Valentine’s Day 2021: ಪ್ರೇಮಿಗಳ ದಿನ 2021; ನಮ್ಮೊಲವ ಬದುಕೀಗ ಇಂಗು ಒಗ್ಗರಣೆಯ ಘಮ, ಫಿಶ್ ಫ್ರೈ ರುಚಿ

Valentine's Day 2021: ಮೀನು ತಿನ್ನುವುದನ್ನು ಬಿಟ್ಟು ವರ್ಷಗಳೇ ಆಗಿದ್ದವು. ಮೊಟ್ಟೆ ಕೂಡಾ ಅಷ್ಟಕಷ್ಟೇ. ಹೀಗಿರುವ ಹುಡುಗಿ ಇನ್ನೇನು ಕೋಳಿಸಾರು, ಫಿಶ್ ಫ್ರೈ ಮಾಡಿ ಬಡಿಸ್ತಾಳೆ ಎಂದು ನನ್ನ ಗಂಡನಿಗೆ ಗೊತ್ತಿದ್ದರಿಂದ ಅಡುಗೆ ಬಗ್ಗೆ ಚಿಂತೆಯೇ ಬೇಡ ಅಂತಿದ್ದ.

  • ಸಾರಾ
  • Published On - 10:27 AM, 14 Feb 2021
Valentine's Day 2021: ಪ್ರೇಮಿಗಳ ದಿನ 2021; ನಮ್ಮೊಲವ ಬದುಕೀಗ ಇಂಗು ಒಗ್ಗರಣೆಯ ಘಮ, ಫಿಶ್ ಫ್ರೈ ರುಚಿ
ಅಯ್ಯೋ ನಮ್ಮ ಹುಡುಗ ನಾನ್ ವೆಜ್ ಇಲ್ಲದೆ ಊಟ ಮಾಡಲ್ಲ. ಹಾಗಾಗಿ ನೀನು ನಾನ್ ವೆಜ್ ಮಾಡುವುದನ್ನು ಕಲಿತರೆ ಒಳ್ಳೆಯದು..

ಹುಡುಗಿಗೆ ಅಡುಗೆ ಬರುತ್ತಾ?

ಮದುವೆಯಾದ ಹೊಸತರಲ್ಲಿ ಮನೆಗೆ ಬಂದ ನೆಂಟರು ಈ ಪ್ರಶ್ನೆ ಕೇಳದೇ ಇರುತ್ತಿರಲಿಲ್ಲ. ಸ್ವಲ್ಪ ಸ್ವ ಲ್ಪ ಬರುತ್ತಿದೆ ಎಂದು ನಾನು ಉತ್ತರಿಸುತ್ತಿದ್ದರೆ,ಮಗನಿಗೆ ಅಡುಗೆ ಮಾಡಲು ಬರುತ್ತದೆ. ಯಾರಿಗಾದರೂ ಒಬ್ಬರಿಗೆ ಅಡುಗೆ ಮಾಡಲು ಬಂದರೆ ಸಾಕು ಅಂತ ನಮ್ಮತ್ತೆ ನನ್ನ ಬೆಂಬಲಕ್ಕೆ ನಿಲ್ಲುತ್ತಿದ್ದರು. ಅತ್ತೆ ಮನೆಯಲ್ಲೇನೂ ಹೇಳುವಂತ ಕೆಲಸ ಇರಲಿಲ್ಲ ಎಂದಲ್ಲ, ಏನು ಅಡುಗೆ ಮಾಡಬೇಕು ಎಂಬ ಗೊಂದಲದಲ್ಲಿ ಅಡುಗೆ ಕೆಲಸಕ್ಕೆ ಕೈ ಜೋಡಿಸುವುದೆಂದರೆ ತರಕಾರಿ ಹೆಚ್ಚುವುದು ಮಾತ್ರ ನನ್ನ ಕೆಲಸ ಆಗಿತ್ತು. ನಿನಗೇನು ಇಷ್ಟ ಎಂದು ಕೇಳಿ ನಮ್ಮತ್ತೆ ನನ್ನಿಷ್ಟದ ಅಡುಗೆ ಮಾಡುತ್ತಿದ್ದರು. ಇವರಿಗೆಲ್ಲ ನಾನ್ ವೆಜ್ ಇಲ್ಲದೇ ಇದ್ದರೆ ಊಟ ಸೇರಲ್ಲ. ಹಾಗಾಗಿ ಇಲ್ಲಿ ಸಸ್ಯಾಹಾರ ಕಡಿಮೆ. ನೀನು ಸ್ವಲ್ಪ ಅಡ್ಜೆಸ್ಟ್ ಆಗುವುದಕ್ಕೆ ಸಮಯಬೇಕಾಗುತ್ತೆ ಅಂತ ಅತ್ತೆ ಹೇಳಿದ್ದರು. (Valentine’s Day 2021)

