ತನ್ನ ತಂದೆಯ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಸಿಎಂ ಅತಿಶಿ

ತನ್ನ ತಂದೆಯ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಸಿಎಂ ಅತಿಶಿ

ಸುಷ್ಮಾ ಚಕ್ರೆ
|

Updated on:Jan 06, 2025 | 3:58 PM

ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ರಮೇಶ್ ಬಿಧುರಿ ತಮ್ಮ ವಿರುದ್ಧ ಮಾಡಿದ ಹೇಳಿಕೆಗಳ ಕುರಿತು ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುವಾಗ ದೆಹಲಿ ಮುಖ್ಯಮಂತ್ರಿ ಅತಿಶಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ರಮೇಶ್ ಬಿಧುರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅತಿಶಿ, ರಾಜಕೀಯವನ್ನು ಕೆಳಮಟ್ಟಕ್ಕಿಳಿಸಿರುವುದನ್ನು ಪ್ರಶ್ನಿಸಿದ್ದಾರೆ. ಅತಿಶಿ ವಿರುದ್ಧ ಸ್ಪರ್ಧಿಸಲಿರುವ ಕಲ್ಕಾಜಿಯ ಬಿಜೆಪಿ ಅಭ್ಯರ್ಥಿ ಬಿಧುರಿ ಅವರು ಎಎಪಿ ನಾಯಕಿ ಅತಿಶಿ ಅವರ ಸರ್​ನೇಮ್ ಬಗ್ಗೆ ನೀಡಿದ ಹೇಳಿಕೆಯ ಕಾರಣಕ್ಕೆ ವಿವಾದಕ್ಕೀಡಾಗಿದ್ದಾರೆ.

ನವದೆಹಲಿ: ಬಿಜೆಪಿ ನಾಯಕ ರಮೇಶ್ ಬಿಧುರಿ ನಿನ್ನೆ ಮಾತನಾಡುವಾಗ ದೆಹಲಿ ಮುಖ್ಯಮಂತ್ರಿ ಅತಿಶಿ ತಮ್ಮ ತಂದೆಯನ್ನೇ ಬದಲಾಯಿಸಿಕೊಂಡಿದ್ದಾರೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೆಹಲಿ ಸಿಎಂ ಅತಿಶಿ ಬಿಜೆಪಿ ನಾಯಕ ರಮೇಶ್ ಬಿಧುರಿ ತಮ್ಮ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಬೇಸರ ಹೊರಹಾಕಿದ್ದಾರೆ. ಈ ಬಗ್ಗೆ ಭಾವುಕರಾಗಿ ಮಾತನಾಡಿದ ಅವರು, ನನ್ನ ತಂದೆ ಅವರ ಜೀವನದುದ್ದಕ್ಕೂ ಶಿಕ್ಷಕರಾಗಿದ್ದರು. ಅವರು ಬಡ ಮತ್ತು ಕೆಳ ಮಧ್ಯಮ ವರ್ಗದ ಸಾವಿರಾರು ಮಕ್ಕಳಿಗೆ ಪಾಠ ಕಲಿಸಿದ್ದಾರೆ. ಅವರಿಗೆ ಈಗ 80 ವರ್ಷ ವಯಸ್ಸಾಗಿದೆ. ಈಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಅವರಿಗೆ ಬೇರೊಬ್ಬರ ಸಹಾಯವಿಲ್ಲದೆ ನಡೆಯಲು ಸಹ ಸಾಧ್ಯವಿಲ್ಲ. ಚುನಾವಣೆ ಅಥವಾ ರಾಜಕೀಯದ ಕಾರಣಕ್ಕೆ ಅಂತಹ ವೃದ್ಧರನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಎಷ್ಟು ಸರಿ? ಎಂದು ಅತಿಶಿ ಪ್ರಶ್ನಿಸಿದ್ದಾರೆ.

ಅತಿಶಿ ವಿರುದ್ಧ ಸ್ಪರ್ಧಿಸಲಿರುವ ಕಲ್ಕಾಜಿಯ ಬಿಜೆಪಿ ಅಭ್ಯರ್ಥಿ ಬಿಧುರಿ ಅವರು ಎಎಪಿ ನಾಯಕಿ ಅತಿಶಿ ಅವರ ಸರ್​ನೇಮ್ ಬಗ್ಗೆ ನೀಡಿದ ಹೇಳಿಕೆಯ ಕಾರಣಕ್ಕೆ ವಿವಾದಕ್ಕೀಡಾಗಿದ್ದಾರೆ. ನಮ್ಮ ರಾಜಕಾರಣ ಇಷ್ಟು ಕೀಳುಮಟ್ಟಕ್ಕೆ ಇಳಿದರೆ ಹೇಗೆ? 10 ವರ್ಷ ಸಂಸದರಾಗಿದ್ದಾಗ ಕಲ್ಕಾಜಿಗೆ ಏನು ಕೆಲಸ ಮಾಡಿದ್ದಾರೆ ಎನ್ನುವುದನ್ನು ರಮೇಶ್ ಬಿಧುರಿ ತೋರಿಸಬೇಕು. ಅವರ ಕೆಲಸವನ್ನು ತೋರಿಸಿ ಮತ ಕೇಳಬೇಕೇ ಹೊರತು ನನ್ನ ತಂದೆಯನ್ನು ನಿಂದಿಸಿ ಅಲ್ಲ” ಎಂದು ಅತಿಶಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 06, 2025 03:55 PM