AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s Day: ಅಂಗೈಯಲ್ಲಿ ಫೋನ್​ ನಂಬರ್ ಬರೆದವಳ ಬಳಿ ಕೊನೆಗೂ ಮಾತನಾಡಲು ಆಗಲೇ ಇಲ್ಲ

Valentine's Week | My Love Story: ಕೊನೆಯ ಸಲ ಅವಳ ಸೋತ ಮುಖ ನೋಡಿದ್ದು, ನನ್ನೊಂದಿಗೆ ಮಾತನಾಡದೆ ಕೊನೆಯುಸಿರೆಳೆದಳಲ್ಲ ಎಂಬ ಹತಾಶೆಯ ಭಾವ ಅನುಭವಿಸಿದ್ದು, ನಾ ಪರೀಕ್ಷೆಯಲ್ಲಿ ಟಾಪರ್​ ಆದ ಖುಷಿಯನ್ನು ಅವಳೊಂದಿಗೆ ಹಂಚಿಕೊಳ್ಳಲಾಗದ ನೋವು ಎಲ್ಲವೂ ಜೀವ ಹಿಂಡಿಬಿಟ್ಟವು.

Valentine's Day: ಅಂಗೈಯಲ್ಲಿ ಫೋನ್​ ನಂಬರ್ ಬರೆದವಳ ಬಳಿ ಕೊನೆಗೂ ಮಾತನಾಡಲು ಆಗಲೇ ಇಲ್ಲ
ಸಾಂದರ್ಭಿಕ ಚಿತ್ರ
Follow us
Skanda
|

Updated on: Feb 13, 2021 | 2:52 PM

ಆಗಿನ್ನೂ ಮೀಸೆ ಚಿಗುರುತ್ತಿದ್ದ ಕಾಲ, ಪಿ.ಯು.ಕಾಲೇಜಿನ ಮೆಟ್ಟಿಲು ಹತ್ತಿದ ಹುರುಪು. ಮೊದಲಿನಿಂದಲೂ ತುಸು ವಿಶೇಷವಾಗಿಯೇ, ಪೋಲಿಗಳಾಗಿಯೇ ಇದ್ದ ನಾವುಗಳು ನಮ್ಮೂರ ಕೃಷ್ಣಾ ಬಸ್ಸಿನಲ್ಲಿ ಮಾಡುತ್ತಿದ್ದ ತರಲೆ, ಮಾತುಗಳಿಂದ ತಕ್ಕ ಮಟ್ಟಿಗೆ ಹೆಸರು ಮಾಡಿದ್ದೆವು. ಆ ಹುಮ್ಮಸ್ಸಿನಲ್ಲಿದ್ದಾಗ ಕಣ್ಣಿಗೆ ಬಿದ್ದವಳೇ ‘ಅವಳು’. ಆ ಬಟ್ಟಲು ಮುಖ, ನನಗೆ ತಕ್ಕಂತೆ ಹೈಟು ವೇಯ್ಟು, ನನಗಾಗಿಯೇ ಹೇಳಿ ಮಾಡಿಸಿದಂತಿದ್ದ ಅವಳ ಕಂಡು, ಇವಳೇ ನನ್ನ ಹುಡುಗಿ, ಭಾವೀ ಹೆಂಡತಿ ಎಂದು ನಿರ್ಧರಿಸಿಬಿಟ್ಟೆ. ಅದರೆ ನನ್ನ ಕರ್ಮ.. ಅವಳಿಗೆ ನಾನೆಂದರೆ ಕೆಟ್ಟ ಕೋಪ, ಸದಾ ಸಿಡಿಮಿಡಿ ಎನ್ನುತ್ತಿದ್ದಳು. ನಾನೋ, ಹಸೆಭಂಡ. ಏನಾದರೂ ನೆಪಮಾಡಿ ಮಾತನಾಡಿಸಲು ಯತ್ನಿಸುತ್ತಿದ್ದೆ. ಫಲಿತಾಂಶ, ಪ್ರತಿಬಾರಿ ಮುಖಭಂಗ..!