ಮದುವೆಗೆ ಮುಂಚೆ ನಾನು ನನ್ನ ಹುಡುಗ ಆಹಾರ ಪದ್ದತಿ ಬಗ್ಗೆ ಮಾತಾಡಿಕೊಂಡಿದ್ದೆವು. ಯಾರೊಬ್ಬರೂ ಪರಸ್ಪರ ಒತ್ತಾಯ ಮಾಡುವಂತಿಲ್ಲ. ಆಹಾರ ಅವರವರ ಆಯ್ಕೆ, ಅದರ ಬಗ್ಗೆ ಯಾವುದೇ ರೀತಿಯ ಮಾತುಗಳು ನಮ್ಮಲ್ಲಿ ಬರಬಾರದು ಎಂದು ಒಪ್ಪಂದವಾಗಿತ್ತು. ಹಾಗಾಗಿ ಹುಡುಗನ ಕಡೆಯಿಂದಾಗಲೀ ಅವರ ಮನೆಯ ಕಡೆಯಿಂದಾಗಲೀ ಯಾವುದೇ ಒತ್ತಾಯಗಳೂ ಇರಲಿಲ್ಲ.ಆದರೆ ಸಂಬಂಧಿಕರಿದ್ದರಲ್ಲಾ ಅವರೇನು ಸುಮ್ಮನ ಕೂರಲ್ಲ. ಅಯ್ಯೋ ನಮ್ಮ ಹುಡುಗ ನಾನ್ ವೆಜ್ ಇಲ್ಲದೆ ಊಟ ಮಾಡಲ್ಲ. ಹಾಗಾಗಿ ನೀನು ನಾನ್ ವೆಜ್ ಮಾಡುವುದನ್ನು ಕಲಿತರೆ ಒಳ್ಳೆಯದು ಎಂಬ ಸಲಹೆ ಕೊಡುತ್ತಿದ್ದರು. ಅಗತ್ಯ ಬಂದಾಗ ಖಂಡಿತಾ ಕಲಿಯುವೆ ಎಂದು ಹೇಳಿದ್ದರಿಂದ ಅವರಿಗೂ ಸಮಾಧಾನ.

ನನ್ನ ಗಂಡನಿಗೆ ಗೊತ್ತಿತ್ತು, ನನಗೆ ನಾನ್ ವೆಜ್ ಅಡುಗೆ ಮಾಡಲು ಬರುವುದಿಲ್ಲ ಎಂಬುದು. ಮೀನು ತಿನ್ನುವುದನ್ನು ಬಿಟ್ಟು ವರ್ಷಗಳೇ ಆಗಿದ್ದವು. ಮೊಟ್ಟೆ ಕೂಡಾ ಅಷ್ಟಕಷ್ಟೇ. ಹೀಗಿರುವ ಹುಡುಗಿ ಇನ್ನೇನು ಕೋಳಿಸಾರು, ಫಿಶ್ ಫ್ರೈ ಮಾಡಿ ಬಡಿಸ್ತಾಳೆ ಎಂದು ನನ್ನ ಗಂಡನಿಗೆ ಗೊತ್ತಿದ್ದರಿಂದ ಅಡುಗೆ ಬಗ್ಗೆ ಚಿಂತೆಯೇ ಬೇಡ ಅಂತಿದ್ದ.

