Ganesha chaturthi 2021: ಗಣಪತಿ ಉತ್ಸವದ ಆಚರಣೆ ಆರಂಭವಾಗಿದ್ದು ಯಾವಾಗ? ಗಣೇಶೋತ್ಸವದ ಉದ್ದೇಶ ಏನು?

| Updated By: preethi shettigar

Updated on: Sep 10, 2021 | 11:29 AM

1893ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ ಗಣೇಶ ಉತ್ಸವದ ಬಗ್ಗೆ ಹೊಗಳಿ ಬರೆದರು. ಆಗ ಗಣೇಶ ಉತ್ಸವ ಒಂದು ಸಂಚಲನವನ್ನು ಮೂಡಿಸಿತು. ಅಷ್ಟೇ ಅಲ್ಲ ಗಣೇಶ ಉತ್ಸವವನ್ನು ಪ್ರತಿ ವರ್ಷ ಅತ್ಯಂತ ವ್ಯವಸ್ಥಿತವಾಗಿ ಆಚರಣೆ ಮಾಡುವ ಎಲ್ಲಾ ವ್ಯವಸ್ಥೆಗಳನ್ನು ತಿಲಕರು ಮಾಡಿದರು.

Ganesha chaturthi 2021: ಗಣಪತಿ ಉತ್ಸವದ ಆಚರಣೆ ಆರಂಭವಾಗಿದ್ದು ಯಾವಾಗ? ಗಣೇಶೋತ್ಸವದ ಉದ್ದೇಶ ಏನು?
ಗಣಪತಿಯ ಮಣ್ಣಿನ ಮೂರ್ತಿ
Follow us on

ನಮ್ಮ ಎಲ್ಲಾ ಹಬ್ಬಗಳಲ್ಲಿ ಅತ್ಯಂತ ಅದ್ದೂರಿ ಹಾಗೂ ಕಲರ್ ಪುಲ್ ಹಬ್ಬ ಅಂದರೆ ಅದು ಗೌರಿ ಗಣೇಶ (Ganesha chaturthi 2021). ಮನೆ ಮನೆಗಳಲ್ಲಿ ಪೂಜಿಸುವ, ಮನ ಮನಗಳಲ್ಲಿ ಆರಾಧಿಸುವ ದೈವ ಈಶ್ವರ ಸುತ ಗಣೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಗಣೇಶ ಹಬ್ಬ ಜಾತ್ಯಾತೀತವಾಗಿ, ಪಕ್ಷತೀತಾವಾಗಿ, ಧರ್ಮಾತೀಥವಾಗಿ ಆಚರಿಸುವ ಉತ್ಸವ. ಪುರಾಣಗಳ ಉಲ್ಲೇಖದ ಪ್ರಕಾರ ಗಣೇಶನ ಹುಟ್ಟೇ ರೋಚಕ. ಆತ ನಡೆದು ಬಂದ ಹಾದಿ ಅದ್ಭುತ. ಆತನ ವಿಶೇಷತೆ, ಬುದ್ಧಿ ಚಾತುರ್ಯತೆ ಬಗ್ಗೆ ಇರುವ ಉಪಕಥೆಗಳು ಸಾವಿರ. ಅಗ್ರಪೂಜೆಗೆ ಅಧಿಪತಿ, ವಿಘ್ನ ನಿವಾರಕ, ಸಂಕಷ್ಟ ಹರ, ಅಬ್ಬಬ್ಬಾ ಒಂದಾ ಎರಡಾ ಸಾಕಷ್ಟು ನಾಮಧೇಯಗಳ ಒಡೆಯ ಗಣಪ.

