Valentine’s Day: ಶಾಪಿಂಗ್, ಸಿನಿಮಾ, ಗಿಫ್ಟ್ ಏನೂ ಬೇಡ.. ಪ್ರೀತಿ ಕೊಡು ಸಾಕು
My Love Story: ನೀ ನನ್ನ ದೊಡ್ಡ ದೊಡ್ಡ ಮಾಲ್ಗೆ ಶಾಪಿಂಗ್ ಕರೆದುಕೊಂಡು ಹೋಗದಿದ್ರೂ ಬೇಡ, ಸಿನಿಮಾ ತೋರಿಸದಿದ್ರೂ ಡೋಂಟ್ ಕೇರ್, ಬಟ್ ಪ್ರೀತೀಲಿ ಸ್ವಲ್ವ ಕಡಿಮೆ ಮಾಡಿದ್ರು ನನ್ನಿಂದ ಅದನ್ನ ಸಹಿಸಿಕೊಳ್ಳಲು ಆಗಲ್ಲ ಬಂಗಾರಿ.
ಅಬ್ಬಾ..! ಈ ಪ್ರೀತಿ ಅನ್ನೋ ಹ್ಯಾಂಗ್ ಓವರ್ನಿಂದ ಆಚೆ ಬರೋದು ಬಲು ಕಷ್ಟ. ಅಂದು ಇಳಿ ಸಂಜೆಯಲಿ ಯಾವುದೋ ಒಂದು ಜಾಗದಲ್ಲಿ ಕೂತು ನಿನ್ನನ್ನೇ ಕನವರಿಸಿದ್ದೆ. ಬಿಕ್ಕಿಬಿಕ್ಕಿ ಅತ್ತಿದ್ದೆ. ಎಲ್ಲವೂ ಮುಗಿಯಿತು ಅನ್ನೋ ಹಂತಕ್ಕೆ ನನ್ನ ಮನ ನೊಂದಿತ್ತು. ಆರು ವಸಂತಗಳನ್ನ ಕಳೆದಿದ್ದ ನಮ್ಮ ಪ್ರೀತಿಯ ತೇರು, ಮುರಿದು ಬಿಳುತ್ತಾ ಅನ್ನೋ ಆತಂಕ. ಆದ್ರೆ ಯಾವ ದೇವರ ಕೃಪೆಯೋ ನಾ ಕಾಣೆ.. ನನ್ನ ಪ್ರೀತಿ ನನ್ನ ಪಾಲಿಗೆ ಉಳಿಯಿತು.. ನಿಜಕ್ಕೂ ಅಂದೇ ಅನಿಸಿತು ನಂಗೆ ನೀ ನನ್ನ ಬದುಕಿನಲ್ಲಿ ಸಿಕ್ಕ ಅಪರೂಪದ ಮಾಣಿಕ್ಯ ಎಂದು. ಅಂದು ತಿಳಿಯಾದ ಮನಸಲ್ಲಿ ಅಲೆಯಂತೆ ಬಂದ ನೀನು. ನನ್ನ ಬದುಕಿನ ದೋಣಿಯಲ್ಲಿ ತಲ್ಲಣ ಮೂಡಿಸಿದ್ದಂತೂ ಸತ್ಯ. ಅಂದು ಶುರುವಾದ ಪ್ರೀತಿ ಇಂದೂ ನನ್ನೊಂದಿಗೆ ಇದೆ ಅಂದ್ರೆ ಅದಕ್ಕೆ ಕಾರಣ ನಿನ್ನ ಮೇಲಿನ ಅತೀವ ನಂಬಿಕೆ.
ಶಾಂತವಾಗಿ ಸಾಗುತ್ತಿದ್ದ ನಮ್ಮ ಪ್ರೀತಿಯ ಮೆರವಣಿಗೆಯಲ್ಲಿ ಸದ್ದಿಲ್ಲದೇ ಬಿರುಗಾಳಿಯೊಂದು ಬಂದೇ ಬಿಟ್ಟಿತ್ತು. ಬದುಕಿನಲ್ಲಿ ತಂದೆ ತಾಯಿಗಿಂತ ಹೆಚ್ಚಾಗಿ ಪ್ರೀತಿಸಿದ್ದು ನಿನ್ನನ್ನೇ. ಅಂತದ್ದರಲ್ಲಿ ನಮ್ಮಿಬ್ಬರ ಬದುಕಲ್ಲಿ ಇನ್ಯಾರೋ ಎಂಟ್ರಿ ಕೊಡ್ತಾರೆ ಅನ್ನೋದನ್ನ ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಶನಿ ತಾನಾಗಿಯೇ ಬಂದು ತಾನೇ ತೊಲಗಿತು ಅನ್ನೋದೇ ಖುಷಿ ವಿಚಾರ ಬಿಡು. ಆ ಬಗ್ಗೆ ಈಗ ಹೆಚ್ಚು ಹೇಳೋಕೆ ನಂಗೆ ಇಷ್ಟ ಇಲ್ಲ. ಬದುಕಿನಲ್ಲಿ ಕೆಲ ಘಟನೆಗಳು ಬರೋದು ನಮ್ಮ ಪ್ರೀತಿನಾ ಇನ್ನಷ್ಟು ಗಟ್ಟಿ ಮಾಡೋಕೆ ಅಂತಾ ಅಂದುಕೊಳ್ಳಬೇಕಷ್ಟೇ.