ಇದನ್ನೂ ಓದಿ: Valentines Day: ರಾಧಂಗೆ ಕೃಷ್ಣ, ಲೈಲಾಗೆ ಮಜನು, ರೋಮಿಯೋಗೆ ಜೂಲಿಯೆಟ್.. ಇವು ಜಗತ್ತಿನ ಬೆಸ್ಟ್​ ಪ್ರೇಮಕಥೆಗಳು

ನಮ್ಮದೇ ಆದ ಮನೆ ಮಾಡಿದಾಗ ಅಡುಗೆ ಮಾಡುವ ಜವಾಬ್ದಾರಿ ನನ್ನದು. ಸಾಂಬಾರು,ಸಾರು, ಗೊಜ್ಜು , ಹುಳಿ ಹೀಗೆ ಒಂದೊಂದೇ ಅಡುಗೆಗಳನ್ನು ಮಾಡಿ ಬಡಿಸುತ್ತಿದ್ದೆ. ತರಕಾರಿಯಲ್ಲಿ ಈ ರೀತಿ ತರಹೇವಾರಿ ಅಡುಗೆ ಮಾಡಬಹುದು ಎಂಬುದು ಗೊತ್ತಾಗಿದ್ದೇ ಈಗ. ಕೆಲವು ತರಕಾರಿಗಳ ಹೆಸರು ಕೂಡಾ ಗೊತ್ತಿರಲಿಲ್ಲ ಎನ್ನುತ್ತಿದ್ದ ನನ್ನ ಗಂಡನಿಗೆ ಇಷ್ಟವಾದ ಸಂಗತಿ ಎಂದರೆ ಇಂಗು ಒಗ್ಗರಣೆ. ಸಾರು, ಸಾಂಬಾರು ಗಳಿಗೆ ಎಣ್ಣೆ ಬಿಸಿ ಮಾಡಿ ಸಾಸಿವೆ ಚಟಪಟ ಸಿಡಿಸಿ ಸ್ವಲ್ಪ ಕರಿಬೇವು , ಒಂದು ಒಣಮೆಣಸು, ಸ್ವಲ್ಪ ಇಂಗು ಹಾಕಿದರೆ ಆ ಘಮವೇ ಸಾಕು ಊಟ ಮಾಡಲು ಅಂತಿದ್ದ. ಬಿಸಿ ಅನ್ನದ ಮೇಲೆ ಸ್ವಲ್ಪ ತುಪ್ಪ ಸುರಿದು ದಾಳಿ ತೊವ್ವೆ, ಜತೆಗೆ ಒಂದು ಪಲ್ಯ ಇದ್ದರೆ ಬೇರೇನೂ ಬೇಡ ಅವನಿಗೆ. ನನಗಿಂತ ಚೆನ್ನಾಗಿಯೇ ಅಡುಗೆ ಮಾಡಲು ಬರುತ್ತಿತ್ತು ಆದರೆ ಸಸ್ಯಾಹಾರಿ ಅಡುಗೆ ಅವನಿಗೆ ಗೊತ್ತಿರಲಿಲ್ಲ. ನನ್ನ ಕೈಯಾರೆ ಅಡುಗೆ ಮಾಡಿ ತಿನಿಸಬೇಕೆಂಬ ಆಸೆ ಇದೆ. ಆದರೆ ನನಗೆ ತರಕಾರಿ ತಂದು ಅಡುಗೆ ಮಾಡಲು ಬರಲ್ಲ. ಮೀನೂಟ ಮಾಡಿ ಬಡಿಸ್ತೇನೆ, ತಿನ್ನಲು ಶುರು ಮಾಡಿ ನೋಡು ಅಂದ.

This is for you..