ಗಣಪನ ಹುಟ್ಟು ಎಲ್ಲರಿಗೂ ಗೊತ್ತಿರುವುದೇ. ಆದರೆ ಗಣಪತಿ ಹಬ್ಬ, ಅದು ಉತ್ಸವದ ಆಚರಣೆಯಾಗಿ ಆರಂಭವಾಗಿದ್ದು ಹೇಗೆ ? ಅದರ ಉದ್ದೇಶ ಏನು ? ಯಾವಾಗ ಆರಂಭವಾಯ್ತು ? ಎನ್ನುವುದು ಅನೇಕರಿಗೆ ಗೊತ್ತೇ ಇಲ್ಲ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಗಣೇಶ ಹಬ್ಬ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಗಣೇಶ ಚತುರ್ಥಿ ಸಾರ್ವಜನಿಕ ಹಬ್ಬವಾಗಿ ಮೊದಲ ಬಾರಿಗೆ ಆಚರಣೆಯಾಗಿದ್ದು 1892ರಲ್ಲಿ. ಬಾಹು ಸಾಹೇಬ್ ಲಕ್ಷ್ಮಣ್ ಜಾವಲೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು ಎನ್ನುವ ಮಾತಿದೆ.

ಇದಾದ ಮುಂದಿನ ವರ್ಷ ಅಂದರೆ 1893ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರು ತಮ್ಮ ಕೇಸರಿ ಪತ್ರಿಕೆಯಲ್ಲಿ ಸಾರ್ವಜನಿಕ ಗಣೇಶ ಉತ್ಸವದ ಬಗ್ಗೆ ಹೊಗಳಿ ಬರೆದರು. ಆಗ ಗಣೇಶ ಉತ್ಸವ ಒಂದು ಸಂಚಲನವನ್ನು ಮೂಡಿಸಿತು. ಅಷ್ಟೇ ಅಲ್ಲ ಗಣೇಶ ಉತ್ಸವವನ್ನು ಪ್ರತಿ ವರ್ಷ ಅತ್ಯಂತ ವ್ಯವಸ್ಥಿತವಾಗಿ ಆಚರಣೆ ಮಾಡುವ ಎಲ್ಲಾ ವ್ಯವಸ್ಥೆಗಳನ್ನು ತಿಲಕರು ಮಾಡಿದರು. ಗಣೇಶ ಉತ್ಸವ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿತ್ತೆಂದರೆ ಸ್ವಾತಂತ್ರ್ಯ ಹೋರಾಟದಲ್ಲಿ ಜನರನ್ನೂ ಒಗ್ಗೂಡಿಸಲು ಗಣೇಶ ಹಬ್ಬ ಅತ್ಯಂತ ಪ್ರಮುಖ ಪಾತ್ರವಹಿಸಿತು.

ಸ್ವಾತಂತ್ರ ಹೋರಾಟಕ್ಕೆ ಮುನ್ನುಡಿ ಬರೆದ ಗಣೇಶೋತ್ಸವ
ತಿಲಕರು ಗಣೇಶ ಉತ್ಸವಕ್ಕೆ ಅಷ್ಟೊಂದು ಮಹತ್ವ ನೀಡಲು ಕಾರಣ ಸಹಾ ಇತ್ತು. ಆ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರಗೊಂಡಿದ್ದರಿಂದ ಬ್ರಿಟಿಷರು ಅದನ್ನು ಹತ್ತಿಕ್ಕಲು ಸಾಕಷ್ಟು ಕಾನೂನುಗಳನ್ನು ಜಾರಿಗೊಳಿಸಿದ್ದರು. ಸಾಮಾಜಿಕ ಹಾಗೂ ರಾಜಕೀಯ ಕಾರಣಗಳಿಗೆ ಸಭೆ ಗುಂಪು ಸೇರುವುದನ್ನು ನಿಷೇಧಿಸಿದ್ದರು. ಆದರೆ ಧಾರ್ಮಿಕ ಕಾರ್ಯಕ್ರಮಗಳಿಗೆ ಇದು ಅನ್ವಯವಾಗುತ್ತಿರಲಿಲ್ಲ. ಬ್ರಿಟಿಷರು ಸ್ವಾತಂತ್ರ್ಯ ಹೋರಾಟ ಹತ್ತಿಕ್ಕಲು ಚಾಪೆ ಕೆಳಗೆ ನುಸುಳಿದರೆ ತಿಲಕರು ಗಣೇಶ ಹಬ್ಬದ ಹೆಸರಿನಲ್ಲಿ ರಂಗೋಲಿ ಕೆಳಗೆ ತೂರಿ ಆ ಹೋರಾಟಕ್ಕೆ ಮತ್ತೊಂದು ರೂಪಕೊಟ್ಟು ಜೀವಂತವಾಗಿರಿಸಿದರು. ಅಷ್ಟೇ ಅಲ್ಲ ಮುಂಬಯಿ ಬ್ರಿಟಿಷ್ ಆಡಳಿತದಲ್ಲಿ ಪ್ರಪ್ರಥಮ ಬಾರಿಗೆ ಬೀದಿಗಳಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಜನರ ಮನಸಿನಲ್ಲಿ ಗಣೇಶನನ್ನು ಉಳಿಸುವಲ್ಲಿ ಯಶಸ್ವಿಯಾದರೂ. ಇನ್ನು ಆ ಕಾಲದಲ್ಲೇ ಗಣಪ ಜಾತಿ ಧರ್ಮಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿಯೂ ಯಶಸ್ವಿಯಾಗಿದ್ದ ಎನ್ನುವುದು ಗಮನಾರ್ಹ.