ಈ ಗುದ್ದಾಟದಲಿ ಪ್ರಥಮ ಪಿಯುಸಿ ಕಳೆದೇಹೋಯಿತು. ಹೇಗಪ್ಪಾ ಇವಳ ಮನಗೆಲ್ಲುವುದು ಎನ್ನುವಾಗಲೇ ಪ್ರಥಮ ಪಿಯುಸಿ ಫಲಿತಾಂಶ, ಉಪನ್ಯಾಸಕರೊಂದಿಗಿನ ನನ್ನ ನಂಟು, ಹಾಡುಗಾರಿಕೆ, ಕವನ ಇತ್ಯಾದಿ ಕಲೆ, ತುಂಟತನ, ಸ್ವಲ್ಪ ಒಳ್ಳೆಯತನ ಎಲ್ಲವೂ ಅವಳು ನನಗೆ ಹತ್ತಿರವಾಗುವಂತೆ ಮಾಡಿದವು. ಅದೂ ತರಗತಿಯ ಪಾಠದ ನಡುವೆ ಕಣ್ಸನ್ನೆಗಳು ನಡೆಯುವ ಮಟ್ಟಕ್ಕೆ..! ನಂತರ ಆದದ್ದೆಲ್ಲವೂ ಒಂಥರಾ ಸುಂದರ ಕವಿತೆಯ ಬೆಳವಣಿಗೆಯ ಹಾಗೆ. ನಮ್ಮೂರ ಕೃಷ್ಣಾ ಬಸ್ಸಿಗೆ ಅವಳು ಬರುವ ದಾರಿಯನ್ನು ಹುಚ್ಚನ ಥರ ಕಾಯುತ್ತಿದ್ದದ್ದು, ಅವಳಿಗಾಗಿ ಸೀಟು ಹಿಡಿದು ಪಕ್ಕದಲಿ ಕೂತುಕೊಂಡು ಮಾತನಾಡುತ್ತಾ ಹೋಗುತ್ತಿದ್ದದ್ದು, ಬಸ್ಸಿನ ಜನರೆಲ್ಲ ನಮ್ಮನ್ನೇ ನೋಡುತಿದ್ದದ್ದು, ಕಾಲೇಜು ಬಂದರೂ ಇಳಿಯಲು ಮನಸಾಗದೆ ಒದ್ದಾಡುತ್ತಿದ್ದದ್ದು, ಕಾಲೇಜಿಂದ ಬಂದವನೆ ಊಟ-ಉಪಹಾರಗಳ ಅರಿವಿಲ್ಲದೆ ಸೈಕಲ್ ಏರಿ ಅವಳ ಹಿಂದೆ ಹೋಗಿ 3 ಕಿ.ಮೀ. ದಾರಿ ಮುಗಿವವರೆಗೆ ಮಾತನಾಡುತ್ತ ಮನೆಗೆ ಮುಟ್ಟಿಸಿ ಬರುತಿದ್ದದ್ದು.. ಆಹಾ! ಒಂದೊಂದೂ ಬಲು ಮೋಹಕ.

ಅಷ್ಟರಲ್ಲಾಗಲೇ ದ್ವಿತೀಯ ಪಿ.ಯು.ಸಿ ಅರ್ಧ ಮುಗಿದಿತ್ತು. ದೊಡ್ಡ ಧೈರ್ಯ ಮಾಡಿ ಪ್ರೇಮ ನಿವೇದನೆಗೆ ಸಜ್ಜಾಗಿ ಸೈಕಲ್ ಏರಿ ಅವಳ ಹಿಂದೆ ಹೊರಟೇಬಿಟ್ಟೆ. ಅಬ್ಬಾ..ಸತ್ತೇ ಹೋಗುವಷ್ಟು ಭಯ. ಆದರೂ, ಉಸಿರು ಹಗುರಾಗಿಸಿ ಹೇಳಿಯೇ ಬಿಟ್ಟೆ ‘‘ನೀನಂದ್ರೆ ತುಂಬಾ ಇಷ್ಟ, ಮದುವೆ ಆಗುವಷ್ಟು ಇಷ್ಟ.. I love you..’’ ಎಂದು. ಅವಳೋ, ಅರೆಕ್ಷಣವೂ ಯೋಚಿಸದೆ ‘‘ನಂಗಿದೆಲ್ಲಾ ಆಗಲ್ಲ, You are my Close friend ಕಣೋ’’ ಅಂದುಬಿಟ್ಟಳು. ಎದೆಯಲ್ಲಿ ಒಂಥರಾ ಭಾರ. ತುಟಿಕ್​ ಪಿಟಕ್ಕೆನ್ನದೆ ಸೈಕಲ್ ತಿರುಗಿಸಿ ನಮ್ಮೂರ ಕಡೆ ಹೊರಟವನ ಹೃದಯ ಮರುಗಿದ್ದೆಷ್ಟೋ, ಕಣ್ಣೀರ ಸುರಿಸಿದ್ದೆಷ್ಟೊ? ಅದೇನೋ ಬೇಸರ ಆವರಿಸಿ ಕೆಲಕಾಲ ಮೌನಿಯಾಗಿಬಿಟ್ಟೆ. ಆದರೆ ಅವಳು ಮಾತ್ರ ಮೊದಲಿನಂತೆ ಸಲುಗೆಯಿಂದಲೇ ಇದ್ದಳು. ನಂತರ ನಮ್ಮೂರಿನ ನನ್ನ ಪ್ರೇಮಗುರು ಹೇಳಿದ ಒಂದು ಮಾತು ಕೇಳಿ, ಮೊದಲಿನ ಹಾಗೆ ಸಲುಗೆಯಿಂದಿರಲು ಶುರುಮಾಡಿದೆ. ಮತ್ತೆ ತರಗತಿಯಲ್ಲಿ ಡಯಾಸ್ ಮೇಲೆ ಅವಳನ್ನೇ ನೋಡುತ್ತಾ ಹಾಡು ಹೇಳುತ್ತಿದ್ದೆ. ಕವನ ಓದುತ್ತಿದ್ದೆ. ಹೀಗೆ ಒಮ್ಮೆ ‘‘ಹೇಗಿದ್ದೆ ನಾನು, ಹೇಗಾದೆ ನಾನು’’ ಎಂದು ಹಾಡಿದಾಗ ಅವಳು ನಕ್ಕ ಆ ನಗು ಈಗಲೂ ಕಣ್ಣಿಗೆ ಕಟ್ಟಿದಂತಿದೆ.