ಅದೊಂದು ದಿನ ನಾನು ಕಚೇರಿಯಿಂದ ಮನೆಗೆ ಮರಳುವ ಹೊತ್ತಿಗೆ ಮೀನಡುಗೆ ಮಾಡಿಟ್ಟಿದ್ದ. ಚಂದವಾಗಿ ಟೇಬಲ್ ಮೇಲೆ ಜೋಡಿಸಿದ ಪಾತ್ರೆಗಳು. ಒಪ್ಪವಾಗಿಟ್ಟ ಸ್ಪೂನ್, ಸರ್ವಿಂಗ್ ಬೌಲ್ ಗಳು, ಗಾಜಿನ ಲೋಟದಲ್ಲಿ ಬಿಸಿ ನೀರು. This is for you ಅಂದ. ಕಿಚನ್ ಸಿಂಕ್ ನೋಡಿದೆ. ಎಲ್ಲವೂ ನೀಟ್ & ಕ್ಲೀನ್ . ಫ್ರೆಶ್ ಆಗಿ ಬಾ ಊಟ ಮಾಡೋಣ ಅಂದ. ನಾನು ಬಂದು ಟೇಬಲ್ ಮುಂದೆ ಕುಳಿತೆ. ಅವನೇ ಅನ್ನ ಬಡಿಸಿದ, ಮೀನು ಸಾರು, ಮೀನು ಫ್ರೈ ಇತ್ತು. ತಿಂದು ನೋಡು ಅಂದ. ಬೇಡ ಎನ್ನಲು ಮನಸ್ಸು ಬರಲಿಲ್ಲ . ತುಂಬಾನೇ ಚೆನ್ನಾಗಿತ್ತು. ಎಷ್ಟೋ ವರುಷಗಳ ನಂತರ ನಾನು ನಾನ್ ವೆಜ್ ತಿನ್ನಲು ಶುರುಮಾಡಿದೆ. ಅವನ ಮುಖದಲ್ಲಿ ಸಂತೃಪ್ತಿಯ ನಗೆ. ದಿನಾ ತಿನ್ನದೇ ಇದ್ದರೂ ನಾನು ಮಾಡಿದ ಅಡುಗೆ ಇಷ್ಟ ಆಯ್ತು ಎಂದು ಹೇಳಿದ್ದಕ್ಕೆ ಥ್ಯಾಂಕ್ಸ್ ಎಂದ.

ನಿನ್ನ ನಂಬಿಕೆಗಳು ಅಥವಾ ಆಹಾರ ಪದ್ದತಿಯನ್ನು ನಾನೆಂದೂ ಪ್ರಶ್ನಿಸುವುದಿಲ್ಲ. ನಿನಗೆ ಇಷ್ಟದಾದ ಯಾವುದೇ ಅಡುಗೆ ನಾನು ಹೇಗಾದರೂ ಕಲಿತು ಮಾಡಿಕೊಡುವೆ. ಆದರೆ ನನಗಾಗಿ ಅಡುಗೆ ಮಾಡುವಾಗ ಇಂಗು ಒಗ್ಗರಣೆ ಹಾಕಲೇ ಬೇಕು ಎಂದು ಹಣೆಗೆ ಹೂಮುತ್ತಿಟ್ಟ. ನಮ್ಮಿಬ್ಬರ ಭಾಷೆ, ಸಂಪ್ರದಾಯ, ಆಹಾರ ಪದ್ದತಿ ಎಲ್ಲವೂ ಭಿನ್ನ. ಅವನಿಗಿಷ್ಟವಾದ ಅಡುಗೆ ನಾನು ಮಾಡುತ್ತೇನೆ, ನನಗಿಷ್ಟವಾದದ್ದು ಅವನು ಮಾಡುತ್ತಾನೆ. ಒಲವು ನಮ್ಮನ್ನು ಒಂದಾಗಿಸಿದೆ.

ಇದನ್ನೂ ಓದಿ: Valentine’s Day: ಯಾರ ಪ್ರೀತಿಯೂ ಹಗುರವಲ್ಲ, ಯಾವ ಪ್ರೀತಿಯೂ ಕಡಿಮೆಯಲ್ಲ.. ಅಷ್ಟಕ್ಕೂ ಪ್ರೀತಿ ಅಂದ್ರೇನು?