ಗಣಪತಿ ಹಬ್ಬ

ಆದರೆ ದುರಂತ ಅಂದರೆ ಒಗ್ಗಟ್ಟಿಗಾಗಿ ಆರಂಭವಾದ ಗಣೇಶ ಉತ್ಸವ ಇವತ್ತು ಸ್ವ ಪ್ರತಿಷ್ಠೆ, ತೋರಿಕೆ, ಸ್ವಾರ್ಥ, ಗುಂಪುಗಾರಿಕೆಗೆ ಸಿಲುಕಿ ತನ್ನ ಮೂಲ ಮಹತ್ವವನ್ನೇ ಕಳೆದುಕೊಳ್ಳುತ್ತಿದೆ. ಗಲ್ಲಿ ಗಲ್ಲಿಗಳಲ್ಲಿ ಗಣಪತಿ ಪ್ರತಿಷ್ಠಾಪಿಸುವ ವಿಚಾರ ಗಲಾಟೆಗಳಿಗೆ ಕಾರಣವಾಗುತ್ತಿದೆ. ಗಣೇಶ ಹಬ್ಬ ಅಂದರೆ ಮೋಜು, ಮಸ್ತಿ ಅನ್ನೋ ರೀತಿಯಾಗಿದೆ. ಇದು ಬದಲಾಗಬೇಕು ಊರಿಗೊಂದು ಗಣಪ ಎಂಬ ತತ್ವವನ್ನು ನಾವೇ ಅಳವಡಿಸಿಕೊಂಡು ಗಣೇಶ ಹಬ್ಬದ ಆಚರಣೆಯ ಪರಂಪರೆಯ ಮೂಲ ಆಶಯವನ್ನು ಉಳಿಸಿ ಬೆಳೆಸಬೇಕು ಅನ್ನೋದಷ್ಟೇ ಈ ಬರಹದ ಕಳಕಳಿ.

ಗಣಪತಿಯ ಮಣ್ಣಿನ ಮೂರ್ತಿ
ಇನ್ನು ಗಣಪತಿಗೆ ಇರುವ ಆಕಾರ, ವೇಷ, ಭೂಷಣ ಬಹುಶಃ ಬೇರೆ ಯಾವುದೇ ದೇವರು ಅಥವಾ ಜೀವಿಗಳಿಗೆ ಇರಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಗಣಪತಿಯ ರೂಪಗಳು ಕಾಣ ಸಿಗುತ್ತವೆ. ಆದರೆ ಎಲ್ಲರೂ ಒಂದನ್ನು ತಿಳಿದುಕೊಳ್ಳಬೇಕು. ಗಣಪತಿ ವಿಗ್ರಹ ಕೆರೆಯ ಮಣ್ಣಿನಿಂದ ಮಾಡಿದ್ದರೆ ಮಾತ್ರ ಗಣಪತಿ ಉತ್ಸವದ ಆಚರಣೆ ಅರ್ಥಪೂರ್ಣವಾಗುತ್ತದೆ. ನಮ್ಮಲ್ಲಿ ಎಷ್ಟೋ ಜನರಿಗೆ ಮಣ್ಣಿನ ಗಣಪತಿ ಮೂರ್ತಿಯ ತಯಾರಿಕೆಯ ಕಾರಣವೇ ಗೊತ್ತಿಲ್ಲ. ಹೌದು ಕೆರೆ ಮಣ್ಣಿನ ಗಣಪತಿ ತಯಾರಿಕೆ ಹಾಗೂ ಅದನ್ನು ಕೆರೆಯಲ್ಲಿ ಮುಳುಗಿಸುವ ಹಿಂದೆ ನಮ್ಮ ಹಿರಿಯರು ಕಂಡುಕೊಂಡಿದ್ದ ಅದ್ಬುತ ವೈಜ್ಞಾನಿಕ ಕಾರಣವಿದೆ. ಬರಿಗಣ್ಣಿನಲ್ಲಿ ನಕ್ಷತ್ರಗಳನ್ನು ಗುರುತಿಸುತ್ತಿದ್ದ ಬುದ್ದಿವಂತಿಕೆಯ ಛಾಪು ಇದೆ.