ತುಂಬು ಪ್ರೀತಿಯ ನಿರೀಕ್ಷೆಯಲಿದ್ದ ನನಗೆ ಫೆಬ್ರವರಿ 13 ರಂದು ಅವಳು ನನ್ನ ಅಂಗೈ ಮೇಲೆ ಅವಳ ಮೊಬೈಲ್ ನಂಬರ್ ಕೆತ್ತಿ ಹೋದಾಗಲೇ ತಿಳಿದದ್ದು, ಅವಳಿಗೂ ನನ್ನ ಮೇಲೆ ಅಷ್ಟೇ ಪ್ರೀತಿಯಿದೆ ಎಂದು. ಆ ಕ್ಷಣ ಕೋಟಿ ರೂಪಾಯಿ ಲಾಟರಿ ಹೊಡೆದಷ್ಟೇ ಖುಷಿಯಾಗಿತ್ತು. ಆ ಸಂಜೆ, NOKIA 1100 ಫೋನಿಂದ ಬಂದ ಆ ಟಿವ್-ಟಿವ್ ಎಂಬ ಮಧುರ ಶಬ್ಧ.. Hai, Gm ಇತ್ಯಾದಿಯಿಂದ Love You ವರೆಗೆ ತಂದು ನಿಲ್ಲಿಸಿದ್ದನಂತೂ ಜೀವನದಲ್ಲೇ ಮರೆಯಲಾಗದು. ಅಂದಿನಿಂದ ಖುಷಿಯ ಜಾತ್ರೆಯೇ ಶುರುವಾಯಿತು. ಬಸ್ಸಿನಲ್ಲಿನ ಪಿಸುಮಾತು, ತರಗತಿಯ ಮೋಹಕ ನೋಟ, ನನಗಾಗಿ ಸೀಟು ಹಿಡಿಯುವುದು, ಜೊತೆ ಪಯಣಿಸುವುದು.. ಎಲ್ಲಕ್ಕಿಂತ ಮಿಗಿಲಾಗಿ ‘‘ಅವಳೇ ಕಣಮ್ಮಾ ನಿನ್ ಸೊಸೆ’’ ಎನ್ನುವಷ್ಟು ಜೋರಾಗಿ ಮತ್ತು ಗಟ್ಟಿಯಾಗಿತ್ತು ನನ್ನ ಪ್ರೀತಿಪಥ. ಹಾಗಾಗಿ ನನ್ನ ಓದು ಕೂಡ ಭರ್ಜರಿಯಾಗೇ ಸಾಗುತ್ತಿತ್ತು. ಅದರಂತೆ ಪರೀಕ್ಷೆಯನ್ನೂ ಚೆನ್ನಾಗೇ ಬರೆದೆ.

