ಣದ ಕಂಬಿಗಳ ಮೇಲೆಯೇ ನಮ್ಮ ಈ ಒಲವ ರಥ ಸಾಗಬೇಕು, ಎಲ್ಲಿಯೂ ನಿಲ್ಲದಂತೆ. ನಮ್ಮಿಬ್ಬರ ಕಂಡು ಮತ್ಸರ ಸಹಿಸದೇ ಚಂದಿರ ದಿಗಂತದಾಚೆಗೆ ಸರಸರನೇ ಜಾರಿಕೊಳ್ಳುವಷ್ಟು ಗಾಢವಾಗಬೇಕಿದೆ ಈ ಪ್ರೀತಿ. ಆಗ ಬಾನ ಚಂದಿರನಿಲ್ಲದ ಊರಿನಲ್ಲಿ ನಾವಿಬ್ಬರೇ ಚುಕ್ಕಿ ಚಂದ್ರರಾಗಬೇಕು. ವರುಷವೆಂಬುದು ಒಂದು ಹೆಜ್ಜೆಯಾಗಬೇಕು. ಸಾವಿರ ಹೆಜ್ಜೆಗಳು ನಮ್ಮ ಬಾಳದಾರಿಯಲ್ಲಿರಬೇಕು ಎಂಬುದು ನನ್ನ ಮನದ ಅಂತ್ಯವಿಲ್ಲದ ಬಯಕೆ.

ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