ಕೆರೆಯ ಮಣ್ಣು
ನಮ್ಮ ಪೂರ್ವಜರು ಗಣಪತಿಯನ್ನು ಕೆರೆಯ ಮಣ್ಣಿನಿಂದಲೇ ತಯಾರಿಸುತ್ತಿದ್ದರು. ಅದು ಗಣಪತಿ ಹಬ್ಬದ ಮೂರು ನಾಲ್ಕು ತಿಂಗಳ ಮುಂಚೆ ಕೆರೆಯಿಂದ ಮಣ್ಣನ್ನು ಸಂಗ್ರಹಿಸಲಾಗುತಿತ್ತು. ಗಣಪತಿ ಹಬ್ಬದ ಮೂರು ನಾಲ್ಕು ತಿಂಗಳ ಹಿಂದೆ ಅಂದರೆ ಅದು ಬಹುತೇಕ ಬೇಸಿಗೆ ಕಾಲವಾಗಿರುತಿತ್ತು. ಆ ಸಮಯದಲ್ಲಿ ಕೆರೆಗಳು ನೀರು ಬಹುತೇಕ ಬತ್ತಿ ಹೋಗಿ ಖಾಲಿ ಮೈದಾನದಂತಾಗಿರುತ್ತಿದ್ದವು. ಅಂತಹ ಸಮಯದಲ್ಲಿ ಕೆರೆಯ ಮಣ್ಣನ್ನು ಸಂಗ್ರಹಿಸುವುದರಿಂದ ಕೆರೆಯ ಹೂಳು ಎತ್ತಿದಂತಾಗುತಿತ್ತು. ಇದಾದ ನಂತರ ಮಳೆಗಾಲ ಆರಂಭವಾಗಿ ಮಳೆ ಸುರಿದಾಗ ಸಹಜವಾಗಿ ಕೆರೆಗಳು ತುಂಬುತ್ತಿದ್ದವು. ಜೊತೆಗೆ ಮಣ್ಣು ತೆಗೆದಿದ್ದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆಯಾಗುತಿತ್ತು.

ನಮ್ಮ ಪೂರ್ವಜರ ಮುಂದಾಲೋಚನೆ ಅಷ್ಟಕ್ಕೆ ನಿಲ್ಲುತ್ತಿರಲಿಲ್ಲ. ಕೆರೆಯ ಮಣ್ಣಿನಲ್ಲಿ ಮಾಡಿದ ಗಣಪನನ್ನು ಪೂಜಿಸಿದ ನಂತರ ಆ ಗಣಪತಿ ಮೂರ್ತಿಯನ್ನು ಮತ್ತೆ ಅದೇ ಕೆರೆಯಲ್ಲಿ ಮುಳುಗಿಸುತ್ತಿದ್ದರು. ಇದರಿಂದಾಗಿ ಕೆರೆಯಿಂದ ತೆಗೆದ ಮಣ್ಣು ಮತ್ತೆ ಗಣಪನ ರೂಪದಲ್ಲಿ ಕೆರೆಯ ಒಡಲು ಸೇರಿಕೊಳ್ಳುತಿತ್ತು. ಅರಿತವರು ಹೇಳುತ್ತಿದ್ದ ರೀತಿಯಲ್ಲಿ ಹೇಳುವುದಾದರೆ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಅನ್ನೋ ಮಾತಿನಂತೆ. ಇದನ್ನು ತಿಳಿದಾಗ ಹೌದಲ್ವಾ ?  ಎಂತಹ ಅದ್ಬುತ ಪರಿಕಲ್ಪನೆ ನಮ್ಮ ಹಿರಿಯರದ್ದು ಅನಿಸದೇ ಇರಲಾರದು.