ಇದನ್ನೂ ಓದಿ: ನಾವಿಬ್ರೂ ಒಂದೇ ಆಸ್ಪತ್ರೆಯಲ್ಲಿ ಹುಟ್ಟಿದ್ದು.. ನಮ್ಮ ಲವ್​ ಸ್ಟೋರಿಯನ್ನ ಎಲ್ಲಿಂದ ಶುರುಮಾಡ್ಲಿ?

ಹೀಗೆ ಎಲ್ಲವೂ ಚಂದವಿರುವಾಗಲೇ ಇದ್ದಕ್ಕಿದ್ದಂತೆ ‘‘ಇನ್ಮೇಲೆ ನನ್ ಜೊತೆ ಮಾತಾಡ್ಬೇಡ, ಮನೇಲಿ ಗೊತ್ತಾದ್ರೆ ಸುಮ್ನೆ ತೊಂದ್ರೆ’’ ಎಂದು, ಮನಸ್ಸಿಗೆ ಮರ್ಮಾಘಾತ ನೀಡಿ ಸುದ್ದಿಯಿಲ್ಲದಂತೆ ಸುಮ್ಮನಾಗಿಬಿಟ್ಟಳು. ಕಾದೆ..ಕಾದೆ.. ಆದರೆ, ಅವಳು ಮುದ್ದಾದ ಮೊದಲ ಪ್ರೀತಿಯ ಚಿವುಟಿ ಬಲು ದೂರ ಹೊರಟೇ ಹೋಗಿದ್ದಳು. ಜಾತ್ರೆಯಲಿ ಎದುರು ಬದುರಾದರೂ ಮಾತನಾಡದಷ್ಟು ದೂರ.. ಆತ್ಮೀಯ ಗೆಳೆಯರು ಕೂಡಿಸಲೆತ್ನಿಸಿದರೂ ಸೇರದಷ್ಟು ದೂರ.. ಕೊನೆಗೆ ಅವಳಿಗವಳೇ ಸಿಗದಷ್ಟು ದೂರ. ತಾಯಾಣೆಗೂ ಅಂದು ಎಲ್ಲೋ ಹೊರಟಿದ್ದ ನಾನು ಅಕಸ್ಮಾತ್ ಅವರ ಊರಿಗೆ ಹೋಗಿದ್ದು, ಊರಿನವರಿಂದ ವಿಷಯ ತಿಳಿದು ಅವಳ ಮನೆಗೆ ಹೋದಾಗ, ಹೆಣವಾಗಿ ಮಲಗಿದ್ದ ಅವಳನ್ನು ಕಂಡಾಗ ನಿಜಕ್ಕೂ ಆ ವಯಸ್ಸಿಗೆ, ಆ ಹೃದಯಕ್ಕಾದ ನೋವು ಅಷ್ಟಿಷ್ಟಲ್ಲ. ಕೊನೆಯ ಸಲ ಅವಳ ಸೋತ ಮುಖ ನೋಡಿದ್ದು, ನನ್ನೊಂದಿಗೆ ಮಾತನಾಡದೆ ಕೊನೆಯುಸಿರೆಳೆದಳಲ್ಲ ಎಂಬ ಹತಾಶೆಯ ಭಾವ ಅನುಭವಿಸಿದ್ದು, ನಾ ಪರೀಕ್ಷೆಯಲ್ಲಿ ಟಾಪರ್​ ಆದ ಖುಷಿಯನ್ನು ಅವಳೊಂದಿಗೆ ಹಂಚಿಕೊಳ್ಳಲಾಗದ ನೋವು ಎಲ್ಲವೂ ಜೀವ ಹಿಂಡಿಬಿಟ್ಟವು. ಹೃದಯವನ್ನ ಅಲುಗಿಸಿ, ಮಾತುಗಳ ಮೂಕಾಗಿಸಿ, ಕಣ್ಣೀರಿಗೆ ಮಾತ್ರ ಅನುಮತಿ ಕೊಟ್ಟವು. ಅವಳು, ಅವಳೊಂದಿಗಿನ ನೆನಪುಗಳು, ಆ ಮುದ್ದು ಮುಖ, ಮಾತು ಎಲ್ಲವೂ ಸೇರಿ, ಅವಳು ದೂರಾದ ನಂತರದ ಒಂದು ತಿಂಗಳು ಅನುಭವಿಸಿದ ಆ ನೋವು ಹೇಳತೀರದ್ದು! ಮೊದಲ ಪ್ರೀತಿಯ ಧಾರೆಯೆರೆದವಳು ಕೊನೆಗೂ ಸಿಗದೆ ಹೋದಳು..

ಮಾಲ್ತೇಶ್ ತತ್ತೂರು