ಅದೇನೇ ಇರಲಿ, ಈಗಲೂ ನಿನ್ನೊಂದಿಗೆ ಮುನಿಸಿಕೊಳ್ಳೋದು ಅಂದ್ರೆ ಏನೋ ಒಂಥರ ಖುಷಿ. ನನ್ನ ಚಂದಿರ ನೀನು. ಮಿನುಗೋ ಆ ನಿನ್ನ ಕಂಗಳು, ಮನದಲ್ಲಿ ಕಚಗುಳಿ ಇಡೋ ನಿನ್ನ ಕಿರುನಗೆ, ಎಷ್ಟೇ ರೇಗಿದ್ರೂ ಕಿತ್ತಾಡಿದ್ರೂ ಸಹಿಸಿಕೊಳ್ಳುವ ನಿನ್ನ ಸಹನೆ.. ಎಲ್ಲವೂ ನನಗಿಷ್ಟ. ಆದರೆ,ಎಲ್ಲಕ್ಕಿಂತ ಹೆಚ್ಚಾಗಿ ನಾ ಕಳೆದು ಹೋಗಿದ್ದು ನಕ್ಷತ್ರದಂತೆ ಹೊಳೆಯೋ ಆ ನಿನ್ನ ತುಟಿ ಮೇಲಿನ ಮಚ್ಚೆಗೆ. ಒಟ್ಟಾರೆ ನಮ್ಮೀ ಪ್ರೇಮ ಪಯಣ ಹೀಗೆ ಸದಾ ಕಾಲ ಇರಲಿ ಅನ್ನೋದೇ ನನ್ನಾಸೆ.
ಇದನ್ನೂ ಓದಿ: ಯಾವತ್ತೂ ದೂರವಾಗದ ಹಾಗೆ ನನ್ನ ಒಪ್ಪಿ ಅಪ್ಪಿಬಿಡು ಗೆಳತಿ
ಏನ್ ಗೊತ್ತಾ ನೀ ನನ್ನ ಕೊಂಚ ನಿರ್ಲಕ್ಷ್ಯ ಮಾಡಿದ್ರೂ ನಂಗೆ ಸಹಿಸಿಕೊಳ್ಳೋಕೆ ಆಗಲ್ಲ. ನೀ ನನ್ನ ದೊಡ್ಡ ದೊಡ್ಡ ಮಾಲ್ಗೆ ಶಾಪಿಂಗ್ ಕರೆದುಕೊಂಡು ಹೋಗದಿದ್ರೂ ಬೇಡ, ಸಿನಿಮಾ ತೋರಿಸದಿದ್ರೂ ಡೋಂಟ್ ಕೇರ್, ಬಟ್ ಪ್ರೀತೀಲಿ ಸ್ವಲ್ವ ಕಡಿಮೆ ಮಾಡಿದ್ರು ನನ್ನಿಂದ ಅದನ್ನ ಸಹಿಸಿಕೊಳ್ಳಲು ಆಗಲ್ಲ ಬಂಗಾರಿ. ಈ ಬಡಪಾಯಿ ಜೀವ ನಿನ್ನನ್ನ ಸಿಕ್ಕಾಪಟ್ಟೆ ಹಚ್ಚಿಕೊಂಡಿದೆ. ತಾಯಂತೆ ಪ್ರೀತಿ, ಅಪ್ಪನಂತೆ ಮಮತೆ ನೀಡುತ್ತಾ ಸದಾ ನನ್ನೊಂದಿಗೆ ಇರು ಅಷ್ಟೇ ಸಾಕು ಈ ಪುಟ್ಟ ಜೀವಕೆ. ನನ್ನ ಪ್ರೀತಿ ಈ ಮೊಬೈಲ್ ನೆಟ್ ವರ್ಕ್ ಇದ್ದ ಹಾಗೆ. ನೀ ಎಲ್ಲಿದ್ರೂ ನಿನ್ನ ಹಿಂದೆಯೇ ಬರ್ತೀನಿ.. ನನ್ನ ಪ್ರೀತಿ ಅನ್ನೋ ಡೇಟಾ ಖಾಲಿಯೇ ಆಗಲ್ಲ.. ನಿಂಗೆ ನಾನ್ ಅಂದ್ರೆ ಇಷ್ಟನೇ ಇಲ್ಲ ಅಂತ ರೇಗಿಸಿದಾಗ ನೀ ಕೊಡೋ ರಿಯಾಕ್ಷನ್ ಇದೆಯಲ್ಲಾ.. ಅದು ನಂಗೆ ಸಿಕ್ಕಾಪಟ್ಟೆ ಇಷ್ಟ ಗೊತ್ತಾ.. ಏನಾದ್ರೂ ಆಗಲಿ ಹೀಗೆಯೇ ಇದ್ದುಬಿಡೋಣ
ಇಂತಿ ನೀನೇ ಕರೆದಂತೆ ಜಾನು ಸುನೀತ ರಾಥೋಡ್, ದಾವಣಗೆರೆ