ಆದರೆ ಈಗ ಕೆರೆಗಳೇ ವಿರಳವಾಗಿವೆ. ಇನ್ನು ಕೆರೆ ಮಣ್ಣನ್ನು ಎಲ್ಲಿಂದ ತೆಗೆಯೋದು ? ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜವೇ. ಇದ್ದ ಕೆರೆ ಕಟ್ಟೆಗಳನ್ನು ಒತ್ತುವರಿ ಮಾಡಿಕೊಂಡು ಕಾಂಕ್ರಿಟ್ ನಾಡನ್ನು ನಿರ್ಮಿಸಿಯಾಗಿದೆ. ಅದಕ್ಕೆ ಮಣ್ಣಿನ ಗಣಪನ ಜಾಗವನ್ನು ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪ ಆಕ್ರಮಿಸಿಕೊಂಡಿದ್ದಾನೆ. ಶ್ರದ್ದಾ, ಭಕ್ತಿಯ ಜಾಗವನ್ನು ಆಡಂಬರ, ತೋರಿಕೆ ಆಕ್ರಮಿಸಿಕೊಂಡು ಬಿಟ್ಟಿದೆ. ಆ ಗಣಪತಿ ವಿಗ್ರಹಗಳು ನೀರಿನಲ್ಲಿ ಕರಗದೆ ಜಲ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಪರಿಸರ ನಾಶಕ್ಕೆ ಕಾರಣವಾಗುತ್ತಿವೆ.

ಎಲ್ಲಾ ಗಣಪನ‌ ಭಕ್ತರು, ಪ್ರೇಮಿಗಳಲ್ಲಿ ಕಳಕಳಿಯ ಮನವಿ. ಈ ಬಾರಿಯಾದರೂ ಮಣ್ಣಿನ ಗಣಪನನ್ನೇ ತಂದು ಆರಾಧಿಸಿ, ಪೂಜಿಸಿ, ಸ್ತುತಿಸಿ. ವಿಘ್ನನಿವಾರಕನ ಹೆಸರಿನಲ್ಲಿ ವಿಘ್ನಗಳನ್ನು ಮಾಡದಿರಿ. ಎಲ್ಲರಿಗೂ ಗಣೇಶ ಚತುರ್ಥಿ ಒಳಿತು ಮಾಡಲಿ ನಾಡಿನಲ್ಲಿ ಶಾಂತಿ ನೆಲೆಸಲಿ ನಾಡು ಸುಭೀಕ್ಷವಾಗಿರಲಿ ಕೊರೊನಾ ಮಹಾಮಾರಿಯಿಂದ ಮುಕ್ತಿ ಸಿಗಲಿ.

ವರದಿ: ರಾಮ್ 

ಇದನ್ನೂ ಓದಿ:
ಪರಿಸರ ಸ್ನೇಹಿ ಗಣೇಶ ಅಭಿಯಾನಕ್ಕೆ ಸೇರಿಕೊಳ್ಳಿ; ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಲು ಇಂದೇ ಕೊನೆಯ ದಿನಾಂಕ

ಮೈಸೂರಿನ ಮಾರುಕಟ್ಟೆಯಲ್ಲಿ ವಿವಿಧ ರೂಪದ ಗಣೇಶ ಮೂರ್ತಿ; ಗಣಪತಿಯ ಚಿತ್ರಣ ಇಲ್ಲಿದೆ

Published On - 11:27 am, Fri, 10 September 21